Monday, April 30, 2007

ಬದಲಾದ ದಾರಿಗಳು .. ಮತ್ತು ಒಂದಷ್ಟು ಗಣಿತ

ಎಲ್ಲ ಮುಗಿದು ಹೋಗಿ ತುಂಬ ದಿನಗಳಾಯಿತು.

ಕರ್ಛೀಫ್ ಗರಿಗರಿಯಾಗಿದೆ.

ದೀಪವಾರಿದ್ದ ಕಣ್ಗಳಲ್ಲಿ -

ಇನ್ನಾವುದೋ ಬೆಳಕಿನ ಪ್ರತಿಫಲನ.


ನೆನಪುಗಳ ಸಂಗ್ರಹ, ಕಾಲದ ಇಂಡೆಕ್ಸ್ ಹೊತ್ತು -

ಅಂತರಂಗದ ಕಪಾಟಲ್ಲಿ ಸೇರುತ್ತಿದೆ.

ಹಳೆಯ ದಿನಗಳ ರಸ್ತೆಗಳಲ್ಲಿ ಓಡಾಡುವಂತೆ -

ಕನಸು ಬೀಳುವುದಿಲ್ಲ ಈಗ.

ಮಧ್ಯರಾತ್ರೆ ಬೀದಿಯಲ್ಲಿ ಬೈಕಿನ ಸದ್ದಾದರೆ -

ನನ್ನ ಕಣ್ಗಳು ಮಳೆ ಸುರಿಸುವುದಿಲ್ಲ,

ನೋಡಬೇಕೆನ್ನಿಸಿದರೂ ಕಿಟಕಿಯಲ್ಲಿ ಬಗ್ಗುವುದಿಲ್ಲ.

ಬದುಕಿನ ನದಿಗೆ ಈಗ ಹೊಸಪಾತ್ರದಲ್ಲಿ ಸರಾಗ ಹರಿವು.

ಹೆಜ್ಜೆಗಳಿಗಿನ್ನೂ ಓಡುವ ಬಲ ಬಂದಿಲ್ಲ.

ಹಾಗಂತ ಕುಗ್ಗಿ ನಿಂತಿಲ್ಲ.

ಎಲ್ಲದೂ ಮರೆತಿಲ್ಲ, ನಾನು ನೆನಪಿಸಿಕೊಳ್ಳುವುದಿಲ್ಲ ಅಷ್ಟೆ.


ಅವನ ಜೊತೆಪಯಣದ ರೈಲಿನಿಂದ

ನಾನಿಳಿದ ನಿಲ್ದಾಣದ ಹೆಸರು - ವಿಚ್ಛೇದನ.

ಆ ಹಾದಿಗೆ ಲಂಬವಾಗಿ ದೂರಸಾಗಲಿರುವ ರೈಲು ಹತ್ತಿದ್ದೇನೆ.

ಗಾರ್ಡು ಸೀಟಿಯೂದಿದ ಮೇಲೆ ಕೇಳಿಸಿತು.

ಅಲ್ಲೆಲ್ಲೋ ರೇಡಿಯೋದಿಂದ ತೂರಿ ಬಂದ ಕಿಶೋರ್ ಕುಮಾರನ ಹಾಡು,


ಕಭೀ ಅಲ್ವಿದಾ ನಾ ಕೆಹನಾ...


*******


ಲೆಕ್ಕ ತುಂಬ ಸಲೀಸು,

ಆದ್ರೂ ಗಣಿತವೆಂದ್ರೆ ನನಗೆ ಅಷ್ಟಕ್ಕಷ್ಟೇ.


ಭಾವಲಹರಿಯ ಭಾಷೆಗಳು,

ಅಚ್ಚರಿ ಹುಟ್ಟಿಸುವ ವಿಜ್ಞಾನ,

ಇನ್ನೂ ಓದಬೇಕು, ಹೋಗಿ ನೋಡಬೇಕಿನ್ನಿಸುವ ಚರಿತ್ರೆ,


ಲೆಕ್ಕ ಮಾತ್ರ -ಮುಖವಿಲ್ಲ, ಮನವಿಲ್ಲದ ಅಂಕಿ,ಸಂಖ್ಯೆ,ಚಿಹ್ನೆ-ಸೊನ್ನೆ..


ಜೊತೆಪಯಣದ, ಸಹಗಮನದ ಸುಹೃದ ನೀನೆತ್ತ?


ಒಂದು ಕೊರೆಮಾತು, ಬಂಡಿ ಬಂಡಿ ಹಿಂಸೆ,

ಚುಚ್ಚು ಮೊನೆಯ ಮೌನ


ಕಾನೂನು ಬರೆದಿಟ್ಟ ವಿದಾಯದ ಸುತ್ತ


ಆಗಸ್ಟ್,ಅಕ್ಟೋಬರ್,ಮಾರ್ಚ್,ಏಪ್ರಿಲ್,ಜುಲೈ....

೧,೨೪,೧೧,೨೭,೧೦... ಮೊದಲಾದ ತಾರೀಖುಗಳ

ಯಾತನಾಮಯ ನೆನಪಿನ ಮೊತ್ತ


ಮೊತ್ತದಲ್ಲಿ ಕೂಡಿದ್ದೇನು ಕಳೆದಿದ್ದೇನು?

ಅದಕ್ಕೇ ಗಣಿತವೆಂದ್ರೆ ನನಗೆ ಅಷ್ಟಕ್ಕಷ್ಟೇ.

Friday, April 13, 2007

ನಲ್ಮೆಯ ನಮನ

ಸುಂದರ ಪಾರ್ಕು, ಸುತ್ತೆಲ್ಲ ಮರಗಳು


ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ.


ಜನಜಾತ್ರೆ, ಇಷ್ಟೊಂದು ಜನ ಇಲ್ಯಾಕೆ ಮೈಯೆಲ್ಲ ಕಿವಿಯಾಗಿ ಕೂತಿದ್ದಾರೆ ಕೇಳೋಣ ಅಂತ ಸುತ್ತ ಬಾಗಿ ನಿಂತ ಮರಗಳು,


ನೀರಿಲ್ಲದೆ ಪರದಾಡುವ ಬೆಂಗಳೂರಲ್ಲೂ ನೆಲ ಕಾಣದಷ್ಟು ಹಸಿರಾಗಿ ಮಿರುಗುವ ಹುಲ್ಲು ಹಾಸು, ಅಲ್ಲಲ್ಲಿ ನಗುವ ಹೂಗಳ ಬಿಂಕದಿಂದ ಬಾಗಿರುವ ಗಿಡದ ಗುಚ್ಛಗಳು.. ಸಂಜೆ ಗೂಡಿಗೆ ವಾಪಸಾದ ಹಲ ಕೆಲವು ಹಕ್ಕಿ ಸಂಸಾರದ ಕಲರವ.. ನಿಮಗಿಷ್ಟವಾಗುವ ವಾತಾವರಣ..


ನೀವಿದ್ದಿದ್ರೆ ಇನ್ನೊಂದು ಹಾಡು ಹುಟ್ಟುತ್ತಿತ್ತೇನೋ.. ಇರಲಿ ಬಿಡಿ - ಏನಾದರೇನೀಗ ನೀವು ತೆರೆದ ಬಾಗಿಲಿನಿಂದ ಹೋಗಿ ತುಂಬ ದಿನಗಳಾಗಿವೆ.. ನನಗ್ಗೊತ್ತು ನೀವಲ್ಲಿ ತಾರೆಗಳ ಮೀಟದೆ, ಚಂದಿರನ ದಾಟದೆ ಕೂತಿದ್ದೀರಿ, ಗೃಹಲಕ್ಷ್ಮಿ ಇಲ್ಲೆ ಉಳಿದಿದ್ದಾಳಲ್ಲ, ಜೊತೆಗಾನದ ತಂಪು ಉಲಿಯಲ್ಲವೆ ಅದು.. ಅಲ್ಲಿ ಶಾನುಭೋಗರು ಸಿಕ್ಕಿದರೆ ಈಗ ನೀವು ಕೇಳುವಂತಿಲ್ಲ, ನನ್ನ ಒಬ್ಬಳೆ ಹೆಂಡತಿಯಾದ ನಿಮ್ಮೊಬ್ಬಳೇ ಮಗಳನ್ನ ಬೇಗ ಇಲ್ಲಿ ಕಳಿಸಿ ಎಂದು.. ಧರೆಯ ಸುಖದಲ್ಲಿ ನಿಮ್ಮಾಕೆ ನಿಮ್ಮ ಮರೆತಿಲ್ಲ, ಹಗಲಿರುಳ ನಡುವಿನ ವ್ಯತ್ಯಾಸ ಮರೆತು ಕಾಣುವಳು ನಿಮ್ಮದೇ ಕನಸು. ಆಗೀಗ ಎಚ್ಚರಿಸುತ್ತದೆ ಮೊಮ್ಮಕ್ಕಳ ಗೆಜ್ಜೆ ಗೊಲಸು.. ನಿಮ್ಮ ಕವಿತೆಯನುಲಿವ ಹಾಡು ಹಕ್ಕಿಗಳ ಗಾನದಿಂದ ಸಿಂಗರಿಸುತಿಹಳು ಮನದ ವೃಂದಾವನ, ದಿನ ಬಿಟ್ಟು ದಿನ ರೇಡಿಯೋಲೂ ಬರುತ್ತದೆ, ಮಲ್ಲಿಗೆಯ ವಿವಿಧ ತನನ...


ನಿಮ್ಮ ಇತ್ತೀಚಿನ ಭಾವಚಿತ್ರ ನಗುತ್ತಿದೆ ವೇದಿಕೆಯಲ್ಲಿ, ಹೋದ ವರುಷದಲಿ ಅಸ್ತಂಗತನಾದ ರಾಜಕುಮಾರನ ತುಂಬು ನಗೆ ನಿಮ್ಮ ಸಿರಿಮಲ್ಲಿಗೆಯ ಪಕ್ಕದಲ್ಲಿ.


ತುಂಬ ಸಂತಸ ನನಗೆ ನಿಮ್ಮನ್ನ ಕಂಡು, ನಿಮ್ಮನ್ನ ಓದಿ, ನಿಮ್ಮನ್ನ ಕೇಳಿ.. ನೀವು ಬರೆದ ಕವಿತೆಗಳ ತುಂಬ ನಲಿವಿನ ಮೆಲ್ನಗೆ, ವಿನೋದದ ಅಂಚು, ದಾಂಪತ್ಯದೆಳೆ, ಪಟ್ಟ ಸಾವಿರ ನೋವುಗಳ ಒಂದೆರಡು ಮೆಲ್ದನಿಯೂ ಎಲ್ಲ ಚಿತ್ರಗಳಾಚೆ ಕಾಣುವ ಇನ್ನೊಂದು ಸಿರಿಮಲ್ಲಿಗೆಯ ಹಿಂದೆ ಅಡಗಿ, ಕವಿತೆಯ ತುಂಬ ಬದುಕಿನದೇ ಹೂರಣ..


ತುಂಬ ಮೆಚ್ಚಿಗೆ ನನಗೆ ನೀವೆಂದರೆ, ನೀವಲ್ಲವೇ "ನನ್ನ ಜೊತೆಯಲ್ಲಿ ಪಯಣಿಸಿದವರ ಮುಂದಿನ ನಿಲ್ದಾಣ ಎಲ್ಲೆಂದು ಕೇಳದವರು, ಜಾತಕಗಳೊಪ್ಪಿದರೆ ಮದುವೆಯೇ! ಎಂದು ಅಚ್ಚರಿಯಲಿ ಬರೆದವರು, ನಗುತಳುತ ಬಾಳಹಾದಿಯ ಕಳೆದು ಬಯಲು-ಚೆಂಡುಗಳೆರಡನ್ನೂ ಮನದನ್ನೆಯದಾಗಿಸಿ ಜಗುಲಿಯಲಿ ಕೂತು ವಿಧವಿಧದ ಮಲ್ಲಿಗೆಗಳ ದಂಡೆ ನೇಯ್ದವರು. ನಿಮ್ಮನುಭವ ತೆಳುವೆಂದವರ ಟೀಕೆಗೆ ನೀವು ನಕ್ಕಿರಿ, ನನಗೂ ನಗು.. ಅವರು ಹಿಡಿದು ನೋಡಿದ್ದರೆ ತಿಳಿಯುತ್ತಿತ್ತು ಮಲ್ಲಿಗೆಯ ದಂಡೆ ಎಷ್ಟು ಒತ್ತಾಗಿದೆಯೆಂದು.. ಸಂಪಿಗೆಯ ಮೆಚ್ಚುವಗೆ ಮಲ್ಲಿಗೆಯ ಪರಿಮಳ ತೆಳುವೇ ಸರಿ.. :-) ನಿಮ್ಮ ಮಲ್ಲಿಗೆಗಳೇ ಗುನುಗುತ್ತವೆ ಹೀಗೆಂದು.


ತುಂಬ ಅಚ್ಚರಿ ನನಗೆ ನೀವು ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳನ್ನ ಮಲ್ಲಿಗೆಗೆ ಸಿಂಪಡಿಸಿದ ರೀತಿಗೆ, ನೋವ ಕ್ಷಣಗಳನೆಲ್ಲ ಗೆದ್ದು ನಗುವ ಬದುಕಿನ ಪ್ರೀತಿಗೆ. ನಿಮ್ಮ ರೀತಿಗೆ ನಿಮ್ಮ ಪ್ರೀತಿಗೆ ಕಣ್ಣ ಹನಿಗಳೆ ಕಾಣಿಕೆ. ನಿಮ್ಮ ರೀತಿಗೆ ನಿಮ್ಮ ಪ್ರೀತಿಗೆ ನಿಮ್ಮ ಸಾಲ್ಗಳೆ ಹೋಲಿಕೆ..


ಅಲ್ಲಿ ವೇದಿಕೆಯಲ್ಲಿ ತುಂಬ ಹಿರಿಯರು ಕನ್ನಡದ ಗಣ್ಯರು, ಪ್ರತಿಷ್ಠಿತರು ನಿಮ್ಮ ಕವಿತೆಗಳ ವಾಚಿಸುತಿದ್ದಾರೆ. ಒಬ್ಬೊಬ್ಬರದೂ ಒಂದು ನೋಟ.. ಈಗ ಕಲ್ಪಿಸಿಕೊಂಡೆ ನಿಮ್ಮ ಹಾಡನ್ನ ನಿಮಗೇ ಯಾರೋ ತಮ್ಮದೆಂಬಂತೆ ಹಾಡಿದರೆ ಹೇಗೆನಿಸುತ್ತದೆಂದು.. ಎಲ್ಲ ದನಿಗಳಿಗೊಂದು ಕವಿತೆ, ಎಲ್ಲರೊಳಗೊಂದು ಹಣತೆ, ಯಾರ ಹೊಟ್ಟೆಯ ಪಾಡಿಗೋ, ಇನ್ಯಾರ ಮನದ ಆಹ್ಲಾದಕ್ಕೋ ಸಿರಿಮಲ್ಲಿಗೆ ನೇಯ್ದ ನಿಮಗೆನ್ನ ತುಂಬು ಹೃದಯದ ನಮನ.


ತಲೆಬಾಗುತ್ತೇನೆ ನಮ್ರಳಾಗಿ:

ಕವನ ನೇಯುವುದು ದೊಡ್ಡದಲ್ಲ. ಕವಿತೆ ಬರೆಯುವ ಮಧ್ಯೆ ನೀವು ನೆಮ್ಮದಿಯರಸಿ ರೆಕಾರ್ಡ್ ಬರೆಯುವ ಗುಮಾಸ್ತರಾಗಲಿಲ್ಲವಲ್ಲ ಅದಕ್ಕೆ, ಎಲ್ಲ ಗೌಜುಗಳ ನಡುವೆ ಮನದ ಮೌನದಿ - ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ ಎಂದು ಬರೆದಿರಲ್ಲ ಅದಕ್ಕೆ, ದೇವನೊಡನೆ ಗೆಳೆತನ ಬೆಳಸಿ, ಅವನು ಕೊಟ್ಟ ಜಗದಿ ನಿಮ್ಮಷ್ಟಕ್ಕೆ ನೀವೆ ಹಾಡಿಕೊಂಡು ಒಲವಿನ ರೂಪಕವಾದಿರಲ್ಲ ಅದಕ್ಕೆ.


ಶರತ್ ಶಾರದೆಯ ನವರಾತ್ರಿಗಳಿಗೂ ಹಚ್ಚಿ ವರ್ಷವಿಡೀ ಬರುವ ಅಮಾವಾಸ್ಯೆಯ ಕಾರ್ಗತ್ತಲುಗಳಿಗೂ ಹಚ್ಚಲಾಗಬಹುದಾದಷ್ಟು ಹಣತೆಗಳ ತೇಲಿ ಬಿಟ್ಟಿದ್ದೀರಿ ನಮ್ಮ ಭಾವದ ಸರಸ್ಸಿನಲ್ಲಿ.. ಒಂದೊಂದು ಹಣತೆಗೂ ಒಂದು ದೊಡ್ಡ ಮಲ್ಲಿಗೆಯ ಮುಗುಳು.. ಅತ್ತಿತ್ತ ಹೊರಳದೆ ಮಲಗಿದೆ ಮಗು.. ನಿಮ್ಮ ಹಾಡ ಸವಿಯುವ ಹಂಬಲು.


ನೀಲಿಯ ಗಗನದ ಉಪಮೆಯಲ್ಲಿ ಸಾಮರಸ್ಯದ ಪಾಠ ಹೇಳಿದ್ದೀರಿ, ಮಾವೊಂದೆ ಚಿಗುರಲಿಲ್ಲ ಚಿಗುರುತ್ತಿದೆ ಬೇವು, ನಲಿವೊಂದೆ ಹರಸಲಿಲ್ಲ ಜೊತೆಯಲಿತ್ತು ನೋವು ಎಂದು ಎಚ್ಚರಿಸಿದ್ದೀರಿ.. ಮಾಂದಳಿರಿನ ಚೆಂದುಟಿಯಲಿ, ಬಿರಿದಾ ಹೂವ ಮೇಲೆ, ಮೂವತ್ತು ವರುಷದ ಹಿಂದೆ, ಎಂದೋ ಕೇಳಿದ ಒಂದು ಹಾಡನು ಮನದ ವೀಣೆಗೆ ಕಲಿಸಿದ್ದೀರಿ.. ಮನೆಯಿಂದ ಮನೆಗೆ, ಗಡಿಯಾರದಂಗಡಿಯ ಮುಂದೆ, ಸಂಬಳದ ದಿನದಂದು, ತುಂಗಭದ್ರೆಯ ಆನಂದವನ್ನು ಹಂಚಿದ್ದೀರಿ. ಮೀನಳ ಕಣ್ಣೀರೊರೆಸಿದ್ದೀರಿ.. ವಿಳಾಸವರಿಯದೆ ಬಂದವರಿಗೆ ಇಹದ ಪರಿಮಳದ ಹಾದಿಯ ಕೈಮರದ ನೆರಳಲ್ಲಿ ಸಂಜೆ ಹಾಡು ಹಾಡಿದ್ದೀರಿ. ನಿಮಗೆ ಉಂಗುರವಿಡಲೋ, ಶಿಲಾಲತೆಯ ಶಾಲೋ? ನವಪಲ್ಲವದಲಿ ಐರಾವತದ ಮೆರವಣಿಗೆಯೋ? ಇರುವಂತಿಗೆಯ ಮಾಲೆಯೋ? ನವಿಲಗರಿಯ ಚಾಮರವೋ? ಅದೆಲ್ಲ ಯಾಕೆ.. ಮನದ ಮೂಲೆಯಲ್ಲೊಂದು ದುಂಡುಮಲ್ಲಿಗೆ ನೆಟ್ಟು ನೀರೆರೆಯೆಂದಿರಾ, ನೀವು ಹಲವರುಷಗಳ ಹಿಂದೆ ಬಳೆಗಾರನ ಗಂಟಲ್ಲಿ ನೀಡಿದ ಮಲ್ಲಿಗೆಯ ಕೊನರು ಬದುಕಿನ ಎಲ್ಲ ತಿರುವುಗಳಲ್ಲೂ ಹಬ್ಬಿ ಹೂ ಬಿರಿದಿದೆ. ಎಲ್ಲ ಚಿತ್ರಗಳ ನಡುವೆ ಗೊಂದಲಗೊಂಡಾಗ ಅದರಾಚೆಗಿನ ಚಿತ್ರದ ಹೊಳವು ಪರಿಮಳವಾಗಿ ಹಬ್ಬಿದೆ.


ಬಿಳಿದಿಂಬಿನಂಚಿಗೆ ಗೆರೆ ಕೊರೆದ ಕಾಡಿಗೆಯ, ದೀಪದುರಿಯ ಕಣ್ಗಳ ಒಡತಿಯ ಕನ್ನಡಕ ಮಬ್ಬಾಗಿದೆ, ನಗಲಾಗದೆ ಮೆಲ್ನಗೆಯ ನಟನೆ, ಅವಳ ಹಸಿರ ಕನಸಿನಲ್ಲಿ ಮಲ್ಲಿಗೆಯದೆ ಪರಿಮಳ, ಇಹದ ನಿಜದಲ್ಲಿ ನೀವಿಲ್ಲದ ದಾರಿ ಸವೆಸಿ ಮನದೊಳೇನೋ ತಳಮಳ, ಕಾಲು ಜೊತೆಯಾಗುವುದಿಲ್ಲ ಬೇಕಾದ ನಡಿಗೆಗೆ, ನಿಲ್ಲಲು ಹಟ ಹೂಡುತ್ತದೆ ಸುಸ್ತಾಗಿದೆ ನಡುವಿಗೆ. ಹೊರಗಿನ ಜಂಜಾಟ ಹೊರಕ್ಕಿರಲಿ, ಮನದ ತುಂಬ ಮಲ್ಲಿಗೆ, ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು, ಒಣಗಬಾರದು ಒಲವ ಚಿಲುಮೆ, ಮನದ ಮಬ್ಬಿನಲಿ ನೀವೆ ಹಚ್ಚಿಟ್ಟ ದೀಪವಿದೆ, ಒಳಗಣ್ಣು ಎಲ್ಲ ಚಿತ್ರಗಳಾಚೆಗೆ ತೆರೆದಿದೆ.


ನೊಂದನೋವುಗಳೆಲ್ಲ ಹಾಡಾಗಲಿಲ್ಲ.. ಎಲ್ಲ ಗಾಯನದಲ್ಲು ಸಿರಿಮಲ್ಲಿಗೆ. ಗಂಭೀರ ಕವಿತೆಗಳಿಗೆ ಪಕ್ಕದ ಕುರ್ಚಿಯಲ್ಲಿ ಕುಳಿತ ಮಕ್ಕಳು ಆಚೀಚೆ ನೋಡುತಿಹವು, ಅವರಿಗೂ ಬೇಕು ನಿಮ್ಮ ನವಿಲೂರ ಕನಸೆ.. ಕವಿಗೋಷ್ಠಿಯಲಿ ವಿಮರ್ಶೆಗೆ ಸರಕಾಗಿ ಬಂದರೂ ಗೊತ್ತಿದೆ ನನಗೆ ಅವರು ಮೆಚ್ಚುವ ವಸ್ತು ಅಲ್ಲಿಲ್ಲ..


ಕಾಳಿಂಗರಾಯರ ಅಂತಿಂಥ ಹುಡುಗಿ, ಅನಂತಸ್ವಾಮಿಯವರ ಲಾಲಿ ಹಾಡು, ಅತ್ರಿಯ ಶಾನುಭೋಗರ ಮಗಳು - ಅಲ್ಲಿ ನಿಮ್ಮ ದಿನವ ತುಂಬಿರಬಹುದು.. ನನಗೆ ಗೊತ್ತಿದೆ, ಅಲ್ಲಿ ನಿಮ್ಮ ಕೆದರಿದ ಕೂದಲ ಸರಿಮಾಡಲು ಯಾರಿಗೂ ಆಗುವುದಿಲ್ಲ, ಅದು ವೆಂಕಮ್ಮನದೇ ಆಸ್ತಿ, ಇಲ್ಲಿ ಮನೆಯಲಿ, ಇಳಿಸಂಜೆಯ ನಳಿನಾಕ್ಷಿ ಕೊನೆಯ ಪಯಣಕ್ಕಾಗಿ ಮಂಚದ ಕೆಳಗೆ ಮುಚ್ಚಿಟ್ಟ ಪೆಟ್ಟಿಗೆಯಲಿಲ್ಲ ಬೇಸಿರಿ,ಬೆಂಡೋಲೆ, ಅಲ್ಲಿ ಮೊದಲ ಸೀರೆಯ ಸೆರಗಿನಲ್ಲಿ ಸುತ್ತಿ ಮಲಗಿದೆ ಪುಟ್ಟ ಬಾಚಣಿಗೆ.


ತುಂಬು ಗೌರವ ನಿಮಗೆ, ತುಂಬು ನಮನ, ನಿಮ್ಮ ನೋಡಿ ಬೆರಗುವಡೆದ ಕಣ್ಗಳಲಿ ತುಂಬು ಹನಿ,, ಇಲ್ಲ.. ನಿಮ್ಮೆಡೆಗಿನ ಒಲವ ಬಿಂದಿಗೆ ತುಂಬಿಲ್ಲ.. ತುಂಬಿದರೆ ಒಲವಲ್ಲ.. ಹನಿತುಂಬಿದ ಕಣ್ಣಲ್ಲಿ ಎಲ್ಲದರಾಚೆಗಿನ ಚಿತ್ರ, ಇಹದ ಪರಿಮಳದ ಹಾದಿ.

Thursday, April 12, 2007

ನೀರಿನಲ್ಲಿ ಅಲೆಯ ಉಂಗುರಾ..

ಭೂಮಿತಾಯಾಣೆಗೂ ನನ್ನ ಈ ಬರಹಕ್ಕೂ ಸೂಪರ್ ಡ್ಯೂಪರ್ ಹಿಟ್ "ಮುಂಗಾರು ಮಳೆ"ಗೂ ಯಾವ ಸಂಬಂಧವೂ ಇಲ್ಲ. ನಿನ್ನೆ ರಾತ್ರೆ ಬೆಂಗಳೂರಿನಲ್ಲಿ ಬಿದ್ದ ಈ ವರ್ಷದ ಮೊದಲ ಮಳೆಹನಿಗಳು ನನ್ನನ್ನು ಆರ್ದ್ರಗೊಳಿಸಿ ಹಳೆಯ ನೆನಪುಗಳೊಡನೆ ಹಳೆಯ ಬರಹಗಳನ್ನೂ ಟೇಬಲ್ ಮುಂದೆ ಹರಡಿದ್ದರಿಂದ ಸಿಕ್ಕ ಒಂದು ಬರಹ. ಹೌದು ಇದು ಅವನಿಗೆ ಬರೆದಿದ್ದು.. ಪತ್ರವಲ್ಲ.. ಹನಿದು ಹರಿದ ಭಾವನೆಗಳಷ್ಟೆ..

ನೀರಿನಲ್ಲಿ ಅಲೆಯ ಉಂಗುರಾ..ಮನದ ಕೊಳದಿ ನೆನಪಿನುಂಗುರ..


ಒಲವೇ, ನನ್ನ ಬದುಕಿನ ಚೈತನ್ಯವೇ,

ನೋಡಿಲ್ಲಿ ಮಳೆ ಹ್ಯಾಗೆ ಬರುತ್ತ ಇದೆ ಅಂತ..

"ನೀನು ಮುಗಿಲು ನಾನು ನೆಲ, ನಿನ್ನ ಒಲವೆ ನನ್ನ ಬಲ" ಅಂತ ಶಿವರುದ್ರಪ್ಪನವರು ಬರೆದ ಕವಿತೆಯನ್ನು, ರತ್ನಮಾಲ ಪ್ರಕಾಶ್ ಹಾಡಾಗಿ ಉಣಿಸಿದಂತಿದೆ.

ನೆಲ ಮುಗಿಲಿನ ಬಾಂಧವ್ಯವನ್ನು ಪ್ರೀತಿಗೆ ಹೋಲಿಸಿದ ಎಷ್ಟು ಸುಂದರ ಭಾಷೆ. ಮಳೆ ಬರುತ್ತಲೂ ನನಗೆ ಮೊದಲು ನೆನಪಾಗುವುದೇ ನೀನು. (ಇದು ಸುಳ್ಳೇನೋ - ಯಾಕಂದ್ರೆ ನೀನು ಮರೆತು ಹೋಗಿದ್ರೆ ತಾನೆ ನೆನಪಾಗಲಿಕ್ಕೆ..!) ನಿನ್ನ ನೆನಪುಗಳ ಮಾರುತ ಹೊತ್ತು ತರುವ ಎಲ್ಲ ವರ್ಷಧಾರೆಯೂ ನನಗೆ ಹಲವು ಧಾರೆಗಳನ್ನು ನೆನಪಿಸುತ್ತದೆ.

ಮಳೆಯ ಹನಿ ಬೀಳುವ ಕೆರೆಯಿಂದ ಹೇಗೆ ನೂರಾರು ಅಲೆಗಳ ತರಂಗ ಹೊಮ್ಮುತ್ತಲ್ಲಾ ಹಾಗೆ - ನಿನ್ನೊಡನೆ ಕಳೆದ ಕ್ಷಣಗಳ ನೆನಪಿನ ಅಲೆಗಳು ಮನದ ಕೊಳದಲ್ಲಿ, ಮಳೆಯ ದರ್ಶನ ಮಾತ್ರಕ್ಕೇ ಏಳುತ್ತವೆ.


ಒಂದು ನೆನಪಿನ ಅಲೆ ಕರಗುವಲ್ಲಿ ಇನ್ನೊಂದು ಅಲೆಯೆದ್ದು ಅದು ಕರಗೆ ಮತ್ತೊಂದು... ಯಾವ ನೆನಪಿನ ಅಲೆಯನ್ನ ಜಾಸ್ತಿ ದೂರ ಹರಡಲೋ ಗೊತ್ತಾಗುವುದಿಲ್ಲ. ತಂಪು ನೀಲಿಯ ಕೆಳಗೆ ಹಸಿರು ಹುಲ್ಲಿನ ನಡುವೆ ಮಾತಾಡುತ್ತ ಜೊತೆಜೊತೆಗೆ ನಡೆದು ಹೋಗಿದ್ದು, ಬೆಳಕು ಹರಿಯದ ಮುಂಜಾವದಲ್ಲಿ ಗುಡ್ ಬೈ ಹೇಳಿದ್ದು, ಹೂಕನಸಿನ ಕವಿಯ ನೆರಳಲ್ಲಿ ಹಾದು ಹೋಗಿದ್ದು, ಕೆಮೆರಾ ಕಣ್ಣು ಸೆರೆ ಹಿಡಿದ ಅಮ್ಮನ ವಿವಿಧ ಸೊಗಸುಗಳನ್ನು ಸವಿದಿದ್ದು, ಮತ್ತೆ ಅಮ್ಮನ ಮಡಿಲಿಗೆ-ಗುಡ್ಡದ ತಪ್ಪಲಿಗೆ ನಡೆದು ಹೋಗಿದ್ದು, ತುಂಬಿ ತುಳುಕಿದ ನೀಲಿ ಕೆರೆಯ ಕಟ್ಟೆಯಲ್ಲಿ ಜೊತೆಯಾಗಿ ನಿಂತಿದ್ದು, ಸುಸ್ತಾಗಿ ಕುಸಿದ ಕ್ಷಣಗಳಲ್ಲಿ ಮುಚ್ಚಿದ ಕಣ್ಣು ತೆರೆದಾಗ ನಿನ್ನ ಹೊಳಪು ಕಣ್ಗಳ ಕಂಡಿದ್ದು, ನಿದ್ದೆ ಹೋಗುವವರೆಗೂ ಮಾತಾಡಿದ್ದು, ತಂಪು ಬೆಟ್ಟದ ತುದಿಯಲ್ಲಿ ನನ್ನ ಚೈತನ್ಯವೇ, ನಿನ್ನ ಮಡಿಲಲ್ಲಿ ನಾನು ನಿದ್ದೆ ಹೋದದ್ದು, ಅಲ್ಲಲ್ಲ ಎಚ್ಚರಿದ್ದಿದ್ದು, ಬೆಳಗಿನ ಜಾವದ ಚಳಿಯಲ್ಲಿ ಮೋಡಗಳ ಸ್ವೆಟರ್ ಹೊದ್ದ ಸೂರ್ಯನ್ನ ನಿನ್ನ ಕಣ್ಣಲ್ಲೇ ನಾನು ನೋಡಿದ್ದು....


ಓಹ್, ಈ ನೆನಪುಗಳ ಅಲೆಯಿಂದ ಮುಂದರಿಯಲೇ ಮನಸಾಗುತ್ತಿಲ್ಲ. ಮತ್ತೆ ನಿಂಗೊತ್ತಾ ಈ ಅಲೆಯನ್ನ ದೊಡ್ಡ ಹನಿಯಿಟ್ಟು ಎಬ್ಬಿಸಿದ್ದೇನೆ - ನೀನು ನೀಲಿಕೆರೆಯಲ್ಲಿ ಕಪ್ಪೆಕಲ್ಲು ಹಾರಿಸಿ ಎಬ್ಬಿಸಿದೆಯಲ್ಲಾ ಹಾಗೆ-ತುಂಬ ದೂರದವರೆಗೆ ತುಂಬ ಹೊತ್ತಿನವರೆಗೆ ಇರುತ್ತೆ. ಹಲೋ ನಿಂಗೇ ಹೇಳಿದ್ದು, ಎಲ್ಲಿ ಕಳೆದು ಹೋಗಿದ್ದೀಯ? ಓ ನೀನು ಆ ಅಲೆಯಲ್ಲಿ ಮುಳುಗೇಳುತ್ತಿದ್ದೀಯಾ! ಸರಿ ಬಿಡು, ಡಿಸ್ಟರ್ಬ್ ಮಾಡುವುದಿಲ್ಲ.


ಮಳೆಯ ಹನಿ ಬಿದ್ದ ಕೂಡಲೇ ನಾನೇಕಿಷ್ಟು ಭಾವುಕಳಾಗಿ ಬಿಡುತ್ತೇನೋ. ಒಂದು ನಿಜ, ಮಳೆಯಿಂದ ಎಷ್ಟೇ ಕರಕರೆ ಆದ್ರೂ, ಮಳೆ ಅಂದ್ರೆ ನಂಗೆ ತುಂಬ ಇಷ್ಟ. ಇಷ್ಟು ಇಷ್ಟದ ಮಳೆ ಬರುತ್ತಿರುವಾಗ ಜೊತೆಗೆ ನೀನಿದ್ದರೆ ಮತ್ತೂ ಇಷ್ಟ. ನಾವಿಬ್ಬರೂ ಮಳೆಯಲ್ಲಿ ಕಾಡುಬಯಲಲ್ಲಿ ದೂರ ನಡೆದು ಹೋಗಿ, ಬೆಚ್ಚಗೆ ಬೆಂಕಿ ಕಾಯಿಸುತ್ತಾ, ಸೋನೆರಾಗಕ್ಕೆ ಕಿವಿಯೊಡ್ಡಿ ಕುಳಿತಿದ್ದರೆ ಎಷ್ಟು ಇಷ್ಟವಾಗುತ್ತೆ ಗೊತ್ತಾ? ಎಷ್ಟೂಂದರೆ ಆ ಮಳೆ ಮುಗಿದು ಬೆಳಗಾಗಿ ಸೂರ್ಯ ಕೆಂಪಾಗುವಾಗ, ಹೆಸರಿಲ್ಲದ ಕಾಡುಹಕ್ಕಿ ಮರದ ಎಲೆಯ ಶವರಲ್ಲಿ ಮಿಂದು ಉದಯರಾಗ ಹಾಡುವಾಗ ಉಸಿರು ಅಲ್ಲೇ ನಿಂತು ಬಿಡಲಿ ಅನ್ನುವಷ್ಟು.


ಬರೀ ಕಣ್ಣೀರಿನ ಮಳೆ ಹೊಯ್ದು, ಕೆಟ್ಟ ಕ್ಷಣಗಳ ಕೊಚ್ಚೆಯಲ್ಲೇ ಹೆಜ್ಜೆ ಇಡಲಾರದೆ ಇಟ್ಟು ಬಂದ ದಿನಗಳು ಕಳೆದು ಹೋಗಿದೆ ಅಲ್ಲವೇನೋ? ಒಲವೇ, ನಿಜವಾಗ್ಲೂ ಆ ಮಳೆಯ ಚಳಿಗೆ ಬೆಚ್ಚನೆ ಸ್ವೆಟರಾಗಿದ್ದು ನಿನ್ನ ಕಣ್ಣ ದೀಪದ ಹೊಳಪು. ಜಾರಿ ಬೀಳುವ ಹೆಜ್ಜೆಗಳಿಗೆ ಆಸರೆಯಾಗಿದ್ದು ನಿನ್ನ ಭರವಸೆಯ ಕಿರಿಬೆರಳು. ನಿನ್ನೆಲ್ಲ ಕಸಿವಿಸಿಯನ್ನ, ಸಂಕಟವನ್ನ ನನಗೊಂಚೂರೂ ಕಾಣಿಸದ ಹಾಗೆ ನನ್ನನ್ನ ಸಂತೈಸಿದೆಯಲ್ಲ ಆ ನಿನ್ನ ನಿಲುವು ನನ್ನ ಬದುಕಿನ ಚೈತನ್ಯವಾಗಿ ತುಂಬಿಕೊಂಡಿದೆ. ನಿನ್ನ ತೊಡಕುಗಳನ್ನ ನಾನು ಬಗೆಹರಿಸಲಾಗುವುದಿಲ್ಲ ಬಿಡು ಆದರೆ ನಿನ್ನ ನೋವಿನ ಕ್ಷಣಗಳಿಗೆ ನಾನು ಕಿವಿಯಾಗಬಾರದಾ? ನಿನ್ನ ಕಣ್ಣೀರನ್ನ ನಾನು ಒರೆಸಬಾರದಾ? ನಿನ್ನ ನೋಯುವ ತಲೆಯನ್ನ ನಾನೊಂದಿಷ್ಟು ಹೊತ್ತು ಲಾಲಿಸಬಾರದಾ? ಕನಿಷ್ಠ ಜೊತೆಗಿರಬಾರದೇನೋ?


ನನ್ನ ರೇಶಿಮೆಯಲ್ಲಿ ಸುತ್ತಿಟ್ಟು ನೀನಲ್ಲಿ ಮುಳ್ಳು ಹಾಸಿಗೆಯಲ್ಲಿ ಮಲಗಿದರೆ ನಂಗೆ ನಿದ್ದೆ ಬಂದೀತೇನೋ? ನನ್ನ ಹೊಟ್ಟೆ ತುಂಬ ಊಟವಿಟ್ಟು ನೀನಲ್ಲಿ ಅರೆ ಹೊಟ್ಟೆ ಉಂಡರೆ, ಉಂಡಿದ್ದು ನನ್ನ ಮೈಗೆ ಹಿಡಿಯುತ್ತೇನೋ? ನನ್ನ ಕ್ಷಣಗಳ ತುಂಬ ಸಂತಸದ ಪ್ಯಾಕೇಜುಗಳನ್ನೇ ತುಂಬಿ, ನೀನಲ್ಲಿ ಕಣ್ಣ ನೀರು ತುಳುಕಿಸಲಾರದೆ, ಹಿಡಿದಿಡಲಾರದೆ ನರಳುತ್ತಿದ್ದರೆ ನನ್ನ ನಗುವಲ್ಲಿ ಜೀವವಿರುತ್ತೇನೋ?


ನೀನು ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಬೇಡ. ನಂಗೇನು ಅನ್ಸಿದೆ ಅಂತ ನಿಂಗೊತ್ತಾಯ್ತಲ್ಲಾ ಅಷ್ಟೆ ಸಾಕು ನಂಗೆ.


ನೋಡು ಇಬ್ಬರೂ ಮುಳ್ಳುದಾರಿಯಲ್ಲೇ ನಡೆಯೋಣ. ಚುಚ್ಚಿಕೊಳ್ಳುವ ಮುಳ್ಳುಗಳನ್ನು ಒಬ್ಬರಿಗೊಬ್ಬರು ತೆಗೆದು ಹಾಕಬಹುದು. ಈ ಸಾಂತ್ವನದ ಮುಂದೆ ರೇಷಿಮೆಯ ಸಿರಿ ಯಾಕೆ. ಉಣಲಿಕ್ಕೆ ಅರೆಹೊಟ್ಟೆಯಾದರೂ ಸರಿ ಜೊತೆಗೇ ತಿನ್ನೋಣ; ನೆಂಚಿಕೊಳ್ಳಲಿಕ್ಕೆ ಸವಿಮಾತಿರುತ್ತಲ್ಲಾ. ಹೊಟ್ಟೆ ತುಂಬದೆ ಸಂಕಟವಾಗಿದ್ದಾಗ ಮಾತಾಡಿಕೊಳ್ಳಲು, ಕನಸು ಕಾಣಲು, ಹಾಗೇ ಹಸಿವು ಮರೆತುಹೋಗಲು ಒಬ್ಬರಿಗಿನ್ನೊಬ್ಬರ ಜೊತೆಯಿರುತ್ತಲ್ಲಾ ಇನ್ಯಾವ ಭಕ್ಷ್ಯ ಭೋಜ್ಯಗಳು ಬೇಕು?


ಬದುಕಿನ ಕ್ಷಣಗಳ ತುಂಬೆಲ್ಲಾ ಸಂತಸದ ಪ್ಯಾಕೇಜುಗಳನ್ನೇ ತುಂಬಿಡಲಾಗುವುದಿಲ್ಲ. ಅಳುವ ಘಳಿಗೆಗಳಲ್ಲಿ ಜೊತೆಗಿರೋಣ ಒಬ್ಬರಿನ್ನೊಬ್ಬರ ಕಣ್ಣೀರೊರೆಸಲಿಕ್ಕೆ. ನಗುವಿನ ಹೂವರಳದಿರಲಿ ಚಿಂತಿಲ್ಲ, ನಗೆ ಹೂವಿನ ಬಳ್ಳಿಯ ಬೀಜ ನೆಟ್ಟು, ಕಣ್ಣೀರನ್ನೆ ಎರೆದು ಕಾಯೋಣ ಕಣೋ. ಕಣ್ಣು ಕಂಬನಿಗಳಿಂದ ಮಂಜಾಗಿದ್ದರೂ ಎಂದೋ ಒಂದು ದಿನ ನಗೆ ಮೊಗ್ಗು ಬಿಟ್ಟಿದ್ದು ಕಂಡೀತು, ಕಣ್ಣೊರಸಿ ನೋಡುವಾಗ ಮೊಗ್ಗು ಅರಳಿ ನಿಂತು ನಕ್ಕೀತು, ಏನಂತೀಯಾ?


ಅನ್ನೋದೇನೇ, ಬಾ ಬೇಗ, ಜೊತೆಯಾಗಿ ಹೋಗೋಣ ಅಂತ ಕರೆದೆಯಲ್ಲಾ, ಇರು ಬಂದೆ. ಅಮ್ಮನ ಕಪಾಟಲ್ಲಿ, ಅವಳಮ್ಮನಿಂದ ಬಳುವಳಿಯಾಗಿ ಬಂದು, ನಂಗಾಗೇ ಉಳಿಸಿಟ್ಟಿರುವ ಒಂದಷ್ಟು ನಗೆ ಹೂವಿನ ಬೀಜ ಇದೆ ತೆಗೆದುಕೊಂಡು ಬರುತ್ತೀನಿ. ಕೂಡಲೆ ಹೊರಡೋಣ. ನಮ್ಮ ಮಗಳಿಗೂ ಒಂದಷ್ಟು ಉಳಿಸಿಡಬೇಕು, ಅಷ್ಟನ್ನೂ ನಾವೇ ಬಿತ್ತುವ ಹಾಗಿಲ್ಲ ನೋಡು ಮತ್ತೆ. ಬಾ ಹೋಗೋಣ...

Thursday, April 5, 2007

ಪೂ.ಚಂ.ತೇ ಇನ್ನಿಲ್ಲ .. :(

ಕನ್ನಡದ ಅದಮ್ಯ ಚೇತನ ಪೂರ್ಣಚಂದ್ರ ತೇಜಸ್ವಿ ಇನ್ನು ಬರಿ ನೆನಪು,ಸಂಕಿರಣ,ಪುಸ್ತಕಮಾಲೆ...
ತಮ್ಮ ಬರಹ ಚಟುವಟಿಕೆಗಳಿಂದ ನಮಗೆ ಆಪ್ತ ರಾಗಿದ್ದ ಹಿರಿಯ ಜೀವ..
ಸಮೀಪ-ಪರಿಚಯವಿಲ್ಲದ ಓದುಗ-ಅಭಿಮಾನಿಯಾದ ನನಗೇ ಸಂಕಟವಾಗುತ್ತಿದೆ.
ಅವರ ಅಗಲಿಕೆಯ ನೋವನ್ನ ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ.
ನಮ್ಮೆಲ್ಲರ ತುಂಬು ಹೃದಯದ ನಮನ ಅವರ ಚೇತನಕ್ಕೆ.
ದೂರದಲ್ಲಿದ್ದರೂ ಆಪ್ತ ಸಾಂತ್ವನ ಮನೆಮಂದಿಗೆ.

ಈಗ ಗೊತ್ತಾಗಿದೆ...

ಮಳೆಯಲ್ಲಿ ನೆಂದ ಹಚ್ಚಹಸಿರಲ್ಲಿ

ಮೊಗ್ಗು ಮೂಡಿ,

ಹೂವರಳಿ, ಕಾಯಿ ಜಗ್ಗಿ,

ಹಣ್ಣಾಗಿ, ಎಲೆಗಳುದುರಿ. . . .

ಹಾವಸೆ ಹಿಡಿದ ಜಾರುದಾರಿಯಲ್ಲೀಗ

ನೆಲಕಚ್ಚಿದ ತರಗೆಲೆಗಳ ಮರ್ಮರ;

ದಿಟ್ಟಿ ಹಾಯುವವರೆಗೆ

ಹಸಿರ ತಂಪಿನ, ಕಂಪು ಸೂಸಿದಲ್ಲೀಗ

ನೆಳಲೂ ನೀಡದ

ಬೋಳು ಬೋಳು ಗಿಡಮರ.


ನಿಸರ್ಗವೇ ಹೀಗೆ. . .

ಋತು‌ಋತುವಿಗೆ ಬದಲಾಗಿ,

ಕೊನೆಯಾಗಿ, ಮೊದಲಾಗಿ,

ಕ್ಷಣ ಕಾಯದೆ, ಕ್ಷಣ ನಿಲ್ಲದೆ

ನಿರಂತರ ಪರಿವರ್ತನೆ, ಚಲನೆ.


ಈಗ ಗೊತ್ತಾಗಿದೆ. . .

ನಾನು ನಿನ್ನ ನಿಸರ್ಗಕನ್ಯೆ ಅಂತ

ಕರೆದಿದ್ದು ಸುಳ್ಳಲ್ಲ,

ಉತ್ಪ್ರೇಕ್ಷೆ ಖಂಡಿತಾ ಅಲ್ಲ.


ನನ್ನ ನೋಡಿ ಮಿಂಚಿದ್ದ

ನಿನ್ನ ಕಣ್ಣಲ್ಲೀಗ ಕಪ್ಪು ಮೋಡ,

ಕೊನೆಯಿರದ ಮಳೆಗಾಲ;

ಪ್ರಪಂಚ ಗೆದ್ದ ಭಾವದಲ್ಲಿ

ನನ್ನ ಕೈಗಳನ್ನ ಹಿಡಿದಿದ್ದ

ನಿನ್ನ ಕೈಗಳಲ್ಲೀಗ ಬರಗಾಲ;

ನನ್ನ ಬರುವಿಕೆಯ ತಂಗಾಳಿಗೆ

ತೂಗಿದ್ದ ನಿನ್ನ ಮನದಲ್ಲೀಗ

ಚಂಡಮಾರುತ. . . .


ರುದ್ರ ರಮಣೀಯ ನಿಸರ್ಗದ ರಮ್ಯತೆ,

ಮಾನವಸಹಜ ಕ್ಷುಲ್ಲಕತೆಗೆ

ಬಲಿಬಿದ್ದು

ರೌದ್ರತೆಯಷ್ಟೇ ಉಳಿದಿರುವುದು

ಮಾತ್ರ, ಅನ್ಯಾಯ... :<(

Friday, March 30, 2007

ನೀಂ ಸತ್ಯವ್ರತನೇ ದಿಟಂ....

ನಾನು ಚಿಕ್ಕವಳಿದ್ದಾಗ ನನಗೆ ಕತೆಗಳ ಕಣಜದಿಂದ ತಿನಿಸನ್ನು ಮೊಗೆಮೊಗೆದು ಕೊಟ್ಟಿದ್ದು ನನ್ನ ಅಜ್ಜ. ನನ್ನ ಬಾಲ್ಯದ ಎಲ್ಲ ಕಲ್ಪನೆಗಳಿಗೂ ಬಣ್ಣ ತುಂಬಿದ್ದು ಅಜ್ಜನ ಕತೆಗಳು. ಸ್ವಲ್ಪ ದೊಡ್ಡವಳಾದ ಮೇಲೂ ಅವನ ಕತೆಗಳೆಂದರೆ ನನಗೆ ಪ್ರೀತಿಯೇ. ಅವನು ನನಗೆ ದಿನವೂ ನಿಗದಿತ ಸಮಯಕ್ಕೆ (ಸಾಮಾನ್ಯವಾಗಿ ರಾತ್ರೆ ಊಟವಾದ ಮೇಲೆ ಕಣ್ಣು ಮುಚ್ಚುವವರೆಗೂ) ಹೊಸಹೊಸದಾದ ಕತೆ ಹೇಳಬೇಕಿತ್ತು. ಒಂದೊಂದು ಸಲ ಅದು ಉದ್ದ ಕತೆಯಾಗಿ ೩-೪ ರಾತ್ರಿಗಳ ಪ್ರದರ್ಶನ ಕಾಣುತ್ತಿತ್ತು. ಹೌದು, ಅಜ್ಜ ಬರೀ ಕತೆಯನ್ನ ಹೇಳುತ್ತಿರಲಿಲ್ಲ. ಅದು ಅಭಿನಯ ಸಹಿತವಾಗಿರುತ್ತಿತ್ತು. ರಾಗಮಾಲಿಕೆಗಳೂ ಇರುತ್ತಿದ್ದವು. ಕತೆಯ ರಸಕ್ಕೆ ತಕ್ಕಂತೆ ಧ್ವನಿ ಏರಿಳಿಸುತ್ತಾ, ಕೈಯಲ್ಲಿ ಕೆಲವು ರಸನಿಮಿಷಗಳನ್ನು ಅಭಿನಯಿಸುತ್ತಾ ಅವನು ಕತೆ ಹೇಳುವ ಕ್ಷಣಗಳಲ್ಲಿ ನಾನು ಈ ನೆಲದ ಮೇಲಿರುತ್ತಿರಲಿಲ್ಲ. ಅವನ ಸುಮನೋಹರ ಕಥಾ ಲೋಕದ ದಾರಿಯಲ್ಲಿ ನಾನು ನಿತ್ಯ ಪಯಣದ ಅಚ್ಚರಿಯ ಧಾರೆಯಲ್ಲಿ ತೇಲಿ ಸಾಗುತ್ತಿದ್ದೆ. ಹೌದು ನಾನು ನಡೆದು ಹೋಗಬಹುದಾದ ಮಾತಲ್ಲ ಅದು.. ಅವನ ಕಥನ ಶಕ್ತಿ ನನ್ನ ತೇಲಿಸಿಕೊಂಡು ಹೋಗುತ್ತಿತ್ತು. ಅಜ್ಜನ ಕತೆಗಳು ಸಾಮಾನ್ಯವಾಗಿ ರಾಮಾಯಣ, ಮಹಾಭಾರತ, ಮತ್ತು ಅವುಗಳ ಉಪಕತೆಗಳು. ಅವುಗಳನ್ನ ನಿನ್ನೆ ಮೊನ್ನೆ ಅವನ ಕಣ್ಣ ಮುಂದೆಯೇ ನಡೆಯಿತೆಂಬಂತೆ ವರ್ಣಿಸಿ ಹೇಳುತ್ತಿದ್ದನು ಅಜ್ಜ. ಮತ್ತು ನನ್ನ ಅರಿವಿಗೆ ಬರುವ ದಿನನಿತ್ಯದ ಸುತ್ತಮುತ್ತಲಿನ ಪ್ರಶ್ನೆಗಳೆಲ್ಲವಕ್ಕೂ ಅಲ್ಲಿಯೇ ಉತ್ತರ ಹುಡುಕಿಕೊಡುತ್ತಿದ್ದ.ಅದರಲ್ಲಿ ಕೆಲವೊಂದು ನನ್ನ ಮೆಚ್ಚಿನದಾಗಿ ಉಳಿದು ಹೋದುವನ್ನ ಆಗಾಗ ದಿನದ ಬೇರೆ ಸಮಯದಲ್ಲಿ ಪುನರಾವರ್ತನೆ ಮಾಡಬೇಕಿತ್ತು. ಮತ್ತೆ ಕೆಲವು ಕತೆಗಳು ಕೆಲ ಜಾಗಕ್ಕೆ ವಿಶೇಷವಾಗಿ ಹೇಳಿಮಾಡಿಸಿದಂತಿರುತ್ತಿದ್ದವು. ಅಜ್ಜನ ಜೊತೆಗೆ ಹಳ್ಳಿಯ ತೋಟಕ್ಕೆ ಹೋಗುವಾಗ, ಗದ್ದೆಯ ಕೆಲಸ ನೋಡುವಾಗ, ರಾತ್ರಿ ಕತ್ತಲಲ್ಲಿ ಹಳ್ಳಿಯಿಂದ ಸಾಗರಕ್ಕೆ ಬರುವ ಬಸ್ಸಿಗೆ ಕಾಯುವಾಗ, ಅಥವಾ ದೂರ ದಾರಿಯಲ್ಲಿ ಅಜ್ಜನ ಕೈ ಹಿಡಿದು ಜೊತೆಯಲ್ಲಿ ನಡೆಯುವಾಗ, ಅಜ್ಜನೊಡನೆ ಅಡಿಕೆ ಆರಿಸುತ್ತಾ ಚಾಲಿ - ಗೋಟು ಬೇರೆ ಮಾಡುವಾಗ - ಆ ಸಂದರ್ಭಗಳಿಗಾಗೇ ಕೆಲವು ವಿಶೇಷ ಕತೆಗಳಿರುತ್ತಿದ್ದವು. ಅವುಗಳದ್ದೆ ಬೇರೆ ಕತೆ.. :)


ನನ್ನ ಬಾಲ್ಯದಲ್ಲಿ ಅಜ್ಜ ಜೀಕಿಬಿಟ್ಟ ಕತೆಗಳ ಜೋಕಾಲಿಯಲ್ಲಿ ಬದುಕು ಕನಸುಗಳ ನಡುವೆ ನಾನು ಇವತ್ತಿಗೂ ತೂಗಾಡತೊಡಗುತ್ತೇನೆ. ಎಲ್ಲ ಬೇಸರಾದಾಗ ಅವನ ಕತೆಗಳ ನೆನಪಿನ ಬುತ್ತಿ ಮನಸ್ಸನ್ನು ತಣಿಸುತ್ತದೆ. ನನಗೆ ಕತೆಗಳು ಕೊಡುವ ಆಪ್ತತೆಯನ್ನ ಪರಿಚಯಿಸಿದವನೇ ಅಜ್ಜ. ನಮ್ಮ ಸುತ್ತಲ ಎಲ್ಲ ಸಂಗತಿಗಳಲ್ಲಿ ಕತೆ ಕಾಣುವ, ಭಾವಲೋಕಕ್ಕೆ ಹೋಗುವ ಒಂದು ಮ್ಯಾಜಿಕ್ ನನಗೆ ಕಲಿಸಿದ್ದು ಅಜ್ಜ. ಅಜ್ಜನ ನೆನಪಿನೊಂದಿಗೆ ಅವನು ಹೇಳಿದ/ಓದಿದ/ಓದಿಸಿದ ಎಲ್ಲ ಕತೆಗಳ ಆಪ್ತ ಅನುಭವ ಬೆಸೆದುಕೊಂಡೆ ಇದೆ.

ಅಜ್ಜನ ಅಪರೂಪದ ಕತೆಗಳಿಗೆ ಬೇರೆಯದೇ ಬರಹವನ್ನಿನ್ನೊಂದು ದಿನ ಬರೆದೇನು.. ಈಗ ನಾನು ಬರೆಯ ಹೊರಟಿದ್ದು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಬಗ್ಗೆ. ಅದರ ಧಾರೆಯಡಿ ನನ್ನನ್ನ ಮೊತ್ತ ಮೊದಲು ತೋಯ್ಸಿದ್ದು ಅಜ್ಜ.


ನನ್ನ ನೆನಪಿನಂತೆ, ನಾನು ೫ನೇ ತರಗತಿ ಮುಗಿಸಿದ ಬೇಸಿಗೆ ರಜೆಯ ಮೊದಲ ವಾರದಲ್ಲೊಂದು ರಾತ್ರಿ ಆ ದಪ್ಪ ರಾಮಾಯಣ ದರ್ಶನಂನ ಪುಸ್ತಕ ತೆಗೆದಿಟ್ಟು ಇನ್ನು ನಿನಗೆ ಈ ಕತೆ ಹೇಳಬಹುದು ನಾನು-ಅಂತ ಅಜ್ಜ ಹೇಳಿದಾಗ ನನಗಾದ ಸಂಭ್ರಮವನ್ನ ಈ ಯಾವ ಸಾಲುಗಳೂ ಹಿಡಿದಿಡಲಾರವು. ರಾಮಾಯಣ ದರ್ಶನಂ ಅಂತಹ ಶ್ರೇಷ್ಠ ಕನ್ನಡ ಕೃತಿಯನ್ನ ರಾಗವಾಗಿ ಓದುತ್ತಾ, ಕ್ಲಿಷ್ಟ ಪದರಾಶಿಗಳನ್ನ ಬಿಡಿಸಿ ಹೇಳುತ್ತಾ, ನನ್ನ ಮುಖಭಾವದ ಮೇಲೆಯೇ-ನನಗೆ ಅರ್ಥವಾಗದ ಸಂಗತಿಗಳನ್ನು ವಿವರಿಸುತ್ತಾ ಅಜ್ಜ ನನಗೆ ಕತೆ ಹೇಳುತ್ತಿದ್ದ. ನನಗೆ ಈಗನ್ನಿಸುತ್ತದೆ ಅವನು ತನಗೆ ತಾನೇ ಕತೆ ಹೇಳಿಕೊಳ್ಳುತ್ತಿದ್ದ. ಆ ಧಾರೆಯಲ್ಲಿ ನಾನು ಎಷ್ಟು ತೊಯ್ದು ಹೋಗಿದ್ದೇನೆಂದರೆ ಈಗಲೂ ಕಣ್ಮುಚ್ಚಿ ನೆನಪಿಸಿಕೊಂಡರೆ ನಾನು ಚಿತ್ರಕೂಟದಲ್ಲಿ, ಪಂಚವಟಿಯಲ್ಲಿ, ಕಿಷ್ಕಿಂಧೆಯಲ್ಲಿ, ಸರಯೂ ನದೀತೀರದ ಕಾಡುಗಳಲ್ಲಿ, ಗುಹನ ದೋಣಿಯಲ್ಲಿ, ಶಬರಿಯ ಆಶ್ರಮದ ಅಂಗಳದಲ್ಲಿ, ರೆಕ್ಕೆ ಮುರಿದ ಜಟಾಯುವಿನ ಸನಿಹದಲ್ಲಿ, ಲಂಕೆಯ ಸಮುದ್ರತೀರದಲ್ಲಿ, ಅಶೋಕವನದಲ್ಲಿ, ವಿಶ್ವಾಮಿತ್ರರ ಆಶ್ರಮದಲ್ಲಿ, ಅಹಲ್ಯೆ ಕಲ್ಲಾದ ದಾರಿಯಲ್ಲಿ, ಜನಕರಾಜನರಮನೆಯ ಶಿವಧನುಸ್ಸಿನ ಸಮೀಪದಲ್ಲಿ, ಕನಕಲಂಕೆಯ ಅನ್ವೇಷಣೆಯಲ್ಲಿ - ಎಲ್ಲಿ ಇಲ್ಲ ಹೇಳಿ - ಎಲ್ಲೆಲ್ಲೂ ಮತ್ತೆ ಅಲೆಯತೊಡಗುತ್ತೇನೆ. ಆ ಸುಂದರ ಕಾವ್ಯದ ನವಿರು ಸೇಚನ ಮನಕ್ಕೆ ಹಾಯೆನಿಸುತ್ತದೆ.


ಅದಾದ ಮೇಲೆ ಕೆಲ ವರ್ಷಗಳಲ್ಲಿ ನಾನೇ ಅದನ್ನು ಓದುವುದನ್ನು ಕಲಿತೆ. ಎಷ್ಟರ ಮಟ್ಟಿಗೆಂದರೆ ಅಜ್ಜನಂತಹ ಅಜ್ಜನೇ ಎರಡು ದಿನ ಬಂದಿದ್ದು ರಾಮಾಯಣ ದರ್ಶನಂ ಓದಿ ಹೇಳು ಬಾ ಎಂದು ಕರೆಯುತ್ತಿದ್ದ.. ಅವನ ಕಥನ ಶಕ್ತಿಯ ಧೂಳಿನಂಶವೂ ನನ್ನಲಿರಲಿಲ್ಲ ಆದರೆ ಸ್ಪಷ್ಟವಾಗಿ ಓದಲು ಕಲಿತಿದ್ದೆ. ಅದು ಅವನಿಗೆ ಖುಷಿ ನೀಡುತ್ತಿತ್ತು. ವಯಸ್ಸಿನ ಒಜ್ಜೆ ಅವನ ನೆನಪಿನ ಮೇಲೆ ಹೇರಿದ್ದರಿಂದ ಎಲ್ಲ ನೆನಪಿರುತ್ತಿರಲಿಲ್ಲ. ಆದರೆ ನಾನು ಓದುವಾಗ ಅವನು ಹಳೆಯ ದಿನಗಳಿಗೆ ರೂಪಾಂತರಗೊಳ್ಳುತ್ತಿದ್ದ. ಅವನಿಗೆ (ನನಗೂ ಕೂಡಾ) ತುಂಬ ಇಷ್ಟವಾದ ಸನ್ನಿವೇಶಗಳು - ರಾಮಾಯಣವೆಂಬ ಮಹಾಧಾರೆಯಿಂದ ಸಿಡಿದು ಬೀಳುತ್ತಿದ್ದ ಪುಟ್ಟ ಆದರೆ ಗಟ್ಟಿ ಪಾತ್ರಗಳ ಮುತ್ತುಹನಿಗಳು. ಶ್ರವಣ, ದಶರಥ, ಮಂಥರೆ, ಗುಹ, ಮಾರೀಚ, ಜಟಾಯು, ಶಬರಿ, ವಾಲಿ, ಲಂಕಿಣಿ, ಮಂಡೋದರಿ, ವಿಭೀಷಣ, ಲಂಕಾನಗರಿ, ಚಿತ್ರಕೂಟ, ಪಂಚವಟಿ, ಇತ್ಯಾದಿಗಳನ್ನ ರಸಋಷಿಯು ಅಷ್ಟು ಆಪ್ತವಾಗುವಂತೆ ಚಿತ್ರಿಸಿದ್ದಾರೆ- ಸರಿ ಅವನಿಗೆ ತುಂಬ ಇಷ್ಟವಾಗುವ ಸನ್ನಿವೇಶಗಳನ್ನು ಓದಿ ಹೇಳುವಾಗ ಮತ್ತೆ ಅಭಿನಯ ಸಹಿತವಾಗಿ ಆ ವಾಕ್ಯಗಳನ್ನು ಪುನರುಚ್ಚರಿಸುತ್ತಿದ್ದ. ಅದರಲ್ಲಿ ನನ್ನ ಮೇಲೆ ತುಂಬ ಪ್ರಭಾವ ಬೀರಿದ ಒಂದು ಅಧ್ಯಾಯವನ್ನ ಇಲ್ಲಿ ಕ್ಲುಪ್ತವಾಗಿ ಬರೆಯುತ್ತಿದ್ದೇನೆ. ಇದು ಆಸಕ್ತ ಓದುಗರಿಗೆ ಪ್ರವೇಶಿಕೆಯಾಗಲಿ ಎಂಬುದು ನನ್ನ ಆಸೆ.


ನೀಂ ಸತ್ಯವ್ರತನೇ ದಿಟಂ....


ವಾಲಿ, ರಾಮಾಯಣದಲ್ಲೊಂದು ಪೂರಕ ಪಾತ್ರ. ಕಾವ್ಯದ ರಸದೌತಣ ಉಣಬಡಿಸುವ ರಸ‌ಋಷಿ ಕುವೆಂಪುರವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂನಲ್ಲಿ, ವಾಲಿಯ ಪಾತ್ರಚಿತ್ರಣ ಸವಿದವರು ‍ಯಾರೂ ಅವನನ್ನ ನೆನಪುಗಳ ಭಿತ್ತಿಯಿಂದ ಒರೆಸಿಹಾಕುವುದಿಲ್ಲ. ರಸ‌ಋಷಿಯ ವಾಲಿ ನನ್ನ ನಿಮ್ಮಂಥವನು. ಸಾದಾ ಸರಳ. ತಾನು ಇತರರಿಗೆ ಕೇಡು ಬಯಸಲಾರ, ಹಾಗೇ ಬೇರೆಯವರ ಕೇಡು ಸಹಿಸಲೂ ಆರ.

ನಮಗೆ ವಾಲಿ, ಸುಗ್ರೀವನೊಡನೆ ಕದನ ಮಾಡಿ, ರಾಮನಿಂದ ಕೊಲ್ಲಲ್ಪಡುವ ಒಬ್ಬ ಬಲಾಢ್ಯ ವಾನರ ಎಂದಷ್ಟೇ ಗೊತ್ತು. ಇಲ್ಲ ರಸಋಷಿಯ ವಾಲಿ ಹಾಗಿಲ್ಲ. ವಾಲಿಯ ಶಕ್ತಿ, ಸಾಮರ್ಥ್ಯ, ಸ್ವಭಾವ ತಿಳಿಯಬೇಕಿದ್ದರೆ ನೀವು ಈ ಅಣ್ಣ ತಮ್ಮರ ಸಂಬಂಧ, ಅವರ ರಾಜ್ಯ,ಕುಟುಂಬ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಬೇಕು.


ವಾಲಿ, ಸುಗ್ರೀವ ಇಬ್ಬರೂ ಒಬ್ಬರನ್ನೊಬ್ಬರು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ ಅಣ್ಣತಮ್ಮಂದಿರು. ಸುಭಿಕ್ಷ ಕಿಷ್ಕಿಂಧಾ ಕಾಡು, ಸಮಸ್ತ ವಾನರ ಪಡೆಗಳಿಗೂ ವಾಲಿಯೇ ರಾಜ. ಸುಗ್ರೀವ ವಾಲಿಯ ಬಲಗೈ. ರಕ್ತದುಂಧುಭಿ ಎಂಬ ರಾಕ್ಷಸನೊಬ್ಬನನ್ನು ಕೊಲ್ಲುವಾಗ ಆದ ಕಣ್ತಪ್ಪಿನಿಂದ ಅರಿಯದೆ ಸುಗ್ರೀವನು, ವಾಲಿಯನ್ನು ಒಂದು ದೊಡ್ಡ ಬಿಲದಲ್ಲಿ ಬಂಧಿಸಿಬಿಡುತ್ತಾನೆ. ಅಲ್ಲಿಂದ ಹೊರಬರುವ ಆಕ್ರೋಶಗೊಂಡ ವಾಲಿ, ರಾಜ್ಯದಾಸೆಯಿಂದ ಸುಗ್ರೀವ ತನ್ನನ್ನು ಬಂಧಿಸಿದ್ದನು ಎಂಬ ತಪ್ಪುತಿಳುವಳಿಕೆಯಿಂದ, ಸುಗ್ರೀವನನ್ನು ಕಿಷ್ಕಿಂಧೆಯಿಂದ ಹೊರಗಟ್ಟುತ್ತಾನೆ.

ಸುಗ್ರೀವನ ಬಂಟರಾದ ನೀಲ, ಹನುಮಂತ, ಜಾಂಬುವಂತರೂ ಉಟ್ಟಬಟ್ಟೆಯಲ್ಲೇ ಅವನೊಂದಿಗೆ ಹೊರಡುತ್ತಾರೆ. ತನ್ನ ಕುಟುಂಬದಿಂದ, ಪ್ರಿಯಪತ್ನಿ ರುಮೆಯಿಂದ ದೂರವಾಗಿ ಗಡೀಪಾರಾದ ಸುಗ್ರೀವನಿಗೆ ಸಹಜವಾಗಿಯೇ ಅಣ್ಣನ ಮೇಲೆ ಅಸಮಾಧಾನವಾಗುತ್ತದೆ.ಆ ಸಮಯದಲ್ಲೆ‌ ಅವನಿಗೆ ಸೀತೆಯನ್ನು ಕಳೆದುಕೊಂಡು ವ್ಯಾಕುಲನಾದ ರಾಮ ಸಿಕ್ಕುತ್ತಾನೆ. ಮತ್ತು ರಾಮ ತನ್ನಂತೇ ಪತ್ನಿಯನ್ನು ಕಳೆದುಕೊಂಡು ವ್ಯಾಕುಲನಾದ ಸುಗ್ರೀವನಲ್ಲಿ ಸಹಾನುಭೂತಿ ತೋರುತ್ತಾನೆ. ವಾಲಿಯನ್ನು ಸೋಲಿಸಿ ತನಗೆ ರಾಜ್ಯ ಕೊಡಿಸಿದರೆ, ಸೀತೆಯನ್ನು ತಾವೆಲ್ಲ ಸೇರಿ ಹುಡುಕುತ್ತೇವೆ ಅಂತ ಸುಗ್ರೀವ ರಾಮನಿಗೆ ಮಾತು ಕೊಡುತ್ತಾನೆ. ಇದು ಹಿನ್ನೆಲೆ.
ಆದರೆ ವಾಲಿಯನ್ನು ಹೊಡೆದಾಟಕ್ಕೆ ಆಹ್ವಾನಿಸುವುದು ಹೇಗೆ?

'ನೀವು ಸಹಾಯಕ್ಕೆ ಬೆನ್ನಿಗಿದ್ದರೆ ಅದೇ ಧೈರ್ಯವೆಂದ ಸುಗ್ರೀವ ಕಿಷ್ಕಿಂಧೆಯ ಬೆಟ್ಟಗಳು ಅದುರಿ ಹೋಗುವಂತಹದೊಂದು ಘರ್ಜನೆಗೈಯುತ್ತಾನೆ.

ಆ ಸನ್ನಿವೇಶವನ್ನು ಕವಿ ಹೀಗೆ ಬಣ್ಣಿಸುತ್ತಾರೆ.

'ಚಕಿತವಾದುವು ಜಿಂಕೆ, ಕಾಡುಕೋಣ, ಹೆಬ್ಬುಲಿ,ಸಿಂಹ; ತೆರೆತೆರೆಯಾಗಿ ಹರಿದ ಘರ್ಜನೆಯ ಸಿಡಿಲು ಶಾಂತವಾದಾಗ, ದಟ್ಟಡವಿಯ ನಿಶ್ಯಬ್ದದ ಕಡಲು ಮತ್ತೆ ಹೆಪ್ಪುಗಟ್ಟಿತಂತೆ.'

ಸುಗ್ರೀವ ಘರ್ಜನೆಗೆ ಮರುದನಿಯನ್ನು ಆಲಿಸುತ್ತ ನಿಂತ ರಾಮಲಕ್ಷ್ಮಣರಿಗೆ ಕೇಳಿದ್ದೇನು? ಸಿಡಿಲ ಪಡೆಗಳೊಂದಾಗಿ ಆರ್ಭಟಿಸಿದಂತಹ, ಚಂಡೆದನಿಯನ್ನೇ ಮೀರಿದ ವಾಲಿಯ ಹುಯಿಲು! ಕವಿ ವಿವರಿಸುತ್ತಾರೆ... ಬೆಟ್ಟ ಗುಡುಗಿತ್ತಲ್ಲಿ, ಅತ್ತ ಕಾಡು ನಡುಗಿತ್ತು. ಸಿಂಹದಂತೆ ಆರ್ಭಟಿಸುವ ವಾಲಿ, ಮರಗಳ ಮರೆಯಿಂದ ಹುಲಿಯಂತೆ ಚಿಮ್ಮಿ ಬಂದನಂತೆ. 'ತಮ್ಮನನ್ನ ನೋಡಿದನು ವಾಲಿ, ಕೆಂಪಾದುವು ಆಲಿ(ಕಣ್ಣು) ಅಂತ ಬರೆದಿದ್ದಾರೆ ಕವಿ. ಮುಂದೆ ನಡೆದ ಘೋರ ಬಡಿದಾಟದಲ್ಲಿ ಸುಗ್ರೀವ ಹಣ್ಣಾಗುತ್ತಾನೆ. ಸಹಾಯದ ಭರವಸೆಯಿತ್ತ ರಾಮ, ತುಂಬ ಸಾಮ್ಯವಿದ್ದ ಅಣ್ಣ ತಮ್ಮಂದಿರಲ್ಲಿ ಸುಗ್ರೀವನನ್ನು ಗುರುತಿಸಲರಿಯದೆ ಪೆಚ್ಚಾಗುತ್ತಾನೆ. ರಾಮನ ನೆರವು ಬಿಸಿಲುಗುದುರೆಯಾಯ್ತೆಂದು ಮನಗೊಂಡು ಸೆಣಸಲಾಗದ ಸುಗ್ರೀವ ಓಡಿ ಹೋಗಿ ಅಡಗಿಕೊಳ್ಳುತ್ತಾನೆ. ವಿಜಯೋನ್ಮತ್ತ ವಾಲಿ ಕಿಷ್ಕಿಂಧೆಗೆ ಹಿಂದಿರುಗುತ್ತಾನೆ.


ಜರ್ಜರಗೊಂಡ ಸುಗ್ರೀವನನ್ನು ಸಂತೈಸಿದ ರಾಮ, ತನ್ನ ಅಸಹಾಯಕತೆಯನ್ನು ವಿವರಿಸಿ ಮತ್ತೊಮ್ಮೆ ಸುಗ್ರೀವನನ್ನು ಹುರಿದುಂಬಿಸುತ್ತಾನೆ. ಈ ಬಾರಿ ಗುರುತಿಗೆ ಕೆಂಪು ಕಣಗಿಲೆ ಹೂವಿನ ಮಾಲೆಯನ್ನು ಸುಗ್ರೀವನ ಕೊರಳಿಗೆ ತೊಡಿಸುತ್ತಾನೆ. ಇತ್ತ ದಣಿದಿದ್ದರೂ ಉತ್ಸಾಹದಿಂದ ಕಿಷ್ಕಿಂಧೆಯೊಳ ಹೋದ ವಾಲಿಗೆ ಪತ್ನಿ ತಾರೆ ಇದಿರಾಗುತ್ತಾಳೆ. ಕವಿ ವಾಕ್ಯಗಳನ್ನೇ ಸವಿಯಿರಿ ...

ತಾರೆ,

ಕೊಡಗಿನುಡುಗೆಯ ಸೀರೆ,

ಸಿಂಗರಿಸಿದಾ ನೀರೆ.


ಅವಳ ಕೈಸೋಂಕಿನಿಂದಲೇ ದಣಿವಾರಿದ ವಾಲಿಗೆ ' ತಮ್ಮನನ್ನೇ ಬಡಿದೆನಲ್ಲಾ ' ಎಂಬ ಸಂತಾಪ ಮುತ್ತಿಕೊಳ್ಳುತ್ತದೆ. ಅವನನ್ನು ಹೊರಹಾಕಿ, ಕುಟುಂಬದಿಂದ ದೂರವಿರಿಸಿ ತಪ್ಪು ಮಾಡಿದೆ ಎಂದು ಪರಿತಪಿಸುತ್ತಾನೆ. ಅಷ್ಟರಲ್ಲೇ ಚೇತರಿಸಿಕೊಂಡ ಸುಗ್ರೀವನ ಕೂಗು ಮತ್ತೆ ಕೇಳುತ್ತದೆ. ಅದನ್ನ ಕೇಳುತ್ತಲೆ ವಾಲಿ ಸಿಟ್ಟಿನಿಂದ ಎದ್ದು ನಿಲ್ಲುತ್ತಾನೆ. ಇಷ್ಟು ಹೊಡೆಸಿಕೊಂಡರೂ ಸಾಕಾಗದೆ ಮತ್ತೆ ಬಂದನೇ ಎಂಬ ಆಕ್ರೋಶದಿಂದ ಹೊರಟ ವಾಲಿ, ಅಡ್ಡ ಬಂದ ಪತ್ನಿಯನ್ನು ಅತ್ತ ಸರಿಸುತ್ತಾನೆ. ಉಂಹುಂ, ತಾರೆ ಕೋಪೋನ್ಮತ್ತ ವಾಲಿಯ ಕಾಲು ಹಿಡಿಯುತ್ತಾಳೆ. " ಕಣ್ಬನಿಯ ಜೇನಿಳಿವ ತಾವರೆಯ ಚೆಲುವೆ.! " ಸಿಟ್ಟು ಬೇಡ, ವೀರರ ಶಕ್ತಿ ಔದಾರ್ಯದಲ್ಲಿದೆ. ಒಮ್ಮೆ ಸುಗ್ರೀವನ ಹೆಂಡತಿ ರುಮೆಯ ಬಗ್ಗೆ ಯೋಚಿಸು. ಪಾಪದ ಹುಡುಗಿ, ಸುಗ್ರೀವನಿನ್ನೇನು? ನಿನ್ನ ಪ್ರೀತಿಯ ತಮ್ಮ. ಸಣ್ಣವರಿದ್ದಾಗ ನೀವು ಎಷ್ಟು ಹೊಂದಿಕೊಂಡಿದ್ದಿರಿ ಅಂತ ನೆನಪಿಸಿಕೋ. ಬಾಲ್ಯದ ಚಿನ್ನಾಟಗಳನ್ನು ನೆನೆ.' ಅಂತ ವಿನಂತಿಸುತ್ತಾಳೆ.


ಕೇಳಕೇಳುತ್ತಾ ಶಾಂತನಾದ ವಾಲಿಯ ಕಣ್ಮುಂದೆ ಬಾಲ್ಯದ ಎಳೆಬಿಸಿಲು ಮಿಂಚುತ್ತದೆ. ಅಣ್ಣಾ .. ಬಾ .. ಬಾರೆಂದು ಕರೆವ, ಜೊಲ್ಲು ಸುರಿಸಿ ತೊದಲುವ ಸಣ್ಣ ಸುಗ್ರೀವ ನೆಲೆಗೊಳ್ಳುತ್ತಾನೆ. ಆ ಚಿಣ್ಣನನ್ನು ಎತ್ತಿಕೊಂಡು ತಾನಾಡಿಸಿದ ಕೂಸುಮರಿ ಉಪ್ಪಿನಾಟ ನೆನಪಾಗುತ್ತದೆ. ಸ್ನೇಹ ತುಂಬಿದ ಮನಸ್ಸಿನ ವಾಲಿ ತಾರೆಗೆ ಹೇಳುತ್ತಾನೆ. ' ನಡೆ ನಿನ್ನ ತಂಗಿ ರುಮೆಯನ್ನು ಸಿಂಗರಿಸು. ಚಿಕ್ಕವರಿದ್ದಾಗ ನಾವಾಡಿದ ಉಪ್ಪಾಟವನ್ನು ಮತ್ತೆ ಇವತ್ತು ಆಡುತ್ತೇನೆ. ಬಡಿದಾಡುವ ನೆಪದಲ್ಲಿ ಹೋಗಿ ಆ ಪೋರನನ್ನು ಹೊತ್ತು ತರುತ್ತೇನೆ.' ಎಂದುಸುರಿದವನೇ ದಾಪುಗಾಲಿಕ್ಕಿ ಹೊರಟ ಬೃಹದ್ಬಲಶಾಲಿ ವಾಲಿ. ಕದನಕ್ಕೆ ಸಿದ್ಧವಾಗಿದ್ದ ಸುಗ್ರೀವನೆಡೆಗೆ ಧಾವಿಸಿದ ವಾಲಿಯಲ್ಲಿ ಪ್ರೀತಿಯ ಸೆಲೆಯುಕ್ಕುತ್ತಿತ್ತು. ತಮ್ಮನನ್ನಪ್ಪಲು ಮುನ್ನುಗ್ಗಿದ. ಈ ಬದಲಾವಣೆ ತಿಳಿಯದ ಸುಗ್ರೀವ ಅಣ್ಣನೆಡೆ ಬಂಡೆಗಳನ್ನೆತ್ತಿ ತೂರತೊಡಗಿದ. ಅಂಗೈಯಲ್ಲೆ ಅವನ್ನು ತಡೆದು ಮುಂದುವರಿದ ವಾಲಿ, 'ಸಿಂಹವನ್ನು ಗಂಡಭೇರುಂಡ ಎತ್ತಿಕೊಳ್ಳುವಂತೆ' ಸುಗ್ರೀವನನ್ನು ಹೆಗಲ ಮೇಲೆ ಹಾಕಿಕೊಂಡು ಕಿಷ್ಕಿಂಧೆಯೆಡೆ ತೆರಳಿದ.

ತನ್ನ ಗೆಳೆಯನನ್ನು ಹೊತ್ತೋಡುತ್ತಿರುವ ವಾಲಿಯನ್ನು ನೋಡಿದ ರಾಮನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ದಿಕ್ಕೆಟ್ಟ ರಾಮ ಓಡುತ್ತಿದ್ದ ವಾಲಿಯ ಬೆನ್ನಿಗೆ ತೀಕ್ಷ್ಣ ಬಾಣವೊಂದನ್ನೆಸೆದ.


ಕವಿ ಹೋಲಿಕೆ ನೋಡಿ.. " ಕಲ್ಪವೃಕ್ಷವೊಂದು ಕಡಿದುರುಳಿತೋ ಅಥವಾ ಸ್ವರ್ಗದ ಐರಾವತವೆ ನೆಲದಲ್ಲಿ ಬಿತ್ತೋ ಎಂಬಂತೆ" ವಾಲಿ ನೆಲಕ್ಕುರುಳುತ್ತಾನೆ.

ಮರಸು ಕೂತ ಬೇಟೆಗಾರ,ಕೋವಿಯ ಈಡಿಗೆ ಬಲಿಯಾದ ಬೇಟೆಯನ್ನು ನೋಡಿ ಅದರ ಬಳಿಗೋಡುವ ಹಾಗೆ ರಾಮಾದಿಗಳು ಬಿದ್ದ ವಾಲಿಯೆಡೆಗೆ ಧಾವಿಸಿ, ತಮ್ಮ ಸಾಹಸಕ್ಕೆ ತಾವೇ ದನಿಯಾದರಂತೆ. ಕೆಲಕ್ಷಣದ ಸಂಭ್ರಮವಿಳಿದ ಬಳಿಕ ಸುಗ್ರೀವ, ಬಸವಳಿದು ಬಿದ್ದ ಅಣ್ಣನೆಡೆ ನೋಡಿದ.

'ಹಿರಿದಾದುದಳಿಯೆ, ಹಗೆಯಾದರೇನು, ಹಿರಿತನಕೆ ನೋವಾಗದುಂಟೆ' ಎಂದು ಕೇಳುವ ಕವಿ, ಸುಗ್ರೀವ-ರಾಮಾದಿಗಳ ಖಿನ್ನತೆಯನ್ನು ಬಣ್ಣಿಸುತ್ತಾರೆ. ಕಣ್ಣೀರು ಕೆಡವುತ್ತ ಸುಗ್ರೀವ ನಿಂತರೆ, ತನ್ನ ಬಿಲ್ಜಾಣ್ಮೆಯನ್ನು ತಾನೇ ಹಳಿದುಕೊಂಡನಂತೆ ರಾಮ.


ಸುಳಿದ ತಂಗಾಳಿಯಲೆಗೆ ಎಚ್ಚರಾದ ವಾಲಿ ನಡುಕುದನಿಯಲ್ಲಿ, ಎಲ್ಲರೆಡೆ ನೋಡಿ ನುಡಿಯುತ್ತಾನೆ.

'ಏನು ಮಾಡಿದೆಯೋ ಸುಗ್ರೀವಾ..ಮುದ್ದಾಡಲೆಂದು ಬಂದ ಅಕ್ಕರೆಯ ಕೈಗಳನ್ನೇ ಕಟ್ಟಿಬಿಟ್ಟೆಯಲ್ಲಾ..? ಯಾರದು? ನನ್ನ ಬೆನ್ನಿಗೆ ಬಾಣ ಬಿಟ್ಟ ವೀರವೇಷಿ? ಓಹೋ ರಾಮನೋ..! ಊರಿಗೆ ತಮ್ಮನನ್ನು ಹೊತ್ತುಕೊಂಡೊಯ್ಯುತ್ತಿದ್ದ ಅಣ್ಣನನ್ನು ಹೇಡಿತನದಿಂದ ಕೊಂದೆಯಲ್ಲಾ !ನಿನ್ನನ್ನ ಮನತುಂಬೆ ಹೊಗಳುತ್ತಿದ್ದ ತಾರೆಯ ಬಾಳಿಗೆ ಕಿಚ್ಚಿಟ್ಟೆಯಲ್ಲಾ! ಧಿಕ್ಕಾರ ನಿನ್ನ ಕಲಿತನಕ್ಕೆ, ಧಿಕ್ಕಾರವಿರಲಿ ನಿನ್ನ ಶೌರ್ಯದ ಕೀರ್ತಿಗೆ! ಹೇಡಿಯ ಹಾಗೆ ಅಡಗಿ ಬಾಣ ಬಿಟ್ಟಿದ್ದರಿಂದ ಬದುಕಿದೆ ನೀನು, ಅಲ್ಲದೆ ನನ್ನ ಕೆಣಕಲಾದೀತಾ ನಿಂಗೆ?" ಉಸಿರು ಸುಯ್ಯುತ್ತದೆ.


ಬೆನ್ನಿಗೆ ನೆಟ್ಟ ಬಾಣದಿಂದ ಧಾರೆಯಾಗಿ ಸುರಿವ ರಕ್ತ, ಕಪ್ಪಡರಿದ ಮುಖ, ಆಡಲಾಗದೆ ಆಡುವ ಮಾತು, ಏದುಸಿರು ಎಲ್ಲವೂ ವಾಲಿಯ ಪರ ವಾದಿಸುತ್ತಿದ್ದರೆ. . . . ರಾಮ ಉತ್ತರಿಸಲಾಗದೆ ತಲೆ ತಗ್ಗಿಸಿದನಂತೆ.

ಅಳುತ್ತಳುತ್ತ ಕಾಲಿಗೆರಗಿದ ಸುಗ್ರೀವನನ್ನು ವಾಲಿಯೇ ಸಂತೈಸಿದ. ರಾಮ ನಮ್ಮ ಅತಿಥಿ, ಅವನಿಗೆ ನೆರವಾಗು ಎಂದು ಸುಗ್ರೀವನಿಗೆ ಹೇಳುತ್ತಿರುವಂತೆಯೆ ಕೇಳಿಸಿತು ರೋದನದ ಧ್ವನಿ. " ಏನದು ಸ್ವರ್ಗದ ಹಾಡು ಭೂಮಿಗೆ ಧುಮ್ಮಿಕ್ಕುವಂತಿದೆ, ಏನಾ ಧ್ವನಿ?" ವಾಲಿ ತಮ್ಮನನ್ನು ಕೇಳಿದ. ಉಕ್ಕಿಬಂದ ಅಳುವಿನ ನಡುವೆ ಸುಗ್ರೀವ್ ಉತ್ತರಿಸುತ್ತಾನೆ. . . 'ಬಳಿ ಸಾರುತಿದೆ ರೋದಿಸುತಿಹ ಕಿಷ್ಕಿಂಧೆ.'

ತೇಲುಗಣ್ಣಾದ ವಾಲಿಗೆ ಇತ್ತಲಿನ ಅರಿವೆ ಹೋಗಿಬಿಟ್ಟಿತ್ತು. ಒಂದೇ ಸಮನೆ ಮಾತನಾಡತೊಡಗಿದ.

"ಏನಂದೆ?
ಹೌದೌದು ಬಳಿಸಾರುತಿದೆ ಸಂಧ್ಯೆ!

ಬೆಟ್ಟದ ಮೇಲೆ ಹಬ್ಬುತಿದೆ ಸುಂದರ ಸಂಧ್ಯೆ!

ಆಃ ನನ್ನ ಕಿಷ್ಕಿಂಧೆ, ತಾಯ್ತಂದೆಯರ ನಾಡೆ,

ತಾಯ್ ನುಡಿಯ ಮಲೆಗುಡಿಯ ಬೆಟ್ಟದಡವಿಯ ಬೀಡೆ!

ನಾನು ಹುಟ್ಟುವಾಗ ಅಮ್ಮನ ಬಸಿರಾಗಿದ್ದವಳು, ಆಮೇಲೆ ನಲ್ಮೆಯ ತೊಟ್ಟಿಲಾದೆ.

ಎಳೆಯನಿಗೆ ಜೋಗುಳವಾದೆ, ನನ ತಾರುಣ್ಯಕೆ ಉಯ್ಯಾಲೆಯಾದೆ.

ಮುಪ್ಪಿಗೆ ಧರ್ಮದಾಶ್ರಯವಾಗಿ, ಸಾವಿಗೆ ಶಾಂತಿಯ ಮಡಿಲಾಗಬೇಕಾಗಿದ್ದ

ನಿನ್ನನ್ನು ನಾನೀಗ ತೊರೆಯುತ್ತಿದ್ದೇನೆ ಮನ್ನಿಸಮ್ಮಾ.

ಮುಗಿಲಲೆವ ಸೊಬಗಿನ ನೆಲೆಯಾದ ನಿನ್ನ ಬೆಟ್ಟಗಳಲ್ಲಿ ನಾನಿನ್ನು ಕಾಲಾಡಲಾರೆ

ಚೆಲುವಿನ ಚಿಪ್ಪೊಡೆದು ಮುತ್ತುನೀರು ಸಿಡಿಸುವ

ನಿನ್ನ ಜಲಪಾತಗಳಲ್ಲಿ ನಾನಿನ್ನು ಮೈತೊಯ್ಯಿಸಲಾರೆ

ನನ್ನ ತೋಳುಗಳ ಆಟಕ್ಕೆ ನಿನ್ನ ಅಡವಿಯ

ಹಣ್ಣು ಹೊತ್ತ ಮರಗಳು ಇನ್ನು ತೂಗುವುದಿಲ್ಲ, ತೊನೆಯುವುದಿಲ್ಲ, ಬಾಗುವುದಿಲ್ಲ

ನಿನ್ನಗಲ ಬಾಂದಳದ ಮೋಡಮಾಲೆಯ ಚಂದವನ್ನು ನೋಡದಿನ್ನು ಈ ವಾಲಿಯ ಕಣ್ಣಾಲಿ.

ಸುಗ್ರೀವಾ.. ನೆನಪಿದೆಯಾ ನಿನಗೆ ಈಜು ಕಲಿಸುವಾಗ

ನೀನು ಪಂಪಾ ಸರೋವರದಲ್ಲಿ ಮುಳುಗಿ ಉಸಿರಿಗೆ ಕಾತರಿಸುತ್ತಿದ್ದೆ.

ನಾನು ನಿನ್ನ ಜುಟ್ಟು ಹಿಡಿದು ಮೇಲೆತ್ತಿ ಬದುಕಿಸಿದೆ.

ಅಂದು ನೀನು ಉಸಿರಿಗಾಗಿ ಅನುಭವಿಸಿದ ಸಂಕಟ

ಈಗ ನನಗೆ ಗೊತ್ತಾಗುತ್ತಿದೆ.

ಬಾಳಿನಂಚಿನಲ್ಲಿ ನಿಂತಾಗ ನನಗೆ ತಿಳಿದ ಸತ್ಯವೊಂದನ್ನ ಹೇಳ್ತೇನೆ.

"ನಾವು ಗಟ್ಟಿಯೆಂದು ತಿಳಿದಿರುವುದೆಲ್ಲಾ ಜೊಳ್ಳು, ಬರೀ ಜೊಳ್ಳು . . .!!

ಸಾವಿನ ಗಾಳಿ ತೂರುತ್ತಾ ಇದ್ದರೆ ಈಗ ನನಗೆ ಈ ಅರಿವಾಗುತ್ತಿದೆ"

ಎಂದು ನುಡಿಯುತ್ತಾ ಕೊನೆಯುಸಿರೆಳೆಯುತ್ತಾನೆ ವಾಲಿ. ಸಂಕಟವೇ ಮೂರ್ತಿವೆತ್ತ ತಾರೆ, ಪ್ರಿಯಸಖನೊಂದಿಗೆ ತಾನೂ ಚಿತೆಯೇರುತ್ತಾಳೆ.


ಈ ಅಧ್ಯಾಯವನ್ನು ನಾನು ಹಲವು ಬಾರಿ ಓದಿದ್ದೇನೆ. ಪ್ರತಿಬಾರಿಯೂ ಕಣ್ಣೀರಿಟ್ಟಿದ್ದೇನೆ. ನನ್ನ ಸಣ್ಣತನಕ್ಕೆ ನಾಚಿದ್ದೇನೆ. ವಾಲಿಯ ದಾರ್ಶನಿಕತೆಯೆಡೆಗೆ ಬೆರಗುಗೊಂಡಿದ್ದೇನೆ. ಕವಿಯ ವರ್ಣನೆಗೆ ಮನಸೋತಿದ್ದೇನೆ. ಕವಿವರ್ಣನೆಯ ಜಲಧಾರೆಗೆ ಸಿಕ್ಕರಷ್ಟೇ ನಿಮಗೆ ಈ ಅಮೃತದ ಸವಿ ಹತ್ತುವುದು. ರಾಮಾಯಣದರ್ಶನದ "ನೀಂ ಸತ್ಯವ್ರತನೇ ದಿಟಂ . . " ಎಂಬ ಅಧ್ಯಾಯದಲ್ಲಿ ಚಿತ್ರಿತವಾದ ವಾಲಿಯನ್ನೊಮ್ಮೆ ತಪ್ಪದೇ ಮಾತನಾಡಿಸಿ.


ಇಂತಹ ಒಂದು ಅಮೂಲ್ಯ ಸಂಪತ್ತನ್ನ ನನಗೆ ಕೊಡುಗೆಯಾಗಿ ನೀಡಿದ, ತನ್ನೆಲ್ಲ ಕತೆಗಳ ಆಸ್ತಿಯನ್ನೂ ನನಗೆ ನೀಡಿ ಹೋದ ಅಜ್ಜನಿಗೆ ನಾನು ಚಿರಋಣಿ. ನನ್ನ ಬದುಕಿನ ಹಲವು ಸ್ತರಗಳಲ್ಲಿ ಅಜ್ಜ ನಾನೇ ಆಗಿ ಬೆರೆತುಹೋಗಿದ್ದಾನೆ. ನನ್ನ ಆತಂಕದ ಕ್ಷಣಗಳಲ್ಲಿ ಮಡಿಲಾಗಿದ್ದಾನೆ. ಭೌತಿಕವಾಗಿ ಇನ್ನಿಲ್ಲವಾಗಿಯೂ, ನನ್ನ ಮನಸ್ಸಿನಂಗಳದಲ್ಲಿ ದಿನವೂ ದೀಪವಾಗಿ ಬೆಳಗಿದ್ದಾನೆ.