Monday, February 6, 2017

ಮಾರ್ದವ

ವಾಷಿಂಗ್ ಮಶೀನಿನ ಫಿಲ್ಟರಲ್ಲಿ
ಒಂದಿಷ್ಟು ನೂಲುಕಸ ಕೂತಿರುತ್ತೆ
ವಾರಕ್ಕೊಮ್ಮೆ ತೆಗೆದು ತೊಳೆದು
ಮತ್ತದರದೇ ಜಾಗದಲ್ಲಿ ಫಿಲ್ಟರ್ ಕೂರಿಸುವುದು
ಬಟ್ಟೆ ಒಗೆಯುವಷ್ಟೇ ಮುಖ್ಯ.
ಇವತ್ತು ಕಸ ತೆಗೆಯುವಾಗ
ಪ್ರಪಂಚದಾದಿಯಿಂದ ಇರುವ ಅಚ್ಚರಿ
ನನ್ನ ಕಣ್ಣಳತೆಯಲ್ಲಿ!!!
"ಕಸದ ಮಧ್ಯೆ ಪಚ್ಚೆಮೊಳಕೆ"
ಎಲ್ಲ ಸೃಷ್ಟಿಕ್ರಿಯೆಗೂ ಬೇಕಿರುವುದು
ಒಂದಿಷ್ಟು ತೇವ.
ಅಂತಃಕರಣ..

ಇದೆಲ್ಲ ಮೇಲಿನ ವಿಷಯ
ಒಳಗಿನ ಮಾತೇನು?!!

ಎವೆ ದಾಟಿ ಕೆಳಗಿಳಿಯಿದ
ನನ್ನ ಕಣ್ಣಿನ ತೇವ
ನಿನ್ನ ಬಿರಿದ ಮನದಲ್ಲಿ
ಒರತೆಯುಕ್ಕಿಸಿರಬಹುದೆ
ಎಂದು ಅನಿಸುತ್ತಿರುವ ಈ ಕ್ಷಣ
ತುಸುದೂರವಿದ್ದರೆ ಮಾತ್ರ ಮೂಗಿಗಡರುವ
ರಾತ್ರಿರಾಣಿಯ ಘಮದಲ್ಲಿ ತೋಯ್ದಿದೆ
ಶ್!! ಎಂದು ಬಾಯ ಮೇಲೆ ಬೆರಳಿಟ್ಟಿದೆ.

1 comment:

sunaath said...

ಸಿಂಧು,
ನಿಮ್ಮ ಆರ್ದ್ರ ಅಂತಃಕರಣದಲ್ಲಿ ಮೊಳಕೆಯೊಡೆಯುವ ಕವನಗಳಿಗೆ ಇರುವುದು ಜಾಜಿಮಲ್ಲಿಗೆಯ ಸುಗಂಧ!