Tuesday, January 22, 2008

ಬದುಕಿಗಿಂತ ಕನಸು ಲೇಸು..

ಅವನು ಬರದೆ ಕಣ್ಣೇ ತೆರೆಯಬಾರದು ಅಂತ ಗಟ್ಟಿಯಾಗಿ ಕಣ್ಮುಚ್ಚಿಕೊಂಡು ಕೂತಿದ್ದೆ. ಬೀಸಿ ಬಂದ ತಂಗಾಳಿ ಬಯಲಿನಲ್ಲಿದ್ದ ಹೂಗಳ ಪರಿಮಳವನ್ನೆರಚಿತು. ಆ ಕಡೆ ನೋಡಿದೆ. ಜನರ ಗಡಿಬಿಡಿ, ಓಡಾಟ ನೋಡಿ ಬೋರು ಹೊಡೆಸಿಕೊಂಡಿದ್ದ 'ದಿನ' ಆದಷ್ಟು ಬೇಗ 'ನಿಶೆ' ಯ ತೆಕ್ಕೆ ಸೇರುವ ಆತುರದಲ್ಲಿ ಸಂಜೆಯ ಹೊಸಿಲೆಡವಿ ಹಣೆಯೊಡೆದುಕೊಂಡಿತ್ತು. ಪಥಿಕರು ‍ಯಾರೂ ಇರದಿದ್ದ ಹಾದಿಯೊಂದರ ಯಾವ ತಿರುವಿನಲ್ಲೂ ಅವನ ಸುಳಿವಿರಲಿಲ್ಲ. ಶೀತಗಾಳಿಗೆ ಮೈ ಬಿಟ್ಟು ಕೂತಿದ್ದೀಯಲ್ಲಾ ಅಂತ ನನ್ನ ಗದರಿದ ರಾತ್ರಿ ಮಬ್ಬುಗತ್ತಲಿನ ಶಾಲು ಹೊದೆಸಿತು. ಅವನ ಕಣ್ಣೋಟದ ಪ್ರತಿಫಲನವೋ ಎಂಬಂತೆ ಥಳಕ್ಕೆಂದವು ನಕ್ಷತ್ರಗಳು. ಇನ್ನು ಬರಲಾರ ಅವನು, ಅನ್ನಿಸಿದ್ದೇ ತಡ ಸುತ್ತಲಿನ ಕತ್ತಲಿನ ಅರಿವಾಯಿತು. ಸೋತ ಕಾಲಿನಲ್ಲಿ ಏಳಲಾರದೆ ಎದ್ದೆ.

ಏನೇನೋ ಹೇಳಿ ಬೋರ್ ಹೊಡೆಸ್ತಿದ್ದೀನಾ ನಾನು? ಆದ್ರೆ ಪ್ಲೀಸ್ ಸ್ವಲ್ಪ ನನ್ನನ್ನ ಅರ್ಥ ಮಾಡಿಕೊಳ್ಳಿ.ನನ್ನ ತಳಮಳವನ್ನ ನಾನು ಯಾರಿಗೂ ಹೇಳಿಕೊಳ್ಳಲಾರೆ. ನನಗೊಬ್ಬಳಿಗೇ ಇದನ್ನೆಲ್ಲ ಸಹಿಸಲು ಆಗುತ್ತಲೇ ಇಲ್ಲ. ನೀವಾದ್ರೆ... ನಿಮಗೆ ನನ್ನ ಗೊತ್ತಿಲ್ಲ. ನಂಗೂ ನಿಮ್ಮುನ್ನ ಗೊತ್ತಿಲ್ಲ. ಅದಿಷ್ಟೇ ಅಲ್ಲ. ನೀವು ಇದನ್ನೆಲ್ಲಾ ಓದಿದ ಮೇಲೆ ಏನಂತ ಸ್ಪಂದಿಸುತ್ತೀರೆಂದು ನಂಗೆ ಗೊತ್ತಾಗೋಲ್ಲ. ಕತ್ತಲ ರಾತ್ರಿಯಲ್ಲಿ ಮನೆಯವರು ‍ಯಾರಿಗೂ ಎಚ್ಚರವಾಗದ ಹಾಗೆ ಎದ್ದು ಕಿಟಕಿಗೆ ಆತು ಕಣ್ಣೀರಿಡುವಾಗ ಆ ಹನಿಗಳನ್ನು ಬೀದಿದೀಪ ಪ್ರತಿಫಲಿಸುತ್ತಲ್ಲಾ ಹಾಗೆ ಇದು. ಆ ಹನಿಗಳಂತೆ ಈ ಪದಗಳನ್ನ ಹರಿಯಬಿಟ್ಟಿದ್ದೇನೆ.
ನನ್ನ-ನಿಮ್ಮೆಲ್ಲರ ದೈನಂದಿನ ವ್ಯವಹಾರೀ ವಾಸ್ತವಿಕತೆಯ ಬಿಸಿಗೆ ಬಾಡಿ ಬಸವಳಿದಿರುವ ಭಾವುಕತೆಯನ್ನು ಈ ಹನಿಗಳು ಸ್ಪರ್ಶಿಸಿದರೆ ಸಾಕು ನನಗೆ. ಅಲ್ಲೆ ಇಂಗಿ ಹೋಗಲವು. ನಾನು ಇಲ್ಲಿ ಕರಗುತ್ತೇನೆ. ಈಗ ಕೇಳುತ್ತೀರಲ್ವಾ..?

ಅವನು ನನಗೆ 'ಅವನಾ'ಗಿರಲಿಲ್ಲ. ನಾನೇ ಆಗಿದ್ದ. ಅವನು ನನ್ನ ಗೆಳೆಯನಷ್ಟೇ ಇರಲಿಲ್ಲ. ಅವನು ನನ್ನ ಅಮ್ಮನಾಗಿದ್ದ. ಅವನ ಕಣ್ಣೋಟದಿಂದ ನಾನು ಬಿಸಿಯಾಗುತ್ತಿರಲಿಲ್ಲ, ಅರಳುತ್ತಿದ್ದೆ. ಅವನು ನನ್ನ ಸ್ಪರ್ಶದಲ್ಲಿ ಕರಗುತ್ತಿರಲಿಲ್ಲ ಪಲ್ಲವಿಸುತ್ತಿದ್ದ. ಮಾತು, ನೋಟ, ಸ್ಪರ್ಶಗಳು ಕಂಗಾಲಾಗಿ ನಿಂತ ನಂತರದ ಮೌನಶ್ರೇಣಿಯ ಚಾರಣ ಪಯಣ ನಮ್ಮದಿತ್ತು. ಅಲ್ಲಿ ಗದ್ದಲವಿರಲಿಲ್ಲ, ನಿರ್ವಾತ ಮೊದಲೇ ಇಲ್ಲ. ಪ್ರಕೃತಿಯ ಚೆಲುವು ಬಗೆಬಗೆಯ ರೂಪಿನಲ್ಲಿ ಮೈದಳೆದ ಆ ಹಾದಿಯಲ್ಲಿ, ನಾನು ಹೊರಟಾಗ ಒಬ್ಬಳೇ ಇದ್ದೆ. ಅವನು ಅಲ್ಲೆ ತಿರುವಿನಲ್ಲಿದ್ದ ಪುಟ್ಟ ಝರಿಗೆ ಮೈಯೊಡ್ಡಿ ನಿಂತು ಸುತ್ತಲ ಜಗದ ಪರಿವೆಯಿಲ್ಲದೆ ಗುನುಗುತ್ತಿದ್ದ.

ಮೈ ತನ್ ಹಾ ಥಾ.. ಮೈ ತನ್ ಹಾ ಹೂಂ
ತುಮ್ ಆವೋ ತೋ ಕ್ಯಾ, ನಾ ಆವೋ ತೋ ಕ್ಯಾ...!
ನೀನು ಬಂದರೇನು ಗೆಳತೀ ಬರದಿದ್ದರೇನು ಅಂತ ವಿಷಾದವೂ ಮುದ್ದು ಸುರಿಸುವ ಹಾಗಿನ ಗುಲಾಮ್ ಅಲಿಯವರ ಗಝಲ್ ಸಾಲುಗಳವು.

ನಾನಲ್ಲಿ ಅರೆಘಳಿಗೆ ನಿಂತು ಮುಂದಡಿಯಿಟ್ಟೆ. ಮುಂದಿನೊಂದು ತಿರುವಿನಲ್ಲಿ ಎಷ್ಟೇ ತಡೆದರೂ ಕಣ್ಣಿನಿಂದ ಚಿಮ್ಮಿದ ಒರತೆಯನ್ನು ಅಳಿಸಲು ಕೈಯೆತ್ತಿದೆ. ತಡೆದ ಅವನು ಕರ್ಚೀಫು ಕೈಗಿಟ್ಟ. ಮಾತುಗಳು ಮೌನಕೋಟೆಯ ಸುತ್ತ ಗಸ್ತು ತಿರುಗಿ ಸುಸ್ತೆದ್ದು ಹೋಗಿ ತೆಪ್ಪಗಾದವು. ಆವತ್ತು ರಾತ್ರಿಯ ಪಯಣಕ್ಕೊಂದು ವಿರಾಮವಿತ್ತು ನೆಲಕ್ಕೊರಗಿದೆವು. ಆಕಾಶ ಚಾವಣಿಯ ಡೇರೆಗೆ ಚಂದಿರ ತಾರೆಗಳ ಶಾಂಡೆಲಿಯರ್ ಝಗ್ಗೆಂದಿತ್ತು. ನಡೆದ ಆಯಾಸವನ್ನೇ ಮರೆಸುವ ಗಾನದಿಂಪಿನ ಊಟವಿಟ್ಟಿದ್ದ ಅವನು ನನಗೆ. ಅವನ ದಣಿದ ಕಂಗಳಿಗೆ ನಾನು ತುಟಿಯೊತ್ತಿದೆ. ಈ ಅಪರಿಚಿತ ನನ್ನ ಪಯಣದ ಹಾದಿಯಲ್ಲಿ ಜೊತೆ ಜೊತೆಗೇ ಹೆಜ್ಜೆ ಹಾಕಿ ನನಗರಿವಿಲ್ಲದೆ ನನ್ನೊಳಮನೆಗೆ ನಡೆದುಹೋಗಿಬಿಟ್ಟಿದ್ದ. ಹೊರತರುವ ಬಗೆಯೆಂತೋ ಗೊತ್ತಿಲ್ಲ. ಹೊರತರಲು ನಂಗೆ ಇಷ್ಟವೂ ಇಲ್ಲ.

ಹೆಜ್ಜೆ ಮೂಡಿರದ ಬಯಲಲ್ಲಿ ನಾವು ಹೆಜ್ಜೆ ಇಟ್ಟೆವು. ಅವನು ಹೆಜ್ಜೆಯಿಟ್ಟಲ್ಲಿ ನಾನೊಂದು ಕವನ ಮೂಡಿಸುತ್ತಿದ್ದೆ. ನಾನು ಹೆಜ್ಜೆಯಿಟ್ಟಲ್ಲಿ ಅವನೊಂದು ಹಾಡು ಗುನುಗುತ್ತಿದ್ದ. ನಮ್ಮಿಬ್ಬರ ಹೆಜ್ಜೆಗೆ ಜೊತೆಯಾಗಿ ಹೆಸರು ಗೊತ್ತಿಲ್ಲದ ಕಾಡು ಹೊಕ್ಕಿಯೊಂದು ಉಲಿಯುತ್ತಿತ್ತು. ಸುತ್ತ ಚೆಲುವಾಗಿ ತುಂಬಿ ನಿಂತ ಅಮ್ಮ ನಮ್ಮನ್ನು ನೋಡಿ ಮೆಲು ನಗುತ್ತಿದ್ದಳು. ತಂಗಾಳಿ ಬೀಸುತ್ತಿದ್ದಳು. ಕಂಪು ಸೂಸುತ್ತಿದ್ದಳು.

ಇಷ್ಟು ವರ್ಷ ಒಬ್ಬಂಟಿತನದ ಬಂದರಿನಲ್ಲಿ ಲಂಗರು ಹಾಕಿದ ನನ್ನ ಬದುಕಿನ ನಾವೆಗೆ ಚೈತನ್ಯದ ಪುಶ್ ಸಿಕ್ಕಿತ್ತು. ನಾನು ಜೀವನ್ಮುಖತೆಯಲ್ಲಿ ತೇಲಬಯಸಿದೆ. ಬಂದರಿನವರಿಗೆ ಕಸಿವಿಸಿಯಾಗತೊಡಗಿತು. ಹಾಕಿದ್ದ ಮೂರುಗಂಟಿನ ಮೇಲೆ ಇನ್ನೆರಡು ಸುತ್ತು ಹಗ್ಗ ಬಿಗಿದರು. ನಾನೇನು ತುಂಬ ಕೂಡಿ ಕಾಪಿಟ್ಟುಕೊಳ್ಳಬೇಕಾದ ಬೇಕೇ ಬೇಕಿರುವ ನಾವೆಯಲ್ಲ. ಹಾಗಂತ ಬಿಟ್ಟು ಬಿಡಲು ಸೋಶಿಯಲ್ ಸ್ಟೇಟಸ್ ಒಪ್ಪಬೇಕಲ್ಲ. ತಾವೇ ನಾವೆಯ ಹಗ್ಗ ಕಡಿದು ಹರಿಯಬಿಟ್ಟರೆ ದೊಡ್ಡಸ್ತಿಕೆ ಉಳೀತದೆ, ಅದು ಬಿಟ್ಟು ನಾವೆ ತಾನಾಗೆ ಬಂದರಿನಿಂದ ಸರಿದು ಹೋಯಿತೆಂದರೆ...! ಇದ್ದ ಡಿಗ್ನಿಟಿಯೆಲ್ಲ ನೀರುಪಾಲಾದ ಹಾಗೆ ಅಂತ ಬಂದರಿನವರ ಅಭಿಪ್ರಾಯ.
ಇದೆಲ್ಲ ನಿಜವಾದರೂ ನಾನು ಬರಿಯ ನಾವೆಯಷ್ಟೇ ಅಲ್ಲವಲ್ಲ. ಸೋಷಿಯಲ್ ಸ್ಟೇಟಸ್ ಇರೋದು ಬೇರೆಯವ್ರನ್ನ ಖುಷಿ ಪಡಿಸಲೇ ಹೊರತು ನನ್ನ ಮನದಳಲನ್ನ ಸಂತೈಸಲು ಅಲ್ಲವಲ್ಲ....
ಮಲ್ಲಿಗೆ ಕವಿ ಹೀಗೊಂದು ಹೂನೇಯ್ಗೆ ನೇಯ್ದರು..

ಕೈ ಮುಗಿವೆನು ಬಿಸಿಹಾಲಿನ ಬಟ್ಟಲಂತ ಪ್ರೀತಿಗೆ,
ಬದುಕಿಗಿಂತ ಕನಸು ಲೇಸು ಎಂಬ ನಿನ್ನ
ರೀತಿಗೆ...
ಈ ವ್ಯವಹಾರಿಕ ಜಗತ್ತಿನ ಮುಖವಾಡಗಳ ಹಿಂದೆ ನನ್ನನ್ನ ಹುದುಗಿಸಿಟ್ಟುಕೊಂಡು ತುಂಬ ದಿನಗಳ ಕಾಲ ಮುರುಟಿಕೊಂಡು ಬದುಕಿ ಕೊನೆಗೊಂದು ದಿನ ಕೊರಡಾಗುವುದು ನಂಗಾಗೋಲ್ಲ. ಸ್ವಲ್ಪ ದಿನವೇ ಆದ್ರೂ ಸರಿ ಭಾವುಕ ಕನಸುಗಳಲ್ಲಿ ಕರಗಿ ಹೋಗೋದೇ ಒಳ್ಳೇದು ಅನ್ನಿಸಿಬಿಟ್ಟಿದೆ.

ನೀವು ಇದನ್ನು ಓದುವ ಹೊತ್ತಿಗಾಗಲೇ ನಾನು ನನ್ನ ಕನಸಿನ ಲೋಕದ, ಗಿರಿಶ್ರೇಣಿಗಳ ತಪ್ಪಲಲ್ಲಿ ಇರ್ತೀನಿ. ದರಿಯ ಅಂಚಿನಲ್ಲಿ, ಬೀಳುವಂತೆ ಕಂಡೂ ಬೀಳದ ಕಲ್ಲಿನ ಮೇಲೆ ಕೂತಿರ್ತೀನಿ, ನನ್ನ ನೋಡಿ ಬೆಚ್ಚಗೆ ಕೆಂಪು ಕೆಂಪಾಗಿ ಭೂಮಿಯ ಬೆನ್ನಲ್ಲಿ ಅಡಗುವ ಸೂರ್ಯನ್ನ ನೋಡುತ್ತಾ.. ಹೌದು ನೆನ್ನೆ ತಾನೇ ಬಂದರಿನವರ ವ್ಯವಹಾರ ಮುಗಿಯಿತು. ವಿಚ್ಛೇದನದ ಬಿಡುಗಡೆ.
ನೀವು ನಂಗೊಂದು ಸಹಾಯ ಮಾಡ್ತೀರಾ?ಅವನ್ಯಾಕೋ ಇವತ್ತು ಬಂದಿಲ್ಲ, ನಾನು ಇವತ್ತೇ ಹೊರಡಬೇಕು. ಇಲ್ಲೊಂದು ಪುಟ್ಟ ನೋಟ್ ಇದೆ, ಇದನ್ನ ಅವನಿಗೆ ತಲುಪಿಸುತ್ತೀರಾ? ಲೈಬ್ರರಿಯ ನೋಟಿಸ್ ಬೋರ್ಡಿನಲ್ಲಿ ಹಾಕಿದರೆ ಸಾಕು ಅವನಿಗೆ ಸಿಕ್ಕೇ ಸಿಗುತ್ತೆ.

ಜನನಿಬಿಡ ನಗರಗಳಿಂದ ದೂರಕ್ಕೆ,
ನೀಲಿಯಂಚಿನ ಹಸಿರು ಹೊದ್ದ-
ನಿಸರ್ಗದ ಒಡಲೊಳಕ್ಕೆ,
ಮೌನರಾಗದ ಗಾನದಿಂಪಿಗೆ,
ನಾ-ನೀ ಮರೆತು ಹೋಗಿ
'ನಾವಾ'ಗುವ ಆಕಾಶಚಾವಣಿಯ
ಹುಲ್ಲುಹಾಸಿನರಮನೆಗೆ,
ತೆರಳುತ್ತಿದ್ದೇನೆ ಗೆಳೆಯಾ.

ಬರುವ ದಾರಿ ಸುಲಭದ್ದು,
ನಿನಗೇ ಗೊತ್ತುಂಟಲ್ಲ,
ಗೋಡೆಗಳಿಲ್ಲ, ತೆರೆದ ಬಾಗಿಲು,
ಕರೆಗಂಟೆ ಒತ್ತಬೇಕಿಲ್ಲ.
-ಕನಸುಗಾತಿ

4 comments:

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧು...

ಚೆನ್ನಾಗಿದೆ ನಾವೆ ಹಗ್ಗವ ಕಳೆಚಿಕೊಂಡ ರೀತಿ. ಇನಿಯನಿಗೆ ಆಹ್ವಾನ ನೀಡಿದ ಪ್ರೀತಿ. ಎಲ್ಲವೂ ಸಕತ್.

Manu said...

ಸಿಂಧು,
ತುಂಬಾ ಚೆನ್ನಾಗಿದೆ...
"ಆಕಾಶ ಚಾವಣಿಯ ಡೇರೆಗೆ ಚಂದಿರ ತಾರೆಗಳ ಶಾಂಡೆಲಿಯರ್ ಝಗ್ಗೆಂದಿತ್ತು!!" ಸಾಲು ನನಗೆ ತುಂಬಾ ಇಷ್ಟವಾಯಿತು

ಶ್ರೀನಿಧಿ.ಡಿ.ಎಸ್ said...

ಕತ್ತಲ ರಾತ್ರಿಯಲ್ಲಿ ಮನೆಯವರು ‍ಯಾರಿಗೂ ಎಚ್ಚರವಾಗದ ಹಾಗೆ ಎದ್ದು ಕಿಟಕಿಗೆ ಆತು ಕಣ್ಣೀರಿಡುವಾಗ ಆ ಹನಿಗಳನ್ನು ಬೀದಿದೀಪ ಪ್ರತಿಫಲಿಸುತ್ತಲ್ಲಾ ಹಾಗೆ ಇದು. - super akka, koneya kavananu mast iddu, nee maadida saarinante:)

ಸ್ವಗತ.... said...

ಈ ವ್ಯವಹಾರಿಕ ಜಗತ್ತಿನ ಮುಖವಾಡಗಳ ಹಿಂದೆ ನನ್ನನ್ನ ಹುದುಗಿಸಿಟ್ಟುಕೊಂಡು ತುಂಬ ದಿನಗಳ ಕಾಲ ಮುರುಟಿಕೊಂಡು ಬದುಕಿ ಕೊನೆಗೊಂದು ದಿನ ಕೊರಡಾಗುವುದು ನಂಗಾಗೋಲ್ಲ - - wow! ಅಬ್ಬ...ನೀವು ಈ ಒಂದು ಸಾಲಿನಲ್ಲಿ ಹೇಳಿದ ಅರ್ಥವನ್ನ ಹೀಗೆ ಒಂದೇ ಸಾಲಿನಲ್ಲಿ ಹೇಳಬಹುದು ಅಂತ ನಾನ್ ಅಂದ್ಕೊಂಡಿರಲಿಲ್ಲ. ಪದಗಳನ್ನ ಬಹಳ ಚೆನ್ನಾಗಿ ಹೆಣೆದಿದ್ದಿರಾ.