Friday, October 5, 2012

ರೂಪಾಂತರ

ಕೈಯಲ್ಲಿ
ಹೂಗೊಂಚಲು ಹಿಡಿದ
ಹೂಮೊಗವ
ತುಂಬಿದ ನೆರಳು
ನನಗೆ ಗೊತ್ತು.
ತುಂಟತನದಲ್ಲಿ
ಅದ್ದಿ ತೆಗೆದ ಮೂರ್ತಿಯ
ಕಣ್ಣಿನಲ್ಲಿ ಪ್ರತಿಫಲಿಸುವ
ಅಭದ್ರತೆಯ ಭಾವವೂ ಗೊತ್ತು.

ಹಿಡಿದು ಎರಡು ತಟ್ಟಬೇಕೆನ್ನಿಸುವಷ್ಟು
ಸಿಟ್ಟು ಬಂದರೂ
ಸುಮ್ಮನೆ ತಬ್ಬಿಕೊಳ್ಳುತ್ತೇನೆ.
ಬಯ್ಗುಳವ ಬಂದ ದಾರಿಯಲ್ಲೆ
ವಾಪಸ್ ಕಳಿಸಿ
ಆ ಬಾಯಲ್ಲೆ ನಿನ್ನ ಕೆನ್ನೆಗೆ
ಮತ್ತೊಂದು ಮುತ್ತಿಡುತ್ತೇನೆ.

ತಮ್ಮನ ಕೆನ್ನೆ ಚಿವುಟಲು
ಹೋಗಿ
ಮೆತ್ತಗೆ ಸವರುವ
ಆ ಸಿರಿಕರಗಳಿಗೆ
ಕರುಣಾರವಿಂದಗಳಿಗೆ
ನನ್ನ ತಲೆಯಿಡುತ್ತೇನೆ.

ಬಾಲ್ಯಕ್ಕೆ
ಸ್ವಲ್ಪ ಇರಿಸುಮುರಿಸಾದರೂ
ನಿನ್ನ ಬದುಕಿಡೀ
ಜೊತೆಯಾಗುವ
ಈ ಜೀವ ನಿನಗೆ
ತುಂಬ ಇಷ್ಟವಾಗತ್ತೆ
ಅಂತ ಗೊತ್ತು.
ನನಗೊಬ್ಬ
ತಮ್ಮನಿರುವ
ನಿರಾಳ
ನನಗಷ್ಟೇ ಗೊತ್ತು.

ಚಂದಚಿಟ್ಟೆಗೂ
ಮೊದಲು
ಕಂಬಳಿಹುಳು
ರಾತ್ರಿಯ ಒಡಲಲ್ಲೇ
ಬೆಳಕಿನ ಬೀಜ.

Wednesday, May 30, 2012

ಅರಿವು

ನೀನು
ಭ್ರಮೆಗಳ ಸಿಪ್ಪೆಗಳನ್ನೆಲ್ಲಾ
ಒಂದೊಂದಾಗಿ ಸುಲಿದುಬಿಟ್ಟೆ.
ಈಗ ನೋಡು
ಹಣ್ಣಾಗದ,
ರುಚಿಹಿಡಿಸದ
ಸತ್ಯವೆಂಬೋ ಕಾಯಿ 
ಇನ್ನೆಂದೂ ಹಣ್ಣಾಗುವುದೂ ಇಲ್ಲ!
ಒಂದಿಷ್ಟು ಭ್ರಮೆಯ
ಆವರಣ ಹಾಗೆ ಇದ್ದಿದ್ದರೆ
ಕನಸು ನಿರೀಕ್ಷೆಗಳ
ಧೂಪವಿಟ್ಟು
ಹಣ್ಣಾಗಿಸಬಹುದಿತ್ತೇನೋ
ಎಂಬ ಆಸೆಯ
ತಲೆಯ ಮೇಲೆ
ರಪ್ಪನೆ ಹೊಡೆಯುತ್ತದೆ
ಹೂವು ಹಣ್ಣು ಸಹಜವಾಗಿ
ಆಗಬೇಕು
ಒತ್ತೆಹಾಕಿ ಅಲ್ಲ ಎಂಬ
ನನ್ನ-ನಿನ್ನ ನಂಬಿಕೆ.
ಉಹ್
ನಹಿ ಜ್ಞಾನೇನ ಸದೃಶಂ!
ಅರಿವಿಗೆ ಹಾತೊರೆಯುವಾಗ
ಕಣ್ಣು ಕುಕ್ಕುವ ಬೆಳಕು
ಮತ್ತು ಕುರುಡುತನ
ಎರಡಕ್ಕೂ
ತಯಾರಿರಬೇಕು.
and some times...
ಪ್ರೀತಿ ಅರಿವಿನ
ಇನ್ನೊಂದು ರೂಪ!

Friday, March 30, 2012

ಸಂಧ್ಯಾ ರಾಗ..

ಮುದ್ದಿಸಿ ಲಾಲಿಸಿ
ನೇರ ನಿಂತ ಬೆನ್ತಟ್ಟಿ
ಸೆರಗನ್ನು ಉತ್ತರೀಯಕ್ಕೆ ಗಂಟು ಕಟ್ಟಿ
ಹಾಲು - ನೀರು ಧಾರೆಯೆರೆದು
ಕೊಟ್ಟದ್ದೊಂದು ಉದ್ದ ಹಳಿ,
ಕಟ್ಟಿದ ಗಂಟಿನೊಂದಿಗೇ
ಸೆಳೆದುಕೊಂಡು, ಪಕ್ಕಕೆ ನಿಂದು
ಬೆನ್ನು ಸವರಿ,
ಒಳಸೇರಿಸಿಕೊಂಡ ಹಾಗೆ
ಅನಿಸುವಂತೆ ಮಾಡಿದ್ದೊಂದು
ಉದ್ದ ಹಳಿ,
ಎರಡರ ಮಧ್ಯದಲ್ಲಿ
ಎಷ್ಟೊಂದು ಕೂಡುಕೊಳೆ
ಸೇರಿಸುವ ಪುಟ್ಟ ಪುಟ್ಟ ಕಂಬಿ
ಅಂಕು ಡೊಂಕಾಗಿ
ಹರಿವ ಪಯಣದ
ಉದ್ದ ಕಾಯುವ ಸಮಾನಾಂತರ ರೇಖೆಗಳು
ಈ ಪಯಣವ ಹೊತ್ತ
ಭುವಿಗೇನು ದಕ್ಕಿದ್ದು?
ದಿನದಿನದ ಧಡಭಡ ಪಯಣ
ವೇಳಾಪಟ್ಟಿಯ ನಿಭಾಯಿಸುವ
ನಿಲ್ದಾಣ
ಹತ್ತಿಳಿವವರ ಅನುರಣನ.

ಮುದ್ದು ಮಗುವಿರುವಳಲ್ಲ
ಎಂದಿರೋ
ಇಲ್ಲ ಅದು ಹಾಗಲ್ಲ
ಅಮ್ಮನಿಲ್ಲದೆ ಇರುವವಳಲ್ಲ.
ಯಾಕೆ ಕೊಡಬೇಕು
ಹೆತ್ತ ಹೊಟ್ಟೆಗೆ ಸಂಕಟ??
ಹೆರಿಸುವ ಪುರುಷಾರ್ಥಕ್ಕೆ ಧರ್ಮಸಂಕಟ?

ಪೊರೆದು ತೊರೆದ ಊರಿನ ನೆನಪು
ಗಾಢವಾಗಿ ಒತ್ತಿ ಕಾಡುತ್ತವೆ
ಆದರೇನು ಮಾಡಲಿ
ಹೊಕ್ಕ ಊರಿನ
ಪ್ರಭಾವಳಿ ಮೀರಲಾರೆ
ಇಲ್ಲಿರಲಾರೆ
ಅಲ್ಲಿಗೆ ಹೋಗಲಾರೆ
ಹೋದರೆ ಎದೆಗವಚಿಕೊಳ್ಳುವ
ಮನೆಯ ಮರುಕದ ಭಾರ ಹೊರಲಾರೆ
ಹೊನ್ನಮ್ಮನೋ ಚೆನ್ನಮ್ಮನೋ
ಎಲ್ಲರನ್ನೂ ಪೊರೆದು, ಕೊರೆದು, ತೊರೆದ
ಗಂಡುಮೆಟ್ಟಿನ ನೆಲದ ಸಂಸ್ಕೃತಿಯೇ
ಹೇಗೆ ಬಿಡಲಿ ನನ್ನ
ಮುದ್ದು ಮಗಳನ್ನ ನಿನ್ನ ಆರೈಕೆಗೆ?!

ಅದೋ
ಸಂಜೆಗತ್ತಲಲ್ಲಿ
ನಿಲ್ದಾಣದಿಂದಾಚೆ
ಬೆಳಕು ಬೀಳದ ದೂರದಲಿ
ಹೆತ್ತ ಮಗುವ
ಬಿಗಿದಿದ್ದೇನೆ ಹೊಟ್ಟೆಗೆ
ಕೂಗು ಹೊರಬರದಿರಲೆಂದು
ಕರ್ಚೀಫು ತುರುಕಿದ್ದೇನೆ,
ಉಕ್ಕಿ ಬರುವ ದುಃಖಕ್ಕೆ
ಅಸಹಾಯ ರೋಷದ ಆಸರೆಯಿಟ್ಟು
ನಿಂತಿದ್ದೇನೆ-
ಕೂಡಿ ಕಳೆವ
ಕಂಬಿಗಳ ಬಳಸಿದ
ಸಮದೂರದ ಹಳಿಗಳ ಮೇಲೆ
ಧಡಬಡ ಸದ್ದು..
ಆಹ್ ಇಲ್ಲೆ
ರಭಸದ ಬೆಳಕು ಶಬ್ಧ
ಅಸಹನೀಯ ನೋವು
ಮುಗಿದ ಕತೆ
ನಿಶ್ಯಬ್ಧ ನಿರಾಳ.

ಕೆಂಪು ಕರಗಿದ ಸಂಜೆ ಮುಗಿದು
ಚುಕ್ಕಿಯೂ ಮಿನುಗದ ರಾತ್ರಿಯಿಡೀ
ಧಾರಾಕಾರ ಮಳೆ
ಬೆಳಿಗ್ಗೆ
ಅಳಿದುಳಿದ ಚೂರುಪಾರಿಗೆ
ಶವಸಂಸ್ಕಾರ.

Thursday, March 22, 2012

ಲೆಕ್ಕಕ್ಕುಂಟು ಆಟಕ್ಕಿಲ್ಲ...

ನೀನು ಲೆಕ್ಕಕ್ಕೆ
ನಾನು ಆಟಕ್ಕೆ
ಔಟಾದರೂ, ಗೆದ್ದರೂ
ಆಟ ನಿಂತರೂ ನಡೆದರೂ
ನನಗೇ ಬಿಟ್ಟ
ಕುಂಟೇಬಿಲ್ಲೆ
ಕಾಣದ ಹಾಗೆ
ಕಟ್ಟಿಕೊಂಡ ಎಲ್ಲೆ.

ಕಾಲಿದ್ದೂ ಕುಂಟುವ
ನೋವು
ಆಡಿದವರಿಗೇ ಗೊತ್ತು,
ಬಿಲ್ಲೆ ಇಲ್ಲದೆ ದೂಡುವ
ಹೆಜ್ಜೆ ಭಾರ ಭಾರ ಇತ್ತು,
ಒಂದು ಮಾತು
ಹ್ಯಾಗಿದೀ ಅಂತ ಕೇಳಿದ್ದರೂ
ಸಾಕಿತ್ತು.
ಮಾತು ಬಿಟ್ ಹಾಕು
ಆದರೆ ಎಲ್ಲಿ ??
ಆ -
ಕೈಯೊತ್ತು,
ಕಣ್ಣು ಕಣ್ಣು ಕಲೆವ ಹೊತ್ತು,
ಕವಿದ ಕತ್ತಲಲ್ಲೆ ಹೊಳೆವ
ಬಾನ್ಮುತ್ತು...?!

ಯಾವುದೋ ಆಟ
ಇನ್ಯಾವುದೋ ಲೆಕ್ಕ
ಕನಸು ಬೀಳುವ ಕಣ್ಣಲಿ
ಕಸ ಬಿದ್ದು
ಧಾರೆ ಧಾರೆ ಮುತ್ತು.

Wednesday, March 7, 2012

ಆ ಮೇಲೆ..

ಔಟ್ ಆಫ್ ದಿ ಡೇ ಅಂಡ್ ನೈಟ್, ಅ ಜಾಯ್ ಹ್ಯಾಸ್ ಟೇಕನ್ ಫ್ಲೈಟ್.. - ಪಿ.ಬಿ.ಶೆಲ್ಲಿ

ಮೊಗ್ಗು ಅರಳಿದ ಮೇಲೆ
ಗಂಧ ಗಾಳಿಯ ಪಾಲು
ಮೇಲೆಸೀ ಕಲ್ಲು,
ಬಿದ್ದರೂ ಕೆಳಗೆ ಪರ್ವಾಗಿಲ್ಲ
ಅಂದು ಹಾರಿಸಿಕೊಂಡು
ಗಾಳಿಯಲಿ ತೇಲಿದ
ನಲವಿನ ಬಳ್ಳಿಯೇ
ಈಗ ಬಿದ್ದ ನೋವಿಗೆ
ಯಾಕೆ ಅಳು?
ಕೆಳಗೆ ವಾಪಸಾಗಿದ್ದು ಕಲ್ಲು ಮಾತ್ರ
ಖುಶಿ ಗುರುತ್ವ ಕಳೆದು ಹಾರಿ ಹೋಗಿತ್ತು.
ಕಾಲನ ಹೆಸರು
ಯಾಕೆ ಕಾಲ
ಅಂತ ಗೊತ್ತಾದ ಹೊತ್ತು
ದೀಪದುರಿಯ ಕಣ್ಣಿನ ಒಡಲ
ತುಂಬ ಬಿಳಿ ಬಿಳಿ ಮುತ್ತು.
ಹೂವಾದ ಮೊಗ್ಗು
ಒಣಗಿ ಕುಸುಮಗಳುದುರಿ
ತೊಟ್ಟು ಕಳಚಲೆಷ್ಟು ಹೊತ್ತು!
ಕಿನಾರೆಯ ಮರಳ ಒಡಲು
ಇರುವುದೇ
ನಾವೆ ಹತ್ತಿ - ಇಳಿದು ಬೇರೆಡೆಗೆ ಹೋಗಲು
ಅಲ್ಲವಿದು ಮನೆಯ ಮಾಡಲು
ಕಾಲನ ಹೆಸರು ಯಾಕೆ ಕಾಲ ಅಂತ ಗೊತ್ತಾದ ಹೊತ್ತು..
ಎಂದೂ ಕಾಣದ ಕನಸಿನ ತುಂಬ ಅತ್ತು
ಕಂಪು ಬೀರದ ಕವಿತೆಯ ಹೆತ್ತು
ಕರಗುತಿಹ ಜೀವ ಕಳೆದಲ್ಲೇ ಹುಡುಕಿತ್ತು.
ಆಮೇಲೆ..
ಆಮೇಲಾಮೇಲೆ..
ಕಪ್ಪುನೀಲಿ ಬಾನ ಎದೆಯಲಿ ಬರೀ ಚುಕ್ಕಿ ಚುಕ್ಕಿ ಇತ್ತು.

Friday, March 2, 2012

ಬಿಳಿ ಬಿಳೀ ಹಣ್ಣಣ್ಣು ಕೈಯಲ್ಲಿ ಬಣ್ ಬಣ್ಣದ ಹೂಚಿಗುರು ಬೆರಳು...

ಒಂದು ಹಣ್ಣಣ್ಣು ಕೈ ಯನ್ನು ಜಗ್ಗಿ ಹಿಡಿದ ಪುಟ್ಟ ಕೈ, ಬಿಳೀ ಬಟ್ಟೆಗೆ ಬಣ್ ಬಣ್ಣದ ಕರವಸ್ತ್ರದ ಹಾಗೆ, ಅಗೋ ಅಲ್ಲಿ ಹಸಿರು ಕೆಂಪುಗುಡ್ಡದ ಬಳಸು ಹಾದಿಯಲ್ಲಿ ಬಿಳಿ ಖದ್ದರ್ ಅಜ್ಜನ ಉಸ್ ಗುಡುವಿಕೆಗೆ ಸುಯ್ ಗುಡುತ್ತಾ ಬಣ್ಣಾಡಗಿತ್ತಿ ಮೊಮ್ಮಗಳು

ಎಲ್ ಹೋಗುತ್ತಿದ್ದಾರೆ? ಇಲ್ಲೆ ಎಲ್ಲೋ ಹೀಗೇ ದರೆ ಹತ್ತಿ ಇಳಿದು, ತೋಟದ ಬದಿಗೆ, ಹಳ್ಳದಂಚಿಗೆ, ಕಾಡುಗುಡ್ಡದಲ್ಲಿ ಒಂದು ಓಡಾಟ, ಮಾತು ಸೋಲುವ ಒಡನಾಟ. ಅಷ್ಟೇಯೇ ಇಲ್ಲ ದಾರಿ ಸಾಗಲು ಕಟ್ಟಿದ ಕತೆಗಳು ಕರೆದೊಯ್ವ ಊರುಗಳ ಹೆಸರು ಹಳೇ ಪುರಾಣದ ಓಲೆಗರಿಗಳಲ್ಲಿ ಸಿಗಬಹುದೇನೋ, ಆ ಕತೆಗಳೊಳಗೆ ಆಡುವವರು ಇಲ್ಲೆ ಮರಸಾಲುಗಳ ನೆರಳಲ್ಲೆ ಮರ್ಮರಗುಡುತ್ತಾ, ಪುಟ್ಟ ತಲೆಯಲ್ಲೊಂದು ಅಗಾಧ ಮಾಯಾಲೋಕ. ಅಜ್ಜ ಬಿಡುವುದೇ ಇಲ್ಲ. ಕೀಲಿ ಕೊಡುತ್ತಲೇ ಇರುವನು ಆ ಮಾಯಾಕುದುರೆಗೆ.
ರೆಕ್ಕೆಗಳಿವೆಯೋ ಹಾಗಾದ್ರೆ, ಇದೆಯೋ ಇಲ್ವೋ ಯಾರಿಗೆ ಬೇಕು. ಹಾರುವುದಷ್ಟೆ ನಮಗೆ ಬೇಕು. ಏಳು ಸಮುದ್ರ, ದೊಡ್ಡ ಕಾನು, ಸೌಗಂಧಿಕಾ ಪುಷ್ಪ, ಸ್ವರ್ಗದ ಗಡಿ, ಗಂಧರ್ವರ ಸೀಮೆ, ಐರಾವತ ಇಳಿದು ಬಂದ ಕಣಿವೆ, ಕಣ್ವಾಶ್ರಮ, ಕಾಳಿದಾಸನ ಉಜ್ಜಯಿನಿ,ಕನಕ ಲಂಕೆ,ಕಿಷ್ಕಿಂಧೆ,ಚಿತ್ರಕೂಟ,ಪಂಚವಟಿ, ಶಬರಿಯ ಮನೆಯಿದ್ದ ಬೆಟ್ಟದೂರು, ಗುಹನ ದೋಣಿ ತೇಲುವ ಸರಯೂ, ಮಂಥರೆಯ ಸುಟ್ಟು ಕೊಲ್ಲುವ ಕಾಳ್ಗಿಚ್ಚು ನಂದಿದ ಕಾಡು, ಹೊಂಚಿ ಕುಳಿತ ಅಭಿಲಾಷೆ, ಸ್ತ್ರೀ ಸಹಜ ಆಸೆ, ರೆಕ್ಕೆ ಮುರಿದ ಜಟಾಯು, ವಾಲಿಯ ಕಣ್ಣಾಲಿಯಲಿ ತೊನೆಯುವ ಪರ್ವತಶ್ರೇಣಿ, ಮರೆಯಲಿ ನಿಂತ ಕೆಚ್ಚು, ನೀನೆ ಹನುಮಂತನೆಂಬ ಎಚ್ಚರಿಕೆಯ ಮಾತು ಕೇಳಿಸಿದ ಕಡಲಂಚಿನ ಕಲ್ಲು, ಮೂರು ಗೆರೆಯೆಳೆಸಿಕೊಂಡ ಅಳಿಲು, ಭ್ರಮೆ ಹುಟ್ಟಿಸುವ ಮಂಡೋದರಿ, ನಮ್ರ ವಿಭೀಷಣ, ಘೋರ ಯುದ್ದ, ಕಷ್ಟ ಸಾಧ್ಯ ಸಂಜೀವಿನಿ, ಗೆಲುವಿನ ಹೊಸ್ತಿಲಲ್ಲಿ ಹಚ್ಚಿದ ಅಗ್ನಿದಿವ್ಯ, ಪುಷ್ಪಕವಿಮಾನದಲ್ಲಿ ಮನೆಕಡೆ ಸವಾರಿ, ಕಾದ ಕಣ್ಣುಗಳ ಭರತ, ವಿಜಯೋತ್ಸವದ ನಗರಿ, ಕೊಂಕುಮಾತಿನ ಅಗಸ, ಪ್ರಜಾಪ್ರೇಮಿ ರಾಜಾರಾಮ, ವನವಿಹಾರ, ಬೇಕೆಂದೆ ಕಳೆದುಕೊಳ್ಳುವ ಸೀತೆ, ಋಷಿಮನೆಯಲ್ಲಿ ಜನ್ಮೋತ್ಸವ, ಮಕ್ಕಳುಲಿ ಕೇಳಿ ಮಾತು ಮರೆವ ಅಮ್ಮನ ದಿನಗಳು,... ಅಶ್ವಮೇಧದ ಸ್ವರ್ಣಸೀತೆ, ಕರ್ತವ್ಯ ಮತ್ತು ಒಲವಿನ ಮುಖಾಮುಖಿಯಲ್ಲಿ ಆಲ್ ಅಕಾಮಡೇಟಿವ್ ಒಲವು ಬೆನ್ನು ತಿರುಗಿಸಿ ಅಮ್ಮನ ಒಡಲು ಹೊಕ್ಕಲ್ಲಿಯವರೆಗೆ, ಇಷ್ಟೇ ಅಷ್ಟೇ ಅನ್ನದೆ ದಿನದ ಕಣ್ಣು ಮುಚ್ಚುವವರೆಗೆ ರಾತ್ರಿಯ ತೆಕ್ಕೆ ಮಗ್ಗುಲಾಗುವವರೆಗೆ ಹೇಳಿದ ಕಥೆಗಳು, ಕಂಡ ನೋಟಗಳು, ಹೊಳೆಯದ ಅರ್ಥಗಳು, ನೋಟಗಳಾಚೆಗಿನ ಚಿತ್ರಗಳು - ಇಲ್ಲಿ ಬಿಳಿ ಬಟ್ಟೆಯೊಳಗಣ ಹಣ್ಣಣ್ಣು ಕೈ ಹಿಡಿದ ಬಣ್ಣ ಬಣ್ಣದ ಅಂಗಿಯೊಳಗಿನ ಚಿಗುರು ಬೆರಳು.
ಕಥೆಗಳ ಬರೆಯುವ ಕಥೆಗಾರ.. ನಿನ್ನ ಮಹಿಮೆ ಅಪಾರ ಎಂದಿದ್ದರು ಪುತಿನ. ಅದು ನಿಜವೇ. ಆದರೆ ಮಾಡುವವನದಲ್ಲ ಹಾಡು ಹಾಡುವವನದು ಅನ್ನುವುದು ಅದಕ್ಕಿಂತ ಗಟ್ಟಿಯಾಗಿ ಹೊಳೆದ ನಿಜ. ಅದನ್ನಂದವರೂ ಅವರೆ. ಕಥೆ ಹೇಳುವವನೊಬ್ಬ, ಚೆಂದಕೆ ಕಥೆ ಹೇಳುವವನೊಬ್ಬ ಬಾಲ್ಯಕ್ಕೆ ದಕ್ಕದಿದ್ದರೆ, ಕಥೆಯ ಕಥೆ, ಕಥೆಗಾರಿಕೆಯ ಕಥೆ ಮುಗಿದ ಹಾಗೆ ಅಲ್ಲವೆ?


ನಿನ್ನ ಯಾತ್ರೆ ಮುಗಿಸಿದೆ ಅಂತ ಅಮ್ಮ ಫೋನು ಮಾಡಿದಾಗ, ಕಳೆದು ಹೋದೆ ನೀನು ಅಂದುಕೊಂಡಿದ್ದೆ ನಾನು. ಇಲ್ಲ. ಇಲ್ಲೆ ಇದ್ದೀಯಲ್ಲ ಕಣ್ಮುಚ್ಚಿ ಕಥೆಯ ನೆನೆದರೆ ನಾನು ಓದಿದ ಕತೆಗಳನ್ನೆಲ್ಲ ಕೈಹಿಡಿದು ನಡೆಸುವ ನೀನೇ ಸಿಗುತ್ತೀ.ಈಗ ಇಲ್ಲಿ ಮೊಳಕೆಯೊಡೆದಿರುವ ಚಿಗುರಿಗೆ ಎರೆಯಲು ನೂರು ಕತೆಗಳ ರಂಗು ರಂಗಿನ ಜೀವ ಜಲ. ಹೌದು ನಿನ್ನ ಬಟ್ಟೆ ಮಾತ್ರ ಬಿಳೀಗಿತ್ತು.ಓದು ಓದು, ಇನ್ನೂ ಓದು ಅಂದ ಮಾತು ನೆನಪಿನಲಿ ಯಾವತ್ತೂ. ದಶರಥನ ಸಮೀಕರಣದಲ್ಲಿ ನೀನು ನೊಂದ ದಿನಗಳ ನೆನಪು ನನಗೆ. ನೀನು ಹಾಗಂದ ಕೂಡಲೆ, ನಾನೇನು ಕೈಕೆಯಾ ಹಂಗರೆ ಅಂತ ಸಿಟ್ಮಾಡಿದ ಅಮ್ಮಮ್ಮನೂ. ಅಲ್ಲ ಅವಳಿಗ್ಯಾಕೆ ತಾನು ಕೌಸಲ್ಯೆ ಎನಿಸುವುದಿಲ್ಲ ಅಂತ ಅವತ್ತು ಅಚ್ಚರಿಪಟ್ಟು, ಅದನ್ನೇ ಕೇಳಿ ಬೈಸಿಕೊಂಡ ನೆನಪೂ. ಕೆ.ಎಸ್.ನ ಬರೆದಿದ್ದರು - ಜಾತಕಗಳೊಪ್ಪಿದರೆ ಮದುವೆಯೇ.ಅಲ್ಲವೇ? ಹೌದೇ?


ಏನೆಲ್ಲ ಹಾರಾಡಿಯೂ ನಿನ್ನ ಜರ್ಝರಿತ ಕೊನೆದಿನಗಳ ನೊಗ ಹೊತ್ತವಳು ಅವಳೇ ಅಲ್ಲವೇ? ನೀನು ಕಣ್ಮರೆಯಾದ ಮೇಲೆ, ಅಂದಿನ ನಿನ್ನನ್ನು ಅಕ್ಷರಶಃ ನೆನಪುಗಳಲ್ಲಿ ಮಾತಿನಲ್ಲಿ ಕಣ್ಣ ಮುಂದೆ ತರುತ್ತಿದ್ದವಳು. ಅವಳು ಹೋದ ಮೇಲೆ ನಿನ್ನ ಯಾರು ನೆನಪಿಟ್ಟುಕೊಂಡಿದಾರೆ ಅಂತ ಕೇಳಬೇಡ. ಇದ್ದೀವಿ ನಾವಿಬ್ಬರು - ಅಕ್ಕ,ತಮ್ಮ. ನಿನ್ನ ಅಮೃತವುಂಡವರು, ಬೆನ್ನು ನುಗ್ಗಾಗಿಸಿದವರು, ಬೆರಳು ಜಗ್ಗಿದವರು, ನಿನ್ನ ಕಥೆಗಳಿಗೆ ಕಿವಿಯಾದವರು, ಪೊರೆ ಬಂದ ಕಣ್ಣುಗಳಿಗೆ ಓದಿ ಹೇಳಿದವರು, ಸ್ಕೋರು ಕಾಣಿಸದ ಕಣ್ಣಿಗೆ ಅಂಗಳದ ಮಾಹಿತಿ ಕೊಟ್ಟವರು, ನೆನಪು ಮಾಡಿಕೊಂಡರೆ ಕಣ್ಣು ತುಂಬಿಸಿಕೊಳ್ಳುವವರು, ಅದನ್ನೇ ಹೇಳಲು ಹೋದೆ.

ನನ್ನ ಪುಟ್ಟ ಮಗಳಿಗೆ ಗೊತ್ತು. ತನ್ನಮ್ಮನಿಗೆ ಇಷ್ಟು ಹೇರಾಳ ಕತೆ ಹೇಳಿದವನೊಬ್ಬನಿದ್ದ ಅಜ್ಜ ಅಂತ. ನೀನಿರುತ್ತೀ ನಾನು ಹೋದರೂ ಅವಳ ನೆನಪುಗಳಲ್ಲಿ.ಅದೇ ಪುನರಾವರ್ತನೆ.

ಬಿಳಿ ಬಿಳೀ ಹಣ್ಣಣ್ಣು ಕೈಯಲ್ಲಿ ಬಣ್ ಬಣ್ಣದ ಹೂಚಿಗುರು ಬೆರಳು.