Friday, January 31, 2014

ಸೃಷ್ಟಿ ನಿಯಮ.

ನನ್ನ ಗ್ರಹಗತಿಗಳು ಹೇಗಿವೆ
ನೋಡಿ ಹೇಳೆಂದು
ಕೈಬಿಡಿಸಿ ನಿನ್ನ ಕೈಯೊಳಗಿಟ್ಟೆ.
ಅಂಗೈಯಲ್ಲೆ ತಾರಗೆಯೊಂದು ಬಿದ್ದಿರೆ
ಹೇಳಲಿ ನಾನಾದರೂ ಏನೆಂದು
ನೀನು ಮುಗುಳ್ನಗು ಬಿರಿದೆ.
ಓಹ್..
ಮಬ್ಬುಸಂಜೆಯ ಆಗಸದಿ
ಮೂಡಿದ ಬಿದಿಗೆಯ ಬಿಂಬ
ಒಂದರೆಗಳಿಗೆ
ಸುತ್ತಲ ಜಗತ್ತು ಫೇಡ್ ಆಯಿತು.

ಮಳೆಯೊದ್ದೆ ಹಾದಿಯುದ್ದಕೆ
ತೂಗಿತೊನೆಯುವ ಮರಮರಸಾಲು
ನೋವ ಮರೆತು ನಡೆನಡೆವ ಕಾಲು
ಕೆಂಪಿಮಣ್ಣಿನ
ಇದ್ದಿಲೊಲೆಯ ಮೇಲೆ
ನೊರೆನೊರೆಯಾಗಿ ಉಕ್ಕಿದ
ಬಿಳಿಬಿಳಿ ಹಾಲು
ಚಿತ್ರಿಸಿದಂತಹ
ಮಾತು

ದನಿಯೊಡೆಯದೆಯೆ ಮೀಟಿದ
ಬರಿಯ ಭಾವತಂತು
ಹೇಳಲಿ ಹೇಗೆ
ನಾನಾದರೂ ಈಗ ಏನು ಎಂತು?


ಅವತ್ತು
ಅಲ್ಲಿ
ಎಷ್ಟು ಪಯಣಿಸಬೇಕಿತ್ತೋ
ಇವತ್ತು
ಇಲ್ಲಿ ಅಷ್ಟೇ ನೆಲೆಯಾಗಬೇಕಿದೆ.

ಚಿಗುರು ಹಳದಿಯಾಗಬೇಕಿರುವುದೇ ಸೃಷ್ಟಿ ನಿಯಮ.

Thursday, January 30, 2014

ಹೀಗೇ ಒಂದೆರಡು...ಮಾತು.

ಕುಡಿದು ಕುಪ್ಪಳಿಸಿ
ಲೇಟಾಗೆದ್ದು ಸ್ವಾಗತಿಸಿದ ಹೊಸವರ್ಷದ
ಮೊದಲಲ್ಲೆ
ವೈಕುಂಠ ಏಕಾದಶಿ.
ಸಾವಿನ ಹೊಸ್ತಿಲಿನಾಚೆ ಒಂದು ಸೀಟು
ಕಾದಿರಿಸಿಕೊಂಡೇ
ಸಂಭ್ರಮಿಸಿಬಿಡೋಣ.
ಎಳ್ಳು ಬೆಲ್ಲ ಹಂಚಿ
ಒಳ್ಳೊಳ್ಳೆ ಮಾತಾಡಿ
ಒಳಿತು ಕೆಡುಕುಗಳ ಮಧ್ಯೆ ಗೆರೆಯೆಳೆಯದೆ..
ಬೇರೆ ಇಸವಿಯ ಪಥಕ್ಕೆ ಸೇರೋಣ.
ಸಮ್ಮೇಳನಗಳ ಟಾಕು (talk)
ಸಂಭ್ರಮಗಳ ಠೀಕು
ಇವೆಲ್ಲವನ್ನೂ ಹರಿದಾಡಿಸಿದ ಟ್ವೀಟು
ಒತ್ತಿ ಒತ್ತಿ ಕೊಟ್ಟ ಎಫ್.ಬಿ ಲೈಕು
ಪ್ರಿಂಟಾಗಿ ಬಂದ ದಿನಪತ್ರಿಕೆಯ
ಆನ್ ಲೈನು ಲಿಂಕು
ಆಹಾ ..ಸಮಾಜವೇ (social)
ಸೋ ರಿಯಲ್! ಮತ್ತು
ಕೆಲವೊಮ್ಮೆ.. ಸರ್ರಿಯಲ್!!
ಮಾಧ್ಯಮ ಪೋಷಿತ, ಪ್ರೇಷಿತ
ಜನ ಸಮೂಹದಿಂದೆದ್ದು
ಬರಬಹುದೆ
ಬಾಹುಬಲಿ
ಈ ಸಲ ಭರತನಿಗಾಗಿ!


ಎಷ್ಟೆಲ್ಲ ಕೆಲಸವಿದೆ
ಕಥೆ, ಕವಿತೆ, ಹಾಡು ಕರೆಯುತ್ತಿವೆ
ಮಕ್ಕಳೂ ಕಾಯುತ್ತಿದ್ದಾರೆ
ಮನೆಯೊಳಗೆ
ರಾತ್ರಿಯ ಮಮ್ಮು ತಿನ್ನಿಸಿ
ಗೋಗರೆದು ಮಲಗಿಸುವಷ್ಟರಲ್ಲಿ
ಬೆಳದಿಂಗಳಿನ ದಾಹವಡಗಿ
ಬೆನ್ನು ಹಾಸಿಗೆ ತಾಗುವ ಮೊದಲೆ
ಸುಖನಿದ್ದೆ.

ಎಷ್ಟೆಲ್ಲ ಕೆಲಸವಿದೆ.
ಒಂದಿಡೀ ವರ್ಷವಿದೆ.
ಆಮೇಲೆ.. ಇನ್ನೇನು
ಎಂದಿನಂತೆ
ಮತ್ತೊಂದು ವರ್ಷ ಬರುತ್ತದೆ..
ಆದರೂ
ಎದಿರುಗೊಳ್ಳುವವರೆಗೂ ಖಾತ್ರಿಯಿಲ್ಲ.
ಎಂದೇ
ಈ ಹಳೇವರುಷವನ್ನೇ ಬದುಕಿಬಿಡಲು.
ನಿರೀಕ್ಷೆ
ಹೊಸ ಹುರುಪು ತುಂಬಿದೆ..

ಅಷ್ಟಲ್ಲದೆ ಅನ್ನುತಾರೆಯೇ..
ನಿರೀಕ್ಷೆಯೆ ಪರಮಸುಖ! ಮತ್ತು ಸಖ.

ಒಂದೊಂದೇ ಒಗಟು...

ಹೇಳಿದ ಹಾಗೆ ಕೇಳದೆ ಇದ್ರೆ
ನಾನು ಹೋಗಿ ಬಿಡ್ತೀನಿ ನೋಡು..
ಊಮ್..... ಬೇಡಾ... ಅಮ್ಮ ಬೇಕೂ.
ಸರಿ ವಾಪಸ ಬಂದೆ, ಈಗ ಹಟ ನಿಲ್ಲಿಸು.
ಆತು.. ನಂಗೆ ಇದು ಬೇಕು.
ಹಾಕಮ್ಮಾ ಬೇಕು...
ಸರೀ...ಇರು ಒಂದ್ನಿಮಿಷ...
ಇದು ಮೊನ್ನಿನ ಮಾತುಕತೆ.

ಇವತ್ತು....

ಏ ಹಟಾ ಮಾಡ್ಬೇಡಾ ಇರು
ಪುಟ್ಟಾ ಏನು ಮಾಡ್ತಿದೀ
ಹೋಗು ಆಪೀಚ್ ಹೋಗು...
ಉಹ್..
ಇನ್ನು ಹೋಗಲೇ ಬೇಕಾಯ್ತಲ್ಲಾ
ನಾನು 
ಹೊರಟೆ..
ನೀನು
ಬೇಕು ಅಮ್ಮಾ ಬೇಕು ಅಂತ ಲಂಗ ಹಿಡಿದೆ.

ನಾಳೆ
ಇನ್ನೇನು ಕಾದಿದೆಯೋ.!?

ತೊದಲಲ್ಲಿ ಮೊದ ಮೊದಲು ಜೊತೆಗಿದ್ದು
ತೊಡರಲ್ಲಿ ಅಲ್ಲಲ್ಲಿ ಕೈ ಹಿಡಿದು
ಬೆಳೆ ಬೆಳೆಯುತ್ತಾ
ನನ್ನ ಕನಸಿನಿಂದ
ನಿನ್ನ ಕನಸಿಗೆ
ನೀನು ರವಾನೆಯಾಗುವ ಹೊತ್ತು
ಬರುವುದು ಬಲುಬೇಗ ಅಂತ ಗೊತ್ತು.
ಹೂವು ಅರಳಿದ ಮೇಲೆ
ಗಂಧ ಗಾಳೀ ಪಾಲು.
ನನ್ನ ಬೇರು ನೆಲದಲ್ಲೇ
ನಿನ್ನ ಚಿಗುರು ಗೊಂಚಲು ಆಕಾಶದಲ್ಲೇ.
ಮಕ್ಕಳು ನಮ್ಮವರು. ನಾವೇ ಅಲ್ಲ.

ನಾಳೆ...
ಇದ್ದೆನೋ ಬಿಟ್ಟೆನೋ ಗೊತ್ತಾಗದ ಹಾಗೆ ನಾನೂ
ಇರುವೆಯೋ ಇಲ್ಲವೋ ಗೊತ್ತಾಗದ ಹಾಗೇ ನೀನೂ
ಬದುಕಿಬಿಡುವುದು
ಎಂಬುದು ಸಾರ್ವಕಾಲಿಕ ಸತ್ಯ.
ಅದೇನೇ ಇರಲಿ
ಈಗ ಮಾತ್ರ ಕೆನ್ನೆ ಕೆನ್ನೆಗೆ
ಗಲ್ಲಕ್ಕೆ, ಮೂಗಿನ ತುದಿಗೆ
ಹಣೆಗೆ, ಕಣ್ ಕಣ್ಣಿಗೆ
ನೆತ್ತಿಗೆ ಒತ್ತಿ ಒತ್ತಿ
ಸರಪಣಿ ಮುತ್ತು.

ಅಮೋಘವರ್ಷ
[ಒಂದೂವರೆ ವರುಷದ ಅಮ್ಮುಶಿ ಅವನಮ್ಮನಿಗೆ ಅರ್ಥ ಮಾಡಿಸಿದ ಒಂದು ಒಗಟು.]

Thursday, January 2, 2014

ಆ ಲಯ

ವಿಶಾಲ ಬಯಲ ನಡುವೆ
ಎತ್ತರಿಸಿದ ಜಗುಲಿಯ
ಮೇಲೆ ಆಕಾಶಕ್ಕೆ
ಮೊಗವಿಟ್ಟ ಮಂದಿರ,
ಕಥೆ ಹೇಳುವ ಕಲ್ಲು,
ಹಾಡುಲಿಯುವ ಚಿತ್ತಾರ..
ಎಲ್ಲದರ ಮೂಲ
ಒಳಗೆ ಗರ್ಭಗುಡಿಯಲಿ
ಉಳಿಪೆಟ್ಟಲಿ
ಹದಗೊಂಡ ದೇವಮೂರ್ತಿ.


ವಿಸ್ತರಣೆಯ ದಾಹಕೆ
ಸೈನ್ಯ ಪೊರೆದು, ರಕ್ತವೆರೆದು,
ಗಡಿಗಳ ಮೇರೆ ಮೀರಿದ,
ರಾಜಾಧಿರಾಜರ
ಕಟ್ಟಿದ್ದು ಕಳೆದೀತು
ಸಿಕ್ಕಿದ್ದು ಅಳಿದೀತು
ಎಂಬ ಅಳುಕನ್ನ
ಸೋಸಿ,
ದೇವರ ಮೊರೆಹೋದ
ಮೆರವಣಿಗೆಯಲ್ಲಿ
ಸಾಲು ಸಾಲು
ಶಿಲ್ಪಿಗಳ ಕುಶಲಕರ್ಮಿಗಳ
ಬದುಕು.
ಅಂತಃಸಾಕ್ಷಿಗೆ ನಡುಗಿದ
ರಾಜರು
ಮುಂಬರುವ ದಾಳಿಗೆ ಅಂಜಲಿಲ್ಲ.

ಬಯಲಲ್ಲಿ

ಚಿತ್ತರದಿ
ಬತ್ತಲಾದ ಆಲಯದ
ಮೈ ಗಾಯವ
ನೇವರಿಸುವ
ಎಳೆಬಿಸಿಲಿನಲ್ಲಿ
ಅದೇನು ಆಲ್ಕೆಮಿ..!
ಕಲ್ಲೇ ಬಂಗಾರ!

ಎಲ್ಲಿಯ ರಕ್ತದಾಹ
ಎಲ್ಲಿಯ ಸಾಮ್ರಾಜ್ಯ
ಎಲ್ಲಿಯ ಕಲ್ಲು
ಎಲ್ಲಿನ ಉಳಿ
ಸುತ್ತ ಬಯಲ
ನಡುವೆ ನೆಟ್ಟಗೆ ಗಟ್ಟಿಯಾಗಿ
ಎದ್ದು ನಿಂತ
ಆಲಯ.
ಹೊರಾಂಗಣಕ್ಕಿಂತ
ಮೊದಲು
ನವರಂಗದಲ್ಲೇ
ಮುಖದೋರುವ ಬೇರು,
ಹುಲ್ಲು, ಮಣ್ಣು.
ಹೊರಗೋಡೆಯ ಮಾತೇಕಿನ್ನು?
ಅಲ್ಲಿನದು ಬರಿಯ ಮಣ್ಣು.
ಹೆಸರಲ್ಲೇ ಲಯ
ಹುಟ್ಟಿದ್ದು ಬಯಲೇ
ಸೇರಲಿಕ್ಕಿರುವುದೂ ಅದೇ.

ಇವತ್ತಿನ ಆವೃತ್ತಿಯೇ ಬೇರೆ.
ಕಲ್ಲುಕುಟಿಗರು ಕಳೆದಿದ್ದಾರೆ,
ಅಕ್ಕಸಾಲಿಗದೇ ವಜನು,
ದೇವನೊಬ್ಬನೇ ಆದರೂ
ಬಗೆಬಗೆಯ ಹೊನ್ನು,
ಮಣಿ, ಕಿರೀಟ.
"ದೀನಗಿಂತ ದೇವ ಬಡವ"
ಹೀಗಂತ
ಸಿರಿವಂತರಿಂಗಿತ.
ಹಬ್ಬಸಾಲುಗಳಲ್ಲಿ
ಸಂತರ್ಪಣೆ, ಅಭಿಷೇಕ,
ಕಾಣಿಕೆ ಹುಂಡಿ ಭರ್ತಿ.
ಈಗಿನ ದಾಹಕ್ಕೆ
ಸಾಕ್ಷಿಯಿಲ್ಲ,,
ತೋರಿದರೆ ಟ್ಯಾಕ್ಸಿನವರ ದಾಳಿ

ಅಂತಃಸಾಕ್ಷಿ..!!!

ಹಾಗೆಂದರೇನು ಹೇಳಿ..!

Tuesday, December 17, 2013

ಮರ್ಮರ..

ಅಗೂಲಕೆ ಹರಡಿ
ಅಲ್ಲಲ್ಲಿ ಬಿಳಲಾಗಿ
ಅಂಗಳ ತುಂಬ ನೆರಳಾಗಿ
ಮಣೆ, ಈಳಿಗೆ ಮಣೆ, ಅಡಿಕೆ ಸುಲಿಯುವ ಮಣೆಗಳ
ಹಲಗೆಯಾಗಿ
ಸುಮ್ನೆ ಇಳಿಸಿದ ಕಡಿರಾಡಿನ ರೀಪು ಪಕಾಶಿಯಾಗಿ
ಗಾಳಿ ಬೀಸಿದಾಗೆಲ್ಲ ತುಯ್ದಾಡಿ
ಚಳಿಗಾಲದಲ್ಲಿ ಗುಡಿಸಿದಾಗ ತುಂಬಿದ ಬುಟ್ಟಿಯ ಎಲೆಯಾಗಿ
ದನ ಕರಗಕ್ಕೆ ಕೊಟ್ಟಿಗೆ ಸೊಪ್ಪಾಗಿ
ಸಗಣಿಯೊಡನೆ ಸೇರಿ ಕೊಳೆತು
ತೋಟಕ್ಕೆ ಗನಾ ಗೊಬ್ಬರವಾಗಿ
ರಜೆಗೆ ಬಂದ ಮಕ್ಕಳ
ಆಟಕ್ಕೆ ತೊನೆದು ತೂಗಿದ ಗೆಲ್ಲಾಗಿ
ವಿಸ್ತರವ ಅಳೆಯುವ ಹಕ್ಕಿ ಕುಲಕ್ಕೆ
ಉಣಿಸುವ ಹಣ್ಣಾಗಿ
ಸಂಜೆಗೆ ಮರಳಿದವಕ್ಕೆ
ಗೂಡುಗೂಡಾಗಿ
ಮನೆವಿಸ್ತರಣೆಗೆ ಅಡ್ಡಗಾಲಾಗಿ
ಅಂಗಳಕ್ಕೊಂದು
ಗಡಿಗುರುತಾಗಿ, ಬಯಲಲೆವ ಬೂತಗಳಿಗೆ
ಒಡಲಾಗಿ
ಇರಲೆಬೇಕಾಗಿ
ಒಮ್ಮೊಮ್ಮೆ ಬೇಡಾಗಿ ಅನಿಸಿದ್ದು
ದಶಕಗಟ್ಟಲೆ
ಬೇರೂರಿ ಉಳಿದಿದ್ದು
ನೆಲದ ತೊಟ್ಟಿಲಲ್ಲಿ ಮೊಗವರಳಿ
ಆಕಾಶದ ತೆಕ್ಕೆಯಲ್ಲಿ ಮೊಗಹುದುಗಿಸಿ
ಮಳೆಗೆ ಮೈಯೊಡ್ದಿ
ಗಾಳಿಗೆ ಮೈದೂಗಿ
ಸಂಕ್ರಮಣಗಳನ್ನೆಣಿಸಿದ
ಮರ
ಮೊನ್ನೆ ಸಾಕಾಗಿ ಉರುಳಿತು.
ನಿನ್ನೆ ಫೋನು,ಜೆಸಿಬಿ,ಗರಗಸಗಳ ಸದ್ದು
ಇವತ್ತು ಖಾಲಿ ಅಂಗಳ,

ಬಂದು ಹಾರಿಹೋಗುವ ಹಕ್ಕಿಗಳ ರೆಕ್ಕೆಯ ಸದ್ದು.

Thursday, December 12, 2013

ಮರದೊಳಗೆ ಮರ ಹುಟ್ಟಿ...

|| ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಲಾಗದ ಹಣ್ಣು ಬಲು ರುಚಿ...||

ಅಡಿಗೆ ಮನೆಯಲ್ಲಿ ಒಂದು ಬದಿಗೆ ಅದಿರುತ್ತದೆ.
ಕಟ್ಟೆಯ ಮೇಲೋ, ಪಾತ್ರೆಯ ಸಂದಿಗೋ, ಸ್ಟೋವಿನ ಕೆಳಗೋ, ಪಾತ್ರದ ಸ್ಟಾಂಡಿನ ಕೊಂಡಿಗೋ ನೇತಾಡುತ್ತಿರುತ್ತದೆ.
ಅದು ಸ್ವಚ್ಛವಾಗಿರುತ್ತದೆಯಾದರೂ ನೋಡಲು ಹಾಗೆನಿಸುವುದಿಲ್ಲ.
ಅದಿಲ್ಲದೆ ಕೆಲಸ ಸಾಗುವುದೂ ಇಲ್ಲ. ನೋಡಲು ಬೇಕೇ ಬೇಕೆನಿಸಿರುವುದಿಲ್ಲ ಅಷ್ಟೆ.
ಪಾತ್ರೆ ಇಳಿಸುವಾಗ, ತರಕಾರಿ ಹೆಚ್ಚಿ ಮುಗಿಸಿದ ಕೂಡಲೆ, ಚಾ ಮಾಡಿದ ತಟ್ಟೆಯನ್ನ ಸಿಂಕಲ್ಲೆ ತೊಳೆದಿಟ್ಟು ಬಿಸ್ಕಿಟು ಡಬ್ಬಿ ಹುಡುಕುವ ಮೊದಲು,
ಚಪಾತಿ ಲಟ್ಟಿಸಿ, ಮಣೆಯನ್ನ ಸ್ಟಾಂಡಿಗೆ ಸೇರಿಸಿ ಉದುರಿದ ಹಿಟ್ಟನ್ನು ಒರೆಸುವಾಗ
ಅಚಾನಕ್ ಉಕ್ಕಿದ ಹಾಲಲ್ಲದ್ದಿದ ಸ್ಟೋವನ್ನು ಸಂಭಾಳಿಸಲು
ಪಾಕ ಕುದಿಯುವಾಗಲೇ ಮೀಟಿದ ಬೆಲ್ಲು ಕೇಳಿಸಿ ಬಾಗಿಲು ತೆಗೆಯಲು ಹೋಗುವ ಮೊದಲು,
ದಿನವೂ ಕೆಲಸ ಮುಗಿದ ಮೇಲೆ ಸೋಪು ಹಚ್ಚಿ ತೊಳೆದು ಅಲ್ಲೆ ಕಟ್ಟೆಯ ಮೇಲೆ ಒಣಗಿಸಿಯಾಗಿರುತ್ತದೆ.
ಅಡಿಗೆ ಮನೆಯಲ್ಲಿ ಒಂದು ಬದಿಗೆ ಅದಿರುತ್ತದೆ.
ಒಮ್ಮೊಮ್ಮೆ ತುಂಟ ಮಕ್ಕಳ ಆಟಿಗೆಯೊಡನೆ ಸೇರಿಯೂ ಮತ್ತೆ ಅಡಿಗೆ ಮನೆಗೇ ಓಡಿಬರುತ್ತದೆ.

ಅದನ್ನ ಮಶಿಬಟ್ಟೆ, ಕೈ ಒರ್ಸೊ ಬಟ್ಟೆ, ಅಡಿಗೆ ಬಟ್ಟೆ, ನ್ಯಾಪ್ಕಿನ್ನು, ಇತ್ಯಾದಿಯಾಗಿ ಕರೆಯುತ್ತಾರೆ.

ಒಂದು ಕತೆ ಓದಿದ್ದೆ. ತಾಯಿ ಯಾವತ್ತಿಗೂ ಮಶಿಬಟ್ಟೆಯ ಹಾಗೆ ಅಂತ ಒಂದು ವ್ಯೂ ಅದು. ಯಾರು ಬರೆದಿದ್ದು ಅಂತಲೂ ಮರೆತಿದ್ದೇನೆ.. ಮಾತೃದೇವೋ ಭವದ ನಾಡಿನಲ್ಲಿ ಬಹುಶಃ ಇದು ಜಾಸ್ತಿ ನಿಜ.

ಉಬ್ಬಿ ನಿಂತು ರಸವಾಗಿ ಆವರಿಸಿದ ತಾಯ್ತನವು
ತೊದಲು ಹೆಜ್ಜೆಗಳಲ್ಲಿ ಒಂದೊಂದೇ ದೂರ ಕ್ರಮಿಸುತ್ತಾ
ಆತು ನಿಲ್ಲುವ ನಿಲುಕುಗಳನ್ನ,
ತಲೆಯೂರಿದ ಮಡಿಲನ್ನ,
ಅವುಚಿ ಹಿಡಿದ ಕೈಗಳನ್ನ ಮೀರುತ್ತಾ
ರೂಪವೊಂದು
ಒಳಗಿಂದ ಮೂಡಿ
ಕಣ್ಣೆದುರು ಬಂದು
ಮತ್ತೆ ಕನ್ನಡಿಯೊಳಗೆ ಹೋದಂತಾದ ಘಳಿಗೆಯಲ್ಲಿ
ಏನು ಯೋಚಿಸುತ್ತಿರುತ್ತದೆ?

{ಅ}