Tuesday, February 5, 2008

ಮಾಗಿಯ ಬೆಳಗಿನ ಕನಸು..

ಬೆಳಿಗ್ಗೆ ಮುಂಚೆ ಎದ್ದು ಬಚ್ಚಲೊಲೆಯಲ್ಲಿ ಸಂಜೆಯೇ ತುಂಬಿದ್ದ ಕಟ್ಟಿಗೆ ಕುಂಠೆಗಳ ಮೇಲೆ ಒಣ ಅಡಿಕೆ ಸಿಪ್ಪೆ ಸುರುವಿದೆ. ಅಲ್ಲೆ ಹಂಡೆಯ ಬಾಯಿಬದಿಯಲ್ಲಿ ಇಟ್ಟಿದ್ದ ಚಿಮಣಿಬುಡ್ಡಿಯಿಂದ ಸ್ವಲ್ಪ ಎಣ್ಣೆ ಹನಿಸಿ, ತಂದಿಟ್ಟುಕೊಂಡಿದ್ದ ಹಳೆಯ ನೋಟ್ ಪುಸ್ತಕದ ಹಾಳೆಗಳನ್ನ ಚಿಮಣಿ ದೀಪಕ್ಕೆ ಹಿಡಿದು ಒಲೆಯೊಳಗೆ ಇಟ್ಟೆ. ಬೆಂಕಿ ಭಗ್ಗೆಂದಿತು. ಹೊರಗೆ ಚುಮುಚುಮು ಬೆಳಗು, ಇಬ್ಬನಿ. ಸೂರ್ಯ ಇನ್ನೂ ಹಾಸಿಗೆಯಿಂದ ಎದ್ದಿರದ ನಸುಗತ್ತಲಲಿನ ಹಿತ್ತಲಲ್ಲಿ ಬೆಳ್ಳಗೆ ನಗುವ ಪಾರಿಜಾತ ಹೂಗಳಿದ್ದವು. ಹನಿಹನಿಯಾಗಿ ಇಬ್ಬನಿ, ಹೂ ಹೂಗಳಿಂದ ತೊಟ್ಟಿಕ್ಕುತ್ತಿತ್ತು. ಮರದ ಬುಡದ ಹಸಿರುಹುಲ್ಲಲ್ಲೂ ಹೂರಂಗೋಲಿ.. ಕೆಂಪಗೆ ಹೊಳೆಯುವ ತೊಟ್ಟಿನ ತುದಿಗೆ ಬಿಳೀ ಚಿತ್ತಾರದ ಪಕಳೆಗಳು.. ತಣ್ಣಗೊಮ್ಮೆ ಗಾಳಿ ಬೀಸಿದಾಗ ತೇಲಿ ಬರುವ ಸುಗಂಧ. ನೋಡುತ್ತಾ ಹಾಗೇ ಕುಕ್ಕರಗಾಲಲ್ಲಿ ಕುಳಿತೆ. ಒಲೆಯ ಉರಿ ದೊಡ್ಡದಾಗಿ ಸುತ್ತ ಬೆಚ್ಚಗಿತ್ತು. ಹಾಗೇ ಗೋಡೆಗೆ ಆತು ಕೂತು, ಕಾಲುಗಳನ್ನ ಮುಂದಿನ ಬಚ್ಚಲ ಗೋಡೆಗೆ ಒತ್ತಿ ಹಿಡಿದು ಬೆಚ್ಚಗಿನ ಒಳಗಲ್ಲಿ ಹೊರಗಿನ ತಂಪು ನೋಡುತ್ತ ಕುಳಿತೆ. ನೋಡ ನೋಡುತ್ತ ಕೂತ ಹಾಗೆ ಪುಟ್ಟ ಹಕ್ಕಿಯೊಂದು..ಟುವ್ವೀ ಎನ್ನುತ್ತ ಹಾರಿ ಹೋಯಿತು.. ಅಲ್ಲೆ ಬಲಮೂಲೆಯಲ್ಲಿದ್ದ ಮಾವಿನ ಮರದ ಕೊಂಬೆಯಲ್ಲಿ ಕೂತ ಗಿಣಿಗಳು, ಹೂ ಚೆಲ್ಲಿ ನಿಂತ ಮುತ್ತುಗದ ಮರದಲ್ಲಿ ಉಲಿಯುವ ಪಿಕಳಾರಗಳು, ಗುಬ್ಬಚ್ಚಿ ಒಟ್ಟೊಟ್ಟಿಗೆ ತಮ್ಮ ಮಾತುಕತೆ ಶುರು ಮಾಡಿದವು. ಸೂರ್ಯನಿಗೆ ಇನ್ನೂ ಮಲಗಿರಲು ಆಗಲಿಲ್ಲ. ಎದ್ದು ಬೇಗಬೇಗ ಸವರಿಸಿಕೊಂಡು ದಿನದ ಪಯಣಕ್ಕೆ ಪಡುವಲಿನ ಕಡೆ ಹೊರಟ..

ಕಟ್ಟಿಗೆಯನ್ನು ಸ್ವಲ್ಪ ಮುಂದೆ ಮಾಡಿ, ಇನ್ನೊಂದು ಒಬ್ಬೆ ಅಡಿಕೆಸಿಪ್ಪೆ ಸುರುವಿ ಈ ಕಡೆ ತಿರುಗುವಷ್ಟರಲ್ಲಿ ಬಿಸಿಲಕೋಲೊಂದು ಕಿಟಕಿಯ ತಳಿ ಹಾದು ಒಳಗೋಡೆಯ ಮೇಲೆ ಬೆಳಕಿನ ಚಿತ್ತಾರ ಬರೆದಿತ್ತು.. ನೋಡುತ್ತ ಕೂತವಳ ಮುಂದೆ ಬಂದು ಕುಳಿತವರು ಯಾರಿದು.. ಓಹ್,, ಅವರಲ್ಲವೆ.. ಮಾತು ತುಟಿಯಿಂದಿಳಿಯುವ ಮುನ್ನ ಅವರ ಮೆಲ್ನಗೆ ತಡೆಯಿತು. ಕನ್ನಡಕದ ಒಳಗಿಂದ ಹೊಳೆದ ಕಣ್ಣ ಬೆಳಕು ಹೇಳಿತು..ಹೌದು ಇದು ನಾನೇ.. ಅದನ್ನ ಮತ್ತೆ ಮತ್ತೆ ಮಾತಾಡಿ ಒಣಹಾಕಬೇಕಿಲ್ಲ. ಬೆಳಗಿನ ತಂಪು ಮಾತಿಲ್ಲದೆ ಒಳಗಿಳಿಯಲಿ..ಜೀವ ಬೆಚ್ಚಗಿರುತ್ತದೆ..ಎಂದಂತಾಯಿತು..

ಮಾತು ಬರುವುದು ಎಂದು ಮಾತನಾಡುವುದು ಬೇಡ ಅಂದವರಲ್ಲವೆ.. ಸುಮ್ಮನೆ ಕುಳಿತು ನೋಡತೊಡಗಿದೆ. ಮುಂದೇನು...ಕಣ್ಣ ಕಪ್ಪೆಯ ಚಿಪ್ಪಿಗೆ ಕಂಡ ಸಮುದ್ರದಂಥ ನೋಟ..

ಸುಮ್ಮನೆ ಸುಖವಾಗಿರುವ ಸಗ್ಗ ಬೇಸರಾಯಿತು ಬಂದೆ
ಈ ಮಾಗಿ ಬೆಳಗಲ್ಲಿ ಇಬ್ಬನಿಯ ತಂಪು ಕುಡಿಯಲು,
ಹಾಗೇ ಬಂದವನಿಗೆ ತಂಪು ಕೊರೆಯುವಾಗ..ನೋಡಿದೆ
ತೆರೆದ ಬಾಗಿಲು, ಬೆಚ್ಚನೆ ಒಲೆಗೂಡು, ಕೂರಲೆ ಸ್ವಲ್ಪ ಹೊತ್ತು ಇಲ್ಲೆ..?
ಮಾತಿನ ಸಡಗರ ಮತ್ತು ಗೌರವದ ಬಿಂಕ ಬೇಡ..

ನಾನೇನ ಹೇಳಬಹುದಿತ್ತು.. ಯಾವತ್ತೂ ಹಂಬಲಿಸುತ್ತಿದ್ದ ಪ್ರಿಯಜೀವವು ಇಲ್ಲೆ ಪಕ್ಕದಲ್ಲೆ ಇದ್ದಕ್ಕಿದ್ದಂಗೆ ಬಂದು ಕೂರುವ ಕ್ಷಣದಲ್ಲಿ ನನ್ನ ಮಾತುಗಳೆಲ್ಲ, ಬಂದ ದಾರಿಯಲ್ಲೆ ವಾಪಸಾದವು.. ಮುಖದಲ್ಲಿ ಮೆಚ್ಚುಗೆ ಮತ್ತು ಅಚ್ಚರಿಯ ಸೊಂಪು ಹರಡಿತು.. ಅವರ ಸೂಕ್ಷ್ಮಗ್ರಾಹೀ ಕಣ್ಣು ಅದನ್ನ ಸವಿಯಿತು.

ಕೇಳಬೇಕಿದೆ ನನಗೆ ಪದುಮಳೆಲ್ಲಿ? ಶಾರದೆಯ ಬಂಗಾರವಿಲ್ಲದ ಬೆರಳೆಲ್ಲಿ..? ಸೀತೆಯ ತುಂಟನಗುವೆಲ್ಲಿ? ನಿಲ್ದಾಣ ತಿಳಿಯದೆ ಹತ್ತಿದ ರೈಲೆಲ್ಲಿ? ಕೈಮರದ ನೆರಳು ಯಾವ ಕಡೆಗೆ? ಸಂಜೆಹಾಡಿನ ರಾಗವೇನು? ಶರತ್ ಶಾರದೆಯ ದೀಪಗಳ ಸ್ವಿಚ್ಚೆಲ್ಲಿ? ಬದುಕಿನ ಕವಿತೆಯ ಛಂದಸ್ಸೇನು? ತೆರೆದ ಬಾಗಿಲ ಅಗುಳಿ ಕಳಚಿಟ್ಟವರಾರು? ಹೊಳೆಬದಿಯ ಹಕ್ಕಿಗೊರಳಲಿ ಹೇಗೆ ಸೇರಿತು ಹಾಡು? ನೊಂದ ಹೃದಯ ಕಟ್ಟಿದ ಹಾಡ ನುಡಿಸಿದ ವೀಣೆ ಎಲ್ಲಿ? ಮುತ್ತೂರ ತೇರಿನಲಿ ಕಂಡ ಮೀನಾಕ್ಷಿಯ ಬಳೆಯ ಸದ್ದೆಲ್ಲಿ? ತುಂಗಭದ್ರೆಗೀಗ ಎಷ್ಟು ವರುಷ? ನೀವು ಬರುವ ದಾರಿಯ ಬೇಲಿಸಾಲಿನ ಹೂಗಳಿಗೆ ಕೆಂಪು ಬಣ್ಣ ಕೊಟ್ಟವರಾರು, ನಕ್ಕ ಹಾಗೆ ನಟಿಸದೆ ಸುಮ್ಮನೆ ನಕ್ಕುಬಿಡುವುದು ಹೇಗೆ? ತೌರಸುಖದೊಳಗಿನ ವ್ಯಥೆಯ ಕೇಂದ್ರವೆಲ್ಲಿ? ನೀರೊಳಗೆ ವೀಣೆ ಮಿಡಿದಂತೆ ಮಾತನಾಡಬಹುದೆ? ತುಂಬದ ಒಲವನ್ನ ಹಿಡಿದಿಡ ಹೊರಟ ಪಾತ್ರೆಯಾವುದೋ? ಎಂದೋ ಕೇಳಿದ ಹಾಡನು ವೀಣೆಯಲಿ ನುಡಿಸುವುದು ಹೇಗೋ,ಬಯಲ ತುಂಬ ಹಸಿರು ದೀಪ ಹಚ್ಚಿ ಹರಿವ ನದಿಯ ಒರತೆಯೆಲ್ಲಿ? ಈ ಸಲದ ನವಪಲ್ಲವದ ಚೆಂದುಟಿಯಲಿ ಝೇಂಕರಿಸುವುದೆ ಚಿಟ್ಟೆ?ನಮ್ಮ ಅನುಭವ ತೆಳುವೆನ್ನುವವರ ಟೀಕೆಗೆ ಕಹಿಯಿಲ್ಲದೆ ನಗುವುದು ಹೇಗೆ?...
ಇನ್ನೂ ಏನೇನೋ.. ಎಲ್ಲ ಒಂದಾದಮೇಲೊಂದರಂತೆ ಮನಸ್ಸಿನಲ್ಲಿ ಸುಳಿಯುತ್ತಿದ್ದರೆ, ಮುಂದೆ ಕೂತವರ ಕಣ್ಣ ಕಾಂತಿಯು ಮತ್ತಷ್ಟು ಉಜ್ವಲವಾಗುತ್ತಿತ್ತು..

ಮಾಗದ ಗಾಯಗಳ ನೋವನ್ನ ಒಲುಮೆಯ ಇಂಕಲ್ಲದ್ದಿ ಬರೆದೆನಮ್ಮಾ, ಎತ್ತಿ ನೇವರಿಸಿದ ಭಾವುಕ ಹೃದಯಗಳ ಪ್ರೀತಿಯ ಓದು ನೋವನ್ನ ಪರಿಮಳವಾಗಿಸಿ ತೇಲಿಸಿತಷ್ಟೇ.. ನೋಡು ನಿನಗೂ ಕಾಣಬಹುದು ಎಲ್ಲ ಚಿತ್ರಗಳಾಚೆಗಿನ್ನೊಂದು ಚಿತ್ರ..ಎಲ್ಲ ನೋಟಗಳಾಚೆಗಿನ್ನೊಂದು ನೋಟ..
ಬಾಲ್ಯದ ಸವಿ, ಯೌವ್ವನದ ಓದು, ಹಿರಿಯ ಜೀವಗಳ ಕೈಕಂಬ, ತುಂಬು ದಾಂಪತ್ಯದ ನಲಿವು-ಬವಣೆ,ಸುತ್ತಲ ಚೆಲುವು-ನೋವು, ಪ್ರತಿಬಾರಿಯೂ ಹೊಸತಾಗಿ ಬರುವ ಬೇವುಬೆಲ್ಲದ ಯುಗಾದಿ,ಇಕ್ಕೆಲದಲ್ಲಿ ಹೂವರಳಿದ ಹಾದಿಯ ಕಲ್ಲುಮುಳ್ಳು ಪಯಣ, ಸ್ಪರ್ಶಕ್ಕೆ ದಕ್ಕದ ಅದ್ಯಾವುದೋ ಪುಳಕದ ಹಂಬಲ, ಮಾತಿಗೆ ನಿಲುಕದ ಭಾವಸಂವಾದ, ನೋಟಕ್ಕೆ ಮೀರಿದ ವ್ಯಾಪ್ತಿ, ಅರ್ಥಕ್ಕೆ ಹೊರತಾದ ಸನ್ಮತಿ, ಎಲ್ಲ ಚೆಲುವು-ನೋವುಗಳ ಒಳಹೂರಣವಾಗಿ ಎದ್ದು ನಿಂತ ಒಳಿತು, ಭಾಷೆ, ಕಾಲಗಳ ಸೀಮೆಯಾಚೆ ಹೊಳೆವ ದೇಶಾಭಿಮಾನ, ಜನಪದದ ಸಿರಿವಂತಿಕೆ..ಎಲ್ಲವೂ ಸೇರಿ ಅಕ್ಷರಗಳ ಸೊಬಗಲ್ಲಿ ಮಿಂದ ಸಾಲುಗಳನ್ನ ಮಲ್ಲಿಗೆಯ ಮಾಲೆಯಾಗಿ ಮುಡಿದವರು ಓದಿದ ನೀವಲ್ಲವೇ? ನನ್ನದೇನಿದೆ ಬರಿಯ ನೇಯ್ಗೆ.. ಚೆಲುವಿದ್ದರಷ್ಟೆ, ಒಳಿತಿದ್ದರಷ್ಟೆ ಸಾಲದು, ನೋಡಿ ಮೆಚ್ಚುವ ಮನಗಳಿರಬೇಕು... ಮತ್ತೆ ಸುಮ್ಮನೆ ಕೂತು ಬೆಂಕಿಗೆ ಬೆನ್ನೊಡ್ಡಿ, ಕಿಟಕಿಯಾಚೆ ಕಣ್ಣು ನೆಟ್ಟರು.

ಮತ್ತೆ ಮೌನ ಬೇಲಿಸಾಲಿನ ಹೂಗಳಂದದಿ ದೂರದೂರಕೂ ಹಬ್ಬಿತು.. ಬೀಸಿಬಂದ ಕುಳಿರಲ್ಲಿ ಇರುವಂತಿಗೆ ಮತ್ತು ಪಾರಿಜಾತದ ಮಿಶ್ರಕಂಪು.. ಒಲೆಯಲ್ಲಿ ಕೆಂಪಗೆ ಕಾದ ಕೆಂಡವಾಗುತ್ತಿರುವ ಕಟ್ಟಿಗೆಯನ್ನ, ಒಟ್ಟುಗೂಡಿಸಿ ಟಿನ್ನಿನ ತಟ್ಟೆಯಲ್ಲಿ ಸೇರಿಸಿ ಇಕ್ಕಳದಲ್ಲಿ ಹಿಡಿದು ಅಡುಗೆ ಮನೆಗೆ ನಡೆದೆ, ಪಾತು ಯಾವಾಗಲೋ ಕೆಂಪಿ ದನದ ಕರೆದ ನೊರೆಹಾಲು ದಬರಿಯಲ್ಲಿ ತಂದಿಟ್ಟು ಹೋಗಿದ್ದಳು. ಅಡಿಗೆ ಮನೆಯ ಮೂಲೆಯಲ್ಲಿ ಕಾಯುತ್ತ ಕೂತಿದ್ದ ಅಗ್ಗಿಷ್ಟಿಕೆಯ ಬಾಯಿಗೆ ಮುತ್ತುಗದ ಹೂಗಳಂತೆ ಕೆಂಪಗೆ ಹೊಳೆವ ಕೆಂಡಗಳ ಸುರಿದವಳು ಹಾಲಿನ ದಬರಿಯನ್ನು ಮೇಲಿಟ್ಟು ಬಂದೆ. ಹಂಡೆಯಲ್ಲಿ ನೀರು ಕುದಿಯುತ್ತಿತ್ತು..
ಚಳಿಯ ಝುಮುರಿಗೆ ಬಿಸಿನೀರು ಹಿತವೆಂದೆ..
ಒಲೆಯ ಕಾವಿಗಿಂತಲೂ! ಎಂದು ನಗುತ್ತ ಕೇಳಿದರು.. ನಾನು ಮಾತುಗಳನ್ನ ಹಿಂದೆ ದಬ್ಬಿ ಅವರ ನೋಡುತ್ತ ನಗುತ್ತ ನಿಂತೆ..

ಹಾಲು ಕಾಯುತ್ತಲಿದೆ, ಇನ್ನೇನು ಕಾಫಿ ಮಾಡುವೆ ಎನ್ನಲು, ನನಗೆ ಸಕ್ಕರೆಯ ಹಾಕು ಶುಗರಿಲ್ಲ, ಸಕ್ಕರೆ ಬೇಡ ಎನ್ನಲು ಅವಳಿಲ್ಲ.. ಎಂದವರ ಕಣ್ಣಂಚಲಿ ಹೊಳೆದದ್ದು ನಗುವೆ ನೋವೆ.. ಎರಡರ ಎರಕ ಕಂಡಿದ್ದಂತೂ ಸತ್ಯ..ಕೆದರಿದ ಕೂದಲ ಸರಿಮಾಡಬೇಕೆನ್ನಿಸಿತು, ನಡುಮನೆಯ ಕನ್ನಡಿಯ ಹಿಂದೆ ಇದ್ದ ಪುಟ್ಟ ಬಾಚಣಿಗೆ ತಂದರೆ ಮಗುವಿನಂತೆ ತಲೆ ಕೊಟ್ಟು ಕೂತರು. ಅಲ್ಲಿ ಬೈತಲೆಯ ಪಕ್ಕದಲ್ಲಿನ ಎರಡು ನಿಡಿದಾದ ಕೂದಲಲ್ಲಿ ಸಿಕ್ಕಿತ್ತು. ಮೆಲ್ಲ ಬಾಚಿ, ಹಣೆಯ ಮೇಲೆ ಬಾಗಿದ ಬಿಳಿಕುರುಳ ತೀಡಿದೆ. ಕಪ್ಪೆಯ ಚಿಪ್ಪಿನಗಲದ ಕಣ್ಣ ದೋಣಿಗೆ ಆಶ್ರಯ ಕೊಟ್ಟ ಹಣೆಯ ಲಂಗರಿನಲ್ಲಿ ಹಿಡಿದೆಳೆದು ನಿಲ್ಲಿಸಿದ ಕುರುಳುಗಳು ಅವರೇ ಹಿಂದೆಂದೋ ಬರೆದಿದ್ದ ಬಿಳಿಯ ಬೆಂಡೋಲೆಗಳಂತೆ ನಗುತ್ತಿದ್ದರೆ, ಅವರ ಸಾಲು ಸಾಲು ಚೆಲುಬರಹಗಳ ದೋಣಿಗಳು ಭಾವಸಮುದ್ರದ ನೀರಿಗಿಳಿಯತೊಡಗಿದವು..

ತೀಡಿದ್ದಾಯಿತೆ? ಹಾಲು ಉಕ್ಕಿದ ವಾಸನೆ ಎಂದವರನ್ನಲು, ಅಡಿಗೆ ಮನೆಗೆ ಓಡಿದೆ. ನೊರೆನೊರೆಯಾದ ಹಾಲು ಮಣ್ಣಿನ ಅಗ್ಗಿಷ್ಟಿಕೆಯ ಮೇಲೆಲ್ಲ ಬಿಳಿಚಿತ್ತಾರ.. ಪಕ್ಕದಲ್ಲೆ ಕೂತು ಗುರುಗುಟ್ಟುವ ಜಾಣೆ ಬಿಲ್ಲಿ.. ಪುಟ್ಟ ಪಾತ್ರೆಯಲ್ಲಿ ಹಾಲಿಗೆ ಡಿಕಾಕ್ಷನ್ ಬೆರೆಸಿ ಹದವಾಗಿ ಸಕ್ಕರೆ ಹಾಕಿ, ಮತ್ತೆರಡು ನಿಮಿಷ ಒಲೆಯ ಮೇಲಿಟ್ಟು ಎರಡು ಲೋಟಕ್ಕೆ ಬಗ್ಗಿಸಿ ಹೊರಬಂದೆ...

ಇಬ್ಬನಿ ಕರಗಿತ್ತು, ಬಿಸಿಲು ಬೆಳೆದಿತ್ತು.. ಬಿಸಿಲ ಕೋಲಿನ ಬೆಳಕು ಮರೆಯಾಗಿತ್ತು.. ಹಿಂದಿನ ನಿಲ್ದಾಣದಲ್ಲಿ ಇಳಿದವರ ಹೆಸರು ಕೇಳದವರು, ನಮ್ಮ ಕೊಡೆಯ ನೆರಳು ಅವರ ದಾರಿಗೆ ಬೀಳದ್ದಕ್ಕೆ ಕೈಮುಗಿದವರು..ಸಮಾನಾಂತರ ರೇಖೆಗಳಲ್ಲಿ ಸಾಗುವ ನಮ್ಮ ಬದುಕಿನ ಪಯಣವನ್ನ ಅಕ್ಷರಕ್ಕಿಳಿಸಿದವರು, ಹೊರಟುಹೋಗಿದ್ದರು. ಸುತ್ತೆಲ್ಲ ಚಂದನವ ತೇಯ್ದ ಇಹದ ಪರಿಮಳ. ಹಿತವಾದ ಬಿಸಿಲಿನಲ್ಲಿ ಕೆಂಪಿದನದ ಎಳೆಗರು ಚೆಲುವಿ ಅಂಗಳಕ್ಕಿಳಿದಿದ್ದಳು. ಕಣ್ಣು ತುಂಬಿ ಕಾಫಿಗುದುರುವುದರಲ್ಲಿತ್ತು..

ಕಾಫಿಯ ಚೆಲ್ಲುವರೇನಮ್ಮ.. ಹೋಗು ದಿನದ ಕೆಲಸಗಳು ಸಾಕಷ್ಟಿವೆ...ಅಂತ ಕಿಟಕಿಯಾಚೆ ಅವರು ನುಡಿದಂತಾಯಿತು.. ನಾಳೆ ಬರುವೆನು ಎಂಬ ಸೂಚನೆಯೇ ಅಂದುಕೊಳ್ಳುತ್ತಾ ಮನಸು ಹಗುರಾಗಿ ಒಲೆಯ ಬಳಿಯೇ ಬಿದ್ದಿದ್ದ ಬಾಚಣಿಗೆಯನ್ನೆತ್ತಿಕೊಂಡೆ ಎರಡು ಬಿಳಿಕೂದಲುಗಳಿದ್ದವು.

ಒಳಗಿನಿಂದ ನನ್ನವರು .. ಬಾರೆ ನನ್ನ ಶಾರದೆ..ಎಂದನ್ನಲು ಬಾಚಣಿಗೆಯನ್ನ ಮಡಿಲ ನಿರಿಗೆಗೆ ಸಿಕ್ಕಿಸಿಕೊಂಡು ಕಾಫಿಲೋಟಗಳನ್ನು ಹಿಡಿದು ಒಳಗೋಡಿದೆ..

13 comments:

Sushrutha Dodderi said...

ಎಲ್ಲ ಚಿತ್ರಗಳಾಚೆ ಇನ್ನೂ ಒಂದು ಚಿತ್ರವಿದೆ ಎಂದ ಅವರ ನೆನಪು ಮತ್ತೆ ಮತ್ತೆ .. ಮತ್ತೆ ಮತ್ತೆ.. ..

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧು...
ಬೆಳಗಿನ ಬಚ್ಚಲೊಲೆಯ ಬೆಚ್ಚನೆಯ ಗಳಿಗೆಯ ಜೊತೆ-ಜೊತೆಯಲಿ ಮಲ್ಲಿಗೆಯ ಕಂಪು ಆವರಿಸಿ ನಗು ಸೂಸಿತು.

Anonymous said...

ಚೆಂದ ಬರೆಯುತ್ತೀರಿ...

ರಾಜೇಶ್ ನಾಯ್ಕ said...

ಮೊದಲನೇ ಪ್ಯಾರಾದಲ್ಲಿ ಕಟ್ಟಿಕೊಟ್ಟಿರುವ ಚಿತ್ರಣ ಸುಂದರ. ಮೆಚ್ಚದೇ ಇರಲಾಗಲಿಲ್ಲ.

Shashi Dodderi said...

ಇದಕ್ಕೆ ಸ್ವಲ್ಪ ಅಡಿಕೆ ಸಿಪ್ಪೆಹೊಗೆ ವಾಸನೆ,ಸೊರ ಸೊರ ಕಾಪಿ ಹೀರುವುದು ಸೇರಿಸಿದ್ದರೆ- ಇನ್ನೂ ಸ್ವಲ್ಪ ಮಜ ಬರತಿತ್ತು, ಆದರೂ ಬರಹ ಚೆನ್ನಾಗಿದೆ!!!!!!!!!ಈ ಎಲ್ಲಾ ಹಿಮ್ಮೇಳಕ್ಕೆ ಹೊಸ ರೂಪ, ಭಾವ ಬ೦ದಿರುವುದು , ಆ
"ಪಕ್ಕ ಇದ್ದವರಿ೦ದ"!!!

ಹರೀಶ್ ಕೇರ said...

Touchy. Avaru nanagoo ishta. matthe matthe odide.
- Harish kera

Tejaswi said...

ಹಾಯ್ ಅಕ್ಕಾ ..
ನಂಗೆ ನಿಮ್ಮಿಂದ ಸ್ವಲ್ಪ ಹೆಲ್ಪ್ ಆಗಬೇಕಿತ್ತು....
ನೀವು ನಮಗೆ ಕೆಲವು ಕವಿತೆಗಳನ್ನ ಬರೆದು ಕೊಡ್ತೀರಾ..?
ಕನ್ನಡದಲ್ಲಿ ಒಂದ್ viedo ಆಲ್ಬಂ ಮಾಡ್ತಿದಿವಿ..
ಅದರಬಗ್ಗೆ ನಿಮ್ಮಹತ್ರ ಮಾತಾಡ್ಬೇಕು.. ನಂಗೆ ನಿಮ್ಮ ಈಮೇಲ್ id ಗೊತ್ತಿಲ್ಲ .
ನನ್ನ id tejaswim99@ಜಿಮೇಲ್.com ,
ಓದಿದ ತಕ್ಷಣ ರಿಪ್ಲೈ ಮಾಡ್ತೀರ ಅನ್ಕೊಂಡಿದಿನಿ...ಪ್ಲೀಸ್...

Anonymous said...

lovely sindhu, i really enjoyed your writing

Shiv said...

ಸಿಂಧು,

ಮಲ್ಲಿಗೆ ಪೋಣಿಸಿ ಹಾರ ಮಾಡಿದಂತೆ ಇತ್ತು ನಿಮ್ಮ ಬರಹ..
ಅದ್ಭುತ...ಮಲ್ಲಿಗೆಯ ಕವಿಯ ನೆನಪು ಎಂದಿಗೂ ಮಧುರ

Anonymous said...

ಮರಳಿ ಬ್ಲಾಗ್ ಗೆ ಬಂದಿದ್ದೇನೆ. ಅಭಿಪ್ರಾಯ ತಿಳಿಸಿ

Anonymous said...

ಮರಳಿ ಬ್ಲಾಗ್ ಗೆ ಬಂದಿದ್ದೇನೆ. ಅಭಿಪ್ರಾಯ ತಿಳಿಸಿ

ಸಿಂಧು sindhu said...

ಸು,
ಮತ್ತೆ ಮತ್ತೆ ..ಒತ್ತೊತ್ತಾಗಿ..

ಶಾಂತಲಾ..
ಅದಕೇ ಹೆಸರು - ಮಲ್ಲಿಗೆ..!

ನೈಟಿಂಗೇಲ್,
ನಿಮ್ಮ ಅಪ್ಯಾಯಮಾನವಾದ ಕವಿತೆಯಷ್ಟೇನಲ್ಲ.

ರಾಜೇಶ್,
ಅದು ದಿನದಿನವೂ ಹೊಸದಾಗಿ ಮೂಡುತ್ತಲೇ ಇರುವ ಚಿತ್ರ..

ನಾಸ್ತಾಲ್ಜಿಯಾ ಶಶೀ..
ಹೌದು..ಕಾಫಿ ಹೀರುವಾಗ ಅವರಿದ್ದಿದ್ದರೆ ಎಂಬ ಕಲ್ಪನೆಯೇ ಎಲ್ಲೋ ತೇಲಿಸುತ್ತದೆ. ಆ ಎಲ್ಲ ಹಿಮ್ಮೇಳ,ಮಾತು,ಕತೆಯಾಟ ಎಲ್ಲ ಅವರಿಗಾಗೇ, ಅವರಿಂದಾಗೇ! ನನ್ನದು ಕೀಲಿಮಣೆಯ ಕೆಲಸವಷ್ಟೇ.

ಹರೀಶ್,
ಅವರೇ ಹಾಗೆ!

ಶಿವ್,
ತುಂಬ ದಿನಗಳ ನಂತರ!
ಅವರು ಯಾವಾಗಲೂ ನನ್ನ ನೆನಪುಗಳಲ್ಲಿ..

ಅನಾಮಿಕ..
ಖುಷಿಯಾಯ್ತು.

ರಾಧಾಕೃಷ್ಣ,
ಓದಿದೆ. ಆದಷ್ಟು ಬೇಗ ಸ್ಪಂದಿಸುತ್ತೇನೆ.

ನನ್ನ ಮನಸ್ಸಿನ ತುಂಬ ಬೆಳಗಿನ ಎಳೆಬಿಸಿಲನ್ನು ಹರಡಿದ ನೆನಪು ಅದು. ನಿಮಗೂ ಅಂತಹದೇ ಅನುಭವ ಆಗಿರಬಹುದೆಂದು ಆಶಿಸುತ್ತೇನೆ. ಓದಿದ ಮತ್ತು ಸ್ಪಂದಿಸಿದ ಎಲ್ಲರಿಗೂ ವಂದನೆಗಳು.

ಪ್ರೀತಿಯಿಂದ
ಸಿಂಧು

Anonymous said...

ನೆನಪುಗಳ ಸುರಿಮಳೆಯನ್ನ, ಬಾಲ್ಯವನ್ನ, ಒಡಮೂಡುತ್ತಿರುವ ಚಿತ್ರಗಳನ್ನ ಭಾಷೆಯಲ್ಲಿ ಹಿಡಿದಿಡುತ್ತಾ.. ಮಧುರ ಭಾವನೆಗಳಿಗೆ ದನಿಯಾದ ಸಿಂಧುರವರಿಗೆ ಧನ್ಯವಾದಗಳು. ನಿಮ್ಮ ಶೈಲಿ ತುಂಬಾ ಆಪ್ತವೆನಿಸುತ್ತದೆ. ಮನದ ಒಳದನಿಯ ಮಾರ್ದನಿಸುವ ವಿಹಂಗಮ ಗೀತೆ ನಿಮ್ಮ ಶೈಲಿಯಲ್ಲಿ ಗೋಚರಿಸುತ್ತದೆ.