Friday, September 30, 2011

ಹಲ್ನೋವು

ಮಳೆಗಾಲದ ಮಧ್ಯಾಹ್ನ
ಉಂಹೂಂ ನಮ್ಮೂರಾಗಲ್ಲ
ಇಲ್ಲೆ ಐಟಿಸಿಟಿಯಲ್ಲಿ
ಬೈಗು,ಬೆಳಗು,ಬಿಸ್ಲೊತ್ತು,ನೆಳಲು
ಗೊತ್ತಾಗದ ಹಾಗೆ
ಏಸಿಯಲ್ಲಿ ಕುಳಿತು
ದಿನಚರಿಯನ್ನೇನು ಹೇಳುವುದು ಬಿಡಿ
ಎಲ್ಲರ ಕತೆಯೂ ಅದೆ
ವಿಷ್ಯ ಏನಪಾಂದ್ರೆ
ಸ್ವಲ್ಪ ಹೆಚ್ಚೇ ಕಾಡುತ್ತಿರುವ
ಹಲ್ನೋವು.
ಹುಂ ತಕ್ಷಣವೇ ಡಾಕ್ಟರತ್ರ
ಕರ್ಕೊಂಡೋಗಲು ನಾನು
ಹೊಸಹೆಂಡತಿಯಲ್ಲ.
ಅಂವ ಹಳೆಗಂಡನೂ ಅಲ್ಲ
ವಯಸ್ಸಾದ್ ಮೇಲೆ
ಇದ್ದಿದ್ದೆ ಇದೆಲ್ಲ
ಅಂತ ನಾನೂ ಸುಮ್ನಿದ್ದೆ
ಸುಮ್ನಾದಂಗೂ ಅಬ್ಬರ
ಜಾಸ್ತಿಯಾಗುವುದೇ ಹಲ್ನೋವಿನ ಲಕ್ಷಣವಂತೆ
ಈಗ ಮೂವತ್ತೈದರ ಆಜೂಬಾಜಲ್ಲಿ
ಇನ್ನೇನು ಮತ್ತೆ
ಎಲ್ಲ ಸಣ್ ಪುಟ್ಟ ಕಾಯಿಲೆಗಳಿಗೂ
ಬಾಲಗೋಪಾಲದಿಂದ
ಕಿರೀಟಕ್ಕೇ ಭಡ್ತಿ.
ಅದಕ್ಕೆ ಇರಬೇಕು
ಮಹಾನಗರದ ಆಸುಪತ್ರೆಗಳೆಲ್ಲ ಭರ್ತಿ.
ಮಳೆಯ ಚಳ್ ಚಳಿಯಲ್ಲಿ
ಬೆಚ್ಚಗೆ ಕೂತು ಚಕ್ಕಲಿ ಕಡಿಯುವ ನೆನಪಿಗೆ
ಹಲ್ಲು ಕಟಗುಟ್ಟಿ
ಇಷ್ಟೆಲ್ಲ ಬರೆಸಿದ್ದು ನೋಡಿದ್ರೆ
ಭೂತಗನ್ನಡಿಯಲ್ಲಿ ಬೆಳಕು ತೂರದೇನೆ
ಬೆಂಕಿ ಬಂದ್ರೂ ಬಂತೆ.

Tuesday, September 27, 2011

ಸುಗಂಧ ಸಮೀರ

ಸುಮ್ಮಗೆ ನೆಲದ ಮೇಲೆ
ಕಾಯುತ್ತ ಕೂತವಳ
ಎದಿರು
ಸಗ್ಗದಿಂದಿಳಿದಂತೆ
ನೀನು
ಹಾಜರಿ ಹಾಕಲು -
ಮೋಡವಾಗಿ ಬನಿಇಳಿವ
ಮೊದಲೇ
ಈ ಹನಿ
ಶರಧಿಯೊಳಗೆ ತಲ್ಲಣಿಸಿ
ಆವಿಯಾಗಿತ್ತೆಂಬ ಅರಿವು.
ಎಳೆಯ ಕಾಲದಿ ಬಿತ್ತಿದ
ಮೊಳಕೆಮೂಡದ ಬೀಜ
ಏರುಬದುಕಿನ ಬಿರುಹಾದಿಯಲಿ
ನೆರಳಿಗೆ ಹೊರಳಿದರೆ ತಂಗಾಳಿ
ಸೂಸುವ ಎಲೆಮರ,
ನೆನಪ ಗಂಧ ತೇಯುವ
ಕಲ್ಲು ಮನದ ಸುತ್ತ ಸುಳಿವ
ಸುಗಂಧಿತ ಸಮೀರ.
ನೀನು ಮೊನ್ನೆಯ ನಿಜ.
ಇವತ್ತೂ ನಿಜವೇ.
ಕಳೆದ ಕಾಲದ ಕನ್ನಡಿಯಲಿ
ನಿತ್ಯ ನೂತನ
ಮಂದಹಾಸವರಳಿಸುವ
ಮುಟ್ಟಲಾಗದ ನಿಜ.
ನಿಲುಕಲಾರದ ಅಳುಕಲ್ಲು
ಸವರಿ ಸಂತೈಸಿಕೊಳ್ಳುವೆ
ಕವಿತೆ ಬರೆವ ಲಹರಿ
ಅಲ್ಲು ಇಲ್ಲು ಎಲ್ಲೂ.
ಪೋಣಿಸಿದ ಅರಳು ಮೊಗ್ಗು
ಆಹ್ಲಾದ
ಕನಸು ಮನಸು
ನನಸಲ್ಲೂ!

Monday, August 22, 2011

ಸೋಜಿಗ!

ಮೇಲ್ಮುಖ ಹರಿಯುವ
ಕಾರಂಜಿ ನೀರಿನ
ತುದಿಯಲೊಂದು ಪುಟ್ಟ ಗೋಲ
ಹರಿವ ನೀರಿನ ಬಲವೇ ಬಲ
ಅತ್ತಿತ್ತ ಜಗ್ಗದ ಗೋಲ
ನೋಡಿ ಹಿರಿಯರಿಗೂ ಎಳೆಯರಿಗೂ ಸೋಜಿಗ
ನೀರ್ಬಲದ ಗೋಲ
ನಡು ದಾರಿಯಲ್ಲಿ
ನೆನಪಾಗುವಾಗ
ಮನದಲ್ಲೊಂದು ಭಯದ ಸೆಳೆ

ಹೆದರಿ,ಬೆವೆತ ಮಸ್ತಿಷ್ಕದಲ್ಲಿ
ನಿಜದ ಅರಿವು ಸಟ್ಟನೆ ಹೊಳೆ
ಹೊಳೆದು..
ನೀರು ನಿಂತ ಮರುಘಳಿಗೆಯಲ್ಲಿ
ಕೆಳಗುರುಳುವ ಗೋಲ!
ಈಗಿತ್ತು ಈಗಿಲ್ಲ!
ಬದುಕು ಕಡೆಗೂ
ಹಳೆಯ ಹಿರಿಯರ ಮಂತ್ರಶ್ಲೋಕಗಳ
ನೀರಮೇಲಣ ಗುಳ್ಳೆಗಳ
ಭಾಷ್ಯವೇ!
ನೀನು ಯಾವಾಗ
ಹರಿದು ಹೋದೆ?
ನಾನು ಯಾವಾಗ ಬಿದ್ದೆ?
ಸೋಜಿಗಕ್ಕೇ ಅಚ್ಚರಿ.
ಸ್ವಮರುಕದ ಎಣ್ಣೆಯಲಿ
ಬಿದ್ದ ನೋವಿಗೆ ಮಾಲೀಷು,
ಪುಕ್ಕಟೆ ಮಾಲೀಷು.

Monday, August 8, 2011

ಹೂಕಣಿವೆಯ ಹಾದಿ..


ನಿರಾಕರಣದ
ಚಂದ
ಬೆಟ್ಟ ಬಯಲು ನದಿ ಕಂದರಗಳಲಿ
ಹೊರಳುತ್ತಿದ್ದರೆ
ಊರ ಜಾತ್ರೆಯ ಗದ್ದಲಕೆ
ಹೊಂದಿಕೊಂಡ ನನ್ನ ಕಂಗಳಿಗೆ
ಬೆರಗಿನ ಪೊರೆ,
ಅಂಚಲಿ ಹೊಳೆದವು,
ಕಂಬನಿ ಜೋಡಿ
-
ನೋಡದೆ ಉಳಿದೆನೇ ಇಷ್ಟುದಿನ
ನೋಡಲಾಯಿತಲ್ಲಾ ಈಗಾದರೂ, ಇಷ್ಟಾದರೂ
-
ಬಾನೆತ್ತರಕೆ ಚಿಮ್ಮುವ
ಭುವಿಯ ಬಯಕೆ
ಒತ್ತರಿಸಿ ಖಂಡಾಂತರಗೊಂಡ
ತುಂಡುಗಳೂ ಅಖಂಡವೆನಿಸುವ
ವೈರುಧ್ಯ
ಎಲ್ಲ ಮೀರಬಲ್ಲೆ ಎನ್ನುವ
ನನ್ನ ಒಳಗ ಹಣಿಯುವ
ಮಣಿಸಿಯೇ ತೀರುವ
ನಿಡುದಾರಿ,
ಸೋತು ಕಾಲ್ ಚೆಲ್ಲಿದೊಡನೆ
ನೇವರಿಸುವ ಕುಳಿರು
ಅಲ್ಲ
ಇದನೆಲ್ಲ ಮಾತಿಗಿಡುವ
ನನ್ನ ಹಟವೇ
ಅಲ್ಲಿ ಕುಸಿದು ಕೂತಾಗ ನೀನೆಲ್ಲಿದ್ದೆ?
ಇರಲಿ ಬಿಡು
ಒಣಪೊಗರಿಗೆ ಈಗ ನೆಗಡಿಯಾಗಿದೆ,
ಏನಾದರಾಗಲಿ,
ಹೂಕಣಿವೆಯ ಹಂಬಲು ಕೊಂಚ ಹರಿದಿದೆ,
ಅರಳುಕಣಿವೆಯ ನೋಡಿ ತಣಿದಿದೆ.
ಲಕ್ಷ ಪಯಣಿಗರಲ್ಲಿ ಗುರಿ ಸೇರುವವರು
ಒಬ್ಬಿಬ್ಬರಂತೆ,
ನನ್ನದು ಪಯಣದ್ದೇ ಭಾಗ್ಯ.
ಗುರಿ ಯಾರಿಗೆ ಬೇಕು
ಪಯಣ ಮುಗಿಯದೆ ಇರಬೇಕು.

ನಿರಾಕರಣವ ಧೇನಿಸಿ
ಒಪ್ಪಿಗೆಗೆ ಹಟವಿಡಿಯುವ ನಾ ಮಳ್ಳಲ್ಲವೇ?
ಸಾಲು ಸಾಲು ಅಚಲ
ಸಾರಿ ಸಾರಿ ತಿಳಿ ಹೇಳಿಯೂ
ಕುಗ್ಗುವ ಕುದಿಯುವ ಈ ಬಗೆಗೆ ಮದ್ದಿಲ್ಲವೇ?
ಎತ್ತರದಿ ಮುಗಿಲು ಮುದ್ದಿಸಿ
ಆಳದಿ ಹೊನಲು ರಮಿಸುವ
ಈ ಬದುಕಿಗೆ ಇದೇ ಒಂದು
ಬರೆದಿಡದ ಭಾಷ್ಯವೇ?!
ಎಲ್ಲ ಚಂದಗಳ ನಿವಾಳಿಸಿ ಒಗೆಯಲು
ಕಿಡಿ ಇಲ್ಲ ಇಲ್ಲಿ,
ಭಾವಬಯಕೆಗಳ ಮೇರುತುದಿಯಲಿ
ಎಲ್ಲ ಮೀರಿದ, ತೀರಿದ ಹಿಮತೃಪ್ತಿ!
ಗಮ್ಯಕ್ಕಿಂತ ದಾರಿಯೇ ಸೊಗಸು
ಎಂಬ ಲೌಕಿಕವೆ ಲೇಸು.

(ಈ ಅಲ್ಪಳ ಬಯಕೆ ತೀರಿಸಿದ ಸಮಸ್ತ ಆತ್ಮೀಯರಿಗೆ, ಸೋಕಿಸಿಕೊಂಡ ಭೂರಮೆಗೆ, ನಿರುಕಿಸಿ ನಕ್ಕ ಬಾನಿಗೆ, ತಂಪಗೆ ಹರಿದ ನೀರಿಗೆ, ಕಂಪಲಿ ಮುಳುಗಿಸಿದ ಕಣಿವೆಗೆ, ಅತ್ತೂ ಕರೆದೂ ಜೊತೆಗೂಡಿದ ಸೃಷ್ಟಿಗೆ, ಜತೆ ಬಂದ ಬಿದಿಗೆಯ ಬಿಂಬಕ್ಕೆ
ಮತ್ತೆ ಮತ್ತೆ ಶರಣು. )

Tuesday, July 5, 2011

ಮಾಯಾಲೋಕ

ಬಾಲ್ಯವೆಂಬ ಮಾಯಾಲೋಕ ಮತ್ತು ನೀನು ಬಿಡಿಸಿಕೊಡುವ ಮಾಯಾಚಾಪೆ ಆಹಾ... ಥ್ಯಾಂಕ್ಸ್ ಅಂದ್ರೆ ಬಯ್ತೀಯ ನೀನು, ಅದಕ್ಕೆ ಇಡೀ ಕವಿತೆಯನ್ನ ಹೂವಪ್ಪುಗೆಯಲ್ಲಿ ನಿನಗರ್ಪಿಸುತ್ತಾ...
{ ನೀನು ಚಾಟಿಸಿದಾಗೆಲ್ಲ
ಇವತ್ತಿನ ನಾನು ಅಳಿದು
ಪಂಚೇಂದ್ರಿಯಗಳಲ್ಲಿ
ಹಳದಿಬೂದುಬಣ್ಣದ ಗೋಡೆ ನಡುವಿನ
ಕೋಣೆ, ನೆಲಬೆಂಚುಗಳು,
ಗುಸುಗುಸು ಮಾತು
ಕಪ್ಪು ಬೋರ್ಡಿನ ಮೇಲೆ ಬಿಳಿ ಬಿಳಿ
ಅಕ್ಷರ ದುಂಡಗೆ ಬರೆಯುತ್ತಿರುವ ಅನಸೂಯಮ್ಮ ಟೀಚರು
ಅಲ್ಲಲ್ಲಿ ಯಾರು ಮೊದಲು ಬರೆದು ಮುಗಿಸುವರೆಂಬ
ಛಲದ ಕಣ್ಣಾಟ,
ಹೊರಗೆ ಅಂಗಳದಲ್ಲಿ
ನೇತುಬಿಟ್ಟ ರೈಲ್ವೆ ಕಂಬಿಯ ಬೆಲ್ಲಿನ ರಿಂಗಣಕ್ಕೆ
ಕಾದ ಕಿವಿಗಳು
ಇನ್ನೇನು ಆಟದ ಬೆಲ್ಲು ಹೊಡಿಯಬೇಕು
ಅಷ್ಟರಲ್ಲಿ ಸುರಿದ ಮಳೆಗೆ
ಮತ್ತೆ ಕೋಣೆಯಲ್ಲೆ ಕೂಡಿಸಿ
ಹಾಡು ಕತೆ ಹೇಳಿಸುತ್ತಿರುವ ರಮಾಮಣಿ ಟೀಚರು
ಕೈಕಟ್ಟಿ ಎಲ್ಲರ ಮುಂದೆ
ನಿಂತು ಬಿಡಿಸುವೆ ನಾನು
ನೀವೆಲ್ಲ ಹತ್ತಿ ಕೂರುವುದಕ್ಕೇ ಕಾದ
ಮಾಯಾಚಾಪೆಯನ್ನು
ಇಂದು ಹೋಗೋಣ ರಷ್ಯಕ್ಕೆ
ನಾಳೆ ಚಿತ್ರಕೂಟಕ್ಕೆ
ನಾಡಿದ್ದು ಮಣ್ಣಿನಮನೆಗೆ
ಯಾನ ಮುಗಿದಿದೆ
ಬೆಲ್ಲು ಹೊಡೆದಿದೆ
ಮಳೆ ನಿಂತಿದೆ
ಶಾಲೆ ಮುಗಿದಿದೆ
ಈಗ ಮನೆಗೋಡುವ ಸಮಯ
ಹಾರಬಹುದು ಮಳೆನೀರಿನ ಹೊಂಡ
ಕೆಸರು ಎರಚಿದರು ಪರವಾಗಿಲ್ಲ
ಶಾಲೆ ಮುಗಿಯಿತಲ್ಲ
ನಾಳೆಗೆ ಬಣ್ಣದ ಬಟ್ಟೆ
ಆಹ್ ಎಷ್ಟು ಜೋರಾದ ಹಾರ್ನ್
ಅಯ್ಯೋ ನನ್ನ ಬಾಲ್ಯವಳಿಯಿತು
ಇಲ್ಲಿದೀನಿ ಗಣಕಯಂತ್ರದ ಮುಂದೆ
ನಿನ್ನ ನೆಟ್ಟು ಕಟ್ಟಾಗಿ
ಚಾಟು ಆಫಾಗಿ
ಮತ್ತಿಲ್ಲೆ ನಾನು
ಹುಶಾರಾಗಿ
ಇರಬೇಕಾದವಳು,
ಯಾರೆಂದರೆ ಅವರೊಡನೆ
ಏನೆಂದರೆ ಅದು ಮಾತಾಡದೆ
ನಗುವನ್ನು ಅಳೆದು ತೂಗಿ ಸೂಸಬೇಕಿರುವವಳು.
ಮತ್ತೆ ನಾಳೆ ಬಾ ನೀನು
ಬೇಗ.
ಆಫ್ ಆಗುವ ಮುನ್ನವೆ ಹೇಳಿಬಿಡು
ನಾನು ಚಾಪೆಯಿಂದಿಳಿಯಕ್ಕೆ ತಯಾರಿರುತ್ತೇನೆ
ಯಾಕೆ ಸುಮ್ಮನೆ ಕ್ರಾಶ್ ಲ್ಯಾಂಡಿಂಗು??
}

Wednesday, June 22, 2011

ಹೂಕಣಿವೆಯ ಹಂಬಲು

ಇಲ್ಲೆ ಗಣಕದ ಕಿಂಡಿಯಲ್ಲಿ
ಇಣುಕಿದರೆ
ಮಳೆಬಿಲ್ಲಿನ ಬಣ್ಣಗಳ ಹಾಯಿಸಿ
ನಗುವ
ಹೂಕಣಿವೆಯೇ,
ಇದೆಯೆ ನನಗೆ
ನಿನ್ನ ಒಡಲಲಿ ಹರಿದಾಡುವ ಭಾಗ್ಯ?

ಬಿಳಿಬೆಟ್ಟಗಳ ತಪ್ಪಲಲಿ
ದೀರ್ಘವಾಗಿ ಸುಯ್ಯುತಿರುವ
ಮರಗಳೆ ನೀವು ಕಾದಿರುವುದಾರನ್ನ?
ಗಿರಿಯ ಸಂದುಗಳಲಿ ತೂರಿ
ಹರಿವ ದೇವನದಿಗಳೆ
ನೀವು ಕರೆಯುವುದು ಯಾರನ್ನ?
ಸಂಗಮಿಸಿ ಹರಿವ ನದಿಗಳು
ಸೂಚಿಸುವುದೇನನ್ನ?
ದೂರಹಾದಿಯ ಪಯಣದ
ರೋಚಕತೆಯೇ ನೀನು
ಬಳಸಿರುವೆಯೇಕೆ ಹೀಗೆ ನನ್ನ?
ಲಕ್ಷಗಳಲ್ಲಿಹುದು ಸಂಖ್ಯೆ
ನಿನ್ನ ಮಡಿಲಲಿ ಸಾಗಿದ ಪಯಣಿಗರದು
ಮುಟ್ಟಿ ಮೀರಿದವರಾರು ಗುರಿಯ?


ಫ್ರಾಂಕ್ ಸ್ಮಿಥ್ ಮಹಾಶಯ
ಹೆಸರಿಡುವ ಮೊದಲೇ
ನೀನಲ್ಲಿದ್ದೆ.
ಇಂದಿಗೂ ಇರುವೆ,
ಋತುಮಾನದ ಜತೆಗೂಡಿದ
ಭುವಿಯ ಅರಳುವಿಕೆಯ
ಸಂಭ್ರಮಕ್ಕೆ ಸಾಕ್ಷಿಯಾಗಿ!
ಕಾಲದೇಶಗಳ ಮೀರಿದಂತೆ,
ರಾಜಕೀಯ ನುಸುಳದಂತೆ,
ಸಣ್ಣತನವ ಅರೆಯುವಂತೆ.
ಅಂದಿಗೂ ಇಂದಿಗೂ ಎಂದಿಗೂ!
ನೋಡಲು ರಮ್ಯ,
ಹೊಂದಲು ಅಗಮ್ಯ!


ಇದೆಯೆ ನನಗೆ ನಿನ್ನ
ಒಡಲಲಿ ಹರಿದಾಡುವ ಭಾಗ್ಯ?!
ಕಾದಿರುವೆ-
ಅದು-ಇದು ಎಲ್ಲದೂ
ಒಂದೇ ಎನಿಸುವ ಬಿಳಿಬಿಳಿ ಅದ್ವೈತಕ್ಕಾಗಿ..!