Monday, September 16, 2013

ಹೂವ ತರುವರ ಮನೆಗೆ ಹುಲ್ಲ ತರುವ...

ಹೀಗೊಂದು ಮಳೆ ಸುರಿವಾಗ ನನಗೆ ಹನಿಯಾಗಿ ದೊರಕಿದ್ದು...

ಏನು ಮಾತಾಯಿತು ಏನು ಸಿಕ್ಕಿತು ಏನನ್ನಿಸಿತು ಎಂಬ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ.

ಮಳೆ ಬಂತು. ನಾನೆಷ್ಟು ಒಡ್ಡಿದೆನೋ ಅಷ್ಟು ನೆಂದೆ. ನೆರೆ ಇನ್ನೂ ಬರಬೇಕಿದೆ. ಈಗಿನ್ನೂ ಭಾದ್ರಪದ ಮುಗಿಯುತ್ತಿದೆ. ಆಷಾಢ  ಬರುವ ಮೊದಲು ಹೇಮಂತ ಶಿಶಿರಗಳಿವೆ.

ಮಳೆ ಬರಬೇಕು
ಈವರೆಗೆ ಕಟ್ಟಿದ್ದು,
ಗೋಡೆಗೆ  ಕೊಟ್ಟ ತಳಪಾಯ
ಮೇಲಿಟ್ಟ ಹೊದಿಕೆ
ಬಣ್ಣ ಬಣ್ಣದ ಸುಣ್ಣ
ಗಟ್ಟಿಸಿ ಹಾಕಿದ ಚಿಲಕ
ತೆಗೆಯದೆ ಬಿಟ್ಟ ಕಿಟಕಿ
ಎಲ್ಲ ಮುಳುಗಿಸುವ
ಕರಗಿಸುವ
ಮಳೆ ಬೇಕು
ಕೊಚ್ಚಿಕೊಂಡೋಗುವ
ನೆರೆಯಲ್ಲಿ
ಮುಳುಗದೆ
ತೋರಬೆರಳಿನ
ಆಸರೆಯಲ್ಲಿ
ಸಾಗಬೇಕು,
ಬಯಲಿಗೆ
ಎತ್ತಲಿಂದಲೂ ಹಾದಿಯಿದೆ
ನಾವು ಹೊರಡಬೇಕು.
**************************************************************

ಬೇಕು ಎನ್ನುವುದು ಬೇಕು.
ಸಿಗಬೇಕಿದ್ದರೆ
ಮೊದಲು ಕರೆಯಬೇಕು.
ಮರುದನಿ
ಹುಟ್ಟಿಸಲು
ಕರೆದನಿಯೇ ಬೇಕು.
ಇದೆಲ್ಲ ಕೇಳಲು
ಶಬುದ ನಿಲ್ಲಿಸಬೇಕು.
ಎದೆಕಲಕಿ ಪ್ರಾರ್ಥಿಸಬೇಕು
ಒಳಗಿರುವ ಗುಟ್ಟು
ಹೊರಬರಲೆಂದು.

**********************************************

ಗುರಿ ಇರುವುದು ಬಾಣದ ಮೊನೆಯಲ್ಲಿ
***************************************************

ಕಾಯುವಿಕೆ ಎಂದೂ ಒಬ್ಬರದಲ್ಲ..
*************************************

ಗಟ್ಟಿ ಮನೆಗಳ ಅಂಗಳದಲ್ಲಿ ಕಟ್ಟೆಯಲ್ಲಿ ಕೂತು ಪ್ರವಾಹಕ್ಕೆ ಕಾಯುವವರು ಹುಚ್ಚರೇ ಇರಬಹುದು. ಹುಚ್ಚು ಹಿಡಿಯದೆ ಇದ್ದರೆ ನೆರೆಗೆ ಸಿಕ್ಕುವುದು ಹ್ಯಾಗೆ. ನೆರೆ ಬರದೆ ಹೊಸತು ಹುಟ್ಟುವುದು ಹ್ಯಾಗೆ. ಇದ್ದ ಬೆಳಕು ಹೊಸದಾಗಿ ಮೂಡುವುದು ಹ್ಯಾಗೆ...
******************************************************************************
ಹೂವ ತರುವರ ಮನೆಗೆ ಹುಲ್ಲು ತಂದವರ ಮಾತುಗಳಲ್ಲಿ ತೊಯ್ದೆ ನಾನು. -ಸಿಂಧು

 
 

Wednesday, September 11, 2013

ಬಾಗು-ಬಳುಕು

ನೇರ

ಗೆರೆ ಕೊರೆದಂತೆ

ಅತ್ತಿತ್ತ ಅಲುಗದಂತೆ

ಚೆಲ್ಲದಂತೆ

ಚದುರದಂತೆ

ನುಣ್ಪು ಚೂರೂ

ದೊರಗಾಗದಂತೆ..

ಇದ್ದರೆ

ಮುರಿಯಬಹುದು

ಕತ್ತರಿಸಬಹುದು

ಅಳಿಸಬಹುದು

ತುಂಬಿಕೊಳ್ಳದೆ ಇರಬಹುದು

ಜಾರಿ ಹೋಗಬಹುದು

ಯಾರಿಗೂ ಬೇಕು ಅನ್ನಿಸದೆ ಹೋಗಬಹುದು.

ಅದಕ್ಕೇ

ಇರಬೇಕು

ಬಾಗು, ಬಳುಕು,

ತುಂಬಿಕೊಳ್ಳುವ ದೊರಗು,

ದಾರಿ ಸಿಗದಿದ್ದರೆ ಸುತ್ತಿ ಬಳಸುವ

ಡೊಂಕು.

ಇರಿಯುವುದು ಸುಲಭ,

ಅರಳುವುದು ಕಷ್ಟ.

ನೇವರಿಸುವುದು ಬಲು ಕಷ್ಟ.

ನದಿ, ಹರಿವು,ಬಾಗು, ಬಳುಕು. ತೋರಿದ ಬೆಳಕು

ಮಬ್ಬು ಹರಿಸಬೇಕು,

ಮುಂದೆ ನಡೆಯಬೇಕು.

Friday, August 30, 2013

ಉಹ್...

ಜಗವೆಲ್ಲ
ಫೇಸ್ಬುಕ್ಕು, ಟ್ವಿಟ್ಟರಲ್ಲಿ ಮುಳುಗಿ

ತೇಲಾಡುತ್ತಿರುವಾಗ

ಬದುಕಿನ ಗಂಟನ್ನು

ಜಾಣಜಾಣೆಯರೆಲ್ಲ

ಸೋಶಿಯಲ್ ಕನ್ನಡಿಯಲ್ಲಿ

ಹಿಡಿದ್ ಹಿಡಿದು ಸಂಭ್ರಮಿಸಿ

ಟೋಸ್ಟ್ ಮಾಡುವ

ಹೊತ್ತಲ್ಲಿ

ಇಲ್ಲೊಂದು ಪುಟ್ಟ

ಮೂಲೆಯಲಿ

ಸುಮ್ಮಗೆ ಎಲೆ ಬಗ್ಗಿಸಿ

ಮರವೊಂದು

ನಿಂತಿದೆ.

ಏಸಿಯಲಿ ಕುಳಿತು

ಕೀ ಕುಟ್ಟುವವರಿಗೆ

ಬಿಸಿಲ ಅರಿವಿಲ್ಲ

ನೆರಳು ಬೇಕಿಲ್ಲ

ಕಿವಿಗಳಲಿ ಇಯರ್ಫೋನು

ತುರುಕಿ ಜಗದಗಲದ ಸಂಗೀತ

ಕೇಳುವವರಿಗೆ

ಕೊಂಬೆಯಲಿ ಉಲಿವ

ಹಕ್ಕಿದನಿಯ ಗರಜಿಲ್ಲ

ಹಳೆಹಳೆಯವರು

ಕೀ ಒತ್ತದವರು, ಶಾಯಿಯಲದ್ದಿ

ಬರೆದವರು

ಸ್ಕ್ಯಾನು ಮಾಡಿ ಆರ್ಟಿಕಲು

ಕಳಿಸಿದವರು

ಸುಮ್ಮನಿದ್ದಾರೆ, ಮೇಲು ಬರೆಯಲು ಬರುವುದಿಲ್ಲ

ಬಾಣಶೂರರಿಗೆ

ತಿಳಿಯಬೇಕಾದ ದರ್ದಿಲ್ಲ.

ಮರ ಸುಮ್ಮಗಿದೆ.

ಕಡಿದಷ್ಟೂ ಚಿಗುರುವುದು

ಮರದ ಗುಣ.

ಮನುಷ್ಯನದಲ್ಲ.

ತಿರುಗಿ ನೋಡದೆ

ಹೊರಟ ಕ್ರೌರ್ಯಕ್ಕೆ

ಮಾತು ನುಂಗಿ

ನಿಲ್ಲುವುದೆ ಮದ್ದಿರಬಹುದೆ?!

Thursday, August 1, 2013

ಹೊಸ್ತಿಲು

ಹೊಸ್ತಿಲು ದಾಟುತ್ತಿರುತ್ತೇನೆ
ನಡೆದಷ್ಟೂ ಸಾರಿ,
ನಡೆದಷ್ಟೇ ದಾರಿ.
ಹೆಜ್ಜೆ ದಣಿದಾಗ
ಸುದೂರದಿ ಮರದ ನೆರಳು,
ಅಷ್ಟರ ಮಟ್ಟಿನ ಪುಣ್ಯ.

ನೆರೆ ಇಳಿದು
ಕೆಸರು ಕಳೆದು
ಬೇಸಗೆಯಲ್ಲಿ ಬೆಂದು
ಬಿರುಕಾದ
ಕಣಿವೆಯ ಮಡಿಲ ತುಂಬ
ಸಾವಯವ ಕೃಷಿ.
 
ಮುಳ್ಳು ಚುಚ್ಚಿದ ಕಾಲು
ಕಿತ್ತಿಟ್ಟರೆ
ಮೆತ್ತಗೆ ಅಪ್ಪುವ ಹುಲ್ ಹಾಸು
ಕಂಬಳಿ ಹುಳು ತಾಗಿ
ತುರಿಸುತ್ತ ನಡೆವಾಗ
ಹೂವಿಂದ ಹೂವಿಗೆ
ಹಾರುವ ಭೃಂಗ
ನೋಡುತ್ತ
ಕಾಲ ಕಳೆದಿದ್ದು
ಗೊತ್ತಾಗುವುದೇ ಇಲ್ಲ
ಕೂಡಿದ್ದೇನು ಅಂತಲೂ ಗೊತ್ತಾಗಲಿಲ್ಲ
ಕೊಟ್ಟಿದ್ದು ಮರೆಯುವಳಿಗೆ
ಇಸಕೊಳ್ಳಲು ಮುಜುಗರ.

ವರುಷಕ್ಕೊಮ್ಮೆ ದಾಟುವ ಹೊಸ್ತಿಲು
ಎಡವುತ್ತದೆ.
ಕಣ್ಣು ತುಂಬುವಾಗ
ನೆನಪೆಲ್ಲ ಮಸುಕು.

(ಕಣ್ಣೀರೆ ಅಸ್ತ್ರವೆಂದಿದ್ದು ಇದಕ್ಕೇ ಇರಬಹುದು.)

ನಗುವಾಗ ನಕ್ಕು
ಅಳುವಾಗ ಅತ್ತಿದ್ದರೆ
ಅರ್ಧ ದಾರಿ ಮುಗಿಯಿತು
ಎಂದರು ಕವಿ
ನಗುವಾಗ ನಗಲಾಗದೆ
ಅಳುವಾಗ ಅಳಲಾಗದೆ
ಅದಲು ಬದಲಾದವರ
ದಾರಿ ಮುಗಿಯುವುದೆ
ಬರಿದೆ ಸಾಗುವುದೆ?!

ನಡೆದಷ್ಟೂ ದಾರಿ
ನಡೆದಷ್ಟೇ ದಾರಿ.
ಹೊಸ್ತಿಲು ದಾಟುತ್ತಿರುತ್ತೇನೆ.
ಎಡವಿದಾಗೆಲ್ಲ
ಒಂದು ಭಾವಸ್ರೋತ,
.....ಕವಿತ.
.....ಅನುಗ್ರಹೀತ.

[ಕಂಬನಿ ಬದುಕು.
ಕವಿತೆ ಕರವಸ್ತ್ರ.]


("ಅಳುವಾಗ ಅತ್ತು ನಗುವಾಗ ನಕ್ಕು ಮುಗಿದಿತ್ತು ಅರ್ಧ ದಾರಿ" ಮತ್ತು "ಕಂಬನಿ ಬದುಕು ಕವಿತೆ ಕರವಸ್ತ್ರ" ಇವು ಕೆ.ಎಸ್.ನ ಅವರ ಕವಿತೆಸಾಲುಗಳು.)

Tuesday, July 2, 2013

ಹೂ-ಬಲ...

ಸಂಜೆಯಿಡೀ..
ಭೋರೆಂದು ಸುರಿವ ಮಳೆಗೆ
ಗೋಣು ಬಗ್ಗಿಸಿ ನಿಂತ
ಪಾರಿಜಾತ ಮರದ
ಗೆಲ್ಲುಗಳಲ್ಲಿ ಅಲ್ಲಲ್ಲೇ
ಅರೆಬಿರಿವ ಪಾರಿಜಾತ..

ಹೂಬಿರಿವ ಸದ್ದು ಕೇಳುವುದಿಲ್ಲ,
ಕಿವಿಗೆ ಸ್ಕಾರ್ಫ್ ಬಿಗಿಯಲಾಗಿದೆ.

ಸುರಿವ ಮಳೆಯ ತಡೆದ
ಎಳೆಮೊಗ್ಗ ಎಸಳುಗಳು
ಬೆಳಗು ಮುಂಚಿನ ನಸುಗಾಳಿಗೆ
ಉದುರಿದವು ನೆಲದೊಡಲಿಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ

ಗಂಧಶಾಲಿನೀ ಬೆಳಗು
ಎಂದು ಕವಿಯ ಮೆಸೇಜು,
ದಾರಿ ಬದಿಯ ಮರದ ಕೆಳಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ
ತುಂಬುತ್ತಿರುವುದು
ಆಯುವ ಅಜ್ಜನ ಜಾಲರಿಬುಟ್ಟಿ.

ಗಿಡದಿಂದ, ನೆಲದಿಂದ,
ಬುಟ್ಟಿಯಿಂದ, ದೇವರ ಪದತಳದಿಂದ
ಮಣ್ಣು ಸೇರಿದ ಹೂವಿ-
ನ ಗಂಧ ಗಾಳಿ ಪಾಲಾದರೂ
ಭಾವಕೋಶದಿ ನಿತ್ಯ ಗಂಧಿ.

ಸುರಿಮಳೆಗೆ ಬಗ್ಗಿ ನಿಂತು
ಭರಿಸಿದ ಹೂವು
ನಸುಗಾಳಿಗೆ ಉದುರಿತು
ಎಂಬುದು
ಮಾರಲ್ ಆಫ್ ದ ಸ್ಟೋರಿ.

Tuesday, April 9, 2013

ಬಕೆಟ್ ಲಿಸ್ಟ್

ವಯಸ್ಸಾಯ್ತು
ಅಂತ ಹೇಳುವ ಕ್ಯಾಲೆಂಡರು,
ಇನ್ ಬಾಕ್ಸಲ್ಲಿ ಸ್ಮೈಲಿಗಳಿಂದಲೇ
ತುಂಬಿ ತುಳುಕಿರುವ
ಶುಭ ಸಂದೇಶಗಳು.
ಅವಳು ಕೆನ್ನೆಗಿತ್ತ ಒಂದು
ಹೆಚ್ಚುವರಿ ಮುತ್ತು
ಎಲ್ಲ ನೆನಪಿಸುತ್ತಿವೆ
ಹೌದು ವಯಸ್ಸಾಯ್ತು
ಅಷ್ಟೇನು ಹೆಚ್ಚಲ್ಲ ಅಂದ್ಕೊಂಡ್ರೂ
ವಾರ್ಷಿಕ ಪ್ಯಾಕೇಜಿನಲ್ಲಿ
ಚೆಕಪ್ ಮಾಡಿಸಬೇಕಾಗುವಷ್ಟು
ತಮಾಷಿ ಅಂದ್ರೆ
ನನ್ನ ಲಿಸ್ಟಿನ ಬಕೆಟ್ಟು ದೊಡ್ಡದಿದೆ.
ಒದೆಯೋಕ್ಕೆ ಕಸುವಿದ್ರೆ ಮಾತ್ರ
ಸುಸೂತ್ರ ಪಯಣ.
ಇಷ್ಟ್ ವರ್ಷಕ್ಕೂ ಆಸೆ ತೀರಲಿಲ್ವೆ
ಅನ್ನಕೂಡದು ನೀವು
ಈ ಬಕೆಟ್ಟಿನ ಅಳತೆ ಸಿಕ್ಕಿದ್ದು
ಹಿಂದೆ ಪೂರೈಸಿದ ಮಹದಾಸೆಗಳ
ಬಕೆಟ್ಟನ್ನು ನೋಡಿಯೇ.
ಅವತ್ತೆಂದೋ ಬರೆದ ನೆನಪು
ಅಡಿಗರ ಸಾಲು ಸಾಲುಗಳಲ್ಲೆ
ಪಸರಿಸುತ್ತಿರುವ ಬದುಕು
ಆಶೆಯೆಂಬ ತಳವೊಡೆದ ದೋಣಿ..
ಒಡೆದದ್ದು ಗೊತ್ತಿದ್ದರೆ ದೋಣಿ ಮುಳುಗುತ್ತದೆ
ಗೊತ್ತಾಗದ ಹಾಗೆ
ಹುಟ್ಟು ಹಾಕುವುದು ಕಲಿತಿದ್ದು
ಅಮ್ಮನೊಳಗೆ ಕುಡಿಯೊಡೆದಾಗಲೆ
ಇರಬೇಕು.
ಇಲ್ಲಿ ಬಂದ ಮೇಲೆ
ಬರಿದೆ ಬೆರಗು.. ಅಷ್ಟಿಷ್ಟು ಕೊರಗು.
ಇಲ್ಲ ಬೇಸರವಿಲ್ಲ.
ಮತ್ತೆ ಮೊದಲಿಂದ ಶುರು ಮಾಡೆಂದರೆ
ಅದೇ ಹೆಜ್ಜೆಗಳೇ
ಅದೇ ತಿರುವೇ
ಅದೇ ದಾರಿಯೇ.
ಎಡವದೆಯೆ ಮೈಗಾಯ ಒಡೆಯದೆಯೆ
ನಡೆಯ ಕಲಿತವರಾರು ಅಂದಂತೆ ಡೀವೀಜಿ
ಆ ಖುಶೀ, ಪೆದ್ದುತನ, ಮಂಕು, ಹಟ
ಎಡವಟ್ಟು, ಹಳವಂಡಗಳ
ಹೊರತಾಗಿ ಹೇಗಿರಲಿ ನಾನು
ಅಳುವಿನ ಜಲಪಾತವೇ ಇದ್ದರೂ
ತಡೆಯಲು ತಕ್ಕ ಬಂಡೆ ಗುಡ್ಡಗಳ
ಇತ್ತದ್ದೂ ಈ ಬದುಕೇ
ನೋಟ ಚಂದವಿದೆ
ಬೇಸರ ಮೂಡಿದರೆ ತಿರುಗಿದಲ್ಲೆಲ್ಲ
ಹೊಸನೋಟ.
ಗೋಡೆಗಳಿಲ್ಲ ತೆರೆದ ಬಾಗಿಲು
ಹೋದ ಜನ್ಮದ ಪುಣ್ಯ
ಸುತ್ತಲೂ ಆಕಾಶಚುಂಬಿ ಕಟ್ಟಡಗಳೂ ಇಲ್ಲ.
ವಿಷ್ಯ ಏನಪಾಂದ್ರೆ
ವಯಸ್ಸಾಯ್ತು
ಎಲ್ರಿಗೂ ಆಗತ್ತೆ.
ಆದರೆ ವಯಸ್ಸಿನ ಜತೆಗೆ ನನ್ನ ಬಕೆಟ್ ಲಿಸ್ಟೂ ಬೆಳೆದ್ ಬಿಟ್ಟಿದೆ.. :)