Thursday, May 31, 2007

ಎಲ್ಲರ ಒಳ್ಳೆಯತನದಲ್ಲಿ ನೆಲಸಿರುವ ದೇವರೇ.. ಅವನು ಬೇಗ ಚೇತರಿಸಿಕೊಳ್ಳಲಿ..

ಅವನು ಅಳುವುದನ್ನು ನನಗೆ ನೋಡಲಾಗಲಿಲ್ಲ. ನನ್ನ ಕೈಗೆ ಅವನ ಕಣ್ಣೀರನ್ನೊರೆಸುವ ಶಕ್ತಿ ಇಲ್ಲ. ನನ್ನ ಅಸಹಾಯಕ ಕ್ಷಣಗಳ ಆ ಯಾತನೆಯನ್ನು ವಿವರಿಸುವುದು ಕಷ್ಟ.

ಅವನು ಕಷ್ಟಪಟ್ಟು ಓದಿದ್ದ. ನಿಜವಾಗ್ಲೂ ಕಷ್ಟಪಟ್ಟು. ಅವನ ಓದಿಗೆ ನೆರವಾಗಲು ಅಮ್ಮ ಮಾಡಿಕೊಡುವ ಬಿಸಿ ಬಿಸಿ ಚಹಾ ಇಲ್ಲ. ಅರ್ಥವಾಗಿದ್ದನ್ನು ಮತ್ತೆ ಮತ್ತೆ ಕಲಿಯಲು ಟ್ಯೂಷನ್ ಇಲ್ಲ. ಓ ಆ ಕಥೆ ಬರೆದವನ ಹೆಸರು ಮರೆತೋಯ್ತಲ್ಲ ಅಂದರೆ ತಕ್ಷಣ ಪುಟ ತಿರುಗಿಸಿ ನೋಡಿ ನೆನಪಿಸಿಕೊಳ್ಳಲು ಕಣ್ಣಿಲ್ಲ. ಯಾರಾದರೂ ಸ್ನೇಹಿತರು ಬಂದು ಓದಿ ಹೇಳಿದರೆ ಮಾತ್ರ ಸಾಧ್ಯ.

ಅಂತಹ ಅವನು ಇವತ್ತು ಪರೀಕ್ಷೆ ಮುಗಿದ ಕೂಡಲೆ ಅತ್ತುಬಿಟ್ಟ. ಕೊನೆಯ ಸೆಮಿಸ್ಟರಿನ ಇಂಗ್ಲಿಷ್ ಪೇಪರ್ ಕಷ್ಟವಿತ್ತು. ಎಲ್ಲ ವಿಷಯಗಳನ್ನೂ ಕಲಿತಿದ್ದರೂ ಬೇಕಾದ ಸಮಯಕ್ಕೆ ಸರಿಯಾಗಿ ಎಲ್ಲ ನೆನಪಾಗಲಿಲ್ಲ. ಅವನು ಪಾಸ್ ಆಗುತ್ತಾನೆ. ಅದಕ್ಕೇನಿಲ್ಲ. ಆದ್ರೆ ಅವನಿಗೆ ಚೆನ್ನಾಗಿ ಮಾಡಿ, ಫಸ್ಟ್ ಕ್ಲಾಸ್ ತೆಗೆದು, ಕೆಲಸಕ್ಕೆ ಸೇರುವಾಸೆ.

ಯಾರಿಗಿರಲ್ಲ ಅಲ್ವಾ? ಇವನು ವಿಶಿಷ್ಟ. ನಂಗೆ ಕಣ್ಣಿದ್ದೂ ಓದಿ ಬರೆಯಲು, ನೂರಾ ಎಂಟು ಅವಶ್ಯಕತೆ, ಅನುಕೂಲ ಬೇಕು.

ಇವನು, ಕಣ್ಣಿಲ್ಲದೆ, ಕಷ್ಟಪಟ್ಟು ಯಾರದೋ ಕೈಯಲ್ಲಿ ಉತ್ತರ ಬರೆಸಿ... ಹೋಗಲಿ ಬಿಡಿ.

ಅವನಿಗೆ ಕಣ್ಣಿಲ್ಲ ಅಷ್ಟೇ. ದುಡಿದು ಬದುಕಬೇಕೆಂಬ ಛಲ, ಹೇಗಾದರೂ ಸಾಧಿಸುವೆನೆಂಬ ಪ್ರಯತ್ನ, ಎಲ್ಲ ಸಾಮರ್ಥ್ಯ ಇರುವ ನಮಗಿಂತ ಚೆನ್ನಾಗೆ ಇದೆ. ಇವತ್ತು ಅವನು ಅತ್ತಿದ್ದು ಆ ಛಲಕ್ಕೆ ಬಿದ್ದ ಮೂಗೇಟಿನಿಂದ. ಆ ಪ್ರಯತ್ನಕ್ಕೆ ಸಿಕ್ಕ ಅಡ್ಡಗಾಲಿನಿಂದ.

ಎಲ್ಲ ಇರುವ ನನಗಿಂತ ಬೇಗ ಚೇತರಿಸಿಕೊಂಡು ನಾಡಿದ್ದಿನ ಪರೀಕ್ಷೆಗೆ ಸಿದ್ಧವಾಗುತ್ತಾನೆ ಅವನು ನನಗ್ಗೊತ್ತು.

ಆದರೆ ಮೂಗೇಟು ತಿಂದ ಅವನ ಬೆಳಕಿರದ ಕಣ್ಣಲ್ಲಿ ಹರಿದ ನೀರು ನನ್ನ ಚೈತನ್ಯವನ್ನ ಅಲ್ಲಾಡಿಸಿಬಿಟ್ಟಿದೆ. (ಚೈತನ್ಯವೆಂದು ಕರೆದುಕೊಳ್ಳಲೂ ನಾಚಿಕೆ ನನಗೆ)

ಏನು ಬರೆದು ಏನು ಉಪಯೋಗ ? ಅಲ್ಲಿ ಅವನಿಗೆ ನೆನಪಾಗದಾಗ, ಏನೂ ಬರೆಯಲು ತೋಚದೆ ಕುಳಿತುಕೊಂಡಂತೆ ಇಲ್ಲಿ ಕುಳಿತುಕೊಳ್ಳಲೂ ಏನು ಧಾಡಿ ನನಗೆ?

ನೀವು ಮನೆಗ್ ಹೋಗ್ ಬಿಡಿ, ಲೇಟಾಗುತ್ತೆ. ನಾನು ನಿಧಾನವಾಗಿ ಸಂಭಾಳಿಸಿಕೊಂಡು ಹೋಗುತ್ತೇನೆ ಅಂತ ವಿಷಾದದ ಬೋಲ್ ಗಳನ್ನ ನೆನಪಿಸಿಕೊಳ್ಳುತ್ತ ನನ್ನನ್ನು ಒತ್ತಾಯವಾಗಿ ಮನೆಗೆ ಕಳಿಸಿದ ಈ ಪ್ರತಿಭಾವಂತನ ಮೊಬೈಲ್ ಇನ್ನೂ ಆಫ್ ಆಗೆ ಇದೆ. ದೇವರೆ ಅದು ಬೇಗ ಆನ್ ಆಗಲಿ. ಇವತ್ತಿನ ಸಂಕಟವನ್ನ, ತನ್ನ ಕಣ್ಣಿಲ್ಲದ ಸಂಕಟದ ಜೊತೆಗೆ ಸೇರಿಸಿ ಬದಿಗಿಟ್ಟು, ಅವನು ನಾಡಿದ್ದಿನ ಪರೀಕ್ಷೆಗೆ ತಯಾರಾಗಲಿ.

6 comments:

Anonymous said...

ಕಣ್ಣಿರುವ ನಮ್ಮಂತಹವರು ಬದುಕಲ್ಲಿ ಏನೇನೊ ನೋಡದೆ ಬಿಟ್ಟಿರುತ್ತ್ತೀವಿ. ಮನಸಿನ ಕಣ್ಣು ತೆರೆದಿರುವವರು, ಹೃದಯದ ಕಣ್ಣು ಶುದ್ಧವಿರುವವರು ಬದುಕಲ್ಲಿ ಹಾದಿ ತಪ್ಪದೇ ನಡೆಯುತ್ತಾರೆ ಸಿಂಧು..

Satish said...

ಹೃದಯಸ್ಪರ್ಶಿ ಬರಹ - ಈ ರೀತಿಯ ಹತ್ತು ಹಲವು ಸಂಕಷ್ಟಗಳು ಬರೋದು ಸಹಜ, ಕಷ್ಟಗಳು ಕಣ್ಣಿಲ್ಲದವರಿಗೆ ಇನ್ನೂ ಹೆಚ್ಚು ಎಂದು ಸಂತೈಸಬೇಕೆನ್ನಿಸಿತು.
ಆ ಹುಡುಗನಿಗೆ ಒಳ್ಳೆಯದಾಗಲಿ!

ರಾಜೇಶ್ ನಾಯ್ಕ said...

ಈ ಹುಡುಗ ಕಣ್ಣಿಲ್ಲದೆ ಪರೀಕ್ಷೆ ಬರೆದು ಪಾಸ್ ಆಗುವುದೇ ದೊಡ್ಡ ಸಾಧನೆ. ಬಹಳ ಚೆನ್ನಾಗಿ ಬರೆದಿದ್ದೀರಿ. ಮುಂದಿನ ಪರೀಕ್ಷೆಯನ್ನು ಚೆನ್ನಾಗಿ ಮಾಡಲಿದ್ದಾನೆ ಎಂಬ ನಂಬಿಕೆ ಇದೆ. ಬಯಸಿದ್ದನ್ನು ಸಾಧಿಸಲಿ ಎಂಬ ಶುಭ ಹಾರೈಕೆ ಕೂಡಾ.

PRAVINA KUMAR.S said...

ಪೂರ್ತಿ ಓದಲಿಕ್ಕೆ ಆಗಲಿಲ್ಲ. ಕಣ್ಣೀರ ಕಥೆ. ಅವನಿಗೆ ದೇವರು ಒಳ್ಳೆಯದು ಮಾಡಲಿ....

Anonymous said...

ಅಕ್ಕ,
ಓದಿ ಮುಗಿಸುವ ಹೊತ್ತಿಗೆ ಕಣ್ಣುಗಳು ತೇವಗೊಂಡವು.
ನಮಗೆಲ್ಲಾ ಕಣ್ಣುಗಳಿವೆ ಬರಿ ಹೊರಗಿನ ಪ್ರಪಂಚವನ್ನಾ ನೋಡೊಕೆ. ಆದ್ರೆ ಯಾವಗಲೂ ನಮ್ಮ ಓಳಗಿನ ಕಣ್ಣನ್ನ ಮುಚ್ಚೆ ಇರ್ತೀವಿ. ಕೆಲವಂದು ಕಡೆ ತುಂಬಾ ಸಣ್ಣವರ ತರ ವರ್ತಿಸುತ್ತಿವಿ ಅಲ್ವಾ?
ಆ ಹುಡುಗನಿಗೆ ಅಷ್ಟೋಂದು ಆತ್ಮಸ್ಥೈರ್ಯ ಇದೆ ಅಂಥ ಅಂಥಾ ಹೇಳ್ತಾ ಇದ್ದೆ ಖಂಡಿತಾ ಜೀವನದ ಪರೀಕ್ಷೆಯಲ್ಲಿ, ಈ ಪರೀಕ್ಷೆಯಲ್ಲಿಯೂ ಪಾಸ್ ಆಗೇಆಗುತಾನೆ. ನಾನು ಅವನಿಗೆ ಒಳ್ಳೆದಾಗಲಿ ಅಂಥಾ ಬೇಡಿಕೊಳ್ಳುತ್ತೇನೆ.

ಸಿಂಧು sindhu said...

ಸ್ಪಂದಿಸಿದ ಎಲ್ಲ ಸಹೃದಯರಿಗೆ,

ನನ್ನ ಧನ್ಯವಾದಗಳು.

ಕೊನೆಗೂ ಸಂಜೆ ಎಂಟೂವರೆಗೆ ನಾನು ಅವನ ಜೊತೆ ಮಾತಾಡಲಿಕ್ಕೆ ಆಯಿತು. ಅವನು ಚೇತರಿಸಿಕೊಂಡಿದ್ದ ಅಂತ ನನ್ನ ಅನಿಸಿಕೆ. ಮಳೆ ಬಂತಾ ಮೇಡಂ, ಮನೆಗೆ ಆರಾಂ ಆಗಿ ಹೋದ್ರಾ ಅಂತ ನನ್ನ ಮಾತನ್ನೇ ಮರೆಸುವ ಹೃದಯವಂತ ಮಾತು ಅವನದು. ಕೇಳಿ ಶರಣಾಗಿದ್ದೇನೆ.
ನಾಳೆಯ ಪರೀಕ್ಷೆಯಲ್ಲಿ ಎರಡುಪಟ್ಟು ಹೆಚ್ಚಿನ ಪ್ರಯತ್ನ ಮಾಡುತ್ತಾನೆ ಅವನು - ಎಲ್ಲ ಸಾಮರ್ಥ್ಯ ಇರುವ ನನ್ನ ಕೈಲಾಗದಿರುವಿಕೆಯನ್ನು ಅಣಕಿಸಿವಂತೆ - ನಾಳಿನ ಪೊಲಿಟಿಕಲ್ ಸೈನ್ಸು ಪೇಪರ್ ಪೂರ್ತಿ ತಲೆತಗ್ಗಿಸಿ ಒಪ್ಪಿಸಿಕೊಳ್ಳುತ್ತದೆ ಅವನ ಅದಮ್ಯ ಚೇತನಕ್ಕೆ.

ಹಾಗಂತ ನಾನು ನಿನ್ನೆ ಬೇಡಿಕೊಂಡ ದೇವರೂ ಒಪ್ಪಿಕೊಂಡಿದ್ದಾನೆ.