Friday, July 9, 2010

ನೆನಪು ನೇವರಿಕೆ

ಅಮ್ಮನಿಲ್ಲದೆ ನಿದ್ದೆ ಬರಲೊಲ್ಲದೆಂಬವಳ
ಮಗ್ಗುಲಿಗೆ ಅವುಚಿ ಮಲಗಿಸಿ;
ಶಾಲೆಯಂಗಳದ ಧೂಳು
ಹೊದ್ದು ಮನೆಗೆ ಬರುವವಳ
ಬಾಯಿ ಬಡಿಗೆಗೆ
ಎರಡು ಹಿಡಿ ಅವಲಕ್ಕಿ
ಮೇಲೆ ಮೊಸರು ಬೆಲ್ಲ ಕರುಣಿಸಿ;
ರಾತ್ರಿಯಿಡೀ ಯಕ್ಷಗಾನ ನೋಡಿ
ತಲೆನೋವು ಬಂತೇ
ಅರ್ಧ ಕಡಿ ನಿಂಬೆಹಣ್ಣೂ
ಎರಡು ಚಮಚ ಕೊಬ್ರಿ ಎಣ್ಣೆ
ಹಚ್ಚಿ ತಿಕ್ಕಿ,
ಬಿಸಿ ಬಿಸಿ ಸುರಿನೀರ ತಲೆಸ್ನಾನ;
ಕುಣಿಕುಣಿದು ನಲಿದ ಕಾಲು ನೋವೆ
ರಬ್ನಿಸಾಲ್ ಹಚ್ಚಿ ತಿಕ್ಕಿ,
ಹಳೆಸೀರೆಯಿಂದ ಕಿತ್ತ ಫಾಲ್ಸ್
ಸುತ್ತಿ;
ಇವತ್ತು ಪರೀಕ್ಷೆ,
ಬೆಳಗಿಂಜಾವಕ್ಕೆದ್ದು
ಓದುತ್ತ ಕೂತವಳ
ಕೈಗೆ ಬಿಸಿಬಿಸಿ ಚಾ ಹಿಡಿಸಿ;
ಮಧ್ಯಾಹ್ನದ ಊಟ ಗಡದ್ದಾಯಿತೇ
ಮಡಿಚಿ ರೆಡಿ ಮಾಡಿಟ್ಟ
ಕವಳದಲ್ಲರ್ಧ ಸಲ್ಲಿಸಿ;
ಬೆಳೆಸಿದವಳು,
ಬೆಳೆದು ನಿಂತ ಮೇಲೆ
ಅರೆಬೆರಗು,ಅರೆಮೆಚ್ಚುಗೆ,ಉಳಿದೆಲ್ಲ ಪ್ರೀತಿ
ಎರೆದವಳು,
ವರ್ಷವೆರಡರ ಹಿಂದೆ
ಯಾತ್ರೆ ಮುಗಿಸಿ ಹೋಗಿಬಿಟ್ಟಳು.
ಬಿಳಿಬಿಳಿ ಕಣ್ಣು,ಪುಟ್ಟ ಜಡೆ,
ಸುಕ್ಕು ಮೈ, ಮುಗ್ಧ ನಗು
ಎಲ್ಲ ಪ್ರೀತ್ಯಾದರಗಳ
ನೆನಪಿನಂಚಿಗೆ ಹೊಳೆದು
ನಿಲ್ಲುವುದು
ಹೊರಡುವ ಮೊದಲು
ಕಿರಿಹಿಡಿದು ನೋಡಿದ ನೋಟ
ಏನು ಹೇಳಬೇಕಿತ್ತು ಅಮ್ಮಮ್ಮಾ?!
ನನಗೆ ಈಗ ಅನ್ನಿಸುತ್ತಿರುವುದೆಲ್ಲ
ನೀನು ಹೇಳದೆ ಉಳಿದಿದ್ದಾ!
ಆಚೆಮೊನ್ನೆ ತಿಥಿಯಾಯಿತು,
ನಿನ್ನೆ ವಡೆ,ಸಿಹಿ ಸಿಕ್ಕಿತು.

ಹತ್ತಕ್ಕೆ ಕಳಕೊಂಡ ಮುಗ್ಧತೆಯ
ಸಾವಿನಂಚು ಮರಳಿ ಕೊಟ್ಟಿತೆ?
ಆಟವಾಡುವ ಮನಸ ಜಗ್ಗಿ ನಿಲ್ಲ್ಲಿಸಿ
ಕೆಲಸಕೆಳೆದ ಕೈಯನ್ನ
ವೃದ್ಧಾಪ್ಯ ಕ್ಷಮಿಸಬಹುದೆ?
ಬದುಕು ಸಲ್ಲಿಸದೆ ಹೋಗಿದ್ದನ್ನು
ತಿಥಿಯಲ್ಲಿ ಪಡೆಯಬಹುದೆ?
ಎಲ್ಲ ವಿಶೇಷ ಸಿಟ್ಟು,ದ್ವೇಷಗಳು
ಕೊನೆಯ ದಿನಗಳಲ್ಲಿ
ನಿನ್ನ "ಹೋಕ್ಯಳ್ಲಿ ಬಿಡು"ವಿನಲ್ಲಿ
ಒಂದೊಂದಾಗಿ ಕಳಚಿಕೊಂಡಾಗ
ಹೀಗಂದುಕೊಂಡೆ,
ಕಾಲ ಮಾಗುತ್ತಾ ಕಳೆಯುತ್ತದೆ!

Thursday, March 4, 2010

ಅಮ್ತಾತ!

ಹೋದವಾರ ಒಂದುದಿನ ರಾತ್ರಿಯೂಟ ಮಾಡುತ್ತಿದ್ದೆ. ಅಮ್ಮ ಮಾಡಿಕೊಟ್ಟ ಮಾವಿನಕಾಯಿಗೊಜ್ಜಿನ ಕೊನೆಯ ತುತ್ತುಗಳನ್ನು ಸವಿಯುತ್ತ ಕೂತಿದ್ದೆ. ರಾತ್ರಿ ಹನ್ನೊಂದು ಗಂಟೆ. ನನ್ನ ಮುದ್ದು ರಾಕ್ಷಸಿಗೆ ಊಟ ಮಾಡಿಸಿ, ನೀರು ಕುಡಿಸಿ, ಅಷ್ಟೊತ್ತಿಗೆ ಮನೆಗೆ ಬಂದ ಅವಳ ಅಪ್ಪನಿಗೆ ಊಟ ಬಡಿಸಿ, ಸಂಜೆಯಿಂದ ನಡೆದ ಅವಳ ಆಟಗಳ ಸಮಗ್ರ ವರದಿಯನ್ನು ಒಪ್ಪಿಸಿ ಮುಗಿಸಿ, ನನ್ನ ತಟ್ಟೆಗೆ ಬಡಿಸಿಕೊಳ್ಳುವಾಗ ಅಷ್ಟೊತ್ತಾಗಿತ್ತು.
ಅಪ್ಪನನ್ನ ಒಲಿಸಿ ಮುದ್ದಿಸಿ ತೂಗುಯ್ಯಾಲೆ ಹತ್ತಿಸಿ, ತಾನು ತೊಡೆ ಹತ್ತಿ ಅವಳು ಕೂರುವ ಮರೆವಿನ ಕ್ಷಣಗಳಲ್ಲಿ ನಾನು ಊಟ ಶುರು ಮಾಡಿದ್ದೆ. ಅವಳಿಷ್ಟದ ಒಂದೆರಡು ಹಾಡು ಮುಗಿದವು. ಕಮಲ ನಯನ ಮಾಧವಾ..; ಚನ್ನಪ್ಪ ಚನ್ನಗೌಡ; ನಿಂಬೀಯಾ ಬನಾದ ಮ್ಯಾಗ ಎಲ್ಲ ಆಯಿತು.ಅಷ್ಟೊತ್ತಿಗೆ ಅಲ್ಲೇ ಕುರ್ಚಿಯ ಮೇಲೆ ಕೂತಿದ್ದ ಮೆತ್ತನೆ ನಾಯಿ ನೆನಪಾಗಿ ಅದನ್ನು ಎತ್ತಿಸಿಕೊಂಡು ತೊಡೆಯ ಮೇಲೆ ಇಟ್ಟುಕೊಂಡಾಯಿತು. ಒಂದೆರಡು ಜೀಕು ಮುಗಿಯಿತು. ಬೌ ಬೌ ಸಾಕಾಯಿತು. ಅದನ್ನು ಕೆಳಗೆಸೆದು ಅವಳಷ್ಟೇ ಉದ್ದದ ಐಶು ಗೊಂಬೆಯನ್ನು ಎತ್ತಿಸಿಕೊಂಡಾಯಿತು. ಮತ್ತೊಂದಿಷ್ಟು ತೂಗುವಿಕೆ. ಇನ್ನೆರಡು ಹಾಡು. ಈಗಲಂತೂ ತೊಡೆಯ ಮೇಲೆ ಎಲ್ಲ ತಾಳಗಳೂ ಒಟ್ಟಿಗೆ ಮೇಳ ನಡೆಸಿಯಾಯಿತು. ಆ ಹಾಡು ಮುಗಿದ ಕೂಡಲೆ ಮತ್ತೆ ಅದನ್ನೆ ಹಾಡಲು ಅಪ್ಪನನ್ನು ಪೀಡಿಸಿಯಾಯಿತು. ಸರಿ ಮತ್ತೆ ಹೇಳುತ್ತಾನೆ ಅಪ್ಪ ರಾಗವಾಗಿ -
- ಪಂಡರಾಪುರವೆಂಬ ದೊಡ್ದ ನಗರ
ಅಲ್ಲಿ ವಿಠೋಬನೆಂಬ ಬಲು ಸಾಹುಕಾರ
ವಿಠೋಬನಿರುವುದು ನದಿ ತೀರ
ಅಲ್ಲಿ ಪಂಡರಿ ಭಜನೆಯ ವ್ಯಾಪಾರ...
ಸುಮ್ಮನೆ ಕುಳಿತಿರಲಾಗದ ನಾನು ಇನ್ನೇನು ಕಣ್ಣು ಮುಚ್ಚುತಿದ್ದ ಅವಳನ್ನೇ ನೋಡುತ್ತಾ ಅಪ್ಪನ ಹಾಡಿಗೆ ನನ್ನದೊಂದು ಉಲಿ ಸೇರಿಸಿಬಿಟ್ಟೆ.
ಗುಬ್ಬಕ್ಕನಿರುವುದು ನದಿತೀರ -ಅಲ್ಲಿ ಟುಪ್ಪೂ ಭಜನೆಯ ವ್ಯಾಪಾರ...
ಅಷ್ಟೇ ಅಪ್ಪನ ತೊಡೆಯ ಮೇಲಿಂದ ಟುಪ್ಪೂ ಜೀಕಿಕೊಂಡು ಇಳಿದಾಯಿತು. ಇನ್ನೇನು ಮುಚ್ಚುವಂತಿದ್ದ ಕಣ್ಣುಗಳು ಮತ್ತೆ ದೊಡ್ದ ದೊಡ್ಡಕ್ಕೆ ಹೂವು ಪೂರ್ತಿ ಅರಳಿದಂತೆ ಅರಳಿಕೊಂಡವು. ಅರ್ಧ ರಾತ್ರಿಗರಳುವ ಹೂವು ಯಾವುದದು ಬ್ರಹ್ಮಕಮಲವಲ್ಲವಾ ಅದರ ಘಮವೇ ಆವರಿಸಿಕೊಂಡಂತಾಯಿತು. ಸೊಳ್ಳೆ ಕಚ್ಚದಿರಲಿ ಅಂತ ಹಚ್ಚಿದ್ದ ಜಾನ್ಸನ್ ಬೇಬಿ ಎಣ್ಣೆಯ ಮೆಲು ಆಹ್ಲಾದ ನನ್ನನ್ನ ಸುತ್ತಿಕೊಂಡಿತು. ನನ್ನ ಹತ್ತಿರ ಓಡಿಬಂದು ಕುರ್ಚಿ ಹತ್ತಲು ಒಂದು ಕಾಲು ಮೇಲೆತ್ತಿದಳು.
ಅಷ್ಟೇ ಹಂಗೇ ಸ್ಟಾಚ್ಯೂ ಭಂಗಿಯಲ್ಲಿ ನಿಂತುಕೊಂಡು ಒಂದು ಕೈ ಹಿಂದಕ್ಕೆ ಇಟ್ಟುಕೊಂಡು ಮುದ್ದಾಗಿ ಉಲಿದಳು - ಅಮ್ತಾತ..ನಾನು ಹೌದು ಟುಪ್ಪೂ ತಾತ ಹೈದರಾಬಾದಲ್ಲಿ ಇದಾರೆ ಇಲ್ಲಿಲ್ಲ ಟಾssಟ ಅಂದೆ.
ಅವಳು ತಲೆಯಲ್ಲಾಡಿಸಿ ಮತ್ತೆ ಉಲಿದಳು - ಅಮ್ ತಾತ. ಏನದು ಎಂದು ಕೇಳಿದೆ ಅದೇ ಉಲಿ - ಅಮ್ ತಾತ.
ಏನಿರಬಹುದೋ ಗೊತ್ತಾಗಲಿಲ್ಲ. ಏನು ಹಂಗಂದ್ರೆ ಮತ್ತೆ ಅವಳನ್ನೆ ಕೇಳಿದೆ. ಸಣ್ಣಗೆ ನಗುತ್ತ ಮತ್ತೆ ಉಲಿದಳು - ಅಮ್ ತಾತ. ನನ್ನ ಮುಖ ನೋಡುತ್ತಲೇ ಇದ್ದಳು. ನಂಗೆ ಗೊತ್ತಾಗಲಿಲ್ಲ ಅನ್ನುವುದು ಅವಳಿಗೆ ಗೊತ್ತಾಯಿತು.ಅಲ್ಲೆ ನನ್ನ ಬದಿಯಲ್ಲಿ ಇಟ್ಟುಕೊಂಡಿದ್ದ ಪುಸ್ತಕ ತೋರಿಸುತ್ತ ಹೇಳಿದಳು ಅಮ್ ತಾತ.
ಅಲ್ಲಿದ್ದದ್ದು ಜೋಗಿಯವರ ಕಥಾಸಮಯ ಪುಸ್ತಕ. ಅದರ ಮುಖಪುಟದಲ್ಲಿ ಲಂಕಾದಹನದಲ್ಲಿ ಕಾಲು ಮೇಲೆತ್ತಿ ಬಾಲ ಎತ್ತರಿಸಿ ನಿಂತ ಹನುಮಂತ. ನನ್ನ ಗುಬ್ಬಕ್ಕ ಉಲಿಯುತ್ತಿರುವುದು ಅದನ್ನೇ - ಅಂತಾತ.. ಗೊತ್ತಾಗಲಿ ಅಂತ ಕೈ ಹಿಂದಕ್ಕೆ ಇಟ್ಟುಕೊಂಡು ಬಾಲವನ್ನ ಬೇರೆ ಅಭಿನಯಿಸಿ ತೋರಿಸುತ್ತಿದ್ದಾಳೆ.
ಅಯ್ಯೋ ಮಗುವೆ ಆದರೂ ಗೊತ್ತಾಗಲಿಲ್ಲವಲ್ಲ ಅಂದುಕೊಂಡು ಹನುಮಂತನಾ ಟುಪ್ಪೂ ಅಂದ ಕೂಡಲೆ ಮುಖದಲ್ಲಿ ನಗೆ ಝಗ್ಗನೆ ಬೆಳಕಾಯಿತು. ಅವಳ ಕೆನ್ನೆಯ ಮೇಲೆ ನನ್ನ ತುಟಿಗಳಿದ್ದವು ಅನ್ನುವುದನ್ನೇನು ಹೇಳುವುದು ಬೇಡ ಅಲ್ಲವಾ?
ಟುಪ್ಪೂ 15ತಿಂಗಳ ಪೋರಿ ಈ ವಾರವಿಡೀ ತುಂಬ ಕೆಲಸ, ಮನೆಗೆ ಬಂದೂ ಮಾಡುವಷ್ಟು. ತಲೆ ಚಿಟ್ಟು ಹಿಡಿದ ಕ್ಷಣಗಳಲ್ಲಿ ನನಗೆ ನಾನೇ "ಅಂತಾತ" ಅಂತ ಹೇಳಿಕೊಂಡು ಹಗುರಾಗುತ್ತಾ ಬೇಸರದ ಲಂಕೆಯ ಚಡಪಡಿಕೆಗಳನ್ನ ಸುಟ್ಟು ಹಾಕಲು ಅಂತಾತನ ಸಹಾಯ ಕೋರುತ್ತೇನೆ. ಈವಾರ ಅವಳ ತೊದಲು ಬದಲಾಗಿದೆ. ಈಗ ಅಮ್ ತಾತ, ಹಮಾಂತ್ಕನಾಗಿದ್ದಾನೆ. :) ಇದು ಈ ವಾರದ ಕತೆ - ಮುಂದಿನ ವಾರ ಕಪಿಸೇನೆಯೇ ಬಂದರೂ ಬರಬಹುದು. ವಾಲಿ ಸುಗ್ರೀವ ಅಲ್ಲೇ ಮರೆಯಲ್ಲಿ ಕಾಯುತ್ತಿರಬಹುದು..! ಮತ್ತು ನಮ್ಮನೆಯ ಯಾವ ವಸ್ತು ದಹನವಾಗುತ್ತದೆಯೋ ಗೊತ್ತಿಲ್ಲ. :)

-ಪ್ರೀತಿಯಿಂದ,
ಸಿಂಧು

Friday, February 12, 2010

ಅರಿಕೆ

ಎಷ್ಟು ಪ್ರೀತಿಸ ಬಹುದೋ ನಿನ್ನನ್ನು
ಅದಕ್ಕಿಂತ ಜಾಸ್ತಿಯೇ
ಪ್ರೀತಿಸುವೆ ನಾನು ನಿನ್ನನ್ನು,
ಇದು ಗೊತ್ತಾಗಿದ್ದು
ನಿನ್ನೆ ನಾವಿಬ್ಬರೂ
ಹುಚ್ಚಾಪಟ್ಟೆ ಜಗಳವಾಡಿ
ಮುಸುಡಿ ಮೂರುಕಡೆ ಮಾಡಿಕೊಂಡು
ಕೂತಾಗ.

ಯೋಚನೆಯ
ಅಲೆಗಳ ಮೇಲೆ
ಎದೆಯೊಸಗೆ ಮೆಲ್ಲಗೆ ಮುಳುಗೇಳುತ್ತಲಿದೆ.

ನಿನ್ನ
ಸಿಟ್ಟಿನಿಂದ ಉಬ್ಬಿದ ಮುಖ
ಕೆಂಪಿಟ್ಟ ಮೂಗು
ಒಳಗೊಳಗೆ ಬೇಯಿಸುವ ಕುದಿ
ಎಲ್ಲವನ್ನೂ
ಸಂತೈಸುವ ಪ್ರೀತಿ
ನನ್ನ ಇದೀಗಷ್ಟೇ ಸಮಾಧಾನಿಸಿ
ನಿನ್ನೆಡೆಗೇ ಹೊರಟಿದ್ದಾಳೆ
ಒಂದೆರಡು ಕ್ಷಣ ತಾಳು.

ಜಗತ್ತು ಆಡಿಕೊಂಡು ನಕ್ಕಾಗ
ಜಗ್ಗದೆ
ನನ್ನ ಜೊತೆಗೆ ಬಂದವನೆ,
ನೀನೇ ಅಲ್ಲವೆ ಉಲಿದಿದ್ದು..
"ಲಕ್ಷಾಂತರರು ಹೊರಡುವ ಪಯಣದ
ಗುರಿ ತಲುಪಲು
ಸಾಧ್ಯವಾಗುವುದು ಎಲ್ಲೋ
ಒಬ್ಬಿಬ್ಬರಿಗೆ ಮಾತ್ರ "
ಬದುಕಿನ ವಿಲಕ್ಷಣ ಪಯಣದಲ್ಲಿ
ಕಂಗೆಡದೆ ಉಳಿಯುವುದು ಪ್ರೇಮಿ ಮಾತ್ರ!

Monday, January 18, 2010

ಕವಡೆ ಜ್ಯೋತಿಷ್ಯ..!!!

ಕವಡೆ ಬೀಸಿದಾಗಲೆಲ್ಲ
ಬಿದ್ದಿದ್ದು ವಚ್ಚಿ,
ಒಂದೊಂದೇ ಹೆಜ್ಜೆ ಇಟ್ಟು
ಮುನ್ನಡೆದ ಬದುಕ
ಹಾದಿಯ ತುಂಬ
ಬಿಸಿಲು ನೆರಳಾಟ;

ಯಾರದೋ ಕಣ್ ಸೆಳೆದು,
ಕವಡೆ ಜೋತಿಷ ನುಡಿಯೆ,
ಬರುವ ದಕ್ಷಿಣೆಗೆ
ಸರಿಹೋದೀತು
ಸೆಟ್ಟರಂಗಡಿಯ ಲೆಕ್ಕ.
ದಿನಕೊಂದು ಹೊತ್ತು ಉಂಡರೆ
ಅದೇ ಸುಖ;
ಕವಡೆಯ ಬೀಸಿ
ತಮ್ಮ ನಾಳೆಯ ತಾವೆ ತಿಳಿವವರು
ಕೂರುವರು ಇಲ್ಯಾಕ?!

ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ -
ಇಂದೇ!
ತಿಳಿಯುವ ತಿಣುಕಾಟವಿಲ್ಲ
ಬರಿದೆ
ಬದುಕಬೇಕಿದೆ!

ಜೋತಿಷ ಕೇಳಿದ ಮಂದಿ
ಪಾರ್ಕು ದಾಟುವ ಮುನ್ನವೆ
ಮರೆತವರು;
ನಾನು ಮರೆಯುವ ಹಾಗಿಲ್ಲ
ನನ್ನ ಮೂಗಿಗೇ ಕವಡೆ...
ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ;
ಉಂಹೂಂ -
ಬರೀ ವಚ್ಚಿ,
ಪ್ರತೀ ಸಲಿಯೂ
ಬೆರಳಸಂದಿಯಲೆ ನುಸಿದು ಹೋಗುವ
ಗಿಚ್ಚಿ..

Wednesday, December 30, 2009

ನೋವಿನೊಡಲಲಿ ನಲಿವಿನ ಹೂವು..

ಎಲ್ಲ ಕತ್ತಲ ಕೊನೆಯಲ್ಲೊಂದು ಬೆಳಕಿನ ಕೋಲು, ಬೇಸರದ ಕ್ಷಣಗಳ ಭಾರದ ಮೋಡವ ಇಳುಹಲು ಸುರಿವ ಮಳೆಯ ಆಹ್ಲಾದ,
ಇದೆ ಅಲ್ಲವೆ ಬದುಕು ಎಂಬ ಅರಿವು ಮತ್ತು ಇದೆಯೆ ಬದುಕು ಎಂಬ ಅಚ್ಚರಿ.
ನಾನು ತುಂಬ ಇಷ್ಟಪಟ್ಟ ಅಶ್ವತ್ಥರು ಮತ್ತು ಇಷ್ಟವಾಗಿದ್ದ ವಿಷ್ಣು ಇಬ್ಬರ ನಿರ್ಗಮನದ ಸುದ್ದಿಯ ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಹೊಳೆಯುತ್ತಿರುವುದು ಇನ್ನೊಂದು ಸುದ್ದಿ - ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
http://kendasampige.com/article.php?id=2953

ನೋವುಗಳನ್ನ ಮೀರುವ ಶಕ್ತಿಯನ್ನ ಬಯಸುತ್ತಾ,

ಪ್ರೀತಿಯಿಂದ,
ಸಿಂಧು

Thursday, December 24, 2009

ಗುಡಿಸಿಲ್ ಬಾಗಿಲ್ ಬೀಗದ್ ಹಂಗೇ ಮನಸಿನ್ ರಾಗಾನೂ...

ಉಪಯೋಗಿಸದೆ ಇಟ್ಟರೆ ಎಲ್ಲವಕ್ಕೂ ತುಕ್ಕು ಹಿಡಿಯುತ್ತದೆ ಅಂತ ಅದ್ಯಾವುದೋ ಕಾಲದಲ್ಲಿ ಕ್ಲಾಸಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಾಗ ಕೇಳಿದ ನೆನಪು. ಇನ್ಯಾವತ್ತೋ ಈ ಬಗ್ಗೆ ಪುಟಗಟ್ಟಲೆ ಬರೆದು ೫ ಮಾರ್ಕು ಗಳಿಸಲು ಹೋರಾಡಿದ್ದ ನೆನಪು. ಬ್ಲಡ್ಡೀ ಕರ್ರೋಸನ್ ಅಂತ ಮಾಸ್ತರರೊಬ್ಬರು ವೀರಾವೇಶಾದಿಂದ ಗಂಟೆಗಟ್ಟಲೆ ಕೊರೆಯುವುದನ್ನ ಅಣಕಿಸಿ ಮುಸಿಮುಸಿ ನಕ್ಕ ನೆನಪು ಇಲ್ಲೇ ಬಗಲಲ್ಲಿ ಹಚ್ಚಗಿದೆ.

ಈ ಧಾವಂತದ ಬದುಕಿನಲ್ಲಿ – ಸುಮ್ಮನಿದ್ದರೆ ಪಕ್ಕದಲ್ಲಿ ಧಾವಿಸುವವನು ನಿನ್ನ ಮೇಲೆಯೇ ಹಾದು ಹೋಗುತ್ತಾರೆ ಅದಕ್ಕಾಗಿ ನೀನೂ ಧಾವಿಸುತ್ತಿರಬೇಕು ಎಂಬ – ನಿಯಮಗಳ ಬದುಕಿನಲ್ಲಿ ಮಾರ್ದವತೆಗೆ ತುಕ್ಕು ಹಿಡಿದಿದೆ.
ಈಗಷ್ಟೇ ಸಂಜೆಗತ್ತಲು ಕವಿಯುವ ಮೊದಲು ಮಿನರ್ವಾದಿಂದ ಹೊರಟು ಗಾಂಧಿಬಜಾರಿನವರೆಗೂ ಸಾವಧಾನದಿಂದ ಬಂದ ನಡಿಗೆಯ ನೆನಪು ಹಾಗೆ ಇಲ್ಲಿ ಆರದೆ ಕೂತಿದೆ.
ಇವತ್ತು ಸಂಜೆ ಇಲ್ಲೆ ಮನೆಯಾಚೆ ಇರುವ ಪಾರ್ಕಿಗೆ ಹೋಗಲು ಸಮಯವಿಲ್ಲ, ಹೋಗಲೇಬೇಕಿದ್ದರೆ ಬೈಕು ಬೇಕು. ನಡಿಗೆಯ ಆಮೆಓಟವನ್ನ ಹಿಂದೆ ಹಾಕಿ ಸಮಯವಿಲ್ಲದ ಮೊಲ ಓಡಿಹೋಗುತ್ತಿದೆ.
ಅದಕ್ಕೆ ಗೊತ್ತಿದೆಯಾ ಈ ಓಡುವಿಕೆಯ ಕೊನೆಗೆ ಎದ್ದು ನಿಲ್ಲಲೂ ತ್ರಾಣವಿರುವುದಿಲ್ಲ ಅಂತ?!

ಇವಳ ಮಿಂಚುಕಣ್ಣು ಅವತ್ತು ಮಿಂಚಿದ್ದರೆ ಅದಕ್ಕೆ ಅವನೇ ಕಾರಣ.
ಇವತ್ತು ಅವಳ ಮಿಂಚು ಕಣ್ಣು ಕುಕ್ಕುತಿದ್ದರೆ ಅದಕ್ಕೂ ಅವನೇ ಕಾರಣ.
ಎರಡು ಮಿಂಚುಗಳ ನಡುವೆ ಕಳೆದುಕೊಂಡಿದ್ದೇನು.
ಮಿಂಚು ಕಂಡು ರೋಮಾಂಚನಗೊಳ್ಳುವುದನ್ನೇ?
ಕಳೆದುಕೊಳ್ಳುವಿಕೆ ಮಾತ್ರ ಅಕಾರಣ!
ಹೊಸತೆಂದರೇನು? ಬರಿಯ ಚಿಗುರು ಮಾತ್ರವೇ? ಬೇರಲ್ಲಿರುವುದೆಲ್ಲ ಹಳೆಯದೇ ಹಾಗಾದರೆ?!
ಬದಲಾವಣೆಯ ಬದುಕಿನಲ್ಲಿ ಬದಲಾಗದೆ ಉಳಿಯುವುದೇನು?
ತೀರದ ಆಶೆಗಳೇ?

ಜೊತೆಜೊತೆಯ ಹೆಜ್ಜೆ, ಎಷ್ಟೇ ಹತ್ತಿರವಾಗಿಟ್ಟರೂ
ಕೊನೆಗೆ ಯಾಕೆ ಅನಿಸುತ್ತದೆ
ದೋಣಿಯೊಳಗೆ ನೀನೂ.... ಕರೆಯ ಮೇಲೆ ನಾನೂ...?!
ಎಲ್ಲ ಗೊಂದಲಗಳ ಉತ್ತರದ ಮ್ಯಾಪು ಚಾರಣದಲ್ಲಿದೆಯೇ?
ಆರೋಹಣದ ಹಾದಿಯ ಮೂಲ ಕಣಿವೆಯಲ್ಲಂತೆ ಹೌದೆ?
ಸೇತುವೆಯಾದ ಮಾತು ಗೋಡೆಯಾದ ಮೇಲೆ
ಬೇಸರಾಗಿದೆ ಮನಕೆ
ಇಂದಿನ ತುಂಬಾ ಅಂದಿನ ನೆನಕೆ.

ಮತ್ತೊಮ್ಮೆ ನೆನಪಿಸಿಕೊಳ್ಳಬಯಸುತ್ತೇನೆ. ಮತ್ತೆ ಮತ್ತೆ ಕನಸುತ್ತೇನೆ;
ಅಂದು – ಇರುಳಿನಲ್ಲೂ ಬೆಳಗು
ಕತ್ತಲಿಲ್ಲಿ ಒಳಗೂ ಹೊರಗೂ!

ಇಷ್ಟೆಲ್ಲ ಕನವರಿಸಿಯೂ, ಎಲ್ಲದರ ಮೇಲೆ ಬೇಸರಿಸಿಕೊಂಡೂ,
ತುಂಬು ಕೃತಜ್ಞತೆ ನನಗೆ,
ಅಂದಿಗಾದರೂ ದಕ್ಕಿತ್ತಲ್ಲ ಬೇಕಿದ್ದುದು,
ಇಂದಿಗೆ ನೆನಪಿಸಿಕೊಳ್ಳಲು ಉಳಿಯಿತಲ್ಲ.
ಇಷ್ಟೆಲ್ಲ ಮಾತನಾಡಿದೆ ನಾನು. ನಾನು ಅವಳಾಗಿಯೇ ಉಳಿದಿಲ್ಲ
ನೀನು ಹೇಗೆ ಅವನೇ ಆಗಿರುತ್ತಿ?!
ಅಲ್ಲ!!!

ಪುಣ್ಯವೆಂದರೆ ಇಬ್ಬರ ಬೆನ್ನಿಗೂ ಅದೇ ನೆಲ.
ನೋಡಲೊಂದೇ ಆಕಾಶ,
ಹಾದಿ ಮುಗಿದಿಲ್ಲ
ವಿಸ್ತರಿಸಿದೆ!
ಕತ್ತಲೆಯ ಕಾವಳದಲ್ಲಿ
ಅಮ್ಮನ ಮಿನುಗುಚುಕ್ಕಿ!
ನೆನಪಿನ ಎಣ್ಣೆ, ಅಕ್ಕರೆಯ ಹಳೆಬಟ್ಟೆ
ತಿಕ್ಕಿ ಒರೆಸಲು ಕಳೆಯದೆ ತುಕ್ಕು?

ಬರೆಯಲಿಕ್ಕೆಷ್ಟೋ ಇದೆ.
ಎಲ್ಲವನ್ನ ಬರೆದೆ ಅರುಹಬೇಕೆ
ಹೊಳವಿಗೂ ಅಷ್ಟಿರಲಿ!


(ತಲೆಬರಹದ ಸಾಲು ರಾಜರತ್ನಂ ಅವರ -ರತ್ನ ಬೇವಾರ್ಸಿ- ಕವಿತೆಯದು)