Tuesday, October 24, 2017

ಮಾಟ-ನೋಟ

ಎಲ್ಲ ನಮಿಸಿದರು
ಹಾಡಿ ಹೊಗಳಿದರು
ಮಣ್ಣ ಮೂರುತಿಯ ಮಾಡಿ ನೆನೆದರು
ಬದುಕಿನ ಕತ್ತಲೆಗೆ ಬೆಳಕಿನ ದಾರಿ ತೋರಿದ
ಜೀವವ ಎಷ್ಟು ಸ್ತುತಿಸಿದರೂ ಕಡಿಮೆಯೇ
ಎಲ್ಲ ಸರಿ
ಹುಡುಕಾಟದ ಬಯಲಿಗೆ
ಮೆಟ್ಟಿಂಗಾಲಿಡುವಾಗ
ತಿರುಗಿ ನೋಡದೆ ಎದ್ದು ನಡೆಯುವಾಗ
ಒಂದು ಮಾತು ಹೇಳಿ ಹೋಗಿದ್ದರಾಗಿತ್ತು
ಬೆಳಕು ಕಣ್ಣು ಚುಚ್ಚದೆ
ಮೆದುವಾಗಿ ಆಲಂಗಿಸಿಯೇ ಬಿಡುತ್ತಿತ್ತು.
ಇರಲಿ ಬಿಡಿ
ಕಲಿತದ್ದೆ ಅದಲ್ಲವೆ
ಸತ್ಯ ಕಠೋರ,
ಬೆಂಕಿ ಝಳ ಝಳ.
ಮಾತಿರದೆ ಎಸಳು ಮೊಗ್ಗು ಅರಳಿದೆ
ಬಿರುಬಿಸಿಲಿನಲ್ಲೆ ಹುಸಿನಗುವ ವಸಂತ-
-ನ ಎದೆಯಲ್ಲಿ ಮಾಗಿಯ ಇಬ್ಬನಿ ತಣ್ಣಗಿದೆ
ಶರದದ ಆಗಸದಲ್ಲಿ ನಲಿಯುವ ಬಿಳಿಮೋಡದ
ಒಡಲಲ್ಲಿ ಮಳೆಯ ಬೀಜ ಸುಮ್ಮಗಿದೆ
ಬದುಕು ಮಿಥ್ಯೆಯೆ ಹಾಗಾದರೆ
ಅಥವಾ ಮಾಯೆಯ ಮಾಟ?!
ನಾನು ಸುಮ್ಮನೆ ಏಳು ಸುತ್ತಿನ ಮಲ್ಲಿಗೆಯ ನೋಡುತ್ತಿರುವೆ
ಎಂಥ ಮಾಟ...ನೋಡುವವನೇ ಕರಗುವ ನೋಟ.

2 comments:

sunaath said...

ಇದೇ ಬದುಕು-ರೀತಿಯ ಚೆಲುವು. ಇದೇ ಸತ್ಯದರ್ಶನ.
ಸಿಂಧು, ನೀವು blogನಲ್ಲಿ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು.

ಸಿಂಧು sindhu said...

ಸುನಾಥ್ ಕಾಕಾ. ನನ್ನ ಕೃತಜ್ಞತೆ ನಿಮಗೆ ಸಲ್ಲಬೇಕು. ನೀವು ಯಾವತ್ತಿಗೂ ನನ್ನ ಬರಹಗಳನ್ನು ಓದಿ ಸ್ಪಂದಿಸುವವರು. ಇಲ್ಲಿ ಹಾಕದೇ ಇದ್ದಿದ್ದು ನನ್ನದೇ ತಪ್ಪು.
ನಿಮ್ಮ ಅನಿಸಿಕೆಗಳಿಗೆ ನನ್ನ ಧನ್ಯವಾದಗಳು. ಈ ಕವಿತೆಗೆ ನನ್ನ ಖಾಸಗಿ ಅಭಿವ್ಯಕ್ತಿ ಕಳೆದು ಒಂದು ಸಾರ್ವಜನಿಕ ಗುಣ ಪ್ರಾಪ್ತವಾಗುವುದೇ ನಿಮ್ಮ ಅನಿಸಿಕೆಯಲ್ಲಿ ಅದ್ದಿದಾಗ.