Monday, December 24, 2012

ಕಹಿ ತೆ

ಮೊನೆ ಮಾತು ಚುಚ್ಚಿದ್ದು ಹೌದು
ಗಾಯ ಒಣಗಿ ಉದುರಿ ಹೊಸ ಚರ್ಮ
ಕಲೆಯೂ ಕಾಣದಾಗಿದೆ.
ಆದರೆ
ಮಾತಾಡದೆ ಎದ್ದು ಹೋದದ್ದು,
ಬಂದ ಸಿಟ್ಟು ನುಂಗಿ ಮುಖ ತಿರುಗಿಸಿದ್ದು
ಇರುವುದನ್ನೇ ಮರೆತು ಹೋಗಿದ್ದು
ಸೇತುವೆಯ ಮೇಲೆ ಘನೀಭವಿಸುವ 
ನಿರ್ವಾತ....
ಒಣಗಿದ ಗಾಯಕ್ಕೆ ಉಪ್ಪು ನೀರೂಡಿದ ಹಾಗಿತ್ತು.
ಸಮಾಜ, ವ್ಯವಸ್ಥೆ, ವ್ಯಕ್ತಿ-ಶಕ್ತಿ-ಸಮಷ್ಟಿ
ಪುಂಖಾನುಪುಂಖ ಲೇಖನಗುಚ್ಛಗಳಿವೆ
ಶೆಲ್ಫಲ್ಲಿ
ಜೀವನೋತ್ಸಾಹ ಯಾಕೋ
ನೇತಾಡುತ್ತಿದೆ ಔದಾರ್ಯದ
ಉರುಳಲ್ಲಿ.

ನಿಲ್ಲದೆ ನಡೆವ ಕಾಲದ
ಜತೆಗೇ ಓಡುತ್ತಾ
ತಿಳಿಯದೆ ಹೋಗಿರಬಹುದು
ಬದಲಾವಣೆ
ಅಥವಾ
ಓಡುತ್ತ ಓಡುತ್ತ ಹೋದವರಿಗೆ
ತಿಳಿಯಲು ಸಮಯ ಸಿಕ್ಕಿದ್ದೆಲ್ಲಿ!


ನಿಲ್ದಾಣ ಬಯಸದೆ ಪಯಣವನೆ ಧ್ಯಾನಿಸಿದವರಿಗೆ
ನಿಲ್ದಾಣ ಮತ್ತು ತಂಗುದಾಣದ
ವಿಳಾಸದ ಹಂಬಲು ಬಂದಿದ್ದು
ವಯಸ್ಸಾಗಿ ಹೋದದ್ದರ ಲಕ್ಷಣ
ಎಂಬಿತ್ಯಾದಿ
ಜಾಣ-ಜಾಣೆಯರು ಮಾತಾಡಿಕೊಂಡಿದ್ದಾರೆ.
ಓದಿ ಅಹ ಅಹ ಅಂದುಕೊಂಡ
ಸಾಲುಗಳೆಲ್ಲ
ಇದ್ದಕ್ಕಿದ್ದಂಗೆ ಇಲ್ಲೆ ಪಕ್ಕದಲ್ಲಿ
ಘಟಿಸುವುದು ಬಹುಶಃ
ದಾರಿ ಸಾಗಿಬಂದ ದೂರವಿರಬೇಕು
ಚೋದ್ಯವೆಂದರೆ
ಈಗ
ಅಹ ಎನ್ನುವುದಿರಲಿ
ಉಸಿರು ಸಿಕ್ಕಿಕೊಳ್ಳುವುದು
ಮಾತು ಉಕ್ಕಡಿಸಿ ಬಂದೂ
ಬಾಯಿ ಕಟ್ಟುವುದು
ಕಣ್ಣ ನೀರು ಹನಿಯದ ಹಾಗೆ
ತಡೆದು
ಕಿರಿನಗು ಚೆಲ್ಲುವುದು..


ನೋವಿನ ಕಹಿ
ಕಳೆಯುವ ಬಗೆ
ಅರಿಯಲು
ಕದಳೀವನವೆ ಬೇಕು
ಎಚ್ಚರದ ಬದುಕು ಸೋಸಿ
ಕನಸು ಬನಿಯಿಳಿಯಬೇಕು.

3 comments:

ಅರವಿಂದ said...

ಆತ್ಮೀಯರೆ,

ಕವನ ಆತ್ಮೀಯವಾಗಿದೆ. ಒಳ್ಳೆಯ ಕವನ ಕೊಟ್ಟದ್ದಕ್ಕೆ ಧನ್ಯವಾದಗಳು.

ವೈಯುಕ್ತಿಕ ನೆಲೆಯಲ್ಲಿ ಹುಟ್ಟುವ ಕವನ ಸಾರ್ವತ್ರಿಕತೆಯನ್ನ ಪಡೆದಾಗ ಕಾವ್ಯ ತನ್ನ ಅರ್ಥವನ್ನ ಪಡೆದುಕೊಂಡಂತೆ. ಹೀಗೆ ಕಾವ್ಯ ತನ್ನ ಅರ್ಥವನ್ನ ತಾನೆ ಪಡೆಯಲು ಬಯಸುತ್ತೆ. ತಮ್ಮ ಕವನ ಒಂದು ಹಂತದಲ್ಲಿ ಈ ಹಂತವನ್ನು ಪಡೆದಿದೆಯೆಂದನಿಸಿದರೂ, ನೋವಿನ ವಿವಿದ ಮುಖಗಳನ್ನೂ, ಅದರ ಆಳವನ್ನೂ ಧ್ವನಿಸಿದ್ದರೆ ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ಪಡೆಯುತ್ತಿತ್ತೆಂದು ಭಾವಿಸುತ್ತೇನೆ.

ಇಂತಿ

sunaath said...

ಸಿಂಧು,
ಭಾವನೆಗಳನ್ನು ಸ್ಫೋಟಕ ರೂಪಕಗಳ ಮೂಲಕ ನಿರೂಪಿಸುವ ನಿಮ್ಮ ಶೈಲಿ, ಕವನಕ್ಕೆ ಸಹಜ ಲಯವನ್ನು ಕೊಡುವ ನಿಮ್ಮ ಸಾಮರ್ಥ್ಯ ಇವು ನಿಮ್ಮ ಕವನಗಳಿಗೆ ನಿಮ್ಮದೇ ವೈಶಿಷ್ಟ್ಯವನ್ನು ತಂದಿವೆ. ‘ಕಹಿ ತೆ’ ಕವಿತೆಯಾಗಲು ಮತ್ತೇನು ಬೇಕು?

Unknown said...

ನೀವು ಕಟ್ಟಿದ ಸಾಲುಗಳ ಗುಚ್ಛಕ್ಕೊಂದು ಒಳ್ಳೆ ಹೆಸರು ಕೊಟ್ಟಿದ್ದೀರಿ..ಆ ಹೆಸರಿನ ಮಧ್ಯೆ ಕಡೆಯ ಪ್ಯಾರಾದಲ್ಲಿ ಕಾಣಿಸಿಕೊಂಡ ಕದಳಿವನವೂ ಮಂಕಾಗಿದೆ ಅನ್ನಿಸಿತು ಮೇಡಮ್. ಚಂದದ ಹೆಣಿಗೆ..
-ಸಹ್ಯಾದ್ರಿ ನಾಗರಾಜ್