Thursday, January 30, 2014

ಹೀಗೇ ಒಂದೆರಡು...ಮಾತು.

ಕುಡಿದು ಕುಪ್ಪಳಿಸಿ
ಲೇಟಾಗೆದ್ದು ಸ್ವಾಗತಿಸಿದ ಹೊಸವರ್ಷದ
ಮೊದಲಲ್ಲೆ
ವೈಕುಂಠ ಏಕಾದಶಿ.
ಸಾವಿನ ಹೊಸ್ತಿಲಿನಾಚೆ ಒಂದು ಸೀಟು
ಕಾದಿರಿಸಿಕೊಂಡೇ
ಸಂಭ್ರಮಿಸಿಬಿಡೋಣ.
ಎಳ್ಳು ಬೆಲ್ಲ ಹಂಚಿ
ಒಳ್ಳೊಳ್ಳೆ ಮಾತಾಡಿ
ಒಳಿತು ಕೆಡುಕುಗಳ ಮಧ್ಯೆ ಗೆರೆಯೆಳೆಯದೆ..
ಬೇರೆ ಇಸವಿಯ ಪಥಕ್ಕೆ ಸೇರೋಣ.
ಸಮ್ಮೇಳನಗಳ ಟಾಕು (talk)
ಸಂಭ್ರಮಗಳ ಠೀಕು
ಇವೆಲ್ಲವನ್ನೂ ಹರಿದಾಡಿಸಿದ ಟ್ವೀಟು
ಒತ್ತಿ ಒತ್ತಿ ಕೊಟ್ಟ ಎಫ್.ಬಿ ಲೈಕು
ಪ್ರಿಂಟಾಗಿ ಬಂದ ದಿನಪತ್ರಿಕೆಯ
ಆನ್ ಲೈನು ಲಿಂಕು
ಆಹಾ ..ಸಮಾಜವೇ (social)
ಸೋ ರಿಯಲ್! ಮತ್ತು
ಕೆಲವೊಮ್ಮೆ.. ಸರ್ರಿಯಲ್!!
ಮಾಧ್ಯಮ ಪೋಷಿತ, ಪ್ರೇಷಿತ
ಜನ ಸಮೂಹದಿಂದೆದ್ದು
ಬರಬಹುದೆ
ಬಾಹುಬಲಿ
ಈ ಸಲ ಭರತನಿಗಾಗಿ!


ಎಷ್ಟೆಲ್ಲ ಕೆಲಸವಿದೆ
ಕಥೆ, ಕವಿತೆ, ಹಾಡು ಕರೆಯುತ್ತಿವೆ
ಮಕ್ಕಳೂ ಕಾಯುತ್ತಿದ್ದಾರೆ
ಮನೆಯೊಳಗೆ
ರಾತ್ರಿಯ ಮಮ್ಮು ತಿನ್ನಿಸಿ
ಗೋಗರೆದು ಮಲಗಿಸುವಷ್ಟರಲ್ಲಿ
ಬೆಳದಿಂಗಳಿನ ದಾಹವಡಗಿ
ಬೆನ್ನು ಹಾಸಿಗೆ ತಾಗುವ ಮೊದಲೆ
ಸುಖನಿದ್ದೆ.

ಎಷ್ಟೆಲ್ಲ ಕೆಲಸವಿದೆ.
ಒಂದಿಡೀ ವರ್ಷವಿದೆ.
ಆಮೇಲೆ.. ಇನ್ನೇನು
ಎಂದಿನಂತೆ
ಮತ್ತೊಂದು ವರ್ಷ ಬರುತ್ತದೆ..
ಆದರೂ
ಎದಿರುಗೊಳ್ಳುವವರೆಗೂ ಖಾತ್ರಿಯಿಲ್ಲ.
ಎಂದೇ
ಈ ಹಳೇವರುಷವನ್ನೇ ಬದುಕಿಬಿಡಲು.
ನಿರೀಕ್ಷೆ
ಹೊಸ ಹುರುಪು ತುಂಬಿದೆ..

ಅಷ್ಟಲ್ಲದೆ ಅನ್ನುತಾರೆಯೇ..
ನಿರೀಕ್ಷೆಯೆ ಪರಮಸುಖ! ಮತ್ತು ಸಖ.

ಒಂದೊಂದೇ ಒಗಟು...

ಹೇಳಿದ ಹಾಗೆ ಕೇಳದೆ ಇದ್ರೆ
ನಾನು ಹೋಗಿ ಬಿಡ್ತೀನಿ ನೋಡು..
ಊಮ್..... ಬೇಡಾ... ಅಮ್ಮ ಬೇಕೂ.
ಸರಿ ವಾಪಸ ಬಂದೆ, ಈಗ ಹಟ ನಿಲ್ಲಿಸು.
ಆತು.. ನಂಗೆ ಇದು ಬೇಕು.
ಹಾಕಮ್ಮಾ ಬೇಕು...
ಸರೀ...ಇರು ಒಂದ್ನಿಮಿಷ...
ಇದು ಮೊನ್ನಿನ ಮಾತುಕತೆ.

ಇವತ್ತು....

ಏ ಹಟಾ ಮಾಡ್ಬೇಡಾ ಇರು
ಪುಟ್ಟಾ ಏನು ಮಾಡ್ತಿದೀ
ಹೋಗು ಆಪೀಚ್ ಹೋಗು...
ಉಹ್..
ಇನ್ನು ಹೋಗಲೇ ಬೇಕಾಯ್ತಲ್ಲಾ
ನಾನು 
ಹೊರಟೆ..
ನೀನು
ಬೇಕು ಅಮ್ಮಾ ಬೇಕು ಅಂತ ಲಂಗ ಹಿಡಿದೆ.

ನಾಳೆ
ಇನ್ನೇನು ಕಾದಿದೆಯೋ.!?

ತೊದಲಲ್ಲಿ ಮೊದ ಮೊದಲು ಜೊತೆಗಿದ್ದು
ತೊಡರಲ್ಲಿ ಅಲ್ಲಲ್ಲಿ ಕೈ ಹಿಡಿದು
ಬೆಳೆ ಬೆಳೆಯುತ್ತಾ
ನನ್ನ ಕನಸಿನಿಂದ
ನಿನ್ನ ಕನಸಿಗೆ
ನೀನು ರವಾನೆಯಾಗುವ ಹೊತ್ತು
ಬರುವುದು ಬಲುಬೇಗ ಅಂತ ಗೊತ್ತು.
ಹೂವು ಅರಳಿದ ಮೇಲೆ
ಗಂಧ ಗಾಳೀ ಪಾಲು.
ನನ್ನ ಬೇರು ನೆಲದಲ್ಲೇ
ನಿನ್ನ ಚಿಗುರು ಗೊಂಚಲು ಆಕಾಶದಲ್ಲೇ.
ಮಕ್ಕಳು ನಮ್ಮವರು. ನಾವೇ ಅಲ್ಲ.

ನಾಳೆ...
ಇದ್ದೆನೋ ಬಿಟ್ಟೆನೋ ಗೊತ್ತಾಗದ ಹಾಗೆ ನಾನೂ
ಇರುವೆಯೋ ಇಲ್ಲವೋ ಗೊತ್ತಾಗದ ಹಾಗೇ ನೀನೂ
ಬದುಕಿಬಿಡುವುದು
ಎಂಬುದು ಸಾರ್ವಕಾಲಿಕ ಸತ್ಯ.
ಅದೇನೇ ಇರಲಿ
ಈಗ ಮಾತ್ರ ಕೆನ್ನೆ ಕೆನ್ನೆಗೆ
ಗಲ್ಲಕ್ಕೆ, ಮೂಗಿನ ತುದಿಗೆ
ಹಣೆಗೆ, ಕಣ್ ಕಣ್ಣಿಗೆ
ನೆತ್ತಿಗೆ ಒತ್ತಿ ಒತ್ತಿ
ಸರಪಣಿ ಮುತ್ತು.

ಅಮೋಘವರ್ಷ
[ಒಂದೂವರೆ ವರುಷದ ಅಮ್ಮುಶಿ ಅವನಮ್ಮನಿಗೆ ಅರ್ಥ ಮಾಡಿಸಿದ ಒಂದು ಒಗಟು.]

Thursday, January 2, 2014

ಆ ಲಯ

ವಿಶಾಲ ಬಯಲ ನಡುವೆ
ಎತ್ತರಿಸಿದ ಜಗುಲಿಯ
ಮೇಲೆ ಆಕಾಶಕ್ಕೆ
ಮೊಗವಿಟ್ಟ ಮಂದಿರ,
ಕಥೆ ಹೇಳುವ ಕಲ್ಲು,
ಹಾಡುಲಿಯುವ ಚಿತ್ತಾರ..
ಎಲ್ಲದರ ಮೂಲ
ಒಳಗೆ ಗರ್ಭಗುಡಿಯಲಿ
ಉಳಿಪೆಟ್ಟಲಿ
ಹದಗೊಂಡ ದೇವಮೂರ್ತಿ.


ವಿಸ್ತರಣೆಯ ದಾಹಕೆ
ಸೈನ್ಯ ಪೊರೆದು, ರಕ್ತವೆರೆದು,
ಗಡಿಗಳ ಮೇರೆ ಮೀರಿದ,
ರಾಜಾಧಿರಾಜರ
ಕಟ್ಟಿದ್ದು ಕಳೆದೀತು
ಸಿಕ್ಕಿದ್ದು ಅಳಿದೀತು
ಎಂಬ ಅಳುಕನ್ನ
ಸೋಸಿ,
ದೇವರ ಮೊರೆಹೋದ
ಮೆರವಣಿಗೆಯಲ್ಲಿ
ಸಾಲು ಸಾಲು
ಶಿಲ್ಪಿಗಳ ಕುಶಲಕರ್ಮಿಗಳ
ಬದುಕು.
ಅಂತಃಸಾಕ್ಷಿಗೆ ನಡುಗಿದ
ರಾಜರು
ಮುಂಬರುವ ದಾಳಿಗೆ ಅಂಜಲಿಲ್ಲ.

ಬಯಲಲ್ಲಿ

ಚಿತ್ತರದಿ
ಬತ್ತಲಾದ ಆಲಯದ
ಮೈ ಗಾಯವ
ನೇವರಿಸುವ
ಎಳೆಬಿಸಿಲಿನಲ್ಲಿ
ಅದೇನು ಆಲ್ಕೆಮಿ..!
ಕಲ್ಲೇ ಬಂಗಾರ!

ಎಲ್ಲಿಯ ರಕ್ತದಾಹ
ಎಲ್ಲಿಯ ಸಾಮ್ರಾಜ್ಯ
ಎಲ್ಲಿಯ ಕಲ್ಲು
ಎಲ್ಲಿನ ಉಳಿ
ಸುತ್ತ ಬಯಲ
ನಡುವೆ ನೆಟ್ಟಗೆ ಗಟ್ಟಿಯಾಗಿ
ಎದ್ದು ನಿಂತ
ಆಲಯ.
ಹೊರಾಂಗಣಕ್ಕಿಂತ
ಮೊದಲು
ನವರಂಗದಲ್ಲೇ
ಮುಖದೋರುವ ಬೇರು,
ಹುಲ್ಲು, ಮಣ್ಣು.
ಹೊರಗೋಡೆಯ ಮಾತೇಕಿನ್ನು?
ಅಲ್ಲಿನದು ಬರಿಯ ಮಣ್ಣು.
ಹೆಸರಲ್ಲೇ ಲಯ
ಹುಟ್ಟಿದ್ದು ಬಯಲೇ
ಸೇರಲಿಕ್ಕಿರುವುದೂ ಅದೇ.

ಇವತ್ತಿನ ಆವೃತ್ತಿಯೇ ಬೇರೆ.
ಕಲ್ಲುಕುಟಿಗರು ಕಳೆದಿದ್ದಾರೆ,
ಅಕ್ಕಸಾಲಿಗನದೇ ವಜನು,
ದೇವನೊಬ್ಬನೇ ಆದರೂ
ಬಗೆಬಗೆಯ ಹೊನ್ನು,
ಮಣಿ, ಕಿರೀಟ.
"ದೀನಗಿಂತ ದೇವ ಬಡವ"
ಹೀಗಂತ
ಸಿರಿವಂತರಿಂಗಿತ.
ಹಬ್ಬಸಾಲುಗಳಲ್ಲಿ
ಸಂತರ್ಪಣೆ, ಅಭಿಷೇಕ,
ಕಾಣಿಕೆ ಹುಂಡಿ ಭರ್ತಿ.
ಈಗಿನ ದಾಹಕ್ಕೆ
ಸಾಕ್ಷಿಯಿಲ್ಲ,,
ತೋರಿದರೆ ಟ್ಯಾಕ್ಸಿನವರ ದಾಳಿ

ಅಂತಃಸಾಕ್ಷಿ..!!!

ಹಾಗೆಂದರೇನು ಹೇಳಿ..!

Tuesday, December 17, 2013

ಮರ್ಮರ..

ಅಗೂಲಕೆ ಹರಡಿ
ಅಲ್ಲಲ್ಲಿ ಬಿಳಲಾಗಿ
ಅಂಗಳ ತುಂಬ ನೆರಳಾಗಿ
ಮಣೆ, ಈಳಿಗೆ ಮಣೆ, ಅಡಿಕೆ ಸುಲಿಯುವ ಮಣೆಗಳ
ಹಲಗೆಯಾಗಿ
ಸುಮ್ನೆ ಇಳಿಸಿದ ಕಡಿರಾಡಿನ ರೀಪು ಪಕಾಶಿಯಾಗಿ
ಗಾಳಿ ಬೀಸಿದಾಗೆಲ್ಲ ತುಯ್ದಾಡಿ
ಚಳಿಗಾಲದಲ್ಲಿ ಗುಡಿಸಿದಾಗ ತುಂಬಿದ ಬುಟ್ಟಿಯ ಎಲೆಯಾಗಿ
ದನ ಕರಗಕ್ಕೆ ಕೊಟ್ಟಿಗೆ ಸೊಪ್ಪಾಗಿ
ಸಗಣಿಯೊಡನೆ ಸೇರಿ ಕೊಳೆತು
ತೋಟಕ್ಕೆ ಗನಾ ಗೊಬ್ಬರವಾಗಿ
ರಜೆಗೆ ಬಂದ ಮಕ್ಕಳ
ಆಟಕ್ಕೆ ತೊನೆದು ತೂಗಿದ ಗೆಲ್ಲಾಗಿ
ವಿಸ್ತರವ ಅಳೆಯುವ ಹಕ್ಕಿ ಕುಲಕ್ಕೆ
ಉಣಿಸುವ ಹಣ್ಣಾಗಿ
ಸಂಜೆಗೆ ಮರಳಿದವಕ್ಕೆ
ಗೂಡುಗೂಡಾಗಿ
ಮನೆವಿಸ್ತರಣೆಗೆ ಅಡ್ಡಗಾಲಾಗಿ
ಅಂಗಳಕ್ಕೊಂದು
ಗಡಿಗುರುತಾಗಿ, ಬಯಲಲೆವ ಬೂತಗಳಿಗೆ
ಒಡಲಾಗಿ
ಇರಲೆಬೇಕಾಗಿ
ಒಮ್ಮೊಮ್ಮೆ ಬೇಡಾಗಿ ಅನಿಸಿದ್ದು
ದಶಕಗಟ್ಟಲೆ
ಬೇರೂರಿ ಉಳಿದಿದ್ದು
ನೆಲದ ತೊಟ್ಟಿಲಲ್ಲಿ ಮೊಗವರಳಿ
ಆಕಾಶದ ತೆಕ್ಕೆಯಲ್ಲಿ ಮೊಗಹುದುಗಿಸಿ
ಮಳೆಗೆ ಮೈಯೊಡ್ದಿ
ಗಾಳಿಗೆ ಮೈದೂಗಿ
ಸಂಕ್ರಮಣಗಳನ್ನೆಣಿಸಿದ
ಮರ
ಮೊನ್ನೆ ಸಾಕಾಗಿ ಉರುಳಿತು.
ನಿನ್ನೆ ಫೋನು,ಜೆಸಿಬಿ,ಗರಗಸಗಳ ಸದ್ದು
ಇವತ್ತು ಖಾಲಿ ಅಂಗಳ,

ಬಂದು ಹಾರಿಹೋಗುವ ಹಕ್ಕಿಗಳ ರೆಕ್ಕೆಯ ಸದ್ದು.

Thursday, December 12, 2013

ಮರದೊಳಗೆ ಮರ ಹುಟ್ಟಿ...

|| ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಲಾಗದ ಹಣ್ಣು ಬಲು ರುಚಿ...||

ಅಡಿಗೆ ಮನೆಯಲ್ಲಿ ಒಂದು ಬದಿಗೆ ಅದಿರುತ್ತದೆ.
ಕಟ್ಟೆಯ ಮೇಲೋ, ಪಾತ್ರೆಯ ಸಂದಿಗೋ, ಸ್ಟೋವಿನ ಕೆಳಗೋ, ಪಾತ್ರದ ಸ್ಟಾಂಡಿನ ಕೊಂಡಿಗೋ ನೇತಾಡುತ್ತಿರುತ್ತದೆ.
ಅದು ಸ್ವಚ್ಛವಾಗಿರುತ್ತದೆಯಾದರೂ ನೋಡಲು ಹಾಗೆನಿಸುವುದಿಲ್ಲ.
ಅದಿಲ್ಲದೆ ಕೆಲಸ ಸಾಗುವುದೂ ಇಲ್ಲ. ನೋಡಲು ಬೇಕೇ ಬೇಕೆನಿಸಿರುವುದಿಲ್ಲ ಅಷ್ಟೆ.
ಪಾತ್ರೆ ಇಳಿಸುವಾಗ, ತರಕಾರಿ ಹೆಚ್ಚಿ ಮುಗಿಸಿದ ಕೂಡಲೆ, ಚಾ ಮಾಡಿದ ತಟ್ಟೆಯನ್ನ ಸಿಂಕಲ್ಲೆ ತೊಳೆದಿಟ್ಟು ಬಿಸ್ಕಿಟು ಡಬ್ಬಿ ಹುಡುಕುವ ಮೊದಲು,
ಚಪಾತಿ ಲಟ್ಟಿಸಿ, ಮಣೆಯನ್ನ ಸ್ಟಾಂಡಿಗೆ ಸೇರಿಸಿ ಉದುರಿದ ಹಿಟ್ಟನ್ನು ಒರೆಸುವಾಗ
ಅಚಾನಕ್ ಉಕ್ಕಿದ ಹಾಲಲ್ಲದ್ದಿದ ಸ್ಟೋವನ್ನು ಸಂಭಾಳಿಸಲು
ಪಾಕ ಕುದಿಯುವಾಗಲೇ ಮೀಟಿದ ಬೆಲ್ಲು ಕೇಳಿಸಿ ಬಾಗಿಲು ತೆಗೆಯಲು ಹೋಗುವ ಮೊದಲು,
ದಿನವೂ ಕೆಲಸ ಮುಗಿದ ಮೇಲೆ ಸೋಪು ಹಚ್ಚಿ ತೊಳೆದು ಅಲ್ಲೆ ಕಟ್ಟೆಯ ಮೇಲೆ ಒಣಗಿಸಿಯಾಗಿರುತ್ತದೆ.
ಅಡಿಗೆ ಮನೆಯಲ್ಲಿ ಒಂದು ಬದಿಗೆ ಅದಿರುತ್ತದೆ.
ಒಮ್ಮೊಮ್ಮೆ ತುಂಟ ಮಕ್ಕಳ ಆಟಿಗೆಯೊಡನೆ ಸೇರಿಯೂ ಮತ್ತೆ ಅಡಿಗೆ ಮನೆಗೇ ಓಡಿಬರುತ್ತದೆ.

ಅದನ್ನ ಮಶಿಬಟ್ಟೆ, ಕೈ ಒರ್ಸೊ ಬಟ್ಟೆ, ಅಡಿಗೆ ಬಟ್ಟೆ, ನ್ಯಾಪ್ಕಿನ್ನು, ಇತ್ಯಾದಿಯಾಗಿ ಕರೆಯುತ್ತಾರೆ.

ಒಂದು ಕತೆ ಓದಿದ್ದೆ. ತಾಯಿ ಯಾವತ್ತಿಗೂ ಮಶಿಬಟ್ಟೆಯ ಹಾಗೆ ಅಂತ ಒಂದು ವ್ಯೂ ಅದು. ಯಾರು ಬರೆದಿದ್ದು ಅಂತಲೂ ಮರೆತಿದ್ದೇನೆ.. ಮಾತೃದೇವೋ ಭವದ ನಾಡಿನಲ್ಲಿ ಬಹುಶಃ ಇದು ಜಾಸ್ತಿ ನಿಜ.

ಉಬ್ಬಿ ನಿಂತು ರಸವಾಗಿ ಆವರಿಸಿದ ತಾಯ್ತನವು
ತೊದಲು ಹೆಜ್ಜೆಗಳಲ್ಲಿ ಒಂದೊಂದೇ ದೂರ ಕ್ರಮಿಸುತ್ತಾ
ಆತು ನಿಲ್ಲುವ ನಿಲುಕುಗಳನ್ನ,
ತಲೆಯೂರಿದ ಮಡಿಲನ್ನ,
ಅವುಚಿ ಹಿಡಿದ ಕೈಗಳನ್ನ ಮೀರುತ್ತಾ
ರೂಪವೊಂದು
ಒಳಗಿಂದ ಮೂಡಿ
ಕಣ್ಣೆದುರು ಬಂದು
ಮತ್ತೆ ಕನ್ನಡಿಯೊಳಗೆ ಹೋದಂತಾದ ಘಳಿಗೆಯಲ್ಲಿ
ಏನು ಯೋಚಿಸುತ್ತಿರುತ್ತದೆ?

{ಅ}

Tuesday, November 26, 2013

ಕಾಕಲಿಪಿ

ಆಹಾ ಇಲ್ಲೊಂದು ರೀಫಿಲ್ ಬಿದ್ದಿದೆ. ಎತ್ತಿಕೊಂಡಳು ಪುಟ್ಟಿ. ಓಹೋ ಇಂಕು ಮುಗಿದೋಗಿದೆ. ಎರಡು ಪುಟ್ಟ ಅಂಗೈಗಳಲ್ಲಿ ಗಸ ಗಸ್ ಉಜ್ಜಿ ಬರೆದರೆ ಸಾಕು ಮತ್ತೆರಡು ಸಾಲು ಬರಿಯಬಹುದು ಅನ್ನುವುದು ಅವಳಿಗೆ ಗೊತ್ತಿರುವ ಲೆಕ್ಕಾಚಾರ.
ಹಂಗಾಗಿ ಅವಳತ್ರ ಇರುವ ಕಬ್ಬಿಣದ ಹಳೆಯದೊಂದು ಜಾಮಿಟ್ರಿ ಡಬ್ಬಿಯ ತುಂಬ ಈ ತರಹ ಸಿಕ್ಕ ರೀಫಿಲ್ಲುಗಳಿದ್ದವು.
ಇನ್ನೊಂದು ಬಟ್ಟೆಯ ಪರ್ಸಿನಲ್ಲಿ ಮುರುಕು ಸೀಮೆಸುಣ್ಣಗಳಿದ್ದವು.
ಈ ಹತ್ಯಾರಕ್ಕೆಲ್ಲಾ ಕ್ಯಾನ್ ವಾಸಾಗಲು ಇದ್ದದ್ದು ಮನೆಯ ಹಿಂದಿನ ಗೋಡೌನ್ ರೂಮಿನ ತುಂಬ ತುಂಬಿಕೊಂಡಿದ್ದ ದೊಡ್ಡವರೆಲ್ಲ ಬರೆದು ಮುಚ್ಚಿಟ್ಟ ನೋಟ್ ಬುಕ್ಕುಗಳು. ಏನಿಲ್ಲಾಂದರೂ ಒಂದೊಂದರಲ್ಲೂ ೩-೪ ಪುಟದಷ್ಟು ಸಿಕ್ಕೇ ಸಿಗುತ್ತಿತ್ತು.
ಸೀಮೆ ಸುಣ್ಣಕ್ಕೆ ಸಿಮೆಂಟು ಗೋಡೆಯೇ ಗತಿ.
ಇಷ್ಟೆಲ್ಲಾ ಇದ್ ಮೇಲೇ ಬರೀದೆ ಇದ್ರೆ ಆಗುತ್ಯೇ. ಬರೀದೆ ಸುಮ್ನಿದ್ ಬುಟ್ರೆ ನಾಳೆ ಬೆಳ್ಗೆ ಭೂಮಿಯ ಹಣೇಬರಹವೇ ಬದಲಾಯ್ಸಿ ಹೋಗುತ್ತೆನೋ ಎಂಬಷ್ಟು ಸೀರಿಯಸ್ ನೆಸ್ಸಲ್ಲಿ ಬರೆಯುವ ಪುಟ್ಟಿ, ಕೈನೋವು ಬಂದ್ರೆ ಒಂಚೂರು ಕೈ ಕುಡುಗಿ ಮತ್ತೆ ಬರೀತಾ ಕೂತಿರ್ತಿದ್ಲು.
ಅವಳೊಬ್ಬಳೇ ಬರೆದು ಮುಗಿಸಿಬಿಟ್ರೆ ಅನ್ನೋ ಆತಂಕದಲ್ಲಿ ಅವಳ ತಮ್ಮನೂ ಬರೆದು ಬಿಸಾಕುತ್ತಿದ್ದ. ಇಷ್ಟಕ್ಕೂ ಇನ್ನೂ ಮೂರನೇ ಕ್ಲಾಸಿನ ಈ ಪುಟ್ಟಿ ಮತ್ತು ಒಂದನೇ ಕ್ಲಾಸಿನ ಈ ಪುಟ್ಟ ಇಬ್ಬರೂ ಏನ್ ಬರೀತಾರೇಂತ ಕೇಳಿದ್ರಾ.?
ಇಂಗ್ಲೀಷು. ಬರೀ ಅಕ್ಷರಗಳಲ್ಲ. ಮೋಡಿ ಅಕ್ಷರಗಳು.
ಎಷ್ಟ್ ಬರೀತಾ ಇರ್ತಿದ್ರು ಅಂದ್ರೆ ಅವರಜ್ಜಿ ಬಂದು ಸಿಟ್ ಮಾಡಿ, ಪುಸ್ತಕ ಕಿತ್ತಾಕಿ ಎಬ್ಬಿಸಿಕೊಂಡೋಗಬೇಕು ಅಷ್ಟು.
ಆಹಾ ಎಂಥಾ ಅಕ್ಷರಮುಖೀ ಮಕ್ಳು, ಏನು ವಿದ್ಯಾರ್ಜನೆ, ಎಂಥಹಾ ದಾಹ ಅಂದ್ಕೊಳ್ಳಕ್ಕೆ ಮುಂಚೆ ಇನ್ನೊಂದಿಷ್ಟು ಮಾಹಿತಿ ಇದೆ.
ಏನು ಬರೀತೀ ಅಂಥ ಕೇಳಿದ್ರೆ ಅವರಿಬ್ರದ್ದೂ ಒಂದೇ ಉತ್ತರ. ಜಡ್ಜ್ ಮೆಂಟು..! ಇಬ್ರಿಗೂ ಜಡ್ಜರ ಕೆಲಸ ಎಂದರೆ ಇಷ್ಟ..ಯಾಕೇಂದ್ರೆ ಅವರು ಸಿಕ್ಕಾಪಟ್ಟೆ ಬರೀತಾರೆ..
ಆ ಜಡ್ಜ್ ಮೆಂಟುಗಳೋ .... ಯಾವ ಬದಿಯಿಂದ ಓದಿದ್ರೂ ಉಂಹೂಂ.. ಭೂಮಿತಾಯಾಣೆಗೂ ಅರ್ಥವಾಗದವು... ನಿಜವಾದ ಜಡ್ಚ್ ಮೆಂಟುಗಳ ಸ್ಪೂಫಿನ ಹಾಗೆ!
ಅಜ್ಜಿಗೆ ಬರುತಿದ್ದ ಸಿಟ್ಟೂ ಈ ಕಾರಣಕ್ಕೆ. ಮನೆಯ ಎಲ್ಲ ಹಿರಿಯರೂ ಕೋರ್ಟು ಕಚೇರಿ ಅಂತ ಅಲೆಯುವುದಕ್ಕೇ ಇರುವಾಗ ಈ ಮಕ್ಕಳೂ ಅದೇ ಗ್ಯಾಂಗಿಗೆ ಸೇರಿದ್ರೆ ಯಾರಿಗ್ ತಾನ್ ಸಿಟ್ ಬರ?!
ಬರೀ ಪುಸ್ತಕದಲ್ಲಿ ಗೀಚಿದ್ ಒಂದೇ ಅಲ್ಲ. ಮನೆಯ ಗೋಡೆ ತುಂಬಾ ನೆಲದಿಂದ ಮೂರು ಮೂರೂವರೆ ಅಡಿಯವರೆಗೆ ಎಲ್ಲಾ ಗೋಡೆಗಳ ಮೇಲೂ ಈ ಕಾಕಲಿಪಿಯೇ ಇರುತ್ತಿದ್ದುದು. ಆಗೆಲ್ಲ ಮನೆಗೆಲಸದವರ ಕಾನ್ಸೆಪ್ಟೇ ಇಲ್ಲದ ಕಾಲ. ಅಜ್ಜಿಯೂ ಚಿಕ್ಕಮ್ಮನೂ ಸಿಟ್ಟು ಮಾಡಿಕೊಂಡಿದ್ದರಲ್ಲಿ ಈಗ ಮಕ್ಕಳ ತಂದೆತಾಯಿಗಳಾದ ಆ ಪುಟ್ಟ ಪುಟ್ಟಿಯರಿಗೆ ಯಾವ ತಪ್ಪೂ ಕಾಣಿಸುವುದಿಲ್ಲ. ಆಗ ಮಾತ್ರ ಗೀಚಿ ಓಡಿಹೋಗುವುದು, ಒಂದೊಂದ್ಸಲ ಸಿಕ್ಕಾಪಟ್ಟೆ ಪ್ರೆಷರ್ರು ಬಿದ್ದಾಗ (ತಿಂಡಿಯಿಲ್ಲ ಅಥವಾ ಶಾಲೆಗೆ ಬರೆದು ಕಳಿಸುವೆ ಎಂಬ ಬೆದರಿಕೆ) ನೆಲಒರೆಸುವ ಬಟ್ಟೆಯಿಂದ ಗೋಡೆ ಒರಸುವುದು ನಡೆಯುತ್ತಿತ್ತು. ಕಾಕಲಿಪಿ ಅಂದ್ರೆ ಶುದ್ಧ ಕಾಕಲಿಪಿ ಅದು.

ನೀಟಾಗಿ ಒಂದು ಸಾಲುತುಂಬ ಕಾಗೆ ಒಂದು ಅಕ್ಷರವೂ ಗ್ಯಾಪು ಬಿಡದ ಹಾಗೆ ಕಾಲಿನ ಇಂಪ್ರೆಷನೆ ಇಟ್ಟರೆ ಏನು ಬರುತ್ತೋ ಅದೇ ಈ ಮಕ್ಕಳ ಜಡ್ಚ್ ಮೆಂಟು. ಹಾಗಂತ ಒಂದೇ ಸಾಲಲ್ಲ. 
ಸಾಲು ಸಾಲು. ಪುಟ ಪುಟಾ. ಪುಸ್ತಕ ಪುಸ್ತಕ..
ನೆನಪಿಸಿಕೊಂಡ ಕೂಡಲೇ ನಂಗೆ ಈಗ್ಲೂ ತಕ್ಷಣ ನಗು ಬಂದ್ ಬಿಡತ್ತೆ. ಅಮ್ಮಮ್ಮನ ಸಿಟ್ಟಿನ ಮಖವೂ ನೆನಪಾಗತ್ತೆ.

ಇದೆಲ್ಲಾ ಈಗ್ಯಾತಕ್ಕೆ ನೆನಪಾತಪಾ ಅಂದ್ರೆ ನಿನ್ನೆ ನನ್ನ ಮುದ್ದಿನ ಮಗಳು ಐದು ತುಂಬಲಿರುವ ಸೃಷ್ಟಿ ಶುಭದಾಯಿನಿ, ಈ
e-ಕಾಲದಲ್ಲೂ ಪೆನ್ನು ಹಿಡಿದು ನೋಟ್ಬುಕ್ಕಿನಲ್ಲಿ ಬರೆಯುತ್ತ ಕೂತಿದ್ದಳು.

ಏನು ಬರೆವಳು ಅಂತ ಹೋಗಿ ನೋಡಿದ್ರೆ. ಅದೇ ಕಾಕಲಿಪಿ.
ಏನದು ಅಂದ್ರೆ
ಇಂಗ್ಲೀಷು.. ಆಲ್ಫಬೆಟ್ಸ್ ಅಲ್ಲಾ, ಜಾಸ್ತಿ ಬರ್ದಿರುತ್ತಲ್ಲಾ ಓದದು ಅದ್ನ ಬರೀತಿದೀನಿ ಅಂದ್ಲು.
ಮರದೊಳಗೆ ಮರಹುಟ್ಟಿ ಮರ ಚಕ್ರ ಕಾಯಾಗಿ ನೆನಪಾಯಿತು. ಬರೀ ಬರೀ ಅಂತ ಖುಶಿಪಟ್ಟೆ. ನಾನೂ ಒಂದೆರಡು ಸಾಲು ಬರೆದೆ.
ಅವಳು ಮೊದಮೊದಲು ಬರೆಯಲು ಕಲಿತಾಗ, ಗೋಡೆಯ ಮೇಲೆಲ್ಲ ಬರೆದು ಅವರಪ್ಪನಿಗೆ ಸಿಟ್ ಬಂದು ಬಯ್ದಾಗ ನಾನು ಅವರಿಬ್ಬರ ನಡುವೆ ಅಡ್ಡಗೋಡೆಯಾಗಿ ಅವಳಿಗೆ ಬರೆಯಲು ಬಿಟ್ಟಿದ್ದೆ.
ಒಂದು ವಾಷು, ಇನ್ನೊಂದು ಕೋಟು ಕೊಟ್ರೆ ನಂ ಗೋಡ್ ವಾಪಸ್ ಮಿರಿಮಿರಿ ಮಿಂಚುತ್ತೆ. ಆದ್ರೆ ಅ ಮೊದಲ ಬರಹದ ಎಳೆ ಕೈಯ ಸುಗ್ಗಿ ತಡೆಯಲು ನಮಗೇನು ಹಕ್ಕು ಅಲ್ವಾ? ಗೋಡೆಗಳಿರುವುದೇ ಬರೆಯಲಿಕ್ಕೆ ಅಂತ ಅಂದಿದ್ದು ಅವಳಿಗೆ ಖುಶಿಯಾಗಿತ್ತು. ಅವರಪ್ಪನಿಗೆ ಸಿಟ್ಟಾಗಿತ್ತು. ಆದ್ರೂ ಅವನ ಬಾಲ್ಯ ನೆನಪಾಗಿದ್ದರ ಫಲ ನಮ್ಮನೆ ಗೋಡೆಗಳಲ್ಲೆಲ್ಲ ಆರ್ಟ್ ಗ್ಯಾಲರಿಯಿತ್ತು.


ನಂಗೆ ತುಂಬಾ ಆಸೆ ಹುಟ್ಟಿಸಿದ, ಪ್ರೀತಿ ಮೂಡಿಸಿದ, ಸಿಟ್ ಬರಿಸಿದ, ನಗು ತರಿಸಿದ, ಕಣ್ಣೀರ್ ಒರೆಸಿದ, ಇರಿಸುಮುರಿಸುಗೊಳಿಸಿದ, ಸಹನೆ ಕಲಿಸಿದ, ಗೊತ್ತಿಲ್ಲದ ಏನೇನನ್ನೋ ಅರುಹಿದ ಮತ್ತು ಇದೆಲ್ಲವನ್ನೂ ಇನ್ನೂ ಟೂ ಫೋಲ್ಡ್ ಮಾಡುತ್ತಲೇ ಇರುವ, ಹಾಗೇ ಸಾಗುವ ನನ್ನ ಪುಟ್ಟ ದಿಲ್ ರುಬಾಳಿಗೆ ನಾಡಿದ್ದಿಗೆ ಐದು ತುಂಬುತ್ತದೆ.
ಒಂದಿಷ್ಟು ಬೆರಗು, ಮತ್ತು ಸಿಕ್ಕಾಪಟ್ಟೆ ಖುಶೀ ನಂಗೆ.

ಈ ಎಡವಟ್ಟು ಹೆಣ್ಣನ್ನು, ಅಮ್ಮನನ್ನಾಗಿಸಿದ ಆ ಮೆರುಗು ಕೆನ್ನೆಯ ಮೇಲೆ ಒಂದಿಷ್ಟು ಒತ್ತಿ ಒತ್ತಿ ಮುದ್ದು. ಮತ್ತು ಆ ಪುಟ್ ಪುಟಾಣಿ ಮೈಗೆ ಕಂಗರೂ ಹಗ್ಗು.


(ರೀಫಿಲ್ ಮತ್ತು ರೂ-ಕಾಂಗ ಚಿತ್ರಗಳು ವೆಬ್ ಕರ್ಟೆಸಿ)