Tuesday, January 17, 2017

ಸಂಪಿಗೆಸರ

ಸಾಗರದ ಬಸ್ನಿಲ್ದಾಣ,
ಗಿಜಿಗುಟ್ಟುವ ಬಸ್ಸು
ಒಂದು ಕಾಲೂರಿ
ಪಕ್ಕದ ಕಂಬಿಗಾತು ನಿಂತ ಪಯಣ
ಹೆದ್ದಾರಿಯಾಸಿ ನಿಲ್ಲಿಸುವರು:
ಯಾರ್ರೀ ಸಂಪ್ಗೆಸರ, ಸಂಪ್ಗೆಸರ.
ಇಳಿಜಾರಿನ ಮಣ್ಣರಸ್ತೆಯಲ್ಲಿ
ಪುಟುಪುಟು ಹೆಜ್ಜೆ
ಕೊನೆಯಾಗುವಾಗ
ದೊಡ್ಡ ದಣಪೆಯಾಚೆ ಹರವಿದ ಅಂಗಳಕ್ಕೆ
ಕಟ್ಟಿದ ಮನೆಯ ಚಿಟ್ಟೆಯಲ್ಲಿ
ಬಂದ್ಯನೇ ಅಮೀ.. ಬರ್ರೇ ಆಸ್ರಿಗೆಂತು
ಸಡಗರಿಸುವ ಜೀವ.
ಮುಳುಗಡೆಯಾದ ಬದುಕನ್ನು
ಅಬ್ಗತ್ತಿ ನಿಂತು ಮೇಲೆತ್ತಿಸಿದ ಗಟ್ಟಿ ಜೀವ-
-ದ ಮನಸು ಹೂಮೆತ್ತಗೆ
ಕಿಲಿಕಿಲಿಸಿ ನಕ್ಕು ಬಾಳೆತುಂಬ ಬಡಿಸಿ
ಹಪ್ಳ ತಿನ್ನು, ಮನ್ಯಷ್ಟೇ ಮಾಡಿದ್ದು
ಎಂದು ಕರಿಕರಿದು ಬಡಿಸಿ
ಸಂಜ್ಯಾಗುತ್ಲೂ
ಅಮೀ ಒಬ್ಳೆ ಓದ್ತ್ಯಲೆ, ಎಂಗಕ್ಕೂ ಹೇಳೆ,
ಮುಚುಕುಂದ ಗುಹೆಯಲ್ಲಿ
ಕೃಷ್ಣನ ಗೆಲುವು ಕೇಳುತಲೆ
ಕಣ್ಣೀರು ಸುರಿಸಿ....
ನಸುನಕ್ಕ ಬಾಯಿ ಬೊಚ್ಚಾಗಿ
ಬೆನ್ನು ಬಾಗಿ,
ಕಣ್ಣದೀಪ ಮಸುಕಾಗಿ,
ಅರಿವು ಮರೆವಾಗಿ
ನೂರ್ಹತ್ತು ವರುಷಗಳು ಮೊದಲ ತೊದಲಾಗಿ
ಮಲಗಿದ ಸಂಪ್ಗೆಸರದ ಅಮ್ಮಮ್ಮ
ನಿನ್ನೆ ರಾತ್ರಿ ಬಂದಲ್ಲಿಗೇ ಹೋದಳು.
-*-

ಕಥೆ ಕೇಳುವವರ ರುಚಿ ಮತ್ತು ಉಲ್ಲಸದ ಅರಿವು ನನಗೆ ಮೂಡಿಸಿದ ಅಮ್ಮಮ್ಮಾ ಹಗ್ಸ್.


2 comments:

Unknown said...

ನನ್ನ ಅಮ್ಮಮ್ಮನ ನೆನಪಾಯ್ತು. ಚೆಂದದ ಕವನ ಸಿಂಧು

sunaath said...

ಅಮ್ಮಮ್ಮ ಎಲ್ಲಿ ಹೋಗುತ್ತಾರೆ, ಸಿಂಧು? ನಿಮ್ಮ ನೆನಪಿನಲ್ಲಿ, ನಿಮ್ಮ ಕವನದಲ್ಲಿ ಅವರು ಅಮರರಾಗಿಯೇ ಇರುತ್ತಾರೆ.