Wednesday, April 20, 2011

ತೆರೆದ ಬಾಗಿಲು

ಒಳಹೋಗುವುದೂ ಅಥವಾ ತಟ್ಟುತ್ತ ಕಾಯುತ್ತಿರುವುದೂ ನಮಗೇ ಬಿಟ್ಟಿದ್ದು!
ನನ್ನ ಬಹಳ ಹತ್ತಿರದ ಗೆಳೆಯನೊಬ್ಬ ಮೊನ್ನೆ ಮೊನ್ನೆ ಬೆಂಗಳೂರು ಬಿಟ್ಟು ಬೇರೆ ಊರಿಗೆ ನೆಲೆ ಹುಡುಕಿಕೊಂಡು ಹೋದ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನೂ, ಹುಡುಗಾಟಿಕೆಯಲ್ಲಿ ಚಿಕ್ಕವನೂ, ಉತ್ಸಾಹದಲ್ಲಿ ಹಿಂದಿಕ್ಕಲಾಗದವನೂ ಆದ ಈ ಗೆಳೆಯ, ಇನ್ನೊಬ್ಬ ಗೆಳೆಯ, ನಾನು ಮತ್ತು ನನ್ನ ಸಂಗಾತಿ - ನಾವು ನಾಲ್ವರದ್ದೇ ಒಂದು ಪುಟ್ಟ ಗುಂಪು. ಮಹಾನಗರದ ತಿರುಗಣಿಯಲ್ಲಿ ನಾವೇ ಬೇಕಾಗಿ ಸಿಕ್ಕು ನುರಿಸಿಕೊಂಡು, ಸಾಕು ಸಾಕಾಗಿ ಅಲ್ಲಿ ಇಲ್ಲಿ ಆಗ ಈಗ ಒಂದೆರಡುಮೂರು ದಿನಗಳ ಮಟ್ಟಿಗೆ ಕೆಲವು ಸುತ್ತಾಟ ಮಾಡುವುದು ನಮ್ಮ ಜಾಯಮಾನ. ಇದಲ್ಲದೆ ಪುಸ್ತಕ, ಸಮಾಚಾರ, ಹರಟೆ, ಪ್ರಕೃತಿ, ಹಕ್ಕಿಗಳು, ಮಳೆ,ಕಾಡು ಇವೆಲ್ಲ ನಮ್ಮ ಸಮಾನ ಆಸಕ್ತಿಯ ವಿಷಯಗಳು. ಎಲ್ಲರೂ ಬೇರೆ ಬೇರೆ ಬಡಾವಣೆಗಳಲ್ಲಿ ಗೂಡು ಕಟ್ಟಿಕೊಂಡವರು. ನೆಟ್ಟು,ಟಾಕು,ಫೋನು,ಫ್ಲಿಕರ್ರು ಹೀಗೆ ದಿನದಿನದ ಹೆಚ್ಚಿನ ಮಾತುಕತೆ. ತಿಂಗಳಿಗೊಮ್ಮೆ ಒಂದು ಭಾನುವಾರ ಬೆಳಗಿನಿಂದ ಇಳಿಮಧ್ಯಾಹ್ನದವರೆಗೆ ನಮ್ಮನೆಯಲ್ಲಿ ಸೇರಿ ಮಾತು-ನಗು-ಹರಟೆ ಮತ್ತು ಎಲ್ಲಿಗಾದರೂ ಹೊರಡುವ ಪ್ಲಾನು. ಅಲ್ಲಲ್ಲಿ ಕಾಫಿ,ಟೀ,ಪಾನಕ,ಹಣ್ಣು. ಇತ್ಯಾದಿ.
ಬೆಂಗಳೂರು ಬಿಡುವ ಬೇರೆ ಊರಲ್ಲಿ ನೆಲೆಸುವ ಗದ್ದೆಯೋ,,ತೋಟವೋ ಕೃಷಿ ಮಾಡುವ ಮಾತುಕತೆ ಮಾತ್ರ ಪ್ರತೀಸಲವೂ ನಡೆಯುತ್ತಿತ್ತು. ನೀನು ಮಾತನಾಡುವುದು ಸುಲಭ, ಹೇಳಿದಂತೆಲ್ಲ ಮಾಡಲಿಕ್ಕಾಗುವುದಿಲ್ಲ, ಇದು ಎಂತ ಈ ವಯಸ್ಸಲ್ಲಿ ಮಗಳ ಶಾಲೆ ಬಗ್ಗೆ ಆಲೋಚಿಸು ಮೊದಲು ಅಂತೆಲ್ಲ ಏನೇನೋ ಹೇಳಿ ನನ್ನ ತಲೆ ತಿನ್ನುವ ಈ ಗೆಳೆಯ ಇಂತಹದೆ ಒಂದು ಮಾತುಕತೆಯ ಮಧ್ಯದಲ್ಲಿ - ನಾನು ಕೆಲಸ ಬಿಡೋದೂಂತ ಮಾಡಿದ್ದೇನೆ. ಮುಂದಿನ ವರ್ಷದೊಳಗೆ ನಮ್ಮ ಜಾಗಕ್ಕೆ ಹತ್ತಿರವಾಗಿ ಮನೆ ಮಾಡಿ, ಕುಟುಂಬವನ್ನೂ ಕರೆದೊಯ್ಯುವ ಯೋಚನೆ ಇದೆ - ಅಂತ ಘೋಷಿಸಿಬಿಟ್ಟ. ನಾವು ಎಂದಿನಂತೆ ಭಾಳ ಸೀರಿಯಸ್ಸಾಗಿ ಆ ಬೆಳೆ ಬೆಳೆದರೆ ಒಳ್ಳೆಯದು ಈ ಬೆಳೆ ಬಗ್ಗೆ ಅಡಿಕೆಪತ್ರಿಕೆಯಲ್ಲಿ ಬಂದಿದೆ ಅಂತೆಲ್ಲ ವಿಶ್ಲೇಷಣೆ ಮಾಡುತ್ತ ಕೂತೆವು.


ಅದಾಗಿ ಒಂದ್ನಾಲ್ಕು ವಾರಕ್ಕೆ ಆಫೀಸಿನಲ್ಲಿದ್ದಾಗ ಫೋನ್ ಬಂತು.
ಏನಮ್ಮಾ ಬಿಸೀನಾ?...
ಇಲ್ಲ ಹೇಳಿ,,
ಒಂದು ಮಜಾ ಗೊತ್ತ?ಆ ಬಡ್ಡೀಮಗ ನನ್ ಮ್ಯಾನೇಜರ ಮುಖ ನೋಡ್ಬೇಕಿತ್ತು ನೀನು..
ಯಾಕೆ ಏನಾಯ್ತು?!..
...ಅದೇ ಹಳೆ ಪುರಾಣ. ನೀನು ಈ ಪ್ರಾಜೆಕ್ಟ್ ತೆಕ್ಕೋ ಮುಂದಿನ ವರ್ಷ ಇಷ್ಟು ಕೆ.ಜಿ. ನಾಣ್ಯಗಳ ಹೆಚ್ಚುವರಿ ಸಂಬಳ ಕೊಡ್ತೀನಿ.. ನೀನಿಲ್ಲದೆ ನನಗೇನಿದೆ... ಅಪ್ರೈಸಲ್ ಮಣ್ಣು ಮಸಿ.. ಹೋಗಲೋ ಹೋಗ್ ಅಂತ ರಾಜಿನಾಮೆ ಬಿಸಾಕ್ಬಿಟ್ಟೆ. ಈ ಮ್ಯಾನೇಜರ್ ನನ್ ಮಕ್ಳಿಗೆಲ್ಲ ಹಂಗೇ ಮಾಡ್ಬೇಕು. ಬುರುಡೆಗೆ ಬಿಸಿನೀರು ಕಾಯ್ಸುದು ಅಂತಾರಲ್ಲ ಹಂಗೆ! ಅದು ಹಾಳಾಗ್ಲಿ ನಾನು ಫೋನ್ ಮಾಡಿದ್ದು ಅದಕ್ಕಲ್ಲ. ...
ಮತ್ತೆ?
ಅದೇ ನಮ್ ಜಾಗದಲ್ಲಿ ನೀರು ಚೆನ್ನಾಗಿದೆ. ಈಗಿನ್ನೂ ಮಳೆ ಕಚ್ಚಿಕೊಳ್ಳುತ್ತಿದೆ ಅದಕ್ಕೆ ಸುವರ್ಣಗೆಡ್ಡೆ ಹಾಕಿಬಿಡೋಣ ಅಂತಿದೀನಿ. ಈ ಬುಧವಾರ ಊರಿಗೆ ಹೋಗಲಿಕ್ಕುಂಟು ಬರ್ತೀಯಾ ನೀನು? ಅವನು ಎಂದಿನ ಹಾಗೆಯೇ ಬಿಸಿಯಲ್ಲದಿದ್ರೆ ಇಬ್ರೂ ಬನ್ರಲ್ಲ. ಹೇಗೂ ಅಲ್ಲೊಂದು ಶೆಡ್ ಉಂಟು. ಗಂಜಿ ಊಟಕ್ಕೆ ಕರೆಂಟಿನೊಲೆ ಉಂಟು..ರಾತ್ರಿ ಹೊರಗೆ ಬಯಲಲ್ಲಿ ನಕ್ಷತ್ರ ನೋಡಿಕೊಂಡು...
ಯಾವ ಜಾಗ, ಏನ್ ಕತೆ?
ಅರ್ರೇ ಯಾವಾಗ್ಲೂ ಮಾತಾಡ್ತ ಇದ್ವಲ್ಲ ಅದೇ. ಅಲ್ಲಿ ಹೋಗಿ ಕೃಷಿ ಮಾಡೋದು ಅಂತ ನಿರ್ಧಾರ ಮಾಡಿಯಾಯ್ತು ನಾನು. ಎಲ್ಲ ಮಾಡಿಯಾಯ್ತು. ವರ್ಚುಯಲ್ ಸಗಣಿ ಹೊತ್ತಿದ್ದಾಯ್ತು. ನಿಜವಾದ ಮಣ್ಣೂ ಹೊತ್ ಬಿಡೋಣ ಅಂತ. ಹ್ಯಾಗೆ?
ಅಯ್ಯೋ ನಿಮ್ಮ. ಇರಿ ಸಂಜೆಗೆ ಸರಿಯಾಗಿ ಕೊರೆದುಕೊಂಡು ಮಾತಾಡೋಣ. ನಾನ್ ಕ್ಯಾಬ್ ಹತ್ತಿದ ಮೇಲೆ ಫೋನಿಸ್ತೀನಿ. ಅಂದು ಫೋನಿಟ್ಟೆ. ತಲೆ ಸಣ್ಣಗೆ ತಿರುಗುತ್ತಿತ್ತು.
ಸಂಜೆಯ ಮಾತುಕತೆಯಲ್ಲಿ ಈ ಹೊಸನೆಲೆ ಕಂಡುಕೊಳ್ಳುವ ಅಂದಾಜು ಸಿಕ್ಕಿತು. ವಾವ್ ಅಂತ ಮನಸ್ಸು ಘೋಷಿಸಿಬಿಟ್ಟಿದ್ದರೂ ಅಷ್ಟು ಚಿಕ್ಕವಳಿದ್ದಾಗಿನಿಂದ ಪೋಷಿಸಿಕೊಂಡು ಬಂದ ತಲೆಒಳಗಿನದ್ದು ವಾಸ್ತವದ ಲೆಕ್ಕಾಚಾರ ಹಾಕಿ ತಳಮಳಗೊಳ್ಳುತ್ತಿತ್ತು. ಅದಕ್ಕೆಲ್ಲಾ ಇನ್ನೊಂದಿಷ್ಟು ಪ್ರಶ್ನೆ ಉತ್ತರ ನಡೆದವು.
ಕೊನೆಯದಾಗಿ ನಿಕ್ಕಿ (ಖಚಿತ) ಯಾಗಿದ್ದೆಂದರೆ ಕೆಲವು ಹುಚ್ಚಿಗೆ ಮದ್ದಿಲ್ಲ. ಅದನ್ನು ಹುಚ್ಚಾಗಿ ಅನುಭವಿಸಿಯೇ ತೀರಿಸಿಕೊಳ್ಳಬೇಕು. ಮತ್ತು ಅಂಥವು ಸಿಕ್ಕಾಪಾಟ್ಟೆ ಥ್ರಿಲ್ಲಿಂಗ್ ಆಗಿರುತ್ತವೆ. ಆ ಥ್ರಿಲ್ಲಿನ ಮುಂದೆ ಅನುಭವಿಸಿದ ಅನುಭವಿಸಲೇಬೇಕಿರುವ ಕಷ್ಟ-ಕಿರಿಕಿರಿಗಳು ಹಿನ್ನೆಲೆಟ್ರಾಕಿನಲ್ಲಿರುತ್ತವೆ ಅಂತ.
ಅವನ ಜಾಗದಲ್ಲಿರುವ ದಿಬ್ಬದ ಮೇಲೊಂದು ಮನೆ(ಅದಕ್ಕೆ ಫ್ಯಾಂಟಮ್ಮಿನ ಮನೆಯ ಹೆಸರು ವೃಕ್ಷ ಗೃಹ) ಹಿಂಬದಿಯಲ್ಲಿ ವಿಂಡ್ ಮಿಲ್ಲು, ಒಂದು ಜಟ್ಟಿ ನಾಯಿ.. ಕಡಿಮೆಯಿರುವುದು ಹೀರೋಕುದುರೆ ಅದರ ಬದಲು ಪಲ್ಸರಿದೆ! ಇದು ನಮ್ಮ ಮಾತುಕತೆಗಳ ಸ್ಯಾಂಪಲ್. ಏನು ಹಾಕಿ, ಹೇಗೆ ಬೆಳೆದು, ಯಾವ ರೀತಿಯಲ್ಲಿ ಮಾರಾಟ ಮಾಡ್ಬೇಕು ಅಂತ ಯೋಚನೆ ಮಾಡೋದು ಬಿಟ್ಟು, ಇಂತದೇ ಕಲ್ಪನೆಯ ಮಾಯಾಚಾಪೆಯಲ್ಲಿ ಕೂತು ಸುತ್ತುವ ಕೆಲಸ ನಮ್ಮದು. ಇದೆಲ್ಲ ಒಂದು ವರ್ಷದ ಹಿಂದಿನ ಮಾತು.ಮೊನ್ನೆ ಬೆಳಗ್ಗೆ ಆ ಗೆಳೆಯ,ಅವನ ಹೆಂಡತಿ, ಪುಟ್ಟ ಮಗಳು ಮತ್ತು ಅವರಮ್ಮನನ್ನು ಹೊಸ ಊರಿಗೆ ಹೊರಟ ಕಾರಿನಲ್ಲಿ ಹತ್ತಿಸಿ ಕೈಬೀಸಿ ಕಳಿಸಿಯಾಯ್ತು.
ಮೊನ್ನೆ ಮೊನ್ನೆ ಅವನ ಹತ್ತಿರ ನಾನು ಊರಿಗೆ ಹೋಗುವ ಪ್ಲಾನು ಹೇಳಿ ಬಯ್ಯಿಸಿಕೊಂಡಿದ್ದೂ, ಅವನು ಹೋಗ್ತೀನಿ ಅಂದಾಗ ನಾನು ಉಚಾಯಿಸಿ ಮಾತನಾಡಿದ್ದೂ, ಅವನು ನಿಜ್ವಾಗ್ಲೂ ಕೆಲಸ ಬಿಟ್ಟಾಗ ಸಕ್ಕತ್ ಥ್ರಿಲ್ಲಾದರೂ ತುಂಬ ಹೆದರಿಕೆಯಾಗಿದ್ದೂ, ಆಮೇಲೆ ವಾರವಾರವೂ ಏನೇನು ಮಾಡುವುದೆಂದು ಹರಟಿದ್ದೂ, ಮುಂದಿನವಾರ ಹೊರಡುತ್ತೇನಮ್ಮಾ ಅಂತ ಅಂದಾಗ ಆ ದಿನ ಹತ್ತಿರವಾಗುವವರೆಗೂ ಅದರ ಗಂಭೀರತೆಯನ್ನೇ ಅರಿಯದೆ ಹೋಗಿದ್ದೂ ಎಲ್ಲವೂ ಅವನ ಮನೆಯ ಮುಂದೆ ಆಟೋ ಇಳಿಯುವಾಗ ಒಟ್ಟಿಗೆ ನೆನಪಾದವು. ಅವನು ಎಂದಿನ ಟ್ರೆಕ್ಕಿಂಗ್ ಹೊರಟ ಸರಾಗ ಹರಿವಿನಲ್ಲಿ ಹೊರಟಿದ್ದಾನೆ. ಒಳಗೆ ಆತಂಕದ ಸುಳಿಗಳಿರಬಹುದು. ಅವನ ಜೊತೆಗಾತಿ ಹೆಂಡತಿ ಸಂತೈಸುತ್ತಾಳೆ. ಮಗಳು ಅವನ ಕೆನ್ನೆಗಳಲ್ಲಿ ನಗು ಮೂಡಿಸುತ್ತಾಳೆ. ನಾವು ಗೆಳೆಯರು ಶುಭ ಆಶಯಗಳ ಕೊಡೆಬಿಚ್ಚಿ ಅವನ ಜೊತೆಗಿದ್ದೇವೆ.ಪಯಣಕ್ಕೆ ಶುಭಕೋರಲು ಬಂದಿದ್ದ ನನ್ನ ಇನ್ನೊಬ್ಬ ಗೆಳೆಯ ಹೇಳಿದ. ಏನೇ ಇದು, ಟಾರ್ಜಾನೇ ಹೊರಟು ಹೋದ ಮೇಲೆ ಇನ್ನು ನಾವು ಹ್ಯಾಗೆ ಸುತ್ತಾಟ ಮಾಡೋದು ಅಂತ. ಹೌದು ಅಂವ ಒಂದ್ರೀತಿ ಫ್ಯಾಂಟಮ್ಮು ಮತ್ತು ಟಾರ್ಜಾನಿನ ಕನ್ನಡರೂಪ. ನಾನು ಮಾತಿಗೆ ಸಲೀಸಾಗಿ ಹೇಳಿಬಿಟ್ಟೆ. ಅವನಿರುವ ಊರಿನ ಹತ್ತಿರವೇ ನಾವು ಸುತ್ತೋದು ಅಂತ. ಇದೆಲ್ಲ ಅಷ್ಟು ಸುಲಭಕ್ಕಲ್ಲ. ನಾವು ಯೋಚನೆಯಲ್ಲೇ ಪ್ರಪಂಚ ಸುತ್ತುವ ಮಂದಿ. ಹೆಜ್ಜೆ ಎತ್ತಿಡುವಾಗ ವಾಸ್ತವದ ನೋವುಗಳು ಮಗ್ಗಲು ಮುರಿಯುತ್ತವೆ."A dream is given to you only to make it come true" ಅಂತ ಒಂದು ಮಾತಿದೆ. ಅದು ಇವನ ಬದುಕಾಗಲಿ ಅಂತ ಹಾರೈಕೆ.

ಪುಸ್ತಕ ಪ್ರೀತಿಯ ಈ ಗೆಳೆಯನಿಗೆ ಕೊಡಲಿಕ್ಕೆಂದು ಒಂದಿಷ್ಟು ಪುಸ್ತಕ ಕೊಳ್ಳಲು ಅಂಕಿತಕ್ಕೆ ಹೋಗಿದ್ದೆ. ಬೇಕಾದ ಪುಸ್ತಕ ಕೊಳ್ಳುವಷ್ಟರಲ್ಲಿ ಪ್ರಕಾಶ್ ಇದು ನೋಡಿ ನೀವಿನ್ನೂ ಓದಿರಲ್ಲ ಅಂತ ಕೊಟ್ಟರು. ತೇಜಸ್ವಿ ಹೆಸರಿನಲ್ಲಿ ತೀರ್ಥ, ಪ್ರಸಾದ ಕೊಟ್ಟಿದ್ದರೂ ತಗೊಳ್ಳುವ ನಾನು ಆ ಪುಸ್ತಕದ ಲೇಖಕಿಯ ಹೆಸರು ನೋಡಿಯೇ ಮರುಳಾಗಿಬಿಟ್ಟೆ. ಒಂದು ಗೆಳೆಯನಿಗೂ ಇನ್ನೊಂದು ನನಗೂ ಎತ್ತಿಟ್ಟಿಕೊಂಡುಬಿಟ್ಟೆ. ಅದು ನಮ್ಮ ಪ್ರೀತಿಯ ರಾಜೇಶ್ವರಿ ತೇಜಸ್ವಿಯವರು ಬರೆದ "ನನ್ನ ತೇಜಸ್ವಿ". ಸರಿಯಾಗಿ ಮಂಗಳವಾರ ರಾತ್ರಿಯಿಂದ ಓದಲು ತೊಡಗಿ, ಬುಧವಾರ, ಗುರುವಾರ ರಾತ್ರಿಗಳಲ್ಲಿ ಮುಂದುವರಿಸಿ ಮುಗಿಸಿಬಿಟ್ಟೆ. ಅದರಲ್ಲಿರುವ ತೇಜಸ್ವಿ ನಾನು ಅಂದುಕೊಂಡ ಹಾಗೇ ಇದ್ದರಲ್ಲಾ ಎಂಬ ಅಚ್ಚರಿಯೊಂದಿಗೆ, ಅವರ ಪ್ರೀತಿಯ ಸಂಗಾತಿ ರಾಜೇಶ್ ಮೇಲಿನ ಪ್ರೀತಿ ಮತ್ತು ಅಭಿಮಾನ ಸಿಕ್ಕಾಪಟ್ಟೆ ಜಾಸ್ತಿಯಾಗ್ಬಿಟ್ಟಿದೆ. ಅವರು ಹಾಗಿರಲು ಇವರು ಹೀಗಿರುವುದೇ ಕಾರಣ. ನನ್ನನ್ನು ಒಂದು ಜ್ವರದ ಹಾಗೆ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತು. ಇದು ಅಭಿಮಾನವನ್ನು ಮೀರಿದ, ಕನ್ನಡದ ಓದುಪ್ರೀತಿಯ ಸೃಜನಶೀಲ ಮನಸ್ಸುಗಳೆಲ್ಲ ಓದಲೇಬೇಕಿರುವ ಪುಸ್ತಕ. ಓದುಪ್ರೀತಿಯವರು ಅಂತ ಯಾಕಂದೆ ಅಂದರೆ ಇದು ೫೦೦ಕ್ಕೂ ಹೆಚ್ಚಿನ ಪುಟಗಳಿರುವ ಮಹಾ ಓದು. ಆ ಚೈತನ್ಯಪೂರ್ಣ ಸಾಂಗತ್ಯವನ್ನು ವಿವರಿಸಲು ಇದು ಕಡಿಮೆಯೇ ಅನ್ನಿಸಿದರೂ, ಇನ್ನೂ ಹೆಚ್ಚು ಬರೆದು ವಾಚ್ಯವಾಗದೆ ಅವರ ಬದುಕಿನ ಸವಿಯನ್ನು ನಮ್ಮ ಮನದ ಭಿತ್ತಿಯಲ್ಲಿ ಕಲ್ಪಿಸಿಕೊಳ್ಳಲಿಕ್ಕೂ ಅವಕಾಶ ನೀಡಿದ್ದಾರೆ ಲೇಖಕಿ. A typical Tejaswi style! ಆ ಕೊನೆಯ ಸಿಟೌಟಿನ ಅಧ್ಯಾಯವೇ ಸಾಕು ಈ ಬರಹದ ರೂಹನ್ನ ಕಟ್ಟಿಕೊಡಲು. ಈ ಮಾತುಗಳೆಲ್ಲ ಯಾಕೆ. ಅವರ ಪುಸ್ತಕ ಓದಿ. ರಾಜೇಶ್ವರಿಯವರ ಮೊದಲಮಳೆಗೆ ಅರಳಿ ಸುಗಂಧಿಸುವ ಕಾಫಿಹೂಗಳಂತಹ ಬರಹಮಾಲೆಯನ್ನ ಓದಿಯೇ ಅನುಭವಿಸಬೇಕು.
----------------------------------
ಇದು ಬದುಕಿನ ತಿರುಳೋ ಅಥವಾ ಇದೇ ಬದುಕೋ ಗೊತ್ತಾಗದ ಅರೆ ಎಚ್ಚರದ ಕನಸು ಮುಗಿಯುವಷ್ಟರಲ್ಲಿ ಬದುಕು ಕೊನೆಯ ನಿಲ್ದಾಣಕ್ಕೆ ಬಂದಿರುತ್ತದೆ. ಇವತ್ತು ೩೩ ವರ್ಷ ಕಳೆದ ಬದುಕಿನ ತಿರುವಿನಲ್ಲಿ ನಿಂತು ಯೋಚಿಸುತ್ತೇನೆ. ಕಳೆದ ೩೩ ವರ್ಷಗಳಲ್ಲಿ ಬದುಕಿನ ಪಾತ್ರೆಗೆ ನಾನು ತುಂಬಿದ್ದೇನು? ಅದರಿಂದ ಹರಿಸಿದ್ದೇನು?ಅಥವಾ ಉಮರ ಹೇಳಿದಂತೆ ಬೋರಲು ಬಿದ್ದ ಬದುಕಿನ ಪಾತ್ರೆ ತುಂಬದೆ ಉಳಿದಿದೆ, ತುಳುಕುವುದಕ್ಕೇನಿದೆ? ಅಥವಾ ಈ ೩೩ಕ್ಕೆ ಎಲ್ಲ ಮುಗಿಯಿತು ಎಂಬಂತೆ ಕೂರಬೇಕೆಂದೆ ನನಗೆ ಈ ವಯಸ್ಸನ್ನು,ಆರೋಗ್ಯವನ್ನು, ಏನಾದರೂ ಮಾಡುವ ಚೈತನ್ಯವನ್ನು, ಮಾಡಬೇಕೆಂಬ ತುಡಿತವನ್ನು ನನ್ನನ್ನು ರೂಪಿಸಿದ ಸೃಷ್ಟಿ ದಯಪಾಲಿಸಿದೆಯೇ? ಅಥವಾ ಈ ತಪನೆಯೇ ಒಂತರ ಏನನ್ನೂ ಮಾಡಲು ಸಾಧ್ಯವಿರುವ ಎಲ್ಲಕ್ಕೂ ಒಡ್ಡಿನಿಂತ ಹೊಸ ಬಾಗಿಲೆ? ನಾನು ಹ್ಯಾಗೆ ಗ್ರಹಿಸಿದೆ ತೊಳಲಾಟವನ್ನ,ಸಂಕ್ರಮಣವನ್ನ ಅಂತ ಮುಂದೆ ಎಂದಾದರೂ ಹೇಳಿಯೇನು.
-ಪ್ರೀತಿಯಿಂದ,ಸಿಂಧು

8 comments:

ತೇಜಸ್ವಿನಿ ಹೆಗಡೆ said...

ಪ್ರಿಯ ಸಿಂಧು,

ನಿನ್ನ ಬರಹಗಳಲ್ಲೇ ನಂಗೆ ಅತಿ ಹೆಚ್ಚು ಇಷ್ಟವಾಗಿದ್ದು ಈ ಅನುಭೂತಿ (ಬರಹ ಅನ್ನಲು ಆಗಲ್ಲ,,, ಇದನ್ನ). ನನ್ನೊಳಗಿನ ಗೊಂದಲ, ಹುಚ್ಚು, ತುಡಿತ, ಥ್ರಿಲ್ ಎಲ್ಲವನ್ನೂ ಅದೆಷ್ಟು ಅಚ್ಚುಕಟ್ಟಾಗಿ, ಚೆನ್ನಾಗಿ ಭಟ್ಟಿ ಇಳಿಸಿದ್ದೀಯಾ! ನಿಜ... ಮನಸಲ್ಲೇ ಮಹಲವನ್ನು ಕಟ್ಟಿ ಕೆಡವುವ ನಮ್ಮಂತಹವರ ಕೆಲವು ಹುಚ್ಚುಗಳು ಹುಚ್ಚುಚ್ಚಾಗಿ ನಮ್ಮೊಳಗೇ ಇರಲಿ... ಆ ಥ್ರಿಲ್‌ನ ಸುಖ ಟ್ರ್ಯಾಕ್ ಜೊತೆ ನವಿರಾದ ನೆನಪುಗಳನ್ನು ಕೊಟ್ಟರೆ ಅಷ್ಟೇ ಸಾಕು ಅಲ್ಲವೇ? :)

ಪ್ರೀತಿಯಿಂದ,
ತೇಜು.

sunaath said...

ಸಿಂಧು,
(೧)ಇಂತಹ ಚೈತನ್ಯಶೀಲ ಮನಸ್ಸಿರುವ ನೀವು, ಎಲ್ಲಿಯೇ ಇದ್ದರೂ, ಬದುಕನ್ನು ಸಾರ್ಥಕ ಮಾಡಿಕೊಳ್ಳಬಲ್ಲಿರಿ ಎಂದು ನನ್ನ ಭಾವನೆ.
(೨)ಒಂದು ಸಸ್ಯವನ್ನು ನೋಡಿದಾಗ, ಅದರದು vegetative life, ನಮ್ಮದು ಹಾಗಲ್ಲ ಅಂತ ಅನ್ಕೋತಿವಿ. ಆದರೆ ಆ ಸಸ್ಯವು, ಬೇರುಗಳನ್ನು, ಎಲೆಗಳನ್ನು, ಹೂವು ಹಾಗು ಹಣ್ಣುಗಳನ್ನು ರೂಪಿಸಿಕೊಳ್ಳಲು ಸಾವಿರಾರು ವರ್ಷಗಳನ್ನು ಕಳೆದಿದೆ. ಯಾರ ಬದುಕೂ vegetative ಅಲ್ಲ!

ಶ್ರೀನಿಧಿ.ಡಿ.ಎಸ್ said...

:) ನಿನ್ನ ಬ್ಲಾಗ್ ಬದಿಗೆ ಬರದೆ ಸುಮಾರ್ ದಿನಾಗಿತ್ತು. ಚೊಲೋ ಬರದ್ದೆ. (ಇದ್ನೇ ನಿಂಗೆ ಹೇಳಿ ಹೇಳಿ ನಂಗೂ ಬೇಜಾರಾಯ್ದು)

ಭಾಶೇ said...

WOW!

AM gonna get that book very soon. I admire your friend for his decision and his dare. I wish him all the luck and success.

Amazing!!!

ವಾಣಿಶ್ರೀ ಭಟ್ said...

tumba chennagide... nanna blogigomme banni...

ಶಾಂತಲಾ ಭಂಡಿ (ಸನ್ನಿಧಿ) said...

ಚಿಂದಕ್ಕ,
ನಾನೂ ಓದ್ಬೇಕು ಅನ್ನಿಸ್ತಿದೆ, ಹಂಗೆ ಬರ್ದಿದೀಯಲ್ಲೋ.

ಪ್ರೀತಿಯಿಂದ,
ಶಾಂತಲಾ

ಸಿಂಧು sindhu said...

@ತೇಜಸ್ವಿನಿ,
ಅಷ್ಟೇ ಸಾಕೂಂತ್ಯಾ? :)
ಸಾಕು ಅನ್ಸಿಬಿಟ್ರೆ ಮುಂದಿನ ಹೆಜ್ಜೆಯ ಗತಿಯೇನು. ;)

@ಸುನಾಥ,
ನಿಮ್ಮ ಅನಿಸಿಕೆಗಳು ಯಾವತ್ತೂ ನನ್ನ ಅಭಿಪ್ರಾಯಗಳನ್ನ ತಿದ್ದುವ,ಗಾಢಗೊಳಿಸುವ ಮತ್ತು ಹೊಳಪಿಸುವ ಹಾಗಿರುವುದು ನನ್ನ ಪುಣ್ಯವಿಶೇಷ.
ನಿಮ್ಮ ಮಾತು ನಿಜ. ಯಾರ ಬದುಕೂ ವೆಜಿಟೇಟಿವೆ ಅಲ್ಲ. ಹೂತ ಹುಣಸಿಯೇ ಕವಿಸಮಯ ಕಟ್ಟಿ ಕಾವ್ಯಾರಾಧಕರನ್ನ ದಶಕಗಲ ಕಾಲ ತಣಿಸಿರಬೇಕಾದರೆ!

@ನಿಧಿ,
ಸಂತೋಷ ಸಾರ್, ಆಗ್ಲಿ ಬೇರೆ ಮಾತೂ ಆಡುವಂತವರಾಗಿ. ಎದುರಿಗೆ ಸಿಕ್ಕಿ ಆಡಿದ್ರಂತೂ ಇನ್ನೂ ಚೆನ್ನ.

@ಭಾಶೇ
ಓದಿ. ನಿಮ್ಗೆ ಇಷ್ಟವಾಗತ್ತೆ. ಅದೊಂತರಾ ಕೆಲಿಡೋಸ್ಕೋಪಿಕ್ ಪುಸ್ತಕ.
ನನ್ನ ಗೆಳೆಯನಿಗೆ ನಿಮ್ಮ ಮೆಚ್ಚುಗೆ ತಿಳಿಸ್ತೀನಿ.

@ವಾಣಿಶ್ರೀ
ಖಂಡಿತಾ.

@ಶಾಂತಲೆ
ಓದ್ಲೇಬೇಕು ಕಣೆ. ತರಿಸ್ಕ್ಯ ಬೇಗ. ಯಾರ್ ಬಂದ್ರೂ.
ನಿಂಗೆ ಇಷ್ಟ ಆಗೇ ಆಗ್ತು.

-ಪ್ರೀತಿಯಿಂದ,ಸಿಂಧು

nenapina sanchy inda said...

ಪ್ರೀತಿಯ ಸಿಂಧು!!
ತುಂಬ ಆತ್ಮೀಯವಾಗಿದೆ ನೀವು ಬರೆದಿದ್ದು. ನನ್ನ ಬರಹದ ಬಗ್ಗೆ ನಾನೊಮ್ಮೆ ಅವಲೋಕಿಸುವಷ್ಟು. :-)
the person who has taken up farming seems to be one amongst us!! we are fortnightly or mobile farmers..ಮೊಬೈಲ್ ಯಾಕಂದ್ರೆ ನಮ್ಮ ತೋಟವನ್ನು ನೋಡಲು ಇರುವ ಜನರಿಗೆ ಫೋನ್ ಮೂಲಕ instructions ಹೋಗ್ತಾನೆ ಇರುತ್ತೆ.ಮತ್ತು ಹದಿನೈದು ದಿನಕ್ಕೊಮ್ಮೆ ನಮ್ಮ ಸವಾರಿ ತೀರ್ಥಹಳ್ಳಿಗೆ. ಹೇಗೂ ಬೆಂಗಳೂರಿನಿಂದ direct ಕುಪ್ಪಳ್ಳಿಗೆ ಬಸ್ ಇದೆ..(what a coincidence alwaa..ನೀವು ಮಗನ ಬಗ್ಗೆ ಓದಿದಿರಿ, ನಾವು ಅವರ ತಂದೆಯ ಬಳಿಯ ಊರಿನಲ್ಲಿರುವುದು..)
ನಿಮ್ಮ ಕವನಗಳೂ ಆಳವಾಗಿವೆ. ಒಂದಿಷ್ಟು ಈಗ ಓದಿದೆ. ಪುನ: ಬರುತ್ತೇನೆ. and hey i have visited ur blog earlier. somehow i am scared to comment where the writings are really good cos i feel they might not be up to the mark
take care
:-)
malathi S