Thursday, November 2, 2017

ಕುದಿ ಎಸರು.....ತಿಟ್ಹತ್ತಿ ತಿರುಗಿ ನೋಡಿದಾಗ...

ಮೊನ್ನೆ ಅನಾರೋಗ್ಯದ ಕಾರಣ ಸಿಕ್ಕ ರಜೆಯಲ್ಲಿ ಇಡೀ ದಿನ ರಾತ್ರಿ ಈ ಪುಸ್ತಕ ಓದಿ ಮುಗಿಸಿದೆ. spellbound  ಅಥವಾ  ಮಾತುಮರೆತೆ ಎನ್ನುವುದು ಈ ಪುಸ್ತಕಕ್ಕೆ ನನ್ನ ಮೊದಲ ಸ್ಪಂದನೆ. ಒಂದರ್ಧ ಗಂಟೆ ಸುಧಾರಿಸಿಕೊಂಡು ಮುಂದಿನ ಎರಡು ದಿನಗಳಲ್ಲೆಲ್ಲ ಪುಸ್ತಕದ ಓದು ನೆನಪಾಗುತ್ತಲೇ ಇರುವಾಗ ಮತ್ತೆ ಮತ್ತೆ ಬಂದ ಭಾವ "ಈ ಲೇಖಕಿಗೆ. (ಹುಂ ಪುಸ್ತಕದೊಳಗಿನ ವ್ಯಕ್ತಿಯಾಗಿ ಅಲ್ಲ).. ಕೈ ಮುಗಿಯಬೇಕು. ಗೌರವದಿಂದ ತಲೆಬಾಗಿ ನಂತರ ಗಟ್ಟಿಯಾಗಿ ತಬ್ಬಿಗೊಳ್ಳಬೇಕು" ಎಂಬುದು.
ನಾನೂ ಆಗೀಗ ಕೆಲವು ಸ್ನೇಹಿತರ ಪುಸ್ತಕ-ಸಾಹಿತ್ಯ ಚಟುವಟಿಕೆಗಳಲ್ಲಿ ಕಂಡ ಎತ್ತರದ ನಿಲುವಿನ ವಿಜಯಮ್ಮ ಹಾಗೆ ಮೇಲುಮೇಲಿಂದಲೇ ತುಂಬ ಇಷ್ಟವಾಗಿದ್ದರು. ನನಗೆ ಅವರು ಪತ್ರಕರ್ತೆ ಎಂಬುದರ ಹೊರತಾಗಿ ಅವರ ಇನ್ಯಾವ ವಿವರಗಳೂ ಈ ಪುಸ್ತಕ ಓದುವವರೆಗೆ ಗೊತ್ತಿರಲಿಲ್ಲ. ಆ ಕಾರ್ಯಕ್ರಮಗಳಲ್ಲಿ ಅವರಾಡಿದ ನೇರ ಮೌಲಿಕ ಅನಿಸಿಕೆಗಳು ಮೇಲಕ್ಕೆ ಕಾಣುವ ಅವರ ಚುಂಬಕ ವ್ಯಕ್ತಿತ್ವವನ್ನು ಇನ್ನೂ ಇಷ್ಟವಾಗಿಸಿದ್ದವು. ಅವರ ಮಾತುಕತೆಗಳಲ್ಲಿ ಹಣಿಕಿ ಹಾಕುವ ಹಳೆಯ ಎಷ್ಟೊಂದು ಜನ ಸಾಹಿತಿಗಳ ಬಿಡಿ ಬಿಡಿ ಚಿತ್ರಗಳು ನನಗೆ ಇಷ್ಟವಾಗಿದ್ದವು. ಶ್ರೀನಿವಾಸರಾಜು, ಕಿ.ರಂ, ರಾಜರತ್ನಂ, ಮಾಸ್ತಿ.. ಇವರುಗಳ ಬಗ್ಗೆ ಅವರಾಡುವ ಪಕ್ಕದ ಮನೆಯ ಹುಡುಗಿಯ ಹಾಗಿನ ಸರಳ, ಸಲಿಗೆಯ ಮತ್ತು ಅಕ್ಕರೆಯ ಚಿತ್ರಣಗಳು ನನ್ನ ಓರಗೆಯವರಿಗೆ ಮುಖ್ಯವಾದ ಕೊಂಡಿಗಳು. ಎಲ್ಲ ಮೇರು ಸಾಹಿತಿಗಳನ್ನೂ ಅವರವರ ಭವ್ಯ ಫ್ರೇಮುಗಳಲ್ಲಿ ದೂರದಿಂದ ಕಂಡವರಿಗೆ ಇವರು ಕಡೆದಿಡುವ ದಿಟ್ಟ, ಸ್ಪಷ್ಟ ಆದರೂ ಅಕ್ಕರೆಯ ಚಿತ್ರಣಗಳ ಅವಶ್ಯಕತೆ ತುಂಬ ಇದೆ ಅನಿಸುತ್ತದೆ ನನಗೆ.
ಇಷ್ಟೆಲ್ಲ ಹೇಳಲೇಬೇಕೆನಿಸಿತು ಏಕೆಂದರೆ ಆ ಮಾತುಕತೆಗಳಲ್ಲಿ, ಬರಹಗಳಲ್ಲಿ ಇರುವ ಸ್ಪಷ್ಟತೆ, ದಿಟ್ಟತನ, ಮತ್ತು ತಾನು ಬರೆದ ವಿಚಾರಗಳ ಬಗ್ಗೆ ನಿಷ್ಠುರವಾದ ಅಕ್ಕರೆ ಈ ಪುಸ್ತಕದಲ್ಲಿದೆ. ಹಾಗಂತ ಎಲ್ಲಿಯೂ ಹೊಂದಾಣಿಕೆಯಿಲ್ಲದ ನಿರ್ಲಿಪ್ತ ಪ್ರಸ್ತುತಿಯಲ್ಲಿ ಲೇಖಕಿಯಾಗಿ ಅವರು ಅದ್ಭುತವಾಗಿ ಹೊಮ್ಮಿದ್ದಾರೆ. ನಾನು ಓದಿದ ಕೆಲವು ಅನುವಾದಿತ ಕೃತಿಗಳಲ್ಲಿ ( ಕುಣಿಯೇ ಘುಮಾ - ಮಾಧವಿ ದೇಸಾಯಿ/ಮರಾಠಿ, ನ-ಹನ್ಯತೆ - ಮೈತ್ರೇಯಿ ದೇವಿ/ಬಂಗಾಳಿ..., ಕಮಲಾದಾಸ್-ನನ್ನ ಕಥೆ/ ಮಲಯಾಳಿ, ) ಮತ್ತು ನಮ್ಮದೇ ಪ್ರತಿಭಾ ಬರೆದಿರುವ ಅನುದಿನದ ಅಂತರಗಂಗೆ...ಈ ಮೊದಲಾದ ದಿಟ್ಟ ಕೃತಿಗಳಲ್ಲಿ ನಾನು ನನ್ನನ್ನು, ಜಗತ್ತಿನ ಎಲ್ಲ ಹೆಣ್ಣು ಜೀವಗಳ ಚಡಪಡಿಕೆಯನ್ನು ಅನುಭವಿಸಿದ್ದೆ. ಪ್ರತಿಯೊಂದೂ ಓದು ಸಹಾ ನನ್ನದೇ ಮಿತಿಗಳನ್ನ ಅರ್ಥ ಮಾಡಿಕೊಳ್ಳಲು ತಮ್ಮದೇ ರೀತಿಯಲ್ಲಿ ನೆರವಾಗಿವೆ. ಈ ಪುಸ್ತಕ ಇದೇ ಹಾದಿಯಲ್ಲಿ ಆಳವಾದ ಮತ್ತು ವಿಸ್ತಾರವಾದ ಗುರುತು ನೆಟ್ಟಿದೆ.
ತನ್ನ ಅತ್ಯಂತ ಖಾಸಗೀತನದಲ್ಲಿ ಹೆಣ್ಣು ಅನುಭವಿಸಿದ ಹತಾಶೆ, ಅವಮಾನ, ಕೀಳರಿಮೆ ಮತ್ತು ಅಭಿವ್ಯಕ್ತವಾಗಿಲ್ಲದೆಯೂ ಒಳಗಿಂದಲೇ ಚುಚ್ಚುತ್ತಲೇ ಇರುವ ಪ್ರತಿರೋಧ ಇದನ್ನು ಸಮಸ್ತರ ಎದುರಿಗೆ ಇಡುವುದು ತುಂಬ ಧೈರ್ಯ ಬೇಡುವ ಸವಾಲಿನ ಕೆಲಸ. ಓದುವಾಗ ಭೇಷ್ ಎಂದವರು ಮತ್ತೆ ಎದುರಿಗೆ ಸಿಕ್ಕಾಗ ನೋಡುವ ಬೇರೆಯದೇ ನೋಟವನ್ನು ತಡೆಯುವ ಧೈರ್ಯ ಇದ್ದವರು ಮಾತ್ರ ಬರೆಯುವ ಧೈರ್ಯ ಮಾಡಬಲ್ಲರು ಎನ್ನುವುದು ನನ್ನ ಮಾತು. ಅದನ್ನ ಇಲ್ಲಿ ವಿಜಯಮ್ಮ ಮಾಡಿದ್ದಾರೆ. ಅವರ ಹೆಸರಲ್ಲೇ ಇರುವ ಅಮ್ಮ ಕಿರಿಯರ ಎಲ್ಲ ದಿಗ್ಭ್ರಮೆಗಳನ್ನು ಸಂತೈಸಿದರೆ, ಅವರ ಬದುಕಿನ ಹಲ ಮಗ್ಗುಲುಗಳನ್ನು ಈಗಲೇ ನೋಡಿದ ಅವರ ಓರಗೆಯವರ ಓಹ್..ನೋಟಗಳನ್ನು ನಲ್ಲಿಫೈ ಮಾಡುತ್ತದೆ. ಯಾವ ನೋವನ್ನೂ ವೈಭವೀಕರಿಸ‌ದ, ನವಿರಾಗಿಸದ ಒಂದು ಅನುದ್ವೇಗದ ಬರಹವಿಲ್ಲಿದೆ.
ಓದುವಾಗ ಸಿಟ್ ಹತ್ತುತ್ತದೆ ನನಗೆ ಅಯ್ಯೋ ಯಾಕೆ ಸುಮ್ಮನಿದ್ದಳಿವಳು ಎನಿಸುವ ತುದಿಯಲ್ಲಿ ನಿಲ್ಲಿಸುವ ಭಾಗಗಳಿವೆ. ಇಡೀ ಪುಸ್ತಕ ಓದಿ ಮುಗಿಸಿ ಮತ್ತೊಮ್ಮೆ ಮನಸ್ಸಿನಲ್ಲಿ ಕೆಲ ವಿವರಗಳನ್ನ ಹಾಯಿಸುವಾಗ ಅನಿಸುತ್ತದೆ. ಅವರಿಗೆ ಸಿಕ್ಕ ಭಯಂಕರ ಬಾಲ್ಯ ಅವರ ಜೀವನದ  ಎಲ್ಲ ನಡವಳಿಕೆಗಳಲ್ಲೂ ಚಾಚಿಕೊಂಡಿದೆ ಅಂತ. ಅಯ್ಯೋ ಪಾಪ ಎನ್ನಿಸುವ ಅಮ್ಮನ - ಮೈ ಮೇಲೆ ಎರಗುವ ಅಪ್ಪ ಮುಂದಿನ ಒಂದಷ್ಟು ಬಾಲ್ಯಕಾಲ ಅಮ್ಮನಿಲ್ಲದ ಬಾಲೆಯ ಬೆಚ್ಚನೆ ಆಸರೆಯಾಗಿ ಉಳಿದುಬಿಡುತ್ತಾನೆ. ಬಾಯಿಮುಚ್ಚಿಕೊಂಡು ನಲುಗುವ ಅಮ್ಮ ಬರಿ ಹೂವಿನಭಿಷೇಕ ಮಾಡುತ್ತ ಖುಷಿ ಪಡುವ ಅಮ್ಮ ಆ ಮುಗ್ಧ ಮನದ ಮೇಲೆ ಎಂತಹ ಪ್ರಭಾವ ಬೀರಿರಬಹುದು. ನೋವೋ ನರಕವೋ ಇದೇ ನನ್ನ ಬದುಕು. ಬಿಟ್ಟು ಬಂದರೆ ಹಂಗಿಸುವ ಸಮಾಜ ಎಂದು ನೋವು ನುಂಗಿ ನಿಲ್ಲುವ ಆ ತಾಯಿಯು ಮಾತಿಲ್ಲದೆ ತನ್ನ ಸಬ್-ಮಿಶನ್ ಅನ್ನು ಈ ಬಾಲೆಗೆ ದಾಟಿಸಿದ ರೀತಿ ನನ್ನನ್ನು ಅಲುಗಾಡಿಸಿಬಿಟ್ಟಿದೆ. ಮುಂದೆಂದೂ ಗಂಡನೆಂಬ ಜೀವಿ ತನ್ನ ಮೇಲೆ ಮಾಡುವ ಎಲ್ಲ ಅತ್ಯಾಚಾರಗಳನ್ನು ಮಾತಿಲ್ಲದೆ ನುಂಗುವ ಕೂಗು ಮುಚ್ಚಿಹಿಡಿಯುವ ಇವರ ಕ್ರಿಯೆ ಪ್ರತಿಕ್ರಿಯೆಗಳ ಮೂಲ ನನಗೆ ಇವರ ಬರಪೀಡಿತ ಬಾಲ್ಯದಲ್ಲಿ ಕಾಣುತ್ತದೆ. ಅಂತೂ ಒಂದಿನ ಮಗನ ಪ್ರತಿಕ್ರಿಯೆಯ ಮೂಲಕ ತನ್ನ ಪ್ರತಿರೋಧಕ್ಕೆ ಒಂದು ಕಿಟಕಿ ತೆಗೆದದ್ದನ್ನು ನೋಡಿ ಅದರಾಚೆಗೆ ದಾಪುಗಾಲು ಇಡುತ್ತಾರೆ. ಮುಂದಿನ ದಾಪುಗಾಲುಗಳ ಪಯಣದ ಕಥನಕ್ಕೆ ಕಾಯುತ್ತಿದ್ದೇನೆ.
ನಿಜಕ್ಕೂ ಇವರು ಕೊನೆಗಾದರೂ ಹಾಗೆ ಮಾಡದಿದ್ದರೆ ನನಗೆ ಉಸಿರೇ ಕಟ್ಟುತ್ತಿತ್ತು. ತಾನು ಬಿಗಿಯಾಗಿ ಸುತ್ತಿಟ್ಟ ತನ್ನ ಮಿತಿಯನ್ನ ತಾನೇ ಮೀರುವ ಈ ಭಾಗಕ್ಕೆ ಬಂದ ಮೇಲೆ ಅವರು ಅನುಭವಿಸಿದ ಎಲ್ಲ ನೋವಿನ ಕ್ಷಣಗಳನ್ನು ತಡೆದುಕೊಳ್ಳುವ ಶಕ್ತಿ ನನಗೆ ಬಂತು. ಬಹುಶಃ ಮೊದಲಲ್ಲೆ ಇರುವ ಈ ಸೂಚನೆಯೇ ನನಗೆ ಈ ಪುಸ್ತಕದ ಕುದಿಯನ್ನ ತಡೆದು ಮುಂದೋದಲು ಆಸರೆಯೆಂದರೂ ತಪ್ಪಿಲ್ಲ.
ಇದು ಅವರು ಬರೆದ ಹಾಗೆ ಸಾಗಾ ಆಫ್ ಎ ಡೆಸರ್ಟೆಡ್ ವುಮನ್ ಅಲ್ಲ. ಇದು ಸಾಗಾ ಆಫ್ ಆನ್ ಅಸರ್ಟಿವ್ ವುಮನ..... ಬಗ್ಗಿ ಸಾಕಾಗಿ ಮೇಲೆದ್ದ ದಿಟ್ಟೆಯ ಪಯಣ.

ಈಗಾಗಲೇ ಇದನ್ನು ಓದಿದವರ ಕೆಲವು ಅನಿಸಿಕೆಗಳಲ್ಲಿ ಇಷ್ಟೊಂದು ವಿವರಗಳ ಅವಶ್ಯಕವಿತ್ತೆ/ಸಾಮಾಜಿಕ ಸ್ಥಿತಿಗತಿಗಳ ವಿವರವಿಲ್ಲ/ಕೆಳಸ್ತರದ ಬದುಕಿನ ಪರಿಚಯ ಬರಲಿಲ್ಲ.. ಇತ್ಯಾದಿ ಅನಿಸಿಕೆಗಳನ್ನು ಕೇಳಿದೆ. ನಾನು ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅನಿಸುತ್ತಿರುವುದು ಒಂದು ಪದವನ್ನೂ ಅವರು ಅನವಶ್ಯಕ ಉಪಯೋಗಿಸಿಲ್ಲ ಎಂದು. ದೇಹದೊಳಗೆ ಸರಳು ತೂರಿ ಬೆಂಕಿಯ ಮೇಲೆ ಸುಡುವಾಗ ಎಲ್ಲ ಮಗ್ಗುಲುಗಳೂ ಬೆಂದವೇ ಎಂದು ಖಾತ್ರಿ ಮಾಡುತ್ತಾನೆ ಬಾಣಸಿಗ. ಆ ಬೆಂದ ಜೀವ ಹೀಗ್ ಹೀಗೆ ಮಾಡಿಬಿಟ್ಟರಲ್ಲಾ ಅಂತ ವಿವರಿಸುವಾಗ ಬರೀ ನನ್ನ ಸುಟ್ಟು ತಿಂದರು ಅಂತ ಬರೆದರೆ ಅದರ ಸುಡು ಉರಿ ಓದುವವರದ್ದಾಗುವುದು ಹೇಗೆ. ಒಂದು ಕಥೆ, ಕಾದಂಬರಿ, ಅಂಕಣ, ವರದಿ ಬರೆಯುವಾಗ ಅವಶ್ಯಕ ವಿವರಗಳು ಎಂದು ಗಂಡೊಬ್ಬ ಡೀಟೈಲಾಗಿ ಖಾಸಗಿ ವಿವರಗಳನ್ನು ಬರೆದರೆ ಅದು ಬೋಲ್ಡ್ ಬರವಣಿಗೆಯಾಗುವುದಾದರೆ, ವಿಜಯಮ್ಮ ಬರೆದ ಪುಸ್ತಕದಲ್ಲಿನ ಹುರಿಯುವಿಕೆಯ ವಿವರವಿಲ್ಲದೆ ಇದ್ದರೆ ಅದರ ಉರಿ ನಮಗೆ ತಾಗುವುದೇ ಇಲ್ಲ. ಅದು ಮತ್ತೊಂದು ದಿಟ್ಟ ಹೆಣ್ಣಿನ ಸಾಧನ ಕಥೆಯಾಗುತ್ತದೆ ಅಷ್ಟೆ.

ಮದುವೆಯೆಂದಾದ ಮೇಲೆ ಇವರು ಅನುಭವಿಸಿದ ಭಯಂಕರ ಸಂಗತಿಗಳ ಮುಂದೆ ಹುಟ್ಟಿನಿಂದ ಇವರು ಹೆಣ್ಣಾಗಿ ಅನುಭವಿಸಿದ ಸಂಕಟಗಳ ಸರಮಾಲೆ ಮಂಕಾಗಿ ನಮ್ಮ ಗಮನ ಬೇರೆಡೆ ಹೋಗಿಬಿಡುತ್ತದೆ. ತೆವಲು ತೀರಿಸಿಕೊಂಡು ಹೆಣ್ಣು ಹೆತ್ತೆಯಲ್ಲಾ ಎಂದು ಹೆಣ್ಣನ್ನು ಇನ್ನೊಬ್ಬ ಹೆಣ್ಣು ಅತ್ತೆಯೇ ಬೈದಾಡುವ ಅವಳನ್ನು ಜೀವನದ ಸಹಜ ನೆಮ್ಮದಿಗಳಿಂದ ದೂರವಿಡುವ ಪರಿಸ್ಥಿತಿ ಇವತ್ತಿಗೂ ಏನೂ ಬದಲಾಗಿಲ್ಲ. ಇದು ವಿಜಯಮ್ಮನ ಬಾಲ್ಯಕಾಲದಿಂದ ಇವತ್ತಿನವರೆಗೂ ಹಾಗೇ ಇದೆ. ಸುತ್ತಲ ಮನೆಗಳವರು, ಗಂಡು ಮಕ್ಕಳು ಜೊತೆ ಹೆಣ್ಮಕ್ಕಳನ್ನು ತುಚ್ಛೀಕರಿಸುವ ದಿನಗಳೂ ಹಾಗೇ ಇವೆ. ವಿದ್ಯಾವಂತ ಮಧ್ಯಮ ಮತ್ತು ಮೇಲ್ಮಧ್ಯಮವರ್ಗದಲ್ಲಿ ಆಯ್ಕೆರಹಿತ ಒಪ್ಪಿಗೆ ಹೊಂದಾಣಿಕೆ ಇದ್ದರೂ ಹೆಣ್ಣು ಮಕ್ಕಳು ಮುಸುಕಿನೊಳಗೆ ಅನುಭವಿಸುವ ಗುದ್ದು ಅವರಿಗಷ್ಟೇ ಗೊತ್ತು. ಶ್ರಮಿಕ ವರ್ಗ ಮತ್ತು ಕೆಳವರ್ಗದ ಸ್ಥಿತಿ ಇಂದಿಗೂ ಹಾಗೇ ಇದೆ.
ರಾತ್ರಿ ಶೌಚಾಲಯವಿಲ್ಲದೆ ಹೊರಗೆ ಬಂದ ಮಗುವನ್ನ ಪಕ್ಕದ ಮನೆಯವನೇ ಹೆಂಡತಿ ಊರಿಗೆ ಹೋದಳಲ್ಲಾ..ಇವಳೇ ಇರಲಿ ಅಂತ ಅನುಭವಿಸಿ ಗುರುತು ಹೇಳಿದರೆ ಅಂತ ಕಲ್ಲೆತ್ತಿ ಹಾಕುತ್ತಲೇ ಇದ್ದಾನೆ.
ಒಬ್ಬಳೇ ಹೆಂಗಸು ಕತ್ತಲಾದ ಮೇಲೆ ಆಟೋ ಹತ್ತಿದರೂ ಕೈಯ ಮಗುವನ್ನೂ ಹೊರಗೆಸೆದು ಸಿಕ್ಕಿದ್ದೇ ಸಾಕು ಎಂದು ತಮ್ ತಮ್ಮ ಪುರುಷತ್ವವನ್ನು ಇಳಿಸಿ ಹಗುರಾಗುವ ಗಂಡಸರು ನಮ್ಮ ನಡುವೆಯೇ ಆಟೋ, ಬಸ್ಸು, ಕಾರು, ವ್ಯಾನು ಸಾರ್ವಜನಿಕ ಸಾರಿಗೆಯಲ್ಲೆ ಓಡಾಡುತ್ತಿದ್ದಾರೆ.
ಡಿಜಿಟಲ್ ಇಂಡಿಯಾದ ಯುವ ಸಮಾಜ ಸರಿಯಾದ ಓದು ಕೆಲಸವಿಲ್ಲದೆ ಮೊಬೈಲಲ್ಲಿ ಒನ್ ಡೇ ಪ್ಯಾಕುಗಳಲ್ಲೇ ಇಳಿಸಲು ಬರುವ ವಿಡಿಯೋ ನೋಡಿ ಹುಚ್ಚೆದ್ದು ಕೈಗೆ ಸಿಕ್ಕವರ ಮಗು, ಅಜ್ಜಿ, ಹುಡುಗಿ, ಹೆಂಗಸು ಎಂದು ನೋಡದೆ ಮೇಲೆಲ್ಲ ಹಾಯ್ದುಕೊಂಡು, ಕಣ್ಣಿಗೆ ಸಿಕ್ಕಿದ್ದರಲ್ಲೆಲ್ಲ ಅವರನ್ನ ತಿವಿದು ತಮ್ ತಮ್ಮ ಜೀವನದ ಸಾರ್ಥಕ್ಯ ಮೆರೆಯುತ್ತಿದ್ದಾರೆ.
ನಾವು ಹುಡುಗಿಯರು ತಲೆಬಗ್ಗಿಸಿ, ಸೆರಗು ಸಿಕ್ಕಿಸಿ, ಮೇಲುದ ಹೊದ್ದು....ಊರೆಲ್ಲ ಓಡಾಡುತ್ತೇವೆ. ಕೆಲವರು ಎದೆಯುಬ್ಬಿಸಿ ಕಣ್ಣಲ್ಲಿ ಕಣ್ಣು ನೆಡುತ್ತಾರೆ. ಕೈ ಮುಷ್ಟಿಯಾಗುತ್ತದೆ. ಆದರೂ ನಮ್ಮ ಹುಡುಗರು ನಮ್ಮನ್ನು ನೋಡುವ ದೃಷ್ಟಿ ಬದಲಾಗದೆ ಈ ಎರಡೂ ಉಪಯೋಗವಿಲ್ಲವೇ ಅಂತ ನಾನು ಬೇಯುತ್ತೇನೆ. ನನ್ನ ಮಗ ಎಲ್ಲರಲ್ಲೂ ಮನುಷ್ಯರನ್ನೇ ಕಾಣಲಿ..ವಸ್ತುವನ್ನಲ್ಲ ಅಂತ ಕಣ್ತುಂಬಿ ಬೇಡಿಕೊಳ್ಳುತ್ತೇನೆ.

Monday, October 30, 2017

ಹಿಜಾಬ್ - by ಗುರುಪ್ರಸಾದ್ ಕಾಗಿನೆಲೆ - ನನ್ನ ಓದು.

[[ ಹಿಜಬ್ - by  ಗುರುಪ್ರಸಾದ್ ಕಾಗಿನೆಲೆ - ನನ್ನ ಓದು.]]


"ನಾಗರೀಕತೆಯ ಸಂಭ್ರಮ ಹೆಚ್ಚುತ್ತಿದ್ದಂತೆಯೇ ಅಂತರಾಳದಲ್ಲಿ ಒಂಟಿತನ, ಬೇಸರ, ತಲ್ಲಣ ವಿಜೃಂಭಿಸುತ್ತಲೇ ಉಳಿದಿವೆ. ತಾನು ಕಟ್ಟಿದ ನಾಗರೀಕ ನಾಗಪಾಶಗಳ ನಡುವೆಯೂ ಆತ ತನಗೇ ತಾನು ಪರಕೀಯನೆನಿಸುತ್ತಿರುವಾಗ... ನಿಸರ್ಗದ ಮಡಿಲಿಗೂ ಎರವಾಗಿ ಅಖಿಲ ವಿಶ್ವಪ್ರಕೃತಿ ಪ್ರಪಂಚದಿಂದಲೂ ತಾನು ಪ್ರತ್ಯೇಕನೆಂಬ ಅಸಹಾಯಕತೆಯ ಅರಿವೂ ಮನುಷ್ಯನನ್ನು ಕಾಡುತ್ತಿರುತ್ತದೆ.
ಅಶಕ್ತನೂ ಏಕಾಕಿ. ಸಮರ್ಥನೂ ಏಕಾಕಿ.ಸೆರೆಮನೆಯಲ್ಲಿ ಬಿದ್ದವನೂ ಏಕಾಕಿ.ಅರಮನೆಯಲ್ಲಿ ಇದ್ದವನೂ ಏಕಾಕಿ.
ಮಾನವನು ಮಾನವತೆಯಿಂದ ಮಾತ್ರ ಈ ಅಸಹಾಯಕತೆಯನ್ನು ನೀಗಿಕೊಳ್ಳಬಹುದು. ಸಾಹಿತ್ಯ ಈ ನೋವಿಗೆ ನಾಲಗೆಯನ್ನು ನೀಡಬಹುದು."

ಈ ವಿಷಯವನ್ನು ನಾನು ಇತ್ತೀಚೆಗೆ ಹಳೆಯ ಸಾಕ್ಷಿ ಪತ್ರಿಕೆಯ ಒಂದು ಲೇಖನದಲ್ಲಿ ಓದಿದೆ. ಪರಕೀಯ ಪ್ರಜ್ಞೆ ಎಂಬ ವಿಷಯದ ಬಗ್ಗೆ ಮನಮುಟ್ಟುವಂತೆ ಬರೆದವರು ಶ್ರೀ ಗೌರೀಶ ಕಾಯ್ಕಿಣಿಯವರು. ( ಅನೇಕ ಪ್ರಕಾಶನವು ಅಡಿಗ ಸಂಕಥನದಲ್ಲಿ ಈ ಪತ್ರಿಕೆಗಳನ್ನು ಮರುಪ್ರಕಟಿಸಿದೆ. http://adiga.sankathana.com/category/sakshi/)


ಮಹಾನಗರದಲ್ಲಿ ಕೆಲಸದಲ್ಲಿರುವ ಇಬ್ಬರು ಮಕ್ಕಳ ಅಮ್ಮನಾದ ನಾನು ಈ ನಗರ ಜೀವಿತದಿಂದ ಪಡೆದುಕೊಂಡಿದ್ದು ಸಾಕಷ್ಟು ಇದೆ. ಅದರಲ್ಲಿ ಬಹುಪಾಲು ತಲ್ಲಣವೇ ಇದೆ. ಹಳೆಯ ಕಾಲದ ನನ್ನ ಮೆದುಳಿನ ಮಾದರಿಗೆ ಈಗಿನ ಕೆಲವು ನಡಾವಳಿಗಳು ಒಪ್ಪಿಕೊಳ್ಳಲು ಕಷ್ಟವಾಗುತ್ತಿರುತ್ತದೆ. ಎಲ್ಲರೂ ರೆಡೀ ಗೆಟ್ ಸೆಟ್ ಗೋ.. ಅಂತ ಓಡುತ್ತಿರುವಾಗ ನಾನು ಪಕ್ಕದಲ್ಲಿ ನಿಲ್ಲಲು ಬಯಸಿದರೆ ನನ್ನ ತಲೆಯೇ ಸಾಕಷ್ಟು ಕೆಟ್ಟಿರಬಹುದು ಎಂದು ನನಗೇ ಅನಿಸುವಷ್ಟು ಹೊಸಕಾಲದ ಮೆದುಳಿನ ಭಾಗವೂ ಕೆಲಸ ಮಾಡುತ್ತಿರುವುದರಿಂದ ಇದನ್ನ ಅಪ್ಪಿಕೊಳ್ಳದೇ ಬೇರೆ ದಾರಿಯೂ ಇಲ್ಲ. ಇದರ ಮಧ್ಯ ಗೌರೀಶರು ಬರೆದ ಮಾತು "ಸಾಹಿತ್ಯವು ಈ ನೋವಿಗೆ ನಾಲಗೆಯನ್ನು ನೀಡಬಹುದು.."(ಇದು ಬರೆದು ಮೂರ್ನಾಲ್ಕು ದಶಕಗಳೇ ಕಳೆದಿವೆ) ಇವತ್ತಿಗೂ ಅವತ್ತಿಗಿಂತ ಹೆಚ್ಚಾಗಿ ಪ್ರಸ್ತುತವಾಗುವ ದೇಶಕಾಲಾತೀತ ಸ್ಥಿತಿಯಲ್ಲಿ ನಾವಿದ್ದೇವೆ. ನೋವಿಗೆ ನಾಲಗೆಯಷ್ಟೇ ಅಲ್ಲದೆ ಸಾಹಿತ್ಯವು ನೋವಿಗೆ ಹೆಗಲಾಸರೆಯೂ ಆಗಿದೆ ಎಂಬುದನ್ನು ನಾನು ಖಡಾಖಂಡಿತ ಹೇಳಬಯಸುತ್ತೇನೆ. ಅದಿಲ್ಲದೆ ಎಂದೋ ಕಡಲತಡಿಯಲ್ಲಿ ಗೌರೀಶರು ಜಗತ್ತಿನ ವಿದ್ಯಮಾನಗಳನ್ನು ಗಮನಿಸಿ ಬರೆದಿಟ್ಟ ವಿಚಾರಗಳು ಈಗ ಜಗತ್ತಿನ ಪುಟ್ಟ ಜಗಲಿಕಟ್ಟೆಯಾಗಿರುವ ಬೆಂಗಳೂರಿನ ಓರ್ವ ಕೆಲಸಗಿತ್ತಿ ಅಮ್ಮನಿಗೆ ಇದು ನನ್ನ ವಿಚಾರವೂ ಆಗಿದೆ ಎನ್ನಿಸಿದ್ದು. 
              ಈಗೊಂದು ವಾರದ ಹಿಂದೆ ಓದಿದ ಗುರುಪ್ರಸಾದ್ ಕಾಗಿನೆಲೆಯವರು ಬರೆದ "ಹಿಜಾಬ್" ನಿಜಕ್ಕೂ ಬರಿಯ ಸೋಮಾಲೀ ನಿರಾಶ್ರಿತರ ಬಗ್ಗೆ ಮಾತ್ರ ಅಲ್ಲ. ಮನುಷ್ಯ ತಾನೇ ತಾನಾಗಿ ನಿರಾಶ್ರಿತರ ದಂಡೆಯ ಪರಕೀಯ ಬಂದರಿನಲ್ಲಿ ಹೇಗೆ ಲಂಗರು ಹಾಕಿಕೊಳ್ಳುತ್ತಾನೆ ಎಂಬುದರ ಬಗ್ಗೆ ಬರೆದಿರುವುದು ಅನಿಸುತ್ತಲೇ ಇರುವುದೆ ಸಾಕ್ಷಿ.
ಒಂದು ವಿಚಾರ ಮತ್ತು ಸಾಹಿತ್ಯ ಕೃತಿ ಅದನ್ನು ಆಡಿ, ಬರೆದು ಪ್ರಕಟಿಸಿದ ಕೂಡಲೆ ಅದು ಓದಿದವರೆಲ್ಲರ ಮಡಿಲಿಗೆ ಬಂದ ಮಗುವಾಗುತ್ತದೆ. ಅದು ನಮ್ಮ ಮನದಂಗಳದಲ್ಲಿ ಹೇಗೆ ಬೆಳೆದು ನಮ್ಮನ್ನು ಆವರಿಸಿಕೊಳ್ಳುತ್ತದೆ ಅಥವಾ ದಾಟಿಸುತ್ತದೆ ಎಂಬುದನ್ನು ಅನುಭವಿಸಿ ಮಾತ್ರ ತಿಳಿಯಬಹುದಾಗಿದೆ.
ಹಿಜಾಬ್ - ಕನ್ನಡಕ್ಕೆ ಹೊಸದೆನ್ನುವ ಕಟ್ಟೊಣ ಮತ್ತು ವಿಷಯವೈವಿಧ್ಯವನ್ನು ಪರಿಚಯಿಸುತ್ತಿದೆ. ಈ ಮೊದಲು ಅನುವಾದಗಳ ಮೂಲಕ ಪ್ರಪಂಚದ ವಿವಿಧ ಕಥೆಗಳು ಆಯಾಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಬಂದಿವೆ. ಇದು ಹಿಜಾಬ್ ನಲ್ಲಿ ಲೇಖಕರ ಅನುಭವಪಾಕಕ್ಕೆ ಸಿಕ್ಕಿ ಹದವಾಗಿ ಕನ್ನಡದ ಕನ್ನಡಕದೊಳಗೆ ಕಂಡ ಹೊರದೇಶ, ಪರಕೀಯತೆ ಮತ್ತು ಅಲ್ಲಿರುವ ಇನ್ನಿತರ ನಿರಾಶ್ರಿತತೆ ಈ ಬಗ್ಗೆ ಮನೋಜ್ಞವಾಗಿ ಮೂಡಿಬಂದಿದೆ.
ಗುರುಪ್ರಸಾದರ ಬರವಣಿಗೆಯಲ್ಲಿ ಹಿಡಿತವಿದೆ. ಒಳ್ಳೆಯ ಕನ್ನಡವಿದೆ. ದಟ್ಟ ದೇಸೀ ಪಾತಳಿಯಲ್ಲಿ ಚಿಗುರಿಚಿಗುರಿ ನಿಂತ ಹೊರದೇಶದ ಪೈನ್ ಮರಗಳ ಸಾಲಿನ ನೆರಳುಹಾದಿಯಿದೆ. ಇಲ್ಲಿನ ಶರದೃತುವಿನ ನೆನಪಿನಂಗಳದಲ್ಲಿ ಅಲ್ಲಿನ ಎಲೆಯುದುರುವ ಕಾಲದ ಬಣ್ಣಬಣ್ಣದ ಎಲೆಗಳಿವೆ. ಇಲ್ಲಿನ ಮಾಗಿಚಳಿಯ ಇಬ್ಬನಿಯೊಡನೆ ಅಲ್ಲಿನ ಹಿಮಾಚ್ಛಾದಿತ ಹೊರಾಂಗಣ ಜಾಕೆಟ್ ತೊಟ್ಟು ಕೂತಿದೆ ಎನ್ನಿಸುವಂತೆ ಈ ಕಥೆಗಳಲ್ಲಿನ ವಿವರಗಳು ಆಪ್ತವಾಗಿ ಕಟ್ಟಲ್ಪಟ್ಟಿದೆ. ಭಾವೋದ್ವೇಗವಿಲ್ಲದ ಅಂತಃಕರಣದ ಸೆಲೆಯ ಜಿನುಗು ಕಥೆಯುದ್ದಕ್ಕೂ.

ಗುರು ಎಂಬ ಉತ್ತಮಪುರುಷ (first person)ದಲ್ಲೆ ಮೊದಲಿಂದ ಕೊನೆಯವರೆಗೆ ತೊಡಗುವ ಈ ಕಥೆ ನಿರೂಪಕನ ಮನವನ್ನು ಮೆಟ್ಟಿಲು ಮೆಟ್ಟಿಲಾಗಿರುವ ರಂಗಸ್ಥಳದಂತೆ ತೆರೆದಿಟ್ಟಿದೆ. ಒಂದೊಂದು ಸಾಲು ಒಳಹೊಕ್ಕ ಹಾಗೆ ಇನ್ನೊಂಚೂರು ಈ ಕಥೆಯಲ್ಲಿ ನಡೆಯುವ ರುದ್ರರಮಣೀಯ ತಲ್ಲಣದ ನಾಟಕದ ವೇದಿಕೆಯ ಸಮೀಪಕ್ಕೆ ಹೋಗುತ್ತೇವೆ.

  • ಅಮೆರಿಕಾ ಎಂಬ ಸ್ವರ್ಗದ ಗ್ರೀನ್ ಕಾರ್ಡಿನ ಮೋಹಕ್ಕೆ ಭಾರತೀಯರು ಪಡುವ ಪಡಬಾರದ ಪಾಟಲುಗಳು,
  • ಸೋಮಾಲೀ ನಿರಾಶ್ರಿತರ ಅಭದ್ರತೆ.
  • ಇಲ್ಲಿಯೇ ಬೆಳೆದ ಮೊದಲ ಜನರೇಶನ್ನಿಗೆ ಓದು ಮತ್ತು ಆಹಾರ ಕೊಟ್ಟ ಆತ್ಮವಿಶ್ವಾಸ ಹಾಗೂ ಎಡಬಿಡಂಗಿತನ
  • ಯಾವುದೇ ಊರಿನಲ್ಲೂ ಧರ್ಮವೆಂಬ ಅಫೀಮಿನ ತಿರುಗಣಿಗೆ ಸಿಕ್ಕಿಬಿದ್ದವರ ತ್ರಿಶಂಕು ಸ್ಥಿತಿ ಇವುಗಳನ್ನ ಈ ಕಥೆ ಮನಮುಟ್ಟುವಂತೆ ತೆರೆದಿಡುತ್ತದೆ.

ಕಾದಂಬರಿಯ ಮುಖ್ಯ ಸ್ರೋತ ನಿರಾಶ್ರಿತತೆಯೇ ಆದರೂ... ಜನಾಂಗನಿಂದನೆಗಳ ಸೂಕ್ಷ್ಮಚಿತ್ರಣ, ಇರುವ ರೂಲುಗಳನ್ನೆ ಉಪಯೋಗಿಸಿಕೊಂಡು ತಮಗೆ ಬೇಕಾದ ಹಾಗೆಯೇ ತಾವಿರುವ ಅಮಾನುಷ ನಾಗರೀಕತೆ ಇಲ್ಲಿ ಚೊಕ್ಕವಾಗಿ ಬರೆಯಲ್ಪಟ್ಟಿದೆ. ಆ ಪುಟ್ಟ ನಗರದ ಮೇಯರ್ ಬರೆಯುವ ಪತ್ರ ಜಗತ್ತಿನ ಅಸಹಿಷ್ಣುತೆಗಳೆಲ್ಲದರ ಮಾದರಿಯ ಹಾಗೆ ತೋರಿತು ನನಗೆ.

ನಾನು ಈ ಮೊದಲು ಉದ್ಧರಿಸಿದ ಗೌರೀಶರ -" ಸೆರೆಮನೆಯಲ್ಲಿ ಬಿದ್ದವನೂ ಏಕಾಕಿ, ಅರಮನೆಯಲ್ಲಿ ಇದ್ದವನೂ ಏಕಾಕಿ" ಎಂಬ ವಾಕ್ಕು ದೇಶಾಂತರವನ್ನು ಮೀರಿ ನಿಜವಾಗುತ್ತ ಹೋಗುವುದನ್ನು ಈ ಕಾದಂಬರಿಯ ಓದು ನನಗೆ ಮನಗಾಣಿಸಿತು. ಈ ಎಲ್ಲ ವಿಚಾರಗಳನ್ನೆಲ್ಲ ಬದಿಗಿಟ್ಟು ಸುಮ್ಮನೆ ಓದಬೇಕೆನಿಸಿದರೂ ಸಹ ಹಿಜಾಬ್  - ಕೈಯಲ್ಲಿ ಹಿಡಿದ ಮೇಲೆ ಕೆಳಕ್ಕಿಡಲಾರೆ ಅನ್ನಿಸುವಷ್ಟು ತೀವ್ರವಾಗಿ ಆವರಿಸಿಕೊಳ್ಳುವ ಗತಿಯಲ್ಲಿ ಸಾಗುತ್ತದೆ. ಇಂಗ್ಲಿಷ್ ಕ್ರೈಮ್ ಥ್ರಿಲ್ಲರುಗಳಲ್ಲಿರುವ ಪೇಸ್ ಅನ್ನು ಗುರುಪ್ರಸಾದ್ ಕನ್ನಡಕ್ಕೆ ಪರಕೀಯವೆನ್ನದ ಹಾಗೆ ಪರಿಚಯಿಸಿದ್ದಾರೆ. ಅದು ನನಗೆ ಖುಷಿಯಾಯಿತು. ಥ್ರಿಲ್ ಇಲ್ಲಿ ಗತಿ ಮಾತ್ರ. ಕಥೆಯಲ್ಲಿ ರೋಚಕತೆಯನ್ನು ಆಭರಣವಾಗಿಸಿಲ್ಲ. ಅದು ಸರಳ ಸಹಜ ತೆರೆದುಕೊಳ್ಳುವಿಕೆ. ಜಲಪಾತವೊಂದು ತನ್ನೆಲ್ಲ ವೇಗದಲ್ಲೂ ಸಹಜ ಪಾತವನ್ನು ನಮ್ಮ ಮನಸ್ಸಿಗೆ ತಂದು ಮೆತ್ತಗಾಗಿಸುವ ಹಾಗೆ ಈ ಕಥೆಯ ಮಾರ್ದವತೆಯೇ ಅದರ ವಿಶಿಷ್ಟತೆ ಕೂಡ.

ಇಷ್ಟೆಲ್ಲ ಹೇಳಿದ ಮೇಲೆ ಇನ್ನೊಂದು ಅಜೀಬ್ ವಿಷಯ ಇದೆ. ಕಥೆಗಾರ ಮೊದಲಿಗೆ words, as is well known are the great foes of reality. ಎಂಬ ಜೋಸೆಫ್ ಕಾನ್ರಡ್ ಮಾತನ್ನು ಬರೆದಿದ್ದಾರೆ. ಅವರು ಈ ಮಾತನ್ನು ಪುಸ್ತಕದಲ್ಲಿ ಪದೇ ಪದೇ ಬರುವ ಮಾಧ್ಯಮಗಳ ಅತ್ಯುಪಯೋಗ ಮತ್ತು ನಮಗೆ ಬೇಕಾದ ಮಾತನ್ನು ನಾವೇ ಹೇಳಿಸುವ ಸಂಧಿಗ್ಧ ಪರಿಸ್ಥಿತಿಗಳ ಬಗ್ಗೆ ಉದ್ಧರಿಸಿರಬಹುದು.
ಆದರೆ ಅದೇ ಪದಗಳೇ ವಾಸ್ತವದ ಗಾಯಕ್ಕೆ ನೋವಿನ ಮುಲಾಮು ಸವರಿದ ಹಾಗೆ ಲೇಖಕನಿಗೆ ಈ ಕೃತಿಯ ಮೂಲಕ ಒಲಿದಿವೆ. ನೋವಿನ ನಾಲಗೆ ಅಭಿವ್ಯಕ್ತಿಯ ಸ್ವಾತ್ರಂತ್ರವೂ ಹೌದು ಹರಣವೂ ಹೌದು ಎಂಬುದನ್ನು ಮರುನಿರೂಪಿಸಿದ ಅತ್ಯಂತ ಅಚ್ಚುಕಟ್ಟು ಕಾದಂಬರಿ ಇದು.

ಹಿಜಾಬ್  ಓದಿ. ನಿಮಗೆ ಏನನಿಸುತ್ತೆ ಹಂಚಿಕೊಳ್ಳಿ.

Tuesday, October 24, 2017

ಮಾಟ-ನೋಟ

ಎಲ್ಲ ನಮಿಸಿದರು
ಹಾಡಿ ಹೊಗಳಿದರು
ಮಣ್ಣ ಮೂರುತಿಯ ಮಾಡಿ ನೆನೆದರು
ಬದುಕಿನ ಕತ್ತಲೆಗೆ ಬೆಳಕಿನ ದಾರಿ ತೋರಿದ
ಜೀವವ ಎಷ್ಟು ಸ್ತುತಿಸಿದರೂ ಕಡಿಮೆಯೇ
ಎಲ್ಲ ಸರಿ
ಹುಡುಕಾಟದ ಬಯಲಿಗೆ
ಮೆಟ್ಟಿಂಗಾಲಿಡುವಾಗ
ತಿರುಗಿ ನೋಡದೆ ಎದ್ದು ನಡೆಯುವಾಗ
ಒಂದು ಮಾತು ಹೇಳಿ ಹೋಗಿದ್ದರಾಗಿತ್ತು
ಬೆಳಕು ಕಣ್ಣು ಚುಚ್ಚದೆ
ಮೆದುವಾಗಿ ಆಲಂಗಿಸಿಯೇ ಬಿಡುತ್ತಿತ್ತು.
ಇರಲಿ ಬಿಡಿ
ಕಲಿತದ್ದೆ ಅದಲ್ಲವೆ
ಸತ್ಯ ಕಠೋರ,
ಬೆಂಕಿ ಝಳ ಝಳ.
ಮಾತಿರದೆ ಎಸಳು ಮೊಗ್ಗು ಅರಳಿದೆ
ಬಿರುಬಿಸಿಲಿನಲ್ಲೆ ಹುಸಿನಗುವ ವಸಂತ-
-ನ ಎದೆಯಲ್ಲಿ ಮಾಗಿಯ ಇಬ್ಬನಿ ತಣ್ಣಗಿದೆ
ಶರದದ ಆಗಸದಲ್ಲಿ ನಲಿಯುವ ಬಿಳಿಮೋಡದ
ಒಡಲಲ್ಲಿ ಮಳೆಯ ಬೀಜ ಸುಮ್ಮಗಿದೆ
ಬದುಕು ಮಿಥ್ಯೆಯೆ ಹಾಗಾದರೆ
ಅಥವಾ ಮಾಯೆಯ ಮಾಟ?!
ನಾನು ಸುಮ್ಮನೆ ಏಳು ಸುತ್ತಿನ ಮಲ್ಲಿಗೆಯ ನೋಡುತ್ತಿರುವೆ
ಎಂಥ ಮಾಟ...ನೋಡುವವನೇ ಕರಗುವ ನೋಟ.

Wednesday, June 21, 2017

ಸೃಷ್ಟಿ ಶುಭದಾಯಿನಿಯೆಂಬವಳನ್ನು ಸಾಕುತ್ತಿರುವವಳ ಕಥೆ ಕವಿತೆ ಇತ್ಯಾದಿ...

ಉಬ್ಬು ಕೆನ್ನೆ,
ಥಳಥಳಿಸುವ ಕಣ್ಣು,
ನೇರ ಮೂಗು,
ಮುಂದೆ ಬಂದು ಹಣೆ ನೋಡುವ ಗಲ್ಲ,
ಹಾರಾಡುವ ಕೂದಲು-
ಜಡೆಯೊಳಗೆ ನಿಲ್ಲುವುದೇ ಇಲ್ಲ,
ಕುಣಿವ ಕಾಲ್ಗೆ, ಆಡುವ ಕೈಗೆ ಕುಣಿಕೆಯಿಲ್ಲ,
ಚೈತನ್ಯದ ಚಿಲುಮೆ ಬತ್ತುವುದೇ ಇಲ್ಲ,
ಹೇಳಿದ ಮಾತು ಕೇಳುವುದಿಲ್ಲ -
ಸ್ವೆಷಲೀ -
ಅಮ್ಮ ಹೇಳಿದ ಮಾತು.
ಅಮ್ಮ ಸುಮ್ಮನಾಗೋಲ್ಲ,
ಮಗಳು ಸುಮ್ಮನಿರೋಲ್ಲ,

ಇದೆಲ್ಲ ಬೆಳ್ಬೆಳಗ್ಗೆಯಿಂದ ತೀರಾ ತಡರಾತ್ರಿವರೆಗೂ
ಆಗುತ್ತಾಗುತ್ತಾ
ಮಧ್ಯಾಹ್ನದೊತ್ತಿಗೆ ಅನಿಸುತ್ತಿರುತ್ತದೆ
ಅಲ್ಲ ಯಾಕಷ್ಟು ಹೇಳಬೇಕು
ಅಮ್ಮ ಯಾಕೆ ತನ್ನ ಬಾಲ್ಯ ಮರೆತುಬಿಟ್ಟು ಬರೀ ಅಮ್ಮನೇ ಆಗಿಬಿಡುತ್ತಾಳೆ ಅಂತ.

ಬೆಳಗ್ಗೆ ಬಂದು ನೋಡಿ
ದಶಾವತಾರ
ಮಧ್ಯಾಹ್ನ ದಿಂದ ಸಂಜೆಗೆ ಬೃಂದಾನವ
ರಾತ್ರಿ ಊಟದಿಂದ ಮಲಗುವವರೆಗೂ
ಕುರುಕ್ಷೇತ್ರ
ಧರ್ಮಕ್ಷೇತ್ರೆ ಕುರುಕ್ಷೇತ್ರೇ
ಕಥಾಮೃತಸಾರದಿಂದ ಸ್ವಲ್ಪ ಬಿಳಿ ಬಾವುಟ
ಹಾರಿ ಕಣ್ಣೆವೆಗಳು ಮುಚ್ಚುವಾಗ

ಇವತ್ತಿನ ದಿನ ಹೊಸಿಲು ದಾಟಿ ನಾಳೆಗಡಿಯಿಡುತ್ತಿರುತ್ತದೆ.

Monday, June 12, 2017

ಡಾಕ್ಟರಜ್ಜನೆಂಬ ಅಚ್ಚರಿ ಮತ್ತು ಅಕ್ಕರೆ

ಜೂನ್ ೧೧ ರಂದು ಅಂಕಿತ ಪ್ರಕಾಶನದಿಂದ ಡಾ.ಡಿ.ವಿ.ರಾವ್ ಅವರ ಮೂರು ಕಾದಂಬರಿಗಳು - ಸಂಪ್ರದಾದ, ದೃಷ್ಟಿದಾನ ಮತ್ತು ಅವದಾನಗಳ ಮರುಪ್ರಕಾಶಗೊಂಡವು. ಈ ಸಂದರ್ಭದಲ್ಲಿ ಅವರ ಈ ಮೂರು ಪುಸ್ತಕಗಳ ಬಗ್ಗೆ ನನ್ನ ಅನಿಸಿಕೆ. ವಿಶ್ವವಾಣಿಯ ವಿರಾಮ ಸಾಪ್ತಾಹಿಕದಲ್ಲಿ

೮೦ರ ದಶಕದಲ್ಲಿ ಟೀವಿ ಇನ್ನೂ ನಮ್ಮ ಬಿಡುವಿನ ಹೊತ್ತನ್ನು ಆವರಿಸಿರದ ದಿನಮಾನದಲ್ಲಿ ಓದಲು ಬಲ್ಲವರ ಬಿಡುವಿನಲ್ಲಿ ಸುಧಾ, ತರಂಗ ಮೊದಲಾದ ಸಾಪ್ತಾಹಿಕಗಳು ಮಯೂರ,ತುಷಾರ,ಚಂದಮಾಮಗಳೆಂಬ ಮಾಸಪತ್ರಿಕೆಗಳು ನಮ್ಮ ಕನ್ನಡದ ಜನರ ಪಾಲಿಗೆ ಸಾಹಿತ್ಯಸೇತುಗಳಾಗಿದ್ದವು. ಈಗಲೂ ಇವೆಲ್ಲ ಮುನ್ನಡೆಯುತ್ತಿದ್ದರೂ, ಸಾಕ್ಷರತೆ ಹಿಂದಿಗಿಂತ ಹೆಚ್ಚಿದ್ದರೂ ಇವು ಇಂದು ಕೆಲವೇ ಸಾಹಿತ್ಯಪ್ರೀತಿಯವರಾಗಿಬಿಟ್ಟಿವೆ. ನಮ್ಮ ಬಿಡುವನ್ನು ಮತ್ತು ದಿನರಾತ್ರಿಗಳನ್ನು ಟೀವಿ ಮತ್ತು ಜಾಲತಾಣಗಳು ಸಂಪೂರ್ಣ ವಶಪಡಿಸಿಕೊಂಡಿವೆ. ಹಿಂದೆ ಈ ಪತ್ರಿಕೆಗಳು ಬರುವ ಸಮಯ ಕಾದು ಪೈಪೋಟಿಯಲ್ಲಿ ಮನೆಮಂದಿಯೆಲ್ಲ ಓದುತ್ತಿದ್ದ ದಿನಗಳು ನೆನಪಿನ ಸಂದೂಕದಲ್ಲಿ ಬೆಚ್ಚಗೆ ಹುದುಗಿವೆ. ಅಂತಹ ದಿನಗಳಲ್ಲಿ ಡಾ.ಡಿವಿ ರಾವ್, ಕೆಟಿ ಗಟ್ಟಿ, ನಾಡಿಸೋಜ, ಅನುಪಮಾ ನಿರಂಜನ, ಉಷಾ ನವರತ್ನರಾಮ್, ಸುದರ್ಶನ ದೇಸಾಯಿ ಇವರೆಲ್ಲ ಓದುಗರ ಬಿಡುವನ್ನು, ಸಾಹಿತ್ಯದೊಲವನ್ನು ಸಮೃದ್ಧಗೊಳಿಸಿದ ಮಹನೀಯರು. ಇವರುಗಳು ಬರೆಯುತ್ತಿದ್ದ ಧಾರಾವಾಹಿಗಳನ್ನು ಕಾತುರದಿಂದ ಓದಿ, ವಾರದ ನಂತರ ಆ ಪುಟಗಳನ್ನು ಕತ್ತರಿಸಿ ಜೋಡಿಸಿ, ಧಾರಾವಾಹಿ ಮುಗಿದ ಮೇಲೆ ಹೊಲಿದು ಬೈಂಡ್ ಮಾಡಿ ಮನೆಯಿಂದ ಮನೆಗೆ ಮನಮನಗಳಿಗೆ ಸಾಗುತ್ತಿದ್ದ ಆ ಕಾಲದ ಧಾರಾಕಾದಂಬರಿಗಳ ನೆನಪಾದರೆ ಈಗ ರೋಮಾಂಚನ. ಓದಲು ಎಲ್ಲರಿಗೂ ಎಷ್ಟು ಕಾತುರ ಮತ್ತು ಅಕ್ಕರಾಸ್ಥೆ ಇದ್ದ ಕಾಲವದು.
ಈ ಭಾನುವಾರ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಅಂಕಿತ ಪುಸ್ತಕದ ವತಿಯಿಂದ ಡಾ.ದೊಡ್ಡೇರಿ ವೆಂಕಟಗಿರಿ ರಾವ್ (ಡಿ.ವಿ.ರಾವ್) ಅವರ ಮೂರು ಪುಸ್ತಕಗಳು ಮರುಪ್ರಕಾಶನಗೊಳ್ಳಲಿವೆ. ಈ ಮೂರೂ ಪುಸ್ತಕಗಳು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಗಳಾಗಿ ಮನಸೂರೆಗೊಂಡ ಕಾದಂಬರಿಗಳು. ಸಂಪ್ರದಾನ,ದೃಷ್ಟಿದಾನ, ಮತ್ತು ಅವದಾನ. ಇವುಗಳಲ್ಲಿ ಅವದಾನ ನಂತರ ೧೯೮೫ರಲ್ಲಿ ಪುಟ್ಟಣ್ಣ ಕಣಗಾಲರ ದಿಗ್ದರ್ಶನದಲ್ಲಿ ಅಮೃತಘಳಿಗೆಯೆಂಬ ಸುಂದರ ಚಲನಚಿತ್ರವಾಯಿತು. ವೃತ್ತಿಯಿಂದ ವೈದ್ಯರಾಗಿದ್ದ ಡಿ.ವಿ.ರಾವ್, ಮಲೆನಾಡಿನ ಸಾಗರದ ಬಳಿಯ ಪುಟ್ಟ ಹಳ್ಳಿ ದೊಡ್ಡೇರಿಯವರು. ಕೃಷಿ ಮನೆತನ ಮತ್ತು ಜೀವನವಿಧಾನದಿಂದ ಬಂದವರು. ವೃತ್ತಿಯ ಸಲುವಾಗಿ ದೊಡ್ಡ ಊರುಗಳಲ್ಲಿ, ನಗರಗಳಲ್ಲಿ ಜೀವನ ನಡೆಸಿದವರು. ಪ್ರವೃತ್ತಿಯಾಗಿದ್ದ ಸಾಹಿತ್ಯ ಮತ್ತು ಛಾಯಾಚಿತ್ರಗಾರಿಕೆಗಾಗಿ ಪ್ರಪಂಚವನ್ನೇ ಸುತ್ತಿದವರು. ಕಥೆ, ಕಾದಂಬರಿ, ಪ್ರವಾಸಕಥನ, ವೈದ್ಯಕೀಯ ಪ್ರಕಾರಗಳಲ್ಲಿ ಜನರ ಮನಮುಟ್ಟುವಂತೆ ಬರೆದ ಲಲಿತ ಶೈಲಿ ಇವರದು. ಛಾಯಾಚಿತ್ರದ ಬಗ್ಗೆ ಇವರು ಬರೆದಿರುವ ಭಾವಾಭಿವ್ಯಂಜಕ ಛಾಯಾಚಿತ್ರಕಲೆ ಎಂಬ ಪುಸ್ತಕ ಇವತ್ತಿನ ಡಿಜಿಟಲ್ ಫೋಟೋಯುಗಕ್ಕೆ ಅದರಲ್ಲಿರುವ ಫ್ರೇಮಿಂಗ್ ಮತ್ತು ಕೆಮೆರಾ ಹಿಂದಿನ ಕಣ್ಣು ಕಾಣಬೇಕಿರುವ ವಿಷಯಗಳಿಂದಾಗಿ ಪ್ರಸ್ತುತವಾಗುವ ಪುಸ್ತಕ.
ಸ್ವಯಂ ನಿವೃತ್ತಿ ಪಡೆದು ಹುಟ್ಟೂರು ದೊಡ್ಡೇರಿಯಲ್ಲಿ ನೆಲೆಸಿದ ಡಿವಿ ರಾವ್, ತಮ್ಮ ಸಾಹಿತ್ಯ ಕೃಷಿಯನ್ನು ಇಲ್ಲಿ ಚೆನ್ನಾಗಿ ನಡೆಸಿ ಕನ್ನಡದ ಸಾಹಿತ್ಯ ಸಮೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಮಡದಿ ಸಾವಿತ್ರಿ ಮತ್ತು ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳ ಜೊತೆ ಸಮೃದ್ಧ ಜೀವನ ನಡೆಸಿದ ಡಿವಿ ರಾವ್, ಊರಿನಲ್ಲಿ ಮತ್ತು ಸುತ್ತಮುತ್ತಲ ಎಲ್ಲರಿಗೂ ಡಾಕ್ಟರ್ ಮಾವ, ಡಾಕ್ಟರಜ್ಜ ಎಂದೇ ಪರಿಚಿತರು. ಪರಿಚಿತರಿಗೆ ಆಗೀಗ ವೈದ್ಯಕೀಯ ಸಲಹೆ ನೀಡುತ್ತಲೇ ಇದ್ದರೂ ಅವರ ಮುಖ್ಯ ಆಸಕ್ತಿ ನಿವೃತ್ತಿಯ ನಂತರ ಸಾಹಿತ್ಯವೇ. ನಾನು ಓದುವ ಕಾಲಕ್ಕೆ ಡಾಕ್ಟರಜ್ಜನು ನಿಜಕ್ಕೂ ಆಜ್ಜ ಆಗಿದ್ದರು. ಬಿಳಿಕೂದಲು, ನಗುಮುಖ, ಕನ್ನಡಕ ಧಾರಿ ಅಜ್ಜನ ಕೈಗಳ ಮೃದು ನೇವರಿಕೆ, ಏನ್ ಓದುತಾ ಇದ್ದೀಯ ಮರಿ ಎಂದು ಆಸಕ್ತಿಯಿಂದ ಕೇಳುವ ಪರಿ, ಎಲ್ಲಿಗೇ ಬರಲಿ ಸಾವಿತ್ರಿಅಜ್ಜಿಯ ಜೊತೆಗೇ ಬಂದಿರುತ್ತಿದ್ದ ಅಜ್ಜನ ವಿಶಿಷ್ಟ ನಡವಳಿಕೆ..ಮತ್ತು ಬಹುಶಃ ಒಬ್ಬರಿಗೊಬ್ಬರು ಸದಾ ಪೂರಕವಾಗಿಯೇ ಇದ್ದಾರೆ ಎಂಬಂತೆ ಯಾರಿಗೂ ಅನಿಸಬಹುದಾದ ಅವರಿಬ್ಬರ ಜೊತೆ, ಪುಸ್ತಕ ಬರೆಯುತ್ತಾರೆ ಎಂಬ ಕಿರೀಟ ಎಲ್ಲವೂ ಸೇರಿ ಅವರನ್ನು ನಾವು ಮಕ್ಕಳು ಕಾಯುತ್ತಿದ್ದ ವಿಶೇಷ ಅತಿಥಿಯನ್ನಾಗಿಸಿದ್ದವು. ನನ್ನ ಅಜ್ಜಿಯ ಅಣ್ಣನಾಗಿದ್ದ ಇವರು ಬಂದರೆ ನಮಗೆ ವಿಶೇಷ ಸಂಭ್ರಮ. ಆಗೀಗ ಅವರ ಮನೆಗೆ ಹೋಗುತ್ತಿದ್ದ ನೆನಪುಗಳು ನನ್ನಲ್ಲಿ ಹಚ್ಚಗಿವೆ. ಅವರ ಮನೆಯ ಎತ್ತರದ ಕಿಟಕಿ ಭರಿತ ಗೋಡೆಗಳು ಮತ್ತು ವಿಶಾಲ ಅಂಗಳ, ಅವರು ಕೂರುತ್ತಿದ್ದ ಹಾಲಿನ ಮೂಲೆಯ ದೊಡ್ಡಕುರ್ಚಿ ಮೇಜು, ಅವರು ಕೂತ ಧೀಮಂತ ನಿಲುವು ಕಣ್ಣಿಗೆ ಕಟ್ಟುವ ಹಾಗಿವೆ. ನನ್ ಕಥೆ ಎಲ್ಲ ಓದಿದಾಳೆ ಕಣೆ ಇವಳು ಅಂತ ಅಜ್ಜಿಯ ಕರೆದು ಹೇಳುತ್ತಿದ್ದರು. ೧೦ರ ಆಸುಪಾಸಿನ ನನ್ನ ಹತ್ತಿರ ಅಜ್ಜಿ ನಗುತ್ತ ಬಂದು ಬಳಸುತ್ತಿದ್ದರು. ಓದ್ಬೇಕು ತುಂಬ. ಬರೀ ಕಥೆ ಅಷ್ಟೆ ಅಲ್ಲ. ಎಲ್ಲದನ್ನೂ. ಪ್ರಪಂಚದ ವಿಷಯಗಳನ್ನೆಲ್ಲಾ. ಎಲ್ಲ ಪ್ರಕಾರಗಳನ್ನೂ ಅಂತ ಅವರಂದರೆ.. ಪ್ರಕಾರವೆಂದರೆ ಏನೆಂದರಿಯದ ನಾನು ಬರೀ ತಲೆಯಲ್ಲಾಡಿಸುತ್ತಿದ್ದೆ. ಅವರ ಪಕ್ಕದ ಟೇಬಲ್ಲಿನಲ್ಲಿ ಇರಿಸಿದ್ದ ಅದ್ಯಾವುದೋ ದೇಶದ ಪ್ರವಾಸದಿಂದ ಬರುವಾಗ ಅವರು ತಂದ ಕಲ್ಲೊಂದಿತ್ತು. ಇದು ಎಷ್ಟೋ ಸಾವಿರ ವರ್ಷಗಳ ನಂತರ ವಜ್ರವಾಗುತ್ತೆ ಅಂತ ಅದರ ವಿವರವನ್ನೆಲ್ಲ ಹೇಳುತ್ತಿದ್ದರು. ನಾನೊಬ್ಬ ಪುಟ್ಟಹುಡುಗಿ ಎಂದೆಣಿಸದೆ ಆಸಕ್ತಿ ತೋರಿಸುತ್ತಿದ್ದ ವಿವರಿಸುತ್ತಿದ್ದ ಅವರ ಈ ಪರಿಯೇ, ಅವರನ್ನ ಅಷ್ಟು ಆಸಕ್ತಿಯುತವಾಗಿ ಬರೆಯುವ ಕಾದಂಬರಿಕಾರನನ್ನಾಗಿಸಿತ್ತು ಅಂತ ಇವತ್ತು ಮತ್ತೆ ಅವರ ಕಾದಂಬರಿಗಳನ್ನು ತಿರುವಿ ಹಾಕುವಾಗ ಅನ್ನಿಸಿತು. ಮುಂದೆ ನಾನು ಅವರಿಗೆ ಒಂದೆರಡು ಬಾರಿ ಪತ್ರ ಬರೆದಿದ್ದೆ ಅದಕ್ಕೆ ಅವರು ಸೂಕ್ತ ಉತ್ತರವನ್ನೂ ನೀಡಿ ಬರೆದಿದ್ದರು. ಆ ವೇಳೆಗಾಗಲೇ ಅವರು ೮೮ ದಾಟಿದ್ದ ಅಜ್ಜನಾಗಿದ್ದರು. ೨೦೦೪ ರಲ್ಲಿ ಕೆಲಕಾಲದ ವಯೋಸಹಜ ಅನಾರೋಗ್ಯದ ನೆಪದಲ್ಲಿ ಅವರು ೯೫ನೆಯ ವರ್ಷದಲ್ಲಿ ನಮ್ಮನ್ನಗಲಿದರು. ದೊಡ್ಡೇರಿಯ ಮನೆಯಲ್ಲಿ ಈಗ ಮೂರ್ನಾಲ್ಕು ವರ್ಷದವರೆಗೂ ಅಜ್ಜಿ ಇದ್ದರು. ಅವರ ಮಕ್ಕಳು ಅಲ್ಲಿಯೇ ಇದ್ದಾರೆ. ಅಜ್ಜನ ಆತ್ಮೀಯತೆ ಆ ಪರಿಸರದಲ್ಲಿ, ಮನೆಯ ಎಲ್ಲರಲ್ಲಿ ಹಾಗೆಯೇ ಉಳಿದು ಬೆಳೆದು ಬಂದಿದೆ.
ಸಂಪ್ರದಾನ - ರೋಗ ನಿವಾರಣೆಗೆ ಎಲ್ಲಕ್ಕಿಂತ ಮುಖ್ಯವಾದದ್ದು ಹಿತಕರ ಪೋಷಣೆ, ಹತ್ತಿರದವರ ಅಕ್ಕರಾಸ್ಥೆ, ಮತ್ತು ಬದುಕಿನಲ್ಲಿ ಭರವಸೆ ತುಂಬುವ ನಿರ್ವ್ಯಾಜ ಪ್ರೇಮ ಎಂಬುದನ್ನು ಪ್ರತಿಪಾದಿಸುವ ಈ ಕಾದಂಬರಿ ಇವರ ರಂಜನೀಯ ಬರವಣಿಗೆಯ ಶೈಲಿಯಲ್ಲಿ ಇನ್ನಷ್ಟು ಥಳಥಳಿಸಿದೆ. ರಮ್ಯ ಚಿತ್ರಣದ ನಡುವೆಯೂ ವಾಸ್ತವದ ಮಾತುಗಳು ಸಹಜವಾಗಿ ಕೃತಿಯ ಮತ್ತು ಕೃತಿಕಾರನ ಎಚ್ಚರವಾಗಿ ಮೂಡಿಬಂದಿದೆ. ಇನ್ನೆಲ್ಲೋ ಓದಿದರೆ ಮತ್ತೊಂದು ಪರ್ಸನಾಲಿಟೀ ಡೆವಲಪ್ ಮೆಂಟ್ ಪುಸ್ತಕವಾಗುವ ಸಾಧ್ಯತೆಯಿರುವ ವಿಚಾರವನ್ನು ಡಿ.ವಿ.ರಾವ್ ಮನಸ್ಸಿಗೆ ತಾಕುವ ಹಾಗೆ ಬರೆದಿರುವುದು ಅವರ ಬರವಣಿಗೆಯ ಶಕ್ತಿಗೆ ಸಾಕ್ಷಿ. ಅವರ ವೃತ್ತಿಜೀವನದ ಅನುಭವ, ಹಲವಾರು ರೀತಿಯ ವ್ಯಕ್ತಿತ್ವಗಳ ಪರಿಚಯ ಈ ಕಥೆಯನ್ನು ಅಸಂಭವನೀಯತೆಯಿಂದ ಎತ್ತಿ ಇದು ಹೀಗೆಯೇ ಇರಬಲ್ಲದು ಎಂಬಂತಹ ಸಾಧ್ಯತೆಗಳ ಸಾಲಲ್ಲಿ ಮೊದಲು ನಿಲ್ಲಿಸಿದೆ. ಅವರೇ ಬರೆದಂತೆ, ಈ ಕೃತಿ ಫಿನ್ನಿಷ್ ಆತ್ಮಕಥಾನಕ ಕಾದಂಬರಿ ಗುನರ್ ಮ್ಯಾಟ್ಸನ್ನನ ದಿ ಪ್ರಿನ್ಸೆಸ್ ಕೃತಿಯಿಂದ, ಅವನ ಜೀವನದಿಂದ, ಮತ್ತು ಅವನು ಪ್ರತಿಪಾದಿಸಿದ ಸಾಧ್ಯತೆಗಳಿಂದ ಪ್ರೇರಿಸಲ್ಪಟ್ಟಿದ್ದು. ಓದುವಾಗ ಇದು ಇಲ್ಲೆ ಪಕ್ಕದೂರಲ್ಲೆ , ಕಣ್ಮುಂದೆ ನಡೆದಿದೆ ಎಂಬಂತಹ ಆತ್ಮೀಯ ಹೃದ್ಯ ಚಿತ್ರಣವಿದೆ. ವಿಚಾರಗಳನ್ನು ಇದು ವಿಚಾರ, ಇದು ಅಜೆಂಡಾ ಎಂದು ಹೇಳದ ಹಾಗೆ ಕಥೆಯೊಂದರ ಹೆಣಿಗೆಯಲ್ಲಿ ನಿಮ್ಮ ಮನದಂಗಳಕ್ಕೆ ತಂದುಬಿಡುವ ಕಲೆ ಈ ಕಥೆಗಾರನದ್ದು. ಹೊಸತು ಹಳತುಗಳ, ವಾಸ್ತವ ಮತ್ತು ರಮ್ಯತೆಗಳ ನಡುವಿನ ತಾಕಲಾಟವನ್ನು ಹೃದಯಸ್ಪರ್ಶಿಯಾಗಿ ಓದುಗರ ಮುಂದಿಡುವ ಡಿವಿ ರಾವ್, ಎಲ್ಲಿಯೂ ಪ್ರೀಚೀ ಆಗಿರುವುದಿಲ್ಲ. ಈ ತಾಕಲಾಟಗಳ ಇವತ್ತಿನ ಪ್ರಸ್ತುತತೆಯ ಬಗ್ಗೆ ಹೆಚ್ಚು ಹೇಳಬೇಕಾಗಿಯೇನಿಲ್ಲ. ಕಪ್ಪು ಬಿಳುಪಿನಲ್ಲಿ ತೆರೆದಿಡಬಹುದಾದ ಅನಂತ ಬಣ್ಣದ ಶೇಡುಗಳನ್ನು ತೆರೆದಿಡುವ ಛಾಯಾಚಿತ್ರಕಾರ ನುರಿತ ಕಾದಂಬರೀಕಾರನೂ ಆದಾಗ ಸಿಗುವ ಪಕ್ವತೆಯನ್ನ ನೀವು ಈ ಪುಸ್ತಕದ ಓದಿನಲ್ಲಿ ಅನುಭವಿಸಬಹುದು.
ಅವದಾನ - ಅಮೃತಘಳಿಗೆಯಾಗಿ ಚಿತ್ರೀಕರಣಗೊಂಡ ಈ ಕೃತಿ ೮೦ ರ ದಶಕದ ಜನಜೀವನವನ್ನು, ಸಾಮಾಜಿಕ ಪರಿಸ್ಥಿತಿಯನ್ನು, ಕಟ್ಟುಪಾಡುಗಳನ್ನು, ಮಿತಿಗಳನ್ನು ಮತ್ತು ಮೀರುವಿಕೆಯನ್ನು ಹದವಾಗಿ ಬೆರೆಸಿದ ಕಾದಂಬರಿ. ಸ್ನೇಹ, ಯೌವನದ ಸಹಜ ಭಾವಗಳು ಸ್ನೇಹ ಮತ್ತು ಪ್ರೇಮದ ನೆಲೆಯಲ್ಲಿ ಬೇರೂರುವ ವಿವರಗಳು, ವಾಸ್ತವದ ಛಳುಕು, ಮಲೆನಾಡಿನ ಆತ್ಮೀಯ ಪರಿಸರ, ತ್ಯಾಗ ಮತ್ತು ಹೊಂದಾಣಿಕೆ ಎಂಬ ಇವತ್ತು ಅತೀ ಅಪರೂಪವಾದ ಎರಡು ಭಾವ ಜಗತ್ತುಗಳನ್ನ ಈ ಕಾದಂಬರಿ ತೆರೆದಿಡುತ್ತದೆ. ಯಾವುದನ್ನೂ ಸಿನಿಮೀಯಗೊಳಿಸಿದ ನಿರೂಪಣೆ ಈ ಕಾದಂಬರಿಯ ಮುಖ್ಯಲಕ್ಷಣ. ವಾಸ್ತವದ ಉರುಳುಗಳನ್ನು ರಮ್ಯವಲ್ಲದ ಆದರೆ ಅಪರೂಪವೆನ್ನಿಸುವ ಆದರ್ಶ ಭರವಸೆಗಳಲ್ಲಿ ಬಿಡಿಸುವ ನಾಜೂಕು ಹೆಣಿಗೆ ಇಲ್ಲಿದೆ. ಇವತ್ತಿಗೆ ಇದು ಪ್ರಸ್ತುತವಲ್ಲ ಎಂದು ಮೇಲ್ನೋಟಕ್ಕೆ ಎನಿಸುವ ಕಥೆಯಾದರೂ ಈ ಕಾದಂಬರಿಯಲ್ಲಿ ಉಕ್ಕುವ ಜೀವನಪ್ರೀತಿ, ಸಹೃದಯತೆ ಎಂದಿಗೂ ಪ್ರಸ್ತುತ ಎಂದು ನನ್ನ ಅನಿಸಿಕೆ.
ದೃಷ್ಟಿದಾನ - ಹೆಸರೇ ಹೇಳುವ ಹಾಗೆ ಇದು ಕಣ್ಣುಕೊಡುವ ಕಥೆ. ಅನುಕಂಪವನ್ನು ಕರುಣೆಗೆ ಸಮೀಕರಿಸುವ ಈ ದಿನಗಳಲ್ಲಿ ಈ ಕಥೆ ತನ್ನ ವಿಚಾರ ವಿಶ್ಲೇಷಣೆಗಳಿಂದಲೇ ಗಮನ ಸೆಳೆಯುತ್ತದೆ. ಇವತ್ತು ಈ ಕಥೆಯಲ್ಲಿ ಬರುವ ಜೀವನ ವಿಧಾನ - ನಿಧಾನ, ವ್ಯವಧಾನ ಇಲ್ಲದೆ ಇದ್ದರೂ ಇದರಲ್ಲಿರುವ ವಿಚಾರ ಹಿಂದೆಂದಿಗಿಂತಲೂ ಇವತ್ತು ಪ್ರಸ್ತುತವೆಂದೇ ನನಗನ್ನಿಸಿತು. ಇದು ಬರಿಯ ಹೊರಗಣ್ಣಿನ ದೃಷ್ಟಿಗಿಂತಲೂ ಜೀವನದೃಷ್ಟಿಗೆ ಹೆಚ್ಚು ಸೂಕ್ತ ಎಂದು ನನಗನ್ನಿಸುತ್ತಿದೆ. ಅನುಕಂಪ ಅಥವಾ ಎಂಪಥಿಯಿಂದ ಉಂಟಾದ ಪರಿಚಯ ಇಷ್ಟ ಮತ್ತು ಗಾಢ ಪ್ರೇಮವಾಗಿ ಬೆಳೆಯುವ ಒಂದು ಸಂಬಂಧದ ರೂಪಕ ಈ ಕಾದಂಬರಿಯಲ್ಲಿದೆ. ಇದನ್ನು ನೇಯಲು ಕಥೆಗಾರ ಉಪಯೋಗಿಸಿರುವ ನಿರೂಪಣೆಯಲ್ಲಿ ಮಾನವೀಯ ಸಂಬಂಧಗಳ ಸೂಕ್ಷ್ಮ ವಿಶ್ಲೇಷಣೆಯಿದೆ. ದಾಂಪತ್ಯದ ಅನೇಕ ಹಂತಗಳನ್ನು ಸೂಚ್ಯವಾಗಿ ಆದರೆ ಸಶಕ್ತವಾಗಿ ನಿರೂಪಿಸುತ್ತ ಸಾಗುವ ಈ ಕಥೆ ಇವರ ಎಲ್ಲ ಕಾದಂಬರಿಗಳ ಹಾಗೆ ಓದಲು ತೊಡಗಿದರೆ ಕೆಳಗಿಡಲು ಮನಸು ಬಾರದ ಹಾಗೆಯೇ ಇದೆ.
ಈ ಮೂರೂ ಕೃತಿಗಳಲ್ಲಿ ಎಲ್ಲಿಯೂ ಪುರುಷ-ಸ್ತ್ರೀ ಸಂಬಂಧಗಳಲ್ಲಿ ಹೆಚ್ಚುಗಾರಿಕೆ ಇಲ್ಲದ ಹಾಗೆ, ಒಬ್ಬರಿನ್ನೊಬ್ಬರಿಗೆ ಪೂರಕ ಎನ್ನುವುದನ್ನು ಎಷ್ಟು ಸಾಧ್ಯವೋ ಅಷ್ಟು ನವಿರಾಗಿ ಅದರೂ ಸ್ಪಷ್ಟವಾಗಿ, ಸಂಬಂಧ ಗಾಢವಾಗಬೇಕಿದ್ದರೆ ಅದು ಇಬ್ಬರಿಂದಲೂ ಹೆಚ್ಚಿನ ಆಸಕ್ತಿ ಮತ್ತು ತೊಡಗುವಿಕೆಯನ್ನು ಪ್ರೇಮವನ್ನು ಬೇಡುತ್ತದೆ ಮತ್ತು ಅದರಿಂದ ಬದುಕು ಹೇಗೆ ಚಂದಗೊಳ್ಳುತ್ತದೆ ಎಂಬುದನ್ನು ಈ ಮೂರು ಕಾದಂಬರಿಗಳೂ ವಿಶಿಷ್ಟವಾಗಿ ನಿರೂಪಿಸಿವೆ. ಓದಲು ಹೆಚ್ಚು ಸಮಯ ಬೇಡದ ಈ ಕಾದಂಬರಿಗಳು ಓದಿದ ನಂತರ ಚಿರಕಾಲದ ಚಿತ್ರಗಳಾಗಿ ಮನಸ್ಸಿನಲ್ಲಿ ನಿಲ್ಲುತ್ತವೆ. ಅಂತಹ ಪರಿಣಾಮಕಾರಿ ಚಿತ್ರಣವನ್ನು ಹೆಚ್ಚಿನ ಗಲಾಟೆಯಿಲ್ಲದೆ ಮೂಡಿಸಿದ ಶ್ರೇಯಸ್ಸು ಕಾದಂಬರಿಕಾರನದ್ದು.
ಸ್ಪಷ್ಟ, ಮಧುರ, ವಿಚಾರಯೋಗ್ಯ ಮತ್ತು ಮಾನವೀಯ ಚಿತ್ರಣಗಳು ಡಾಕ್ಟರಜ್ಜನ ಸ್ವಭಾವದ ಪಾತಳಿಯಲ್ಲೆ ಕಟ್ಟಲ್ಪಟ್ಟಿವೆಯೇನೋ ಅನಿಸಿತು. ಮತ್ತೊಮ್ಮೆ ಈ ಆತ್ಮೀಯ ಅಕ್ಕರೆಯ ಜೀವದ ನೆನಪು ಗಾಢವಾಗುವಂತೆ ಮಾಡಲು ಈ ಬರಹ ಕಾರಣ. ಪ್ರೇರೇಪಿಸಿದ ಅಂಕಿತ ಪ್ರಕಾಶನ ಮತ್ತು ವಿಶ್ವವಾಣಿಗೆ ನನ್ನ ಧನ್ಯವಾದಗಳು.

-ಪ್ರೀತಿಯಿಂದ
ಸಿಂಧು ರಾವ್.ಟಿ

ಎದುರ ಬದುರ ಅಥವಾ ಅಕ್ಕ-ಪಕ್ಕ... ಥೇಟ್ ಬದುಕಿನ ಹಾಗೆ.

ವಿಶಾಲ ಅಂಗಳ
ತುಸು ದೊಡ್ಡದೇ ಜಗಲಿ
ಉದೂದ್ದ ಕಿಟಕಿ
ಕೂರಬಹುದಾದ ಕಿಟಕಿ ತಳಿ
ಜಗಲಿಯಂಚಿನ ಕಲ್ಲು ಬೆಂಚು
ಹಂಚಿನಿಂದಿಳಿದ ಚಂದದ ದೀಪ
ಕೂತು ಕಣ್ಣು ನೆಟ್ಟರೆ ಅಂಗಳದಾಚೆಗೆ ಹೊಳೆ
ಹೊಳೆನೋಡಲು ಮರಸಲು
ಬೇಲಿ ಬೇಡದ ಎತ್ತರೆತ್ತರ ಮರಸಾಲು
ಎಂದೋ ತುಂಬಿಸಿಟ್ಟ ಕಮಲಕೊಳ
ಒಂದಿಂಚು ಧೂಳಿನ ನೆಲ
ಯಾರೂ ಕೂರದೆ ಬೆಪ್ಪಾದ ಆರಾಮುಕುರ್ಚಿ
ಮುಖ ದುಮ್ಮಿಸಿ ನಿಂತ ಕಾಫಿಮೇಜು
ತೆಗೆಯದೆ ಹೋದ ಕಿಟಕಿ ಬಾಗಿಲು
ಬೀಗದ ಸಖ್ಯದಲ್ಲಿ ಇಡೀ ಮನೆಯ ಅಳಲು
ಮನೆಯ ಸುತ್ತ ಹೂವರಾಶಿ
ಹಕ್ಕಿ,ಅಳಿಲು ಜೀವರಾಶಿ
ಗಿಳಿಯು ಪಂಜರದೊಳಿಲ್ಲ
ಅಕ್ಕರಾಸ್ಥೆಯಲಿ ಕಟ್ಟಿದ ಮನೆಯೊಳು ಮನೆಯೊಡೆಯನಿಲ್ಲ.
ನೋಡನೋಡುತ್ತ ಭಾರವಾಗುವ ಮನ
ಬದುಕು ಯೋಜನೆಗೆ ತಕ್ಕ ಹಾಗೆ ಇರುವುದಿಲ್ಲ.
ಒಂದು ಹೊಸಾ ಪ್ಲಾಟು - ಚೌಕ, ರಸ್ತೆ ಪಕ್ಕ, ಜಲವಸತಿ
ಇನ್ನೊಂದು ಸುಸಜ್ಜಿತ ಹಳೇ ಪ್ಲಾಟು - ಒಬ್ಬಳೇ... ಮನೆಯೊಡತಿ.