Wednesday, June 13, 2007

ಹಳೆಯದೊಂದು ದುಃಖದ ಬೆಳಗು

ಚುಮು ಚುಮು ಬೆಳಗು,

ರಾತ್ರಿಯಿಡೀ ಅತ್ತುಬಿಟ್ಟಿದ್ದೆ
ಹೊರಗೆ ಧೋ ಎಂದು ಮಳೆಯಿತ್ತು
ಹಸೀ ಮಣ್ಣು ಒದ್ದೆ ಗಿಡಮರ
ಮಳೆ ನಿಂತು ಮೋಡ ಚೆದುರಿದ
ಆಕಾಶದಲ್ಲಿ ಸೂರ್ಯನ ಹೊಂಗಿರಣ
ಹರಡಿ ಕೆರೆಯ ನೀರು ಗಾಳಿಯಲೆಗೆ
ಪುಳಕಗೊಂಡು, ಅಲ್ಲೇ ಮರದ
ಮರೆಯಲ್ಲಿ ಹೆಸರು ಗೊತ್ತಿರದ ಹಕ್ಕಿಯೊಂದು ಹಾಡಿ...

ಅಷ್ಟರಲ್ಲಿ ನೀನು ಕರೆದೆ
ನನಗೆ ರಾತ್ರಿಯ ದುಃಖ ನೆನಪಾಯಿತು...
ಕಣ್ಣು ತುಂಬಿ ತುಳುಕುವುದರಲ್ಲಿತ್ತು...
ತಡೆಹಿಡಿದು
ನಿನ್ನ ಹುಟ್ಟಿದ ದಿನಕ್ಕೆ ಶುಭಾಶಯ ಹೇಳಿದೆ

ಮತ್ತೆ ಮಾತಿಲ್ಲ,
ನಿಟ್ಟುಸಿರು...

ನೀನೇನಂದುಕೊಂಡೆಯೋ ಗೊತ್ತಿಲ್ಲ,
ನಾನು ಮಾತ್ರ ಹಳೆಯ ಕಹಿ ಬದಿಗಿಟ್ಟು
ನಿನಗಿನ್ನೊಮ್ಮೆ ಮನಸಾರೆ ಹಾರೈಸಿ
ಮೇಲೆದ್ದು ಹೊರಟುಬಂದೆ...

ಇಲ್ಲ ನನಗೆ ತಿರುಗಿ ನೋಡಬೇಕೆನ್ನಿಸಲಿಲ್ಲ ನಿಜಕ್ಕೂ.

Tuesday, June 12, 2007

ಓದದೇ ಹೇಗಿರಲಿ ...

ಓದಲೇಬೇಕಾದ್ದು..

ಓದದೇ ಹೇಗಿರಲಿ ಅಂತ ನಮಗನ್ನಿಸುವಂತೆ... ಬರೆಯದೇ ಹೇಗಿರಲಿ ಅಂತ ನಮ್ಮನ್ನು ಕೇಳುತ್ತ ಬರೆಯುವ ರಶೀದರ
"ಮುಸಂಬಿ ಸುಲಿಯುವ ಸದ್ದು ಅಥವಾ ಆಹಾರ ಮತ್ತು ದೇವರು"

http://mysorepost.wordpress.com/2007/06/11/musambi-suliyuva-saddu/

ಓದದೇ ಹೇಗಿರುತ್ತೀರಿ ನೀವು?!

ಪ್ರೀತಿಯಿರಲಿ,
ಸಿಂಧು

Thursday, June 7, 2007

ಮಗುಗಳ ಮಾಣಿಕ್ಯ

ಮಳೆ ಬರುವ ಮೊದಲು ಹೋಗಿ ಮನೆ ಸೇರಿಬಿಡಬೇಕು ಎಂಬ ಧಾವಂತದಲ್ಲಿ ಕ್ಯಾಬ್ ಇಳಿದವಳು ಓಡುತ್ತ ಬಂದೆ. ಮುಖ್ಯರಸ್ತೆಯಿಂದ ನಮ್ಮನೆಗೆ ಹೋಗುವಾಗ ಒಂದು ದೊಡ್ಡ ಏರು(ಅಥ್ವಾ ಹಳ್ಳ) ಇಳಿಯಬೇಕು। ನಮ್ಮ ಮನೆಯಿರುವ ಬಡಾವಣೆ ಬೆಂಗಳೂರಿನ ಎತ್ತರದ ಗುಡ್ಡದ ಸರಹದ್ದು. ಹಾಗಾಗಿ ದಿನಾ ಆರೂವರೆಗೆ ಮನೆಗೆ ನಡೆದುಹೋಗುವಾಗ ಅಲ್ಲಿ ಪಶ್ಚಿಮದಂಚಲ್ಲಿ ಅಡಗುತ್ತಿರುವ ಕುಂಚಕೋವಿದ ಬೆಳಕಿನ ಶೂರ ಸೂರ್ಯ ಮಾಮಾ ಟಾಟಾ ಮಾಡುತ್ತಿರುತ್ತಾನೆ. ಅವನು ಆಗಷ್ಟೇ ನೀಡಿ ಹೋದ ಬೆಚ್ಚನೆ ಅಪ್ಪುಗೆಯಿಂದ ಬಾನ್ದೇವಿಯ ಪಡುವಣ ಕೆನ್ನೆ ಕೆಂಪಗೆ ಮಿರಮಿರನೆ ಮಿನುಗುತ್ತಿರುತ್ತದೆ. ದಾರಿಬದಿಯಲ್ಲಿ ಕುಳಿತಿರುವ ಹೂವಾಡಗಿತ್ತಿಯ ಬುಟ್ಟಿಯ ತುಂಬ ಆಗಷ್ಟೇ ಬಿರಿಯುತ್ತಿರುವ ಮೊಗ್ಗಿನ ಘಮ. ಸಂಜೆ ಟ್ಯೂಶನ್ನಿಗೂ ಖುಶಿಯಲ್ಲಿ ಸೈಕಲ್ ರೇಸ್ ಮಾಡಿ ಹೋಗುವ ಪುಟ್ಟ ಹುಡುಗರು. ಕಾಲೇಜಿನಿಂದ ಮನೆಗೆ ಬಂದು ಫ್ರೆಶ್ಶಾಗಿ, ಸಂಜೆ ದೇವಸ್ಥಾನಕ್ಕೆ ಹೊರಟ ಟಿಪ್ ಟಾಪ್ ಗೆಳತಿಯರು, ಅವರು ಬರುವುದನ್ನೇ ತನ್ನ ಅಂಗಡಿಯ ಕನ್ನಡಿಯಲ್ಲಿ ನೋಡುತ್ತ ಕುಳಿತ ಜುವೆಲ್ಲರಿ ಹುಡುಗ॥ ಎಲ್ಲ ನಿತ್ಯದ ಆಪ್ತ ನೋಟಗಳೆ.
ಇವತ್ತು ಕೊಂಚ ಬದಲಾವಣೆ। ಮೋಡದ ಬಿಳಿ ಅಂಚು ಕಪ್ಪು ಸೀರೆ ಹೊದ್ದ ಬಾನ್ದೇವಿ, ಮಿಂಚು ಕಣ್ಣಿನೊಡನೆ ಗುಡುಗುತ್ತಿದ್ದಳು। ಗೆಳತಿಯ ಪ್ರದರ್ಶನಕ್ಕೆ ರಂಗ ಖಾಲಿ ಮಾಡಿ ಹೋದ ಸೂರ್ಯ ಬೇಗಬೇಗನೆ ಮನೆಗೆ ಹೋಗಿಬಿಟ್ಟಿದ್ದ। ನಾನು ಮನೆ ಸೇರಿ,
ಗೇಟ್ ತೆಗೆದು ಬಾಗಿಲ ಹಿಡಿಗೆ ಕೈ ಹಾಕುವಾಗ ನೋಡಿದೆ, ಅಲ್ಲೊಂದು ಪುಟ್ಟ ನೀಲಿ ಕವರು. ಮೇಲೆ ಅಂಶುನ ಮುದ್ದಾದ ಅಕ್ಷರಗಳು. ಮನ ನವಿರೆದ್ದಿತು. ಬೇಗ ಬಾಗಿಲು ತೆರೆದು ಒಳಗೋಡಿದೆ. ಅಷ್ಟರಲ್ಲೆ ಶುರುವಾಯಿತು.. ಸೋನೆ ರಾಗ.
ಸುಧಾಂಶು ಮತ್ತು ನಾನು ಎಷ್ಟೇ ಫೋನ್, ಮೈಲ್, ಮೆಸೇಜ್ ಮಾಡಿದರೂ ವಾರದಷ್ಟು ದೂರ ಬಿಟ್ಟಿರಬೇಕಾದರೆ ಪತ್ರಿಸಿಕೊಳ್ಳುತ್ತೇವೆ। ಆ ಪತ್ರದಲ್ಲಿ ಏನುಂಟು ಏನಿಲ್ಲ. ಅವನ ತುಂಟ ಗಂಭೀರ ನಿಲುವಿನಿಂದ ಹಿಡಿದು॥ಮಗುವಿನ ಸ್ಪರ್ಶದ ಮೋಹಕತೆ.. ಅದಿರಲಿ ಬಿಡಿ ಇದು ನಮನಮಗೆ. ಬಟ್ಟೆ ಬದಲಾಯಿಸಿ, ಮಸಾಲೆ ಚಾ ಮಾಡಿಕೊಂಡು ಬಂದು ಕೂತು ನೀಲಿ ಕವರ್ರನ್ನೆತ್ತಿದೆ. ಮುಟ್ಟುತ್ತಲೂ ಮಳೆಯು ಒಳಗೇ ಸುರಿಯಿತು. ಮಿಂಚು ಹೊಳೆಯಿತು. ಇನ್ನೇನು ಬಿಡಿಸಬೇಕು ಅಷ್ಟರಲ್ಲಿ ಅದರಲ್ಲಿ ಬರೆದಿದ್ದ ಅಡ್ರೆಸ್ ನೋಡಿ ಹೈರಾಣಾಗಿ ಹೋದೆ. ದಿವ್ಯಾ ಅಂತಿರಬೇಕಾದಲ್ಲಿ ದಿವಾ ಅಂತ ಬರೆದಿತ್ತು. ಇಲ್ಲಿ ಬೆಚ್ಚಗೆ ಮನೆಯ ಉಯ್ಯಾಲೆಯಲ್ಲಿ ಕೂತ ಮನಸ್ಸು, ಅಲ್ಲಿ ಚಿಕ್ಕಪ್ಪನ ಮನೆಯಂಗಳಕ್ಕೆ ಕಾಂಪೌಂಡಿನ ಮೇಲೆ ಜೀಕಿಕೊಂಡು ಹೋಯಿತು.
ಅಲ್ಲಿ ಕಾಂಪೌಂಡ್ ಆಚೆಗಿಂದ ಓಡಿ ಬಂದ ಪುಟ್ಟ ಪೋರ ದಿವಾ. "ದಿವ್ಯಾ ಈಗ್ತಾನೆ ಬಂದ್ಯಾ? ನಾನ್ನಿಂಗೇ ಕಾಯ್ತಾ ಇದ್ದೆ. ಇವತ್ಯಾಕೆ ಹತ್ನಿಮಿಷ ಲೇಟು? ೩ಬಿ ಸಿಗ್ಲಿಲ್ವಾ? ಬಂದೆ ಇರು. ಅಮ್ಮಮ್ಮ ಹಾಲ್ಕೊಡ್ತಾರೆ ಬೇಗ ಕುಡಿದ್ಬಿಡು. ಶಕ್ತಿ ಬರತ್ತೆ, ಆಮೇಲೆ ನಾನೂ ನೀನೂ ಮೇಲ್ಗಡೆ ಹೋಗಿ.... " ಮಾತು ನಿಲ್ಲುವುದೇ ಇಲ್ಲ. ಒಂದು ರಾಗದ ಬೆನ್ನ ಹಿಂದೆ ಇನ್ನೊಂದು ರಾಗದ ಕಛೇರಿಯೊಂದರ ಪೂರ್ಣ ಅನುಭವ. ಇವನಿಗೆ ಇನ್ನೂ ನಾಲ್ಕು ವರ್ಷ. ನನ್ನ ಪುಟ್ಟ ಗೆಳೆಯನೀತ ದಿವಾಕರ. ಮಕ್ಕಳ ಎಂದಿನ ಚೆಲುವಿಗೊಂದು ಮುಗ್ಧ ತುಂಟತನದ ಪ್ರಭಾವಳಿ, ಮಾತಿನ ಮುತ್ತು ಹಾರ ಹಾಕಿಬಿಟ್ಟರೆ ಅದೇ ದಿವಾ. ಇವನು ನಮ್ಮ ಪಕ್ಕದ ಮನೆಯ ಜಾನಕಿ ಆಂಟಿಯ ಪುಟ್ಟ ಮಗ.
ಸರಿ, ನಾನು ಮನೆಯೊಳಗೆ ಹೋಗಿ ಕಾಲುತೊಳೆದು ತಿಂಡಿ ತಿಂದು, ಹಾಲು ಕುಡಿದು, ಮೇಲಿನ ಮೆತ್ತಲ್ಲಿರುವ ನನ್ನ ರೂಮಿಗೆ ಹೋಗುವವರೆಗೂ ದಿವಾ ಅಲ್ಲೆ, ಅಡಿಗೆ ಮನೆಯ ಬಾಗಿಲಲ್ಲಿಟ್ಟ ಪುಟ್ಟ ಸ್ಟೂಲಲ್ಲಿ.. ಏನೋ ಹೇಳಲು ಹೊರಡುತ್ತಾನೆ, ಓ ಬೇಡ, ನೀನು ತಿಂಡಿ ತಿನ್ನು ಆಮೇಲೆ ಮಾತಾಡೋಣ ಅಂತ ದೊಡ್ಡವನ ಹಾಗೆ ಹೇಳಿ, ಹಾಲಲ್ಲಿ ಕುಳಿತ ಅಮ್ಮಮ್ಮನ ಹತ್ತಿರ ಹೋಗುತ್ತಾನೆ. ಅಮ್ಮಮ್ಮ ಕಾಫಿ ಕುಡಿದ್ರಾ ನೀವು ಅಂತ.. ಜಾನಕಿ ಆಂಟಿಗೆ ಬ್ಯಾಂಕಲ್ಲಿ ಕೆಲಸ. ಅವರು ನಮ್ಮ ಇನ್ನೊಂದು ಪಕ್ಕದ ಮನೆಯಲ್ಲಿ ಆಂಟಿಯೊಬ್ಬರು ನಡೆಸುವ ಪ್ಲೇ ಹೋಮಲ್ಲಿ ಇವನನ್ನು ಬಿಟ್ಟು ಹೋಗಿರುತ್ತಾರೆ ಸಂಜೆಯವರೆಗೆ. ದಿವಾ ಬೀದಿಯ ಎಲ್ಲರಿಗೂ ಗೆಳೆಯ. ನನ್ನ ಅಮ್ಮಮ್ಮ, ಎದುರು ಮನೆಯ ತಾತ, ಮೂಲೆ ಮನೆಯ ಸುಲೂ ಆಂಟಿ, ಹಿಂದಿನ ಬೀದಿಯ ರಕ್ಷಾ, ಆಚೆ ಮನೆಯ ಸೀಮಾ-ವರುಣ್.. ಹೀಗೆ ಎಲ್ಲರೂ.. ಬೆಳಿಗ್ಗೆ ಅಮ್ಮಮ್ಮ ಯಾವುದೋ ಟೀವಿ ಸೀರಿಯಲ್ ನೋಡ್ತಾ ಇದ್ದರೆ, ನುಗ್ಗಿ ಬರುವ ಪೋರ ಕೇಳುತ್ತಾನೆ. ಅಮ್ಮಮ್ಮ ಎಲ್ರೂ ಹೋದ್ರಾ? ಆಫೀಸಿಗೆ, ಕಾಲೇಜಿಗೆ..? ಹೌದು ಅಂತ ಅಮ್ಮಮ್ಮ ಹೇಳಿಮುಗಿಸುವಷ್ಟರಲ್ಲಿ ಅಪ್ಪಣೆಯಾಗುತ್ತದೆ. ನೀವ್ಯಾಕೆ ಆ ಟೀವಿ ನೋಡ್ತಿರ್ತೀರ..ಆಫ್ ಮಾಡಿ, ಸ್ವಲ್ಪ ಹೊತ್ತು ಕೂತ್ಕೊಂಡು ಮಾತಾಡೋಣ.. ಅಂತ.. ಅಮ್ಮಮ್ಮನಿಗೆ ನಗು.. ಅಜ್ಜನೂ ಮಾಡಿರದ ಅಪ್ಪಣೆಯನ್ನು ಈ ಮರಿರಾಕ್ಷಸ ಮಾಡುತ್ತಾನಲ್ಲಾ ಅಂತ. ಅಮ್ಮಮ್ಮ ಅವನನ್ನು ಕರೆಯುವುದೇ ಕೂಗಿಲೇಶ್ವರ ಅಂತ.. :)
ಯಾವಾಗಾದ್ರೂ ಭಾನುವಾರ ನಾನು ಅಡಿಗೆ ಮನೆ ಚಾರ್ಜ್ ತಗೊಂಡಿರುತ್ತೇನೆ. ಅವರ ಮನೆಯ ಅಡಿಗೆಮನೆ ಕಿಟಕಿ ನಮ್ಮನೆಯ ಕಿಟಕಿಯ ನೇರಕ್ಕೇ ಬರುತ್ತದೆ. ಅವನು ಅಲ್ಲಿ ಕೂತಿರುತ್ತಾನೆ ಅಡಿಗೆ ಕಟ್ಟೆಯ ಮೇಲೆ.. ನನ್ನ ಮುಖ ಕಿಟಕಿಯಲ್ಲಿ ಕಂಡ ಕೂಡಲೆ ಕೂಗು.. ದಿವ್ಯಾ.. ಬಾ ಸ್ವಲ್ಪ ಹೊರಗಡೆ, ಇಲ್ಲಿ ಕಟ್ಟೆ ಮೇಲೆ ಕಾಲು ಚಾಚಿ ಹಾಯಾಗಿ ಕೂತು ಮಾತಾಡ್ಕೋಬಹ್ದು, ಎಷ್ಟೂಂತ ಕೆಲ್ಸ ಮಾಡ್ತೀಯ? ಆಂ.. ಪಾಯಸಾನಾ.. ನಂಗು ಬೇಕಲ್ಲ ಸ್ವಲ್ಪ..
ಅವ್ನ ಮಾತು ಕೇಳಿದರೆ ಯಾವುದೋ ಹಳೇ ಅಜ್ಜಿ ಮಾತಾಡಿದಂಗೆ ಇರುತ್ತದೆ.
ನಮ್ಮನೆಯಲಿ ಎಲ್ಲರಿಗೂ ಅಚ್ಚು ಮೆಚ್ಚು ಇವನು. ಅವನಿಗೆ ನನ್ನ ಬಗ್ಗೆ ಇರುವ ಇಷ್ಟದ ಬಗ್ಗೆ ಎಲ್ಲರಿಗೂ ಗೊತ್ತು. ಅದಕ್ಕೇ ಅವನ ಕಾಲೆಳೆಯುತ್ತಿರುತ್ತಾರೆ. ಅಮ್ಮಮ್ಮ ಅವನಿಗೆ ಬಯ್ದು ಏನ್ ದಿವಾ ನೀನು, ದಿವ್ಯಾ ನಿನಗಿಂತ ಎಷ್ಟು ದೊಡ್ಡವಳು, ಹೆಸರು ಹಿಡಿದು ಕರೀತೀಯಲ್ಲ, ಅಕ್ಕ ಅಂತನ್ನು ಅನ್ನುತ್ತಿರುತ್ತಾರ್‍ಎ. ಅವನದ್ದು ಈ ಅಜ್ಜಿಗೆ ಏನೂ ಗೊತ್ತಾಗೋದೆ ಇಲ್ಲ ಅನ್ನುವ ದಿವ್ಯ ನಿರ್ಲಕ್ಷ್ಯದ ಚುಟುಕು ಉತ್ತರ. "ಏನಮ್ಮಮ್ಮಾ ನೀವು - ದಿವ್ಯಾ ನಾನು ಫ್ರೆಂಡ್ಸ್."
ಚಿಕ್ಕಪ್ಪ ತಮಾಷೆ ಮಾಡುತ್ತಾರೆ. ಏನೋ ದಿವಾ ನೀನು, ದಿವ್ಯಾಂಗೂ ನಿಂಗೂ ಒಂದೇ ಅಕ್ಷರ ವ್ಯತ್ಯಾಸ. ಒಂದು 'ಯ' ಒತ್ತು ಕೊಟ್ ಬಿಟ್ರೆ ನೀನೂ ದಿವ್ಯಾ ಆಗ್ಬಿಡ್ತೀಯ ಅಂತ. ನಮ್ ಪುಟ್ಟಂಗೋ ಗಾಬರಿ. ಅವನಿಗೆ ಇನ್ನೂ ಒತ್ತಿನ ವ್ಯಾಕರಣ ಗೊತ್ತಿಲ್ಲ. ಬೇಡ ಬೇಡಾ ನಂಗೇನೂ ಒತ್ ಹಾಕಬೇಡಿ. ಅಂತ ಅಳುಮುಖ. ಚಿಕ್ಕಪ್ಪ ಬಿಡುವುದಿಲ್ಲ. ಹೋಗಲಿ ಬಿಡು, ದಿವ್ಯನ 'ಯ' ಒತ್ತು ತೆಗೆದು ಹಾಕಿಬಿಡುತ್ತೇನೆ, ಅವಳೇ ದಿವಾ ಆಗ್ ಬಿಡುತ್ತಾಳೆ ಅಂತಂದ್ರೆ, ಮತ್ತೂ ಗಾಬ್ರಿ, ಬೇಡಾ ಬೇಡಾ ದಿವ್ಯಂಗೆ ಏನೂ ಮಾಡ್ ಬೇಡಿ ಅಂತ ಕಳಕಳಿ.
ದಿನಾ ನಾನು ಕಾಲೇಜಿನಿಂದ ಬಂದು ಮೇಲೆ ರೂಮಿಗೆ ಹೋದ ಕೂಡಲೆ ನನ್ನ ಹಿಂದೆ ಹಿಂದೆಯೇ ಈ ಪುಟ್ಟ ಕಿನ್ನರನ ತುಂಟ ಹೆಜ್ಜೆ. ನನ್ನ ಎಲ್ಲ ಚಟುವಟಿಕೆಗಳನ್ನೂ ನೆಟ್ಟ ಕಣ್ಣಿನಿಂದ ಗಮನಿಸುವ ಈ ಪೋರನಿಗೆ ನಾನೆಂದ್ರೆ ತುಂಬ ಪ್ರೀತಿ. ಯಾವ ಜನ್ಮದ ಪುಣ್ಯಫಲವೋ ಗೊತ್ತಿಲ್ಲ. ಅಷ್ಟು ಸವಿ. ಮೇಲೆ ಮೆತ್ತಿನಲ್ಲಿ ನಮ್ಮನೆಯಲ್ಲಿ ಒಂದು ಪುಟ್ಟ ಜೋಕಾಲಿ. ಒಬ್ಬರೇ ಕೂತು ತೂಗಿಕೊಳ್ಳಬಹುದು.ದಿವಾಗೆ ಅದೆಂದರೆ ತುಂಬ ಇಷ್ಟ. ಆದ್ರೆ ಒಬ್ಬನೇ ಕೂತುಕೊಳ್ಳಲು ಹೆದರಿಕೆ. ಹಾಗಾಗಿ ನಾನೇ ಕೂತು, ಅವನನ್ನು ಮಂಗನ ಮರಿಯ ಹಾಗೆ ಅವುಚಿಕೊಂಡು ತೂಗಿಕೊಳ್ಳಬೇಕು. ಆಗ ಅವನಿಗೆ ಇಷ್ಟವಾಗುವ ಕಳ್ಳನ ಹಾಡು ಬೇರೆ ಹೇಳಬೇಕು.
ಹೀಗೆ ಒಂದು ಹಳ್ಳಿ, ಅಲ್ಲೊಬ್ಬಾನೊಬ್ಬ ಕಳ್ಳ॥ ಬೆಳ್ಳಿ ಕಳ್ಳ ಅಂತಾ ಬಿರುದು, ಎಲ್ಲಾ ಕದಿಯೋನಲ್ಲ॥
ಕತ್ತಲು ಕವಿದ ಕಟ್ಟಮವಾಸ್ಯೆ ಇನ್ನೊಂದೂರಿಗೆ ಬಂದ॥
ಆರಂಕಣದ ಮನೆಯನ್ನಾರಿಸಿ ಕನ್ನವ ಕೊರೆದೊಳಬಂದ..
ಕನ್ನ ಕೊರೆದು ಒಳ ಹೋಗುವ ಕಳ್ಳನಿಗೆ ಚಂದದ ಹುಡುಗಿ ಮಲಗಿದ ಕೋಣೆ ಸಿಗುತ್ತದೆ.ಅವಳ ಕಾಲಲ್ಲಿ ಹೊಳೆವ ಬೆಳ್ಳಿಗೆಜ್ಜೆ. ಅಲ್ಲಿ ತೋಳು ಮಡಚಿ ಮಲಗಿದ ಚಂದದ ಹುಡುಗಿಯ ಮುಖ ಮಂಡಲದ ಮೇಲೆ ರೂಮಿನಲ್ಲಿರುವ ಕಾಲುದೀಪದ ಮಬ್ಬು ಬೆಳಕು. ಕಳ್ಳ ಮೈ ಮರೆಯುತ್ತಾನೆ. ಗೆಜ್ಜೆ ಕದಿಯಲಾಗದೆ ಹಾಗೆ ವಾಪಸಾಗುತ್ತಾನೆ.

ನೋಡುತ್ತಾನೆ ಕನ್ನಡಿಯಲ್ಲಿ
ಎದೆಯಲ್ಲೊಂದು ಕನ್ನ
ಕಾಣುತ್ತಿಲ್ಲ ಕಳ್ಳನ ಹೃದಯ
ಕದ್ದವರಾರು ಅದನ್ನ
ಕದ್ದವರಾರು ಅದನ್ನ...?!

(ಬಹುಶ: ಹೆಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ, ನನಗೆ ಸರಿಯಾಗಿ ನೆನಪಿಲ್ಲ)
ನಮ್ಮ ಮಗುವೋ.. ನಾನು ಅದನ್ನು ಒಂದೇ ಸುತ್ತಿಗೆ ರಾಗವಾಗಿ ಹೇಳಿ ಮುಗಿಸುವಂತಿಲ್ಲ.. ಕತ್ತಲು ಕವಿದ ಕಟ್ಟಮವಾಸ್ಯೆ..ಅಂತ ಒಂದು ಪಾಸ್ ಕೊಡಬೇಕು.. ತುಂಬಾ ಕತ್ಲೇನಾ ದಿವ್ಯಾ, ಕಣ್ಣೇ ಕಾಣೋಲ್ವ..? ಕನ್ನ ಹ್ಯಾಗಿತ್ತೂ? ಗುಂಡಕೆ ಕೊರೆದಿದ್ನಾ.. ಹೀಗೆ ಅಲ್ಲಲ್ಲಿ ಪ್ರಶ್ನೆಗಳ ಪಕ್ಕವಾದ್ಯ ಮತ್ತು ನನ್ನ ಅಸಂಗತ ಉತ್ತರಗಳ ತಾಳದೊಂದಿಗೆ ಹಾಡು-ಕತೆ ಮುಂದುವರೆಯುತ್ತಿತ್ತು. ಕೊನೆಯಲ್ಲಿ ಕದ್ದವರಾರು ಅದನ್ನ ಹೇಳಿದಕೂಡಲೆ ನಮ್ಮ ಪುಟ್ಟನಿಗೆ ಫುಲ್ ಖುಶಿ. ನಂಗೆ ಗೊತ್ತು ಯಾರು ಅಂತ.. ಆ ಚಂದದ ಹುಡುಗಿ ಅಲ್ವಾ? ನಂಗೂ ಖುಶಿ ಆ ರಮ್ಯ ಕಲ್ಪನೆಯ ಲೋಕಕ್ಕೆ ಹೋಗಿ.
ಸರಿ ನನ್ನ ಕತೆ ಮುಗಿದ ಮೇಲೆ ಆಟ ಮುಗಿಯಿತೋ ಇಲ್ಲ. ಈಗ ಅವನ ಕತೆ. ಅದ್ಯಾವುದೋ ಫಲೂಡ ಹೆಸರಿನ ಕುದುರೆಯ ಕತೆ. ಕತೆ ಹೇಳಿ ಮುಗಿಸಿ.. ನಂಗೆ ಹೇಳುತ್ತಾನೆ. ನಾನು ದೊಡ್ಡವನಾದ ಮೇಲೆ ಇನ್ಸಪೆಕ್ಟರಾಗುತ್ತೀನಿ ಅಂತ. ಅದೂ ಯಾವ ತರಹ. ಫಲೂಡ ಅನ್ನೋ ಶಕ್ತಿಶಾಲಿ ಕುದುರೆಯ ಮೇಲೆ ಓಡಾಡುವ, ವಿಲನ್ ಗಳನ್ನೆಲ್ಲ ಹಿಡಿದು ಚಚ್ಚಿ ಬಿಡುವ, ಒಳ್ಳೆಯ ಇನ್ಸ್ ಪೆಕ್ಟರ್. ಆಮೇಲೆ ನಿಧಾನವಾಗಿ ನನ್ನ ಕೆನ್ನೆಗೆ ಅವನ ಕೆನ್ನೆ ತಾಗಿಸಿ ಹೇಳುತ್ತಾನೆ. ನನ್ ಕುದುರೆ ಮೇಲೆ ನಾನು ಯಾರನ್ನೂ ಕೂರಿಸೋದಿಲ್ಲ. ಒಬ್ಳೇ ಒಬ್ಳು ಮಾತ್ರ ಬರೋದು. ಅದು ನೀನು.. ನಂಗೆ ಜಂಭವಾಯಿತು. ಆದ್ರೂ ಕೇಳ್ದೆ. ಏನಪ್ಪಾ ನಂದು ಸ್ಪೆಶಲ್? ಅವನು ಹೇಳಿದ ಉತ್ತರ ನಾನೆಂದೂ ಮರೆಯುವಂತೆಯೇ ಇಲ್ಲ. ನೀನು ನನ್ನ ತುಂಬಾ ಪ್ರೀತಿ ಮಾಡ್ತೀಯಲ್ವಾ ದಿವ್ಯಾ, ನಾನು ಯಾವಾಗ ಕೇಳಿದರೂ ಆಡಕ್ಕೆ ಬರ್ತೀಯ, ಕತೆ ಹೇಳ್ತೀಯ, ಜೋಕಾಲಿ ತೂಗಿ ಹಾಡು ಹೇಳ್ತೀಯ, ಕಾಲೇಜಿಂದ ಬಂದು ಸುಸ್ತಾಗಿದ್ರೂ ಅಮ್ಮನ ತರ ಬಯ್ಯದೆ, ನನ್ನ ಎತ್ ಕೊಳ್ತೀಯ. ನಗಿಸ್ತೀಯ.. ಆಮೇಲೆ ಆಮೇಲೆ ನೀನ್ಯಾವತ್ತೂ ಅಪ್ಪನ ವಿಶ್ಯ ಮಾತಾಡೋದೆ ಇಲ್ಲ.. - ರೆಪ್ಪೆ ಕೆಳಗಾಗಿ ಕಣ್ಣು ನೆಲನೋಡತೊಡಗಿದವು ಈಗ - ನಾನು ಹಾರುತ್ತಿದ್ದ ಜಂಭದ ವಿಮಾನದಿಂದ ದೊಪ್ಪನೆ ಕೆಳಕ್ಕೆ ಬಿದ್ದೆ. ಈ ಪುಟ್ಟ ಜೀವದ ನಲಿವಿನಲ್ಲಿ, ಬೇಸರದಲ್ಲಿ ನನಗೇ ಗೊತ್ತಿಲ್ಲದೆ ಎಷ್ಟೊಂದು ಬೆಸೆದುಕೊಂಡಿದ್ದೇನೆ. ಮತ್ತು ಅದಕ್ಕೆ ನನಗೆ ಅವನ ಸ್ಪಂದನೆಯೇನು.. ಅವನು ಆ ಕ್ಷಣದಲ್ಲಿ ತಿಳಿದಿದ್ದ ಅತಿ ದೊಡ್ಡ ಫ್ಯಾಂಟಸಿಯಲ್ಲಿ ನನಗೂ ಜಾಗ. ಅವನ ವಿಶಾಲತೆಯ ಮುಂದೆ ನನ್ನ ಜಂಭದ ಬಲೂನಿನ ಗಾಳಿ ಹೋಗಿಬಿಟ್ಟಿತು. ಥ್ಯಾಂಕ್ಸ್ ದಿವಾ. ಬಾ ಈಗ ಚಿತ್ರ ತೋರಿಸಿ ಕಥೆ ಹೇಳ್ತೀನಿ ಅಂತ ಆಚೆ ಕಡೆ ಕರೆದುಕೊಂಡು ಹೋದೆ.
ಹೌದು ಈ ತುಂಟ ಮಾತುಗಾರ ಪುಟಾಣಿಯ ಬದುಕು ಒಂದು ನೋವಿನ ಕೋಶ. ಅವನ ಅಪ್ಪ ಅಮ್ಮ, ಹೊಂದಿಸಲಾಗದ ಭಿನ್ನತೆಯಿಂದಾಗಿ ವರ್ಷದ ಹಿಂದೆ ಬೇರೆಯಾಗಿಬಿಟ್ಟರು. ಅಮ್ಮ ಆಫೀಸಿಗೆ ಹೋದಾಗ ಯಾವಾಗಲೋ ಅಪ್ಪ ಬಂದು ನರ್ಸರಿಯಲ್ಲಿ ನೋಡಿ ಮಾತಾಡಿಸಿ ಹೋಗುತ್ತಾರೆ. ಬೀದಿಯ ಎಲ್ಲರೂ ಜಾನಕಿ ಆಂಟಿಯ ಅಕ್ಕನಾಗಿ, ಅಮ್ಮನಾಗಿ, ಗೆಳತಿಯರಾಗಿ ಕಾದುಕೊಂಡಿದ್ದಾರೆ. ಅವರನ್ನು ನೋಯಿಸುವುದಿಲ್ಲ. ಆದರೆ ಕುತೂಹಲವನ್ನ ಅಡಗಿಸಿಡಲಾಗುವುದಿಲ್ಲ. ಅದಕ್ಕೆ ಸುಲಭವಾಗಿ ಸಿಗುವುದು ಈ ಪುಟ್ಟ ದಿವಾ. ಅವನ ಹತ್ತಿರ ಏನಾದ್ರೂ ಕೇಳುತ್ತಿರುತ್ತಾರೆ. ವಿಷಯದ ಪೂರ್ಣ ಅರಿವಿಲ್ಲದೆಯೂ ಅವನಿಗೆ ಗೊತ್ತು ಇದು ಏನೋ ಬೇರೆ ತರ ಅಂತ. ಇಷ್ಟವಾಗುವುದಿಲ್ಲ. ಆದರೆ ದೊಡ್ಡವರ ಚಾಲಾಕಿತನದ ಪ್ರಶ್ನೆಗಳನ್ನ ತಪ್ಪಿಸಿಕೊಳ್ಳಲಾಗದ ಮೂಕ ಮುಗ್ಧತೆ.
ಅವತ್ತೊಂದಿನ ಇಬ್ಬರೂ ವಾಕಿಂಗ್ ಹೋದಾಗ ಜಾನಕಿ ಆಂಟಿ ಅತ್ತು ಬಿಟ್ಟಿದ್ದರು. ದಿನಾ ಸಂಜೆ ಅವರು ಮನೆಗೆ ಬಂದ ಮೇಲೆ ಇವನ ಕೈಕಾಲು ತೊಳೆಸಿ ದೇವರಿಗೆ ನಮಸ್ಕಾರ ಮಾಡಿಸುತ್ತಾರೆ. ಅಲ್ಲಿ ನಮ್ಮ ಈ ಪುಟ್ಟ ಕೇಳಿಕೊಳ್ಳೋದು ಏನು ಗೊತ್ತಾ? - ದೇವರೇ ಹ್ಯಾಗಾದ್ರೂ ಮಾಡಿ ನಮ್ಮಪ್ಪ ಅಮ್ಮ ಒಟ್ಟಿಗಿರಲಿ - ಅಂತ. ಆಂಟಿ ಅನ್ನಲಾರರು ಅನುಭವಿಸಲಾರರು.
ಈಗ ಕೆಲದಿನಗಳಿಂದ ದಿವಾ ಎಲ್.ಕೆ.ಜಿ ಸೇರಿದ. ಅಲ್ಲಿ ನಮ್ಮ ಹಿಂದಿನ ಬೀದಿಯ ಪುಟ್ಟ ರಕ್ಷಾ ಕೂಡ ಬರುತ್ತಾಳೆ. ಮೊನ್ನೆ ಭಾನುವಾರ ತಂಗಿ ಸುಷು ಕೇಳಿದಳು - ಏನ್ ದಿವಾ, ರಕ್ಷಾನ್ನ ಫ್ರೆಂಡ್ ಮಾಡಿಕೊಂಡ್ಯಾ ಅಂತ? - ಇವನಿಗೆ ಸಿಟ್ಟು - ಏ ಹೋಗು, ಮುಂಚೆ ಎಲ್ಲ ಎಷ್ಟು ಚೆನ್ನಾಗಿದ್ಳು. ನಾನ್ ರೋಪ್ ಹಾಕಿದ್ರೆ ಸುಮ್ನೆ ಇರ್ತ ಇದ್ಳು. ಈಚೀಚೆಗೆ ನಾನ್ ರೋಪ್ ಹಾಕಿದ್ರೆ ನಂಗೇ ತಿರುಗಿ ರೋಪ್ ಹಾಕ್ತಾಳೆ. ಸರೀಗಿಲ್ಲ ಅವ್ಳು. - ನಮಗೆಲ್ಲ ತಡೆಯಲಾರದ ನಗು.
ಹೀಗೇ ಮುನ್ನಡೆದ ದಿನಗಳ ಹಾದಿಯಲ್ಲಿ ನಾನು ಹೆಚ್ಚಿನ ಓದು, ಆಫೀಸ್, ಕೆಲಸ, ಮದುವೆ ಅಂತ ಬೇರೆ ಕಡೆ ಬಂದೆ. ಅಷ್ಟರಲ್ಲಿ ದಿವಾ ಮತ್ತು ಅವನಮ್ಮ ಬೇರೆ ಏರಿಯಾಗೆ ಹೋಗಿಬಿಟ್ಟಿದ್ದರು. ಅವನು ಮತ್ತೆ ಸಿಗಲಿಲ್ಲ.
ಈಗ ಗಂಡ ತಪ್ಪಾಗಿ ಬರೆದ ವಿಳಾಸದ ದಿವಾ ನನ್ನನ್ನು ಅವನ ಮುದ್ದು ನೆನಪಿನ ಹೊಳೆಯಲ್ಲಿ ತೇಲಿಸಿತು. ಅವನನ್ನು ನೋಡಲೇ ಬೇಕೆನ್ನಿಸಿ ಮನಸು ಉದಾಸವಾಯಿತು. ಉದಾಸವಾಗೆ ಕವರ್ ಬಿಚ್ಚಿದೆ. ಅದರಲ್ಲಿ ಅಂಶುವಿನ ಚಂದಸಾಲುಗಳ ಪ್ರೀತಿ ಒಕ್ಕಣೆಗಳ ಜೊತೆ ಪುಟ್ಟ ಮಗಳು ೧೧ ವರ್ಷದ ಸನ್ಮತಿಯ ಮುದ್ದು ಬರಹ.. ಅಪ್ಪ-ಮಗಳು ಇಬ್ಬರೂ ೮-೧೦ ದಿನದ ಮಟ್ಟಿಗೆ ಶಿರಸಿಯಲ್ಲಿ ಅಜ್ಜನ ಮನೆಗೆ ಹೋಗಿದ್ದರು. ನಾನು ಆಫೀಸಿನಲ್ಲಿ ಕೂತು ಮಾಡಿಸಲೇ ಬೇಕಿದ್ದ ಕೆಲಸವಿದ್ದಿದ್ದರಿಂದ ಹೋಗಲಾಗಿರಲಿಲ್ಲ. ಅವರಿಲ್ಲದೆ ಬೇಸರದ ದಿನಗಳನ್ನು ಹಾಡು-ಪುಸ್ತಕಗಳಲ್ಲಿ ಕಳೆಯುತ್ತಿದ್ದೇನೆ. ಆಗಲೆ ೮ ದಿನಗಳಾದವು.. ಇನ್ನೇನು ಈ ವಾರದ ಕೊನೆಗೆ ಬಂದು ಬಿಡುತ್ತಾರೆ. ಅಡಿಗೆ ಮಾಡಬೇಕಿತ್ತು. ಕುಕ್ಕರ್ ಜೋಡಿಸುವಾಗ ಮತ್ತೆ ದಿವಾನ ನೆನಪಿನ ದಾಳಿ.. ಕುಕ್ಕರ್ ಕೂಗುವಾಗ, ತಾನೂ ನಿಂತು ವೀ.... ಅಂತ ಕೂಗುತ್ತಿದ್ದ ಅವನ ದನಿ ಅಲೆಯಾಗಿ ಬಂತು. ಹೇಗೆ ನೋಡಲಿ ಏನು ಮಾಡಲಿ ಗೊತ್ತಾಗಲಿಲ್ಲ. ಚಿಕ್ಕಪ್ಪನ ಮನೆಗೆ ಫೋನ್ ಮಾಡಿ, ತಂಗಿ ಸುಷುನ ಕೇಳಿದೆ. ಅವಳು ನಕ್ಕು ಬಿಟ್ಟಳು ಏನ್ ಅಕ್ಕಾ ನೀನು.. ೧೮ ವರ್ಷಗಳ ನಂತರ.. ನಿನಗೇ ಆ ಪುಟ್ಟ ದಿವಾನಿಗಿಂತಲೂ ದೊಡ್ಡ ಮಗಳಿದ್ದಾಳೆ.. ಅವನೆಲ್ಲಿದಾನೋ ಈಗ.. ನಿನ್ನ ಮದ್ವೆಯಾದ ಒಂದೆರಡು ವರ್ಷ ಆಚೆ ಕಾಲೊನಿಯಲ್ಲಿದ್ದ, ನಾನು ಟ್ಯೂಷನ್ ಹೋಗುವಾಗ ಸಿಗ್ತಿದ್ದ. ಓಡ್ ಬಂದು ದಿವ್ಯಾ ಬರ್ತಾಳಾ ಹೇಗಿದಾಳೆ ಅಂತ ಕೇಳ್ತಿದ್ದ ಅಷ್ಟೇ... ಆಮೇಲೆ ನೋಡೆ ಇಲ್ಲ ಅಂದಳು.
ಹೇಗೋ ಅನ್ನ ಮೊಸರು ಊಟ ಮಾಡಿ, ಮಲಗಲು ಹೋದೆ. ಮೊನ್ನೆ ತಂದಿಟ್ಟುಕೊಂಡ ಹೊಸ ಪುಸ್ತಕಗಳನ್ನ ಬಿಡಿಸಲೂ ಮನಸಾಗಲಿಲ್ಲ. ಹಳೆಯ ಸಿ.ಡಿ.ಗಳಲ್ಲಿ ಹುಡುಕಿ ಡಿ.ಡಿ.ಎಲ್.ಜೆ ಯ ಹಾಡು ಹಾಕಿದೆ. ಅದು ದಿವಾನ ಅಚ್ಚುಮೆಚ್ಚಿನ ಹಾಡು.. ಝರಾ ಸಾ ಝೂಮುಲೂಮೆ..ರಿಪೀಟ್ ಮೋಡಲ್ಲಿ ಹಾಕಿ ಸುಮ್ಮನೆ ಮಲಗಿದೆ. ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ. ಎಚ್ಚರಾದಾಗ ಚುಮುಚುಮು ಬೆಳಗು. ದೋಸೆಗೆ ಬೆಲ್ಲ ಹಚ್ಚುವಾಗ ನೆನಪಾಯಿತು. ದಿವಾನಿಗೆ ಸಿಹಿ ಎಂದರೆ ತುಂಬ ಇಷ್ಟ. ಎಷ್ಟೆಂದರೆ ಏನೂ ಇಲ್ಲವಾದರೆ ಬೆಲ್ಲವಾದರೂ ಚೂರು ಬೇಕು. ಅಡಿಗೆ ಮನೆಗೆ ಬಂದು ಏನಾದ್ರು ಇದ್ಯಾ ಇವತ್ತು ಅಂತ ನಮ್ಮನ್ನು ಕೇಳುತ್ತಿದ್ದ. ಇಲ್ವಲ್ಲ ಅಂದರೆ, ಹೋಗ್ಲಿ ಚೂರು ಬೆಲ್ಲಮ್ ಕೊಟ್ಬಿಡಿ.. ಅಂತ ಅವನ ತೆಲುಗು ಪ್ರೇಷಿತ ಕನ್ನಡ.. ಹೇಗೋ ತಯಾರ್‍ಆಗಿ ಆಫೀಸಿಗೆ ಹೋದೆ. ಕೈ ತುಂಬ ಕೆಲಸ. ಕ್ಯೂಬಲ್ಲೆ ಕೂತು ಸಹೋದ್ಯೋಗಿಯೊಡನೆ ಕೋಡ್ ಕುಟ್ಟುತ್ತಾ, ಏನೋ ತರಿಸಿಕೊಂಡು ತಿಂದೆ. ಸಂಜೆ ಮನೆಗೆ ವಾಪಸಾಗುವಾಗ ದಿವಾನ ನೆನಪಿನ ಮಳೆ. ಅವನೊಡನೆ ಕಳೆದ ತುಂಟ ಕ್ಷಣಗಳ ಮಿಂಚು ಮಿಂಚಿದ್ದರೂ ಯಾಕೋ ಅವನನ್ನು ನೋಡಲೇಬೇಕೆಂಬ ತೂಫಾನೀ ಆಸೆ. ನಿಧಾನವಾಗಿ ನಡೆದು ಮನೆ ಸೇರಿದೆ. ಸುತ್ತಲ ಸಂಗತಿಗಳು ಲಕ್ಷಕ್ಕೇ ಬರಲಿಲ್ಲ. ಸೇರುವಷ್ಟರಲ್ಲಿ ಮಳೆಯೂ ಸುರಿಯಿತು. ಒಳಗೆ ಸೇರಿದಾಗ ಚಾ ಬೇಕೆನ್ನಿಸಲಿಲ್ಲ. ಸೂನಾ ಸೂನಾ ಮನಸ್ಸಿನಲ್ಲಿ ಬಟ್ಟೆ ಬದಲಾಯಿಸಬೇಕೆನ್ನಿಸದೆ ಸುಮ್ಮನೆ ಬಿದ್ದುಕೊಂಡೆ. ಕೆಲಸದ ಒತ್ತಡ ರಿಲೀಸ್ ಆಗಿದ್ದರಿಂದ ನಿದ್ದೆ ಬಂದು ಬಿಟ್ಟಿತು. ಎದ್ದಾಗ ಗಂಟೆ ಹತ್ತಾಗಿತ್ತು. ತಲೆ ತುಂಬ ನೋಯುತ್ತಿತ್ತು. ಒಂದು ಲೋಟ ಹಾಲಿನೊಡನೆ, ಮಾತ್ರೆ ನುಂಗಿ ಮಲಗಿಬಿಟ್ಟೆ. ಅಂಶು ಫೋನ್ ಮಾಡಿದಾಗ ಏನೋ ಹಾಂ ಹೂಂ ಅಂತ ಮಾತಾಡಿ ಮಲಗಿಬಿಟ್ಟೆ.
ಮರುದಿನ ಏನೋ ರಗಳೆ. ತಲೆನೋವು ಹೋಗಿರಲಿಲ್ಲ. ನೆಗಡಿ ಬೇರೆ ಆಗಿಬಿಟ್ಟಿತ್ತು. ತುಂಬ ಕೆಲಸವಿದ್ದಿದ್ದರಿಂದ ಆಫೀಸಿಗೆ ಹೋಗಿ ಹೇಗೋ ಕೆಲಸ ಮುಗಿಸಿ ಮನೆಗೆ ಬಂದೆ.. ಬಂದು ನೋಡಿದರೆ, ಅರೆ ಬಾಗಿಲು ತೆರೆದಿದೆ. ಅಪ್ಪ ಮಗಳಿಬ್ಬರೂ ಕಾಯುತ್ತ ಕೂತಿದ್ದರು. ನನಗೂ ಒಂದು ಅನುಮಾನವಿತ್ತು. ನಿನ್ನೆ ರಾತ್ರಿ ಸರಿಯಾಗಿ ಮಾತಾಡಲಿಲ್ಲ ಅನ್ನುವ ಅಂದಾಜಿನ ಮೇಲೆ ಅಮ್ಮನಂತೆ ಪ್ರೀತಿ ಮಾಡುವ ಅಂಶು ಬೇಗ ಬರುತ್ತಾನೆಂದು.
ಇಬ್ಬರಿಗೂ ಮುತ್ತಿಟ್ಟು, ಬಟ್ಟೆ ಬದಲಾಯಿಸಿ ಬಂದೆ. ಅಂಶು ಘಮಘಮಿಸುವ ಡಿಕಾಕ್ಷನ್ ಹಾಕಿ ಎಸ್.ಎಲ್.ವಿ ಕಾಫಿ ಮಾಡಿಟ್ಟು ಕಾಯುತ್ತಿದ್ದ. ಇಬ್ಬರೂ ಊರಿನ ಕತೆಯನ್ನ ಪೈಪೋಟಿ ಮೇಲೆ ಹೇಳಿದರು. ಕಿವಿ ಕೇಳಿಸಿಕೊಳ್ಳುತ್ತಿತ್ತು. ಮನಸ್ಸು ಉದಾಸ. ಒಂದು ಸ್ವಲ್ಪ ಹೊತ್ತು ಬಡಬಡಿಸಿದ ಇಬ್ಬರೂ ನನ್ನನ್ನು ಗಮನಿಸಿದವರೆ ಹತ್ತಿರ ಬಂದು ಕುಳಿತರು. ಅವನು ಏನ್.. ಅಂತ ಬಾಯಿ ತೆರೆಯುವಷ್ಟರಲ್ಲೆ ನಾನು ಅಡ್ರೆಸ್ಸಿನಿಂದ ಹಿಡಿದು ದಿವಾ ಎಂಬ ಪುಟ್ಟ ಕಿನ್ನರ ಗೆಳೆಯನ ಕತೆಯನ್ನು ಇನ್ನಷ್ಟು ವಿಷದವಾಗಿ ಹೇಳಿಬಿಟ್ಟೆ. ನಾನು ಹೇಳಿ ಮುಗಿಸುವಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ. ಆ ಕಿನ್ನರ ಪ್ರಪಂಚದ ಎಲ್ಲ ತಂಗಾಳಿಯನ್ನು ಸವಿದ ಹಿತವಾದ ಭಾವ. ಅವನ ತುಂಟ ಮಾತುಗಳನ್ನ ಪ್ರತ್ಯಕ್ಷ ಕೇಳಿದ ಆಹ್ಲಾದ.. ಸನ್ಮತಿಯಂತೂ ಖುಷಿ ಜಾಸ್ತಿಯಾಗಿ ಎದ್ದು ಬಂದು ಆವರಿಸಿಕೊಂಡು ನನ್ನ ಕೆನ್ನೆಗೆ ಕೆನ್ನೆಯೊತ್ತಿದಳು.. ನನ್ನ ಸೈಕಲ್ ಹೆಸರು ನಾಳೆಯಿಂದ ಫಲೂಡ ಅಂತ ಘೋಷಿಸಿದಳು.
ನನಗೆ ನಗು ಬಂತು. ನಗುತ್ತ ನಗುತ್ತ ನನ್ನ ಕಣ್ಣಲ್ಲಿ ನೀರಿಳಿದವು. ಕಿರುನಗೆಯ ಸೂಸುತ್ತಿದ್ದ ಅಂಶು ಪಕ್ಕದಲ್ಲಿ ಕೂತು ಬಳಸಿ ಕೇಳಿದ. ಯಾಕಪ್ಪಾ.. ಒಂದು ಕ್ಷಣ ತಡೆದು ಹೇಳಿಬಿಟ್ಟೆ.. ನನಗೆ ದಿವಾ ಬೇಕು. ಅವನನ್ನ ನೋಡಲೇ ಬೇಕಲ್ಲ ಅಂಶು, ಏನು ಮಾಡಲಿ, ಹೇಗೆ ಹುಡುಕಲಿ..? ಕೇಳಿದ ಕೂಡಲೇ ಸಂಕೋಚವಾಯಿತು.. ಮಗಳೇನಾದ್ರೂ ನಗುತ್ತಿದ್ದಾಳಾ ಅಂತ ಕಡೆಗಣ್ಣಲ್ಲಿ ನೋಡಿದೆ. ಅವಳು ನನ್ನನ್ನೇ ಗಂಭೀರವಾಗಿ ನೋಡುತ್ತಿದ್ದಳು. ಬಳಸಿ ಕೂತ ಅಂಶುಗೆ ನನ್ನ ಮೈ ಬೆಚ್ಚಗಾಗಿರುವುದು ಗೊತ್ತಾಯಿತು.
ಸರಿ ಬಾ ಅವನನ್ನು ಹೇಗಾದ್ರೂ ಮಾಡಿ ಹುಡುಕೋಣ. ಈಗ ನೀನು ಸ್ವಲ್ಪ ಏನಾದ್ರೂ ತಿಂದು ಮಲಗು. ಅಮ್ಮ ಕಳಿಸಿದ ರುಚಿಯಾದ ಹಲಸಿನ ಕಡುಬಿದೆ. ಮೊಸರಿನ ಜೊತೆ ತಿನ್ನು. ಆಮೇಲೆ ಪ್ಯಾರಾಸಿಟಮೋಲ್ ತಗೊಂಡು ಮಲಗು. ಅದು ಇದು ಏನಿಲ್ಲ. ಇವತ್ತು ರಾತ್ರಿಯ ಅಡುಗೆ ನಮ್ಮಿಬ್ರದ್ದು. ಅಲ್ದೇ ಸನ್ ಬೇರೆ ಅವಳಜ್ಜಿ ಹತ್ರ ಹುಳಿ ಮಾವಿನ ಹಣ್ಣಿನ ಸಾಸ್ವೆ ಮಾಡೋದು ಕಲ್ತುಕೊಂಡು ಬಂದಿದ್ದಾಳೆ.. ಇಬ್ರೂ ಸೇರಿ ಮಾಡ್ತೀವಿ ಅಂತ ಒತ್ತಾಯಿಸಿದ. ಹುಷಾರಿಲ್ಲದಾಗ ಅವನು ಹೇಳಿದಂತೆ ಕೇಳಲೇಬೇಕು ನಾನು. ಮಿಲಿಟರಿ ಶಿಸ್ತು ಆಗ.
ಯಾವಾಗಲೋ ಎಚ್ಚರಾಯಿತು. ಸನ್ಮತಿ ಅಂಶು ಇಬ್ಬರೂ ನಿದ್ದೆ ಹೋಗಿದ್ದರು. ಸುಮ್ಮನೆ ಎದ್ದವಳು ಕಿಟಕಿಯ ಬದಿಯಲ್ಲಿದ್ದ ಕುರ್ಚಿಯಲ್ಲಿ ಕುಳಿತೆ. ಮೈಕೈಯೆಲ್ಲ ನೋವು. ಏನೋ ಕನವರಿಕೆ. ನಿದ್ದೆ ಹತ್ತಿದ ಕಣ್ಣನ್ನು ಬಿಡಿಸುತ್ತಿರುವ ಪುಟ್ಟ ಕೈಗಳು. ದಿವ್ಯಾ ಇದೊಂದು ಕತೆ ಕೇಳಿ ಆಮೇಲ್ ಮಲಕ್ಕೋ, ಇದು ಜುರಾಸಿಕ್ ಪಾರ್ಕ್ ದು ಹೊಸಾ ಕತೆ.. ನೀನು ಡೈನೋಸಾರ್ ನೋಡಿದೀಯ.. ಅದು ಫಲೂಡಾಗಿಂತ ಜಾಸ್ತಿ ಶಕ್ತಿ.. ದಿವ್ಯಾ ಪ್ಲೀಸ್ ಕಣ್ತೆಗಿ.. ಇನ್ನೊಂದ್ಸ್ವಲ್ಪ ಇದೆ ಕತೆ ಹೇಳ್ ಬಿಟ್ಟು ನಾನು ಮನೆಗೆ ಹೋಗ್ ಬಿಡ್ತೀನಿ.. ಆಮೇಲೆ ಈ ಭಾನ್ವಾರ ಮತ್ತೆ ಈ ಸಿನಿಮಾ ನೋಡೋಣ್ವಾ ನಾನು ನೀನು. ತುಂಬ ಸಕ್ಕತ್ತಾಗಿದೆ. ಇಲ್ಲೇ ಚೌಡೇಶ್ವರಿಯಲ್ಲಿ ಬಂದಿದೆ..
ನನಗೋ ತುಂಬ ನಿದ್ದೆ. ಪ್ಲೀಸ್ ದಿವಾ, ಇವತ್ತು ಪರೀಕ್ಷೆ ಇತ್ತಲ್ವ, ತುಂಬ ಬೇಗೆದ್ದಿದ್ದೆ. ಸುಸ್ತಾಗಿಬಿಟ್ಟಿದೆ. ನಾಳೆ ಸಂಜೆ ಕೇಳ್ತೀನಿ ಕತೇನ.. ಅಂಶು ಬಂದು ತಟ್ಟಿ ಎಬ್ಬಿಸಿ ಮತ್ತೆ ಮಂಚದಲ್ಲಿ ಮಲಗಿಸಿದ.
ಮರುದಿನ ಆಫೀಸಿಗೆ ಹೋಗಲಾಗಲಿಲ್ಲ. ತುಂಬ ಜ್ವರ ಬಂದು ಬಿಟ್ಟಿತ್ತು. ಅಂಶು ಹೇಗೂ ರಜೆಯಲ್ಲೇ ಇದ್ದ. ಕೃಷ್ಣಮೂರ್ತಿ ಡಾಕ್ಟರು ಮನೆಗೇ ಬಂದು ಔಷಧಿ ಕೊಟ್ಟು ಹೋದರು. ಜ್ವರದ ತಾಪವೇರಿದಾಗೆಲ್ಲ ಕನಸುಗಳ ದಾಳಿ.. ಅಲ್ಲೆರಡು ಪುಟ್ಟ ಕಾಲ್ಗಳು ಕಾಂಪೌಂಡ್ ಮೇಲೆ ಕುಳಿತು ತನ್ನ ಪುಟ್ಟ ಪುಟ್ಟ ಬೆರಳುಗಳಿಂದ ಬಾ ಎಂದು ಸನ್ನೆ ಮಾಡಿದಂತೆ, ಮೆತ್ತಗೆ ಮೈ ಮೇಲಿ ಹೂವಿನ ರಾಶಿಯೊಂದು ತಾನಾಗೆ ಏರಿಕೊಂಡು, ಕೊರಳಿಗೆ ಮಾಲೆಯಾದಂತೆ, ಹೂವಿನ ಪರಿಮಳ ಹೀರುವಷ್ಟರಲ್ಲಿ ಅವು ಪುಟ್ಟ ದಿವಾನ ಕೈಗಳಾಗಿ ಕಚಗುಳಿಯಿಟ್ಟಂತೆ, ಅವನ ಮುದ್ದು,ಸಲಿಗೆ,ತುಂಟ ಮಾತು, ಮಿಂಚು ನೋಟ, ಎಲ್ಲೆಲ್ಲೂ ಆವರಿಸಿಕೊಂಡವು. ಅಲ್ಲೆ ಹತ್ತಿರದಲ್ಲಿ ಅಂಶು ಕೂತು ತಣ್ಣೀರು ಬಟ್ಟೆ ಹಾಕುತ್ತಿದ್ದುದು ಆಗಾಗ ಗೊತ್ತಾಗುತ್ತಿತ್ತು. ಏನೂ ಬೇಡ, ಆರಾಮಾಗ್ಬಿಟ್ಟೆ ಅಂತ ಗೊಣಗಿದ ಕೂಡಲೆ, ಮುಚ್ಚಿದ ಕಣ್ಣನ್ನು ನೇವರಿಸುತ್ತ, ಕೆನ್ನೆ ಸವರುತ್ತಿದ್ದ ಅವನು. ಮತ್ತೆ ನಿದ್ದೆಯ ಮುಸುಕು. ಸನ್ಮತಿ ಅಲ್ಲೇ ಕೂತು ರಾಗವಾಗಿ ದೇವರನಾಮ ಹಾಡುತ್ತಿದ್ದಳು.. ಪೋಗಾದಿರೆಲೋ..ರಂಗಾ, ಬಾಗಿಲಿಂದಾಚೆಗೆ.. ಮಗುಗಳ ಮಾಣಿಕ್ಯ ದೊರಕೀತು ತಮಗೆಂದು....
ಸರಿಯಾಗಿ ಎಚ್ಚರವಾದಾಗ ಚುಮುಚುಮು ಬೆಳಗು. ಒಂದಿನ ಇಡೀ ಜ್ವರದ ಮತ್ತಲ್ಲಿ ಕಳೆದಿದ್ದು ಗೊತ್ತಾಯಿತು. ಅಪ್ಪ ಮಗಳಿಬ್ಬರೂ ಒಬ್ಬರಿನ್ನೊಬ್ಬರ ತೆಕ್ಕೆಯಲ್ಲಿ ಹಾಗೇ ಕುರ್ಚಿಯಲ್ಲಿ ಕೂತು ನಿದ್ದೆ ಹೋಗಿದ್ದರು. ನಿಧಾನವಾಗಿ ಎದ್ದು ರಗ್ಗು ಹೊದೆಸಿದೆ. ಊಂ ಎಂದ ಅಂಶುಗೆ ಜೋರು ನಿದ್ದೆ. ಹಾಲಿನವನು ಎಸೆದು ಹೋಗಿದ್ದ ಪ್ಯಾಕೆಟ್ ತೆಗೆದು, ಡಿಕಾಕ್ಷನ್ ಬದಲಾಯಿಸಿ ಒಂದು ಕಾಫಿ ಮಾಡಿ ಕೂತುಕೊಂದೆ, ಕಣ್ಣು ನೋಯುತ್ತಿದ್ದವು, ಪೇಪರ್ ಬೇಡವೆನ್ನಿಸಿ, ರೇಡಿಯೋ ಹಾಕಿದೆ. ಇಂಪಾದ ದನಿಯಲ್ಲಿ ಬಿ.ಆರ್.ಛಾಯಾ ರ ಹಾಡು ತೂರಿಬಂತು.. 'ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು.. ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು.." ಹಾಡಿನ ನೆರಳಲ್ಲೇ ದಿವಾನ ರೇಖೆಗಳು ಮೂಡತೊಡಗಿದವು. ಬೆಳಗಿನ ತಂಪಿಗೊಡ್ಡಿಕೊಂಡು ಉಲ್ಲಸಗೊಳ್ಳುತ್ತಿದ್ದ ಮನಸ್ಸು ಉದಾಸವಾಯ್ತು. ಹಾಗೆ ಒರಗಿಕೊಂಡು ಕೂತೆ.
ಸ್ವಲ್ಪ ಹೊತ್ತಿನ ಬಳಿಕ ಅಂಶು ಎದ್ದು, ಮಗಳನ್ನು ಸರಿಯಾಗಿ ಮಲಗಿಸಿ ಬಂದ. ಮುಖ ತೊಳೆದು ಬರುವಷ್ಟರಲ್ಲಿ ನಾನು ಕಾಫಿ ಮಾಡಿ ತಂದೆ. ಏನ್ ದಿವ್ಯಾ ಎದ್ ಬಿಟಿದೀಯ, ಬಾ ಇಲ್ಲೆ ಸ್ವಲ್ಪ ಹೊತ್ತು ಕುರ್ಚಿ ಮೇಲೆ ಹಾಯಾಗಿ ಕೂರೋಣ ಅಂತ ದಿವಾನ ಶೈಲಿಯಲ್ಲಿ ಅಣಕಿಸಿದ.. ನನ್ನ ಮುಖದಲ್ಲಿ ನಗು ಮೂಡಿದರೂ, ಖಿನ್ನತೆಯ ನೆರಳು ಬೆನ್ನು ಬಿಡಲಿಲ್ಲ.
ಕಾಫಿ ಕುಡಿಯುತ್ತಿದ್ದವನು ಇದ್ದಕ್ಕಿದ್ದಂಗೆ ಏನೋ ನೆನಪಾದಂತೆ, ಸಣ್ಣಗೆ ಹಾಡುತ್ತಿದ್ದ ರೇಡಿಯೋ ವಾಲ್ಯೂಮ್ ದೊಡ್ಡದು ಮಾಡಿ, ಟ್ಯೂನ್ ಮಾಡತೊಡಗಿದ. ನೀವು ಕೇಳುತ್ತಿದ್ದೀರ ರೇಡಿಯೋ ಸಿಟಿ ಮಾರ್ನಿಂಗ್ ರಾಗಾಸ್ ನಿಮ್ಮ ಬಸಂತಿಯ ಜೊತೆ...... ನಿಮ್ಮ ಕರೆ ನನಗೆ, ನಮ್ಮ ಹಾಡು ನಿಮಗೆ... ಧ್ವನಿಯಲ್ಲಿ ಹಿಗ್ಗು ತುಂಬಿಕೊಂಡಿದ್ದ ರೇಡಿಯೋ ನಿರ್ವಾಹಕಿ ವಾಸಂತಿಯ ಮಾತು ಕೇಳಿಬಂತು.
"ಇವತ್ತು ಒಂದು ಸ್ಪೆಶಲ್ ಇದೆ. ನಿನ್ನೆಯೇ ತಿಳಿಸಿದಂತೆ, ಇಂದು ದಂಪತಿಗಳ ದಿನ.. ನಿಮ್ಮ ಪ್ರೀತಿಯ ಪತಿ ಅಥವಾ ಪತ್ನಿಗೆ ಏನು ಇಷ್ಟ ಅಂತ ನೀವು ನಮಗೆ ಫೋನ್ ಮಾಡಿ ತಿಳಿಸಲು ನಿನ್ನೆ ಕೇಳಿದ್ದೆವು. ಅದರಲ್ಲಿ ತುಂಬ ಸಕ್ಕತ್ ಆದ ಮೆಸೇಜ್ ಗಳನ್ನ ನಾವು ಇವತ್ತು ಪ್ರಸಾರ ಮಾಡ್ತೇವೆ. ಮತ್ತು ಆಯ್ಕೆಯಾದ ಒಂದು ವಿಶೇಷ ಮೆಸೇಜ್ ಗೆ "ಪಿರೇಟ್ಸ್ ಆಫ್ ದಿ ಕೆರಿಬಿಯನ್" ಸಿನಿಮಾಕ್ಕೆ ಪಿ.ವಿ.ಆರ್. ನಲ್ಲಿ ಈ ಶನಿವಾರ ಸಂಜೆಯ ಶೋ'ಗೆ ಟಿಕೇಟ್ ದೊರೆಯುತ್ತದೆ. ಕೇಳಿ ನಮ್ಮ ಮೆಸೇಜ್, ಒಂದು ಚಿಕ್ಕ ಬ್ರೇಕಿನ ಬಳಿಕ... ಮ್ಯೂಸಿಕ್ ತೂರಿಬಂತು. ನಾನು ಲೋಟ ತೆಗೆದುಕೊಂಡು ಅಡಿಗೆ ಮನೆಗೆ ಹೋದೆ. ಅಂಶು ವಾಲ್ಯೂಮ್ ಜಾಸ್ತಿ ಮಾಡಿದ. ಸನ್ಮತಿ ಏಳುತ್ತಾಳೆ ಅಂತ ಬಯ್ಯಲು ಬಂದವಳು ಹಾಗೇ ನಿಂತೆ. ರೇಡಿಯೋದಲ್ಲಿ ಅಂಶುನ ದನಿ ಕೇಳಿಬಂತು. ಅಚ್ಚರಿಯಿಂದ ನಿಂತವಳನ್ನ ಮುಂದೆ ಕೇಳು ಎಂಬಂತೆ ಕಣ್ಸನ್ನೆ ಮಾಡಿದ ಅವನು. "ನನ್ ಪ್ರೀತಿಯ ಹೆಂಡ್ತಿ ಅವಳು. ಅವಳಿಗೆ ಎಲ್ಲ ಒಳ್ಳೆಯ ಸಂಗತಿಗಳೂ ಇಷ್ಟ, ವಿಶೇಷವಾಗಿ ನಾನು (ದನಿಯಲ್ಲಿನ ತುಂಟತನವನ್ನು ಯಾರು ಬೇಕಾದ್ರೂ ಗುರುತಿಸಬಹುದು) - ಕೇಳಿ ವಾಸಂತಿ ಜೋರಾಗಿ ನಕ್ಕಳು. ನಂಗಿಂತ ಜಾಸ್ತಿ ನಮ್ಮಗಳು ಸನ್ಮತಿ, ಮತ್ತು ಈಗ ಇನ್ನೊಬ್ರು ಸೇರ್ಕೊಂಡಿದ್ದಾರೆ.. ದಿವಾ. ಈ ಮೆಸೇಜ್ ದಿವಾನಿಗೆ, ಮನೆಯಲ್ಲಿ ಜ್ವರ ಬಂದು ಮಲಗಿರುವ ನನ್ನ ಹೆಂಡತಿ ದಿವ್ಯಾಳ ಪರವಾಗಿ - ಪುಟ್ಟ ದಿವಾ, ಎಲ್ಲಿದ್ದರೂ ಬೇಗ ಫಲೂಡ ಹತ್ತಿ ಬಾ, ದಿವ್ಯಾ, ಬೆಳ್ಳಿ ಕಳ್ಳನ ಹಾಡು ಟ್ಯೂನ್ ಮಾಡಿಕೊಂಡು ಜೋಕಾಲಿಯ ಹತ್ತಿರವೇ ಕಾಯ್ತಿದ್ದಾಳೆ, ಬಂದು ಕಾಲು ಚಾಚಿ ಕೂತು ಹಾಯಾಗಿ ಮಾತಾಡೋವಂತೆ.. ೯೯೮೪೦ ೯೯೮೪೦ ಗೆ ಫೋನ್ ಮಾಡು.. ಮತ್ತೆ ಅದೇ ಮೆಸೇಜ್ ಇಂಗ್ಲಿಷ್ ನಲ್ಲೂ ಪ್ರಸಾರವಾಯಿತು.. ಜಲತರಂಗದ ನಿನಾದದ ನಗು ನಗುತ್ತ ವಾಸಂತಿ ಮತ್ತೆ ಮೆಸೇಜ್ ಹೇಳಿದಳು. ದಿವಾ ಎಲ್ಲಿದ್ರೂ, ಸುಧಾಂಶುರವರ ೯೯..... ನಂಬರ್ರಿಗೆ ಫೋನ್ ಮಾಡಿ ದಿವ್ಯಾ ಮನೆಗೆ ಬನ್ನಿ.. ಉಯ್ಯಾಲೆ ಹತ್ರ ಕಾಯ್ತಾ ಇರ್ತಾರೆ.." ನಾನು ನಂಬಲಾಗದೆ ಅಂಶುನ ಮುಖ ನೋಡಿದೆ.. ಅಲ್ಲಿ ಕಿರುನಗು. ವಾಸಂತಿಗೆ ಅದೇಕೋ ಈ ಮೆಸೇಜ್ ತುಂಬ ಇಷ್ಟವಾಗಿಬಿಟ್ಟಿತ್ತು. ಏನೇನೋ ಕೇಳುತ್ತಿದ್ದಳು, ಅದಕ್ಕೆ ಅಂಶುನ ಮಾತಲ್ಲೂ ಕಿರುನಗೆಯನ್ನ ಕೇಳಿಸುವ ಉತ್ತರಗಳು.. ನಮಗೆ ಸಿನಿಮಾ ಟಿಕೆಟ್ ಕೂಡಾ ಸಿಕ್ಕಿದವು ಅಂತೇನೂ ಬೇರೆ ಹೇಳಬೇಕಿಲ್ಲ ಅಲ್ಲವೆ?!
ಅವನೆಲ್ಲಿದ್ದಾನೋ ಈ ಮೆಸೇಜ್ ಎಲ್ಲಿ ಕೇಳುತ್ತೋ ಅಂದ್ಕೊಂಡೆ ನಾನು. ಇವತ್ತು ಬೆಳಿಗ್ಗೆ ತಿಂಡಿ ಎಸ್.ಎಲ್.ವಿ ಯಿಂದ ತರಿಸಿದ ಇಡ್ಲಿ ಸಾಂಬಾರ್.ತಿಂಡಿ ತಿನ್ನುತ್ತ ಮನಸ್ಸು ಯೋಚಿಸತೊಡಗಿತು. ನಾನು ಓದಲು ಬೇರೆಡೆ ಹೋದಾಗ ನನಗೆ ೧೮ ವರ್ಷ ಮತ್ತು ದಿವಾನಿಗೆ ಐದು. ಅದೆಲ್ಲ ನಡೆದು ಈಗ ೧೮ ವರ್ಷಗಳಾಗಿವೆ ಅಂದ್ರೆ ಹೆಚ್ಚೂ ಕಡಿಮೆ ಅವನಿಗೆ ಈಗ ೨೩ ವರ್ಷ ಇರುತ್ತೆ. ಯಾವ ಊರಿನಲ್ಲಿದ್ದಾನೋ ಏನು ಓದಿದನೋ ಯಾರಿಗೆ ಗೊತ್ತು.. ಸಂಜೆ, ಇನ್ಯಾವುದೋ ಎಫ್.ಎಂ. ವಿಭಾಗದಲ್ಲಿ ಇಂತಹದೆ ಕೇಳುಗರ ವಿಭಾಗದಲ್ಲಿ ಮತ್ತೊಂದು ಸಲ ಇಂಗ್ಲಿಷ್ ವಿನಂತಿ ತೇಲಿಬಂತು. ಈ ಸಲ ಬರೀ ಇಂಗ್ಲಿಷ್ ಜಾಸ್ತಿ ಇರುವ ರೇಡಿಯೋ ಒಂದರಲ್ಲಿ.
ಮರುದಿನ ಶನಿವಾರ ಅವರಿಬ್ಬರನ್ನೂ ಸಿನಿಮಾಕ್ಕೆ ಕಳಿಸಿ ನಾನು ಮನೆಯಲ್ಲುಳಿಯಲು ನೋಡಿದೆ.. ಸನ್ ನಗುತ್ತ ಬಂದು ತಬ್ಬಿಕೊಂಡಳು, ನೀನ್ ಹೀಗೇ ಹೇಳ್ತೀಯಾಂತ ಗೊತ್ತು ಅದಿಕ್ಕೆ, ಅಪ್ಪ ನಂಗೂ ಒಂದು ಟಿಕೆಟ್ ಮಾಡ್ಸಿದಾನೆ. ಬಾಮ್ಮಾ ಎಲ್ರೂ ಹೋಗೋಣ.. ಇಲ್ಲವೆನ್ನಲಾಗಲಿಲ್ಲ. ಮುಗಿಸಿ ಬಂದು ಮನೆಯಲ್ಲಿ ಗಂಜಿ ತಿಂದು ಮಲಗಿದೆ. ಅವರಿಬ್ಬರೂ ಪಿಝಾ..
ಮಾರನೆಯ ದಿನಾ ಭಾನುವಾರ ಸಾಕಷ್ಟು ಚೇತರಿಸಿಕೊಂಡಿದ್ದೆ. ತಿಂಡಿ ತಿನ್ನುವಾಗ ಗಮನಿಸಿದೆ. ಅಪ್ಪ -ಮಗಳಿಬ್ಬರೂ ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ನಾನು ಅವರೆಡೆ ನೋಡಿದ ಕೂಡಲೆ ಮಾತು ಬಂದ್.. ಏನು ಆಟ ಹಚ್ಚಿದಾರೋ ಅಂದ್ಕೊಂಡೆ.
ಸ್ನಾನ ಮುಗಿಸಿ, ನಿಧಾನವಾಗಿ ತಯಾರಾಗಿ ಬಂದು ಕೂರುವಾಗ ೧೧ ಘಂಟೆ। ಇನ್ನೂ ತಿನ್ನುತ್ತಿದ್ದ ಮಾತ್ರೆಯ ಮತ್ತು, ನಿದ್ದೆಯ ಜೊಂಪು ಹತ್ತಿತ್ತು. ಅಷ್ಟರಲ್ಲೆ ಯಾರೋ ಕರೆಗಂಟೆ ಬಾರಿಸಿದರು॥ ಅಂಶು ಬಾಗಿಲು ತೆಗೆದವನು, ಮಾತನಾಡಿ, ಪುಟ್ಟಿಯನ್ನು ಕೂಗಿದ.. ಅವಳು ಒಂದೇ ಓಟ.. ಹೋದವಳು ಮತ್ತೆ ಹಾರಿಕೊಂಡು ಓಡಿಬಂದಳು.. ಜೊಂಪಲ್ಲೆ ಎಚ್ಚರಾಗಿ ಕೂತಿದ್ದೆ ನಾನು, "ಅಮ್ಮಾ ನಿನ್ನ ದಿವಾ ಎಂದು ಎಬ್ಬಿಸಿ ಎಳೆದುಕೊಂಡು ಕರೆದೊಯ್ದಳು. ಬಾಗಿಲಿಗೆ ಬಂದು ನೋಡಿದೆ.
ಅಲ್ಲಿ ಚಿಗುರು ಮೀಸೆಯ, ಮಿಂಚು ಕಣ್ಗಳ ಎಳೆ ಯುವಕ॥ ತುಟಿಯಂಚಲಿ ಮೋಹಕ ಕಿರುನಗು। ಯಾವುದೋ ಹಳೆಯ ನೆನಪು ನುಗ್ಗಿ ಬರುತ್ತಿತ್ತು. ಅಚ್ಚರಿಯಿಂದ ಬಾಯ್ತೆಗೆಯುವಷ್ಟರಲ್ಲಿ ಅವನೇ ಉಲಿದ.." ಹಾಯ್ ದಿವ್ಯಾ, ಹಾಯಾಗಿ ಮಾತಾಡೋಣಾ ಅಂತ ಬಂದ್ ಬಿಟ್ಟೆ.. ಅಲ್ನೋಡು ನನ್ನ ಫಲೂಡ.. ಅವನ ಮುಖದಿಂದ ಕಿತ್ತಿಡಲಾಗದೆ, ನನ್ನ ದೃಷ್ಟಿ ಕಿತ್ತು ಅವನು ಕೈ ತೋರಿದತ್ತ ನೋಡಿದೆ.. ಅಲ್ಲಿ ಕಪ್ಪಗೆ ಮಿರುಗುತ್ತ ನಿಂತಿತ್ತೊಂದು ಬೈಕು.. ಮೇಲೆ ಫಲೂಡ ಅಂತಲೇ ಬರೆದಿತ್ತು. ಈಗ ಅಪ್ಪ ಮಗಳ ಹುನ್ನಾರ ಅರ್ಥವಾಯಿತು. ಅವನಿಂದ ಫೋನ್ ಬಂದಿದ್ದನ್ನು ನನಗೆ ಹೇಳದೇ ಆಶ್ಚರ್ಯ ನೀಡಲು ಕಾದಿದ್ದರು. ಬಾಗಿಲಲ್ಲೇ ನಿಂತು ನನ್ನನ್ನೇ ನೋಡುತ್ತಿದ್ದ ಅಂಶುವಿನತ್ತ ನೋಡಿದೆ. ದಿವಾನ ಮುಖದ ಮೇಲೆ ಅರಳಿದ ಹೂ ನಗು, ಅಂಶುನ ಮುಖ ಮಂಡಲಕ್ಕೂ ಹಬ್ಬಿತ್ತು. ಇನ್ನು ಸನ್ ಬಿಟ್ಟಾಳೆಯೆ ಅವಳ ಮುಖದಲ್ಲಿ ಹೂಗೊಂಚಲೇ..
ಮುಂದೆ ನಿಂತಿದ್ದು ದಿವಾನೇ, ನಿಜವಾಗಲೂ ಅಂತ ಗೊತ್ತಾದ ಮೇಲೆ, ಹತ್ತಿರ ಹೋಗಿ ತಬ್ಬಿಕೊಂಡೆ.. ಅವನು ನಗುತ್ತಿದ್ದ. ಈಗ ಹೇಗೆ ಜೋಕಾಲಿಯ ಮೇಲೆ ಕೂರಿಸಿಕೊಳ್ತೀಯ ದಿವ್ಯಾ? ನಾನು ಮಾತ್ರ ನಿನ್ನನ್ನ ಫಲೂಡ ಮೇಲೆ ಕೂರಿಸಿಕೊಳ್ಳಬಹುದು.. ಅಂತ.. ಅದನ್ನು ಕೇಳಿ ಜೋರಾಗಿ ನಗುತ್ತಿದ್ದ ಸನ್ ಹೇಳಿದಳು.. ಇಲ್ಲಾ ದಿವಾ ಈಗ ನಮ್ಮನೇಲಿ ಉಯ್ಯಾಲೆ ಜೊತೆ ತೂಗು ಮಂಚವೂ ಇದೆ. ಅದರಲ್ಲಿ ತೂಗುತ್ತಾಳೆ ಅಮ್ಮ ಅಂತ.. ಈಗ ಮನೆಯ ಗೋಡೆಗಳಿಂದೆಲ್ಲ ನಗೆ ಹೂಗಳ ಮೋಹಕ ಅನುರಣನ..
ಒಂದ್ನಿಮಿಷ ಸುಮ್ಮನೆ ಕಣ್ಮುಚ್ಚಿಕೊಳ್ಳಿ,, ನಿಮಗೂ ಕೇಳಿಸುತ್ತದೆ, ಪರಿಮಳವೂ ಬರುತ್ತದೆ.. ಹಾಂ ನೋಡಿ ಈಗ ನಿಮ್ಮ ಮುಖದಲ್ಲು ಅರಳಿ ನಿಂತಿದೆ..
ಮಗುಗಳ ಮಾಣಿಕ್ಯವನ್ನ ನನ್ನ ಮುದ್ದು ಕಿನ್ನರಿ ಎನಗೊಪ್ಪಿಸುತ್ತಿದ್ದಾಳೆ...
[ಯಾವತ್ತು ನೆನಪಿಸಿಕೊಂಡರೂ ಮಧುರ ಅನುಭೂತಿಯನ್ನೇ ಸುರಿಸುವ ಕಿನ್ನರ ಗೆಳೆತನವನ್ನು ಕೊಟ್ಟ ಆ ಮುದ್ದು ತುಂಟ ಪೋರನಿಗೆ ನಾನು ಕೃತಜ್ಞೆ..]

Wednesday, June 6, 2007

ಬಿನ್ನಹ

ಬೆಳದಿಂಗಳ ಹಂಬಲದ ನಾನು,
ಕತ್ತಲು ಕವಿದ ಮನದಂಗಳದ ಮೂಲೆಯಲ್ಲಿ ಹಣತೆ ಹಚ್ಚಿಟ್ಟರೆ
ಬಿರುಗಾಳಿ ಎಬ್ಬಿಸಿ ನಂದಿಸುತ್ತೀ ಯಾಕೆ ಬದುಕೇ?


ಎದೆಯ ಬಟ್ಟಲಲ್ಲಿ ಕಂಬನಿಗಳ ತುಂಬಿ
ಬಾನ ಚಂದಿರನ ಹಿಡಿದಿಟ್ಟು ಕಣ್ಣು ತಂಪಾಗಿಸುತ್ತಿದ್ದೇನೆ,
ಬಟ್ಟಲನ್ನ ಕಾಲಲ್ಲಿ ಒದ್ದುಕೊಂಡು ಹೋಗುತ್ತೀ ಯಾಕೆ ಬದುಕೇ?

ನಾನಿಲ್ಲಿ ಬಂಜರು ಕಣಿವೆಯಲ್ಲಿ ನಿಂತು
ಬೆಟ್ಟದ ತುದಿಯ ಹಸಿರ ಹಂಬಲದಿಂದ ದಿಟ್ಟಿ ಮೇಲಕ್ಕೆತ್ತಿದೇನೆ,
ಕಾಲಡಿಯ ನೆಲವೇ ಕುಸಿವಂತ ವೀರಗಾಸೆಯಾಡುತೀ ಯಾಕೆ ಬದುಕೇ?

ಇಂಪಾದ ರಾಗಗಳನ್ಯಾರೋ ದೂರದಲ್ಲಿ ಉಲಿಯುತ್ತಿದಾರೆ...
ಕೇಳಲು ಮೈಯಿಡೀ ಕಿವಿಯಾಗಿಸಿಕೊಂಡಿದೇನೆ,
ರಾಗಗಳ ಕತ್ತು ಹಿಸುಕುತ್ತೀ ಯಾಕೆ ಬದುಕೇ?

ಸಿಡಿವ ನರಗಳ ಸಮಾಧಾನಿಸಲೆಂದು ಪುಸ್ತಕಗಳ ಕೈಗೆತ್ತಿಕೊಂಡರೆ,
ಎಲ್ಲ ಪುಟಗಳಲ್ಲೂ ರಕ್ತದ ಶಾಯಿ ತುಂಬಿರುತ್ತೀ ಯಾಕೆ ಬದುಕೇ?

ನಾನು ಕಾಣುತ್ತಿರುವುದೆಲ್ಲ ಕನಸಷ್ಟೇ ,ನನಸಾಗುವುದಿಲ್ಲ
ಅಂತ ಗೊತ್ತಿದೆ, ನನ್ಗೂ.
ಅದನ್ನೇ ಮತ್ತೆ ಮತ್ತೆ ನೆನಪಿಸಿ
ಭಾವದೊರತೆಯ ಬತ್ತಿಸಬೇಡ ಬದುಕೇ,

ಬದುಕೇ, ನಿನ್ನ ದಮ್ಮಯ್ಯ
ಕನಿಷ್ಠ ಕನಸ ಕಾಣಲು ಬಿಡು;
ಇಲ್ಲಾ ಈ ಹೃದಯದ ಮಿಡಿತವ ತಪ್ಪಿಸಿಡು..


[ವರ್ಷಗಳ ಹಿಂದಿನ ಈ ಬಿನ್ನಹಕ್ಕೆ ಬದುಕು ಕರುಣಾಪೂರ್ಣಳಾಗಿ ಭೂಮಿತೂಕದ ಪ್ರೀತಿಯಿಂದ ನನ್ನನ್ನು ಅಪ್ಪಿಕೊಂಡಿದೆ॥ ಕನಸುಗಳ ಹಸಿರುಹಾದಿಯಲ್ಲಿ ಜೀವನ್ಮುಖೀ ಮಲ್ಲಿಗೆಗಳು ಅರಳಿವೆ। ಆ ತೂಕ ನಿಭಾಯಿಸುವ ಜವಾಬ್ದಾರಿ, ಆ ಪ್ರೀತಿಯನ್ನ ಸವಿದು ಹಂಚುವ ಕೃತಜ್ಞತೆಯನ್ನು ನಾನೀಗ ನಿಭಾಯಿಸಬೇಕಿದೆ...]

Thursday, May 31, 2007

ಎಲ್ಲರ ಒಳ್ಳೆಯತನದಲ್ಲಿ ನೆಲಸಿರುವ ದೇವರೇ.. ಅವನು ಬೇಗ ಚೇತರಿಸಿಕೊಳ್ಳಲಿ..

ಅವನು ಅಳುವುದನ್ನು ನನಗೆ ನೋಡಲಾಗಲಿಲ್ಲ. ನನ್ನ ಕೈಗೆ ಅವನ ಕಣ್ಣೀರನ್ನೊರೆಸುವ ಶಕ್ತಿ ಇಲ್ಲ. ನನ್ನ ಅಸಹಾಯಕ ಕ್ಷಣಗಳ ಆ ಯಾತನೆಯನ್ನು ವಿವರಿಸುವುದು ಕಷ್ಟ.

ಅವನು ಕಷ್ಟಪಟ್ಟು ಓದಿದ್ದ. ನಿಜವಾಗ್ಲೂ ಕಷ್ಟಪಟ್ಟು. ಅವನ ಓದಿಗೆ ನೆರವಾಗಲು ಅಮ್ಮ ಮಾಡಿಕೊಡುವ ಬಿಸಿ ಬಿಸಿ ಚಹಾ ಇಲ್ಲ. ಅರ್ಥವಾಗಿದ್ದನ್ನು ಮತ್ತೆ ಮತ್ತೆ ಕಲಿಯಲು ಟ್ಯೂಷನ್ ಇಲ್ಲ. ಓ ಆ ಕಥೆ ಬರೆದವನ ಹೆಸರು ಮರೆತೋಯ್ತಲ್ಲ ಅಂದರೆ ತಕ್ಷಣ ಪುಟ ತಿರುಗಿಸಿ ನೋಡಿ ನೆನಪಿಸಿಕೊಳ್ಳಲು ಕಣ್ಣಿಲ್ಲ. ಯಾರಾದರೂ ಸ್ನೇಹಿತರು ಬಂದು ಓದಿ ಹೇಳಿದರೆ ಮಾತ್ರ ಸಾಧ್ಯ.

ಅಂತಹ ಅವನು ಇವತ್ತು ಪರೀಕ್ಷೆ ಮುಗಿದ ಕೂಡಲೆ ಅತ್ತುಬಿಟ್ಟ. ಕೊನೆಯ ಸೆಮಿಸ್ಟರಿನ ಇಂಗ್ಲಿಷ್ ಪೇಪರ್ ಕಷ್ಟವಿತ್ತು. ಎಲ್ಲ ವಿಷಯಗಳನ್ನೂ ಕಲಿತಿದ್ದರೂ ಬೇಕಾದ ಸಮಯಕ್ಕೆ ಸರಿಯಾಗಿ ಎಲ್ಲ ನೆನಪಾಗಲಿಲ್ಲ. ಅವನು ಪಾಸ್ ಆಗುತ್ತಾನೆ. ಅದಕ್ಕೇನಿಲ್ಲ. ಆದ್ರೆ ಅವನಿಗೆ ಚೆನ್ನಾಗಿ ಮಾಡಿ, ಫಸ್ಟ್ ಕ್ಲಾಸ್ ತೆಗೆದು, ಕೆಲಸಕ್ಕೆ ಸೇರುವಾಸೆ.

ಯಾರಿಗಿರಲ್ಲ ಅಲ್ವಾ? ಇವನು ವಿಶಿಷ್ಟ. ನಂಗೆ ಕಣ್ಣಿದ್ದೂ ಓದಿ ಬರೆಯಲು, ನೂರಾ ಎಂಟು ಅವಶ್ಯಕತೆ, ಅನುಕೂಲ ಬೇಕು.

ಇವನು, ಕಣ್ಣಿಲ್ಲದೆ, ಕಷ್ಟಪಟ್ಟು ಯಾರದೋ ಕೈಯಲ್ಲಿ ಉತ್ತರ ಬರೆಸಿ... ಹೋಗಲಿ ಬಿಡಿ.

ಅವನಿಗೆ ಕಣ್ಣಿಲ್ಲ ಅಷ್ಟೇ. ದುಡಿದು ಬದುಕಬೇಕೆಂಬ ಛಲ, ಹೇಗಾದರೂ ಸಾಧಿಸುವೆನೆಂಬ ಪ್ರಯತ್ನ, ಎಲ್ಲ ಸಾಮರ್ಥ್ಯ ಇರುವ ನಮಗಿಂತ ಚೆನ್ನಾಗೆ ಇದೆ. ಇವತ್ತು ಅವನು ಅತ್ತಿದ್ದು ಆ ಛಲಕ್ಕೆ ಬಿದ್ದ ಮೂಗೇಟಿನಿಂದ. ಆ ಪ್ರಯತ್ನಕ್ಕೆ ಸಿಕ್ಕ ಅಡ್ಡಗಾಲಿನಿಂದ.

ಎಲ್ಲ ಇರುವ ನನಗಿಂತ ಬೇಗ ಚೇತರಿಸಿಕೊಂಡು ನಾಡಿದ್ದಿನ ಪರೀಕ್ಷೆಗೆ ಸಿದ್ಧವಾಗುತ್ತಾನೆ ಅವನು ನನಗ್ಗೊತ್ತು.

ಆದರೆ ಮೂಗೇಟು ತಿಂದ ಅವನ ಬೆಳಕಿರದ ಕಣ್ಣಲ್ಲಿ ಹರಿದ ನೀರು ನನ್ನ ಚೈತನ್ಯವನ್ನ ಅಲ್ಲಾಡಿಸಿಬಿಟ್ಟಿದೆ. (ಚೈತನ್ಯವೆಂದು ಕರೆದುಕೊಳ್ಳಲೂ ನಾಚಿಕೆ ನನಗೆ)

ಏನು ಬರೆದು ಏನು ಉಪಯೋಗ ? ಅಲ್ಲಿ ಅವನಿಗೆ ನೆನಪಾಗದಾಗ, ಏನೂ ಬರೆಯಲು ತೋಚದೆ ಕುಳಿತುಕೊಂಡಂತೆ ಇಲ್ಲಿ ಕುಳಿತುಕೊಳ್ಳಲೂ ಏನು ಧಾಡಿ ನನಗೆ?

ನೀವು ಮನೆಗ್ ಹೋಗ್ ಬಿಡಿ, ಲೇಟಾಗುತ್ತೆ. ನಾನು ನಿಧಾನವಾಗಿ ಸಂಭಾಳಿಸಿಕೊಂಡು ಹೋಗುತ್ತೇನೆ ಅಂತ ವಿಷಾದದ ಬೋಲ್ ಗಳನ್ನ ನೆನಪಿಸಿಕೊಳ್ಳುತ್ತ ನನ್ನನ್ನು ಒತ್ತಾಯವಾಗಿ ಮನೆಗೆ ಕಳಿಸಿದ ಈ ಪ್ರತಿಭಾವಂತನ ಮೊಬೈಲ್ ಇನ್ನೂ ಆಫ್ ಆಗೆ ಇದೆ. ದೇವರೆ ಅದು ಬೇಗ ಆನ್ ಆಗಲಿ. ಇವತ್ತಿನ ಸಂಕಟವನ್ನ, ತನ್ನ ಕಣ್ಣಿಲ್ಲದ ಸಂಕಟದ ಜೊತೆಗೆ ಸೇರಿಸಿ ಬದಿಗಿಟ್ಟು, ಅವನು ನಾಡಿದ್ದಿನ ಪರೀಕ್ಷೆಗೆ ತಯಾರಾಗಲಿ.

Friday, May 18, 2007

ಹೊಸ ಹರಿವಿನಲ್ಲಿ ಜೀವದ ನಾವೆ...

ಒಂದು ಚಂದದ ಜಾಗ, ಹ್ಯಾಗೆ ಚಂದ ಅಂತ ಯಾರಾದ್ರೂ ಕೇಳಿದ್ರೆ ವಿವರಿಸಲಿಕ್ಕೆ ಬರದು ತನಗೆ. ಭೂಮಿಯೋ,ಮೋಡವೋ, ನೀರೋ ಗೊತ್ತಾಗ್ತಿಲ್ಲ. ಮನಸ್ಸಿಗೆ ಮಾತ್ರಾ ಎಂಥದೋ ಖುಷಿ ಖುಷಿ. ಆಗ ತುಂಬ ಹಿಂದೆ ಜಯಕ್ಕನ ಮನೆಯಿಂದ ಕಡ್ಡಿ ಸೇವಂತಿಗೆ ಸಸಿ ತಂದು ನೆಟ್ಟು ನಮ್ಮನೆ ಅಂಗಳದಲ್ಲಿ ಅದರ ಮೊದಲ ಮೊಗ್ಗು ಮೂಡಿದಾಗ ಆದ ಹಿಗ್ಗಿನಂತಹುದು ಅಂತ ಹೇಳಬಹುದು. ಓಹೋ ಈ ಹಿಗ್ಗಿನ ಮೂಲ ಈಗ ಗೊತ್ತಾಯಿತು. ಅದೋ ಅಲ್ಲಿ ಅವರು ನಿಂತಿದ್ದಾರೆ. ಗದ್ದೆಯಂಚಿನ ಕೆಸರು ಸಿಡಿದು ಕೆಂಪಾದ ಪಂಚೆ,ಬಲಗಡೆಯ ಜೇಬು ಹೊಲಿಗೆ ಬಿಟ್ಟ ಗಿಡ್ಡ ತೋಳಿನ ಖಾದಿ ಅಂಗಿ,ಚೌಕಚೌಕದ ನೀಲಿ ಟವಲ್ಲು ಹೆಗಲ ಮೇಲೆ, ಇಲ್ಲೇನೂ ಬಿಸಿಲಿಲ್ಲ ಆದರೂ ಆ ಗಾಂಧಿ ಟೋಪಿ ಮಾತ್ರ ಹಣ್ಣಾದ ಕೂದಲ ಜೊತೆ ಹರಟೆ ಹೊಡೀತಾ ತಲೆಯ ಮೇಲೆ ಕೂತಿದೆ. ಎಂದಿನಂತೆ ಎಲೆ ಅಡಿಕೆ ಬಾಯಲ್ಲಿದೆ. ಕಣ್ಣು ಮಾತ್ರ ಅದೇ ನಸುನಗುವಿನೊಂದಿಗೆ ನನ್ನತ್ತಲೇ ಬೇಗ ಬೇಗ ಬಾ ಅನ್ನುತ್ತಿದ್ದಾರೆ ಅನಿಸುವಂತೆ.. ನಾನೂ ತಡ ಮಾಡಲಿಲ್ಲ - ಹತ್ತಿರ ಹೋದೆ. ಅಯ್ಯೋ ಈ ಹಾಳು ಅಳು ಈಗಲೇ ಬರಬೇಕೆ? ಸೆರಗಿನ ತುದಿಯಿಂದ ಕಣ್ಣು ಮೂಗೊರಸಿಕೊಂಡು, ಎಂತದಿದು ಈಗ ಇಷ್ಟು ವರ್ಷದ ಮೇಲೆ ನನ್ನ ನೆನಪಾತಾ ನಿಮ್ಗೆ? ನೀನಿಲ್ಲದೆ ಜೊತೆ ಸಾಗದಿಲ್ಯೆ, ನಂಜೊತೀಗೆ ಇರು ಅಂತ ಯಾವಾಗ್ಲೂ ಹೇಳ್ತಾ ಇದ್ದೋರು ಅವತ್ತು ಮಾತ್ರ ನಂಗೆ ಹೇಳದೆ ಕೇಳ್ದೆ ಹೊರಟೇ ಬಿಟ್ರಲ್ಲ.. ಓ ಮತ್ತೆ ಅಳು, ಸಿಂಬಳ ಬೇರೆ... ಅವರ ಕಣ್ಣಲ್ಲಿ ಮಾತ್ರ ಅದೇ ನಸುನಗೆ..

ಹಸಿರೆಲೆಗಳ ನಡುವೆ ಬೆಳ್ಳಗೆ ಬಿರಿದು ಇಬ್ಬನಿಯಲಿ ತೋಯ್ದ ನಿತ್ಯಪುಷ್ಪದಂತ ಆ ನಗುವನ್ನು ನೋಡುತ್ತ ನೋಡುತ್ತ ನನ್ನ ಅಳು, ಮಾತೆಲ್ಲ ಕಟ್ಟಿ ಹೋಯಿತು. ಶಬ್ದದ ತೀರದಿಂದ ಬದುಕಿನ ನಾವೆ ನಿಧಾನವಾಗಿ ಲಂಗರು ಕಳಚಿದ ಅನುಭವ. ಭಾವದ ಮೌನ ಹರಿವಿನಲ್ಲಿ ನಾವೆ ತನ್ನಷ್ಟಕ್ಕೆ ತಾನೆ ಚಲಿಸಿ... ನಾನು ತುಂಬ ಸಣ್ಣವಳಿದ್ದಾಗ ಸತ್ತು ಹೋದ ಅಮ್ಮನ ಮಡಿಲು ನೆನಪಾಯಿತು. ಕೊನೆಯ ಮಗಳು ಎಡವು ಹೆಜ್ಜೆ ಇಟ್ಟು ಕೈ ಮುಂದೆ ಮಾಡಿ 'ಮ್ಮಾ' ಅಂತ ಮುಂದೆ ಬಂದ ನೆನಪಾಯಿತು. ಅವತ್ತು ರಂಗಪ್ಪನ ಗುಡ್ಡ ಹತ್ತುವಾಗ ತಲೆತಿರುಗಿ ನಾನು ಕುಸಿದು, ಅವರು ಟವೆಲ್ಲಿನಿಂದ ಗಾಳಿ ಬೀಸಿ ಹಾಯೆನಿಸಿದ ನೆನಪಾಯಿತು. ಮೊಮ್ಮಕ್ಕಳು ಕತೆ ಕೇಳು ಕೇಳುತ್ತಾ ತೊಡೆಗೊರಗಿ ನಿದ್ರಿಸಿದ ಮೆತ್ತನೆ ಸ್ಪರ್ಶದ ನೆನಪಾಯಿತು. ಅರೇ ಇದೇನು ಬೇಸರವೆಲ್ಲಾ ಕಳೆದೇ ಹೋಯಿತಲ್ಲ. ಜೀವದ ನಾವೆ ನಲಿವಿನ ಹೊಳವಿಗೆ ಸಿಕ್ಕ ಅನುಭವ.


ಅವರ ಕಣ್ಣಲ್ಲಿ ಮತ್ತದೇ ನಸುನಗು. ಎಲ್ಲ್ ಹೋಯ್ದಿ ನಾನು, ನಿಂಜೊತೀಗೆ ಇದ್ನಲ ಸುಶೀಲಾ! ನೀನು ಕಣ್ಣು ಮುಚ್ಚಿದಾಗೆಲ್ಲ ನಾನೆ ತಾನೆ ಇದ್ದಿದ್ದು, ಕಣ್ತೆರೆದಾಗ ನಿನ್ ಮಕ್ಳು, ಮೊಮ್ಮಕ್ಕಳು, ಗಿಡ, ನೀರು, ಮಳೆ ಎಲ್ಲ ಕಡೀಗೂ ಇದ್ನಲೇ. ನೀನು ನನ್ನ ನೋಡ್ತಲೇ ಇದ್ದೆ. ಮತ್ತಿನ್ಯಾಕೆ ಬೇಜಾರು? ... ವಾಕ್ಯ ಮುಗಿಯುವಾಗ ತುಟಿಯಂಚಲಿ ಅದೇ ಹೂನಗೆ - ಹಸಿರು ಪೊದೆಯಲ್ಲಿ ತೆಳುಹಳದಿ ಸಂಜೆಮಲ್ಲಿಗೆ ಅರಳಿದಂತೆ. ಅದೂ ಮತ್ತೆ... ಏನೋ ಹೇಳ ಹೊರಟೆ, ಒಂದು ತಣ್ಣನೆಯ ಗಾಳಿಯ ಕುಳಿರು ಸುಳಿಯಿತು. ಮುಖದ ಮೇಲೆ ಹನಿಯೂ ಬಿತ್ತು. ಕಣ್ಬಿಟ್ಟೆ.. ಅಯ್ಯೋ ತಾನು ಇಲ್ಲೆ ಬೆಂಗಳೂರಿನ ಮನೆಯ ಮಂಚದ ಮೇಲೆ ಮಲಗೇ ಇದೀನಿ. ಕಿಟಕಿಯ ಪಕ್ಕವೇ ಮಂಚ, ಹೊರಗೆ ಸಣ್ಣಕೆ ಮಳೆ ಹನಿಯುತ್ತಲೇ ಇದೆ. ಕಿಟಕಿಗೆ ಆನಿಕೊಂಡು ಹಬ್ಬಿದ್ದ ಮಲ್ಲಿಗೆ ಬಳ್ಳಿಯ ಮೇಲಿನ ನೀರಹನಿ ಕುಳಿರ್ಗಾಳಿಗೆ ಮುಖದ ಮೇಲೆ ಬಿದ್ದು ಎಚ್ಚರಾಗಿ ಹೋಯಿತು. ಛೇ ಎಷ್ಟು ಚಂದದ ಕನಸು.


'ಅಮ್ಮಾ ಹಾಲೂ...' ಓ ಹಾಲಿನವಳು ಬಂದೇ ಬಿಟ್ಟಳು, ಅಂದ್ರೆ ಗಂಟೆ ಆರೂ ಕಾಲೆ? ಮೋಡ ಕವ್ಕೊಂಡ್ರೆ ಟೈಮಾಗಿದ್ದೆ ಗೊತ್ತಾಗದಿಲ್ಲೆ. ಸೊಸೆ ಗೀತಾ ಬಾಗಿಲು ತೆರೆದು ಹಾಲು ಹಾಕಿಸಿಕೊಂಡಳು. ಚೂರೂ ನೀರ್ ಬೀಳದ ಹಂಗೆ ತಂದಿದೀನ್ರ.. ದಿನಾ ಕೊಡೋ ಗಟ್ಟಿ ಎಮ್ಮೆ ಹಾಲೆ ಇದು. ಐ ಬುಡಿ, ನಿಮ್ಗೊಳ್ಳೆ ತಮಾಸೆ... ಅಂತ ಗೊಣಗುತ್ತ ಹಾಲಮ್ಮ ಮುಂದಿನ ಮನೆಗೆ.ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಗೀತ ಬಿಸಿಬಿಸಿ ಕಾಫಿ ಕೈಗಿಟ್ಟಳು. ಅಡುಗೆ ಮನೆಯ ಸ್ಟಾಂಡಿನಿಂದ ಅವಳ ರೇಡಿಯೋ ಹಾಡುತ್ತಿತ್ತು. ಒಂದು ಬಾರಿ ಸ್ಮರಣೆ ಸಾಲದೇ...? ಮತ್ತೆ ಕನಸಲ್ಲಿ ಕಂಡ ನನ್ನವರ ನಸುನಗೆ ನೆನಪಾಯಿತು.


ಪೇಪರಿನವನು 'ಪೇಪಾಆಆರ್ ' ಎಸೆದು ಹೋದ. ಟೀವಿಯ ಹಿಂದೆ ತುಂಟ ಮೊಮ್ಮಗಳು ಧನ್ಯಳ ಕೈಗೆ ಸಿಗದಂತೆ ಅಡಗಿಸಿಟ್ಟಿದ್ದ ಕನ್ನಡಕ ಎತ್ತಿಕೊಂಡೆ. ಮುಖಪುಟದ ತುಂಬ ಕ್ರಿಕೆಟ್ಟು, ಅಪಘಾತ, ಸಚಿವರ ಮೇಲಿನ ಆರೋಪ, ರೈತರ ಆತ್ಮಹತ್ಯೆ.. ಅದೇ ಸುದ್ದಿಗಳೆ ದಿನದಿನವೂ ಹೊಸದಾದ ಅಕ್ಷರಗಳಲ್ಲಿ, ಗಾಢವಾದ ಮಸಿಯಲ್ಲಿ, ಒಮ್ಮೊಮ್ಮೆ ಕುಂದಿದ ಪೋಟೋಗಳಲ್ಲಿ ಮತ್ತೆ ಮತ್ತೆ. ನಾವೋ ಆಧುನಿಕ ಜನ. ಹಳತನ್ನ ತಣ್ಣಗಿಟ್ಟು ಬಿಸಿಯಾಗಿಸಿ ಸವಿಯುವ ಮಂದಿ. ಪೇಪರ್ ನೋಡಿದರೆ ಯಾಕೆ ಓದಲು ಕಲಿತೆನೋ ಅನ್ನಿಸಿಬಿಡುತ್ತದೆ...

ಅಷ್ಟರಲ್ಲಿ ಮೊಮ್ಮಗಳು ದಿವ್ಯ ಎದ್ದು ಬಂದು ತೊಡೆಗಾತು ಕೂತಳು. ಏನಮ್ಮಮ್ಮಾ ತುಂಬ ಯೋಚ್ನೆ.. ಎಲೆಕ್ಷನ್ ನಿಲ್ಲನಾ ಅಂದ್ಕತ್ತ ಇದ್ಯ? ಅಂತ ತನ್ನ ಎಂದಿನ ತುಂಟು ನಗೆ ಬೀರಿದಳು. ಹುಚ್ಚುಡುಗಿ. ೨೪ ತುಂಬಿ, ಜವಾಬ್ದಾರಿಯುತ ಕೆಲಸ, ಒಳ್ಳೆಯ ಸಂಬಳ ಇದ್ದರೂ, ಇಲ್ಲಿ ಬಂದು ಕೂತ ಕೂಡಲೆ, ಹಳೆಯ ತುಂಟಿಯಾಗಿ ಬಿಡುತ್ತಾಳೆ. ಎಷ್ಟೇ ನಿಂದು ತಲೆಹರಟೆ ಅಂತ ಬಯ್ಯಬೇಕು ಅಂದ್ಕೋತೀನಿ, ಅಷ್ಟರಲ್ಲೆ ಅಮ್ಮಮ್ಮ ಬಾ ಈ ಕತೆ ಓದಿ ಹೇಳ್ತೀನಿ ಅಂತ ಒಂದು ಚಂದದ ಕತೆ ಹೊಸೆಯುತ್ತಾಳೆ. ನನ್ನನ್ನ ಭಾವಲೋಕದ ದೋಣಿಯಲ್ಲಿ ಸುತ್ತಾಡಿಸಿ, ಅವರ ನೆನಪಿನ ತೀರದಲ್ಲಿ ಇಳಿಸಿ, ತಾನು ತನ್ನ ಯೋಚನೆಯ ಅಲೆಗಳಲ್ಲಿ ಮುಳುಗಿ ತೇಲುತ್ತಾಳೆ. ಅವಳ ಕತೆಗಳು ಖಾಲಿಯಾದ ಸಂಜೆಗಳಲ್ಲಿ, ನಿನ್ನ ಕತೆ ಹೇಳು ಅಂತ ಕೂರುತ್ತಾಳೆ. ಇವಳಿಗೆ ಎಷ್ಟು ಕತೆ ಹೇಳಲೂ ನಂಗೆ ಇಷ್ಟವೇ. ನಾನು ಕಣ್ಣು ಮುಚ್ಚಿ ಕನವರಿಸುವುದನ್ನೆಲ್ಲ ತಾನೂ ಕೇಳಿಸಿಕೊಳ್ಳುತ್ತಾ, ನಾನು ಎಂದೋ ಸರಿದು ಬಂದ ದಾರಿಯಲ್ಲಿ, ತನ್ನ ಅರಳು ಕಣ್ಗಳ ಹೊಳಪು ಬೀರುತ್ತಾ, ಅಲ್ಲಿಯ ಮೌನವನ್ನ ಹಾಗೇ ಹಿಡಿದಿಡುತ್ತಾ, ನನ್ನ ಲಹರಿಯ ಜೊತೆಜೊತೆಗೂ ಸಾಗುತ್ತಾಳೆ.


ಇವತ್ತು ಅವರು ಕಂಡಿದ್ದನ್ನ ಹೇಳಲಾ ಬ್ಯಾಡವಾ ಅಂತ ಯೋಚನೆ ಮಾಡಿದೆ. ಅಷ್ಟರಲ್ಲಿ ಅವಳು ಅಮ್ಮಮ್ಮ ಇವತ್ತು ಬೇಗ ಹೋಗವು ನಾನು ಆಫೀಸಿಗೆ ಅಂತ ಎದ್ದು ಸ್ನಾನಕ್ಕೆ ಹೋದಳು. ಸಂಜೆಗೆ ನೋಡೋಣ..


ತುಂಬಿದ ಮನೆ, ಮೂವರು ಮಕ್ಕಳ ಸಂಸಾರ, ಮೊಮ್ಮಕ್ಕಳು.. ಎಲ್ಲರೂ ಆಫೀಸ್, ಕಾಲೇಜು, ಶಾಲೆ, ನರ್ಸರಿ ಅಂತ ಹೋಗಿ ಆಯಿತು. ಪುಟ್ಟ ಮೊಮ್ಮಗಳು ಧನ್ಯ ಕಣ್ಣಿಗೆ ಬರುವ ಜೊಂಪೆಗೂದಲನ್ನು ತಳ್ಳುತ್ತ ಟಾಟಾ ಮಾಡಿ ನರ್ಸರಿಗೆ ಹೋದ ಮೇಲೆ ಮನೆಯಲ್ಲಿ ತಾನು ಮತ್ತು ಕೊನೆಯ ಸೊಸೆ ಗೀತ ಇಬ್ಬರೆ. ಅವಳು ತನ್ನ ಪಾಡಿಗೆ ಅಡಿಗೆ, ಹೊಲಿಗೆ, ಕೊಳಲು ಕಲಿಯುವುದು ಎಲ್ಲ ಮಾಡುತ್ತಿರುತ್ತಾಳೆ. ಮಧ್ಯೆ ಇಬ್ಬರೂ ಕೂತು ಹೊಸರುಚಿ ನೋಡುತ್ತೇವೆ ಟೀವಿಯಲ್ಲಿ. ಇವತ್ತು ಅದೇನೋ ಕರೆಂಟಿಲ್ಲ. ಹಾಗೇ ಆರಾಮ ಕುರ್ಚಿಯಲ್ಲೊರಗಿದೆ. ಕಣ್ಣು ಮುಚ್ಚಿದ ಕೂಡಲೆ ಅವರು ಎದುರಿಗೆ ಬರಬೇಕಾ. ಎಲ್ಲಿದ್ದರೋ ಇಷ್ಟು ಹೊತ್ತು. ಅಲ್ಲಿ ಕಂಪೌಂಡ್ ಹೊರಗಿನ ಹೊಂಗೆ ಮರದ ನೆರಳಲ್ಲಿದ್ದರೇನೋ ಖಾದಿ ಟೋಪಿಯ ಮೇಲೆ ನಾಲ್ಕಾರು ಹೂಗಳು..


ಪೇಪರ್ ಓದಲು ಹೋಗಿ, ಓದಲು ಕಲಿತಿದ್ದಕ್ಕೇ ಬೇಜಾರೇನೇ ಅನ್ನುತ್ತ ತೂಗುಮಂಚದ ಮೇಲೆ ಕೂತು ನಕ್ಕರು. ಹಳೆಯ ನೆನಪುಗಳ ಮಧುರ ಎಳೆಯೊಂದು ಬಿಚ್ಚಿಕೊಂಡಿತು. ಅಮ್ಮನಿಲ್ಲದೆ ಸೋದರ ಮಾವನ ಮನೆಯಲ್ಲಿ ಕೆಲಸದ ಹೊತ್ತಿಗೆ ಕೆಲಸ ಆಟದ ಹೊತ್ತಿಗೆ ಆಟವಾಡಿಕೊಂಡಿದ್ದ ಎಳೆಹುಡುಗಿಯನ್ನು ಈ ಚಂದಗಂಭೀರ ಶ್ರೀನಿವಾಸ ಮದುವೆಯಾಗಿ ಹಳ್ಳಿಯಿಂದ ತಾಳಗುಪ್ಪೆ ಪೇಟೆಗೆ ಕರೆದುತಂದಿದ್ದರು.


ಅಮ್ಮನ ಛಾಪು ಮನದ ಮೆತ್ತೆಯಲ್ಲಿ ಊರುವ ಮೊದಲೆ ಅಮ್ಮ ಸತ್ತೋಗಿದ್ದಳು ತನಗೆ. ಅಪ್ಪನ ಛಾಪಿರಲಿ, ನೆನಪು ಕೂಡ ಇಲ್ಲ. ಇಬ್ಬರು ಅಕ್ಕಂದಿರು,ಒಬ್ಬ ಅಣ್ಣನ ನಂತರ ಹುಟ್ಟಿದ ಹುಡುಗಿ.. ಊರು ಹೊಸಬಾಳೆಯಂತೆ.. ಹೊಸ ಬಾಳು, ಹೊಸತರದ ಬಾಳು, ಹೊಸದಾಗಿ ಬಾಳು ಅಂತ ಆ ಹೆಸರಿಟ್ಟರಾ? ಯೋಚನೆ ಮಾಡಿದರೆ ಕಚಗುಳಿಯಾಗುತ್ತದೆ. ಚಿಕ್ಕಂದಿನಲ್ಲಿ ಊರಿನ ಹೆಸರು ಕೇಳಿದ ಮಾತ್ರಕ್ಕೆ ಅಳು ಬಂದು ಬಿಡುತ್ತಿತ್ತು, ಮದುವೆಯಾದ ಮೇಲೆ ಒಂದು ಮಧುರ ನೆನಪು, ಆಮೇಲಾಮೇಲೆ ಕತ್ತಲಲ್ಲಿ ದೂರದಲಿ ಮಿನುಗುವ ಚುಕ್ಕಿಯ ಅನುಭೂತಿ, ಈಗ ಇಳಿವಯಸ್ಸಿನಲ್ಲಿ "ನಮ್ಮದೇನಿದೆ, ಎಲ್ಲ ಇಷ್ಟೆ" ಅಂತ ಬುದ್ಧನ ಹಾದಿ ತುಳಿವಾಗ ಊರ ಹೆಸರು ಹುಡುಗಾಟಕ್ಕೆ ಹಚ್ಚುತ್ತದೆ. ಹೆಸರಲ್ಲೇನಿದೆ ಅನಿಸುತ್ತದೆ.

ಅಮ್ಮ ಸತ್ತಾಗ ಅಕ್ಕಂದಿರಿಬ್ಬರಿಗೆ ಮದುವೆಯಾಗಿತ್ತು. ತನಗೋ ೭ ರಿಂದ ಎಂಟಂತೆ.ಸೋದರತ್ತೆ ಮಾವ ಅಚ್ಛೆಯಿಂದ ಕರೆದುಕೊಂಡು ಹೋಗಿ ಸಾಕಿದ್ದರು. ಅವರ ಮನೆಮಗಳಂತೆ ಬೆಳೆದೆ. ಸಿರಿವಂತಿಕೆಯ ಬದುಕಲ್ಲ. ಹಳ್ಳಿಮನೆಯ ಪುಟ್ಟ ಆವರಣದ ಬೆಚ್ಚನೆಯ ಬದುಕು. ಮನೆಕೆಲಸ ಒಂದೊಂದಾಗಿ ಕಲಿತೆ. ಸಮಯವಿದ್ದಾಗ ಅತ್ತೆಯ ಮತ್ತು ಪಕ್ಕದ ಮನೆಗಳ ಓರಗೆಯ ಮಕ್ಕಳೊಂದಿಗೆ ಆಟ. ಪಕ್ಕದ ಮನೆಯ ಲಲಿತೆಯ ಅಮ್ಮನ ಹತ್ತಿರ ಘಮಘಮ ಎನ್ನುವ ಪೌಡರಿತ್ತು. ಆಗೆಲ್ಲ ಎಲ್ಲರ ಮನೆಯಲ್ಲೂ ಸೋಪು, ಪೇಸ್ಟು,ಪೌಡರ್ ಇತ್ಯಾದಿ ಇರುತ್ತಿರಲಿಲ್ಲ. ಅಪರೂಪದ ಸ್ವರ್ಗದಿಂದ ಜಾರಿಬಿದ್ದ ವಸ್ತುಗಳಂತೆ ಅವು ನಮಗೆ. ನನಗೆ ಅದನ್ನು ಹಚ್ಚಿಕೊಂಡು ಪರಿಮಳ ಮೂಸುವಾಸೆ. ಅದೂ ಬಿಳೀಕಿದ್ದಿದ್ದರಿಂದ ಹಚ್ಚಿಕೊಂಡು ಬೆಳ್ಳಗೆ ಹೊಳೆಯುವಾಸೆ. ಯಾರನ್ನು ಕೇಳಲಿ. ದೊಡ್ಡವಳಲ್ಲವಾದರೂ, ತಾಯಿಯಿಲ್ಲದ ಹುಡುಗಿಯನ್ನು ಇವರು ಸಾಕಿಕೊಂಡಿರುವುದರ ಜವಾಬ್ದಾರಿಯ ಪೂರ್ಣ ಅರಿವಿತ್ತು. ಹೊಟ್ಟೆ ತುಂಬ ಬಡಿಸುತ್ತಾರೆ, ಲಂಗ ಹರಿದರೆ ಬೇರೆ ತರುತ್ತಾರೆ, ಆದರೆ ಪೌಡರ್ ಬೇಕೆಂದು ಹೇಗೆ ಕೇಳಲಿ? ಅತ್ತೆಯೇ ಹಚ್ಚುವುದಿಲ್ಲ! ಈ ಶೋಕಿ ಬೇರೆ ಅಂತ ಹುಲಿಮೀಸೆಯ ಮಾವ ಬಯ್ದರೆ ಅವಮಾಆಆನ. ಏನು ಮಾಡಲಿ. ಕೂತರೂ ನಿಂತರೂ ಕಣ್ಣ ಮುಂದೆ, ಚಿತ್ರಚಿತ್ರದ ತಗಡಿನ ಡಬ್ಬಿ ಮತ್ತು ಆ ಪರಿಮಳ ಭರಿತ ಬಿಳೀ ಪುಡಿ.
ಅವತ್ತು ರಾತ್ರೆಯೂ ಮಲಗುವಾಗ ಅತ್ತೆಯೊಡನೆ ಕೇಳಲಾಗದ ನಿರಾಸೆ, ಹೊದಿಕೆಯನ್ನು ಹೊದ್ದೊಡನೆ ಕಣ್ಣೀರಾಗಿ ಇಳಿಯಿತು. ಅಮ್ಮನನ್ನು ಕನವರಿಸಿದೆ. - ಈಗ ನಗು ಬರುತ್ತದೆ. ಅತ್ತೆಯಾದರೂ ಅಮ್ಮನಿಲ್ಲದವಳು ಎಂಬ ಕನಿಕರದಿಂದ ಹೇಗಾದ್ರು ಒಂಚೂರು ಪೌಡರ್ ಕೊಡಿಸ್ತಿದ್ದಳೇನೋ, ಅಮ್ಮ ಈ ಶೋಕಿ ಆಲೋಚನೆಯನ್ನು ಸಹಿಸದೆ ನಾಲ್ಕು ಗುದ್ದುತ್ತಿದ್ದಳು ಮಗಳೆಂಬ ಸಲಿಗೆಯಿಂದ. ಆದರೂ ದುಃಖವೆಂದರೆ ಅದಕ್ಕೆ ಅಮ್ಮನ ಮಡಿಲೇ ಬೇಕು. ಅವಳಿಲ್ಲದಿದ್ದರೆ ಅವಳ ನೆನಪೂ ಸಾಕು.

ಬೆಳಿಗ್ಗೆ ಎದ್ದು ಬಚ್ಚಲೊಲೆಯ ಬೂದಿ ಬಳಿದು ಹಿತ್ತಲ ಕೊನೆಗೆ ಸುರಿದೆ. ಬಚ್ಚಲೊಲೆಯ ಉರಿ ಹಿರಿದಾಗುವಷ್ಟರಲ್ಲಿ ಅತ್ತೆ ಎದ್ದಿದ್ದಳು. ನಾನು ಮುಖ ತೊಳೆದು ಎಂದಿನಂತೆ, ಹಿತ್ತಲ ಸಂಪಿಗೆ ಮರದಡಿ ಹೋದೆ. ಮರದ ತುಂಬ ಘಮಘಮ ಹೂಗಳು.. ಆಹ್.. ಉಪಾಯ ಹೊಳೆದು ಬಿಟ್ಟಿತು. ದಿನಾ ಪೂಜೆಯಾದ ಮೇಲೆ ಎಸೆಯುವ ಸಂಪಿಗೆ ಹೂಗಳನ್ನೆಲ್ಲ ಒಣಗಿಸಿ, ಪುಡಿ ಮಾಡಿ, ಆಗಲೇ ನುಣ್ಣಗಾಗಿರುವ ಬೂದಿಯನ್ನು ಮತ್ತು ನುಣ್ಣಗಾಗಿಸಿ, ಅದಕ್ಕೆ ಸೇರಿಸಿಬಿಟ್ಟರೆ ಘಮಘಮ ಪೌಡರ್ ಆಗತ್ತೆ. ಯಾರನ್ನೂ ಕೇಳುವ ಹಂಗೇ ಇಲ್ಲ.. ನನ್ನ ಬುದ್ಧಿವಂತಿಕೆಗೆ ನನಗೇ ಖುಷಿಯಾಯಿತು. ನಾಲ್ಕು ದಿನದಲ್ಲಿ ಪೌಡರ್ ಕೂಡ ತಯಾರಾಯಿತು. ಅತ್ತೆ ಪಕ್ಕದ ಮನೆಗೆ ಮಾತಿಗೆ ಹೋದ ಸಮಯ ನೋಡಿ, ಚೂರೇ ಚೂರು ಪೌಡರ್ ನ ಹಿಡಿದು, ಮಾವ ಊಟ ಮಾಡುವ ಪಳಪಳ ಹೊಳೆಯುವ ಸ್ಟೀಲ್ ತಟ್ಟೆಯಲ್ಲಿ ಮುಖ ನೋಡಿಕೊಳ್ಳುತ್ತಾ ಸವರತೊಡಗಿದೆ. ಓಹ್ ಬೆಳ್ಳಗಾಗಿಬಿಟ್ಟಿದೆ! ಸಂಪಿಗೆಯ ಪರಿಮಳ ಕೂಡಾ! ಬೂದಿಯ ಹಸಿ ವಾಸನೆ ಚೂರು ಇದ್ರೂ ಆ ಸಂಭ್ರಮದಲ್ಲಿ ಗೊತ್ತಾಗಲಿಲ್ಲ.


ನೋಡುತ್ತ ನಿಂತವಳಿಗೆ - ಕನ್ನಡಿ ಮುಂದಷ್ಟು ಹೊತ್ತೂ ಬರೆಯದಿರುವ ಕವನ... - ಮಾವ ಹಿಂದೆ ಬಂದು ನಿಂತಿದ್ದು ಗೊತ್ತಾಗಲಿಲ್ಲ. ಮೀಸೆಯಂಚಲ್ಲೇ ನಗು ತಡೆ ಹಿಡಿದು ಅತ್ತೆ ಎಲ್ ಹೋದ ಸುಶೀಲಾ ಬೇಗ ಬರಕ್ಕೇಳು ಯಾರೋ ಬರ್ತ ಈಗ ಮನೀಗೆ ಅಂದನು ಮಾವ.. ನಾನು ಸಧ್ಯ ಬಯ್ಯಿಸಿಕೊಳ್ಳಲಿಲ್ವಲ್ಲಾ ಎಂಬ ಸಮಾಧಾನದಲ್ಲಿ, ಪೌಡರ್ ಹಚ್ಚಿಕೊಂಡ ಸಂಭ್ರಮದಲ್ಲಿ ಆಚೆ ಮನೆಗೆ ಓಡಿದೆ ಅತ್ತೆಯನ್ನು ಕರೆತರಲು.


ಮನೆಗೆ ಬಂದು ಮಾವನ ಜೊತೆ ಗುಸುಗುಸು ಮಾತಾಡಿದ ಅತ್ತೆ ಅಡಿಗೆಮನೆಯಲ್ಲಿ ತಯಾರಿಗೆ ತೊಡಗಿದಳು. ನಾನಿನ್ನು ಪರಿಮಳದ ಲೋಕದಿಂದ ನೆಲಕ್ಕಿಳಿದಿರಲಿಲ್ಲ.


ಅವರ್ಯಾರೋ ಬಂದರು. ಚಂದ ಗಂಭೀರ ಮನುಷ್ಯ, ತಲೆಯ ಮೇಲೊಂದು ಬಿಳೀ ಟೋಪಿ. ಮಾವ ಸಡಗರದಿಂದ ಕೂರಿಸಿ, ಅತ್ತೆಯನ್ನು ಕರೆದ. ಶಿರಾ - ಹಾಲು ಸಮಾರಾಧನೆಯಾದ ಮೇಲೆ, ಮಾವ ನನ್ನನ್ನು ಹತ್ತಿರಕ್ಕೆ ಕರೆದ. ಓಡಿ ಹೋದ ನನ್ನನ್ನು ಅವರಿಗೆ ತೋರುತ್ತಾ - ಇದೇ ನಮ್ಮನೆ ಕೂಸು, ನಿಂಗ ನೋಡಲ್ ಬಂದಿದ್ದು, ಅಡ್ಡಿಲ್ಯಾ, ಅಂದ. ನನಗೆ ಭಯ ನನ್ಯಾಕೆ ಇವರು ನೋಡಲು ಬಂದಿದ್ದಾರ್‍ಎಂದು.. ಪಿಳಿ ಪಿಳಿ ಕಣ್ ಬಿಟ್ಟೆ. ಆ ಚಂದದ ಮನುಷ್ಯನ ಕಣ್ಗಳು ಒಮ್ಮೆ ನನ್ನ ನೋಡಿ ಆ ಕಡೆ ಹೊರಳಿದವು. ಮಾತಾಡಾಣ, ಅವಳನ್ನ ಒಳಗೆ ಕಳಿಸಿ ಎಂದರು. ಆಮೇಲೆ ಮಾವ ಅವರ ಜೊತೆ ಗದ್ದೆ ಹಾಳಿಯಲ್ಲಿ ಓಡಾಡುತ್ತ ಏನೇನೋ ಮಾತಾಡಿ, ಅವರನ್ನ ಕೂಡು ದಾರಿಯವರೆಗೆ ಕಳಿಸಿ ಬಂದ. ಮುಖದಲ್ಲಿ ಸಂತೋಷ. ಬಂದವನೆ, ನನ್ನ ಗಲ್ಲ ಸವರಿ, ಸುಶೀಲಾ ನಿನ್ನ ಅದೃಷ್ಟ ಅಂದ್ಕೋ. ಒಳ್ಳೇ ಜನ, ಒಪ್ಕ್ಯಂಡಾತು, ಮುಂದಿನ ತಿಂಗಳೇ ಮದುವೆ... ನನಗೆ ಗಾಬರಿ, ಅತ್ತೆಗೆ ಖುಷಿ.


ಮದುವೆ ಚಂದವಾಗಿ ಮುಗಿಯಿತು. ಮದುವೆಯಾಗಿ ಕೆಲದಿವಸ ನಾನು ಮಾವನ ಮನೆಯಲ್ಲೆ ಇದ್ದೆ. ಅತ್ತೆ ಅಡುಗೆಯ ಹಲಕೆಲ ವಿಷಯಗಳನ್ನು ಹೇಳಿಕೊಟ್ಟಳು. ಶ್ರಾವಣದೊಂದು ಮಧ್ಯಾಹ್ನ ಮೋಡಗಳೊಡನೆ ಆಡುವ ಸೂರ್ಯನ ಕಣ್ಣಾಮುಚ್ಚಾಲೆ ನೋಡುತ್ತ ಕೂತಿದ್ದೆ. ಅವರು ಬಂದರು. ನೋಡಿ ನಾಚಿಕೆ. ಆದ್ರೂ ಕಾಲ್ ತೊಳೆಯಲು ನೀರಿಟ್ಟು ಒಳಗೋಡಿದೆ, ಅತ್ತೇ ಅವರು ಬಂದಿದ್ದಾರ್‍ಎ ಅನ್ನುತ್ತ. ಒಂದೆರಡು ದಿನ ಅಲ್ಲಿ ಉಳಿದರು. ಅತ್ತೆ ನನಗೇ ಬಡಿಸಲು ಹೇಳಿದಳು. ಸ್ನಾನಕ್ಕೆ ನೀರು ತೋಡಲೂ.. ಒಂದು ಮಧ್ಯಾಹ್ನ ಊಟವಾದ ಮೇಲೆ, ಅತ್ತೆ ಕಾಫಿ ಕೊಟ್ಟು ಅವರಿಗೆ ಕೊಡಲು ಹೇಳಿದಳು. ತಗೊಂಡು ಹೋಗಿ ಅವರ ಕೋಣೆಯಲ್ಲಿ ನೋಡಿದರೆ ಅವರಿಗೆ ಜೋರು ನಿದ್ದೆ. ಹಾಗೇ ತಿರುಗೆ ಬಂದೆ. ಅತ್ತೆಗೆ ನಗು, ಅವರನ್ನು ಮೈ ಮುಟ್ಟಿ ಎಬ್ಬಿಸಿ ಕೊಡು ಅಂತ ಮತ್ತೆ ಕಳಿಸಿದಳು. ನನಗೋ ಮೈಯೆಲ್ಲ ಬೆವರು. ಅಲ್ಲಿ ಹೋಗಿ ನೋಡಿದರೆ ಸಧ್ಯ ಅವರೆದ್ದು ಮಂಚದ ಮೇಲೆ ಕೂತಿದ್ದರು. ನಿಧಾನವಾಗಿ ಹೋಗಿ ಅಲ್ಲಿದ್ದ ಸ್ಟೂಲಿನ ಮೇಲೆ ಕಾಫಿ ಲೋಟ ಇಟ್ಟೆ. ಮತ್ತೆ ತಿರುಗಿ ಓಡಬೇಕು ಅಷ್ಟರಲ್ಲಿ ಅವರು ಕರೆದರು. ಇರು ಸುಶೀಲಾ, ಲೋಟ ಕೊಡುತ್ತೇನೆ ಅಂತ, ತಲೆ ತಗ್ಗಿಸಿ ನಿಂತೆ. ಲೋಟ ತಗೊಂಡು ಒಂದೇ ಹಾರಿಗೆ ಮೆತ್ತಿ ಮೆಟ್ಟಲಿಳಿದು ಓಡಿದೆ.


ಮರುದಿನ ಅವರ ಜೊತೆಯಲ್ಲಿ ಅವರ ಮನೆಗೆ ಹೋಗಬೇಕಿತ್ತು. ಬೆಳಿಗ್ಗೆ ಎದ್ದ ಕೂಡಲೆ ಅಮ್ಮ ನೆನಪಾದಳು. ದುಃಖವಾಯಿತು. ಯಾರಿಗೆ ಹೇಳುವುದು.. ಸ್ನಾನ ಮಾಡಿ ಸೀರೆಯುಟ್ಟು ಕುಳಿತೆ. ನಮಸ್ಕರಿಸಿ ಹೊರಡುವಾಗ ಮಾವ - ಇನ್ಮುಂದೆ ಇವರೆ ನಿನಗೆ ಎಲ್ಲ ಸುಶೀಲಾ, ಸರಿಯಾಗಿ ನಡೆದುಕೋ, ಅವರ ಮನಸ್ಸನ್ನ ನೋಯಿಸಬೇಡ ಎಂದನು. ಅತ್ತೆಯ ಕಡೆ ನೋಡಿದೆ. ಕಂಬನಿತುಂಬಿದ ಅವಳ ಕಣ್ಣು ನೋಡಿ ನನಗೂ ದುಃಖ ತಡೆಯಲಾಗುತ್ತಿಲ್ಲ. ಆದ್ರೂ ಹೇಗೋ ಮೂಗೇರಿಸುತ್ತ, ನನ್ನ ಪುಟ್ಟ ಚೀಲವನ್ನ ಹೊಟ್ಟೆಗೆ ಅಮುಕಿ, ಅವರ ಹಿಂದೆ ಹೋಗಿಬಿಟ್ಟೆ.


ಚಿಕ್ಕ ಹಳ್ಳಿಯಿಂದ ತಾಳಗುಪ್ಪಾದಂತಹ ದೊಡ್ಡ ಊರಿಗೆ ಬಂದ ಒಂದೆರಡು ದಿನ, ಮನೆ ಬಾಗಿಲ ಸಂದಿಯಿಂದ ರಸ್ತೆಯಲ್ಲಿ ಓಡಾಡುವ ವಾಹನ, ಜನಗಳನ್ನು ನೋಡುವುದೇ ಒಂದು ಕೆಲಸವಾಗಿತ್ತು. ಅವರದ್ದು ಮನೆಗೇ ಅಂಟಿಕೊಂಡಿದ್ದ ಕಿರಾಣಿ ಅಂಗಡಿ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಂಗಡಿಯಲ್ಲೆ.ಮಧ್ಯಾಹ್ನ ಊಟ ಮತ್ತು ನಿದ್ದೆಗೆ ಸ್ವಲ್ಪ ಹೊತ್ತು ಬಾಗಿಲು ಹಾಕಿ ಒಳಗೆ ಬರುತ್ತಿದ್ದರು. ಮೊದಲು ಕೆಲವು ದಿನ ನಾನು ಮಾಡಿದ ಅಡುಗೆಯಲ್ಲಿ ಉಪ್ಪು,ಕಾರ,ಹುಳಿ ಎಲ್ಲ ಹೆಚ್ಚುಕಡಿಮೆಯಾಗಿರುತ್ತಿತ್ತು. ಒಬ್ಬಳೇ ಮಾಡಿ ಗೊತ್ತಿಲ್ಲದ ೧೫ರ ಪೋರಿ ನಾನಾಗ. ಅವರು ಅನುಸರಿಸಿಕೊಂಡು ಹೋದರು. ಆ ಮೊದಲವಾರದಲ್ಲಿ ಉಪ್ಪಿನಕಾಯಲ್ಲೇ ಊಟವಾಯಿತು ಅಂದರೇ ಸರಿ.ನಿಧಾನವಾಗಿ ಅಡಿಗೆ ಕಲಿತೆ.ಅಡುಗೆ ಮಾಡುತ್ತ ಮಾಡುತ್ತ ಕೈ ಹದ ಕಂಡುಕೊಂಡಿತು. ನನ್ನವರ ಅಣ್ಣನ ಮಕ್ಕಳು ಇಬ್ಬರು, ತಾಳಗುಪ್ಪದಲ್ಲೇ ಓದಲು ಬಂದರು. ಈಗ ಜೊತೆಗೆ ಮಾತಿಗೆ ಜನ ಸಿಕ್ಕರು.


ಒಂದಿನ ಮಧ್ಯಾಹ್ನ ನನ್ನ ಊಟ ಮುಗಿದು ಗೋಮೆ ಮಾಡುವಷ್ಟರಲ್ಲಿ ಎದ್ದ ಅವರು, ಕೈಗೆ ಒಂದು ಪುಸ್ತಕ ಕೊಟ್ಟು ಬಿಡುವಾದಾಗ ಕೂತು ಇದನ್ನ ಓದು, ಒಳ್ಳೆಯದು ಅಂದರು. ಪುಸ್ತಕ ಕೈಯಲ್ಲಿ ಇಟ್ಟುಕೊಂಡ ನಾನು ಗಲಿಬಿಲಿಯಾಗಿ ಅವರನ್ನು ನೋಡಿದೆ. ಗಮನಿಸಿದ ಅವರಿಗೆ ಗೊತ್ತಾಯಿತು ನನಗೆ ಓದು ಬರುವುದಿಲ್ಲ ಅಂತ. ಸಂಜೆ ಮಕ್ಕಳು ಅಭ್ಯಾಸ ಮಾಡುವಾಗ ನೀನೂ ಕುಳಿತು ಅಕ್ಷರ ಕಲಿ ಅಂದರು. ಅಯ್ಯೋ ನಾನೇನು ಓದು-ಬರಾ ಕಲಿತು ಮಂತ್ರಿಯಾಗಬೇಕಾ ಅದೆಲ್ಲ ನಂಗ್ಯಾಕೆ ಅಂದುಬಿಟ್ಟೆ. ಅವರಿಗೆ ನಗು, ಓದು ಬರಹದಿಂದ ಬೇರೆ ಉಪಯೋಗವೂ ಇದೆ. ಏನೂ ಇಲ್ಲದ ಮನುಷ್ಯನ ಜೊತೆಗೇ ನಡೆದು ಬರುವುದು ಕಲಿತ ಓದು ಮಾತ್ರ. ನೀನೂ ಕಲಿ. ಒಳ್ಳೆಯದು ಅಂದರು. ಅರೆ ಮನಸ್ಸಿನಿಂದಲೇ ನನ್ನ ವಿದ್ಯಾಭ್ಯಾಸ ಶುರುವಾಯಿತು.ಸಂಜೆ ಮಕ್ಕಳು ಒಂದು ಸ್ಲೇಟಿನಲ್ಲಿ ಅ ಆ ಬರೆದು ತಿದ್ದಿಸತೊಡಗಿದರು. ಮಕ್ಕಳು ಓದುವಾಗ ಪಕ್ಕದಲ್ಲೇ ಕೂತು ಚಿತ್ರ ನೋಡತೊಡಗಿದೆ. ಮೊದಮೊದಲು ರಗಳೆಯೆಂದು ಕೊಂಡಿದ್ದು ಬರಬರುತ್ತಾ ಇಷ್ಟವಾಗತೊಡಗಿತು. ಅವರು ದಿನವೂ, ರಾತ್ರಿ ಮಲಗುವ ಮೊದಲು ಕಾಲು ಗಂಟೆ ಅವತ್ತು ನನಗೆ ಕೊಟ್ಟಿದ್ದ ಪುಸ್ತಕ ಓದಿ ಹೇಳುತ್ತಿದ್ದರು. ಅದು ಗಾಂಧೀ ಚರಿತ್ರೆ. ಅವರ ಬಿಳಿ ಟೋಪಿಗೆ ಈಗ ಹಲವು ಅರ್ಥ ಹೊಳೆಯತೊಡಗಿದವು.


ಆತಾ ನೆನಪು ಮಾಡ್ ಕ್ಯಂಡಿದ್ದು.. - ನಕ್ಕರು ತೂಗುಮಂಚದ ಮೇಲೆ ಕುಳಿತ ನನ್ನವರು. ನನಗೂ ನಗು, ಅವತ್ತಿನ ಎಡಬಿಡಂಗಿ ಸುಶೀಲಳನ್ನು ನೆನಪಿಸಿಕೊಂಡು ನನಗೂ ನಗು ಬಂತು. ಅಷ್ಟರಲ್ಲಿ ಹೋದ ಕರೆಂಟು ಬಂತೆಂದು ಕಾಣುತ್ತೆ. ಫ್ಯಾನ್ ತಿರುಗತೊಡಗಿತು. ಅವರು ಅಲ್ಲೇ ಕರಗಿದರು.


ಗೀತಾ ಊಟಕ್ಕೆ ತಯಾರಿ ನಡೆಸಿದಳು. ನುಗ್ಗೆಸೊಪ್ಪಿನ ಪಲ್ಯ, ಕೊಡಸಿನ ಹೂ ತಂಬುಳಿ, ಕಚ್ಚಿಕೊಳ್ಳಲು ಮಾವಿನಮಿಡಿ ಉಪ್ಪಿನಕಾಯಿ ಊಟ ರುಚಿಯಾಗಿತ್ತು. ಇವತ್ತು ರಾತ್ರೆ ಗೀತಾ,ಮಗ ಮೂರ್ತಿ,ಮೊಮ್ಮಗಳು ಧನ್ಯ ಒಂದುವಾರದ ಮಟ್ಟಿಗೆ ಊರಿಗೆ ಹೊರಡುವವರಿದ್ದರು. ಗೀತಳ ಊರು ನೇಗಿಲೋಣಿ, ಪಶ್ಚಿಮ ಘಟ್ಟಗಳ ತಪ್ಪಲಿನ ಚಂದದ ಹಳ್ಳಿ. ಹತ್ತಿರದಲ್ಲೇ ಹರಿಯುವ ಶರಾವತಿ.. ಅಲ್ಲಿಯ ಮಳೆಗಾಲ ತುಂಬ ಚಂದ. ಮೊಮ್ಮಗಳು ಹುಟ್ಟಿದ್ದು ಅಂತಹ ಒಂದು ಮಳೆಗಾಲದಲ್ಲೆ. ಇಲ್ಲೆ ಬೆಂಗಳೂರಲ್ಲಿ ಹುಟ್ಟಿದ ಅವಳನ್ನು ಅಮ್ಮನ ಜೊತೆಗೆ ಬೆಚ್ಚಗೆ ಅವರಮ್ಮನ ಮನೆಗೆ, ಮಗ ಮೂರ್ತಿಯ ಜೊತೆ ಒಂದು ಜಡಿಮಳೆಯ ದಿನವೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದೆವು. ಒಂದು ೮-೯ ಗಂಟೆಯ ಹಾದಿ. ಪ್ರಯಾಣದ ಜೂಗರಿಕೆಯಿಂದ ಕಣ್ತೆಗೆದು ಕಿಟಕಿಯಿಂದಾಚೆ ನೋಡಿದಾಗೆಲ್ಲ ಕಂಡ ನೋಟ ಹಚ್ಚಗಿತ್ತು. ಮಲೆನಾಡಿನ ಹಳ್ಳಿಮನೆಯಲ್ಲಿ ನಾವೂ ನಾಲ್ಕು ದಿನ ಇದ್ದು ಬಂದಿದ್ದೆವು.


ಊಟ ಮುಗಿಸಿದ ಗೀತ, ರಾತ್ರಿಯ ಪ್ರಯಾಣಕ್ಕೆ ಸವರಿಸಲು ಹೊರಟರೆ ನಾನು ನಮ್ಮನೆಯ ಪುಟ್ಟ ನಾಯಿ ಪಿಟ್ಕಿಯ ಊಟೋಪಚಾರ ಮಾಡಿದೆ. ಈ ನಾಯಿಯೇ ಪುಟ್ಟಗೆ. ಅದೆಂತದೋ ಡ್ಯಾಶುಂಡ್ ಅಂತ ಮೊಮ್ಮಗಳು ದಿವ್ಯಾ ಹೇಳುತ್ತಾಳೆ, ನಂಗೆ ಅದನ್ನು ಸರಿಯಾಗಿ ಹೇಳಲು ಬರೋಲ್ಲ. ಅದಕ್ಕೆ ನಾಲ್ಕು ಇಲಿಮರಿಯಂತಹ ಮರಿಗಳು. ಕಾದೂ ಕಾದೂ ಮಳೆ ಶುರುವಾದ ಮೇಲೆ ಮರಿ ಹಾಕ್ಕೊಂಡಿದೆ ಮಳ್ಳು. ಇನ್ನೂ ಎರಡೇ ದಿನಗಳಾಗಿವೆ. ಹತ್ತಿರ ಹೋಗಲು ನನ್ನನ್ನು ಮತ್ತು ದಿವ್ಯಳನ್ನು ಮಾತ್ರ ಬಿಡುತ್ತದೆ. ಪುಟ್ಟ ಕಪ್ಪು ನಾಯಿ, ಮುದ್ದು ಮಾತಾಡಿಸಿ ತಲೆಸವರಿ ಕರೆದು ಊಟವಿಡದೆ, ಹಾಗೇ ತಟ್ಟೆಯಲ್ಲಿಟ್ಟರೆ ಊಟವೇ ಮಾಡುವುದಿಲ್ಲ. ಮಗುವಿನಂತೆ ಸ್ವಭಾವ. ದಿವ್ಯ ಬಂದು ಗೇಟು ತೆಗೆದರೆ ಹಿತ್ತಲ ಗೂಡಿನಲ್ಲಿ ಇರುವ ಇದಕ್ಕೆ ಗೊತ್ತಾಗಿ ಕುಂಯಿಗುಡುತ್ತದೆ. ಅವಳು ಬಂದವಳೆ ಹತ್ತಿರಹೋಗಿ ಮುದ್ದಾಡದೆ ಜಗುಲಿಯಲ್ಲಿ ಕೂತರೆ, ಅವಳು ಅಲ್ಲಿ ಹೋಗುವವರೆಗೂ ಕುಂಯ್ ಕುಂಯ್ ರಾಗ. ತುಂಬ ದಿನಗಳು ನೋಡದೆ ಇದ್ದರೆ ಮನುಷ್ಯರೇ ಮರೆತು ಹೋಗುತ್ತಾರೆ. ನಾಯಿ ಮಾತ್ರ ಹಾಗಲ್ಲ. ಎಂದೋ ಯಾರೋ ತೋರಿಸಿದ ಆಪ್ತತೆಗೆ - ಅದು ಅನ್ನ ಹಾಕಲೇ ಬೇಕೆಂದಿಲ್ಲ, ಅದು ಹತ್ತಿರ ಬಂದಾಗ ತಲೆ ಸವರಿ, ಕತ್ತಿನ ಕೆಳಗೆ ನೇವರಿಸಿದರೂ ಸಾಕು - ಇನ್ನೆಂದೂ ಋಣಿಯಾಗಿರುತ್ತದೆ. ಮತ್ತೆ ಬಂದಾಗ ಬಾಲವಲ್ಲಾಡಿಸುತ್ತದೆ.


ಇತ್ತೀಚೆಗೆ ನಾಯಿಗಳು ಉಗ್ರಗೊಂಡು ಪುಟ್ಟ ಮಕ್ಕಳನ್ನ ಕಚ್ಚುವ, ಕೊಲ್ಲುವ ಸುದ್ದಿ ಎಲ್ಲೆಲ್ಲೂ.. ಮನಸ್ಸು ಕುದಿಯುತ್ತದೆ. ಮಕ್ಕಳ ಕನ್ನಡ ಪುಸ್ತಕದಲ್ಲಿ ನಾಯಿ ಮನುಷ್ಯನ ಪ್ರಾಮಾಣಿಕ ಗೆಳೆಯ ಅಂತ ಓದಿದ್ದು ಸುಳ್ಳು ಮಾಡುವ ಮಟ್ಟಿಗೆ ನಮ್ಮ ನಾಗರಿಕತೆ ಮುಂದುವರೆಯಿತಲ್ಲಾ ಅಂತ. ನಮಗೆ ತಿನ್ನಬೇಕು ಅಂತ ಮಾತ್ರ ಗೊತ್ತು. ತಿಂದು ಕೈ ತೊಳೆಯುವಾಗ ಹೊಟ್ಟೆ ತುಂಬಿರುತ್ತದೆ. ಕಸ ಒಟ್ಟು ಮಾಡಿ ಬಿಸಾಕಲು ಕಾಲು ಕೈ ಕೇಳುವುದಿಲ್ಲ. ಬೀದಿಯ ತುಂಬಾ ನಾಯಿಗಳು ಓಡಾಡುವಾಗ, ಪ್ರಾಣಿ ದಯಾ ಸಂಘಗಳು ತುಂಬ ಕರುಣೆಯಿಂದ ಅವರವರ ಕಟ್ಟಡದಲ್ಲಿ ನಿದ್ದೆ ಹೋಗಿರುತ್ತಾರೆ. ಲೆಕ್ಕದ ಪುಸ್ತಕದಲ್ಲಿ ಮಾತ್ರ ಪಡೆದ ಫಂಡುಗಳಿಗೆ ಗತಿ ಕಾಣಿಸಿ, ಮನೆಯ ಸಂಪತ್ತು ಮಾಳಿಗೆಯೇರುತ್ತದೆ. ಸರ್ಕಾರಕ್ಕೇನು ಬೇಕು. ನಿನಗರ್ಧ ನನಗರ್ಧ. ಈ ವಿಷಯದಲ್ಲಿ ಮಾತ್ರ ಸಮಾನತೆಯೇ! ಎಲ್ಲ ಶಂಕುಸ್ಥಾಪನೆ ಮಾಡುತ್ತ, ಸಮಾನತೆಯ ಫಂಡು ಬಿಡುಗಡೆ ಮಾಡುತ್ತಾ, ಆಗಾಗ ನೇಣು ಬಿಗಿದುಕೊಳ್ಳುವ ರೈತರ ಮನ ಸಂತೈಸುವ ನಾಲ್ಕು ಮಾತಾಡಿ ಸುಮ್ಮನಾಗಿಬಿಡುವುದು. ನನಗೆ ರಾಜಕಾರಣಿಗಳೆಂದ್ರೆ ಹಿಂಸೆ, ಕಂಡರಾಗುವುದಿಲ್ಲ. ನಮ್ಮ ತಲೆಮಾರಿನ ಸಾವಿರಗಟ್ಟಲೆ ದೇಶಪ್ರೇಮಿಗಳು ಮನೆ,ಮಾರು,ಜೀವ ಬಲಿಗೊಟ್ಟು ಬರೆದಿಟ್ಟ ಸ್ವತಂತ್ರ ಭಾರತದ ಮ್ಯಾಪಿನ ತುಂಬ, ಈ ರಾಜಕೀಯದ ಒರಲೆಗಳು ಎಬ್ಬಿಸಿದ ಹುತ್ತ.


ಪಿಟ್ಕಿ ಊಟ ಮುಗಿಸಿ, ಬಾಲವಲ್ಲಾಡಿಸುತ್ತ, ಕಾಲುಗಳನ್ನು ಸವರಿಕೊಂಡು ಹೋಗಿ ತನ್ನ ಗೂಡಲ್ಲಿ ಮಲಗಿತು. ನಾನು ಕೈತೊಳೆದು, ಮಧ್ಯಾಹ್ನದ ನಿದ್ದೆಗೆ ಅಣಿಯಾದೆ. ಇನ್ನೇನು ಹೊದಿಕೆಯೆಳೆದುಕೊಳ್ಳಬೇಕು ಅಷ್ಟರಲ್ಲಿ - ಚೌಕಚೌಕದ ಹಸಿರುಕಪ್ಪು ಹೊದಿಕೆಯ ನೇಯ್ಗೆಯಿಂದ ಮೂಡಿ ಬಂದರು ಅವರು, ಅಲ್ಲೇ ಮಂಚದ ಮೇಲೆ, ಕಿಟಕಿಗೆ ಆನಿ ಕೂತು, ನಸುನಕ್ಕರು - ಎಷ್ಟು ಹರಿದುಹೋದರೂ ಈ ಹೊದಿಕೆಯನ್ನು ಬಿಡಲ್ಯಲಾ ಇನ್ನೂ ನೀನು ಅಂತ.


ಅವತ್ತು ನೀವು ಹೇಳದೆ ಕೇಳದೆ ಹೊರಟ ಮೇಲೆ, ನಿಮ್ಮ ಸ್ಪರ್ಶದ ನೆನಪಾಗಿ ಉಳಿದಿರುವುದು ಇದೊಂದೆ ನನಗೆ - ಉತ್ತರಿಸುತ್ತ ಅವತ್ತಿನ ನೆನಪು ಒತ್ತರಿಸಿ ಬಂತು.

ಯಾವುದೋ ಹಬ್ಬಕ್ಕೆ ಹೋಗಿದ್ದೆವು ಹೂಗೊಪ್ಪಲಿನ ಅಕ್ಕ-ಭಾವನ ಮನೆಗೆ. ಬೆಳಿಗ್ಗೆ ತಿಂಡಿ ತಿನ್ನುವಾಗ ಉಪ್ಪಿಟ್ಟು ಗಂಟಲಿಗೆ ಸಿಕ್ಕಿದ್ದೆ ನೆವ.. ಹಾಗೇ ಗೋಡೆಗೊರಗಿದರು, ನನಗೆ ಗಾಬರಿ ಅಳು ಎರಡೂ.. ಅಲ್ಲೆ ದೇವರ ಕೋಣೆಯಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದ ಭಾವಯ್ಯನನ್ನು ಕರೆದರೆ.. ಅವರು ಮುಗಿಸಿ ಬಂದೆ ಇರು ಎಂದು ಸನ್ನೆ ಮಾಡಿ, ಪೂರ್ತಿ ಜಪ ಮುಗಿಸಿ ಬರುವಾಗ ಸಾಕಷ್ಟು ಸಮಯ. ಇವರಿಂದ ಸ್ಪಂದನವೇ ಇಲ್ಲ. ಡಾಕ್ಟರನ್ನ ಕರೆಸಿ ನೋಡಿದರೆ, ಇವರು ನಮ್ಮನ್ನೆಲ್ಲ ಬಿಟ್ಟು ದೂರ ಸಾಗಿದ್ದರು. ಕೂಡಲೆ ಮಲಗಿಸಿ ಎದೆ ನೀವಬಾರದಿತ್ತೇನಮ್ಮಾ ಅಂತ ಡಾಕ್ಟರು ಕೇಳಿದ್ದರು. ನನಗೆ ನನ್ನನ್ನೆ ಕೊಂದುಕೊಳ್ಳುವಷ್ಟು ಬೇಜಾರಾಗಿ ಹೋಯಿತು. ನಾನು ಮೂಢೆ, ಇದೂ ಗೊತ್ತಾಗಲಿಲ್ಲವಲ್ಲ, ಸ್ವಲ್ಪ ಓದಿಕೊಂಡಿದ್ದರೆ ತಿಳಿಯುತ್ತಿತ್ತೇನೋ ಅನ್ನಿಸಿತ್ತು. ಅವರು ಸಾಯುತ್ತ ಬಿದ್ದಿದ್ದರೂ ಎದ್ದು ಬರದೆ ಜಪಿಸುತ್ತ ಕೂತ ಭಾವನೆಂದರೆ ಬೇಸರವಾಗಿತ್ತು. ಯಾವ ತಪ್ಪೂ ಮಾಡದೆ ದಿನವೂ ಭಕ್ತಿಯಿಂದ ನಮಿಸಿ, ನಂಬಿಕೊಂಡ ದೇವರು, ನನ್ನ ಬೆನ್ನಿಗ್ಯಾಕೆ ಇರಿದ ಎಂದು ದೇವರ ಮೇಲಿನ ನಂಬಿಕೆ ಹೋಯಿತು. ಮಕ್ಕಳು ಹೇಳುವ ವಿಜ್ಞಾನವಷ್ಟೇ ನಿಜವೆನ್ನಿಸಿತು.


ಈಗಲೂ ಸಿಟ್ಟು ಬರುತ್ತದೆ ನನಗೆ ಯಾರಾದರೂ ದೇವರನ್ನು ಸಮರ್ಥಿಸಿ ಮಾತಾಡಿದರೆ - ಜೊತೆ ಮನುಷ್ಯನ ಸಂಕಟಕ್ಕೆ ಒದಗುವ ಒಳ್ಳೆಯತನವಿಲ್ಲದೆ, ಯಾವ ವೇಷ ಹಾಕಿ ಯಾವ ಜಪ ಮಾಡಿದರೇನು ಫಲ - ಎನ್ನಿಸುತ್ತದೆ. ಅದೇ ದುಮ್ಮಾನ - ಸಿಟ್ಟು ಮುಖದ ಮೇಲೆ ಬಂದಿತ್ತೇನೋ, ಅವರು ಮೃದುವಾಗಿ ನುಡಿದರು. ಇಲ್ಲ ಸುಶೀಲಾ ದೇವರಿದ್ದಾನೆ..

ನಾನೇನೋ ಹೇಳಲು ಬಾಯ್ತೆಗೆದೆ. ತಲೆಯಲ್ಲಾಡಿಸಿದ ಅವರು ಹೇಳಿದರು. ತೇರಿನಲ್ಲಿ, ಲಕ್ಷ ದೀಪೋತ್ಸವಗಳಲ್ಲಿ, ಆರಾಧನೆಯ ಉತ್ಸವಗಳಲ್ಲಿ, ಹೋಮ-ಹವನದ ಧೂಪಗಳಲ್ಲೇ ದೇವರಿದ್ದಾನೆ ಅಂತ ಹೇಳುವುದು ಹೇಗೆ ತಪ್ಪೋ, ಹಾಗೆಯೇ, ನಮ್ಮ ಕಣ್ಣಿಗೆ ಕಾಣುವ, ನಮ್ಮರಿವಿಗೆ ಬಂದ ಕಷ್ಟಗಳಲ್ಲಿ ನೆರವಾಗಲಿಲ್ಲ ಅಂತ ದೇವರಿಲ್ಲ ಅನ್ನುವುದೂ ಅಷ್ಟೇ ತಪ್ಪಲ್ಲವೇನೇ? ಎಷ್ಟು ನೋಯಿಸಿದರೂ-ಮತ್ತೆ ನೇವರಿಸುವ ಅಮ್ಮನಲ್ಲಿ, ಯಾವ ಲಾಭವೂ ಇಲ್ಲದೆಯೂ-ನೆರವಿಗೆ ಬಂದ ಗೆಳೆತನದಲ್ಲಿ, ನಾವು ಅಗೆದು,ತುಳಿದರೂ - ಊಟ ಕೊಡುವ ನೆಲದಮ್ಮನಲ್ಲಿ, ಒಂದು ಚೊಂಬು ನೀರು ಕುಡಿದು - ಮೈತುಂಬ ಹೂಬಿಡುವ ಬಳ್ಳಿಯಲ್ಲಿ, ನಾವು ಹೊಗೆ ತುಂಬಿಸಿಯೂ - ಬೀಸಿ ಬರುವ ತಂಗಾಳಿಯಲ್ಲಿ, ನಾವು ಬೆಂಗಾಡು ಮಾಡಿದರೂ - ತೋಯ್ದು ತೊಳೆವ ಮಳೆಯಲ್ಲಿ, ಎಲ್ಲ ಒಳ್ಳೆಯತನವೂ ಸತ್ತಿದೆ ಅಂದ್ಕೊಂಡು ಬೆನ್ನು ತಿರುಗಿಸಿ ನಡೆವಾಗ - ತಿರುವಿನಲ್ಲಿ ಸಿಕ್ಕುವ ಮಗುವಿನ ಹೂನಗೆಯಲ್ಲಿ.. ಎಲ್ಲಿ ಇಲ್ಲ ಹೇಳು ದೇವರು. ನಾವು ನೋಡಿದಲ್ಲಿ ದೇವರಲ್ಲವಾ?! ನಾವು ಕಣ್ತೆರೆಯದೆ, ಮನದ ಕದ ತೆರೆದಿಡದೆ, ದೇವರಿಲ್ಲ, ದೇವರು ಎನಗಿಲ್ಲ ಎಂದರೆ ಹೇಗೆ?

ಅನುಕೂಲ ಸಿಂಧು ಮನುಷ್ಯರು ನಾವು - ನಮಗೆ ಬೇಕಾದ ಹಾಗೆ, ಬೇಕಾದ್ದನ್ನು ಗ್ರಹಿಸುವುದನ್ನು ಬದುಕಿನ ರೀತಿಯಾಗಿಸಿಕೊಂಡಿದ್ದೇವೆ. ಇದು ಹೀಗೆಯೇ ಯಾಕೆ, ಇದರೊಳಗೇನಿದೆ, ಅಂತ ಯೋಚನೆ ಮಾಡಲಿಕ್ಕಲ್ಲವಾ ನಮಗೊಂದು ಮನಸ್ಸಿರುವುದು - ರಾಮಮಂದಿರದ ರಾಮ ಸುಳ್ಳಿರಬಹುದು, ಸ್ವಾತಂತ್ರ್ಯಕ್ಕೆ ಹೋರಾಡಿದ ಸಾವಿರಗಟ್ಟಲೆ ಜನ ಆರಾಧಿಸಿದ ಗಾಂಧಿ ಮಹಾತ್ಮನ 'ಎಲ್ಲರಿಗೂ ಸನ್ಮತಿ ನೀಡುವ' ರಾಮ ಸುಳ್ಳಾ? ಸಭೆ ಕರೆದು ಮಂಟಪ ಕಟ್ಟಿ ಪೂಜಿಸಿದ ಕಾಮಧೇನುವಿನ ಪ್ರತಿಮೆ ಪುರಾಣದ ಸಂಕೇತವಷ್ಟೇ ಆಗಿರಬಹುದು, ಜಾತಿಬೇಧವಿಲ್ಲದೆ ನಾವೆಲ್ಲ ಓದಿ ಕಣ್ಣೀರಿಟ್ಟ ಪುಣ್ಯಕೋಟಿ, ಅವಳ ಸತ್ಯ, ಆ ಸತ್ಯ ಬೆಳಗಿದ ನಮ್ಮ ಸಂಸ್ಕೃತಿ ಸುಳ್ಳಾ? ನಾವು ಮನುಷ್ಯರ ಮನದಾಳದಲ್ಲಿ ಒಳಿತಿನ ಒರತೆ ಒಸರದೆ, ತಿಳಿವಿನ ಬೆಳಕು ಹತ್ತದೆ ಮಾಡುವ ಎಲ್ಲ ಹೊರ ಆಡಂಬರಗಳೂ ವ್ಯರ್ಥ. ಪತ್ರಿಕೆಗಳಿಗೆ, ಟೀವಿ ಮಾಧ್ಯಮಗಳಿಗೆ ತಮ್ಮ ಜಾಹೀರಾತನ್ನು ಹೆಚ್ಚಿಸುವ ಹೊಸ ಹೊಸ ವಿಧಾನಗಳು ಅಷ್ಟೆ. ಯಾರದೋ ಆಟಕ್ಕೆ ನಮ್ಮ ಮುಗ್ಧ ರೈತರನ್ನು, ಹಳ್ಳಿಯ ಸಜ್ಜನ ಮನಸ್ಸುಗಳನ್ನು ಬಳಸಿಕೊಳ್ಳುವ ಡಂಭಾಚಾರ ನೋಡಿ ನಿನಗೆ ಬೇಸರ ಸಹಜ. ಆದರೆ ಈ ಎಲ್ಲ ಕೃತಿಗಳ ಮೂಲಕ ಎಲ್ಲೋ ನಾಲ್ಕು ತಿಳಿವಿನ ದೀಪ ಹತ್ತಿದರೆ, ಹತ್ತೆಂಟು ಮನಸ್ಸುಗಳು ಮೃದುವಾದರೆ ಅಷ್ಟೆ ಸಾಕು ಅನ್ನಿಸೋಲ್ಲವೇನೆ?


ನಿಜ, ಡಂಭಾಚಾರದ ಸ್ವಾರ್ಥ ಆಸ್ತಿಕತೆಗಿಂತ, ಸಹಜೀವಿಗಳ ಕಷ್ಟಕ್ಕೆ ಮರುಗುವ ನಾಸ್ತಿಕತೆ ದೊಡ್ಡದೆನ್ನಿಸುವುದು ಹೌದು. ಆದರೆ ಎಲ್ಲ ನಾನೇ ಅನ್ನುವ ಅಹಂಭಾವ ಕರಗುವುದು ಹೇಗೆ? ನೂರೆಂಟು ಕಷ್ಟಗಳ ನಡುವೆ ದೇವರಿದ್ದಾನೆ ಎಂಬ ಭಾವ ಕೊಡುವ ಸಮಾಧಾನವನ್ನು ಯಾವ ಮನಶ್ಯಾಸ್ತ್ರದಿಂದ ನೀಡಬಹುದು? ಎಲ್ಲ ಕಳೆದುಕೊಂಡಾಗಲೂ ಹೊಸದೊಂದನ್ನು ಹುಡುಕಿ ಹೋಗುವ ಜೀವನ್ಮುಖಿ ಚೈತನ್ಯದ ಒರತೆಯೇನು, ಎಲ್ಲಿದೆ?

ನಿನ್ನೆ ನೀನು ಮತ್ತು ದಿವ್ಯ ಕೇಳುತ್ತ ಕುಳಿತಿದ್ದಿರಲ್ಲಾ ಆ ಹಾಡು..

ಬಾಂದಳ ಚುಂಬಿತ ಶುಭ್ರ ಹಿಮಾವೃತ ತುಂಗ ಶೃಂಗದಲಿ ಗೃಹವಾಸಿ..

ದೀನ ಅನಾಥರ ದುಃಖಿ ದರಿದ್ರರ ಮುರುಕು ಗುಡಿಸಿಲಲಿ ಉಪವಾಸಿ..

ಅವನಲ್ಲವಾ ನಮ್ಮ ದೇವರು? ಆಕಾಶದಲ್ಲಿ ಸಿಂಗರಿಸಿದ ತೇರಿನಲ್ಲಿ ಮೆರವಣಿಗೆ ಹೊರಡುವ ಅವನೇ ಅಲ್ಲವೆ, ಕಣ್ಣ ನೀರಿನಲಿ, ಮಣ್ಣ ಧೂಳಿನಲಿ ಹೊರಳುವ ನಮ್ಮ ಜೊತೆಗೇ ಬರುವವನು?

ಜಿ.ಎಸ್.ಶಿವರುದ್ರಪ್ಪನವರ ಕವಿಹೃದಯ ಈ ಸತ್ಯವನ್ನು ತಾನೂ ಉಂಡು ನಮಗಾಗಿ ಎಷ್ಟು ಚಂದವಾಗಿ ಬರೆದಿಟ್ಟಿದೆ.. ನಾನು ನಿನಗೆ ಅವತ್ತು ಓದಲು ಕಲಿ ಅಂದದ್ದು ಇದಕ್ಕೆ. ಮಂತ್ರಿಯಾಗಲಲ್ಲ..


ನಾವೇ ಪ್ರಯತ್ನಿಸಿ ತಿಳಿಯಲು ತುಂಬ ಅವಕಾಶ ಸಮಯ ಬೇಕು. ಅಥವಾ ತಿಳಿದವರು ಬರೆದ ಸಾರವನ್ನು ಹೀರಿ ಬೆಳೆಯಬೇಕು. ಇಂಥ ತಿಳಿವಳಿಕೆಗಳು ಕಷ್ಟದ ಸಮಯದಲ್ಲಿ ಸಹನೆಯಿಂದಿರಲು, ಎಲ್ಲವನ್ನು ಎದುರಿಸಲು, ಸಹಾಯವಾಗುತ್ತದೆ.


ಚಿಕ್ಕಂದಿನಿಂದ ಮಲೆಕಾಡಲ್ಲಿ ಬೆಳೆದ ನಿನಗೆ ಮರಗಳ ಬಗ್ಗೆ ಹೇಳಿಕೊಡಬೇಕಿಲ್ಲ.. ಕಾಡಲ್ಲಿ ತಾನಾಗೇ ಮೂಡಿದ ಚಿಕ್ಕ ಸಸಿಗೆ ನೀರೆರೆಯುವರು ಯಾರು, ಅದು ಮಳೆ ಬಂದಾಗ ಹೀರಿ ಬೆಳೆಯುತ್ತದೆ. ನೆಲದಲ್ಲಿ ಯಾವ ಕಡೆ ನೀರಿನ ಸೆಲೆಯಿದೆಯೋ ಆ ಕಡೆಗೆ ಬೇರು ಬೆಳೆಸುತ್ತದೆ. ಆಳಕ್ಕಿಳಿಯುತ್ತದೆ, ಯಾಕೆ ಹೇಳು, ಆಕಾಶದೆತ್ತರಕ್ಕೆ ಬೆಳೆದು ಚಿಗುರಲಿಕ್ಕೆ. ಕತ್ತರಿಸಿದಂತೆಲ್ಲ ಚಿಗಿತು ನಿಲ್ಲಲಿಕ್ಕೆ. ನಾವು ಆ ಮರಗಳನ್ನು ನೋಡಿ ಕಲಿಯಬೇಕಲ್ಲವಾ ಬದುಕಲಿಕ್ಕೆ?!


ಅವ್ವಾ ಹಾಲು.., ಹಾಲಮ್ಮ ಸಂಜೆ ಹಾಲು ಹಾಕಲು ಬಂದಿದ್ದಳು, ಆಗಲೇ ನಾಲ್ಕೂವರೆ! ಅವರು ನಸುನಗುತ್ತ, ಕಿಟಕಿಯಿಂದಾಚೆಗೆ ದುಂಡು ಮಲ್ಲಿಗೆಯ ಮೊಗ್ಗೊಳಗೆ ಸೇರಿಹೋದರು.. ಗೀತಾ ಹೋಗಿ ಹಾಲು ಹಾಕಿಸಿಕೊಂಡು ಬಂದು, ಕಾಫಿ ಮಾಡಿ ಕೈಗಿಟ್ಟಳು..


ನನಗೆ ಅವರ ಜೊತೆಯಲ್ಲಿ ಮಾತಾಡಿ ಧನ್ಯ ಭಾವ, ಸುತ್ತೆಲ್ಲ ಹೂಬಿರಿದ ಹಿತ್ತಿಲಲ್ಲಿ, ಎತ್ತರದ ಹಲಸಿನ ಮರಕ್ಕೆ ಬಾವಿ ಹಗ್ಗ ಕಟ್ಟಿ ಜೋಕಾಲಿಯಾಡಿದ ಉಲ್ಲಸ.. ಆಗಷ್ಟೆ ಮಳೆ ಬಂದು ನಿಂತ ಸಂಜೆಯಲ್ಲಿ, ಮರದ ಮರೆಯಲ್ಲಿ ಕೂತು ಕೂಗುವ ಕೋಗಿಲಿಯ ಇಂಪುಲಿ ಕಿವಿಯಲ್ಲಿಳಿದು ಮನವನ್ನೆಲ್ಲ ತುಂಬುವ ಹಿತ..


ಮೊಮ್ಮಗಳು ಮೊನ್ನೆ ಒಂದು ಕವಿತೆ ಓದಿ ಹೇಳಿದಳಲ್ಲ, ನರಸಿಂಹ ಸ್ವಾಮಿಯವರದ್ದು, - ಎಲ್ಲ ಚಿತ್ರಗಳಾಚೆಗಿನ್ನೊಂದು ಚಿತ್ರವಿದೆ.. ನಾನು ಕಂಡದ್ದರಾಚೆಗಿದೆ ಬೆಳಕಿನ ಲೋಕ.. ಆ ಸಾಲುಗಳಿಗೆ ನೂರು ಅರ್ಥ ಹೊಳೆದು, ಕಿಟಕಿಯಾಚೆ ನೋಡಿದೆ.. ಅಲ್ಲಿ ಅರೆ ಬಿರಿದ ಮೊಗ್ಗು ಮೊಗ್ಗಿನಲ್ಲು ಅವರ ಮೆಲ್ನಗೆ, ಭರವಸೆಯ ನೋಟ..

೧೫ ರ ತಬ್ಬಲಿ ಸುಶೀಲಳನ್ನ ಸಹಚಾರಿಣಿಯನ್ನಾಗಿಸಿಕೊಂಡು,ಸಲಹಿದ, ಚಂದ ಗಂಭೀರ ಶ್ರೀನಿವಾಸ, ಸುಕ್ಕು ನೆರಿಗೆಯ ನಿನ್ನ ಬಿಟ್ಟು ಹೋದೇನೇ ನಾನು, ಜೊತೆಗಿದ್ದೇನೆ ಇಲ್ಲೆ ಎಂಬ ಅಕ್ಕರೆಯ ಪ್ರಭಾವಳಿಯೊಂದಿಗೆ... ಮೊಮ್ಮಗಳು ದಿವ್ಯ ಬೇಗ ಬಂದಿದ್ದಳು, ಅಮ್ಮಮ್ಮ ಬಾ ಈ ಹಾಡು ಕೇಳು, ಪಲ್ಲವಿ ಹೇಳಿದ್ದು ಅಂತ ಸಿ.ಡಿ ಹಾಕಿದಳು. ಕಿನ್ನರ ಕೊರಳಿನಲ್ಲಿ ಹಾಡು ತೇಲಿಬಂದಿತು.. ಕರುಣಾಳು ಬಾ ಬೆಳಕೆ.. ಮುಸುಕಿದೀ ಮಬ್ಬಿನಲಿ.....

******************
ಆಗಾಗ ತನ್ನ ಒಳನೋಟಗಳನ್ನ, ನಾನು ತುಂಬ ಚಿಕ್ಕವಳಾದರೂ ನನ್ನೊಡನೆ ಗೆಳತಿಯಂತೆ ಹಂಚಿಕೊಂಡ ಪ್ರೀತಿಯ ಸುಶೀಲಮ್ಮಮ್ಮನನ್ನು ಕೃತಜ್ಞತೆಯಿಂದ ಇಲ್ಲಿ ನೆನೆಯುತ್ತೇನೆ. ತುಂಬುಸಂಸಾರದ ಬೆನ್ನೆಲುಬಾಗಿ, ಮನೆಯ ಮಕ್ಕಳಿಗೆ ದೇವರಾಗಿ - ಅಕ್ಷರಶಃ ನಮ್ಮೆಲ್ಲ ಸಂತಸ-ಸಂಕಟಗಳಲ್ಲಿ ಸಹಚಾರಿಣಿಯಾಗಿ, ಸದಾ ನೆಮ್ಮದಿಯ ನೆರಳಾಗಿ ಬಂದಿರುವ ಅಮ್ಮಮ್ಮ ನಮ್ಮನೆಯ ದಿವ್ಯಾಂಬರಸಂಚಾರಿ. ಅವಳ ಕಣ್ಣಲ್ಲಿ ಬದುಕನ್ನು ನೋಡುವ ಒಂದು ಚಿಕ್ಕ, ನಮ್ರ ಪ್ರಯತ್ನ ಇದು. ಅವಳಿಗೆ ಇಷ್ಟವಾಗಬಹುದು ಅಂದುಕೊಂಡಿದೀನಿ.. ಚಂದ ಗಂಭೀರ ಶ್ರೀನಿವಾಸಜ್ಜನನ್ನು ಕರೆದುಕೊಂಡುಬಂದಿದೀನಲ್ಲ.. :)