Friday, April 6, 2018

ನಡೆಯುತ್ತ ನಡೆಯುತ್ತ...

ಮಲ್ಲಿಗೆಯಿಂದ ಮಲ್ಲಿಗೆಗೆ,
ಕನಸಿನಿಂದ ಕನಸಿಗೆ,
ದಾಟುತ್ತ ದಾಟುತ್ತ,
ಈಗ ನನಸಿನ ಬಯಲು,
ಸ್ವಪ್ನ ಹರಡಿದ ಮುಗಿಲು,
ವಸಂತದ ಗಂಧ ಗಾಳಿ ಹೂಗೊಂಚಲು
ಎಂದಿನ ಹಾಗೆ ಚೆಲುವರಿದೂ,
ಕೇಳದಿದೆ ಕೋಗಿಲೆಯ ಕುಕಿಲು,
ನೆರಳಿಗಿಂತಲೂ ಉದ್ದದ ಬಿಸಿಲು.

ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿಕೂತು
ಯಾರಿಗೂ ಹೇಳದ ಪಯಣ-
-ದ ದಾರಿ ಬದಲಾಗಿ
ಸಮಾಹಿತ-
-ದ ನಿರ್ವಾತ,
ಝಗಮಗಿಸುವ ಸೂರ್ಯನೇ
ಬೆಚ್ಚಿ ಬೆಮರುವ ಕಪ್ಪುಕುಳಿ ಬದುಕಿನ
ಅವಕಾಶದಿ,
ಬಗೆಬಗೆಯ ಉಲ್ಕಾಪಾತ.
ಈಗ ಮಲ್ಲಿಗೆ ಬಳ್ಳಿ ಡೆಸ್ಕ್ ಟಾಪಿನ ಸ್ಕ್ರೀನ್ ಸೇವರಲ್ಲಿದೆ,
ರಾತ್ರಿ ರಾಣಿಯ ಬೊನ್ಸಾಯ್ ಕಿಟಕಿ ಪಕ್ಕದ ಕುಂಡದಲ್ಲಿದೆ,
ಮಕ್ಕಳ ಕೈಗೆ ಸಿಕ್ಕಿ ತುದಿ ಹರಿದ-
ಜತೆಪಯಣದ ಚೊಲೋ ಚಿತ್ರವ ಫ್ರೇಮಲ್ಲಿ ಸಿಕ್ಕಿಸಲಾಗಿದೆ.

ಕೆ.ಎಸ್.ನ ಹೇಳಿದಂತೆ
"ಕವಿತೆ ಕರವಸ್ತ್ರ"
ಮತ್ತು ಚಿಕಿತ್ಸೆ ಕೂಡ.
ಲಘು ಗುರು ಮಾತ್ರೆಗಳ ಬಲವೇ ಬಲ.
ಬೇಂದ್ರೆ ಅಜ್ಜ ಬೇಜಾರಾಗಬ್ಯಾಡ್ರಿ
ನೀವು ಹೇಳಿದ ಹಾಗೆ
"ಕವಿಗೆ ಏನು ಬೇಕು
ಹೂತ ಹುಣಸೀಮರ ಸಾಕು"
ಬದುಕಿನ ಮರದೆದೆಗೆ ಕವಿತೆಯ ಹನಿ ಹನಿ ಬೇಕು.
ಆದರೂ ಕೊನೆಗೆ ಒಂದು ಮಾತು ಹೇಳಲು
ಅಡಿಗರೇ ಸೂಕ್ತ..
"ಮುಗಿಲು ಮಿಂಚಿನ ತತ್ತಿ
ತಳಕ್ಕೆ ಬೆಳಕಿನ ಮರಿಗಳಿಳಿಯಲಿಲ್ಲ.
ಅಷ್ಟೊಂದು ಮಿಂಚು ಮಿಂಚಿದ್ದಕ್ಕೂ
ಅಡಿಗೆಮನೆಯ ತರಗೆಲೆ ಹೊತ್ತಲಿಲ್ಲ."
ಪಯಣ ಪೂರ್ಣದೆಡೆಗೇ ಇದ್ದರೂ
ಪುಡಿಯಾಗುವುದು ನಿಯಮ.

Monday, March 12, 2018

ಕವಿ ಮಿತಿ

ನೆಲ ಹೇಳಿತು
ಮುಗಿಲು ಕಿವಿಗೊಟ್ಟಿತು
ಮಧ್ಯದ ಜನಸಂಕುಲ ಗಾಬರಿಯಾಯಿತು
ಒಂದು ತುಂತುರು ಮಳೆ
ಮಳೆ ನಿಂತ ತಂಗಾಳಿ, ಹಕ್ಕಿ ಕುಕಿಲು
ಎಂದಿನ ಹಾಗೆ ಟ್ರಾಫಿಕ್ಕು, ಕೆಲಸ, ಶಬ್ಧ,
ತುಂಬಿ ತುಳುಕುವ ಸಾರಿಗೆ,ಆಸ್ಪತ್ರೆ, ಹೋಟೆಲು,
ಹನಿ ತುಳುಕದ ಹಾಗೆ ಎಚ್ಚರದ ಬಾಟಲು.

ಆಗಸ ಪಿಸುನುಡಿಯಿತು
ಭುವಿ ಕಿವಿಯಾಯಿತು
ಮಧ್ಯದ ಜನಸಂಕುಲ ಕುಮ್ಹಿಟಿಬಿದ್ದರು
ಆತಂಕ, ಸಾಶಂಕ, ದೇಗುಲಗಳಲ್ಲಿ ಪರಿಪರಿಯ ಅರ್ಚನೆ ತಳ್ಳಂಕ
ಮತ್ತೊಂದು ಸುರಿಮಳೆ
ತೊಳೆದ ಕೊಳೆ, ಮುರಿದು ಬಿದ್ದ ರೆಂಬೆ ಕೊಂಬೆ
ಪಕ್ಕದ ಮರದಲ್ಲಿ ಗೂಡು ಸಿದ್ಧಗೊಳ್ಳುತ್ತಿರುವ ಸಂಜೆ
ಬೆಳಕು ಚೆಲ್ಲಿದ ಪಾದಪಥ, ಕಿವಿ ತುಂಬುವ ಹಾರ್ನುಗೀತ
ಮತ್ತದೇ ಟ್ರಾಫಿಕ್ಕು, ಕಿಕ್ಕಿರಿದ ಸಿಗ್ನಲು,
ಉದ್ದ ಕ್ಯೂಭರಿತ ಸಾರಿಗೆ, ಆಸ್ಪತ್ರೆ, ಹೋಟೆಲು
ಒಂದೆರಡು ಹನಿ ತುಳುಕಿಯೂ ತುಳುಕದ ಬಾಟಲು.

ಮಧ್ಯೆ ಟೆಕ್ನಾಲಜಿ
ಪತ್ರ,ಮೆಸೇಜು,ಚಿತ್ರ, ಎಮೋಜಿ
ಎಲ್ಲ ಸ್ತಬ್ಧ.
ಶಬ್ಧದೊಳಗಣ ನಿಶ್ಯಬ್ಧ
ದೊಳಗೆ
ಅಮೃತವಾಹಿನಿಯೊಂದು
ಹರಿಯುತ್ತಲೆ ಇರಲಿ
ಎಂದಷ್ಟೆ ಬಯಸುವುದು
ಕವಿಯ ಭಾಗ್ಯ.

ಇರಬಹುದೆ...

ಜತೆಗಿಳಿದ ದಾರಿ ಬಿಟ್ಟು
ತಿರುಗಿ ಹೊರಟೆ
ಸಕ್ಕತ್ತಾಗಿ ಕೈಕೊಟ್ಲು ಗುರೂ
ಲೋಕವೆಂದಿತು.
ಎಲ್ಲಿ ಕೈಯಿಟ್ಟೆ, ಎಲ್ಲಿ ಬಿಟ್ಟೆ
ಎಲ್ಲಿ ಕಟ್ಟಿದೆ, ಎಲ್ಲಿ ಒಡೆದೆ ಅಂತ
ಅದಕ್ಕೇನು ಗೊತ್ತು
ಪ್ಚ್ ಪ್ಚ್ ಅನ್ನುತ್ತದೆ.


ಬಿದ್ದು ಪುಡಿಯಾಗುವವಳಿದ್ದೆ
ಒಂದು ಕಿರಿಬೆರಳು ಹಿಡಿದೆತ್ತಿ ನಿಲ್ಲಿಸಿತು
ನೋಡ್ದಾ.. ಗೊತಿತ್ತು ನಂಗೆ
ಎಂದು ಹಲವರಿಯಿತು ಲೋಕ
ಏನು ಸಿಕ್ಕಿತು ಏನು ದಕ್ಕಿತು
ಎದ್ದು ನಿಂತಿದ್ದು ಹೇಗೆ
ಅದಕ್ಕೇನು ಗೊತ್ತು
ಮುಸಿನಗೆ ನಗುತ್ತದೆ.


ಹೇಳಿದ ಮಾತು ಕೇಳಲಿಲ್ಲ
ದೊಡ್ಡವರ ದಾರಿ ಸಾಗಲಿಲ್ಲ
ಬೆನ್ನು ಹತ್ತದಿರದೆ ಪಾಪ
ಕಳೆಯಬಹುದೆ ಶಾಪ
ಹೊರೆಸುತ್ತದೆ ಲೋಕ
ಏನು ಕೇಳಿದೆ, ಎಲ್ಲಿ ಹೋದೆ
ಬೆನ್ನೇರಿದ್ದು ಏನು
ಇಳಿಸಿದ್ದು ಏನು
ಶಾಪವೋ ವರವೋ
ಅದಕ್ಕೇನು ಗೊತ್ತು
ಉಪದೇಶ ಮಾಡುತ್ತದೆ.


ಎಲ್ಲ ತಿರುವುಗಳೂ ಒಂದು ದಾರಿಯಲ್ಲಿ
ಒಟ್ಟಾಗಿ ಕರಗುವಾಗ
ಅನಿಸುತ್ತದೆ
ಹೊರಳುದಾರಿ, ಕಿರುಬೆರಳು,
ಎಡವು ನಡೆ, ಎದ್ದ ನಿಲುವು
ಶಾಪ, ಉಶ್ಯಾಪ, ಪಶ್ಚಾತ್ತಾಪ, ಪರಿಹಾರ
ಎಲ್ಲ ನಿಶ್ಚಿತವಾಗಿದ್ದು ಆ ನದೀಮೂಲದಲ್ಲೆ
ಇರಬಹುದೆ?!!
ಎಲ್ಲವೂ ಕರಗುವುದೆ ಒಂದೇ ನಿರಾಳದಲ್ಲಿ...?!
ಮಡಕೆಯೊಳಗಿನ ನೀರು ಸಮುದ್ರದೊಡನೆ ಸೇರುವಲ್ಲಿ!

Monday, January 29, 2018

ಮುಗುಳ್ನಗೆಯ "ಚೆಲುವ"

ಸುತ್ತೆಲ್ಲ ಕತ್ತಲೆ,
ಮುಚ್ಚಿಟ್ಟ ಬಾಗಿಲು,
ತೆರೆಯದ ಕಿಟಕಿ,
ಒಳಗುಡಿಯಲಿ
ಪದ್ಮಾಸನದಲಿ
ಧ್ಯಾನಮಗ್ನ ಶಿಲೆ.

ಚಿಕ್ಕ ಸೊಡರಿನ ದೀಪ-
ಕಣ್ಣ ಬಳಿ ಹಿಡಿಯೆ
ಮೆಲ್ನಗುವಿನ ಪ್ರತಿಫಲನ;
ಗದ್ದದ ಬಳಿ ಹಿಡಿಯೆ
ಗಂಭೀರ ಶಾಂತ ವದನ;
ಎದೆಯ ಬಳಿ
ಹೃದಯ ಮಿಡಿತದ ಬಳಿ ಹಿಡಿಯೆ
ಅರೆನಿಮೀಲಿತ ಧ್ಯಾನ!

ತುಸುದೂರದಿ ನಿಲ್ಲೆ
ಹಲವು ಸತ್ಯಗಳ ಅನೇಕಾಂತವಾದದ
ಮೂರ್ತರೂಪ;
ಬೆಳಕು ಚೆಲ್ಲೆ
ಪುನರುದ್ಧರಿಸಿದ ಗುಡಿಯ ಶಿಲಾ ನೈಪುಣ್ಯ.
ಎಷ್ಟು ಬೇಕೋ ಅಷ್ಟು ಹರಿಸೆ
ಮೆಟ್ಟಿಲು ಮೆಟ್ಟಿಲಾದ
ಬದುಕಿನ ಪಾಠ.

ನಿಖರ ಬಣ್ಣನೆಯ ನಿಶ್ಚಿತ ಉಕ್ತಿಗಳಲ್ಲಿ
ಪ್ರಜ್ವಲಿಸುವ ಸತ್ಯವು
ಅನುಕ್ತ ಆಕಾಶದಲ್ಲೆಲ್ಲ ಹರಡಿದೆ
ಎಂದು ಕೂತಿರುವ
ಮುಗುಳ್ನಗೆಯ "ಚೆಲುವ"ನಿಗೆ ಮನಸೋತೆ.
ಮತ್ತೆ ಬರುವೆ.

ಅವ ಹೇಗಿದ್ದನೋ!
ಏನಂದನೋ!
ಉಳಿಗೆ ಸಿಕ್ಕಿದ ಕಲ್ಲನು ಕೆತ್ತಿದವನ
ಎದೆಯೊಳಗಿನ ಆಕಾಶ
ನನ್ನ ಕಣ್ಣ ತುಂಬಿತು.



Wednesday, January 17, 2018

ಮಡಕೆ

ಕನಸುಗಾತಿ
ಮಡಕೆ ಕೊಂಡಳು
ಅವನು ಹಸುವಿನ ಬಗ್ಗೆ ಮಾತನಾಡಿ ಮುಗಿಸುವಷ್ಟರಲ್ಲಿ
ಇವಳು ಸಂತೆಗೆ ಹೋಗಿ
ಮಡಕೆ ತಂದಾಯಿತು
ಹಾಲಿಗೆ, ಮೊಸರಿಗೆ, ಬೆಣ್ಣೆಗೆ, ತುಪ್ಪಕ್ಕೆ
ಇಷ್ಟಲ್ಲದೆ ಮಿಗುವ ಹಾಲನ್ನು ತುಂಬಿಸಿಡಲಿನ್ನೊಂದು ಮಡಕೆ

ಅರಿವಿದೆಯೆ ನಿನಗೆ
ಕನಸಿನ ಹಸುವಿನ ಮಧುರ ಹಾಲಿಗೆ
ಕಣ್ಣೆತ್ತಿ ನಿಂದವಳೆ
ಕನಸು ಮುಗಿಯುತ್ತದೆ
ಎಚ್ಚರಾದಾಗ
ಹಸು, ಹಾಲು, ಮಾತು, ಮೌನ,
ಬೆಣ್ಣೆ ಮತ್ತು ತುಪ್ಪ
ಯಾವುದೂ ಇರದ
ಬದುಕಿನ ಮಡಿಕೆ
ಬೋರಲು ಬಿದ್ದಿದೆ

ಮಡಕೆಗಳ ಹಸಿಯೊಡಲಿನಲಿ ಬರಿದೆ ಕನಸು.
ತುಂಬಿದರೂ ತುಂಬದಿದ್ದ ಹಾಗೆ
ಅವು ಎಂದಿಗೂ ಖಾಲಿ.

ಥೇಟ್ ಬದುಕಿನ ಹಾಗೆ
ಕನಸೂ ಇದ್ದು ಬಿಟ್ಟರೆ
ಏನು ಮಾಡುವುದು?
ಕೊಳಲನೂದುವ ಗೋವಳ 
ಸುಮ್ಮನಿರುವನು
ಕನಸಿನ ವಾಸ್ತವಕ್ಕೆ ಬೆದರಿ.

Wednesday, December 13, 2017

ಕವಿತೆ ಬರೆಯುವಾ

ಮೊಗ್ಗಾಗುವಾ
ಹೂವಾಗುವಾ
ಜೇನಾಗುವಾ
ಬಗ್ಗೆ ಎಲ್ಲ ಒಂದು ಕವಿತೆ ಬರೆಯುವಾ

ನವೋದಯ ಅಲ್ಲ ಮಾರ್ರೆ
ನವ್ಯೋತ್ತರವೇ ಮುಗಿಯುತ್ತ ಬಂದಿದೆ
ಕಾಲವಲ್ಲದ ಕಾಲದಲಿ
ಹೂಗಿಡಗಳೆಲ್ಲ ಅಂಗಳದಿಂದ
ಇನ್ ಡೋರಾದ ಸಮಯದಲಿ

ಉದ್ಯಾನನಗರಿಯಲಿ ಉದ್ಯೋಗಪರ್ವದಲಿ
ಯಕ್ಷಪ್ರಶ್ನೆಯ ಗಾಣದಲಿ ನೊರೆನೊರೆಯಾದ ಕಬ್ಬಿನ ಹಾಲು
ಕೂಪನ್ ಇಟ್ಟರೆ ಮನೆಬಾಗಿಲಿನಲಿ ಕೊಟ್ಟೆಯಲಿ ತುಂಬಿ ತುಳುಕದ ಹಸುವಿನ ಹಾಲು
ಪೇಪರು,ತಂಗಳು, ಹಾರ್ಮೋನ್ ಹಿಂಡಿಯ ಮೆದ್ದು ನಡೆದಾಡಲಾಗದ ಆಕಳು 

ಅನ್ನುತ್ತದೆ ಈಗಲೂ ಅಂಬಾ
ಗೊಬ್ಬರಕೂ ಆಗದ ಸಗಣಿ ರಸ್ತೆ ತುಂಬಾ
-ಇದ್ದರೂ
ಮಳೆಮುಗಿದ ಬೆಳಗಲಿ, ಚುಮುಗುಡುವ ಚಳಿನಸುಕಲಿ, ಬೇಸಗೆಯ ಎಳೆಬಿಸಿಲಲಿ
ಹೂಚೆಲ್ಲಿದ ಪಾದಪಥ
-ದ ಮೇಲೇ ಎರಡು ಗಾಲಿಯ ನಗರರಥ
ರುಮ್ಮೆನ್ನುತ್ತದೆ


ಲಾಂಗ್ ವೀಕೆಂಡಿನ ಜಂಗುಳಿಯೋಟದಲಿ
ರೆಸಾರ್ಟಿನ ಹಿತ್ತಲಲಿ ಬಣ್ ಬಣ್ಣವಾಗಿ ಅರಳಿದ ದಾಸವಾಳದಲಿ
ಗೈಡನು ಕೈದೋರುವ ಬೆಟ್ಟದಂಚಲಿ ಅರಳಿದ ಕುರಿಂಜಿಯಲಿ
ಕೊಳದ ಅಂಚಿನ ಬಿದಿರುಮೆಳೆಯಲಿ ತೂಗುಬಿದ್ದಿಹ ನಿಜ ಗೀಜಗನ ಗೂಡಲಿ

ಸಂಜೆ ಅಚಾನಕ್ಕಾಗಿ ಸುರಿದು ನಿಂತ ಮಳೆನೆಂದ ಬೀದಿಯಂಚಿನ ಮರಮರದೆದೆಯಲಿ
ಅಲ್ಲಲ್ಲಿ ಇಲ್ಲಿಲ್ಲಿ ಉಳಿದಿರಬಹುದು ಒಂದೊಂದು ಕುಕಿಲು
ಟೆರೇಸು ಬಾಲ್ಕನಿಯ ಕೈದೋಟದಿ ಅರಳು ಹೂಗಳ ನೆರಳಲಿ
ಬೆಕ್ಕು ಕಬಳಿಸದೆ ಉಳಿದ ಪಿಕಳಾರ ಮೈನಾದ ಗೂಡುಗಳಲಿ
ಟೀವಿಗೆ ಕಣ್ಣು ನೆಟ್ಟ ಮಗು ಬಾಗಿಲೆಡೆ ಕಣ್ಣು ಹಾಯಿಸಿ ಅರಳುವ -
ಅಮ್ಮ ಮನೆಗೆ ಮರಳುವ ಕ್ಷಣದಲಿ...
ನಾವು ಕವಿತೆ ಬರೆಯುವಾ
ಮೊಗ್ಗಾಗುವಾ
ಹೂವಾಗುವಾ
ಜೇನಾಗುವಾ
ಕ್ಷಣಗಳ ಬಗ್ಗೆ


ವನದಿಂದ ಉಪವನಕ್ಕೆ,
ಅಂಗಳದಿಂದ ಪುಸ್ತಕಕ್ಕೆ,
ಕಾನಿನಿಂದ ಹೋರಾಟದಂಗಳಕ್ಕೆ
ಬದಲಾದ ಪರಿಸರದಲ್ಲಿ
ನಾವು ಕವಿತೆ ಬರೆಯುವಾ


ಯಾರೂ ಪ್ರಕಟಿಸುವುದಿಲ್ಲ
ಸಾಪ್ತಾಹಿಕಗಳ ತುಂಬ ದೂರದೇಶದ ಹೂವಿನ ಕೊಲ್ಲಿ
ನದಿಯ ಹರಿವು, ಸುಖಬದುಕಿಗೆ ಟಿಪ್ಸು,
ನವಜೀವನದ ಜಾಹೀರಾತು
ಒಂದರ್ಧ ಬಂಡಾಯ, ಇನ್ನೊಂದರ್ಧ ಸ್ತ್ರೀ ಸಂ ವೇದನೆ
ಹಳೆ ಹಳೆಯ ಸಿದ್ಧಾಂತಗಳ ಮರು ಪರಿಶೋಧನೆ
ಅದು ಹೇಗೋ ಮಧ್ಯಕ್ಕೆ ಸಿಕ್ಕಿಬಿದ್ದ ಮಕ್ಕಳ ಪುಟದಲಿ
ಕತೆ,ಚಿತ್ರಕತೆ,ಚಿತ್ತಾರ ಮತ್ತು ಛಾಯಾಚಿತ್ರ ನೆರಳಲಿ
ಕಿರಿ(ಕಿರಿ)ಕಥೆಯಾದ್ರೆ ಹಾಕಿದ್ರೂ ಹಾಕಿಯಾರೆ
ಕವಿತೆಗೆ ಜಾಗವಿಲ್ಲ

ಆದರೂ ನಾವು ಕವಿತೆ ಬರೆಯುವಾ
ಹೀಗೆಲ್ಲ ಬರೆಯದೆ
ಈಗಿತ್ಲಾಗೆ
ಮೊಗ್ಗಾದ
ಹೂವಾದ
ಜೇನಾದ
ಮತ್ತು ದುಂಬಿ ಗುಂಗುಂ ಎಂದ ವಿಷಯ
ಬೇಕಾದವರಿಗೆ ಗೊತ್ತಾಗುವುದು ಹೇಗೆ?
ನಾವು ಕವಿತೆ ಬರೆಯುವಾ
ನ್ಯೂಸ್ ಬ್ರೇಕಿನ ಸುಂಟರಗಾಳಿಯಲಿ
ಒಮ್ಮೊಮ್ಮೆ ಹೂಗಂಧ ಹಕ್ಕಿ ಕುಕಿಲು ಹಾಯಲಿ
ಬ್ಲಾಗ್ದಾಣದಲಿ
ದೊಡ್ಡ ಬೂರುಗದ ಮರ
ಮುತ್ತುಗದ ಹೂವು
ಹಬ್ಬಿದ ಕಾಡುಮಲ್ಲಿಗೆಯ ಬಳ್ಳಿ
ಬಿರಿವ ಹೊಂಗೆಹೂವ ಗೊಂಚಲಲಿ ದುಂಬಿದಂಡು
ಎಲ್ಲಿಂದಲೋ ತಂದ ಕಾಳು ಮರಿಗಳಿಗೂಡುವ ಹಕ್ಕಿವಿಂಡು
ಕಣ್ಮುಚ್ಚಿದರೆ ತಂಗಾಳಿ
ಕ್ರೌಂಚದ ಜೋಡಿಗಳಿಗೆ
ಹೂಡುವ ಮೊದಲೆ ಬಾಣ... ಬೇಡ
ಎನ್ನುವ ಋಷಿಗಣ
ಇಲ್ಲಿ ಬರೆಯುವವರಿಗೂ ಓದುವವರಿಗೂ
ಬರೀ ಖುಷಿ ಕಣಾ...
ನಾವು ಕವಿತೆ ಬರೆಯುವಾ.