Friday, February 15, 2008

ಇಷ್ಟೆ..ಅಷ್ಟೆ..

ಸುತ್ತ ನಾಕು ಚುಕ್ಕಿ,
ನೆಟ್ಟಗೆಳೆದರೆ ನಕ್ಷತ್ರ,
ಸೊಟ್ಟಗೆಳೆದರೆ ಬಳ್ಳಿರಂಗೋಲೆ,
ನನ್ನದೇ ಚುಕ್ಕಿ, ನನ್ನದೇ ಗೆರೆ. ಇಷ್ಟೆ.


ಮಂಡಲವ ಮೀರಿ
ಪಥ ಹುಡುಕುವ ಮನ
ಮತ್ತೆ ಮತ್ತೆ
ನಾನೇ ಇಟ್ಟ ಚುಕ್ಕಿ
ಎಳೆದ ಗೆರೆಯೊಳಗೆ
ಸುತ್ತಿ ಸುತ್ತಿ
ಕಣ್ಣ ಕೊನೆಯಲ್ಲಿ ಹನಿಯಾಗಿ
ತುಂಬುತ್ತದೆ. ಅಷ್ಟೆ.


ಗೊತ್ತಿಲ್ಲ
ಇಷ್ಟಕ್ಕೂ ನನಗ್ಯಾಕೆ
ರಂಗೋಲಿಯ ಉಸಾಬರಿ
ಅದು ಹೇಗೋ ಏನೋ
ಇದೇ ಬದುಕಿನ ಪರಿ,
ಅರಿವಿರದೆ
ಇಟ್ಟ ಚಿಕ್ಕೆ
ಎಳೆದ ಗೆರೆ
ನನ್ನದೇ ಮಂಡಲದಲ್ಲಿ
ನಾನೇ ಸೆರೆ. ಪಥಭ್ರಷ್ಟೆ.

Tuesday, February 5, 2008

ಮಾಗಿಯ ಬೆಳಗಿನ ಕನಸು..

ಬೆಳಿಗ್ಗೆ ಮುಂಚೆ ಎದ್ದು ಬಚ್ಚಲೊಲೆಯಲ್ಲಿ ಸಂಜೆಯೇ ತುಂಬಿದ್ದ ಕಟ್ಟಿಗೆ ಕುಂಠೆಗಳ ಮೇಲೆ ಒಣ ಅಡಿಕೆ ಸಿಪ್ಪೆ ಸುರುವಿದೆ. ಅಲ್ಲೆ ಹಂಡೆಯ ಬಾಯಿಬದಿಯಲ್ಲಿ ಇಟ್ಟಿದ್ದ ಚಿಮಣಿಬುಡ್ಡಿಯಿಂದ ಸ್ವಲ್ಪ ಎಣ್ಣೆ ಹನಿಸಿ, ತಂದಿಟ್ಟುಕೊಂಡಿದ್ದ ಹಳೆಯ ನೋಟ್ ಪುಸ್ತಕದ ಹಾಳೆಗಳನ್ನ ಚಿಮಣಿ ದೀಪಕ್ಕೆ ಹಿಡಿದು ಒಲೆಯೊಳಗೆ ಇಟ್ಟೆ. ಬೆಂಕಿ ಭಗ್ಗೆಂದಿತು. ಹೊರಗೆ ಚುಮುಚುಮು ಬೆಳಗು, ಇಬ್ಬನಿ. ಸೂರ್ಯ ಇನ್ನೂ ಹಾಸಿಗೆಯಿಂದ ಎದ್ದಿರದ ನಸುಗತ್ತಲಲಿನ ಹಿತ್ತಲಲ್ಲಿ ಬೆಳ್ಳಗೆ ನಗುವ ಪಾರಿಜಾತ ಹೂಗಳಿದ್ದವು. ಹನಿಹನಿಯಾಗಿ ಇಬ್ಬನಿ, ಹೂ ಹೂಗಳಿಂದ ತೊಟ್ಟಿಕ್ಕುತ್ತಿತ್ತು. ಮರದ ಬುಡದ ಹಸಿರುಹುಲ್ಲಲ್ಲೂ ಹೂರಂಗೋಲಿ.. ಕೆಂಪಗೆ ಹೊಳೆಯುವ ತೊಟ್ಟಿನ ತುದಿಗೆ ಬಿಳೀ ಚಿತ್ತಾರದ ಪಕಳೆಗಳು.. ತಣ್ಣಗೊಮ್ಮೆ ಗಾಳಿ ಬೀಸಿದಾಗ ತೇಲಿ ಬರುವ ಸುಗಂಧ. ನೋಡುತ್ತಾ ಹಾಗೇ ಕುಕ್ಕರಗಾಲಲ್ಲಿ ಕುಳಿತೆ. ಒಲೆಯ ಉರಿ ದೊಡ್ಡದಾಗಿ ಸುತ್ತ ಬೆಚ್ಚಗಿತ್ತು. ಹಾಗೇ ಗೋಡೆಗೆ ಆತು ಕೂತು, ಕಾಲುಗಳನ್ನ ಮುಂದಿನ ಬಚ್ಚಲ ಗೋಡೆಗೆ ಒತ್ತಿ ಹಿಡಿದು ಬೆಚ್ಚಗಿನ ಒಳಗಲ್ಲಿ ಹೊರಗಿನ ತಂಪು ನೋಡುತ್ತ ಕುಳಿತೆ. ನೋಡ ನೋಡುತ್ತ ಕೂತ ಹಾಗೆ ಪುಟ್ಟ ಹಕ್ಕಿಯೊಂದು..ಟುವ್ವೀ ಎನ್ನುತ್ತ ಹಾರಿ ಹೋಯಿತು.. ಅಲ್ಲೆ ಬಲಮೂಲೆಯಲ್ಲಿದ್ದ ಮಾವಿನ ಮರದ ಕೊಂಬೆಯಲ್ಲಿ ಕೂತ ಗಿಣಿಗಳು, ಹೂ ಚೆಲ್ಲಿ ನಿಂತ ಮುತ್ತುಗದ ಮರದಲ್ಲಿ ಉಲಿಯುವ ಪಿಕಳಾರಗಳು, ಗುಬ್ಬಚ್ಚಿ ಒಟ್ಟೊಟ್ಟಿಗೆ ತಮ್ಮ ಮಾತುಕತೆ ಶುರು ಮಾಡಿದವು. ಸೂರ್ಯನಿಗೆ ಇನ್ನೂ ಮಲಗಿರಲು ಆಗಲಿಲ್ಲ. ಎದ್ದು ಬೇಗಬೇಗ ಸವರಿಸಿಕೊಂಡು ದಿನದ ಪಯಣಕ್ಕೆ ಪಡುವಲಿನ ಕಡೆ ಹೊರಟ..

ಕಟ್ಟಿಗೆಯನ್ನು ಸ್ವಲ್ಪ ಮುಂದೆ ಮಾಡಿ, ಇನ್ನೊಂದು ಒಬ್ಬೆ ಅಡಿಕೆಸಿಪ್ಪೆ ಸುರುವಿ ಈ ಕಡೆ ತಿರುಗುವಷ್ಟರಲ್ಲಿ ಬಿಸಿಲಕೋಲೊಂದು ಕಿಟಕಿಯ ತಳಿ ಹಾದು ಒಳಗೋಡೆಯ ಮೇಲೆ ಬೆಳಕಿನ ಚಿತ್ತಾರ ಬರೆದಿತ್ತು.. ನೋಡುತ್ತ ಕೂತವಳ ಮುಂದೆ ಬಂದು ಕುಳಿತವರು ಯಾರಿದು.. ಓಹ್,, ಅವರಲ್ಲವೆ.. ಮಾತು ತುಟಿಯಿಂದಿಳಿಯುವ ಮುನ್ನ ಅವರ ಮೆಲ್ನಗೆ ತಡೆಯಿತು. ಕನ್ನಡಕದ ಒಳಗಿಂದ ಹೊಳೆದ ಕಣ್ಣ ಬೆಳಕು ಹೇಳಿತು..ಹೌದು ಇದು ನಾನೇ.. ಅದನ್ನ ಮತ್ತೆ ಮತ್ತೆ ಮಾತಾಡಿ ಒಣಹಾಕಬೇಕಿಲ್ಲ. ಬೆಳಗಿನ ತಂಪು ಮಾತಿಲ್ಲದೆ ಒಳಗಿಳಿಯಲಿ..ಜೀವ ಬೆಚ್ಚಗಿರುತ್ತದೆ..ಎಂದಂತಾಯಿತು..

ಮಾತು ಬರುವುದು ಎಂದು ಮಾತನಾಡುವುದು ಬೇಡ ಅಂದವರಲ್ಲವೆ.. ಸುಮ್ಮನೆ ಕುಳಿತು ನೋಡತೊಡಗಿದೆ. ಮುಂದೇನು...ಕಣ್ಣ ಕಪ್ಪೆಯ ಚಿಪ್ಪಿಗೆ ಕಂಡ ಸಮುದ್ರದಂಥ ನೋಟ..

ಸುಮ್ಮನೆ ಸುಖವಾಗಿರುವ ಸಗ್ಗ ಬೇಸರಾಯಿತು ಬಂದೆ
ಈ ಮಾಗಿ ಬೆಳಗಲ್ಲಿ ಇಬ್ಬನಿಯ ತಂಪು ಕುಡಿಯಲು,
ಹಾಗೇ ಬಂದವನಿಗೆ ತಂಪು ಕೊರೆಯುವಾಗ..ನೋಡಿದೆ
ತೆರೆದ ಬಾಗಿಲು, ಬೆಚ್ಚನೆ ಒಲೆಗೂಡು, ಕೂರಲೆ ಸ್ವಲ್ಪ ಹೊತ್ತು ಇಲ್ಲೆ..?
ಮಾತಿನ ಸಡಗರ ಮತ್ತು ಗೌರವದ ಬಿಂಕ ಬೇಡ..

ನಾನೇನ ಹೇಳಬಹುದಿತ್ತು.. ಯಾವತ್ತೂ ಹಂಬಲಿಸುತ್ತಿದ್ದ ಪ್ರಿಯಜೀವವು ಇಲ್ಲೆ ಪಕ್ಕದಲ್ಲೆ ಇದ್ದಕ್ಕಿದ್ದಂಗೆ ಬಂದು ಕೂರುವ ಕ್ಷಣದಲ್ಲಿ ನನ್ನ ಮಾತುಗಳೆಲ್ಲ, ಬಂದ ದಾರಿಯಲ್ಲೆ ವಾಪಸಾದವು.. ಮುಖದಲ್ಲಿ ಮೆಚ್ಚುಗೆ ಮತ್ತು ಅಚ್ಚರಿಯ ಸೊಂಪು ಹರಡಿತು.. ಅವರ ಸೂಕ್ಷ್ಮಗ್ರಾಹೀ ಕಣ್ಣು ಅದನ್ನ ಸವಿಯಿತು.

ಕೇಳಬೇಕಿದೆ ನನಗೆ ಪದುಮಳೆಲ್ಲಿ? ಶಾರದೆಯ ಬಂಗಾರವಿಲ್ಲದ ಬೆರಳೆಲ್ಲಿ..? ಸೀತೆಯ ತುಂಟನಗುವೆಲ್ಲಿ? ನಿಲ್ದಾಣ ತಿಳಿಯದೆ ಹತ್ತಿದ ರೈಲೆಲ್ಲಿ? ಕೈಮರದ ನೆರಳು ಯಾವ ಕಡೆಗೆ? ಸಂಜೆಹಾಡಿನ ರಾಗವೇನು? ಶರತ್ ಶಾರದೆಯ ದೀಪಗಳ ಸ್ವಿಚ್ಚೆಲ್ಲಿ? ಬದುಕಿನ ಕವಿತೆಯ ಛಂದಸ್ಸೇನು? ತೆರೆದ ಬಾಗಿಲ ಅಗುಳಿ ಕಳಚಿಟ್ಟವರಾರು? ಹೊಳೆಬದಿಯ ಹಕ್ಕಿಗೊರಳಲಿ ಹೇಗೆ ಸೇರಿತು ಹಾಡು? ನೊಂದ ಹೃದಯ ಕಟ್ಟಿದ ಹಾಡ ನುಡಿಸಿದ ವೀಣೆ ಎಲ್ಲಿ? ಮುತ್ತೂರ ತೇರಿನಲಿ ಕಂಡ ಮೀನಾಕ್ಷಿಯ ಬಳೆಯ ಸದ್ದೆಲ್ಲಿ? ತುಂಗಭದ್ರೆಗೀಗ ಎಷ್ಟು ವರುಷ? ನೀವು ಬರುವ ದಾರಿಯ ಬೇಲಿಸಾಲಿನ ಹೂಗಳಿಗೆ ಕೆಂಪು ಬಣ್ಣ ಕೊಟ್ಟವರಾರು, ನಕ್ಕ ಹಾಗೆ ನಟಿಸದೆ ಸುಮ್ಮನೆ ನಕ್ಕುಬಿಡುವುದು ಹೇಗೆ? ತೌರಸುಖದೊಳಗಿನ ವ್ಯಥೆಯ ಕೇಂದ್ರವೆಲ್ಲಿ? ನೀರೊಳಗೆ ವೀಣೆ ಮಿಡಿದಂತೆ ಮಾತನಾಡಬಹುದೆ? ತುಂಬದ ಒಲವನ್ನ ಹಿಡಿದಿಡ ಹೊರಟ ಪಾತ್ರೆಯಾವುದೋ? ಎಂದೋ ಕೇಳಿದ ಹಾಡನು ವೀಣೆಯಲಿ ನುಡಿಸುವುದು ಹೇಗೋ,ಬಯಲ ತುಂಬ ಹಸಿರು ದೀಪ ಹಚ್ಚಿ ಹರಿವ ನದಿಯ ಒರತೆಯೆಲ್ಲಿ? ಈ ಸಲದ ನವಪಲ್ಲವದ ಚೆಂದುಟಿಯಲಿ ಝೇಂಕರಿಸುವುದೆ ಚಿಟ್ಟೆ?ನಮ್ಮ ಅನುಭವ ತೆಳುವೆನ್ನುವವರ ಟೀಕೆಗೆ ಕಹಿಯಿಲ್ಲದೆ ನಗುವುದು ಹೇಗೆ?...
ಇನ್ನೂ ಏನೇನೋ.. ಎಲ್ಲ ಒಂದಾದಮೇಲೊಂದರಂತೆ ಮನಸ್ಸಿನಲ್ಲಿ ಸುಳಿಯುತ್ತಿದ್ದರೆ, ಮುಂದೆ ಕೂತವರ ಕಣ್ಣ ಕಾಂತಿಯು ಮತ್ತಷ್ಟು ಉಜ್ವಲವಾಗುತ್ತಿತ್ತು..

ಮಾಗದ ಗಾಯಗಳ ನೋವನ್ನ ಒಲುಮೆಯ ಇಂಕಲ್ಲದ್ದಿ ಬರೆದೆನಮ್ಮಾ, ಎತ್ತಿ ನೇವರಿಸಿದ ಭಾವುಕ ಹೃದಯಗಳ ಪ್ರೀತಿಯ ಓದು ನೋವನ್ನ ಪರಿಮಳವಾಗಿಸಿ ತೇಲಿಸಿತಷ್ಟೇ.. ನೋಡು ನಿನಗೂ ಕಾಣಬಹುದು ಎಲ್ಲ ಚಿತ್ರಗಳಾಚೆಗಿನ್ನೊಂದು ಚಿತ್ರ..ಎಲ್ಲ ನೋಟಗಳಾಚೆಗಿನ್ನೊಂದು ನೋಟ..
ಬಾಲ್ಯದ ಸವಿ, ಯೌವ್ವನದ ಓದು, ಹಿರಿಯ ಜೀವಗಳ ಕೈಕಂಬ, ತುಂಬು ದಾಂಪತ್ಯದ ನಲಿವು-ಬವಣೆ,ಸುತ್ತಲ ಚೆಲುವು-ನೋವು, ಪ್ರತಿಬಾರಿಯೂ ಹೊಸತಾಗಿ ಬರುವ ಬೇವುಬೆಲ್ಲದ ಯುಗಾದಿ,ಇಕ್ಕೆಲದಲ್ಲಿ ಹೂವರಳಿದ ಹಾದಿಯ ಕಲ್ಲುಮುಳ್ಳು ಪಯಣ, ಸ್ಪರ್ಶಕ್ಕೆ ದಕ್ಕದ ಅದ್ಯಾವುದೋ ಪುಳಕದ ಹಂಬಲ, ಮಾತಿಗೆ ನಿಲುಕದ ಭಾವಸಂವಾದ, ನೋಟಕ್ಕೆ ಮೀರಿದ ವ್ಯಾಪ್ತಿ, ಅರ್ಥಕ್ಕೆ ಹೊರತಾದ ಸನ್ಮತಿ, ಎಲ್ಲ ಚೆಲುವು-ನೋವುಗಳ ಒಳಹೂರಣವಾಗಿ ಎದ್ದು ನಿಂತ ಒಳಿತು, ಭಾಷೆ, ಕಾಲಗಳ ಸೀಮೆಯಾಚೆ ಹೊಳೆವ ದೇಶಾಭಿಮಾನ, ಜನಪದದ ಸಿರಿವಂತಿಕೆ..ಎಲ್ಲವೂ ಸೇರಿ ಅಕ್ಷರಗಳ ಸೊಬಗಲ್ಲಿ ಮಿಂದ ಸಾಲುಗಳನ್ನ ಮಲ್ಲಿಗೆಯ ಮಾಲೆಯಾಗಿ ಮುಡಿದವರು ಓದಿದ ನೀವಲ್ಲವೇ? ನನ್ನದೇನಿದೆ ಬರಿಯ ನೇಯ್ಗೆ.. ಚೆಲುವಿದ್ದರಷ್ಟೆ, ಒಳಿತಿದ್ದರಷ್ಟೆ ಸಾಲದು, ನೋಡಿ ಮೆಚ್ಚುವ ಮನಗಳಿರಬೇಕು... ಮತ್ತೆ ಸುಮ್ಮನೆ ಕೂತು ಬೆಂಕಿಗೆ ಬೆನ್ನೊಡ್ಡಿ, ಕಿಟಕಿಯಾಚೆ ಕಣ್ಣು ನೆಟ್ಟರು.

ಮತ್ತೆ ಮೌನ ಬೇಲಿಸಾಲಿನ ಹೂಗಳಂದದಿ ದೂರದೂರಕೂ ಹಬ್ಬಿತು.. ಬೀಸಿಬಂದ ಕುಳಿರಲ್ಲಿ ಇರುವಂತಿಗೆ ಮತ್ತು ಪಾರಿಜಾತದ ಮಿಶ್ರಕಂಪು.. ಒಲೆಯಲ್ಲಿ ಕೆಂಪಗೆ ಕಾದ ಕೆಂಡವಾಗುತ್ತಿರುವ ಕಟ್ಟಿಗೆಯನ್ನ, ಒಟ್ಟುಗೂಡಿಸಿ ಟಿನ್ನಿನ ತಟ್ಟೆಯಲ್ಲಿ ಸೇರಿಸಿ ಇಕ್ಕಳದಲ್ಲಿ ಹಿಡಿದು ಅಡುಗೆ ಮನೆಗೆ ನಡೆದೆ, ಪಾತು ಯಾವಾಗಲೋ ಕೆಂಪಿ ದನದ ಕರೆದ ನೊರೆಹಾಲು ದಬರಿಯಲ್ಲಿ ತಂದಿಟ್ಟು ಹೋಗಿದ್ದಳು. ಅಡಿಗೆ ಮನೆಯ ಮೂಲೆಯಲ್ಲಿ ಕಾಯುತ್ತ ಕೂತಿದ್ದ ಅಗ್ಗಿಷ್ಟಿಕೆಯ ಬಾಯಿಗೆ ಮುತ್ತುಗದ ಹೂಗಳಂತೆ ಕೆಂಪಗೆ ಹೊಳೆವ ಕೆಂಡಗಳ ಸುರಿದವಳು ಹಾಲಿನ ದಬರಿಯನ್ನು ಮೇಲಿಟ್ಟು ಬಂದೆ. ಹಂಡೆಯಲ್ಲಿ ನೀರು ಕುದಿಯುತ್ತಿತ್ತು..
ಚಳಿಯ ಝುಮುರಿಗೆ ಬಿಸಿನೀರು ಹಿತವೆಂದೆ..
ಒಲೆಯ ಕಾವಿಗಿಂತಲೂ! ಎಂದು ನಗುತ್ತ ಕೇಳಿದರು.. ನಾನು ಮಾತುಗಳನ್ನ ಹಿಂದೆ ದಬ್ಬಿ ಅವರ ನೋಡುತ್ತ ನಗುತ್ತ ನಿಂತೆ..

ಹಾಲು ಕಾಯುತ್ತಲಿದೆ, ಇನ್ನೇನು ಕಾಫಿ ಮಾಡುವೆ ಎನ್ನಲು, ನನಗೆ ಸಕ್ಕರೆಯ ಹಾಕು ಶುಗರಿಲ್ಲ, ಸಕ್ಕರೆ ಬೇಡ ಎನ್ನಲು ಅವಳಿಲ್ಲ.. ಎಂದವರ ಕಣ್ಣಂಚಲಿ ಹೊಳೆದದ್ದು ನಗುವೆ ನೋವೆ.. ಎರಡರ ಎರಕ ಕಂಡಿದ್ದಂತೂ ಸತ್ಯ..ಕೆದರಿದ ಕೂದಲ ಸರಿಮಾಡಬೇಕೆನ್ನಿಸಿತು, ನಡುಮನೆಯ ಕನ್ನಡಿಯ ಹಿಂದೆ ಇದ್ದ ಪುಟ್ಟ ಬಾಚಣಿಗೆ ತಂದರೆ ಮಗುವಿನಂತೆ ತಲೆ ಕೊಟ್ಟು ಕೂತರು. ಅಲ್ಲಿ ಬೈತಲೆಯ ಪಕ್ಕದಲ್ಲಿನ ಎರಡು ನಿಡಿದಾದ ಕೂದಲಲ್ಲಿ ಸಿಕ್ಕಿತ್ತು. ಮೆಲ್ಲ ಬಾಚಿ, ಹಣೆಯ ಮೇಲೆ ಬಾಗಿದ ಬಿಳಿಕುರುಳ ತೀಡಿದೆ. ಕಪ್ಪೆಯ ಚಿಪ್ಪಿನಗಲದ ಕಣ್ಣ ದೋಣಿಗೆ ಆಶ್ರಯ ಕೊಟ್ಟ ಹಣೆಯ ಲಂಗರಿನಲ್ಲಿ ಹಿಡಿದೆಳೆದು ನಿಲ್ಲಿಸಿದ ಕುರುಳುಗಳು ಅವರೇ ಹಿಂದೆಂದೋ ಬರೆದಿದ್ದ ಬಿಳಿಯ ಬೆಂಡೋಲೆಗಳಂತೆ ನಗುತ್ತಿದ್ದರೆ, ಅವರ ಸಾಲು ಸಾಲು ಚೆಲುಬರಹಗಳ ದೋಣಿಗಳು ಭಾವಸಮುದ್ರದ ನೀರಿಗಿಳಿಯತೊಡಗಿದವು..

ತೀಡಿದ್ದಾಯಿತೆ? ಹಾಲು ಉಕ್ಕಿದ ವಾಸನೆ ಎಂದವರನ್ನಲು, ಅಡಿಗೆ ಮನೆಗೆ ಓಡಿದೆ. ನೊರೆನೊರೆಯಾದ ಹಾಲು ಮಣ್ಣಿನ ಅಗ್ಗಿಷ್ಟಿಕೆಯ ಮೇಲೆಲ್ಲ ಬಿಳಿಚಿತ್ತಾರ.. ಪಕ್ಕದಲ್ಲೆ ಕೂತು ಗುರುಗುಟ್ಟುವ ಜಾಣೆ ಬಿಲ್ಲಿ.. ಪುಟ್ಟ ಪಾತ್ರೆಯಲ್ಲಿ ಹಾಲಿಗೆ ಡಿಕಾಕ್ಷನ್ ಬೆರೆಸಿ ಹದವಾಗಿ ಸಕ್ಕರೆ ಹಾಕಿ, ಮತ್ತೆರಡು ನಿಮಿಷ ಒಲೆಯ ಮೇಲಿಟ್ಟು ಎರಡು ಲೋಟಕ್ಕೆ ಬಗ್ಗಿಸಿ ಹೊರಬಂದೆ...

ಇಬ್ಬನಿ ಕರಗಿತ್ತು, ಬಿಸಿಲು ಬೆಳೆದಿತ್ತು.. ಬಿಸಿಲ ಕೋಲಿನ ಬೆಳಕು ಮರೆಯಾಗಿತ್ತು.. ಹಿಂದಿನ ನಿಲ್ದಾಣದಲ್ಲಿ ಇಳಿದವರ ಹೆಸರು ಕೇಳದವರು, ನಮ್ಮ ಕೊಡೆಯ ನೆರಳು ಅವರ ದಾರಿಗೆ ಬೀಳದ್ದಕ್ಕೆ ಕೈಮುಗಿದವರು..ಸಮಾನಾಂತರ ರೇಖೆಗಳಲ್ಲಿ ಸಾಗುವ ನಮ್ಮ ಬದುಕಿನ ಪಯಣವನ್ನ ಅಕ್ಷರಕ್ಕಿಳಿಸಿದವರು, ಹೊರಟುಹೋಗಿದ್ದರು. ಸುತ್ತೆಲ್ಲ ಚಂದನವ ತೇಯ್ದ ಇಹದ ಪರಿಮಳ. ಹಿತವಾದ ಬಿಸಿಲಿನಲ್ಲಿ ಕೆಂಪಿದನದ ಎಳೆಗರು ಚೆಲುವಿ ಅಂಗಳಕ್ಕಿಳಿದಿದ್ದಳು. ಕಣ್ಣು ತುಂಬಿ ಕಾಫಿಗುದುರುವುದರಲ್ಲಿತ್ತು..

ಕಾಫಿಯ ಚೆಲ್ಲುವರೇನಮ್ಮ.. ಹೋಗು ದಿನದ ಕೆಲಸಗಳು ಸಾಕಷ್ಟಿವೆ...ಅಂತ ಕಿಟಕಿಯಾಚೆ ಅವರು ನುಡಿದಂತಾಯಿತು.. ನಾಳೆ ಬರುವೆನು ಎಂಬ ಸೂಚನೆಯೇ ಅಂದುಕೊಳ್ಳುತ್ತಾ ಮನಸು ಹಗುರಾಗಿ ಒಲೆಯ ಬಳಿಯೇ ಬಿದ್ದಿದ್ದ ಬಾಚಣಿಗೆಯನ್ನೆತ್ತಿಕೊಂಡೆ ಎರಡು ಬಿಳಿಕೂದಲುಗಳಿದ್ದವು.

ಒಳಗಿನಿಂದ ನನ್ನವರು .. ಬಾರೆ ನನ್ನ ಶಾರದೆ..ಎಂದನ್ನಲು ಬಾಚಣಿಗೆಯನ್ನ ಮಡಿಲ ನಿರಿಗೆಗೆ ಸಿಕ್ಕಿಸಿಕೊಂಡು ಕಾಫಿಲೋಟಗಳನ್ನು ಹಿಡಿದು ಒಳಗೋಡಿದೆ..

Saturday, January 26, 2008

ಭಾವಜೀವಿಯ ಕವಿತೆ..

ಹೆದ್ದಾರಿಯಿಂದ ಸ್ವಲ್ಪದೂರದಲ್ಲಿ ಬೆಟ್ಟ, ಕಾನು, ಘಟ್ಟದ ರಸ್ತೆ, ಮಳೆ ಇವೆಲ್ಲ ಕಂಡರಿಸಿ ನಿಲ್ಲಿಸಿದ ಪುಟ್ಟ ಚೆಲುವಾದ ಊರು ಕಲಗಾರು. ತಾಳಗುಪ್ಪಾ-ಜೋಗದ ಮಧ್ಯೆ ಸಿಗುವ ಈ ಊರಿನ ಪ್ರಕೃತಿಸಿರಿಯಷ್ಟೇ ಇಷ್ಟವಾಗುವ ಜೀವ ಮಾಧು ಮಾವ. ದಿನದಿನದ ಬದುಕಲ್ಲಿ ಹಣ್ಣಾಗುತ್ತಲೇ ತನ್ನ ಭಾವದೊರತೆಯನ್ನ ಚಿರಂತನವಾಗಿ ಜೀವಂತವಿರಿಸಿಕೊಂಡ ಭಾವಜೀವಿ. ನಿನ್ನೆ ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದವನ ಕೈಯಲ್ಲಿ ಸಿಕ್ಕ ಕವಿತೆಯ ಪುಸ್ತಕಗಳಲ್ಲಿ ಕಣ್ಣಾಡಿಸಿದವಳಿಗೆ ತುಂಬ ಚೆಲುವಾದ ಕವಿತೆಗಳು ಸಿಕ್ಕಿ ಮನಸ್ಸು ಉಲ್ಲಸಗೊಂಡಿತು. ತನ್ನ ಮನೆ,ತೋಟ ಕೆಲಸಗಳ ನಡುವೆ, ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುವ ಮಾವನ ಓದಿನ ಹರವೂ ಅಪಾರ. ಬೇಲಿಸಾಲಿನ ಹಸಿರ ನಡುವೆ ಕೆಂಪಗೆ ಹೊಳೆವ ಹೂವಿನ ಮಾರ್ದವತೆ ಮೈದಳೆದಿರುವ ಮಾಧು ಮಾವನ ಒಂದು ಭಾವಗೀತವನ್ನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇನೆ.. ಓದಿ ಏನನ್ನಿಸಿತು ಹೇಳಿ

ಮುಸುಕಿನಲಿ ಆಡಿದ
ಪಿಸುಮಾತು - ಕಿವಿಮಾತು
ಇನಿದನಿಗೆ ಬದಲಾಗಿ
ಕರ್ಕಶದ ಮಾರ್ದನಿಯಾಗದಿರಲೆಂದು
ಮಂಜು ತಬ್ಬಿತು ಬೆಟ್ಟವ
ಮನದ ಮಾತಿಗೆ ಮೌನ
ಮುಳ್ಳಬೇಲಿಯ ಘನವಾಗಿ
ಹೆಪ್ಪುಗಟ್ಟಿದ ಭಾವ
ಶೂನ್ಯದಾಗಸಕೆ ನಿಚ್ಚಣಿಕೆಯಾದಾಗ
ಮಂಜು ತಬ್ಬಿತು ಬೆಟ್ಟವ
ಮುಗ್ಧ ಮುಖದಾವರೆಯ
ಸ್ನಿಗ್ಧ ನಗುವಿನ ಪ್ರಕೃತಿ
ನದಿಯಂಚಿನ ಮರಳು - ಗುಡ್ಡ
ಯಂತ್ರಗಳ ರವದಲ್ಲಿ ಸಿಡಿಸಿಡಿದು ಹೋಳಾಗೆ
ಮಂಜು ತಬ್ಬಿತು ಬೆಟ್ಟವ
ಆಸೆಗಳ ತಿಳಿಗೊಳದಿ
ದುರಾಸೆಗಳ ಅಲೆಮೂಡಿ
ವಾದ ವಿವಾದಗಳ ವಿಷಯ-ವಿಷವಾಗಿ
ತತ್ವಗಳ ಬದುಕಲ್ಲಿ ಕುಹಕ ಬೆಂಕಿಬಲೆ ಹೆಣೆದಾಗ
ಮಂಜು ತಬ್ಬಿತು ಬೆಟ್ಟವ
ಕಾಡ ನಾಡಾಗಿಸುವ
ಕುರುಡು ಹುನ್ನಾರಿಗೆ ಸಿಲುಕಿ
ದುಡಿವ ಜನ - ಮಡಿವ ಜನ
ಇಟ್ಟಂಗಿ ಕಲ್ಲು ಪಾವಟಿಗೆಯಾಗಿ, ಉಳ್ಳವರು ಅಟ್ಟಹಾಸವ ಮಾಡೆ
ಮಂಜು ತಬ್ಬಿತು ಬೆಟ್ಟವ
ನಿನ್ನೆ ನಾಳೆಯ ನಡುವೆ
ಇಂದೆಂಬ ಚಿರಸತ್ಯ
ಯಾರಿರಲಿ ಇಲ್ಲದಿರಲಿ
ನಾನಿದ್ದರಷ್ಟೆ ಸುಖವೆಂಬ ಸ್ವಾರ್ಥ ಸಂತೆಗೆ ಕರಗಿಬೀಳುವ ಮುನ್ನ
ಮಂಜುತಬ್ಬಿತು ಬೆಟ್ಟವ.


-ಮಾಧವ ಶರ್ಮ ಕಲಗಾರು

Friday, January 25, 2008

ಗಣರಾಜ್ಯೋತ್ಸವದ ಹಿಂದಿನ ಸಂಜೆ..

ಓ ಇವತ್ತು ಈ ರಿಪೋರ್ಟು ರೆಡಿ ಮಾಡಬೇಕು. ಹಾಳಾದ್ದು ಗಣರಾಜ್ಯೋತ್ಸವ ಶನಿವಾರ ಬಂದ್ ಬಿಡ್ತು. ಒಂದು ರಜಾ ಮಿಸ್ಸಾಗೋಯ್ತು ಅಂದುಕೊಳ್ಳುತ್ತ ದಿನಚರಿ ಶುರುವಾಯಿತು. ಅಷ್ಟರಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ಕ್ವಿಝ್ ಒಂದನ್ನ ಮುಂದಿಟ್ಟರು. ಎಲ್ಲರೂ ಗೊಣಗುತ್ತಲೇ ಕೈಗೆತ್ತಿಕೊಂಡೆವು.
ಸ್ವತಂತ್ರ ಭಾರತದ ಬಗೆಗಿನ ಕೆಲವು ಪ್ರಶ್ನೆಗಳು. ಹೆಚ್ಚೂ ಕಡಿಮೆ ಎಲ್ಲವನ್ನೂ ನಾವು ಮಾಧ್ಯಮಿಕ ಶಾಲೆಯಲ್ಲಿ ಓದಿರಬಹುದಾದದ್ದು.
ಯಾರಿಗೂ ೪ ಪ್ರಶ್ನೆಗಳಿಗಿಂತ ಹೆಚ್ಚಾಗಿ ಮುಂದೆ ಹೋಗಲಾಗಲಿಲ್ಲ. ಆ ನಾಲ್ಕರಲ್ಲೂ ಎರಡು ಅಳೆದೂ ಸುರಿದೂ ಐದು ನಿಮಿಷ ಯೋಚನೆ ಮಾಡಿ ಉತ್ತರಿಸಿದ್ದು. ತಲೆತಗ್ಗಿಸಿ ಕೂತೆ.

ಒಂದು ಇಡೀ ತಲೆಮಾರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿ ತಂದುಕೊಟ್ಟ ಸ್ವಾತಂತ್ರ್ಯ, ಆ ವಿಶೇಷ ಚೇತನಗಳು ಕಂಡ ಆದರ್ಶ ಗಣರಾಜ್ಯ ಎರಡೂ ಮುಖಕ್ಕೆ ಮುಸುಕೆಸೆದುಕೊಂಡು ಅಳುತ್ತ ಕೂತಿವೆ. ನಮಗೆ ಮಿಡ್ಲ್ ಸ್ಕೂಲಿನ ಪರೀಕ್ಷೆಯ ಮಟ್ಟಕ್ಕೆ ಮಾತ್ರ ಸಿವಿಕ್ಸ್ ಬೇಕು. ಆಮೇಲೆ ಮರೆತುಹೋಗಿಬಿಡುತ್ತೆ. ಬಾಲ್ಯದಲ್ಲಿ ಓದಿದ ಗುಂಪಾಗಿ ಹೋರಾಡಿದ್ದ ಸ್ವತಂತ್ರ ಸೇನಾನಿಗಳು ನಾವು ಬೆಳೆದು ದೊಡ್ಡವರಾದ ಮೇಲೆ, ನಮ್ಮ ನಮ್ಮ ಮನಸ್ಸಿಗೊಪ್ಪುವ ಸಿದ್ಧಾಂತ ಧಾರೆಯ ಪ್ರಭಾವಳಿಯಲ್ಲಿ ಮೆರವಣಿಗೆ ಹೊರಟು ಅವರ ಹೋರಾಟದ ಸತ್ವ ಮಕಾಡೆ ಮಲಗಿರುತ್ತದೆ. ಒಬ್ಬೊಬ್ಬರನ್ನೂ ಒಂದೊಂದು ಪಕ್ಷ ಗುತ್ತಿಗೆಗೆ ಹಿಡಿಯುತ್ತದೆ. ನಾವು ಗೆದ್ದೆತ್ತಿನ ಬಾಲ ಹಿಡಿಯುತ್ತಾ, ಹಿರಿಯರ ಕಷ್ಟಾರ್ಜಿತ ಸ್ವಾತಂತ್ರವನ್ನ ಸ್ವೇಚ್ಛೆಯಾಗಿ ಉಪಯೋಗಿಸುತ್ತಾ, ಕ್ರಿಕೆಟ್ ಮ್ಯಾಚುಗಳಲ್ಲಿ ಬಾವುಟದ ಬಣ್ಣ ಬಳಿದುಕೊಳ್ಳುತ್ತಾ, ವೀಸಾ ಕ್ಯೂನಲ್ಲಿ ಕಾಯುತ್ತಿರುತ್ತೇವೆ. ನಮ್ಮದು ಸಿರಿಮಲ್ಲಿಗೆ.

ಭಾರತ ಗಣರಾಜ್ಯವಾದ ವರ್ಷ ಯಾವುದು ಅಂತ ತಿಳಿದುಕೊಂಡು ನಮಗೇನಾಗಬೇಕಾಗಿದೆ? ಸೆನ್ಸೆಕ್ಸ್ ಹೇಗೆ ಏರಿಳಿಯುತ್ತಿದೆ ಅಂತ ನೋಡಲು ಸರಿಯಾಗಿ ಟೈಮಿಲ್ಲ. ನಮ್ಮ ರಾಷ್ಟ್ರಗೀತೆಯ ಇತಿಹಾಸ ಗೊತ್ತಿಲ್ಲ. ತಪ್ಪಾಗಿ ಹಾಡಿದವರನ್ನ ಹಂಗಿಸುತ್ತೇವೆ. ರಾಜಕಾರಣಿಗಳನ್ನ ಎಗ್ಗಿಲ್ಲದೆ ಆಡಿಕೊಳ್ಳುತ್ತೇವೆ. ನಮ್ಮ ಹಕ್ಕು ಬಳಸಿ ಕರ್ತವ್ಯ ನಿಭಾಯಿಸುವ ಮಾತೆತ್ತಿದರೆ ಜಾರಿಕೊಳ್ಳುತ್ತೇವೆ. ಹೋದವರ್ಷ ಟೀವಿ ಚಾನೆಲ್ಲೊಂದು ನಮ್ಮ ಸಂಸದ ಮಹಾಶಯರನ್ನು ಮಾತಾಡಿಸಿತ್ತು. ರಾಷ್ಟ್ರಗೀತೆ ಬರೆದವರು ಯಾರು ಎಂಬ ಪ್ರಶ್ನೆ ಮುಂದಿಟ್ಟರೆ ಕ್ಯಾಮೆರಾ ಮುಂದೆ ಪೆಕರು ಪೆಕರಾಗಿ ಗಾಂಧಿ, ಮೋಸ್ಟ್ಲೀ ಯಾವುದೋ ಚಟರ್ಜೀ,ವಿವೇಕಾನಂದ ಅಂತ ಬಾಯಿಗೆ ಬಂದಂಗೆ ಕೆಲವರು ಹಲುಬಿದರೆ, ಕೆಲ ಹಿರಿಯ ಸಂಸದರು ಇಂತದೆಲ್ಲ ಯಾರು ನೆನಪಿಟ್ಕೋತಾರೆ ರಾಷ್ಟ್ರಗೀತೆ ಹಾಡೊಕ್ಕೆ ಬಂದರೆ ಸಾಕಲ್ವಾ ಅಂದರು. ಸಧ್ಯ ಆ ಚಾನೆಲ್ಲು ಅವರಿಂದ ಅದನ್ನು ಹಾಡಿಸಿ ರಾಷ್ಟ್ರಗೀತೆಗೆ ಅವಮಾನ ಮಾಡಲಿಲ್ಲ.

ಅಮೆರಿಕದ ಶಿಕ್ಷಣಪದ್ಧತಿಯಲ್ಲಿ ಓದುವ ಗ್ರಾಜುಯೇಟ್ಸ್ ಮತ್ತು ಪ್ರೊಫೆಶನಲ್ಸ್ (ಡಾಕ್ಟರು, ಇಂಜಿನಿಯರು, ಲಾಯರು, ಆಡಿಟರು..ಇತ್ಯಾದಿ ಎಲ್ಲರೂ) ರಾಷ್ಟ್ರದ ಚರಿತ್ರೆ,ಭೂಗೋಳ ಮತ್ತು ನಾಗರಿಕ ಸಂಹಿತೆಯನ್ನ ಒಂದು ಮೇಜರ್ ವಿಷಯವಾಗಿ ಓದಲೇಬೇಕು. ಇದು ಜನಮನದಲ್ಲಿ ನಮ್ಮ ದೇಶದೆಡೆಗಿನ ಅಭಿಮಾನ, ನಮ್ಮ ಸ್ವಾತಂತ್ರ ಹೋರಾಟದ ಹಿರಿಮೆ, ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ಎಲ್ಲವನ್ನೂ ಕಟ್ಟಿಕೊಡುತ್ತದೆ. ಇಂತಹ ಒಳ್ಳೆಯ ವಿಷಯದ ಕಡೆ ನಮ್ಮ ಗಮನ ಹೋಗುವುದೇ ಇಲ್ಲ. ನಮಗೆ ಅವರ ತಂತ್ರಜ್ಞಾನ ಮತ್ತು ಸ್ಟಾಕ್ಸ್ ಮಾತ್ರ ಬೇಕು.

ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ ರಂಗದಲ್ಲಿ ಮುನ್ನುಗ್ಗುವ ನಮಗೆ ನಮ್ಮ ಸಂಸ್ಕೃತಿಯ, ಬೇರಿನ ಅರಿವೇ ಇಲ್ಲದೆ ಹೋದರೆ ಹೇಗೆ ಅಂತ ಮನಸ್ಸು ಖಿನ್ನವಾಗಿದೆ. ಇನ್ನೆಲ್ಲ ಹೋಗಲಿ ತಮ್ಮ ಸುಖ ಮತ್ತು ಸಂಪತ್ತನ್ನು ಬದಿಗಿಟ್ಟು ಹೋರಾಟ ಮಾಡಿದ ನಮ್ಮ ಸ್ವತಂತ್ರಯೋಧರ ನೆನಪು ನಮಗೆ ಚಿರಸ್ಮರಣೀಯವಲ್ಲವೆ!

ನೋಡಿ, ಗೂಗ್ಲಿಂಗ್ ಮಾಡದೇ ಈ ಕ್ವಿಝ್ ಗೆ ಉತ್ತರ ಹುಡುಕಿ. ನಿಮಗೇನೆನ್ನಿಸಿತು ಅಂತ ಹಂಚಿಕೊಳ್ಳಿ.
  1. Who was the president of the Constituent Assembly that held the 'Independence Meeting'?
  2. Who was the viceroy of independent India?
  3. Name the first woman minister of Independent India.
  4. What does the navy blue wheel that appears in the Indian national flag stand for?
  5. The order of the colors of Indian national flag from top down is.................................
  6. In 1997, the year of 50th anniversary of Indian independence, the US Senate passeda resolution, designating it as a National(US) Day of celebration of............................
  7. Name the national animal, bird, flower and fruit
  8. Since when India had been recognized as a republic?
  9. Who was the last Governor General of Independent India?
  10. The first stanza of Tagore's 'Janagana Maana' has been selected as India's national anthem.How many stanzas are there in the original song?

ಇಂತಹ ಒಂದು ಭಿನ್ನ ಆಲೋಚನೆಯ ಕ್ವಿಝ್ ಕೊಟ್ಟು ನಮ್ಮ ೫೯ನೇ ಗಣರಾಜ್ಯೋತ್ಸವಕ್ಕೆ ಹೊಸ ಅರ್ಥ ತುಂಬಿದ ಸಹೋದ್ಯೋಗಿಗೆ ಕೃತಜ್ಞತೆ ಸಲ್ಲಿಸುತ್ತಾ..

Tuesday, January 22, 2008

ಬದುಕಿಗಿಂತ ಕನಸು ಲೇಸು..

ಅವನು ಬರದೆ ಕಣ್ಣೇ ತೆರೆಯಬಾರದು ಅಂತ ಗಟ್ಟಿಯಾಗಿ ಕಣ್ಮುಚ್ಚಿಕೊಂಡು ಕೂತಿದ್ದೆ. ಬೀಸಿ ಬಂದ ತಂಗಾಳಿ ಬಯಲಿನಲ್ಲಿದ್ದ ಹೂಗಳ ಪರಿಮಳವನ್ನೆರಚಿತು. ಆ ಕಡೆ ನೋಡಿದೆ. ಜನರ ಗಡಿಬಿಡಿ, ಓಡಾಟ ನೋಡಿ ಬೋರು ಹೊಡೆಸಿಕೊಂಡಿದ್ದ 'ದಿನ' ಆದಷ್ಟು ಬೇಗ 'ನಿಶೆ' ಯ ತೆಕ್ಕೆ ಸೇರುವ ಆತುರದಲ್ಲಿ ಸಂಜೆಯ ಹೊಸಿಲೆಡವಿ ಹಣೆಯೊಡೆದುಕೊಂಡಿತ್ತು. ಪಥಿಕರು ‍ಯಾರೂ ಇರದಿದ್ದ ಹಾದಿಯೊಂದರ ಯಾವ ತಿರುವಿನಲ್ಲೂ ಅವನ ಸುಳಿವಿರಲಿಲ್ಲ. ಶೀತಗಾಳಿಗೆ ಮೈ ಬಿಟ್ಟು ಕೂತಿದ್ದೀಯಲ್ಲಾ ಅಂತ ನನ್ನ ಗದರಿದ ರಾತ್ರಿ ಮಬ್ಬುಗತ್ತಲಿನ ಶಾಲು ಹೊದೆಸಿತು. ಅವನ ಕಣ್ಣೋಟದ ಪ್ರತಿಫಲನವೋ ಎಂಬಂತೆ ಥಳಕ್ಕೆಂದವು ನಕ್ಷತ್ರಗಳು. ಇನ್ನು ಬರಲಾರ ಅವನು, ಅನ್ನಿಸಿದ್ದೇ ತಡ ಸುತ್ತಲಿನ ಕತ್ತಲಿನ ಅರಿವಾಯಿತು. ಸೋತ ಕಾಲಿನಲ್ಲಿ ಏಳಲಾರದೆ ಎದ್ದೆ.

ಏನೇನೋ ಹೇಳಿ ಬೋರ್ ಹೊಡೆಸ್ತಿದ್ದೀನಾ ನಾನು? ಆದ್ರೆ ಪ್ಲೀಸ್ ಸ್ವಲ್ಪ ನನ್ನನ್ನ ಅರ್ಥ ಮಾಡಿಕೊಳ್ಳಿ.ನನ್ನ ತಳಮಳವನ್ನ ನಾನು ಯಾರಿಗೂ ಹೇಳಿಕೊಳ್ಳಲಾರೆ. ನನಗೊಬ್ಬಳಿಗೇ ಇದನ್ನೆಲ್ಲ ಸಹಿಸಲು ಆಗುತ್ತಲೇ ಇಲ್ಲ. ನೀವಾದ್ರೆ... ನಿಮಗೆ ನನ್ನ ಗೊತ್ತಿಲ್ಲ. ನಂಗೂ ನಿಮ್ಮುನ್ನ ಗೊತ್ತಿಲ್ಲ. ಅದಿಷ್ಟೇ ಅಲ್ಲ. ನೀವು ಇದನ್ನೆಲ್ಲಾ ಓದಿದ ಮೇಲೆ ಏನಂತ ಸ್ಪಂದಿಸುತ್ತೀರೆಂದು ನಂಗೆ ಗೊತ್ತಾಗೋಲ್ಲ. ಕತ್ತಲ ರಾತ್ರಿಯಲ್ಲಿ ಮನೆಯವರು ‍ಯಾರಿಗೂ ಎಚ್ಚರವಾಗದ ಹಾಗೆ ಎದ್ದು ಕಿಟಕಿಗೆ ಆತು ಕಣ್ಣೀರಿಡುವಾಗ ಆ ಹನಿಗಳನ್ನು ಬೀದಿದೀಪ ಪ್ರತಿಫಲಿಸುತ್ತಲ್ಲಾ ಹಾಗೆ ಇದು. ಆ ಹನಿಗಳಂತೆ ಈ ಪದಗಳನ್ನ ಹರಿಯಬಿಟ್ಟಿದ್ದೇನೆ.
ನನ್ನ-ನಿಮ್ಮೆಲ್ಲರ ದೈನಂದಿನ ವ್ಯವಹಾರೀ ವಾಸ್ತವಿಕತೆಯ ಬಿಸಿಗೆ ಬಾಡಿ ಬಸವಳಿದಿರುವ ಭಾವುಕತೆಯನ್ನು ಈ ಹನಿಗಳು ಸ್ಪರ್ಶಿಸಿದರೆ ಸಾಕು ನನಗೆ. ಅಲ್ಲೆ ಇಂಗಿ ಹೋಗಲವು. ನಾನು ಇಲ್ಲಿ ಕರಗುತ್ತೇನೆ. ಈಗ ಕೇಳುತ್ತೀರಲ್ವಾ..?

ಅವನು ನನಗೆ 'ಅವನಾ'ಗಿರಲಿಲ್ಲ. ನಾನೇ ಆಗಿದ್ದ. ಅವನು ನನ್ನ ಗೆಳೆಯನಷ್ಟೇ ಇರಲಿಲ್ಲ. ಅವನು ನನ್ನ ಅಮ್ಮನಾಗಿದ್ದ. ಅವನ ಕಣ್ಣೋಟದಿಂದ ನಾನು ಬಿಸಿಯಾಗುತ್ತಿರಲಿಲ್ಲ, ಅರಳುತ್ತಿದ್ದೆ. ಅವನು ನನ್ನ ಸ್ಪರ್ಶದಲ್ಲಿ ಕರಗುತ್ತಿರಲಿಲ್ಲ ಪಲ್ಲವಿಸುತ್ತಿದ್ದ. ಮಾತು, ನೋಟ, ಸ್ಪರ್ಶಗಳು ಕಂಗಾಲಾಗಿ ನಿಂತ ನಂತರದ ಮೌನಶ್ರೇಣಿಯ ಚಾರಣ ಪಯಣ ನಮ್ಮದಿತ್ತು. ಅಲ್ಲಿ ಗದ್ದಲವಿರಲಿಲ್ಲ, ನಿರ್ವಾತ ಮೊದಲೇ ಇಲ್ಲ. ಪ್ರಕೃತಿಯ ಚೆಲುವು ಬಗೆಬಗೆಯ ರೂಪಿನಲ್ಲಿ ಮೈದಳೆದ ಆ ಹಾದಿಯಲ್ಲಿ, ನಾನು ಹೊರಟಾಗ ಒಬ್ಬಳೇ ಇದ್ದೆ. ಅವನು ಅಲ್ಲೆ ತಿರುವಿನಲ್ಲಿದ್ದ ಪುಟ್ಟ ಝರಿಗೆ ಮೈಯೊಡ್ಡಿ ನಿಂತು ಸುತ್ತಲ ಜಗದ ಪರಿವೆಯಿಲ್ಲದೆ ಗುನುಗುತ್ತಿದ್ದ.

ಮೈ ತನ್ ಹಾ ಥಾ.. ಮೈ ತನ್ ಹಾ ಹೂಂ
ತುಮ್ ಆವೋ ತೋ ಕ್ಯಾ, ನಾ ಆವೋ ತೋ ಕ್ಯಾ...!
ನೀನು ಬಂದರೇನು ಗೆಳತೀ ಬರದಿದ್ದರೇನು ಅಂತ ವಿಷಾದವೂ ಮುದ್ದು ಸುರಿಸುವ ಹಾಗಿನ ಗುಲಾಮ್ ಅಲಿಯವರ ಗಝಲ್ ಸಾಲುಗಳವು.

ನಾನಲ್ಲಿ ಅರೆಘಳಿಗೆ ನಿಂತು ಮುಂದಡಿಯಿಟ್ಟೆ. ಮುಂದಿನೊಂದು ತಿರುವಿನಲ್ಲಿ ಎಷ್ಟೇ ತಡೆದರೂ ಕಣ್ಣಿನಿಂದ ಚಿಮ್ಮಿದ ಒರತೆಯನ್ನು ಅಳಿಸಲು ಕೈಯೆತ್ತಿದೆ. ತಡೆದ ಅವನು ಕರ್ಚೀಫು ಕೈಗಿಟ್ಟ. ಮಾತುಗಳು ಮೌನಕೋಟೆಯ ಸುತ್ತ ಗಸ್ತು ತಿರುಗಿ ಸುಸ್ತೆದ್ದು ಹೋಗಿ ತೆಪ್ಪಗಾದವು. ಆವತ್ತು ರಾತ್ರಿಯ ಪಯಣಕ್ಕೊಂದು ವಿರಾಮವಿತ್ತು ನೆಲಕ್ಕೊರಗಿದೆವು. ಆಕಾಶ ಚಾವಣಿಯ ಡೇರೆಗೆ ಚಂದಿರ ತಾರೆಗಳ ಶಾಂಡೆಲಿಯರ್ ಝಗ್ಗೆಂದಿತ್ತು. ನಡೆದ ಆಯಾಸವನ್ನೇ ಮರೆಸುವ ಗಾನದಿಂಪಿನ ಊಟವಿಟ್ಟಿದ್ದ ಅವನು ನನಗೆ. ಅವನ ದಣಿದ ಕಂಗಳಿಗೆ ನಾನು ತುಟಿಯೊತ್ತಿದೆ. ಈ ಅಪರಿಚಿತ ನನ್ನ ಪಯಣದ ಹಾದಿಯಲ್ಲಿ ಜೊತೆ ಜೊತೆಗೇ ಹೆಜ್ಜೆ ಹಾಕಿ ನನಗರಿವಿಲ್ಲದೆ ನನ್ನೊಳಮನೆಗೆ ನಡೆದುಹೋಗಿಬಿಟ್ಟಿದ್ದ. ಹೊರತರುವ ಬಗೆಯೆಂತೋ ಗೊತ್ತಿಲ್ಲ. ಹೊರತರಲು ನಂಗೆ ಇಷ್ಟವೂ ಇಲ್ಲ.

ಹೆಜ್ಜೆ ಮೂಡಿರದ ಬಯಲಲ್ಲಿ ನಾವು ಹೆಜ್ಜೆ ಇಟ್ಟೆವು. ಅವನು ಹೆಜ್ಜೆಯಿಟ್ಟಲ್ಲಿ ನಾನೊಂದು ಕವನ ಮೂಡಿಸುತ್ತಿದ್ದೆ. ನಾನು ಹೆಜ್ಜೆಯಿಟ್ಟಲ್ಲಿ ಅವನೊಂದು ಹಾಡು ಗುನುಗುತ್ತಿದ್ದ. ನಮ್ಮಿಬ್ಬರ ಹೆಜ್ಜೆಗೆ ಜೊತೆಯಾಗಿ ಹೆಸರು ಗೊತ್ತಿಲ್ಲದ ಕಾಡು ಹೊಕ್ಕಿಯೊಂದು ಉಲಿಯುತ್ತಿತ್ತು. ಸುತ್ತ ಚೆಲುವಾಗಿ ತುಂಬಿ ನಿಂತ ಅಮ್ಮ ನಮ್ಮನ್ನು ನೋಡಿ ಮೆಲು ನಗುತ್ತಿದ್ದಳು. ತಂಗಾಳಿ ಬೀಸುತ್ತಿದ್ದಳು. ಕಂಪು ಸೂಸುತ್ತಿದ್ದಳು.

ಇಷ್ಟು ವರ್ಷ ಒಬ್ಬಂಟಿತನದ ಬಂದರಿನಲ್ಲಿ ಲಂಗರು ಹಾಕಿದ ನನ್ನ ಬದುಕಿನ ನಾವೆಗೆ ಚೈತನ್ಯದ ಪುಶ್ ಸಿಕ್ಕಿತ್ತು. ನಾನು ಜೀವನ್ಮುಖತೆಯಲ್ಲಿ ತೇಲಬಯಸಿದೆ. ಬಂದರಿನವರಿಗೆ ಕಸಿವಿಸಿಯಾಗತೊಡಗಿತು. ಹಾಕಿದ್ದ ಮೂರುಗಂಟಿನ ಮೇಲೆ ಇನ್ನೆರಡು ಸುತ್ತು ಹಗ್ಗ ಬಿಗಿದರು. ನಾನೇನು ತುಂಬ ಕೂಡಿ ಕಾಪಿಟ್ಟುಕೊಳ್ಳಬೇಕಾದ ಬೇಕೇ ಬೇಕಿರುವ ನಾವೆಯಲ್ಲ. ಹಾಗಂತ ಬಿಟ್ಟು ಬಿಡಲು ಸೋಶಿಯಲ್ ಸ್ಟೇಟಸ್ ಒಪ್ಪಬೇಕಲ್ಲ. ತಾವೇ ನಾವೆಯ ಹಗ್ಗ ಕಡಿದು ಹರಿಯಬಿಟ್ಟರೆ ದೊಡ್ಡಸ್ತಿಕೆ ಉಳೀತದೆ, ಅದು ಬಿಟ್ಟು ನಾವೆ ತಾನಾಗೆ ಬಂದರಿನಿಂದ ಸರಿದು ಹೋಯಿತೆಂದರೆ...! ಇದ್ದ ಡಿಗ್ನಿಟಿಯೆಲ್ಲ ನೀರುಪಾಲಾದ ಹಾಗೆ ಅಂತ ಬಂದರಿನವರ ಅಭಿಪ್ರಾಯ.
ಇದೆಲ್ಲ ನಿಜವಾದರೂ ನಾನು ಬರಿಯ ನಾವೆಯಷ್ಟೇ ಅಲ್ಲವಲ್ಲ. ಸೋಷಿಯಲ್ ಸ್ಟೇಟಸ್ ಇರೋದು ಬೇರೆಯವ್ರನ್ನ ಖುಷಿ ಪಡಿಸಲೇ ಹೊರತು ನನ್ನ ಮನದಳಲನ್ನ ಸಂತೈಸಲು ಅಲ್ಲವಲ್ಲ....
ಮಲ್ಲಿಗೆ ಕವಿ ಹೀಗೊಂದು ಹೂನೇಯ್ಗೆ ನೇಯ್ದರು..

ಕೈ ಮುಗಿವೆನು ಬಿಸಿಹಾಲಿನ ಬಟ್ಟಲಂತ ಪ್ರೀತಿಗೆ,
ಬದುಕಿಗಿಂತ ಕನಸು ಲೇಸು ಎಂಬ ನಿನ್ನ
ರೀತಿಗೆ...
ಈ ವ್ಯವಹಾರಿಕ ಜಗತ್ತಿನ ಮುಖವಾಡಗಳ ಹಿಂದೆ ನನ್ನನ್ನ ಹುದುಗಿಸಿಟ್ಟುಕೊಂಡು ತುಂಬ ದಿನಗಳ ಕಾಲ ಮುರುಟಿಕೊಂಡು ಬದುಕಿ ಕೊನೆಗೊಂದು ದಿನ ಕೊರಡಾಗುವುದು ನಂಗಾಗೋಲ್ಲ. ಸ್ವಲ್ಪ ದಿನವೇ ಆದ್ರೂ ಸರಿ ಭಾವುಕ ಕನಸುಗಳಲ್ಲಿ ಕರಗಿ ಹೋಗೋದೇ ಒಳ್ಳೇದು ಅನ್ನಿಸಿಬಿಟ್ಟಿದೆ.

ನೀವು ಇದನ್ನು ಓದುವ ಹೊತ್ತಿಗಾಗಲೇ ನಾನು ನನ್ನ ಕನಸಿನ ಲೋಕದ, ಗಿರಿಶ್ರೇಣಿಗಳ ತಪ್ಪಲಲ್ಲಿ ಇರ್ತೀನಿ. ದರಿಯ ಅಂಚಿನಲ್ಲಿ, ಬೀಳುವಂತೆ ಕಂಡೂ ಬೀಳದ ಕಲ್ಲಿನ ಮೇಲೆ ಕೂತಿರ್ತೀನಿ, ನನ್ನ ನೋಡಿ ಬೆಚ್ಚಗೆ ಕೆಂಪು ಕೆಂಪಾಗಿ ಭೂಮಿಯ ಬೆನ್ನಲ್ಲಿ ಅಡಗುವ ಸೂರ್ಯನ್ನ ನೋಡುತ್ತಾ.. ಹೌದು ನೆನ್ನೆ ತಾನೇ ಬಂದರಿನವರ ವ್ಯವಹಾರ ಮುಗಿಯಿತು. ವಿಚ್ಛೇದನದ ಬಿಡುಗಡೆ.
ನೀವು ನಂಗೊಂದು ಸಹಾಯ ಮಾಡ್ತೀರಾ?ಅವನ್ಯಾಕೋ ಇವತ್ತು ಬಂದಿಲ್ಲ, ನಾನು ಇವತ್ತೇ ಹೊರಡಬೇಕು. ಇಲ್ಲೊಂದು ಪುಟ್ಟ ನೋಟ್ ಇದೆ, ಇದನ್ನ ಅವನಿಗೆ ತಲುಪಿಸುತ್ತೀರಾ? ಲೈಬ್ರರಿಯ ನೋಟಿಸ್ ಬೋರ್ಡಿನಲ್ಲಿ ಹಾಕಿದರೆ ಸಾಕು ಅವನಿಗೆ ಸಿಕ್ಕೇ ಸಿಗುತ್ತೆ.

ಜನನಿಬಿಡ ನಗರಗಳಿಂದ ದೂರಕ್ಕೆ,
ನೀಲಿಯಂಚಿನ ಹಸಿರು ಹೊದ್ದ-
ನಿಸರ್ಗದ ಒಡಲೊಳಕ್ಕೆ,
ಮೌನರಾಗದ ಗಾನದಿಂಪಿಗೆ,
ನಾ-ನೀ ಮರೆತು ಹೋಗಿ
'ನಾವಾ'ಗುವ ಆಕಾಶಚಾವಣಿಯ
ಹುಲ್ಲುಹಾಸಿನರಮನೆಗೆ,
ತೆರಳುತ್ತಿದ್ದೇನೆ ಗೆಳೆಯಾ.

ಬರುವ ದಾರಿ ಸುಲಭದ್ದು,
ನಿನಗೇ ಗೊತ್ತುಂಟಲ್ಲ,
ಗೋಡೆಗಳಿಲ್ಲ, ತೆರೆದ ಬಾಗಿಲು,
ಕರೆಗಂಟೆ ಒತ್ತಬೇಕಿಲ್ಲ.
-ಕನಸುಗಾತಿ

Tuesday, January 1, 2008

ನವಪಲ್ಲವ

ಎಲ್ಲ ಬರೆದಿದ್ದಾರೆ ಕಳೆದ ನಿನ್ನೆಗಳು ಬರುವ ನಾಳೆಗಳು ಇಂದು ಹನ್ನೆರಡು ಗಂಟೆಗೆ ಸರಿಯಾಗಿ ಬಂದು ತುಂಬಿಕೊಳ್ಳುವ ಮೆಸೇಜುಗಳು ಎಲ್ಲದರಲ್ಲೂ -ಹೊಸವರ್ಷವಂತೆ ಹೊಸ ಬೆಳಗಂತೆ!

ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನ ಎಂದ ಹಿರಿಮನಸು, ಇದು ಬರಿ ಬೆಳಗಲ್ಲೋ ಅಣ್ಣಾ ಅಂತ ಪ್ರತಿ ಬೆಳಗಿಗೂ ಮಣಿಯಿತು.
ಹೊಸತು ಬರಲಿದೆ ಎಂದು ವರ್ಷದ ಯಾವುದೋ ನಿರ್ದಿಷ್ಟ ತೇದಿಯಂದು ಎಲ್ಲ ಸಂಭ್ರಮದಿ ಕಾದಿದ್ದಾರೆ, ಪಟಾಕಿ, ಹಾಡು, ಕುಣಿತ, ನಿಶೆ ಎಲ್ಲದರ ಸಂಗಮದಿ..

ಹಳೆಬೇರು ಹೊಸಚಿಗುರು ಕೂಡಿರಲು ಮರಸೊಬಗೆಂದು ಹಿರಿಮನಸು ದಿನಾ ಬೆಳಿಗ್ಗೆಯೂ ಗುನುಗಿತು ಅಂತಃಪುರಗೀತೆಯಾಗಿ!

ಈ ಎಲ್ಲ ಹಿರಿಚೇತನಗಳ ಬೆಳಕಲ್ಲಿ ಅದ್ದಿ ತೆಗೆದು ಕಣ್ಣರಳಿದೆ ನನ್ನದು. ಅಚ್ಚರಿ ಸಂತಸ!

ದಿನದಿನದ ಚೆಲುವಿನ ಸವಿ
ಹನಿಹನಿಯಾಗಿ ಬನಿ ಇಳಿಯುತ್ತಿದ್ದರೆ
ನಾನಿಲ್ಲಿ ಕಾದಿದ್ದೇನೆ ನಾಲಿಗೆ ಚಾಚಿ,
ಕಂಬನಿಯ ಉಪ್ಪು ಹನಿಯ ಒರೆಸಿಕೊಳ್ಳುತ್ತಾ..
ದಿನದಿನವೂ
ಹೂವಿನಲಿ, ಚಿಗುರಿನಲಿ, ಇಬ್ಬನಿಯಲಿ, ಚೆಂಬಿಸಿಲಲಿ..
ಹಣ್ಣೆಲೆಯಲಿ, ದೋರುಗಾಯಲಿ, ಕಳಿತ ಫಲದಲಿ, ಗಿಳಿಕಚ್ಚಿತಿಂದ ಅರೆಹಣ್ಣಲಿ, ಮುಳ್ಳಲಿ,ಬಿಸಿಲಲಿ,ಕೊರೆವಚಳಿಯಲಿ,
ನೋವಲಿ,ಮನಸು ಮುದುಡಿ ಮುಪ್ಪಾದ ಚಣಗಳಲಿ..
ಒಳಿತೆಂಬುದುದೇ ಕೆಡುಕೆಲ್ಲದಕೆ ವಿನಾಶವ ತರುವ ಉಶೋದಯದ ಚೆಲ್ ಬೆಳಕಿನ ಓಕುಳಿಗೆ...
ಸುತ್ತೆಲ್ಲ ಹೂಬಿರಿದು, ಬೆಳಕು ಹೊಳೆದು, ತಂಪಿನ ಘಮ.
ರಾತ್ರೆಯ ನೋವಿಗೂ ಇಲ್ಲಿದೆ ಬೆಚ್ಚನೆ ಮಡಿಲು,
ಅಳುವ ಮರೆತು ಹೋಗಲು, ಕಣ್ಣೊರೆಸಿ ನಗಲು,
ಬಂದಿದೆ ಹೊಸಹಗಲು..

ಈ ಇಬ್ಬನಿಯ ಹೊಸ ಬೆಳಗುಗಳಿಗೆ ಘಮವೂಡಲು ಕನ್ನಡದ ಕಂಪಾಗಿ,ಇಂಪಾಗಿ ಕೆಂಡಸಂಪಿಗೆಯೊಂದರ ನವಪಲ್ಲವ.
ನಮ್ಮದೇ ದನಿ ಅದರ ರೆಂಬೆರೆಂಬೆಯಲ್ಲೂ ಕುಳಿತ ಕೋಕಿಲದ ಉಲಿಯಲ್ಲಿ.

ನೀವೂ ಆಸ್ವಾದಿಸಿ ಅದರ ಘಮ, ಅದರ ಇಂಪು.
ಆಹ್ಲಾದದ ಕೆಂಡಸಂಪಿಗೆ ನಮಗಾಗಿ...