Monday, May 30, 2016

ಈ ವರ್ಷದ ಬೆಳಗು

ಇವತ್ತು ಬೆಳಗಿಗೊಂದು
ಹೊಸಪಾಠ;
ಹಿಡಿಬೆರಳು ಗಟ್ಟಿಯಾಗಿ
ಬಿಡದೆ ಹಿಡಿದು
ಕಣ್ ಬನಿ ಒರೆಸುತ್ತ
ನಡೆದ ದಾರಿಗಳೀಗ
ಅಗಲಗಲ,
ಮರಗಳಿಂದ ತೂಗುವ
ಹೂಗೊಂಚಲು ಎಡಬಲ,
ಮಳೆನಿಂತು ಹನಿವ
ಹಸಿರೊಳಳಗೆ ಹುದುಗಿ
ಹಾಡುವ ಕೋಕಿಲ,
ಹೊಸದಾಗಿ ಬೈಂಡ್ ಹಾಕಿಟ್ಟ ಪುಸ್ತಕಗಳ
ತುಂಬಿದ ಚೀಲ,
ಹೆಗಲಿಗೇರಿಸಿ...
ನೀ ಬರದಿದ್ದರೇನಂತೆ,
ವ್ಯಾನೇ ಆದರು ಪರವಾ ಇಲ್ಲ,
ಎಂದೋಡುವ
ಕಿನ್ನರ ಕಾಲ್ಗಳ ಒಡತಿ
-ಯ
ಕೈಗಳು
ಹೊರಡುವ ಮುಂಚೆ
ಬರಸೆಳೆದಿದ್ದು ಯಾಕೋ!!?
ಅಪ್ಪಿಕೊಂಡ 
ಹೊಟ್ಟೆಯೊಳಗೆ ತಳಮಳ.

ಇವತ್ತು ಬೆಳಗಿಗೊಂದು
ಹೊಸಪಾಠ;
ಬಿಟ್ಟೋಡುತ್ತ ಹರಿದ ಬದುಕಿಗೆ
ಇನ್ನು ಬಿಟ್ಟುಕೊಡಲು
ಕಲಿಯಬೇಕಿರುವ ಸಂಕಟ.

Tuesday, August 4, 2015

ಹಲವುತನದ ಮೈಮರೆಸುವಾಟವಿದು..

ಆಕಾಶದ ನೀಲಿಗೆ
ನನ್ನ ತೆಕ್ಕೆ
ಮೇಲೆತ್ತಿ ಎತ್ತಿ
ಚಾಚಿ ಇನ್ನೇನು
ಬೊಗಸೆಯಲ್ಲಿ ವಿಸ್ತಾರ
ಸಿಕ್ಕೇಬಿಟ್ಟಿತು
ಎನ್ನುವಷ್ಟರಲ್ಲಿ
ಕಡುನೀಲಿ ಮುಗಿಲು
ದಟ್ಟೈಸಿ
ಬೆಳಕು ಅಡಗಿ
ಈಗ ಮೂಡಣ ಪಡುವಣದಲ್ಲಿ
ಭೋರ್ ಮಳೆ
ಅಳಿದುಳಿದ ಚಿಕ್ಕೆ ಮೋಡಮರೆಯಲ್ಲೇ
ಮಿನುಗಿ
ಮೇಲೆತ್ತಿದ ತೆಕ್ಕೆ ಕೆಳಗಿಳಿಸುವಾಗ
ದಾರಿಯ ಮಣ್ಣೆಲ್ಲ ಕೊಚ್ಚೆ
ನೆಲದಲ್ಲೇ ಜಾರುವ ಹೆಜ್ಜೆ
ನೀಲಿ ವಿಸ್ತಾರ ಅಲ್ಲೆ ದೂರದಲ್ಲೆ
ಜಾರು ಹೆಜ್ಜೆ ಇಲ್ಲೆ ನಿಂತಲ್ಲೆ
ನಡೆಯದೆಯೇ ನಡೆದ ಹಾಗೆ.?!
ನಿಂತೂ ಮುಂದುವರೆದ ಹಾಗೆ ?!
ಇರಲಿ. ಪಾಡ್ಯದಲ್ಲಿ ಕತ್ತಲೆಯೇ.
ತದಿಗೆ ಎಂದಿಗೂ ಸುಂದರ.


(ಶೀರ್ಷಿಕೆ - ಅಡಿಗರ ಅಳುವ ಕಡಲೊಳು ಕವಿತೆಯ ಸಾಲು)

Monday, July 27, 2015

ಕಲಾಮಜ್ಜನಿಗೆ ನಮನ.

ನಮ್ಮ ಮಹಾನಗರದ ಶಾಲೆಗಳು
ತುಂಬ ಸೊಫೆಸ್ಟಿಕೇಟೆಡ್ದು.
ಅಗಲಿದ ಹಿರಿಚೇತನಕ್ಕೆ ನಮಿಸಿ
ಸರ್ಕಾರ ರಜೆ ಘೋಷಿಸಿದ್ದು
ಇವತ್ತು ರಾತ್ರಿಯೇ ಇನ್ಬಾಕ್ಸಿಗೆ ಬರುತ್ತೆ;
ಇವತ್ತು ಲೇಟಾಗಿ ಮಲಗಿದ ಪುಟ್ಟನಿಗೆ ನಾಳೆ ಬೇಗೆದ್ದರೂ ಶಾಲೆಯಿಲ್ಲ.

ನನ್ನೂರಿನ ಕೆರೆದಡದ ಶಾಲೆಗಳ ನಿಲುವೇನೋ ಗೊತ್ತಿಲ್ಲ;

ಹಳ್ಳಿಯೂರಿನ ಕನ್ನಡ ಶಾಲೆ ಹೇಗೋ ಗೊತ್ತಿಲ್ಲ.;
ಅಲ್ಲಾದರೂ ಇರಬಹುದು -
ನಿವೃತ್ತಿಯ ಹತ್ತಿರತ್ತಿರದ ಮೇಷ್ಟರು ಕೆಲವರು
ಅರ್ಧಕ್ಕೆ ಧ್ವಜ ಹಾರಿಸಿ
ಮೌನವಂದನೆ ಮಾಡಿಸಿ
ಬಂದವರಲ್ಲೇ ಒಬ್ಬಳ ಹತ್ತಿರ
ಆ ಚೇತನದ ಬಗ್ಗೆ ನಾಕಾರು ಮಾತಾಡಿಸಿ
ಮಕ್ಕಳಿಗೆ ಕಾಣಿಸದ ಹಾಗೆ ಕಣ್ಣೊರೆಸಿಕೊಳ್ಳುವವರು...ಅಲ್ಲಾದರೂ ಇರಬಹುದು..

ಅಲ್ಲಿವರೆಗೆ ಪಿಸುಗುಟ್ಟುತ್ತ
ಸರತಿ ಕೆಡಿಸಿ ಓಡಲು ಸಿದ್ಧ
ಪುಟ್ ಪುಟಾಣಿ ಕಣ್ಗಳು
ಇದನ್ನೆಲ್ಲ ಗಮನಿಸಿ
ಗಪ್ ಚಿಪ್ಪಾಗಿ ಸರತಿಯಲ್ಲಿ ನೆಟ್ಟಗೆ ನಿಲ್ಲಬಹುದು;
ಒಂದೆರಡು ಸಪೂರ ಜೀವಗಳ
ಕಣ್ಣು ಮಂಜಾಗಬಹುದು;
ಮುಂದೆಂದೋ ವಿಂಗ್ಸ್ ಆಫ್ ದಿ ಫೈರ್ ಆಗಿ ನಿಲ್ಲಬಹುದು.
ನಿಲ್ಲಲಿ.

ಮಹಾನಗರದ ಪುಟ್ಟನಿಗೆ ಇವೆಲ್ಲ ಸಿಗುವುದಿಲ್ಲ. ಬರಿಯ ರಜೆ.

ಎಲ್ಲದಕ್ಕೂ - ಗರಿಮೆಗೂ ಮತ್ತು ಅಂತಃಕರಣಕ್ಕೂ.

ಕಲಾಮಜ್ಜನಿಗೆ ನಮನ.

Tuesday, July 14, 2015

ಬದಲಾಗಲು ನಮಗೆ ಹೆದರಿಕೆ

ಬದಲಾಗಲು ನಮಗೆ ಭಯ. ಯಾಕೆಂದರೆ ಏನೆಲ್ಲ ಮಾಡಿದ ಮೇಲೂ, ಎಷ್ಟೆಲ್ಲ ಕಷ್ಟಪಟ್ಟರೂ ನಮಗೆ ನಮ್ಮ ಸುತ್ತಲ ಭವವೇ ಚೆನ್ನಾಗಿ ಗೊತ್ತಿರುವುದು.
ಅಷ್ಟೇ ಯಾಕೆ. ನಮಗೆ ನಾವಿರುವ ಸ್ಥಿತಿ ಅಂತ ಚೆನಾಗಿಲ್ಲ. ಇದೇ ಅಲ್ಟಿಮೇಟ್ ಅಲ್ಲ, ಇದು ಒಂಚೂರೂ ಚೆನಾಗೂ ಇಲ್ಲ, ನಮಗೆ ಯಾವ್ರೀತಿನೂ ಇಷ್ಟವೂ ಇಲ್ಲ ಅಂತಲೂ ಗೊತ್ತು. ಆದ್ರೆ ಇದು ಸರ್ವಕಾಲಕ್ಕೂ ಇದೇ ತರ. ಒಂದೇ ತರ.. ಯಾವುದೇ ಅನಿರೀಕ್ಷಿತಗಳಿಲ್ಲದೆ ಹಾಗೇ ಇರುತ್ತದೆ ಎಂಬ ಭರವಸೆಯೂ.
ಅದಕ್ಕಾಗಿಯೆ ನಾವು ನಮ್ಗೆ ಬೇಕೇ ಬೇಕಾದ ಕಡೆ ಒಂಚೂರು ಜರುಗಿ, ಸರಿಸಿ, ಸವರಿಸಿಕೊಂಡು ಒಂದು ಅಡ್ಜಸ್ಟ್ ಮೆಂಟಿನ ಬದಲಾವಣೆ ಬೇಕಿದ್ರೆ ಮಾಡ್ಕೊಂಡು ಇರ್ತೀವಿ. ಎಲ್ಲದೂ ಅದೇ ತರವೇ ಇರ್ಬೇಕು. ಅಂತ ಏನೂ ಬದ್ಲಾಗದ ಹಾಗೆ.. ಅದೇ ಸೂರ್ಯ ಅದೇ ಬೆಳಗು. ಅರ್ಜೆಂಟಾಗಿ ತಿರುಗುವ ಅದೇ ಗಡಿಯಾರ. ಸೆಲ್ಲು ವೀಕಾಗದ ಹಾಗೆ ನೋಡಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ.
ದೂರದಲ್ಲಿ ಎತ್ತರಕ್ಕೆ ನಿಂತ ಹಸಿರುಬೆಟ್ಟಗಳು ನಮ್ಮ ಕಣ್ಣಿಗೆ ಮನಸ್ಸಿಗೆ ಖುಶಿಕೊಡುತ್ತವೆ. ಅಚಲ. ಶಕ್ತ. ಮತ್ತು ದೃಢತೆಯ ಉಪಮೆಯಾಗಿ ನಮಗವು ತುಂಬಾ ಇಷ್ಟವಾಗುತ್ತವೆ. ಅಲ್ಲಿನ ಎತ್ತರೆತ್ತರಕ್ಕೆ ಬೆಳೆದ ದೊಡ್ ದೊಡ್ಡ ಮರಗಳನ್ನು ನೋಡಿ ಕಣ್ ಕಣ್ ಬಿಡುತ್ತೇವೆ. ಒಂದು ಡೀವಿಯೇಟಿಂಗ್ ಆಲೋಚನೆ. ಅವುಗಳನ್ನ ಇದ್ದಲ್ಲಿಂದ ಕಿತ್ತು ಬೇರೆ ಕಡೆ ನೆಡುವ ಪ್ರಯತ್ನ ಮಾಡಿದಲ್ಲಿ ಬಹಳಷ್ಟು ಮರಗಳು ಸಾಯುತ್ತವೆ. ಒಳ್ಳೆಯ ನಾಟಗಳು. ಒಳ್ಳೆಯ ಬೆಲೆ.
ನಮಗೆ ಬೆಟ್ಟದಂತೆ ಇರುವಾಸೆ. ಎತ್ತರೆತ್ತರದ ದೊಡ್ಡ ಮರಗಳ ಹಾಗೆ ಬಾಳುವಾಸೆ. ದೃಢ ಮತ್ತು ಗೌರವಯುತ ಬದುಕು ಬೇಕು ನಮಗೆ.
ಹೀಗೆಲ್ಲ ಬೆಳಗಿಡೀ ಅನಿಸುತ್ತಿರುತ್ತೆ. ರಾತ್ರಿ ಕತ್ತಲ ಮಡಿಲಲ್ಲಿ ಕುಡಿಗಣ್ಣ ದೀಪದಲ್ಲಿ ಹೊರಗಣ್ಣು ಮುಚ್ಚುವಾಗ ಮಗ್ಗುಲು ಬದಲಾಗುತ್ತದೆ. ಬ್ರಾಂಡೆಡ್ ಹಾಸಿಗೆಗಳ ಗರಿ ಮುದುರದ ಹೊದಿಕೆಗಳ ಮೇಲಿನ ಬೆಚ್ಚನೆ ನಿದ್ದೆ ಮಧ್ಯದಲ್ಲಿ ಎಬ್ಬಿಸುವ ಕನಸಿನ ಕನವರಿಕೆಯೇ ಬೇರೆ.
"ಆ ಹಾರುಹಕ್ಕಿ ಎಷ್ಟ್ ಚೆಂದ. ಖಂಡಾಂತರ ಹಾರುತ್ತದೆ. ಎಲ್ಲಿ ಬೇಕೋ ಅಲ್ಲಿ ಕೂತು ಹಾಡುತ್ತದೆ. ಇವತ್ತು ಇಲ್ಲಿ. ನಾಳೆ ಬೇರೆ ಆಕಾಶ. ಮತ್ತೆ ಇನ್ನೊಂದಿನ ಹೊರಟ ಜಾಗಕ್ಕೇ ತಿರುಗಿ ಬಂದು. ಮಧ್ಯ ಮೊಟ್ಟೆ ಮರಿ... ಆಹಾ ಹೀಗಿರಬಾರದೆ ನಾನು?!
ಅಥವಾ
ಗಾಳಿಯಾಗಬಾರದೆ ನಾನು? ಎಲ್ಲಿಂದ ಬಂದೆ ತಿಳಿಯದ ಹಾಗೆ. ಎಲ್ಲಿಗೆ ಹೊರಟೆ ಎಂದು ಕೇಳದ ಹಾಗೆ. ತನಗೆ ಬೇಕಿದ್ದ ಕಡೆಗೆ ದಿಕ್ಕು ಬದಲಾಯಿಸುವ ಹಾಗೆ...ಯಾರಿಗೂ ಯಾವ ಸಮಜಾಯಿಷಿ ಕೊಡಬೇಕಿರದ ಹಾಗೆ... ?!"
ಕನಸಿನ ರಾತ್ರಿ ಮುಗಿಯುತ್ತಲೂ ಬೆಳಕು ಚಿಮ್ಮುವ ಬೆಳಗು.  ತಕ್ಷಣ ತಿಳಿವಿನ ಬೆಳಕಿನ ಪ್ರತಿಫಲನ ಎಲ್ಲೆಲ್ಲೂ.
"ವಲಸೆ ಹಕ್ಕಿಗಳು ತಮ್ಮ ನಿಜಪಯಣಕ್ಕಿಂತ ಜಾಸ್ತಿ, ಬೇಟೆಗಾರರ ಬಾಣಗಳನ್ನು ತಪ್ಪಿಸಲು ಹಾರುತ್ತಿರುತ್ತವೆ ಎಂದು. ಅವಿಟ್ಟ ಮೊಟ್ಟೆಗಳೆಲ್ಲವೂ ಮರಿಯಾಗಲಾರವೆಂದು. ಮತ್ತೆ ಯಾರಿಗೂ ಉತ್ತರ ಕೊಡಬೇಕಿರದ ಆ ಮೋಹಕ ಗಾಳಿ...ಸುಂಟರಗಾಳಿಯಾಗಿ ಬದುಕು ನುಚ್ಚು ನೂರಾಗಬಹುದು" ಎಂದು.
ಓಹ್ ಮತ್ತೆ ಸುರಕ್ಷಾ ವಲಯದೊಳಗೆ ಗಿರಕಿಹೊಡೆಯುತ್ತಿರುತ್ತೇವೆ.

ಹೌದು. ಕನಸು ಕಾಣುತ್ತಿರುವುದೇ ಒಳ್ಳೆಯದು. ಕನಸಿನ ಬನಿ ನನಸಿಗಿಳಿಸಲು ಇನ್ನೂ ತುಂಬ ದಿನ ಇದೆ. ನಾಳೆಗಳು ತುಂಬ ಇವೆ ಎಂದು ನಂಬುತ್ತಾ.. ಹಕ್ಕಿ ಹಾರಿದ ಊರಿಗೆ ಹೋಗಲು ಪಯಣ ಇಟಿನರರಿ ತಯಾರಿಸಲು ತುಂಬ ಸಮಯ ಇರುತ್ತದೆ. ಕನಸು ದುಬಾರಿಯಲ್ಲ. ಇವತ್ತು ರಾತ್ರಿ ಮಲಗಿದ ಕೂಡಲೇ ಹತ್ತಬಹುದು ಮಾಯಾಚಾಪೆ. ಎಷ್ಟೊಂದು ಟೈಮಿದೆ!!
ಕಷ್ಟಕ್ಕೆ ಬರುವುದು ಈ ಕನಸುಗಳನ್ನ ನನಸಿನ ಬೆಟ್ಟದ ಏರು ಹತ್ತಿಸುವಾಗ. ಮೊದಲ ಸುತ್ತಿಗೇ ಏದುಸಿರು. ಮರಳಿ ಮನೆಗೆ. ದಿನ ಕೊನೆಯಾಗಿ ಇರುಳು ತಬ್ಬುವಾಗ ಕನಸು ಕಂಡರೆ ಸಾಕು. ಸಾಹಸ ಯಾಕೆ ಬೇಕು? ರಿಸ್ಕು ತಗೊಳ್ಳುವುದು ಹಣಹೂಡಿಕೆಗೆ ಮಾತ್ರ ಎಂಬ ಸೂತ್ರಕ್ಕೆ ನಾವು ಬದ್ಧ.

ಕೊನೆಗೂ...ಬದಲಾಗಲು ನಮಗೆ ಹೆದರಿಕೆ. ನಮಗೆ ಬೇಕಾದ ಹಾಗೆ ಬದಲಾಗಲು ತುಂಬ ಹೆದರಿಕೆ.
ಅಚ್ಚರಿ ಅಂದ್ರೆ.. ಬದುಕು ಬದಲಾವಣೆಗಳ ಸರಮಾಲೆ. ಬೆಳವಣಿಗೆಯ ಮೂಲ ಸ್ರೋತವೇ ಬದಲಾವಣೆ. ಆದರೆ ಬದಲಾವಣೆಯನ್ನ ನಾವಾಗಿಯೇ ಬಯಸಿ ಹೊಂದಲು ಸಿಕ್ಕಾಪಟ್ಟೆ ಭಯ.
ನನ್ನ ನಡೆಗೆ ಇನ್ಯಾರದ್ದೋ ಜವಾಬ್ದಾರಿ ಇದ್ರೆ ಅಷ್ಟೇ ಅನುಕೂಲ ಅಂತ ಬಹುಶಃ ಎಲ್ರೂ ಅಂದ್ಕೋತಾ ಇರ್ತೀವೋ ಏನೋ..

ಪಾವ್ಲೋ ಕೊಯ್ಲೋನ ಈ ಲೇಖನ ಓದಿ .. ಪ್ರಯತ್ನಿಸಿದ ಭಾವಾನುವಾದ. http://paulocoelhoblog.com/2015/04/03/afraid-to-change-2/

Monday, May 4, 2015

ನನ್ನ ಪ್ರೀತಿಯ ಹೆಬ್ಬಲಸಿನ ಮರ

ವೈಶಾಖದ ಇಳಿ ಮಧ್ಯಾಹ್ನ,
ಹೆಬ್ಬಲಸಿನ ಮರವೊಂದು
ನಿಧಾನ, ನಿರುಮ್ಮಳವಾಗಿ
ನೆಲಕ್ಕೆ ಒರಗಿತು.

ಎಲ್ಲ ಎಲೆಗಳಿಗೂ
ಮಣ್ಣಲ್ಲಿ ಕಲೆತುಹೋಗುವ
ಪಾಠವನ್ನ ಚಿಗುರಿದಾಗಲೇ ಕಲಿಸಿದ
ಮರ,
ಕಾಯುತ್ತ ಇತ್ತು -
ಸಂಜೆಗೆಂಪಲಿ ಮಣ್ಣಲಿ ಬೆರೆಯಲು.
ಕೊಂಬೆಕೊಂಬೆಗಳಲಿ ಹಕ್ಕಿ
ಕುಕಿಲು ಚಿಲಿಪಿಲಿ,
ಮರದಲ್ಲಿ ಹಣ್ಣಾದಷ್ಟೇ ಸಹಜದಲಿ
ಮರವೇ ಹಣ್ಣಾದ ಬಗೆ!
ಸ್ಪಷ್ಟ, ಸೌಮ್ಯ, ವಿಶಿಷ್ಟ.

ತುಂಬಿ ಬಂದ ಕಣ್ಣು
ತುಳುಕದೆ ಹಾಗೆಯೇ
ನಕ್ಕುಬಿಡುವಂತ ನೆನಪಿನ ಆಸರೆ;
ದಾರಿಯ ಬದಿಗೆ ಸರಿದು ನಡೆವಾಗ
ಚುಚ್ಚುವ ಕಲ್ಲು ನೆನಪಿಸುವ
ಅಜ್ಜನು ಜೊತೆಗೇ ತೋರಿಸುವನು
ಹುಲ್ಲಿನ ಸಂದಿಯಲ್ಲಿ ಹರಿವ ನೀರಲಿ
ಕಾಲಿಡುತ್ತ ನಡೆದು ಹೋಗುವ ಸುಖ.

ಇದುವೆ ಬದುಕು ಇದುವೆ ಜೀವನ.

ನನ್ನ ಪ್ರೀತಿಯ ಹೆಬ್ಬಲಸಿನ ಮರ
ನಿಧಾನಕ್ಕೆ ನಿರುಮ್ಮಳದಲ್ಲಿ
ಒರಗಿದೆ ಮಣ್ಣಿಗೆ.
ಮಣ್ಣಿನ ಚೈತನ್ಯ ಮಣ್ಣಿಗೇ ಮರಳಿದ
ಸಂತಸ ಮಣ್ಣಿಗೆ.


ಬದುಕಿನ ಸೂಕ್ಷ್ಮ ಪಾಠಗಳನ್ನ ನನ್ನ ಅಜ್ಜನೋ ಎಂಬಷ್ಟು ನವಿರಾಗಿ ಹೇಳಿಕೊಟ್ಟ ಪೆಜತ್ತಾಯ ಅಂಕಲ್ ಮೊನ್ನೆ ಏಪ್ರಿಲ್ 30 ರ ಮಧ್ಯಾಹ್ನ ಪಂಚಭೂತಗಳಲ್ಲಿ ಸೇರಿಹೋದರು. ಈ ಕವಿತೆಗೆ ಅವರ ನೆನಪು ಮುಗಿಯುವುದಿಲ್ಲ. ಅವರ ಜೀವನ್ಮುಖೀ ವ್ಯಕ್ತಿತ್ವಕ್ಕೆ ಇದು ಒಂದು ಕಿಂಡಿ, ಅಕ್ಷರ ನಮನ.

Monday, April 20, 2015

ಕೊನೆಯದೊಂದು ಜತೆಪಯಣ..

ದಿ ಇನ್ಸ್ಟಂಟ್ ಮೇಡ್ ಎಟರ್ನಿಟಿ..! (ಬ್ರೌನಿಂಗ್)

ಒಪ್ಪಿದೆ.
ನಾನು ಸಲ್ಲದವಳು. ತಕ್ಕುದಲ್ಲದವಳು.
ಕುಟುಂಬ ವತ್ಸಲೆಯಲ್ಲ,
ನಿನ್ನ ಮೌನದ ಕೊಳಕ್ಕೆ
ನನ್ನ ಮಾತಿನ ಕಲ್ಲೆಸೆದು ಘಾಸಿಗೊಳಿಸಿರುವೆ-
ಅನುದ್ದೇಶದ ಒಡಲೊಳಗಿರುವ
ಘನೋದ್ದೇಶದ ಅರಿವಿರದೆ.

ಒಪ್ಪಿದೆ
ಜತೆಪಯಣಕ್ಕೆ ತಕ್ಕ ಸುಹೃದೆಯಲ್ಲ,
ನಿನ್ನ ಹೆಜ್ಜೆಗೆ ನನ್ನದು ಜೋಡಿಸಲೆ ಇಲ್ಲ,
ಹಂಬಲಗಳ ಹರವಿ ಕೂತು,
ತೊಂದರೆಗಳ ಪರಿಕಿಸದೆ
ಹರಿವಿಗೆ ಬಿದ್ದೆ....
ಬಿದ್ದ ಮೇಲೆ ಕಲಿತ ಈಜು
ಆಟವಲ್ಲ. ಬದುಕುವ ದೊಂಬರಾಟ.


ಒಪ್ಪಿದೆ
ಇದು ನಿನ್ನ ಮಾತು.
ಎಲ್ಲ ದನಿಯನ್ನೂ ಮಾತಲ್ಲೆ ಕಡೆಯಬೇಕಿಲ್ಲ
ಸುಮ್ಮನಿರಲು ಬರದವಳಿಗೂ ಇದು ಗೊತ್ತಾಗಿದೆಯಲ್ಲ!


ಒಪ್ಪಿದೆ
ಹೊಳೆಗಿಳಿಯದೆ ಪಕ್ಕದಲ್ಲೆ ನಡೆದು ಹೋಗುವ ಹಾದಿ ಇದೆ.
ತಂಪು ಪಡೆಯದೆಯೂ ತಣ್ಣಗಿದೆ.
ಹರಿಯದೆಯೂ ಮುಂದುವರೆದಿದೆ.

ಹೊಳೆಯೊಳಗಿನ ಕಲ್ಲು ಎಷ್ಟೆಲ್ಲ ನೆನೆದೂ
ದೊರಗು ಕಳೆದು ಬರಿಯ ನುಣುಪು,
ಮೆತ್ತಗಾಗುವುದಿಲ್ಲ.
ದೂರ ದೂರಕೆ ಹರಿವ ಹೊಳೆಯಲ್ಲೆ
ಮುಳುಗಿಯೂ ತಾನೆ ಹೊಳೆಯಾಗುವುದಿಲ್ಲ.
ಒಣಗಿದ ಹೆಜ್ಜೆಗಳು ಒದ್ದೆಯಾಗಬಯಸುವುದಿಲ್ಲ.


ಒಪ್ಪಿದೆ
ಜೊತೆ ಎಂದರೆ ಒಟ್ಟಿಗೇ ಎಂದಷ್ಟೆ ಅಲ್ಲ!
ಹೊಳೆಗೆ ದಂಡೆಯ ಹಾಗೆ,
ರೈಲು ಕಂಬಿಗಳ ಹಾಗೆ,
ನಿದ್ದೆ ಎಚ್ಚರದ ಹಾಗೆ,
ಬೆಳಕು ಕತ್ತಲ ಹಾಗೆ,
ಮೌನ ದನಿಗಳ ಹಾಗೆ,
ಜೊತೆಗೇ ಇರುತ್ತೇವೆ. ಬೇರೆ ಬೇರೆ.


ಅದಕ್ಕೆ ಇವತ್ತೊಂದು ಹೊಸ ಹಂಬಲು.
ಬೆಳಗಲ್ಲಿ ದಿನಮಣಿಯ ಬೆಳಕಿನ ಬಲೆಯಲ್ಲಿ
ಪುಳಕಿಸುವ ಹುಲ್ಗರಿಕೆಯ ಬೆಟ್ಟದೆಡೆ
ಕೆಂಪು ಒಡಲಲ್ಲಿ ಎಳೆಹಸಿರು ಮೊಳಕೆ ಹೊತ್ತ ಇಳೆಗೆ
ನೀಲಿ ಮುಗಿಲು ಬಾಗಿ ಮುದ್ದಿಸುವ ಕಡೆ,
ಕತ್ತಲ ಆಗಸಕೆ ಚಿಕ್ಕೆ ಮಿನುಗು ಮಿಂಚುವೆಡೆ,
ದಾರಿ ಮುಗಿಯದಿರಲಿ ಎಂದೆನಿಸುವೊಡೆ,
ಗಿರಿಯಿಂದ ಕಣಿವೆಗೆ ಹರಿವೆಡೆ,
ಕೊನೆಯದಾಗಿ ಒಂದು ಪಯಣ ಹೋಗೋಣವೆ?

ಮತ್ತೆ ಕೇಳಲಾರೆ. ಒಪ್ಪಿದೆನಲ್ಲ. ಜೊತೆಗೇ ಬೇರೆ.
ಅದಕ್ಕೆ ಮುಂಚೆ ಒಮ್ಮೆ
ಈ ಮೂರ್ಖ ಮನದ ಮುದ್ದಿನ ಬಯಕೆ.
ಹೌದೌದು ಕೊನೆಯ ಒಂದು ಸಲ.


ಆಹ್ ಸಧ್ಯ ಒಪ್ಪಿದೆಯಲ್ಲ!

ಈಗ ನಾನು ನನ್ನವನು
ಕೊನೆಯ ಸವಾರಿ, ಕೊನೆಯ ಪಯಣ.
ಶ್. ಸುಮ್ಮನಿರಿ. 
ಜಗತ್ತು ಇವತ್ತಿಗೆ ಕೊನೆಯಾದರೂ ಆಗಬಹುದು.
ನನ್ನ ಬೇಷರತ್ ಒಪ್ಪಿಗೆಯಿದೆ.

ಇವನ ಬಗಲಲ್ಲಿ ಹೋಗುತ್ತಿರುವೆ ನಾನು.
ಇಳಿಸಂಜೆಬೆಳಕಲ್ಲಿ ಬದಿಗೆ ಕದ್ದು ನೋಡಿದೆ
ಅದೇ ಬಿಂಬ. ಅದೇ ಪುಟ್ಟ ಬಾಯಿ. ಕಿರಿಹಲ್ಲು. ಸಿರಿನಗೆ.
ಇವತ್ತಿಗೆ ಕೊನೆಯಾಗಲಿ ಜಗತ್ತು
ಈ ಕ್ಷಣ, ಈ ಪಯಣ, ಈ ಕೊನೆಯೇ ಚಿರಾಯು!