Friday, March 30, 2007

ನೀಂ ಸತ್ಯವ್ರತನೇ ದಿಟಂ....

ನಾನು ಚಿಕ್ಕವಳಿದ್ದಾಗ ನನಗೆ ಕತೆಗಳ ಕಣಜದಿಂದ ತಿನಿಸನ್ನು ಮೊಗೆಮೊಗೆದು ಕೊಟ್ಟಿದ್ದು ನನ್ನ ಅಜ್ಜ. ನನ್ನ ಬಾಲ್ಯದ ಎಲ್ಲ ಕಲ್ಪನೆಗಳಿಗೂ ಬಣ್ಣ ತುಂಬಿದ್ದು ಅಜ್ಜನ ಕತೆಗಳು. ಸ್ವಲ್ಪ ದೊಡ್ಡವಳಾದ ಮೇಲೂ ಅವನ ಕತೆಗಳೆಂದರೆ ನನಗೆ ಪ್ರೀತಿಯೇ. ಅವನು ನನಗೆ ದಿನವೂ ನಿಗದಿತ ಸಮಯಕ್ಕೆ (ಸಾಮಾನ್ಯವಾಗಿ ರಾತ್ರೆ ಊಟವಾದ ಮೇಲೆ ಕಣ್ಣು ಮುಚ್ಚುವವರೆಗೂ) ಹೊಸಹೊಸದಾದ ಕತೆ ಹೇಳಬೇಕಿತ್ತು. ಒಂದೊಂದು ಸಲ ಅದು ಉದ್ದ ಕತೆಯಾಗಿ ೩-೪ ರಾತ್ರಿಗಳ ಪ್ರದರ್ಶನ ಕಾಣುತ್ತಿತ್ತು. ಹೌದು, ಅಜ್ಜ ಬರೀ ಕತೆಯನ್ನ ಹೇಳುತ್ತಿರಲಿಲ್ಲ. ಅದು ಅಭಿನಯ ಸಹಿತವಾಗಿರುತ್ತಿತ್ತು. ರಾಗಮಾಲಿಕೆಗಳೂ ಇರುತ್ತಿದ್ದವು. ಕತೆಯ ರಸಕ್ಕೆ ತಕ್ಕಂತೆ ಧ್ವನಿ ಏರಿಳಿಸುತ್ತಾ, ಕೈಯಲ್ಲಿ ಕೆಲವು ರಸನಿಮಿಷಗಳನ್ನು ಅಭಿನಯಿಸುತ್ತಾ ಅವನು ಕತೆ ಹೇಳುವ ಕ್ಷಣಗಳಲ್ಲಿ ನಾನು ಈ ನೆಲದ ಮೇಲಿರುತ್ತಿರಲಿಲ್ಲ. ಅವನ ಸುಮನೋಹರ ಕಥಾ ಲೋಕದ ದಾರಿಯಲ್ಲಿ ನಾನು ನಿತ್ಯ ಪಯಣದ ಅಚ್ಚರಿಯ ಧಾರೆಯಲ್ಲಿ ತೇಲಿ ಸಾಗುತ್ತಿದ್ದೆ. ಹೌದು ನಾನು ನಡೆದು ಹೋಗಬಹುದಾದ ಮಾತಲ್ಲ ಅದು.. ಅವನ ಕಥನ ಶಕ್ತಿ ನನ್ನ ತೇಲಿಸಿಕೊಂಡು ಹೋಗುತ್ತಿತ್ತು. ಅಜ್ಜನ ಕತೆಗಳು ಸಾಮಾನ್ಯವಾಗಿ ರಾಮಾಯಣ, ಮಹಾಭಾರತ, ಮತ್ತು ಅವುಗಳ ಉಪಕತೆಗಳು. ಅವುಗಳನ್ನ ನಿನ್ನೆ ಮೊನ್ನೆ ಅವನ ಕಣ್ಣ ಮುಂದೆಯೇ ನಡೆಯಿತೆಂಬಂತೆ ವರ್ಣಿಸಿ ಹೇಳುತ್ತಿದ್ದನು ಅಜ್ಜ. ಮತ್ತು ನನ್ನ ಅರಿವಿಗೆ ಬರುವ ದಿನನಿತ್ಯದ ಸುತ್ತಮುತ್ತಲಿನ ಪ್ರಶ್ನೆಗಳೆಲ್ಲವಕ್ಕೂ ಅಲ್ಲಿಯೇ ಉತ್ತರ ಹುಡುಕಿಕೊಡುತ್ತಿದ್ದ.ಅದರಲ್ಲಿ ಕೆಲವೊಂದು ನನ್ನ ಮೆಚ್ಚಿನದಾಗಿ ಉಳಿದು ಹೋದುವನ್ನ ಆಗಾಗ ದಿನದ ಬೇರೆ ಸಮಯದಲ್ಲಿ ಪುನರಾವರ್ತನೆ ಮಾಡಬೇಕಿತ್ತು. ಮತ್ತೆ ಕೆಲವು ಕತೆಗಳು ಕೆಲ ಜಾಗಕ್ಕೆ ವಿಶೇಷವಾಗಿ ಹೇಳಿಮಾಡಿಸಿದಂತಿರುತ್ತಿದ್ದವು. ಅಜ್ಜನ ಜೊತೆಗೆ ಹಳ್ಳಿಯ ತೋಟಕ್ಕೆ ಹೋಗುವಾಗ, ಗದ್ದೆಯ ಕೆಲಸ ನೋಡುವಾಗ, ರಾತ್ರಿ ಕತ್ತಲಲ್ಲಿ ಹಳ್ಳಿಯಿಂದ ಸಾಗರಕ್ಕೆ ಬರುವ ಬಸ್ಸಿಗೆ ಕಾಯುವಾಗ, ಅಥವಾ ದೂರ ದಾರಿಯಲ್ಲಿ ಅಜ್ಜನ ಕೈ ಹಿಡಿದು ಜೊತೆಯಲ್ಲಿ ನಡೆಯುವಾಗ, ಅಜ್ಜನೊಡನೆ ಅಡಿಕೆ ಆರಿಸುತ್ತಾ ಚಾಲಿ - ಗೋಟು ಬೇರೆ ಮಾಡುವಾಗ - ಆ ಸಂದರ್ಭಗಳಿಗಾಗೇ ಕೆಲವು ವಿಶೇಷ ಕತೆಗಳಿರುತ್ತಿದ್ದವು. ಅವುಗಳದ್ದೆ ಬೇರೆ ಕತೆ.. :)


ನನ್ನ ಬಾಲ್ಯದಲ್ಲಿ ಅಜ್ಜ ಜೀಕಿಬಿಟ್ಟ ಕತೆಗಳ ಜೋಕಾಲಿಯಲ್ಲಿ ಬದುಕು ಕನಸುಗಳ ನಡುವೆ ನಾನು ಇವತ್ತಿಗೂ ತೂಗಾಡತೊಡಗುತ್ತೇನೆ. ಎಲ್ಲ ಬೇಸರಾದಾಗ ಅವನ ಕತೆಗಳ ನೆನಪಿನ ಬುತ್ತಿ ಮನಸ್ಸನ್ನು ತಣಿಸುತ್ತದೆ. ನನಗೆ ಕತೆಗಳು ಕೊಡುವ ಆಪ್ತತೆಯನ್ನ ಪರಿಚಯಿಸಿದವನೇ ಅಜ್ಜ. ನಮ್ಮ ಸುತ್ತಲ ಎಲ್ಲ ಸಂಗತಿಗಳಲ್ಲಿ ಕತೆ ಕಾಣುವ, ಭಾವಲೋಕಕ್ಕೆ ಹೋಗುವ ಒಂದು ಮ್ಯಾಜಿಕ್ ನನಗೆ ಕಲಿಸಿದ್ದು ಅಜ್ಜ. ಅಜ್ಜನ ನೆನಪಿನೊಂದಿಗೆ ಅವನು ಹೇಳಿದ/ಓದಿದ/ಓದಿಸಿದ ಎಲ್ಲ ಕತೆಗಳ ಆಪ್ತ ಅನುಭವ ಬೆಸೆದುಕೊಂಡೆ ಇದೆ.

ಅಜ್ಜನ ಅಪರೂಪದ ಕತೆಗಳಿಗೆ ಬೇರೆಯದೇ ಬರಹವನ್ನಿನ್ನೊಂದು ದಿನ ಬರೆದೇನು.. ಈಗ ನಾನು ಬರೆಯ ಹೊರಟಿದ್ದು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಬಗ್ಗೆ. ಅದರ ಧಾರೆಯಡಿ ನನ್ನನ್ನ ಮೊತ್ತ ಮೊದಲು ತೋಯ್ಸಿದ್ದು ಅಜ್ಜ.


ನನ್ನ ನೆನಪಿನಂತೆ, ನಾನು ೫ನೇ ತರಗತಿ ಮುಗಿಸಿದ ಬೇಸಿಗೆ ರಜೆಯ ಮೊದಲ ವಾರದಲ್ಲೊಂದು ರಾತ್ರಿ ಆ ದಪ್ಪ ರಾಮಾಯಣ ದರ್ಶನಂನ ಪುಸ್ತಕ ತೆಗೆದಿಟ್ಟು ಇನ್ನು ನಿನಗೆ ಈ ಕತೆ ಹೇಳಬಹುದು ನಾನು-ಅಂತ ಅಜ್ಜ ಹೇಳಿದಾಗ ನನಗಾದ ಸಂಭ್ರಮವನ್ನ ಈ ಯಾವ ಸಾಲುಗಳೂ ಹಿಡಿದಿಡಲಾರವು. ರಾಮಾಯಣ ದರ್ಶನಂ ಅಂತಹ ಶ್ರೇಷ್ಠ ಕನ್ನಡ ಕೃತಿಯನ್ನ ರಾಗವಾಗಿ ಓದುತ್ತಾ, ಕ್ಲಿಷ್ಟ ಪದರಾಶಿಗಳನ್ನ ಬಿಡಿಸಿ ಹೇಳುತ್ತಾ, ನನ್ನ ಮುಖಭಾವದ ಮೇಲೆಯೇ-ನನಗೆ ಅರ್ಥವಾಗದ ಸಂಗತಿಗಳನ್ನು ವಿವರಿಸುತ್ತಾ ಅಜ್ಜ ನನಗೆ ಕತೆ ಹೇಳುತ್ತಿದ್ದ. ನನಗೆ ಈಗನ್ನಿಸುತ್ತದೆ ಅವನು ತನಗೆ ತಾನೇ ಕತೆ ಹೇಳಿಕೊಳ್ಳುತ್ತಿದ್ದ. ಆ ಧಾರೆಯಲ್ಲಿ ನಾನು ಎಷ್ಟು ತೊಯ್ದು ಹೋಗಿದ್ದೇನೆಂದರೆ ಈಗಲೂ ಕಣ್ಮುಚ್ಚಿ ನೆನಪಿಸಿಕೊಂಡರೆ ನಾನು ಚಿತ್ರಕೂಟದಲ್ಲಿ, ಪಂಚವಟಿಯಲ್ಲಿ, ಕಿಷ್ಕಿಂಧೆಯಲ್ಲಿ, ಸರಯೂ ನದೀತೀರದ ಕಾಡುಗಳಲ್ಲಿ, ಗುಹನ ದೋಣಿಯಲ್ಲಿ, ಶಬರಿಯ ಆಶ್ರಮದ ಅಂಗಳದಲ್ಲಿ, ರೆಕ್ಕೆ ಮುರಿದ ಜಟಾಯುವಿನ ಸನಿಹದಲ್ಲಿ, ಲಂಕೆಯ ಸಮುದ್ರತೀರದಲ್ಲಿ, ಅಶೋಕವನದಲ್ಲಿ, ವಿಶ್ವಾಮಿತ್ರರ ಆಶ್ರಮದಲ್ಲಿ, ಅಹಲ್ಯೆ ಕಲ್ಲಾದ ದಾರಿಯಲ್ಲಿ, ಜನಕರಾಜನರಮನೆಯ ಶಿವಧನುಸ್ಸಿನ ಸಮೀಪದಲ್ಲಿ, ಕನಕಲಂಕೆಯ ಅನ್ವೇಷಣೆಯಲ್ಲಿ - ಎಲ್ಲಿ ಇಲ್ಲ ಹೇಳಿ - ಎಲ್ಲೆಲ್ಲೂ ಮತ್ತೆ ಅಲೆಯತೊಡಗುತ್ತೇನೆ. ಆ ಸುಂದರ ಕಾವ್ಯದ ನವಿರು ಸೇಚನ ಮನಕ್ಕೆ ಹಾಯೆನಿಸುತ್ತದೆ.


ಅದಾದ ಮೇಲೆ ಕೆಲ ವರ್ಷಗಳಲ್ಲಿ ನಾನೇ ಅದನ್ನು ಓದುವುದನ್ನು ಕಲಿತೆ. ಎಷ್ಟರ ಮಟ್ಟಿಗೆಂದರೆ ಅಜ್ಜನಂತಹ ಅಜ್ಜನೇ ಎರಡು ದಿನ ಬಂದಿದ್ದು ರಾಮಾಯಣ ದರ್ಶನಂ ಓದಿ ಹೇಳು ಬಾ ಎಂದು ಕರೆಯುತ್ತಿದ್ದ.. ಅವನ ಕಥನ ಶಕ್ತಿಯ ಧೂಳಿನಂಶವೂ ನನ್ನಲಿರಲಿಲ್ಲ ಆದರೆ ಸ್ಪಷ್ಟವಾಗಿ ಓದಲು ಕಲಿತಿದ್ದೆ. ಅದು ಅವನಿಗೆ ಖುಷಿ ನೀಡುತ್ತಿತ್ತು. ವಯಸ್ಸಿನ ಒಜ್ಜೆ ಅವನ ನೆನಪಿನ ಮೇಲೆ ಹೇರಿದ್ದರಿಂದ ಎಲ್ಲ ನೆನಪಿರುತ್ತಿರಲಿಲ್ಲ. ಆದರೆ ನಾನು ಓದುವಾಗ ಅವನು ಹಳೆಯ ದಿನಗಳಿಗೆ ರೂಪಾಂತರಗೊಳ್ಳುತ್ತಿದ್ದ. ಅವನಿಗೆ (ನನಗೂ ಕೂಡಾ) ತುಂಬ ಇಷ್ಟವಾದ ಸನ್ನಿವೇಶಗಳು - ರಾಮಾಯಣವೆಂಬ ಮಹಾಧಾರೆಯಿಂದ ಸಿಡಿದು ಬೀಳುತ್ತಿದ್ದ ಪುಟ್ಟ ಆದರೆ ಗಟ್ಟಿ ಪಾತ್ರಗಳ ಮುತ್ತುಹನಿಗಳು. ಶ್ರವಣ, ದಶರಥ, ಮಂಥರೆ, ಗುಹ, ಮಾರೀಚ, ಜಟಾಯು, ಶಬರಿ, ವಾಲಿ, ಲಂಕಿಣಿ, ಮಂಡೋದರಿ, ವಿಭೀಷಣ, ಲಂಕಾನಗರಿ, ಚಿತ್ರಕೂಟ, ಪಂಚವಟಿ, ಇತ್ಯಾದಿಗಳನ್ನ ರಸಋಷಿಯು ಅಷ್ಟು ಆಪ್ತವಾಗುವಂತೆ ಚಿತ್ರಿಸಿದ್ದಾರೆ- ಸರಿ ಅವನಿಗೆ ತುಂಬ ಇಷ್ಟವಾಗುವ ಸನ್ನಿವೇಶಗಳನ್ನು ಓದಿ ಹೇಳುವಾಗ ಮತ್ತೆ ಅಭಿನಯ ಸಹಿತವಾಗಿ ಆ ವಾಕ್ಯಗಳನ್ನು ಪುನರುಚ್ಚರಿಸುತ್ತಿದ್ದ. ಅದರಲ್ಲಿ ನನ್ನ ಮೇಲೆ ತುಂಬ ಪ್ರಭಾವ ಬೀರಿದ ಒಂದು ಅಧ್ಯಾಯವನ್ನ ಇಲ್ಲಿ ಕ್ಲುಪ್ತವಾಗಿ ಬರೆಯುತ್ತಿದ್ದೇನೆ. ಇದು ಆಸಕ್ತ ಓದುಗರಿಗೆ ಪ್ರವೇಶಿಕೆಯಾಗಲಿ ಎಂಬುದು ನನ್ನ ಆಸೆ.


ನೀಂ ಸತ್ಯವ್ರತನೇ ದಿಟಂ....


ವಾಲಿ, ರಾಮಾಯಣದಲ್ಲೊಂದು ಪೂರಕ ಪಾತ್ರ. ಕಾವ್ಯದ ರಸದೌತಣ ಉಣಬಡಿಸುವ ರಸ‌ಋಷಿ ಕುವೆಂಪುರವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂನಲ್ಲಿ, ವಾಲಿಯ ಪಾತ್ರಚಿತ್ರಣ ಸವಿದವರು ‍ಯಾರೂ ಅವನನ್ನ ನೆನಪುಗಳ ಭಿತ್ತಿಯಿಂದ ಒರೆಸಿಹಾಕುವುದಿಲ್ಲ. ರಸ‌ಋಷಿಯ ವಾಲಿ ನನ್ನ ನಿಮ್ಮಂಥವನು. ಸಾದಾ ಸರಳ. ತಾನು ಇತರರಿಗೆ ಕೇಡು ಬಯಸಲಾರ, ಹಾಗೇ ಬೇರೆಯವರ ಕೇಡು ಸಹಿಸಲೂ ಆರ.

ನಮಗೆ ವಾಲಿ, ಸುಗ್ರೀವನೊಡನೆ ಕದನ ಮಾಡಿ, ರಾಮನಿಂದ ಕೊಲ್ಲಲ್ಪಡುವ ಒಬ್ಬ ಬಲಾಢ್ಯ ವಾನರ ಎಂದಷ್ಟೇ ಗೊತ್ತು. ಇಲ್ಲ ರಸಋಷಿಯ ವಾಲಿ ಹಾಗಿಲ್ಲ. ವಾಲಿಯ ಶಕ್ತಿ, ಸಾಮರ್ಥ್ಯ, ಸ್ವಭಾವ ತಿಳಿಯಬೇಕಿದ್ದರೆ ನೀವು ಈ ಅಣ್ಣ ತಮ್ಮರ ಸಂಬಂಧ, ಅವರ ರಾಜ್ಯ,ಕುಟುಂಬ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಬೇಕು.


ವಾಲಿ, ಸುಗ್ರೀವ ಇಬ್ಬರೂ ಒಬ್ಬರನ್ನೊಬ್ಬರು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ ಅಣ್ಣತಮ್ಮಂದಿರು. ಸುಭಿಕ್ಷ ಕಿಷ್ಕಿಂಧಾ ಕಾಡು, ಸಮಸ್ತ ವಾನರ ಪಡೆಗಳಿಗೂ ವಾಲಿಯೇ ರಾಜ. ಸುಗ್ರೀವ ವಾಲಿಯ ಬಲಗೈ. ರಕ್ತದುಂಧುಭಿ ಎಂಬ ರಾಕ್ಷಸನೊಬ್ಬನನ್ನು ಕೊಲ್ಲುವಾಗ ಆದ ಕಣ್ತಪ್ಪಿನಿಂದ ಅರಿಯದೆ ಸುಗ್ರೀವನು, ವಾಲಿಯನ್ನು ಒಂದು ದೊಡ್ಡ ಬಿಲದಲ್ಲಿ ಬಂಧಿಸಿಬಿಡುತ್ತಾನೆ. ಅಲ್ಲಿಂದ ಹೊರಬರುವ ಆಕ್ರೋಶಗೊಂಡ ವಾಲಿ, ರಾಜ್ಯದಾಸೆಯಿಂದ ಸುಗ್ರೀವ ತನ್ನನ್ನು ಬಂಧಿಸಿದ್ದನು ಎಂಬ ತಪ್ಪುತಿಳುವಳಿಕೆಯಿಂದ, ಸುಗ್ರೀವನನ್ನು ಕಿಷ್ಕಿಂಧೆಯಿಂದ ಹೊರಗಟ್ಟುತ್ತಾನೆ.

ಸುಗ್ರೀವನ ಬಂಟರಾದ ನೀಲ, ಹನುಮಂತ, ಜಾಂಬುವಂತರೂ ಉಟ್ಟಬಟ್ಟೆಯಲ್ಲೇ ಅವನೊಂದಿಗೆ ಹೊರಡುತ್ತಾರೆ. ತನ್ನ ಕುಟುಂಬದಿಂದ, ಪ್ರಿಯಪತ್ನಿ ರುಮೆಯಿಂದ ದೂರವಾಗಿ ಗಡೀಪಾರಾದ ಸುಗ್ರೀವನಿಗೆ ಸಹಜವಾಗಿಯೇ ಅಣ್ಣನ ಮೇಲೆ ಅಸಮಾಧಾನವಾಗುತ್ತದೆ.ಆ ಸಮಯದಲ್ಲೆ‌ ಅವನಿಗೆ ಸೀತೆಯನ್ನು ಕಳೆದುಕೊಂಡು ವ್ಯಾಕುಲನಾದ ರಾಮ ಸಿಕ್ಕುತ್ತಾನೆ. ಮತ್ತು ರಾಮ ತನ್ನಂತೇ ಪತ್ನಿಯನ್ನು ಕಳೆದುಕೊಂಡು ವ್ಯಾಕುಲನಾದ ಸುಗ್ರೀವನಲ್ಲಿ ಸಹಾನುಭೂತಿ ತೋರುತ್ತಾನೆ. ವಾಲಿಯನ್ನು ಸೋಲಿಸಿ ತನಗೆ ರಾಜ್ಯ ಕೊಡಿಸಿದರೆ, ಸೀತೆಯನ್ನು ತಾವೆಲ್ಲ ಸೇರಿ ಹುಡುಕುತ್ತೇವೆ ಅಂತ ಸುಗ್ರೀವ ರಾಮನಿಗೆ ಮಾತು ಕೊಡುತ್ತಾನೆ. ಇದು ಹಿನ್ನೆಲೆ.
ಆದರೆ ವಾಲಿಯನ್ನು ಹೊಡೆದಾಟಕ್ಕೆ ಆಹ್ವಾನಿಸುವುದು ಹೇಗೆ?

'ನೀವು ಸಹಾಯಕ್ಕೆ ಬೆನ್ನಿಗಿದ್ದರೆ ಅದೇ ಧೈರ್ಯವೆಂದ ಸುಗ್ರೀವ ಕಿಷ್ಕಿಂಧೆಯ ಬೆಟ್ಟಗಳು ಅದುರಿ ಹೋಗುವಂತಹದೊಂದು ಘರ್ಜನೆಗೈಯುತ್ತಾನೆ.

ಆ ಸನ್ನಿವೇಶವನ್ನು ಕವಿ ಹೀಗೆ ಬಣ್ಣಿಸುತ್ತಾರೆ.

'ಚಕಿತವಾದುವು ಜಿಂಕೆ, ಕಾಡುಕೋಣ, ಹೆಬ್ಬುಲಿ,ಸಿಂಹ; ತೆರೆತೆರೆಯಾಗಿ ಹರಿದ ಘರ್ಜನೆಯ ಸಿಡಿಲು ಶಾಂತವಾದಾಗ, ದಟ್ಟಡವಿಯ ನಿಶ್ಯಬ್ದದ ಕಡಲು ಮತ್ತೆ ಹೆಪ್ಪುಗಟ್ಟಿತಂತೆ.'

ಸುಗ್ರೀವ ಘರ್ಜನೆಗೆ ಮರುದನಿಯನ್ನು ಆಲಿಸುತ್ತ ನಿಂತ ರಾಮಲಕ್ಷ್ಮಣರಿಗೆ ಕೇಳಿದ್ದೇನು? ಸಿಡಿಲ ಪಡೆಗಳೊಂದಾಗಿ ಆರ್ಭಟಿಸಿದಂತಹ, ಚಂಡೆದನಿಯನ್ನೇ ಮೀರಿದ ವಾಲಿಯ ಹುಯಿಲು! ಕವಿ ವಿವರಿಸುತ್ತಾರೆ... ಬೆಟ್ಟ ಗುಡುಗಿತ್ತಲ್ಲಿ, ಅತ್ತ ಕಾಡು ನಡುಗಿತ್ತು. ಸಿಂಹದಂತೆ ಆರ್ಭಟಿಸುವ ವಾಲಿ, ಮರಗಳ ಮರೆಯಿಂದ ಹುಲಿಯಂತೆ ಚಿಮ್ಮಿ ಬಂದನಂತೆ. 'ತಮ್ಮನನ್ನ ನೋಡಿದನು ವಾಲಿ, ಕೆಂಪಾದುವು ಆಲಿ(ಕಣ್ಣು) ಅಂತ ಬರೆದಿದ್ದಾರೆ ಕವಿ. ಮುಂದೆ ನಡೆದ ಘೋರ ಬಡಿದಾಟದಲ್ಲಿ ಸುಗ್ರೀವ ಹಣ್ಣಾಗುತ್ತಾನೆ. ಸಹಾಯದ ಭರವಸೆಯಿತ್ತ ರಾಮ, ತುಂಬ ಸಾಮ್ಯವಿದ್ದ ಅಣ್ಣ ತಮ್ಮಂದಿರಲ್ಲಿ ಸುಗ್ರೀವನನ್ನು ಗುರುತಿಸಲರಿಯದೆ ಪೆಚ್ಚಾಗುತ್ತಾನೆ. ರಾಮನ ನೆರವು ಬಿಸಿಲುಗುದುರೆಯಾಯ್ತೆಂದು ಮನಗೊಂಡು ಸೆಣಸಲಾಗದ ಸುಗ್ರೀವ ಓಡಿ ಹೋಗಿ ಅಡಗಿಕೊಳ್ಳುತ್ತಾನೆ. ವಿಜಯೋನ್ಮತ್ತ ವಾಲಿ ಕಿಷ್ಕಿಂಧೆಗೆ ಹಿಂದಿರುಗುತ್ತಾನೆ.


ಜರ್ಜರಗೊಂಡ ಸುಗ್ರೀವನನ್ನು ಸಂತೈಸಿದ ರಾಮ, ತನ್ನ ಅಸಹಾಯಕತೆಯನ್ನು ವಿವರಿಸಿ ಮತ್ತೊಮ್ಮೆ ಸುಗ್ರೀವನನ್ನು ಹುರಿದುಂಬಿಸುತ್ತಾನೆ. ಈ ಬಾರಿ ಗುರುತಿಗೆ ಕೆಂಪು ಕಣಗಿಲೆ ಹೂವಿನ ಮಾಲೆಯನ್ನು ಸುಗ್ರೀವನ ಕೊರಳಿಗೆ ತೊಡಿಸುತ್ತಾನೆ. ಇತ್ತ ದಣಿದಿದ್ದರೂ ಉತ್ಸಾಹದಿಂದ ಕಿಷ್ಕಿಂಧೆಯೊಳ ಹೋದ ವಾಲಿಗೆ ಪತ್ನಿ ತಾರೆ ಇದಿರಾಗುತ್ತಾಳೆ. ಕವಿ ವಾಕ್ಯಗಳನ್ನೇ ಸವಿಯಿರಿ ...

ತಾರೆ,

ಕೊಡಗಿನುಡುಗೆಯ ಸೀರೆ,

ಸಿಂಗರಿಸಿದಾ ನೀರೆ.


ಅವಳ ಕೈಸೋಂಕಿನಿಂದಲೇ ದಣಿವಾರಿದ ವಾಲಿಗೆ ' ತಮ್ಮನನ್ನೇ ಬಡಿದೆನಲ್ಲಾ ' ಎಂಬ ಸಂತಾಪ ಮುತ್ತಿಕೊಳ್ಳುತ್ತದೆ. ಅವನನ್ನು ಹೊರಹಾಕಿ, ಕುಟುಂಬದಿಂದ ದೂರವಿರಿಸಿ ತಪ್ಪು ಮಾಡಿದೆ ಎಂದು ಪರಿತಪಿಸುತ್ತಾನೆ. ಅಷ್ಟರಲ್ಲೇ ಚೇತರಿಸಿಕೊಂಡ ಸುಗ್ರೀವನ ಕೂಗು ಮತ್ತೆ ಕೇಳುತ್ತದೆ. ಅದನ್ನ ಕೇಳುತ್ತಲೆ ವಾಲಿ ಸಿಟ್ಟಿನಿಂದ ಎದ್ದು ನಿಲ್ಲುತ್ತಾನೆ. ಇಷ್ಟು ಹೊಡೆಸಿಕೊಂಡರೂ ಸಾಕಾಗದೆ ಮತ್ತೆ ಬಂದನೇ ಎಂಬ ಆಕ್ರೋಶದಿಂದ ಹೊರಟ ವಾಲಿ, ಅಡ್ಡ ಬಂದ ಪತ್ನಿಯನ್ನು ಅತ್ತ ಸರಿಸುತ್ತಾನೆ. ಉಂಹುಂ, ತಾರೆ ಕೋಪೋನ್ಮತ್ತ ವಾಲಿಯ ಕಾಲು ಹಿಡಿಯುತ್ತಾಳೆ. " ಕಣ್ಬನಿಯ ಜೇನಿಳಿವ ತಾವರೆಯ ಚೆಲುವೆ.! " ಸಿಟ್ಟು ಬೇಡ, ವೀರರ ಶಕ್ತಿ ಔದಾರ್ಯದಲ್ಲಿದೆ. ಒಮ್ಮೆ ಸುಗ್ರೀವನ ಹೆಂಡತಿ ರುಮೆಯ ಬಗ್ಗೆ ಯೋಚಿಸು. ಪಾಪದ ಹುಡುಗಿ, ಸುಗ್ರೀವನಿನ್ನೇನು? ನಿನ್ನ ಪ್ರೀತಿಯ ತಮ್ಮ. ಸಣ್ಣವರಿದ್ದಾಗ ನೀವು ಎಷ್ಟು ಹೊಂದಿಕೊಂಡಿದ್ದಿರಿ ಅಂತ ನೆನಪಿಸಿಕೋ. ಬಾಲ್ಯದ ಚಿನ್ನಾಟಗಳನ್ನು ನೆನೆ.' ಅಂತ ವಿನಂತಿಸುತ್ತಾಳೆ.


ಕೇಳಕೇಳುತ್ತಾ ಶಾಂತನಾದ ವಾಲಿಯ ಕಣ್ಮುಂದೆ ಬಾಲ್ಯದ ಎಳೆಬಿಸಿಲು ಮಿಂಚುತ್ತದೆ. ಅಣ್ಣಾ .. ಬಾ .. ಬಾರೆಂದು ಕರೆವ, ಜೊಲ್ಲು ಸುರಿಸಿ ತೊದಲುವ ಸಣ್ಣ ಸುಗ್ರೀವ ನೆಲೆಗೊಳ್ಳುತ್ತಾನೆ. ಆ ಚಿಣ್ಣನನ್ನು ಎತ್ತಿಕೊಂಡು ತಾನಾಡಿಸಿದ ಕೂಸುಮರಿ ಉಪ್ಪಿನಾಟ ನೆನಪಾಗುತ್ತದೆ. ಸ್ನೇಹ ತುಂಬಿದ ಮನಸ್ಸಿನ ವಾಲಿ ತಾರೆಗೆ ಹೇಳುತ್ತಾನೆ. ' ನಡೆ ನಿನ್ನ ತಂಗಿ ರುಮೆಯನ್ನು ಸಿಂಗರಿಸು. ಚಿಕ್ಕವರಿದ್ದಾಗ ನಾವಾಡಿದ ಉಪ್ಪಾಟವನ್ನು ಮತ್ತೆ ಇವತ್ತು ಆಡುತ್ತೇನೆ. ಬಡಿದಾಡುವ ನೆಪದಲ್ಲಿ ಹೋಗಿ ಆ ಪೋರನನ್ನು ಹೊತ್ತು ತರುತ್ತೇನೆ.' ಎಂದುಸುರಿದವನೇ ದಾಪುಗಾಲಿಕ್ಕಿ ಹೊರಟ ಬೃಹದ್ಬಲಶಾಲಿ ವಾಲಿ. ಕದನಕ್ಕೆ ಸಿದ್ಧವಾಗಿದ್ದ ಸುಗ್ರೀವನೆಡೆಗೆ ಧಾವಿಸಿದ ವಾಲಿಯಲ್ಲಿ ಪ್ರೀತಿಯ ಸೆಲೆಯುಕ್ಕುತ್ತಿತ್ತು. ತಮ್ಮನನ್ನಪ್ಪಲು ಮುನ್ನುಗ್ಗಿದ. ಈ ಬದಲಾವಣೆ ತಿಳಿಯದ ಸುಗ್ರೀವ ಅಣ್ಣನೆಡೆ ಬಂಡೆಗಳನ್ನೆತ್ತಿ ತೂರತೊಡಗಿದ. ಅಂಗೈಯಲ್ಲೆ ಅವನ್ನು ತಡೆದು ಮುಂದುವರಿದ ವಾಲಿ, 'ಸಿಂಹವನ್ನು ಗಂಡಭೇರುಂಡ ಎತ್ತಿಕೊಳ್ಳುವಂತೆ' ಸುಗ್ರೀವನನ್ನು ಹೆಗಲ ಮೇಲೆ ಹಾಕಿಕೊಂಡು ಕಿಷ್ಕಿಂಧೆಯೆಡೆ ತೆರಳಿದ.

ತನ್ನ ಗೆಳೆಯನನ್ನು ಹೊತ್ತೋಡುತ್ತಿರುವ ವಾಲಿಯನ್ನು ನೋಡಿದ ರಾಮನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ದಿಕ್ಕೆಟ್ಟ ರಾಮ ಓಡುತ್ತಿದ್ದ ವಾಲಿಯ ಬೆನ್ನಿಗೆ ತೀಕ್ಷ್ಣ ಬಾಣವೊಂದನ್ನೆಸೆದ.


ಕವಿ ಹೋಲಿಕೆ ನೋಡಿ.. " ಕಲ್ಪವೃಕ್ಷವೊಂದು ಕಡಿದುರುಳಿತೋ ಅಥವಾ ಸ್ವರ್ಗದ ಐರಾವತವೆ ನೆಲದಲ್ಲಿ ಬಿತ್ತೋ ಎಂಬಂತೆ" ವಾಲಿ ನೆಲಕ್ಕುರುಳುತ್ತಾನೆ.

ಮರಸು ಕೂತ ಬೇಟೆಗಾರ,ಕೋವಿಯ ಈಡಿಗೆ ಬಲಿಯಾದ ಬೇಟೆಯನ್ನು ನೋಡಿ ಅದರ ಬಳಿಗೋಡುವ ಹಾಗೆ ರಾಮಾದಿಗಳು ಬಿದ್ದ ವಾಲಿಯೆಡೆಗೆ ಧಾವಿಸಿ, ತಮ್ಮ ಸಾಹಸಕ್ಕೆ ತಾವೇ ದನಿಯಾದರಂತೆ. ಕೆಲಕ್ಷಣದ ಸಂಭ್ರಮವಿಳಿದ ಬಳಿಕ ಸುಗ್ರೀವ, ಬಸವಳಿದು ಬಿದ್ದ ಅಣ್ಣನೆಡೆ ನೋಡಿದ.

'ಹಿರಿದಾದುದಳಿಯೆ, ಹಗೆಯಾದರೇನು, ಹಿರಿತನಕೆ ನೋವಾಗದುಂಟೆ' ಎಂದು ಕೇಳುವ ಕವಿ, ಸುಗ್ರೀವ-ರಾಮಾದಿಗಳ ಖಿನ್ನತೆಯನ್ನು ಬಣ್ಣಿಸುತ್ತಾರೆ. ಕಣ್ಣೀರು ಕೆಡವುತ್ತ ಸುಗ್ರೀವ ನಿಂತರೆ, ತನ್ನ ಬಿಲ್ಜಾಣ್ಮೆಯನ್ನು ತಾನೇ ಹಳಿದುಕೊಂಡನಂತೆ ರಾಮ.


ಸುಳಿದ ತಂಗಾಳಿಯಲೆಗೆ ಎಚ್ಚರಾದ ವಾಲಿ ನಡುಕುದನಿಯಲ್ಲಿ, ಎಲ್ಲರೆಡೆ ನೋಡಿ ನುಡಿಯುತ್ತಾನೆ.

'ಏನು ಮಾಡಿದೆಯೋ ಸುಗ್ರೀವಾ..ಮುದ್ದಾಡಲೆಂದು ಬಂದ ಅಕ್ಕರೆಯ ಕೈಗಳನ್ನೇ ಕಟ್ಟಿಬಿಟ್ಟೆಯಲ್ಲಾ..? ಯಾರದು? ನನ್ನ ಬೆನ್ನಿಗೆ ಬಾಣ ಬಿಟ್ಟ ವೀರವೇಷಿ? ಓಹೋ ರಾಮನೋ..! ಊರಿಗೆ ತಮ್ಮನನ್ನು ಹೊತ್ತುಕೊಂಡೊಯ್ಯುತ್ತಿದ್ದ ಅಣ್ಣನನ್ನು ಹೇಡಿತನದಿಂದ ಕೊಂದೆಯಲ್ಲಾ !ನಿನ್ನನ್ನ ಮನತುಂಬೆ ಹೊಗಳುತ್ತಿದ್ದ ತಾರೆಯ ಬಾಳಿಗೆ ಕಿಚ್ಚಿಟ್ಟೆಯಲ್ಲಾ! ಧಿಕ್ಕಾರ ನಿನ್ನ ಕಲಿತನಕ್ಕೆ, ಧಿಕ್ಕಾರವಿರಲಿ ನಿನ್ನ ಶೌರ್ಯದ ಕೀರ್ತಿಗೆ! ಹೇಡಿಯ ಹಾಗೆ ಅಡಗಿ ಬಾಣ ಬಿಟ್ಟಿದ್ದರಿಂದ ಬದುಕಿದೆ ನೀನು, ಅಲ್ಲದೆ ನನ್ನ ಕೆಣಕಲಾದೀತಾ ನಿಂಗೆ?" ಉಸಿರು ಸುಯ್ಯುತ್ತದೆ.


ಬೆನ್ನಿಗೆ ನೆಟ್ಟ ಬಾಣದಿಂದ ಧಾರೆಯಾಗಿ ಸುರಿವ ರಕ್ತ, ಕಪ್ಪಡರಿದ ಮುಖ, ಆಡಲಾಗದೆ ಆಡುವ ಮಾತು, ಏದುಸಿರು ಎಲ್ಲವೂ ವಾಲಿಯ ಪರ ವಾದಿಸುತ್ತಿದ್ದರೆ. . . . ರಾಮ ಉತ್ತರಿಸಲಾಗದೆ ತಲೆ ತಗ್ಗಿಸಿದನಂತೆ.

ಅಳುತ್ತಳುತ್ತ ಕಾಲಿಗೆರಗಿದ ಸುಗ್ರೀವನನ್ನು ವಾಲಿಯೇ ಸಂತೈಸಿದ. ರಾಮ ನಮ್ಮ ಅತಿಥಿ, ಅವನಿಗೆ ನೆರವಾಗು ಎಂದು ಸುಗ್ರೀವನಿಗೆ ಹೇಳುತ್ತಿರುವಂತೆಯೆ ಕೇಳಿಸಿತು ರೋದನದ ಧ್ವನಿ. " ಏನದು ಸ್ವರ್ಗದ ಹಾಡು ಭೂಮಿಗೆ ಧುಮ್ಮಿಕ್ಕುವಂತಿದೆ, ಏನಾ ಧ್ವನಿ?" ವಾಲಿ ತಮ್ಮನನ್ನು ಕೇಳಿದ. ಉಕ್ಕಿಬಂದ ಅಳುವಿನ ನಡುವೆ ಸುಗ್ರೀವ್ ಉತ್ತರಿಸುತ್ತಾನೆ. . . 'ಬಳಿ ಸಾರುತಿದೆ ರೋದಿಸುತಿಹ ಕಿಷ್ಕಿಂಧೆ.'

ತೇಲುಗಣ್ಣಾದ ವಾಲಿಗೆ ಇತ್ತಲಿನ ಅರಿವೆ ಹೋಗಿಬಿಟ್ಟಿತ್ತು. ಒಂದೇ ಸಮನೆ ಮಾತನಾಡತೊಡಗಿದ.

"ಏನಂದೆ?
ಹೌದೌದು ಬಳಿಸಾರುತಿದೆ ಸಂಧ್ಯೆ!

ಬೆಟ್ಟದ ಮೇಲೆ ಹಬ್ಬುತಿದೆ ಸುಂದರ ಸಂಧ್ಯೆ!

ಆಃ ನನ್ನ ಕಿಷ್ಕಿಂಧೆ, ತಾಯ್ತಂದೆಯರ ನಾಡೆ,

ತಾಯ್ ನುಡಿಯ ಮಲೆಗುಡಿಯ ಬೆಟ್ಟದಡವಿಯ ಬೀಡೆ!

ನಾನು ಹುಟ್ಟುವಾಗ ಅಮ್ಮನ ಬಸಿರಾಗಿದ್ದವಳು, ಆಮೇಲೆ ನಲ್ಮೆಯ ತೊಟ್ಟಿಲಾದೆ.

ಎಳೆಯನಿಗೆ ಜೋಗುಳವಾದೆ, ನನ ತಾರುಣ್ಯಕೆ ಉಯ್ಯಾಲೆಯಾದೆ.

ಮುಪ್ಪಿಗೆ ಧರ್ಮದಾಶ್ರಯವಾಗಿ, ಸಾವಿಗೆ ಶಾಂತಿಯ ಮಡಿಲಾಗಬೇಕಾಗಿದ್ದ

ನಿನ್ನನ್ನು ನಾನೀಗ ತೊರೆಯುತ್ತಿದ್ದೇನೆ ಮನ್ನಿಸಮ್ಮಾ.

ಮುಗಿಲಲೆವ ಸೊಬಗಿನ ನೆಲೆಯಾದ ನಿನ್ನ ಬೆಟ್ಟಗಳಲ್ಲಿ ನಾನಿನ್ನು ಕಾಲಾಡಲಾರೆ

ಚೆಲುವಿನ ಚಿಪ್ಪೊಡೆದು ಮುತ್ತುನೀರು ಸಿಡಿಸುವ

ನಿನ್ನ ಜಲಪಾತಗಳಲ್ಲಿ ನಾನಿನ್ನು ಮೈತೊಯ್ಯಿಸಲಾರೆ

ನನ್ನ ತೋಳುಗಳ ಆಟಕ್ಕೆ ನಿನ್ನ ಅಡವಿಯ

ಹಣ್ಣು ಹೊತ್ತ ಮರಗಳು ಇನ್ನು ತೂಗುವುದಿಲ್ಲ, ತೊನೆಯುವುದಿಲ್ಲ, ಬಾಗುವುದಿಲ್ಲ

ನಿನ್ನಗಲ ಬಾಂದಳದ ಮೋಡಮಾಲೆಯ ಚಂದವನ್ನು ನೋಡದಿನ್ನು ಈ ವಾಲಿಯ ಕಣ್ಣಾಲಿ.

ಸುಗ್ರೀವಾ.. ನೆನಪಿದೆಯಾ ನಿನಗೆ ಈಜು ಕಲಿಸುವಾಗ

ನೀನು ಪಂಪಾ ಸರೋವರದಲ್ಲಿ ಮುಳುಗಿ ಉಸಿರಿಗೆ ಕಾತರಿಸುತ್ತಿದ್ದೆ.

ನಾನು ನಿನ್ನ ಜುಟ್ಟು ಹಿಡಿದು ಮೇಲೆತ್ತಿ ಬದುಕಿಸಿದೆ.

ಅಂದು ನೀನು ಉಸಿರಿಗಾಗಿ ಅನುಭವಿಸಿದ ಸಂಕಟ

ಈಗ ನನಗೆ ಗೊತ್ತಾಗುತ್ತಿದೆ.

ಬಾಳಿನಂಚಿನಲ್ಲಿ ನಿಂತಾಗ ನನಗೆ ತಿಳಿದ ಸತ್ಯವೊಂದನ್ನ ಹೇಳ್ತೇನೆ.

"ನಾವು ಗಟ್ಟಿಯೆಂದು ತಿಳಿದಿರುವುದೆಲ್ಲಾ ಜೊಳ್ಳು, ಬರೀ ಜೊಳ್ಳು . . .!!

ಸಾವಿನ ಗಾಳಿ ತೂರುತ್ತಾ ಇದ್ದರೆ ಈಗ ನನಗೆ ಈ ಅರಿವಾಗುತ್ತಿದೆ"

ಎಂದು ನುಡಿಯುತ್ತಾ ಕೊನೆಯುಸಿರೆಳೆಯುತ್ತಾನೆ ವಾಲಿ. ಸಂಕಟವೇ ಮೂರ್ತಿವೆತ್ತ ತಾರೆ, ಪ್ರಿಯಸಖನೊಂದಿಗೆ ತಾನೂ ಚಿತೆಯೇರುತ್ತಾಳೆ.


ಈ ಅಧ್ಯಾಯವನ್ನು ನಾನು ಹಲವು ಬಾರಿ ಓದಿದ್ದೇನೆ. ಪ್ರತಿಬಾರಿಯೂ ಕಣ್ಣೀರಿಟ್ಟಿದ್ದೇನೆ. ನನ್ನ ಸಣ್ಣತನಕ್ಕೆ ನಾಚಿದ್ದೇನೆ. ವಾಲಿಯ ದಾರ್ಶನಿಕತೆಯೆಡೆಗೆ ಬೆರಗುಗೊಂಡಿದ್ದೇನೆ. ಕವಿಯ ವರ್ಣನೆಗೆ ಮನಸೋತಿದ್ದೇನೆ. ಕವಿವರ್ಣನೆಯ ಜಲಧಾರೆಗೆ ಸಿಕ್ಕರಷ್ಟೇ ನಿಮಗೆ ಈ ಅಮೃತದ ಸವಿ ಹತ್ತುವುದು. ರಾಮಾಯಣದರ್ಶನದ "ನೀಂ ಸತ್ಯವ್ರತನೇ ದಿಟಂ . . " ಎಂಬ ಅಧ್ಯಾಯದಲ್ಲಿ ಚಿತ್ರಿತವಾದ ವಾಲಿಯನ್ನೊಮ್ಮೆ ತಪ್ಪದೇ ಮಾತನಾಡಿಸಿ.


ಇಂತಹ ಒಂದು ಅಮೂಲ್ಯ ಸಂಪತ್ತನ್ನ ನನಗೆ ಕೊಡುಗೆಯಾಗಿ ನೀಡಿದ, ತನ್ನೆಲ್ಲ ಕತೆಗಳ ಆಸ್ತಿಯನ್ನೂ ನನಗೆ ನೀಡಿ ಹೋದ ಅಜ್ಜನಿಗೆ ನಾನು ಚಿರಋಣಿ. ನನ್ನ ಬದುಕಿನ ಹಲವು ಸ್ತರಗಳಲ್ಲಿ ಅಜ್ಜ ನಾನೇ ಆಗಿ ಬೆರೆತುಹೋಗಿದ್ದಾನೆ. ನನ್ನ ಆತಂಕದ ಕ್ಷಣಗಳಲ್ಲಿ ಮಡಿಲಾಗಿದ್ದಾನೆ. ಭೌತಿಕವಾಗಿ ಇನ್ನಿಲ್ಲವಾಗಿಯೂ, ನನ್ನ ಮನಸ್ಸಿನಂಗಳದಲ್ಲಿ ದಿನವೂ ದೀಪವಾಗಿ ಬೆಳಗಿದ್ದಾನೆ.

5 comments:

ಸುಪ್ತದೀಪ್ತಿ suptadeepti said...

ಕುವೆಂಪು ರಾಮಾಯಣ ಹೊಸ ದರ್ಶನ ಕಂಡುಕೊಂಡ, ಕಾಣಿಸುವ ಕೃತಿ. ಅಲ್ಲಿ ಬರುವ ಮಂಥರೆ, ಗುಹ, ರಾವಣ, ವಾಲಿಯಂಥ ಪಾತ್ರಗಳು ಬೇರೆಲ್ಲೂ ಇಲ್ಲ. ಅವರ ಲೋಕಕ್ಕೆ ಮತ್ತೊಮ್ಮೆ ಕೊಂಡೊಯ್ದದ್ದಕ್ಕೆ ಧನ್ಯವಾದಗಳು.
ನಿಮ್ಮ ಅಜ್ಜನಂಥಾ ಅಜ್ಜನನ್ನು ಪಡೆದ ನೀವೂ ಧನ್ಯರು, ಅದೃಷ್ಟಶಾಲಿ. ಅವರು ಸದಾ ನಿಮ್ಮ ಚೇತನದ ಚೇತನವಾಗಿ ಇರುತ್ತಾರೆ.

ಭಾವಜೀವಿ... said...

ಸಿಂಧು,ಈ ಸನ್ನಿವೇಶ ನಿಜಕ್ಕೂ ಅದ್ಭುತವಾಗಿದೆ!? ನಿಜಕ್ಕೂ ವಾಲಿ-ಸುಗ್ರೀವರ ಕಾಳಗವನ್ನು ಇದಕ್ಕೂ ಸುಂದರವಾಗಿ ಅನುಭವಿಸಿ ಬರೆಯಲು ಸಾಧ್ಯವಾಗುವುದಿಲ್ಲ ಬಿಡಿ.. ನಿಮ್ಮ ಬ್ಲಾಗಿಗೆ ಬಂದವನಿಗೆ ಎಂದೂ ಮೋಸವಾಗುವುದಿಲ್ಲ! ಇದು ಖಂಡಿತ ಉತ್ಪ್ರೇಕ್ಷೆಯ ಮಾತಲ್ಲ..!
ಕತೆ ಹೇಳುವುದು, ಕಣ್ಣಿಗೆ ಕಂಡಿದ್ದು, ಕೇಳಿದ್ದು ಹಾಗು ಅನುಭವಿಸುವುದ್ದನ್ನು ಅಕ್ಷರಗಳ, ಪದಗಳ ಚಾದರದಡಿ ಸೇರಿಸಿ ಕತೆಯಾಗಿಸುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ..!! ಬಹುಷಃ ಇದು ನಿಮಗೆ ನಿಮ್ಮ ಆ ಪುಣ್ಯಾತ್ಮ ಅಜ್ಜನೆಂಬ ಶ್ರೀಮಂತ ಸಂಪನ್ಮೂಲದಿಂದ ದೊರೆತಿರಬೇಕು!! ನಿಜಕ್ಕೂ ಹೊಟ್ಟೆ ಉರೀತಾ ಇದೇರಿ, ನನಗಿಂತಾ ಕತೆ ಹೇಳಲು ಪುಸ್ತಕ ಗಳನ್ನು ಹೊರತುಪಡಿಸಿ ಬೇರೆ ಯಾರೂ ದೊರೆತಿಲ್ಲವಲ್ಲ ಎಂದು!!
ಇನ್ನು ಕತೆಯ ನಿಜವಾದ ವಸ್ತುವಿಗೆ ಬರೋಣ,ನಿಜ ಹೇಳ ಬೇಕೆಂದರೆ ನನಗೆ ನಮ್ಮ ಪುರಾಣಗಳಲ್ಲಿ, ಮಹಾಕಾವ್ಯಗಳಲ್ಲಿ ಬರುವ ಸಾಮಾನ್ಯ ನಾಯಕರಿಗಿಂತ ಜನರ ದೃಷ್ಟಿಯಲ್ಲಿ ಖಳರೆನಿಸಿಕೊಂಡಂತಹ ಅಥವ ದುರಂತ ಅಂತ್ಯಗೊಳ್ಳುವ ನಾಯಕರ ಧೀಮಂತ ಗುಣಗಳು ಒಮ್ಮೊಮ್ಮೆ ಇಷ್ಟವಾಗ್ತವೆ..ಇದರಲ್ಲಿ ವಾಲಿಯ ಪಾತ್ರವೂ ಒಂದು.. ಹಿಂದೆ ಈ ಸನ್ನಿವೇಶವನ್ನು ಓದಿದಾಗ ನಿಜಕ್ಕೂ ಅವನಿಗೆ ಬಂದ ಸಾವಿಗೆ ಮರುಗಿದ್ದೆ!! ಈಗ ನಿಜಕ್ಕೂ ನಿಮ್ಮ ವರ್ಣನೆ ನಿಜಕ್ಕೂ ವಿಚಲಿತಗೊಳಿಸಿತು! ! ಮರ್ಯಾದಾ ಪುರುಷೋತ್ತಮ ನಾದ ರಾಮ ಎಷ್ಟೇ ದೊಡ್ಡವನಾದರೂ, ಈ ಘಟನೆಯಲ್ಲಿ ಸರಿಯಾಗಿ ವಿವೇಚನೆ ಮಾಡದೇ ವಾಲಿಯನ್ನು ಕೊಂದಿದ್ದು ಅವನ ಹಿರಿತನಕ್ಕೆ, ಮಾದರಿ ವ್ಯಕ್ತಿತ್ವಕ್ಕೆ ತಕ್ಕದಲ್ಲ ಎನಿಸುತ್ತದೆ! ಎಂತವರೂ ಸಂದರ್ಭದ ಕೈಗೊಂಬೆಯಾಗಿ ಏಂತಹ ತಪ್ಪು ಮಾಡಬಹುದು ಎನಿಸುತ್ತದೆ. ಅದರಲ್ಲೂ ವಾಲಿಗೆ ಕೊನೆಯ ಸಮಯದಲ್ಲಿ ಅರಿವಾಗುವ "ನಾವು ಗಟ್ಟಿಯೆಂದು ತಿಳಿದಿರುವುದೆಲ್ಲಾ ಜೊಳ್ಳು, ಬರೀ ಜೊಳ್ಳು . . .!! ಎನ್ನುವ ಮಾತು ನಿಜಕ್ಕೂ ಸತ್ಯ!
ಹೀಗೆ ಬರೀತಾ ಇರಿ.. ನಿಮ್ಮ ಅಜ್ಜನಿಂದ ದೊರೆತದ್ದನ್ನು ಹೀಗೆ ನಮಗೂ ಉಣಬಡಿಸಿ, ನಾವು ಓದಿ ಕೃತಾರ್ಥವಾಗುತ್ತೇವೆ!

ಸಿಂಧು sindhu said...

ಸುಪ್ತದೀಪ್ತಿ, ಭಾವಜೀವಿ

ನಿಮ್ಮ ಮೆಚ್ಚುಗೆ ನನಗೆ ಖುಶಿ ಕೊಟ್ಟಿದೆ.
ಇದನ್ನು ಬ್ಲಾಗಲ್ಲಿ ಹಾಕುವಾಗ ಒಂದಳುಕು ಇತ್ತು. ಸ್ವಲ ಹೆವಿ ಟಾಪಿಕ್ ಅಂತ. ರಾಮಾಯಣ ದರ್ಶನವೇ ಹಾಗೆ. ಸುಲಿದ ಬಾಳೆಯ ಹಣ್ಣಿನಂದದಿ ಇಲ್ಲ-ಅದು ಕಳಿತ ದಾಳಿಂಬೆ. ಒಂದೊಂದು ಪಾತ್ರವೂ ರುಚಿಯಾದ ಬೀಜ. ಅಜ್ಜನಿಂದಾಗಿ ಅದನ್ನು ಸವಿದ ನನಗೆ, ಸಾಧ್ಯವಾದಾಗೆಲ್ಲ, ಸ್ವಲ್ಪ ಕನ್ನಡದ ಕಡೆ ಒಲವಿರುವವರಿಗೆ ಓದಿಸುವ ಆಸೆ. ಹಾಗಾಗಿಯೇ ಬರೆದೆ. ಅವರ ಬರಹದ ಹೆಚ್ಚುಗಾರಿಕೆಯೇನೆಂದರೆ ಎಲ್ಲರನ್ನೂ ಮಾನುಷವಾಗಿ, ಭಾವುಕರಾಗಿ ಚಿತ್ರಿಸಿರುವುದು. ಇಲ್ಲಿ ರಾಮ ದೇವರಲ್ಲ. ಒಬ್ಬ ಮನುಷ್ಯ - ಉತ್ತಮ ಮನುಷ್ಯ. ವಾಲಿ ಬರಿಯ ವಾನರನಲ್ಲ - ಭಾವುಕ ಜೀವಿ. ರಾವಣ ಬರಿಯ ರಾಕ್ಷಸನಲ್ಲ - ಸೂಕ್ಷ್ಮ ಮನಸ್ಸಿನ ರಸಿಕ. ಮಂಥರೆ ಕುಬುದ್ಧಿಗೆ ಅವಳ ಹಿನ್ನೆಲೆ, ಬೆಳೆದು ಬಂದ ವಾತಾವರಣ, ಸುತ್ತಲ ಜನರ ಪ್ರತಿಕ್ರಿಯೆ ಕಾರಣ ಎಂದು ಕಲ್ಪಿಸಿದ ಪರಿ ಎಷ್ಟು ವಿಶಿಷ್ಟ, ವಾಸ್ತವ ಚಿತ್ರಣ.

ಎಲ್ಲರೂ ತಪ್ಪು ಮಾಡುತ್ತಾರೆ, ತಿದ್ದಿಕೊಂಡವರು ಹಿರಿದಾಗಿ ನಿಲ್ಲುತ್ತಾರೆ, ಲೋಕಮನ್ನಣೆಗೆ ಸಲ್ಲುತ್ತಾರೆ ಎಂಬಂಥ ಅರ್ಥ ಹೊಮ್ಮಿಸುವ ಕಥನ ಕಾವ್ಯ. ಅವರ ವರ್ಣನೆಗೆ ಅವರೇ ಸಾಟಿ.

Manjunatha Kollegala said...

ಹಿಂದೊಮ್ಮೆ ಓದಿ ಆನಂದಿಸಿದ್ದ ಪ್ರಸಂಗವನ್ನು ಮತ್ತೆ ನೆನಪಿಗೆ ತಂದಿರಿ. ಮೆಚ್ಚಿನ ಕವಿ, ಮೆಚ್ಚಿನ ಪ್ರಸಂಗ... ಸೊಗಸಾದ ನಿರೂಪಣೆ... ಧನ್ಯವಾದಗಳು

chethan said...

ಎಷ್ಟು ಸೊಗಸಾಗಿ ಪರಿಚಯಿಸಿದ್ದೀರಿ! ಧನ್ಯವಾದಗಳು.
ದಯವಿಟ್ಟು ರಾಮಾಯಣ ದರ್ಶನಂ ದಿಂದ ಮತ್ತಷ್ಟು ಬರೆಯಿರಿ.