Thursday, August 1, 2013

ಹೊಸ್ತಿಲು

ಹೊಸ್ತಿಲು ದಾಟುತ್ತಿರುತ್ತೇನೆ
ನಡೆದಷ್ಟೂ ಸಾರಿ,
ನಡೆದಷ್ಟೇ ದಾರಿ.
ಹೆಜ್ಜೆ ದಣಿದಾಗ
ಸುದೂರದಿ ಮರದ ನೆರಳು,
ಅಷ್ಟರ ಮಟ್ಟಿನ ಪುಣ್ಯ.

ನೆರೆ ಇಳಿದು
ಕೆಸರು ಕಳೆದು
ಬೇಸಗೆಯಲ್ಲಿ ಬೆಂದು
ಬಿರುಕಾದ
ಕಣಿವೆಯ ಮಡಿಲ ತುಂಬ
ಸಾವಯವ ಕೃಷಿ.
 
ಮುಳ್ಳು ಚುಚ್ಚಿದ ಕಾಲು
ಕಿತ್ತಿಟ್ಟರೆ
ಮೆತ್ತಗೆ ಅಪ್ಪುವ ಹುಲ್ ಹಾಸು
ಕಂಬಳಿ ಹುಳು ತಾಗಿ
ತುರಿಸುತ್ತ ನಡೆವಾಗ
ಹೂವಿಂದ ಹೂವಿಗೆ
ಹಾರುವ ಭೃಂಗ
ನೋಡುತ್ತ
ಕಾಲ ಕಳೆದಿದ್ದು
ಗೊತ್ತಾಗುವುದೇ ಇಲ್ಲ
ಕೂಡಿದ್ದೇನು ಅಂತಲೂ ಗೊತ್ತಾಗಲಿಲ್ಲ
ಕೊಟ್ಟಿದ್ದು ಮರೆಯುವಳಿಗೆ
ಇಸಕೊಳ್ಳಲು ಮುಜುಗರ.

ವರುಷಕ್ಕೊಮ್ಮೆ ದಾಟುವ ಹೊಸ್ತಿಲು
ಎಡವುತ್ತದೆ.
ಕಣ್ಣು ತುಂಬುವಾಗ
ನೆನಪೆಲ್ಲ ಮಸುಕು.

(ಕಣ್ಣೀರೆ ಅಸ್ತ್ರವೆಂದಿದ್ದು ಇದಕ್ಕೇ ಇರಬಹುದು.)

ನಗುವಾಗ ನಕ್ಕು
ಅಳುವಾಗ ಅತ್ತಿದ್ದರೆ
ಅರ್ಧ ದಾರಿ ಮುಗಿಯಿತು
ಎಂದರು ಕವಿ
ನಗುವಾಗ ನಗಲಾಗದೆ
ಅಳುವಾಗ ಅಳಲಾಗದೆ
ಅದಲು ಬದಲಾದವರ
ದಾರಿ ಮುಗಿಯುವುದೆ
ಬರಿದೆ ಸಾಗುವುದೆ?!

ನಡೆದಷ್ಟೂ ದಾರಿ
ನಡೆದಷ್ಟೇ ದಾರಿ.
ಹೊಸ್ತಿಲು ದಾಟುತ್ತಿರುತ್ತೇನೆ.
ಎಡವಿದಾಗೆಲ್ಲ
ಒಂದು ಭಾವಸ್ರೋತ,
.....ಕವಿತ.
.....ಅನುಗ್ರಹೀತ.

[ಕಂಬನಿ ಬದುಕು.
ಕವಿತೆ ಕರವಸ್ತ್ರ.]


("ಅಳುವಾಗ ಅತ್ತು ನಗುವಾಗ ನಕ್ಕು ಮುಗಿದಿತ್ತು ಅರ್ಧ ದಾರಿ" ಮತ್ತು "ಕಂಬನಿ ಬದುಕು ಕವಿತೆ ಕರವಸ್ತ್ರ" ಇವು ಕೆ.ಎಸ್.ನ ಅವರ ಕವಿತೆಸಾಲುಗಳು.)

Tuesday, July 2, 2013

ಹೂ-ಬಲ...

ಸಂಜೆಯಿಡೀ..
ಭೋರೆಂದು ಸುರಿವ ಮಳೆಗೆ
ಗೋಣು ಬಗ್ಗಿಸಿ ನಿಂತ
ಪಾರಿಜಾತ ಮರದ
ಗೆಲ್ಲುಗಳಲ್ಲಿ ಅಲ್ಲಲ್ಲೇ
ಅರೆಬಿರಿವ ಪಾರಿಜಾತ..

ಹೂಬಿರಿವ ಸದ್ದು ಕೇಳುವುದಿಲ್ಲ,
ಕಿವಿಗೆ ಸ್ಕಾರ್ಫ್ ಬಿಗಿಯಲಾಗಿದೆ.

ಸುರಿವ ಮಳೆಯ ತಡೆದ
ಎಳೆಮೊಗ್ಗ ಎಸಳುಗಳು
ಬೆಳಗು ಮುಂಚಿನ ನಸುಗಾಳಿಗೆ
ಉದುರಿದವು ನೆಲದೊಡಲಿಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ

ಗಂಧಶಾಲಿನೀ ಬೆಳಗು
ಎಂದು ಕವಿಯ ಮೆಸೇಜು,
ದಾರಿ ಬದಿಯ ಮರದ ಕೆಳಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ
ತುಂಬುತ್ತಿರುವುದು
ಆಯುವ ಅಜ್ಜನ ಜಾಲರಿಬುಟ್ಟಿ.

ಗಿಡದಿಂದ, ನೆಲದಿಂದ,
ಬುಟ್ಟಿಯಿಂದ, ದೇವರ ಪದತಳದಿಂದ
ಮಣ್ಣು ಸೇರಿದ ಹೂವಿ-
ನ ಗಂಧ ಗಾಳಿ ಪಾಲಾದರೂ
ಭಾವಕೋಶದಿ ನಿತ್ಯ ಗಂಧಿ.

ಸುರಿಮಳೆಗೆ ಬಗ್ಗಿ ನಿಂತು
ಭರಿಸಿದ ಹೂವು
ನಸುಗಾಳಿಗೆ ಉದುರಿತು
ಎಂಬುದು
ಮಾರಲ್ ಆಫ್ ದ ಸ್ಟೋರಿ.

Tuesday, April 9, 2013

ಬಕೆಟ್ ಲಿಸ್ಟ್

ವಯಸ್ಸಾಯ್ತು
ಅಂತ ಹೇಳುವ ಕ್ಯಾಲೆಂಡರು,
ಇನ್ ಬಾಕ್ಸಲ್ಲಿ ಸ್ಮೈಲಿಗಳಿಂದಲೇ
ತುಂಬಿ ತುಳುಕಿರುವ
ಶುಭ ಸಂದೇಶಗಳು.
ಅವಳು ಕೆನ್ನೆಗಿತ್ತ ಒಂದು
ಹೆಚ್ಚುವರಿ ಮುತ್ತು
ಎಲ್ಲ ನೆನಪಿಸುತ್ತಿವೆ
ಹೌದು ವಯಸ್ಸಾಯ್ತು
ಅಷ್ಟೇನು ಹೆಚ್ಚಲ್ಲ ಅಂದ್ಕೊಂಡ್ರೂ
ವಾರ್ಷಿಕ ಪ್ಯಾಕೇಜಿನಲ್ಲಿ
ಚೆಕಪ್ ಮಾಡಿಸಬೇಕಾಗುವಷ್ಟು
ತಮಾಷಿ ಅಂದ್ರೆ
ನನ್ನ ಲಿಸ್ಟಿನ ಬಕೆಟ್ಟು ದೊಡ್ಡದಿದೆ.
ಒದೆಯೋಕ್ಕೆ ಕಸುವಿದ್ರೆ ಮಾತ್ರ
ಸುಸೂತ್ರ ಪಯಣ.
ಇಷ್ಟ್ ವರ್ಷಕ್ಕೂ ಆಸೆ ತೀರಲಿಲ್ವೆ
ಅನ್ನಕೂಡದು ನೀವು
ಈ ಬಕೆಟ್ಟಿನ ಅಳತೆ ಸಿಕ್ಕಿದ್ದು
ಹಿಂದೆ ಪೂರೈಸಿದ ಮಹದಾಸೆಗಳ
ಬಕೆಟ್ಟನ್ನು ನೋಡಿಯೇ.
ಅವತ್ತೆಂದೋ ಬರೆದ ನೆನಪು
ಅಡಿಗರ ಸಾಲು ಸಾಲುಗಳಲ್ಲೆ
ಪಸರಿಸುತ್ತಿರುವ ಬದುಕು
ಆಶೆಯೆಂಬ ತಳವೊಡೆದ ದೋಣಿ..
ಒಡೆದದ್ದು ಗೊತ್ತಿದ್ದರೆ ದೋಣಿ ಮುಳುಗುತ್ತದೆ
ಗೊತ್ತಾಗದ ಹಾಗೆ
ಹುಟ್ಟು ಹಾಕುವುದು ಕಲಿತಿದ್ದು
ಅಮ್ಮನೊಳಗೆ ಕುಡಿಯೊಡೆದಾಗಲೆ
ಇರಬೇಕು.
ಇಲ್ಲಿ ಬಂದ ಮೇಲೆ
ಬರಿದೆ ಬೆರಗು.. ಅಷ್ಟಿಷ್ಟು ಕೊರಗು.
ಇಲ್ಲ ಬೇಸರವಿಲ್ಲ.
ಮತ್ತೆ ಮೊದಲಿಂದ ಶುರು ಮಾಡೆಂದರೆ
ಅದೇ ಹೆಜ್ಜೆಗಳೇ
ಅದೇ ತಿರುವೇ
ಅದೇ ದಾರಿಯೇ.
ಎಡವದೆಯೆ ಮೈಗಾಯ ಒಡೆಯದೆಯೆ
ನಡೆಯ ಕಲಿತವರಾರು ಅಂದಂತೆ ಡೀವೀಜಿ
ಆ ಖುಶೀ, ಪೆದ್ದುತನ, ಮಂಕು, ಹಟ
ಎಡವಟ್ಟು, ಹಳವಂಡಗಳ
ಹೊರತಾಗಿ ಹೇಗಿರಲಿ ನಾನು
ಅಳುವಿನ ಜಲಪಾತವೇ ಇದ್ದರೂ
ತಡೆಯಲು ತಕ್ಕ ಬಂಡೆ ಗುಡ್ಡಗಳ
ಇತ್ತದ್ದೂ ಈ ಬದುಕೇ
ನೋಟ ಚಂದವಿದೆ
ಬೇಸರ ಮೂಡಿದರೆ ತಿರುಗಿದಲ್ಲೆಲ್ಲ
ಹೊಸನೋಟ.
ಗೋಡೆಗಳಿಲ್ಲ ತೆರೆದ ಬಾಗಿಲು
ಹೋದ ಜನ್ಮದ ಪುಣ್ಯ
ಸುತ್ತಲೂ ಆಕಾಶಚುಂಬಿ ಕಟ್ಟಡಗಳೂ ಇಲ್ಲ.
ವಿಷ್ಯ ಏನಪಾಂದ್ರೆ
ವಯಸ್ಸಾಯ್ತು
ಎಲ್ರಿಗೂ ಆಗತ್ತೆ.
ಆದರೆ ವಯಸ್ಸಿನ ಜತೆಗೆ ನನ್ನ ಬಕೆಟ್ ಲಿಸ್ಟೂ ಬೆಳೆದ್ ಬಿಟ್ಟಿದೆ.. :)

Monday, December 24, 2012

ಕಹಿ ತೆ

ಮೊನೆ ಮಾತು ಚುಚ್ಚಿದ್ದು ಹೌದು
ಗಾಯ ಒಣಗಿ ಉದುರಿ ಹೊಸ ಚರ್ಮ
ಕಲೆಯೂ ಕಾಣದಾಗಿದೆ.
ಆದರೆ
ಮಾತಾಡದೆ ಎದ್ದು ಹೋದದ್ದು,
ಬಂದ ಸಿಟ್ಟು ನುಂಗಿ ಮುಖ ತಿರುಗಿಸಿದ್ದು
ಇರುವುದನ್ನೇ ಮರೆತು ಹೋಗಿದ್ದು
ಸೇತುವೆಯ ಮೇಲೆ ಘನೀಭವಿಸುವ 
ನಿರ್ವಾತ....
ಒಣಗಿದ ಗಾಯಕ್ಕೆ ಉಪ್ಪು ನೀರೂಡಿದ ಹಾಗಿತ್ತು.
ಸಮಾಜ, ವ್ಯವಸ್ಥೆ, ವ್ಯಕ್ತಿ-ಶಕ್ತಿ-ಸಮಷ್ಟಿ
ಪುಂಖಾನುಪುಂಖ ಲೇಖನಗುಚ್ಛಗಳಿವೆ
ಶೆಲ್ಫಲ್ಲಿ
ಜೀವನೋತ್ಸಾಹ ಯಾಕೋ
ನೇತಾಡುತ್ತಿದೆ ಔದಾರ್ಯದ
ಉರುಳಲ್ಲಿ.

ನಿಲ್ಲದೆ ನಡೆವ ಕಾಲದ
ಜತೆಗೇ ಓಡುತ್ತಾ
ತಿಳಿಯದೆ ಹೋಗಿರಬಹುದು
ಬದಲಾವಣೆ
ಅಥವಾ
ಓಡುತ್ತ ಓಡುತ್ತ ಹೋದವರಿಗೆ
ತಿಳಿಯಲು ಸಮಯ ಸಿಕ್ಕಿದ್ದೆಲ್ಲಿ!


ನಿಲ್ದಾಣ ಬಯಸದೆ ಪಯಣವನೆ ಧ್ಯಾನಿಸಿದವರಿಗೆ
ನಿಲ್ದಾಣ ಮತ್ತು ತಂಗುದಾಣದ
ವಿಳಾಸದ ಹಂಬಲು ಬಂದಿದ್ದು
ವಯಸ್ಸಾಗಿ ಹೋದದ್ದರ ಲಕ್ಷಣ
ಎಂಬಿತ್ಯಾದಿ
ಜಾಣ-ಜಾಣೆಯರು ಮಾತಾಡಿಕೊಂಡಿದ್ದಾರೆ.
ಓದಿ ಅಹ ಅಹ ಅಂದುಕೊಂಡ
ಸಾಲುಗಳೆಲ್ಲ
ಇದ್ದಕ್ಕಿದ್ದಂಗೆ ಇಲ್ಲೆ ಪಕ್ಕದಲ್ಲಿ
ಘಟಿಸುವುದು ಬಹುಶಃ
ದಾರಿ ಸಾಗಿಬಂದ ದೂರವಿರಬೇಕು
ಚೋದ್ಯವೆಂದರೆ
ಈಗ
ಅಹ ಎನ್ನುವುದಿರಲಿ
ಉಸಿರು ಸಿಕ್ಕಿಕೊಳ್ಳುವುದು
ಮಾತು ಉಕ್ಕಡಿಸಿ ಬಂದೂ
ಬಾಯಿ ಕಟ್ಟುವುದು
ಕಣ್ಣ ನೀರು ಹನಿಯದ ಹಾಗೆ
ತಡೆದು
ಕಿರಿನಗು ಚೆಲ್ಲುವುದು..


ನೋವಿನ ಕಹಿ
ಕಳೆಯುವ ಬಗೆ
ಅರಿಯಲು
ಕದಳೀವನವೆ ಬೇಕು
ಎಚ್ಚರದ ಬದುಕು ಸೋಸಿ
ಕನಸು ಬನಿಯಿಳಿಯಬೇಕು.

Thursday, December 13, 2012

ಉಲ್ಕಾಪಾತ..

ಪರಿಚಯವಿಲ್ಲದ ದೇವರಿಗಿಂತ
ಲಾಗಾಯ್ತಿನಿಂದ ಗೊತ್ತಿರುವ ದೆವ್ವವೇ ಮೇಲು
ಎಂದ ಮಾತು
ನಿಜವಿರಬಹುದು,
ಆದರೆ
ಈಗ ಬೆಂಕಿಯಿಂದ ಬಾಣಲೆಗೆ
ಹಾರಲೇಬೇಕಿರುವ ಸಮಯ.
ಯೋಚನೆ ಮಾಡಿದಷ್ಟೂ
ಗೊಂದಲದ ಅಲೆಗಳೇ.
ಸುಮ್ಮನೆ ಕುಳಿತಿರಲೂ
ಆಗದಷ್ಟು ಬ್ಯುಸಿಯಾಗಿದ್ದೇನ್ಬಂತು
ನಾಳೆ ಬೆಳಗಿನ ಆಗಸದಲ್ಲಿ
ನೋಡಬೇಕು:
ಜೆಮಿನೈಡ್ ಉಲ್ಕಾಪಾತವಿದೆಯಂತೆ!
ಹಳೆಯದೊಂದು
ಉತ್ಸಾಹದ ಚಂದಿರನೂ
ಉದುರಲಿದ್ದಾನೆ ಜೊತೆಗೆ,
ಉರಿದು ಬಿದ್ದ ಉಲ್ಕೆಯ ಚೂರಿನಂತೆ.
ಇದು ಬಹಳ ಮೊದಲೆ
ನಿಶ್ಚಯವಿದ್ದ ಹಾಗೆ,
ಈಗ ಅಂದುಕೊಂಡಿದ್ದು
ಅವತ್ತೇ ಯಾವತ್ತೋ
ಬುಕ್ಕಾಗಿದ್ದ ಹಾಗೆ.
ಮುಂದೆ
ಇಂತಹದೇ ಒಂದು ಸಂಜೆಯಲ್ಲಿ
ಅವಳನ್ನಬಹುದು
ನೀನು ಹಾಗ್ ಮಾಡಬಾರದಿತ್ತು
ಅಥವಾ ಇದೇ ಒಳ್ಳೆಯದು.
ಅವಳೊಬ್ಬಳೇ ಏನು,
ಜೊತೆಗೆ ಇನ್ನೊಬ್ಬನೂ ಇದ್ದಾನೆ.

ಹಾಗಂತ....
ಇವತ್ತು,
ಅಂತಹದೇ ಒಂದು ಸಂಜೆಯಲ್ಲಿ
ನಾನು ನಿರ್ಧರಿಸುವುದು ಹ್ಯಾಗೆ?
ಇಷ್ಟಕ್ಕೂ..
ನನ್ನ ಶಿಲುಬೆ ನನ್ನ ಬೆನ್ನಿಗೇ ಇರಬೇಕಲ್ಲದೆ
ಅವರ ಕನಸುಗಳನ್ನು ನಾನು ಕಾಣುವುದು ಹ್ಯಾಗೆ?
ನನ್ನ ಕನಸುಗಳನ್ನು ಅವರ ಮೇಲೆ ಹೇರದ ಹಾಗೆ-
ಹಳೆಯದೆಲ್ಲವನ್ನು ಕಟ್ಟಿಟ್ಟು ಸುಮ್ಮನೆ ಹೀಗೆ-
ಇರುವುದಕ್ಕೆ ಕಲಿಯಬೇಕಿದೆ.
ಎಲ್ಲ ದಾರಿಗಳಲ್ಲೂ ಅಷ್ಟು ದೂರ ನಡೆದು
ತಿರುವು ಹಿಡಿದವಳಿಗೆ
ಕಲಿಯುವುದು ಕಷ್ಟವಿರಲಾರದು.
ಬದುಕು ಚಂದವಿದೆ.

Wednesday, December 5, 2012

ಅವಳಿಗನ್ನಿಸಿದ್ದು...

ಮಲಗಿದ್ದೇನೆ. ಛಾವಣಿಯನ್ನು ದಿಟ್ಟಿಸುತ್ತಾ.
ಅಲ್ಲೇನಿದೆ.
ಧೂಳು ಹೊಡೆಯಬೇಕಿರುವ ಫ್ಯಾನು, ಮೂಲೆಯಲ್ಲಿ ಅಲುಗಾಡುವ ಜೇಡರ ಬಲೆ. ಕಿಟಕಿಯಿಂದ ತೂರಿಬಂದ ಹೊರಗಿನ ದೀಪದ ಬೆಳಕಿನ ಕಿಂಡಿಕಿಂಡಿ ಪ್ರತಿಫಲನ. ಒಳಗಿನ ಕತ್ತಲೆಯಲ್ಲಿ ಸಣ್ಣಗೆ ಮಳೆಯಂತೆ ಹನಿಯುತ್ತಿರುವ ರಾಗ್ ಭೀಮ್ ಪಲಾಶೀ. ದಿನದ ಅಂಚಲ್ಲಿ ಮನೆಗೆ ಬಂದು ಸುಸ್ತಾಗಿ ಮಲಗಿದ್ದೀ ನೀನು. ಇರುಳಲ್ಲೇ ದಿನವನ್ನರಸುವ ವ್ಯರ್ಥ ಪ್ರಯತ್ನ ದುರಂಧರೆ ನಾನು.
ಮಗ್ಗುಲು ಹೊರಳಿ ನಿನ್ನ ಕೈಯ ಬೆರಳು ಸೋಕಲಿ ಅಂತ ಬಯಸಿ ನಿನ್ನ ಬದಿಗೇ ಇನ್ನೊಂಚೂರು ಸರಿದು ಅಲುಗಾಡದೆ ಮಲಗಿದ್ದೇನೆ. ನೀನೂ ಮಲಗಿದ್ದೀಯ ಅಲುಗಾಡದೆ, ಬದಿಗೆ ಸರಿಯದೆ. ಅತ್ತಿತ್ತ ಹೊರಳದೆ. ಅಲ್ಲಿಗೆ ಎಚ್ಚರದ ಆಟ ಮುಗಿಯಿತು.
ಇನ್ನೊಂಚೂರು ಬದಿಗೆ ಸರಿವ ಆಸೆ, ಸೋಕಿಸಿಕೊಳ್ಳುವ ಬಯಕೆಗಣ್ಣಿಗೆ ನಿದ್ದೆ ಬಂದು ಈಗ ಕನಸಿನ ಜೋಕಾಲಿ, ಇದ ಜೀಕುವಾಗಲೂ ಸೋಕದ ಹಾಗೆ ಎಚ್ಚರದಿ ತೂಗುವವನಲ್ಲ ಇವನೇ ಆ ನಲ್ಲ?! ಇಲ್ಲಿಗೆ ಕನಸು ಕೊನೆಯಾಯಿತು.
ಬೆಳಗ್ಗೆ ನಿದ್ದೆಗಣ್ಣಿನ ಅಲಾರ್ಮ್ ಕೂಗುವಾಗ ನಾನೇಳದೆ ನೀನು ಮೇಲಿನಿಂದ ಕೈಸಾರಿ ಆಫ್ ಮಾಡುವಾಗ ಅದು ಹ್ಯಾಗೋ ಒಂಚೂರು ಕೈ ಸೋಕಿ ನನ್ನ ನಿದ್ದೆ ಪೂರ್ತಿ ಎಚ್ಚರಗೊಂಡರೆ ನೀನು ಸಾ--ರಿ ಗೊಣಗುತ್ತಾ ಸಣ್ಣಗೆ ಗೊರಕೆ ಹೊಡೆಯುತ್ತಿದ್ದೀ. ಅಲ್ಲಿಗೆ ಮತ್ತೊಂದು ಕನಸು ಬಯಕೆಗಳ ನಿರೀಕ್ಷೆಯ ಎಚ್ಚರದ ಬೆಳಕು ಹರಿಯಿತು.
ಇಡೀ ದಿನವನ್ನ ಎಲ್ಲ ಕೆಲಸಗಳ ಓಣಿಯಲ್ಲಿ ಹರಿದಾಡಿಸಿ, ಅಷ್ಟಿಷ್ಟು ಬಿಡುವಲ್ಲಿ ಇನ್ಯಾರದೋ ಕನಸು ಬಯಕೆಗಳ ಓದಿಕೊಂಡು ಮನೆಯಿಡೀ ನಲಿವ ಸಗ್ಗದ ನಲಿವೊಂದನ್ನು ಸಾಕುತ್ತಾ, ಮತ್ತೆ ಕಾಯುತ್ತಿದ್ದೇನೆ ಇರುಳಿಗೆ - ಗಾಜಿನ ಚಪ್ಪಲಿ ತೊಟ್ಟು ಚುಕ್ಕಿಗಳಂಗಿ ತೊಟ್ಟು ಮಾಯಾವಿ ರಥದಲ್ಲಿ ಹೋಗುವ ಕನಸಿನಿರುಳು ಇಂದಿರಬಹುದೇ ಎಂದು.

ಹಾರಗುದುರಿ ಬೆನ್ನನೇರಿ ಮಲ್ಲಿಗೆ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತ ಹಾಗೆ ನೆನಪು. ಲಾಲಲಾ ಅಂತ ಫ್ರಾಕನ್ನೆತ್ತಿ ಸಿಂಡ್ರೆಲಾ ನೃತ್ಯ ನಟಿಸುವ ಮಗಳ ಒನಪು. ನೆನಪಿಗೆ ಕೂತ ಧೂಳು ಹೆಚ್ಚಾಗಿ ನಿನಗೆ ಅಲರ್ಜಿ ನೆಗಡಿ. ಸುತ್ತ ಅಮೃತಾಂಜನದ ಘಾಟು ವಾಸನೆ. ಓಹ್ ಅಲ್ಲೇಳುತ್ತಿದೆ ಕನಸಿನಾವಿಯ ಉಂಗುರ. ಅಮ್ಮ ಧರಿಸುವುದು ಥರವೇ ಹುಡುಗು ದಿನಗಳ ಕನಸು ಕಂಗಳ ಅಂತ ಕೇಳುತ್ತಾ.. ಓಡುವ ದಿನದ ಬೈಕು ಹತ್ತುವ ಅಪ್ಪ ಬರುವ ರಾತ್ರಿಗೆ ಮತ್ತೆ ಬೇಡ ಬೇಡೆಂದರೂ ಕನಸಿನ ಫಾಸ್ಟ್ ಟ್ರ್ಯಾಕ್ ಲೆನ್ಸು!

ಮಲಗಿದ್ದೇನೆ ಛಾವಣಿಯನ್ನು ದಿಟ್ಟಿಸುತ್ತಾ..
ಅಲ್ಲೇನಿದೆ? ಏನಿಲ್ಲ?
ಹಗಲಿರುಳ ಜೀಕುಜೀವನದ ಛಾಯಾಕನ್ನಡಿ!