Sunday, June 3, 2018

ಕಿಟಕಿಯಾಚೆಗಿನ ಆಕಾಶ

ಮೋಹದಾ ಹೆಂಡತಿ ತೀರಿದ ಬಳಿಕ...
ಅವನು ಹೋಗಬಹುದು
ಎಳೆಗಳ ರೇಷಿಮೆಯ ಕತ್ತರಿಸಬಹುದದು
ಲೋಕರೂಢಿ

ಮೋಹ ಹರಿದರೂ
ಇವಳು ಮಾತ್ರ...

ಅವನ ಮನೆಯ ಗಟ್ಟಿ ದಿಂಬ (ಗೋಡೆ)
ಅತ್ತೆ ಮಾವರ ದಿಟ್ಟಿ ಕಂಬ
ಮಕ್ಕಳ ಹೊಟ್ಟೆ ತುಂಬ
ಜೀವರಸ ಪಾಕ ಹದಗೊಳಿಸದೆ
ಹೊರಟು
ಮುರಿದರೆ ರೂಢಿ
ಸಮಾಜಕ್ಕೆ ರಾಡಿ.


ಒಳಗಿನ ಬಗ್ಗಡ
ರಾಚದಂತೆ
ನೋವ ನೂಲು
ಕಾಣದಂತೆ
ಬದುಕ ನೇಯ್ಗೆ ನೇಯುವಂತೆ
ಇವಳಿಗೆ ಕಲಿಸಲಾಗಿದೆ.
ಇಲ್ಲದ ಗೂಟಕೆ
ಒಲ್ಲದ ಹಗ್ಗಕೆ
ಒಡ್ದಿ ಇವಳು ನಿಲ್ಲಬೇಕಿದೆ.

ಮೋಹದ ಹೆಂಡತಿ ತೀರಿದ ಬಳಿಕ ಅವನು
ಸ್ವಚ್ಭ ಆಕಾಶದಿ ತೇಲುವ ಹಕ್ಕಿ.
ಒಂದೊಂದು ಸಲ ಆಕಾಶವೂ ಆಗಿಬಿಡಬಹುದು.

ಇವಳು ಬರೀ
ದಿಟ್ಟಿ ಹರಿಸಬಹುದು
ಕಿಟಕಿಯಾಚೆಗಿನ ಆಕಾಶಕೆ.

1 comment:

sunaath said...

ಸಿಂಧು,
ಲೋಕರೂಢಿ ಹಳೆಯದು; ಕಾವ್ಯ ನವೀನ,ಕಾವ್ಯ ಹೃದ್ಯ.
ಎದೆಯನ್ನು ಚುಚ್ಚುವ ಕವನ.