Tuesday, September 26, 2023

 ತುಂಟು ತಮಾಷಿ ರಾತ್ರಿಗಳ ಜಾದೂಗಾರ


ಮಗಳು ಚಂದ್ರಗ್ರಹಣದ ಚಿತ್ರ ಬಿಡಿಸುತ್ತಿದ್ದಳು. ನೋಡಿದ ಅಮ್ಮ ಕೇಳಿದಳು. ಇದೇನು ಇಷ್ಟು ಹತತ್ರ ಬರೆದ್ ಬಿಟ್ಟಿದೀಯಲ್ಲ.ಚೂರು ವಿಶಾಲವಾಗಿ ಬರಿ.

ಮಗಳು ನಗುತ್ತ ಉತ್ತರಿಸಿದಳು. ಅಮ್ಮಾ ನಿನ್ನ ಲಿಟರರಿ ಮೂನಿನ ಹಾಗಲ್ಲ ಇದು. ನಂಗೆ ಈ ಪುಟದ ಅರ್ಧ ಭಾಗದಲ್ಲಿ ಗ್ರಹಣದ ಚಿತ್ರ ಬಿಡಿಸಿ, ಅದರ ಕುರಿತು ಬರೆಯಬೇಕು. ನಿಜವಾಗ್ಲೂ ಚಂದ್ರ ಭೂಮಿಯಿಂದ 3.84.000 ಕಿಮೀ ದೂರದಲ್ಲಿದಾನೆ.. ಅಂ... ದೂರದಲ್ಲಿದೆ. ಈ ಚಿತ್ರದ್ಲಲ್ಲಿ ಚಂದ್ರ ಹೆಚ್ಚೂಕಮ್ಮಿ ಭೂಮಿಯದೇ ಗಾತ್ರದಲ್ಲಿ ಬರೆದಿದೀನಿ. ಆದರೆ ಅದು ಭೂಮಿಗಿಂತ 80 ಪಟ್ಟು ಚಿಕ್ಕದು. ನನಗ್ಗೊತ್ತು ನಿನಗೆ ಆಕಾಶದಲ್ಲಿ ಚಂದ್ರ ಕಂಡ ಕೂಡಲೆ ಮನಸ್ಸು ಹಗುರಾಗುತ್ತದೆ ಅಥವಾ ಭಾರವಾಗುತ್ತದೆ ಆ ಕ್ಷಣದ ನಿನ್ನ ಮೂಡಿನ ಮೇಲೆ. ಆದರೆ ಚಂದ್ರನಿಗೆ ಏನಾಗುತ್ತದೆ ಗೊತ್ತಾ ನಿನಗೆ. ನಾವು ಯಾರೇ ನೋಡಲಿ, ನೋಡದೆ ಇರಲಿ, ಚಂದ್ರಕ್ಕೆ ಆ ಯೋಚನೆಯಿಲ್ಲ. ಅದು ಭೂಮಿಯನ್ನ ಸುತ್ತುತ್ತಿರುವ ಉಪಗ್ರಹ ಮಾತ್ರ. ನೋ ಲೈಫ್. ನೋಡೋಣ ಈ ಚಂದ್ರಯಾನದಿಂದ ಏನೇನು ಹೊಸ ವಿಷಯ ಸಿಗುತ್ತೋ...!

ಉಫ್ ಅಂತ ಉಸಿರೆಳೆದ ಅಮ್ಮ ಶುರುಮಾಡಿದಳು. ನೋಡೇ ಮಗು ನೀನ್ ಹೇಳಿದ್ದೆಲ್ಲಾ ನಿಜಾನೇ. ಆ ಚಂದ್ರ ತನ್ನ ಕಕ್ಷೆಯಲ್ಲಿ ಅದೇ ಆರ್ಬಿಟ್ಟಲ್ಲಿ ಐದೂಮುಕ್ಕಾಲ್ ಡಿಗ್ರೀ ವಾರೆಯಾಗಿ ನಮ್ ಭೂಮೀನ ಅಂದಾಜು 28ದಿನಗಳಲ್ಲಿ ಸುತ್ತಿಬರೋ ನಿರ್ಜೀವ ಉಪಗ್ರಹ ಅನ್ನುವುದು ವೈಜ್ಞಾನಿಕವಾಗಿ ಸಿದ್ಧಪಡಿಸಿದ ಸತ್ಯಾಂಶ ಹೌದು. ಆದ್ರೆ ಹಾಗಂತ ನಮ್ ಲಿಟರರಿ ಮೂನ್ ಏನೂ ಕಡಿಮೆಯಿಲ್ಲ ಆಯ್ತಾ. ನಮ್ಮ ಪುರಾಣ ಕಥೆಗಳಿಂದ ಹಿಡಿದು ಇತ್ತೀಚೆನ ಕವಿಕಥೆಗಾರರಿಗೂ ಚಂದ್ರ ಅಚ್ಚುಮೆಚ್ಚಿನ ಸಂಗಾತಿ. ಚಂದ್ರನಲ್ಲಿ ಬರಿದೆ ನಿರ್ವಾತ ಅದೇ ವ್ಯಾಕ್ಯೂಮ್ ಇರುವುದು ಹೌದು. ಆದರೆ ಅದೇ ಚಂದ್ರನ ಮೇಲೆ ನಮ್ಮಮನೋರಥ ನಮಗೆ ಎಷ್ಟು ಬೇಕೋ ಅಷ್ಟೇ ವೇಗದಲ್ಲಿ ಸಾಗುತ್ತಲ್ಲೇ.

ಬರೀ ಕುಳಿಗಳು, ಧೂಳು, ಕಲ್ಲು, ಮಣ್ಣು ತುಂಬಿದ ಚಂದ್ರನ ಸಾವಿರ ಚಿತ್ರಗಳನ್ನ ಯಾವುದೇ ಡಿಜಿಟಲ್ ಸ್ಯಾಟಲೈಟು ತೆಕ್ಕೊಟ್ಟಿರಬಹುದು. ಭೂಮಿಗೆ ಒಂದೇ ಚಂದ್ರ, ಗುರುಗ್ರಹಕ್ಕೆ 95 ಚಂದ್ರ ಇದಾರೆ ಅಂತ ಕಂಡು ಹಿಡ್ದಿದೀವಿ ಅಲ್ವಾ. ಆದರೆ ರಾತ್ರೆಯಾಕಾಶದ ಕಡುಗತ್ತಲಲ್ಲಿ ಮೋಡಮರೆಯಿಂದ ಹಗೂರಕೆ ಹೊರಬರುವ ಚಂದ್ರನ್ನ ನೋಡಿದ ಕೂಡಲೆ ನಿನಗೆ ಆ ನಿರ್ಜೀವ ಚಿತ್ರಗಳ ಯೋಚನೆ ಬರುತ್ತಾ.. ಗುರುಗ್ರಹದ 95 ಅಥವಾ ಶನಿಗ್ರಹದ 145 ಚಂದ್ರಗಳ ಬಗ್ಗೆ ನೆನಪಿಸಿಕೊಳ್ಳೋಲ್ಲ ಅಲ್ವಾ.. ನಮ್ಮ ಚಂದಿರ ನಮಗೆ ಉದ್ದೀಪಿಸುವ ಮಾರ್ದವ ಭಾವನೆಗಳೇ ಬೇರೆ. ಖುಷಿಯಾದರೆ... ಹಾಲ್ಬೆಳದಿಂಗಳು ಚೆಲ್ಲುವ ಬೆಳ್ಳಿ ಚಂದಿರ ಬೇಜಾರಾಗಿದ್ದರೆ ಶಬನಮ್ ಭೀ ರೋಯೇ ಆಗಿರುವ ಚಂದಿರ... ಅಲ್ವಾ..ನಿನ್ನ ಆನಿಮೇ ಸೀರಿಯಲ್ಲುಗಳಲ್ಲಿ ಬರುವ ಭೂತಚಂದಿರಗಳ ಕಥೆಯೇನು, ಹಾರರ್ ಸಿನಿಮಾಗಳು ಅದೇನೋ ವ್ಯಾಂಪೈರ್ ಡೈರೀ, ಟ್ವೈಲೈಟು..ಅದರಲ್ಲೆಲ್ಲ ಹೆದರಿಕೆ ಹೆಚ್ಚಿಸುವ ರಕ್ತಪಿಪಾಸು ಚಂದಿರ ಯಾರು....ಅಮ್ಮನ ಮಾತುಗಳನ್ನು ತುಂಡರಿಸಿ

ಓ...ಓಓಓ.. ಸರಿ ಸರಿ.. ಅಮ್ಮಾ ನಾನು ನನ್ನ ಹೋಮ್ ವರ್ಕು ಮುಗಿಸುವೆ...ನೀನು ನಿನ್ನ ಚಂದಿರನನ್ನು ಬರೆಯುವ ಟೇಬಲ್ಲಿನ ಮೇಲೆ ಕೂರಿಸಿ ಮಾತನಾಡಿಸಿಕೋ..ಅಂತ ಸುಮ್ಮನಾಗಿಸಿದಳು ಮಗಳು.

ಚಂದಿರನನ್ನು ನಾನು ಓದುವ ಟೇಬಲ್ಲಿಗೆ ಕರೆತಂದೆ. ಜಗತ್ತಿನೆಲ್ಲೆಡೆಯ ಸಾಹಿತ್ಯದ ವಿವಿಧ ಭಾಷೆಗಳಿಂದ ಚಂದಿರನ ಬೆಳಕು ನನ್ನ ಟೇಬಲ್ಲಿಗೆ ಹರಿದವು. ಅದರಲ್ಲಿ ಕೆಲಕಿರಣಗಳು ಈ ಲೇಖನದಲ್ಲಿ...

ಶತಮಾನಗಳಿಂದ ನಮ್ಮ ಸಾಹಿತ್ಯದಲ್ಲಿ ಚಂದಿರನೆಂದರೆ ಬೆರಗು, ನಿಗೂಢತೆ, ಚೆಲುವು, ಪ್ರಣಯಕ್ಕೂ ವಿರಹಕ್ಕೂ ಸಮಾನವಾಗಿ ಸಲ್ಲುವ ಜೊತೆಗಾರ/ತಿ, ಸಾವಲ್ಲಿ ಮಂಕಾದ ಕಿರಣಗಳನ್ನ ಸೂಸುತ್ತ ನೇವರಿಸುವ ಸಾಂತ್ವನ, ಇನ್ನೂ ಕೆಲಕಡೆ ನವಿರುಹಾಸ್ಯಕ್ಕೆ ಚೆಲ್ಲಿದ ಬೆಳದಿಂಗಳು, ಕುಡುಕರ ದಾರಿದೀಪ, ತತ್ವಜ್ಙಾನಿಗಳ ನಂದಾದೀಪ, ಹುಚ್ಚುಮನಸ್ಸನ್ನು ಕೆದರಿಸುವ ಉದ್ದೀಪನ, ಭೂತಪಿಶಾಚಗಳ ಉತ್ತೇಜಕ, ಮೂಢನಂಬಿಕೆಗಳ ವಾಹಕ, ಮಕ್ಕಳನ್ನು ಥಟ್ಟನೆ ಹಿಡಿದಿಡುವ ಅವರ ರಚ್ಚೆಗಳನ್ನು ಪಟಕ್ಕನೆ ಬದಲಿಸಬಲ್ಲ ಸೂತ್ರ.. ಹೀಗೆಲ್ಲ ಹಲಬಗೆಗಳಲ್ಲಿ ಬಗೆಬಗೆಯಾಗಿ ವರ್ಣಿಸಲ್ಪಟ್ಟ ಹಲವಾರು ಪ್ರತಿಮೆಗಳಿವೆ. ಮಜವೆಂದರೆ ಓದುವಾಗ ಚಂದಿರನ ಕುರಿತ ವೈಜ್ಞಾನಿಕ ಅಂಶಗಳ್ಯಾವುದೂ ಗೊತ್ತಿದ್ದರೂ ನೆನಪಾಗುವುದಿಲ್ಲ. ಸಾಹಿತ್ಯದ ಮೋಡಿಯಲ್ಲಿ ಚಂದಿರ ಸಜೀವವಾಗಿ ನಮ್ಮ ಭಾವಗಳಿಗೆ ಸ್ಪಂದಿಸುತ್ತಾನೆ. ಜಗತ್ತು ಕಂಡ ಶ್ರೇಷ್ಠ ನಾಟಕಕಾರ, ಕವಿ ಶೇಕ್ಸ್ಪಿಯರನ ಕೃತಿಗಳಲ್ಲಿ ಆಯಾ ಕೃತಿಗಳ ಭಾವಸೇಚನಕ್ಕೆ ತಕ್ಕಂತೆ ಚಂದಿರ ಬಂದೇ ಬರುವನು. ಒಮ್ಮೆ ದೇವತೆಗಳ ತೂಗುಕುರ್ಚಿಯಾದರೆ, ಇನ್ನೊಮ್ಮೆ ಯಕ್ಷಿಣಿಯರ ನಿಗೂಢತೆಯನ್ನ ಚೂರು ಚೂರೇ ನಮ್ಮ ಕಣ್ಣಿಗೆ ಹಾಯಿಸುವ ಬೆಳಕಿನ ಸೇತುವೆ. ಒಮ್ಮೆ ಸಮಾಜದ ಕೊಳಕುಕಸರುಗಳಿಗೆ ಬಿರಿಬೆಳಕನ್ನು ಬೀರುವ ಹುಣ್ಣಿಮೆಯೇ, ಇನ್ನೊಮ್ಮೆ ಪ್ರೇಮಿಗಳ ಪಿಸುಮಾತಿನ ರಾತ್ರಿಯ ಮೃದುಹೊದಿಕೆಯಾದ ಬೆಳದಿಂಗುಳು. ಒಮ್ಮೆ ಏಕಾಂತ ಸಂಭಾಷಣೆಯ ಒಬ್ಬನೇ ಕೇಳುಗನಾದರೆ ಇನ್ನೊಮ್ಮೆ ತುಂಟುತಮಾಷಿಯ ರಾತ್ರಿಗಳ ಜಾದೂಗಾರ. ಪ್ರಣಯ, ಹುಚ್ಚು, ನಿಗೂಢತೆ, ಮನುಷ್ಯ ಮನಸ್ಸಿನ ಅತಿರೇಕ, ಚಾರಿತ್ರ್ಯದ ಕಲ್ಪನೆಗಳ ಎರಡು ತುದಿ ಇವುಗಳನ್ನ ನಿರೂಪಿಸಲು ಶೇಕ್ಸ್ಪಿಯರ್ ಚಂದಿರನನ್ನು ಸಮರ್ಥವಾಗಿ ಬಳಸಿದ್ದಾನೆ.

ನನ್ನ ಟೇಬಲ್ಲಿನ ತುದಿಯಲ್ಲಿ ನಡುವಸಂತದ ರಾತ್ರಿಯ ಕನಸಿನ ಚಾಪೆ ಬಿಡಿಸುತ್ತಾ ಶೇಕ್ಸ್ಪಿಯರ್ ಗುನುಗುತ್ತಿದ್ದಾನೆ.

Four days will quickly steep themselves in night; Four nights will quickly dream away the time: And then the moon – like to a silver bow New-bent in heaven – shall behold the night Of our solemnities.

(ನಾಕಾರು ದಿನ ರಾತ್ರಿಗಳು ಪಟಪಟನೆ ಸಾಗುವವು ಕನಸಿನಂತೆ..ದೇವಲೋಕದ ಬೆಳ್ಳಿಚಂದಿರ ಬಾಗಿಬರುವನು ನಮ್ಮ ಮಿಲನದ ಕ್ಷಣಗಳ ಕಾಯಲಂತೆ...)

ಆಹಾ..ಎಂದು ಉಧ್ಗರಿಸುವ ಮುಂಚೆಯೇ ಆ ಕನಸಿನ ಚಾಪೆಯನ್ನು ಮಡಚುತ್ತಾ ಪಿ.ಬಿ.ಶೆಲ್ಲಿ ಉಸುರಿದ.

Wandering companionless Among the stars that have a different birth,— And ever changing, like a joyless eye That finds no object worth its constancy?

(ಚೇತನ ತುಂಬಬಲ್ಲವರಾರಿಲ್ಲದೆ ಸಂತಸರಹಿತ ನೋಟವದು ಎಲ್ಲೂ ನಿಲ್ಲದೆ ಅತ್ತಿತ್ತ ಓಡುವಂತೆ ಮಿನುಗುತಾರೆಗಳ ಮಧ್ಯೆ ಮಂಕಾಗಿ ಚಣಚಣಕೂ ಬದಲಾಗುವ ಜತೆರಹಿತ ಚಂದಿರ)

ಅವ ಮಡಚಿಟ್ಟ ಚಾಪೆಯನ್ನು ಬದಿಗೆ ಸರಿಸುತ್ತ ವರ್ಡ್ಸವರ್ಥ್ ಲೂಸಿಕವಿತೆಯೊಂದನ್ನು ಪುಟ್ಟಬಟ್ಟಲಲ್ಲಿ ಕೈಗಿಟ್ಟ..down behind the cottage roof / At once the planet dropped

ಪ್ರೇಯಸಿಯ ಹಂಬಲದ ಪಯಣದಲ್ಲಿ ಪ್ರೇಮಿಯ ಜತೆಗೆ ದಾರಿಯಿಡೀ ಹತ್ತಿಳಿಯುತ್ತ ಸಾಗುತ್ತಿದ್ದವ ಇದ್ದಕ್ಕಿದ್ದಂತೆ ಮನೆಯಿಂಚಿನ ಆಗಸದಿಂದ ಜಾರಿಬಿದ್ದು ಅಸ್ತಮಿಸುತ್ತಾನೆ, ಲೂಸಿಯ ಸಾವನ್ನು ಸೂಚಿಸುವಂತೆ! ಆ ನೋವಿನ ಕ್ಷಣದಲ್ಲಿ ಮುಚ್ಚಿದ ಕಣ್ಣಿಗೆ ಚುಚ್ಚುತ ಬಂದಳು ಎಮಿಲಿ..

I watched the Moon around the House..

And next—I met her on a Cloud— Myself too far below To follow her superior Road— Or its advantage—Blue—

(ಜಗುಲಿಯಲಿ ನಿಂತೇ ನಾ ನೋಡಿದೆನವಳ ಚಂದಿರಳ..ಮಂತ್ರಮುಗ್ಧಳಾಗಿ ಹೊರಟೆ ಹಿಂದೆ ಅವಳ...ಅವಳೋ ನನ್ನೊಲವ ಅರಿವಿರದ ತನದೇ ಪಯಣದ ಗುರಿ ಸಾಧಿಸುವ ನಿರ್ಮೋಹಿ ಚೆಲುವೆ. ಮರ್ತ್ಯಳೆನ್ನ ಬಯಕೆ,ಛಲ ಹೊಂದದೇ ಹೋಯಿತು ದಿವದ ಸುಂದರಿಯ ಪಥಕೆ..)

ಈ ವಾಸ್ತವದ ಲೇಪನದ ಮಂಕು ಬಡಿದು ಕೂತ ನನ್ನನು ಮೆಲುವಾಗಿ ಸಂತೈಸಲು ಬಂದನು ಉಮರ.

Ah, Moon of my Delight who know'st no wane, The Moon of Heav'n is rising once again: How oft hereafter rising shall she look Through this same Garden after me - in vain!

(ಸ್ವರ್ಗದ ಚಂದಿರ ಬೆಳೆವುದು ಕ್ಷಯಿಪುದು ದಿನದಿನವೂ ಬದುಕಿನ ಬನದಿ. ಆದರೇನಂತೆ ಆಹ್.. ನನ್ನ ಸ್ವಾನಂದದ ಚಂದಿರ ಇನ್ನೆಂದೂ ಕ್ಷೀಣಿಸದ ಹಾಗೆ ಬೆಳಗಿದೆ..)

ಉಮರನ ಒಸಗೆಯಿಂದ ಸ್ವಲ್ಪ ಸಮಾಧಾನವಾಗುವಾಗಲೇ...ರಮಿಸುತ ಬಂದರು ರಫಿ ಮತ್ತು ಲತಾ. ಕೈಫ್ ಭೂಪಾಲಿಯವರ ಕವಿತೆಯ ಉಲಿಯುತ್ತಾ

ಚಲೋ ದಿಲ್ ದಾರ್ ಚಲೋ ಚಾಂದ್ ಕೇ ಪಾರ್ ಚಲೊ..

ನಾನೆದ್ದು ಹೊರಟೆ..ಹಮೇ ತಯ್ಯಾರ್ ಚಲೋ ಅಂತ.

*****************************************************
20 August 2023 : ಭಾನುವಾರ ವಿಜಯ ಕರ್ನಾಟಕದ ಲವಲವಿಕೆಗೆ ಬರೆದ ಲೇಖನ : ಚಂದ್ರಯಾನ್ 3 ರ ಯಶಸ್ಸಿಗೆ ಕಾಯುತ್ತಿರುವ ಹೊತ್ತಲ್ಲಿ ಬರೆದ ಲೇಖನ.

Monday, April 27, 2020

ಚೈತ್ರ ಹೊರಟನೆ ಜೈತ್ರಯಾತ್ರೆಗಿನ್ನೊಂದು ಸಲ ... (ಅಡಿಗ)

"ಜೈತ್ರಯಾತ್ರೆಗೆ ಹೊರಟ ಚೈತ್ರವಿಲಾಸ"
ಈ ವರ್ಷದ (2020) ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕಕ್ಕೆ ಬರೆದ ಲೇಖನ.
ಬರೆಯಲು ನಿಮಿತ್ತ ವಿದ್ಯಾರಶ್ಮಿ
ಬರೆಯುವಾಗ ಓದುತ್ತ, ಮಾತಾಡುತ್ತ, ಕಿವಿಹಿಂಡುತ್ತ ಬರಹದ ಒಪ್ಪಕ್ಕೆ ಕಾರಣರಾದವರು ಮಾಲಿನಿ ಮತ್ತು ಚೊಕ್ಕಾಡಿ ಸರ್ ಅವರು.


ಕವಿತೆಯೊಂದು ತಾನು ಹುಟ್ಟಿದ ಕ್ಷಣವನ್ನು ಮೀರಿ ಕಾಲಾತೀತವಾಗಿ ಮತ್ತೆ ಮತ್ತೆ ಜೀವಂತಗೊಳ್ಳುತ್ತ ಮಂತ್ರವೆಂಬಂತೆ ಬದಲಾಗಿ ಹೋಗುವ ಮ್ಯಾಜಿಕ್ಕನ್ನು ಬೇಂದ್ರೆಯವರ ಯುಗಯುಗಾದಿ ಕಳೆದರೂ ಕವಿತೆ ಬಹುಸಾರ್ಥಕವಾಗಿ ಪ್ರತಿನಿಧಿಸುತ್ತದೆ. ನಿಜದ ಬದುಕಿನಲ್ಲಿ ಇವತ್ತಿನ ವಿಪರೀತ ಹವಾಮಾನದಲ್ಲೂ ನಿಸರ್ಗವೂ ಹೇಗೆ ಹೇಗೆಯೋ ಕೊಸರಾಡಿಕೊಂಡು ತನ್ನ ಕಾಲಧರ್ಮವನ್ನ ಪಾಲಿಸಲು ಕಷ್ಟಪಡುತ್ತಲೇ ಇದೆ. ಹಿಂದಿನ ಪ್ರಕೃತಿ ಸಮೃದ್ಧಿ ಈಗ ವಿರಳವೇ ಆದರೂ ಪಾದಪಥದಂಚಿನ ಹೊಂಗೆಮರಗಳು ಮಾತ್ರ ಕಣ್ತುಂಬುವಂತೆ ಹಸಿರಾಗಿ ಮೊಗ್ಗೂಡಿ ಅರೆಕ್ಷಣ ಓಡುತ್ತಿರುವ ದಿನಕ್ಕೆ ಒಂದು ಪುಟ್ಟ ಜಗ್ಗುವಿಕೆಯಿತ್ತು..ಹಳೆಯ ಮಧುರ ನೆನಪಿಗೆ ಕಿಂಡಿಯಾಗುತ್ತವೆ. ಪ್ರಿಂಟು, ವೆಬ್ಬು, ಮೊಬೈಲು ಮಾಧ್ಯಮಗಳ ತುಂಬ ಯುಗಾದಿಯ ರೆಸಿಪಿ, ಕಥೆ, ಕವಿತೆ, ಪ್ರಬಂಧ, ವಿಶೇಷ ಹರಟೆ, ಸಂವಾದ ವಿವಾದ, ಮೆಗಾ ಎಪಿಸೋಡು, ಸೆಲ್ಫೀ ನೋಡು, ಇನ್ಸ್ಟಾ ಚಚ್ಚು, ರಾಶಿ ರಾಶಿ ಶುಭಾಶಯ ಫಾರ್ವರ್ಡು...ತುಂಬಿ ತುಳುಕುತ್ತವೆ. ಹಬ್ಬದ ಮರುದಿನ ಹಸಿರು ಕಸ ಹೇರಲಾರದೆ ಹೇರಿಕೊಂಡ ಕಸದ ಗಾಡಿ ಮುಂದೆ ಹೋಗಲಾರದೆ ಹೋಗುತ್ತದೆ.
ಕವಿಗಳಿಗೆ, ಕಾವ್ಯಕ್ಕೆ ಅಷ್ಟಿಷ್ಟು ಕಥೆ ಕಾದಂಬರಿಗಳಿಗೂ ನಿಷ್ಠವಾಗಿ ನಿಲ್ಲುವುದು ಪ್ರತಿ ಚೈತ್ರಕ್ಕೂ ತಪ್ಪದೆಯೆ ಚಿಗುರುವ ಹೊಂಗೆಯೇ ವಿನಃ ಓದುಗರಲ್ಲ ಎಂಬ ಕಾಲದಲ್ಲಿದ್ದೀವಿ ನಾವು. ಆದರೂ ಕವಿ ಮತ್ತೆ ಬರೆಯುತ್ತಾನೆ. ಇನ್ನೊಂದು ಯುಗಾದಿಗೆ ಕಾಯುತ್ತಾನೆ. "ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ಎಂಬ ಬೇಂದ್ರೆಯವರ ಸಾಲನ್ನು ಚಿಗುರುವ ಮರಗಿಡಗಳ ಜೊತೆಗೇ ತಾನೂ ಭಾಗವಹಿಸಿ ತೋರುವ ಶಕ್ತಿ ಇರುವುದು ಬಹುಶಃ ಕಾವ್ಯಕ್ಕೆ ಮಾತ್ರ. ನಿಲ್ಲದೆ ಓದುವ ನಿಷ್ಠುರ ಕಾಲವನ್ನ ಒಂದೆರಡು ಸೆಕೆಂಡುಗಳಿಗೆ ಸ್ತಬ್ಧವಾಗಿಸುವ ಶಕ್ತಿ, ಓಡುತ್ತಲೇ ಇರುವುದರ ಕುರಿತು ಬರೆದೂ ಓಡಿ ಮುಗಿದ ದಾರಿಯನ್ನ ಮತ್ತೆ ನೆನಪಿನಲಿ ಬದುಕುವ ಹಾಗೆ ಮಾಡುವ ಶಕ್ತಿ ಕಾವ್ಯಕ್ಕಿದೆ.
ಹೀಗೆಯೇ ಕುತೂಹಲದಲ್ಲಿ ಹಲವಾರು ಕವಿಗಳ ಕಾವ್ಯಯುಗಾದಿಯನ್ನು ಓದುತ್ತ ಕುಳಿತಾಗ ಎಲ್ಲದರಲ್ಲೂ ವಿಶಿಷ್ಟವಾಗಿ ನನ್ನ ಓದಿಗೆ ನಿಲುಕಿದ್ದು ಕೆ.ಎಸ್.ನರಸಿಂಹಸ್ವಾಮಿ ಮತ್ತು ಗೋಪಾಲಕೃಷ್ಣ ಅಡಿಗರ ಯುಗಾದಿ ಕವಿತೆಗಳು. ವರ್ಷವರ್ಷವೂ ಹೆಚ್ಚಾಗುತ್ತಿರುವ, ಭೂಮಿಯನ್ನ-ಪ್ರಕೃತಿಯನ್ನ ದುರುಪಯೋಗಪಡಿಸಿಕೊಳ್ಳುವ ಮಾನವ ದುರಾಸೆ, ರಾಜಕೀಯ ದೊಂಬರಾಟ, ಸಾಮಾಜಿಕ ಸ್ಥಿತಿಗತಿ ಮತ್ತು ಪರಂಪರಾಗತವಾಗಿ ಬಂದ ಒಳಿತಿನ ನಂಬುಗೆ, ಅದರೊಳಗೇ ಸಣ್ಣಗೆ ಅಪನಂಬಿಕೆಯ ಹೊಗೆ, ಹೀಗೂ ಇರಬಹುದೆ ಎಂಬ ನಿರಾಸೆ...ಹೀಗಾಗಬಾರದೆ ಎಂಬ ಸಹಜ ಸರಳ ಆಸೆಗಳು ಈ ಕವಿತೆಗಳಲ್ಲಿ ಇವೆ. ಒಳ್ಳೆಯ ಕಾವ್ಯವು ಕಾಲವನ್ನೂ ಮತ್ತು ಪರಿಸರವನ್ನೂ ಮೀರಿರುತ್ತದೆ ಎಂಬ ಮಾತು ನನಗೆ ಈ ಕವಿತೆಗಳನ್ನು ಓದುವಾಗ ಮನವರಿಕೆಯಾಯಿತು. ಕಾಲ ಕೆಟ್ಟಿದೆ ಹೌದು ಆದರೂ ಸರಿಪಡಿಸಬಹುದು ಎಂಬ ಭರವಸೆಯನ್ನ ಈ ಓದು ಕೊಟ್ಟಿತು. ಹೀಗಾಗಿ ನನ್ನ ನಿಲುಕಿಗೆ ಸಿಕ್ಕ ಕೆಲವು ಕವಿತೆಗಳು ನಿಮ್ಮ ಓದಿಗೆ ಮತ್ತು ಮನನಕ್ಕೆ.
ಸ್ವರ್ಗದ ಕನಸು ಭೂಮಿಯಲಿ ತುಂಬಿಕೊಳಲೆಂದು ಹರಸಲಿ! ತನ್ನ ಕಾಲದಲಿ ಉನ್ನತಿಗೆ ನಾಡ ಹರಸಲಿ! (ಕೆ.ಎಸ್.ನ. "ಸರ್ವಜಿತು", ಉಂಗುರ ಸಂಕಲನ)
ಬಂಜೆ ನೆಲಕೆ ಬೇರನೂರಿ, ಹೊಳೆಯ ದಿಕ್ಕ ಬದಲಿಸಿ, ಕಾಡ ಕಡಿದು ದಾರಿ ಮಾಡಿ ಬೆಟ್ಟ ಸಾಲ ಕದಲಿಸಿ, ಹೆಜ್ಜೆಗೊಂದು ಹೊಸಯುಗಾದಿ- ಚೆಲುವು ನಮ್ಮ ಜೀವನ! ನಮ್ಮ ಹಾದಿಯೋ ಅನಾದಿ, ಪಯಣವೆಲ್ಲ ಪಾವನ.. ("ಯುಗಾದಿ", ಶಿಲಾಲತೆ ಸಂಕಲನ)
ಈ ಕವಿತೆಗಳಲ್ಲಿ ತನ್ನ ಸುತ್ತಲ ಸ್ಥಿತಿಗತಿಗಳ ಎಚ್ಚರವಿದ್ದೂ ಒಳಿತಿನ ಕಡೆ ಜಗ್ಗುವ ಮನವನ್ನೇ ಕಾಣಬಹುದು.
ನಿನಗೆ ಭಯವಿಲ್ಲ ದುರ್ಮುಖಿ, ಹಾರಲಿ ನಿನ್ನಯ ಹಕ್ಕಿ ಹನ್ನೆರಡು ತಿಂಗಳು; ಹೆಸರಿಗೆ ಕೊರಗಬೇಡ, ಹಸುರಾಗಿಸು ನಿನ್ನ ಹಾಡ. ದುರ್ಮುಖಿಯಿರಬಹುದು, ಅಸುಖಿಯಿರಬಹುದು; ಬಿಸಿಲುರಿದು ಗಾಳಿ ಬೀಸುವುದು, ನಾಳೆ ಮಳೆಯಾಗಬಹುದು. ನಿನಗೆ ಈ ಹೆಸರಿಟ್ಟ ಪಾಪಿಯನು ಹರಸಿಹೋಗು..! (ದುರ್ಮುಖಿ, ಶಿಲಾಲತೆ ಸಂಕಲನ)
ಕೆಡುಕಿನಲಿ ಒಳಿತನು ಕಾಣುವ ಮನಸಿನ ಹಾರೈಕೆಯೂ..ಏನೆಲ್ಲ ಕಷ್ಟದ ಬಿಸಿಲಬೆಂಕಿಯಲೂ ಮತ್ತೆ ನಾಳೆ ಮಳೆ ಬರಬಹುದೆಂಬ ಮನವರಿಕೆಯೂ ಈ ಕವಿತೆಯಲ್ಲಿದೆ.
ಪ್ರೇಮಕವಿಯೆಂದು ಮೈಸೂರ ಮಲ್ಲಿಗೆಯವರೆಂದು ನಾಡಿನುದ್ದಕ್ಕು ಹೆಸರಾದ ಕವಿ ತನ್ನ ಸಾಮಾಜಿಕ ಪರಿಸರಗಳಿಗೆ ಸ್ಪಂದಿಸುವಾಗ ಅವರ ಮೃದುಮನದ ನಿಷ್ಠುರ ನಿಲುವುಗಳಿಗೆ ಕನ್ನಡಿಯಾದ ಸಾಲುಗಳಿಲ್ಲಿವೆ. ಇವತ್ತಿಗೂ ಅಷ್ಟೇ ಅನ್ವಯಿಸುವ ಅಂಥದೇ ಇಕ್ಕಟ್ಟುಗಳನ್ನ ಛಂದಃಬದ್ಧ ರಚನೆಯಲ್ಲಿ ಹಿಡಿದಿಡುವ ಕೆ.ಎಸ್.ನ ಮೇಲುನೋಟಕ್ಕೆ ನೋಡಿದರೆ ಯುಗಾದಿ ವಿಶೇಷಾಂಕದ ಸೊಲ್ಲಾಗಿ, ಒಳ್ಳೆಯ ಸಂಯೋಜನಕ್ಕೆ ಒದಗಬಹುದಾದ ಹಾಡಾಗಿ ಹೋಗಬಹುದಾದ ಕವಿತೆಯ ಒಡಲಿನಲ್ಲಿ ನೋವಿನ ಒಳಗುದಿಯನ್ನು ಜ್ವಾಲೆಯಾರದ ಹಾಗೆ ಕಾವು ತಟ್ಟುವ ಹಾಗೆ ಬೆಂಕಿಯಾಗಿಸಿದ್ದಾರೆ.
ಬೆಲೆಗಳೇರುತ್ತಿರಲು ನಕ್ಷತ್ರದೆತ್ತರಕೆ, ಕೊಲೆಮನೆಗೆ ನಡೆದಿರಲು ಗಂಗೆ ಗೌರಿ, ಗಾಳಿಗೂ ನಾಳಿದ್ದು ಬರಬಂದರಚ್ಚರಿಯೆ? ಎಂತಹ ಯುಗಾದಿಯೋ ದುರ್ದಿನದಲಿ! ನಗಲೆಬಾರದೆಂಬ ನಿಯಮವೇನೂ ಇಲ್ಲ- ನಗುವುದು ಹೇಗೆ ಸಾಧ್ಯ ಅಕ್ಷಯದಲಿ? ಕುಡಿವ ನೀರಿಗೆ, ಉರಿವ ಬೆಳಕಿಗೂ ಕಡಿವಾಣ, ನಿದ್ದೆ ಬರುವುದು ಹೇಗೆ ಜೋಪಡಿಯಲಿ? ("ಅಕ್ಷಯ ಯುಗಾದಿ", ದುಂಡುಮಲ್ಲಿಗೆ ಸಂಕಲನ)
ಈ ಕವಿತೆಯನ್ನು ಇಡಿಯಾಗಿ ಓದುವಾಗ ಇವತ್ತಿನ ನಮ್ಮ ದಿನಗಳು ನೆನಪಾಗದೆ ಇರದು. ಮಾತನಾಡಬೇಡವೆಂಬ ನಿಯಮವೇನಿಲ್ಲ. ಫ್ರೀಡಮ್ ಆಫ್ ಸ್ಪೀಚ್ ಎಂಬ ಸಂವಿಧಾನಬದ್ಧ ನಿಯಮದಡಿಯಲ್ಲೆ, ಹೀಗೆಯೇ ಮಾತನಾಡಬೇಕು ಎಂಬ ಹೊರನಿಯಮವೊಂದು ಕಾಯುತ್ತಿದೆಯೋ ಎಂದೆನಿಸಿಬಿಡುತ್ತದೆ. ರೈತಸ್ನೇಹಿಯಲ್ಲದ ಮಧ್ಯವರ್ತಿಗಳಿಗೆ ಮಾತ್ರ ಅನುಕೂಲವೆನಿಸುವ ಆಕಾಶಮುಖೀ ಬೆಲೆಗಳ ಉಡ್ಡಯನದಲ್ಲಿ ಅಡ್ಡಬಿದ್ದಿರುವ ಕಡಿವಾಣ ಬದ್ಧ ಬದುಕು ಓದುತ್ತ ಓದುತ್ತ ಕಣ್ಮುಂದೆ ಹರಡಿಕೊಳ್ಳುತ್ತದೆ. ಕೃಷಿಯಲ್ಲಿ ತೊಡಗಿರುವ ಸ್ನೇಹಿತರೊಬ್ಬರು ರೈತರಿಂದ ಮಾರುಕಟ್ಟೆಗಳು ಉತ್ಪನ್ನಗಳನ್ನು ಕೊಳ್ಳುವ ಬೆಲೆಯನ್ನು ಹಂಚಿಕೊಂಡರು. ಮುಖ್ಯವಾಗಿ ತರಕಾರಿಗಳ ಬೆಲೆ. ಯಾವ ತರಕಾರಿಯ ಬೆಲೆಯೂ ಕೆ.ಜಿಗೆ ಎರಡಂಕಿಯಿರಲಿ ಐದು ರೂಪಾಯಿಗಿಂತ ಮೇಲಿದ್ದರೆ ಹೆಚ್ಚು. ಅದೇ ತರಕಾರಿಗಳು ನಾವು ಸಾಮಾನ್ಯರು ಕೊಳ್ಳುವಾಗ ಕನಿಷ್ಟ ಕೊಳ್ಳಬೇಕಾದ ಬೆಲೆಯೂ ಐದು ರೂಪಾಯಿಗಿಂತ ಹೆಚ್ಚಿರುತ್ತವೆ. ಹೆಚ್ಚಿನಂಶ ಎಲ್ಲ ತರಕಾರಿಗಳೂ ೨೦ ರೂಪಾಯಿಯಿಂದ ಹಿಡಿದು ೮೦-೮೫ರ ಆಸುಪಾಸಿನಲ್ಲಿಯೇ ಇವೆ. ಬೆಳೆದ ಶ್ರಮಕ್ಕೆ ಕನಿಷ್ಠ ಬೆಲೆಯೂ ಬರದ ಈ ದಿನಗಳಲ್ಲಿ ನಾವು ಅತಿರಮ್ಯವಾಗಿ ರೈತನು ನಾಡಿನ ಬೆನ್ನೆಲುಬು ಎಂದುಕೊಳ್ಳುತ್ತ ಮೆರೆವ ಕೃಷಿಪ್ರಧಾನ ದೇಶದ ಸತ್ಪ್ರಜೆಗಳಿದ್ದೇವೆ. ಈ ವಿಷಯ ಬರೆಯಲು ಈಗೀಗ ಕವಿಗಳಿಗೆ ಪುರುಸೊತ್ತಿಲ್ಲ. ಅಥವಾ ಇದೆಲ್ಲ ಬರೆದರೂ ಓದುಗರಿಗೇ ಬೇಕಿಲ್ಲ. ಬರೆಯುವವರಿಗೆ ಸಾಕಷ್ಟು ಮುಖ್ಯ ವಿಷಯಗಳಾದ, ಪ್ರೀತಿ, ಪ್ರೇಮ, ಜಾತಿ, ಯುನಿಫಾರ್ಮು, ಮೀಸಲು, ಯುದ್ಧ, ದೇವಭಾಷೆ ಇತ್ಯಾದಿ ವಿಷಯಗಳಿವೆ. ಓದುವವರಿಗೆ ಅನ್ ಲಿಮಿಟೆಡ್ ಡಾಟಾ ಪ್ಯಾಕುಗಳಲ್ಲಿ ಜಾಗತಿಕ ವಿದ್ಯಮಾನಗಳ ಕುರಿತಾದ ಸಿನೆಮಾ ಮತ್ತು ಜಗತ್ತಿನ ಮೇಲೆ ಯುದ್ಧದ ಪ್ರಭಾವ ಇತ್ಯಾದಿ ವಿಷಯಗಳ ಕುರಿತ ಸಿನೆಮಾ ನೋಡಬೇಕಿದೆ. ಸೆಲ್ಫಿಗೆ ಒದಗದ, ಟ್ರೋಲಿಗೆ ಲಾಯಕ್ಕಾಗದ ವಿಷಯಗಳಲ್ಲಿ ಯಾರ ಆಸಕ್ತಿಯೂ ಇಲ್ಲ.
ಮಳೆಗಾಲದಲ್ಲಿ ಮಳೆಯಿಲ್ಲ, ಮಾಡುವುದೇನು? ಯಾರ ಅಪ್ಪಣೆಯಿಂದ ಹೀಗಾಯಿತು? ಹಕ್ಕಿ ತಾನೇ ಬಂದು ಬಿದ್ದಿತ್ತು ಬಲೆಯೊಳಗೆ, ಬಿಡಿಸಿಕೊಳ್ಳುವ ಮಾರ್ಗ ತಿಳಿಯಲಿಲ್ಲ! ಕುಡಿಯಲೂ ನೀರಿರದ ಹಲವು ಹಳ್ಳಿಗಳಲ್ಲಿ ಹಾಯಾಗಿ ನೆಲಸಿಹುದು ಬೆಳ್ದಿಂಗಳು! ಎಲ್ಲ ಚೆನ್ನಾಗಿಹುದು ಎಂದು ಹೇಳಲಿ ಹೇಗೆ, ಗಂಭೀರವಾಗಿಹುದು ಬಿಸಿಲ ಬೇಗೆ ("ಎರಡು ಚಿತ್ರಗಳು" ದೀಪಸಾಲಿನ ನಡುವೆ") ಯಾವ ಹೆಚ್ಚಿನ ವ್ಯಾಖ್ಯಾನ ಬೇಡದ ಈ ಕವಿತೆಸಾಲುಗಳ ಮೂಲಕ ಕವಿ ಏನನ್ನು ಸೂಚಿಸುತ್ತಿದ್ದಾರೆ? ತನ್ನ ಸುತ್ತಲ ಬದುಕಿನ ಪರಿಯನ್ನು ಬಿಚ್ಚಿಡುತ್ತಲೇ ಹೀಗೆಲ್ಲ ಇದ್ದರೂ ತನ್ನ ಪಾಡಿಗೆ ತಾನು ಲೋಕದುರುಳು ಎಂಬ ಪ್ರಕೃತಿ ಧರ್ಮವನ್ನು, ಲೋಕದ ಸಹಜ ಗತಿಯನ್ನು ಕವಿ ಸೂಚಿಸುತ್ತಾ ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಭರವಸೆಯನ್ನು ಬಿಡದೆ ಮನುಷ್ಯಪ್ರಯತ್ನವನ್ನು ಬಿಡದೆ ಒಳಿತಿನ ಕಡೆಗೆ ಗಮನ ಹರಿಸಬೇಕು ಎನ್ನುತ್ತಾರೆ.
ಎಲ್ಲಿಹುದೋ ನೋವಿಲ್ಲದ ಚೆಲುವು? ವರುಷ ವರುಷವೂ ಮತ್ತೆ ಯುಗಾದಿ; ಕಾಲವಿದಂತು ಅನಂತ ಅನಾದಿ, ತೋರಣ ಕಟ್ಟಿದೆ ಬದುಕಿನ ಬೀದಿ; ಏಳುಬೀಳುಗಳ ಬಳಸಿನ ಹಾದಿ.
ಇವೇ ವಿಷಯಗಳು ಯುಗಾದಿಯ ಕಾಲಬದಲಾವಣೆಯ ಸಮಯಕ್ಕೆ ಗೋಪಾಲಕೃಷ್ಣ ಅಡಿಗರ ಕಾವ್ಯಕುಸುರಿಗೆ ಸಿಕ್ಕ ಪರಿಯನ್ನಷ್ಟು ನೋಡೋಣ. ಇದು ಕೆ.ಎಸ್.ನ ಮತ್ತು ಅಡಿಗರ ಕವಿತೆಗಳ ಹೋಲಿಕೆ ಖಂಡಿತ ಅಲ್ಲ. ಈ ಇಬ್ಬರು ಮುಖ್ಯ ಕವಿಗಳು ಹೇಗೆ ತಮ್ಮ ಸುತ್ತಲಿನ ಸ್ಥಿತ್ಯಂತರಕ್ಕೆ ಕಾವ್ಯದ ಮೂಲಕ ಸ್ಪಂದಿಸಿದರು ಮತ್ತು ಅವುಗಳನ್ನು ಇವತ್ತು ಕೂತು ಓದುವಾಗ ಈ ಸತ್ವಶಾಲೀ ಕವಿತೆಗಳ ಪ್ರಸ್ತುತತೆ ಎಷ್ಟು ಎಂಬುದನ್ನ ನನ್ನ ಜೊತೆಓದುಗರು ಓದಲೆಂಬ ಇಷ್ಟವಲ್ಲದೆ ಮತ್ತೇನೂ ಇಲ್ಲ.
ಯುಗ ಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ ಹೊಸಹೊಸವು ಪ್ರತಿವರುಷವು; ಈ ಯುಗಾದಿಯ ಮಾತು ಕೇಳುತಿದೆ ಮರಮರಳಿ ಮೊದಲಾಗುತಿದೆ ಯುಗವು, ನರನ ಜಗವು; ತನ್ನ ನೆಲೆಯನು ಹುಡುಕಿ ಹೊರಟ ಬಡಜೀವಕಿದೆ ತೃಪ್ತಿ; ಹೊರಟಲ್ಲಿಗೇ ಬಂದ ಗೆಲವು! (ಅಡಿಗರು, "ಯುಗಾದಿ" ಕವಿತೆ, ಕಟ್ಟುವೆವು ನಾವು ಸಂಕಲನದಿಂದ)
ಬುದ್ಧಿ ಭಾವ ಪ್ರಯತ್ನಗಳಲ್ಲಿ ಏನನ್ನೇ ಮಾಡಿದರೂ ಕಾಲನ ಗಾಣದಲ್ಲಿ ನಾವು ಸುತ್ತುವ ಎತ್ತುಗಳಷ್ಟೇ ಪ್ರಗತಿಯಿಲ್ಲ, ಹೊರಟ ಬಿಂದುವಿಗೇ ಮತ್ತೆ ಸೇರುವುದಷ್ಟೆ ಈ ಬದುಕಿನ ಪಯಣ ಎಂಬ ತಾತ್ವಿಕ ನಿಲುವಿನಿಂದ ಶುರುವಾಗ ಅಡಿಗರ ಮೊದ ಮೊದಲ ಕವಿತೆಗಳಲ್ಲಿ ಒಂಚೂರು ನಿರಾಸೆಯೇ ಮಾರ್ಧನಿಸುತ್ತದೆನಿಸುತ್ತದೆ. ಎಲ್ಲವನ್ನೂ ಮುರಿದು ಕಟ್ಟಬೇಕೆಂಬ ಹಂಬಲದ ಯೌವನಸ್ಥ ಕವಿಗೆ ಹೊಸನಾಡನ್ನು, ರಸದ ಬೀಡನ್ನು ಕಟ್ಟುವ ತವಕ. ಯುಗಾದಿಯ ಹೊರಳುಸಮಯದಲ್ಲಿ ಕವಿಗೆ ಈಗಿನ ಜಗದ, ಸುತ್ತಲ ಪರಿಸರದ, ಜೊತೆಗೆ ತಾವು ಬದುಕಿರುವ ಪರಿಯ ಮಿತಿಯೇ ಹೆಚ್ಚಾಗಿ ಕಾಣುತ್ತದೆ. ಅದನ್ನು ಮೀರುವ ತವಕದ ಅವಶ್ಯಕತೆಗೆ ಓದುವ ನಮ್ಮನ್ನೂ ಒಡ್ಡುವುದೇ ಅಡಿಗರ ಈ ಕವಿತೆಗಳ ಗೆಲುವು. ಹಾಗಂತ ಈ ಕವಿತೆಗಳು ನೆಗೆಟಿವಿಟಿಯ ಛಂದೋಬದ್ಧ ರೂಪಕಗಳಲ್ಲ. ತನ್ನ ಸುತ್ತಲ ಪರಿಸರ ಮತ್ತು ತಾನು ಬಾಳುತ್ತಿರುವ ಕಟ್ಟುಪಾಡಿನ ಬದುಕಿನ ಕುರಿತ ಅಸಹನೆ, ಅದನ್ನು ಮೀರುವ ಛಲ ಸಾಲುಸಾಲುಗಳಲ್ಲಿ ಎದ್ದು ಕಾಣುತ್ತವೆ.
ಇಡೀ ವರ್ಷ ಮಧುರ ಪಕ್ವಾನ್ನ, ಈ ದಿನ ಮಾತ್ರ ಬೇವು ಸೋಂಕಿದ ಬೆಲ್ಲದೊಂದು ಚಿಟಿಕೆ; ಬಳಿಕ ಹೋಳಿಗೆ ತುಪ್ಪ; ಸಂಕೇತಕ್ಕೋಸ್ಕರವಾಗಿ ಸಂಕೇತವಾಗಿಯೆ ತೇಗಿದವರು.
ಯುಗಯುಗಾದಿಗಳೆಷ್ಟೊ ಕಳೆದರೂ ಬೇರಿಲ್ಲ, ಹೂಹಣ್ಣು ಬಿಡುವ ರೂಢಿ ಮರೆತುಹೋಗಿದೆ.. (ಯುಗಾದಿಯ ಅನ್ನಿಸಿಕೆಗಳು, ಮೂಲಕ ಮಹಾಶಯರು ಸಂಕಲನದಿಂದ)
ಈ ಬಾರಿ ಊರಿನ ಬಂಧುಗಳು, ಕೃಷಿಯಲ್ಲಿರುವ ಸ್ನೇಹಿತರು, ತರಕಾರಿ ಅಂಗಡಿಯವರು ಎಲ್ಲರದ್ದೂ ಒಂದೆ ಮಾತು.. ಮಾವಿಗೆ ಹೂವಿಲ್ಲ. ಇಬ್ಬನಿ ಬೀಳುವಾಗ ಬೀಳಲಿಲ್ಲ, ಹೂಬಿಡುವಾಗ ಮಳೆ ಬಿದ್ದು ಉದುರಿ, ಹೂಚಿಗುರು ಕಾಯಿ ಕಚ್ಚಲಿಲ್ಲ. ಈಗ 44 ವರ್ಷಗಳ ಹಿಂದೆ ಬರೆದ ಕವಿತೆ ಈಗಲೂ ಪ್ರಸ್ತುತ. ಉಪ್ಪಿನಕಾಯಿಗೆ ಮಿಡಿಯಿಲ್ಲ. ಹಣ್ಣಾದ ಮಾವನು ತಿನ್ನಲು ಮರದಲಿ ಕಾಯಿಯೇ ಕಟ್ಟಿಲ್ಲ. ಮಾತುಗಳಲ್ಲಿ, ತೋರಿಕೆಗಳಲ್ಲಿ ಏರುತ್ತಿರುವ ಸಂಬಳದಲಿ ಬದುಕುವುದು ನಿಜದಲ್ಲಿ ಅಷ್ಟು ಸುಲಭವಿಲ್ಲ. ಯುಗಾದಿ ಆಚರಣೆಗೆ ಸೀಮಿತವಾಗುತ್ತ ನಡೆದಿದೆ.
ಯುಗಾದಿ ಎಂದರೂ ಒಂದೆ, ಯುಗಾಂತ ಎಂದರೂ ಸರಿಯೇ ಆದಿ ಅಂತ್ಯಗಳೆರಡು ಅವಳಿ ಜವಳಿ; ಜವಳಿಯಂಗಡಿಯಲ್ಲಿ ಬೇಕಾದ ಪೋಷಾಕು ಇದೆ; ಆರಿಸಿಕೊ; ನಾಮಕರಣವೋ ಸರಿ,ಬೊಜ್ಜಕ್ಕೂ ಸರಿ.
ಕ್ಷಯವ ಅಕ್ಷಯ ಮಾಡುವುದು ಭಾರಿ ಕಷ್ಟವೇ? ಭಾರತೀಯ ನಾಲಗೆಗೆ ಇದು ಸಣ್ಣ ಲಾಗ. (ಹೊಸ ಯುಗಾದಿಗೆ, ಚಿಂತಾಮಣಿಯಲ್ಲಿ ಕಂಡ ಮುಖ ಸಂಕಲನ)
ಈ ಕವಿತೆ ಬರೆಯುವಾಗ ಕವಿಗೆ ಮೊದಲಿಗಿಂತ ಹೆಚ್ಚು ನಿರಾಶೆ, ಭರವಸೆ ಕುಂದಿದೆ. ಆದರೆ ಸ್ಪಷ್ಟತೆ ಮೊದಲಿಗಿಂತ ಹೆಚ್ಚಾಗಿದೆ. ಆಗಿರುವುದೇನು ಎಂಬುದನ್ನು ತನ್ನ ವಿಡಂಬನೆಯ ಉಳಿಯಲ್ಲಿ ಕಟೆದಿರಲು ಕೈ ಸರಿಯಾಗಿ ಕೂತಿದೆ. ಓದಿದ ಓದುಗನಿಗೆ ಆ ಉಳಿಪೆಟ್ಟು ಎಲ್ಲಿ ಬೀಳಬೇಕೋ ಅಲ್ಲಿಗೇ ಬೀಳುತ್ತದೆ. ಕವಿ ಪಟುವಾಗುತ್ತ ಕಟುವಾಗುತ್ತ ನಡೆದಿದ್ದಾರೆ. ತನಗೆ ಸಿಕ್ಕಿರುವುದು ಸೋಗಿನ ಬೇಗಡೆ ಪಾಗಿನ ಬದುಕು ಎಂಬ ಅರಿವಿದೆ.
ಗೆದ್ದು ತರುವಾಂಥದ್ದು ಆಚೆ ನೆಗೆಯುವ ಬದುಕು... ತೋರಿಕೆಯ ಬೇಗಡೆಪಾಗನ್ನು ಹೊದ್ದುಕೊಂಡು ಇರಲಾಗುವುದಿಲ್ಲ ಎಂಬ ಚಿಕಿತ್ಸಕ ದೃಷ್ಟಿಯಿದೆ. ಎಂತಹ ಪಾತಾಳಕ್ಕೆ ಬಿದ್ದಿದ್ದರೂ ಮೇಲೇರುವ ಶಕ್ತಿ ಇದ್ದೇ ಇರುತ್ತದೆ ಎಂಬ ಭರವಸೆಯೂ ಉಂಟು.
ಈ ಯುಗಾದಿಯವರೆಗು ಬಂದು ತಡಕುವ ದಾರಿ ತನ್ನ ಬಲೆಯಲ್ಲಿ ತಾ ಬಿದ್ದ ಜೇಡ. ರಾಟೆ ಗಡಗಡಿಸಿ ಪಾತಾಳಕಿಳಿದರು ಚೆಂಬು ಹಾಲು ಸೂಸದು ಈಗ ಹೊಟ್ಟು ಬಾವಿ. (ಈ ಯುಗಾದಿಯ ವರೆಗು, ಸಮಗ್ರದ ಅನುಬಂಧದಲ್ಲಿದೆ)
ಕವಿ ಬರೆಯುವ ಕಾಲಕ್ಕೆ ಏನೇನು ತುರ್ತು, ಕಷ್ಟ, ಅನುಕೂಲ, ಜಾಲಗಳಿದ್ದವೋ ಈಗಂತೂ ನಾವೆಲ್ಲರೂ ನ್ಯೂಕ್ಲಿಯರ್ ಕುಟುಂಬದ, ತನ್ನ ನಡುಗಡ್ಡೆಯಲ್ಲಿ ತಾನೇ ವಿರಾಜಮಾನರಾಗಿರುವ ನೆಟ್ ಯುಗದ ಬಲೆಯಲ್ಲಿ ಸಿಕ್ಕಿಬಿದ್ದ ಜೇಡರೇ ಆಗಿಬಿಟ್ಟಿದೀವಿ.
ಇವತ್ತು ನಮಗೆ ಇರುವ ಗೊಂದಲ ಬಗ್ಗಡಗಳ ಗೊಂದಲಪುರದ ಅಣಕುಗಲ್ಲಿಗಳನ್ನ ಈ ಕವಿ ಹಲವು ದಶಕಗಳ ಮೊದಲೆ ಹೊಕ್ಕು ಮುಗಿಸಿ ನಮಗೆ ಈ ಬದುಕಿನಿಂದಾಚೆ ನೆಗೆಯಬೇಕಿರುವ ಅವಶ್ಯಕತೆಯನ್ನು ಮತ್ತೆ ಸೂಚಿಸುತ್ತಾರೆ. ಅಳುವ ಕಡಲಿನಲಿ ತೇಲಿ ಬರಬಹುದಾದ ನಗೆಯ ಹಾಯಿದೋಣಿಯ ಪುಟ್ಟ ಭರವಸೆಯನ್ನೂ ಕೊಡುತ್ತಾರೆ.
ಚೈತ್ರ ಹೊರಟನೆ ಜೈತ್ರಯಾತ್ರೆಗಿನ್ನೊಂದು ಸಲ - ವರ್ಷವರ್ಷದ ತೊಡಕು ತುಡಿವ ಸಲಗ? ಕಾಲದಾಚೆಗೆ ನೋಡಲಾರವು ಕಣ್ಣು; ಬೀಜದಲ್ಲಡಗಿರುವ ಕಳಿತ ಹಣ್ಣು; ದೇವಮಾನವೆ ಬೇರೆ; ಮನುಷ್ಯಮಾನ ವಕ್ರಗತಿಯ ಅಸಂಖ್ಯ, ಓರೆಕೋರೆಗಳ ಆತಂಕ, ತಳ್ಳಂಕ. ಹಠಾತ್ತಾಗಿ ಮುರಿವ ಆಕಾಶಸಂಕ. ("ಮತ್ತೆ ಮತ್ತೆ ಯುಗಾದಿ" ಚಿಂತಾಮಣಿಯಲ್ಲಿ ಕಂಡ ಮುಖ ಸಂಕಲನದಿಂದ)
ನರಸಿಂಹಸ್ವಾಮಿಯವರ ಕವಿತೆಗಳಲ್ಲಿ ಇಷ್ಟೆ ಪ್ರಾಪ್ತಿ ಎಂಬ ನೆಲೆಯಿದ್ದೂ ಬದುಕಿನ ವಿಸ್ತಾರಗಳನ್ನೂ ಅಕ್ಷರಗಳಲ್ಲಿ ಶೋಧಿಸುವ ರೀತಿಯಾದರೆ ; ಮೊದಲಿಗೆ ಬದುಕಿನ ವಿಸ್ತಾರಗಳನ್ನು ಅದರ ವೈರುಧ್ಯಗಳ ಮೂಲಕ, ಮಿತಿಗಳ ಮೂಲಕ ಶೋಧಿಸುತ್ತ ಇಷ್ಟೆ ಪ್ರಾಪ್ತಿ ಎಂಬ ನೆಲೆಗೆ ಬಂದು ನಿಲ್ಲುವುದು ಅಡಿಗರ ರೀತಿಯೇನೋ ಎಂದು ಓದುವಾಗಲೆಲ್ಲ ಅನಿಸುತ್ತದೆ. ಇಬ್ಬರ ಕಾಣ್ಕೆಗಳೂ ನಮ್ಮದೇ ಪರಿಸ್ಥಿತಿಗೆ ಸಹಜವಾಗಿ ಹೊಂದುತ್ತ ನಮ್ಮದೇ ಆಗಿಬಿಡುತ್ತವೆ. ಬೀಜದಲ್ಲಡಗಿರುವ ಕಳಿತ ಹಣ್ಣು ಎಂಬ ಸಾಲು ನಮ್ಮ ಯೋಚನೆಗಳನ್ನ ಅಸಂಖ್ಯ ದಿಕ್ಕುಗಳಲ್ಲಿ ಹರಿಸಲು ಸಾಧ್ಯವಾಗಬೇಕು. ಬದುಕಿನ ಅನಂತ ಸಾಧ್ಯತೆಗಳು ಹೇಗೆ ಎಲ್ಲಿ ಅಡಗಿರಬಹುದು, ಯಾವ ಬೆಳಕಿನ ಹಾದಿ, ಯಾವ ಹೊಸ ಬೆಳಕು, ಯಾವ ಯುಗಾದಿ ಅದನ್ನು ನಮಗೆ ಕಾಣಿಸಬಹುದು ಎಂಬ ಎಚ್ಚರ ಬೇಕು.
ಆಕಾಶಸಂಕ ಎಂದರೆ ಕಾಮನಬಿಲ್ಲು. ಯುಗಾದಿ ಕಾಮನಬಿಲ್ಲಿನ ಹಾಗೆ ಆ ಕ್ಷಣಕ್ಕೆ ಮನಕ್ಕೆ ಮುದವನ್ನೂ, ಭರವಸೆಯನ್ನೂ..ಈ ವಿಶಾಲ ಆಕಾಶದಲ್ಲಿ ನನಗಾಗಿಯೇ ಮುರಿದುಕೊಂಡು ಬಿದ್ದಿರುವ ಒಂದು ಸ್ವರ್ಗದ ತುಣುಕು ಎಂಬ ಆಶಾಭಾವನೆಯನ್ನೂ ಹುಟ್ಟಿಸಿ ಮತ್ತೆ ಅದೇ ಕಾಮನ ಬಿಲ್ಲಿನ ಹಾಗೆಯೇ ಮರೆಯಾಗುತ್ತದೆ. ಹೊಸವರ್ಷದ ಮೊದಲ ದಿನದ ಸಂಭ್ರಮ ವರ್ಷವಿಡಿಯ ನೌಕರಿ, ಮನೆ ನಿರ್ವಹಣೆ, ಪ್ರೇಮ, ಜಗಳ, ಮದುವೆ, ಮಕ್ಕಳು, ಸಾವು, ನೋವು, ಬಾರದ ಮಳೆ, ಹೆಚ್ಚಿದ ಬೆಲೆಯ ಮಧ್ಯೆ ಇದ್ದೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಂತ ಆ ಕ್ಷಣದ ಸಂಭ್ರಮ ಮತ್ತೆ ಮರುಕಳಿಸದೆ ಇರದು. ದೇವ ಮನ್ಮಥ ಇಕ್ಷುಚಾಪದ ಮ್ಯಾಜಿಕ್ಕಿನ ಹಾಗೆ ಬದುಕಿನ ನಿರಂತರತೆಯು ಕಡಿದಂತೆ ಕಂಡರೂ ಮತ್ತೆ ಮೊದಲಾಗಿ ತೊಡಗಿ ಮುದಗೊಳಿಸುತ್ತಲೆ ಇರುತ್ತದೆ. ಆದರೂ ಇದು ಈ ಕ್ಷಣದ ಸಂಭ್ರಮವೇ ಇರಬಹುದು. ಮತ್ತೆ ಬರಬಹುದಾದದ್ದೇ ಆದರೂ, ಸದಾ ಇದ್ದೇ ಇರುವುದಲ್ಲ..ಎಂದು ವಾಸ್ತವಕ್ಕೆ ಒತ್ತುಕೊಡುತ್ತಾರೆ ಅಡಿಗರು.
ಹೀಗೆ ಯುಗಾದಿಯೆಂಬುದು ಕ್ಯಾಲೆಂಡರಿನ ರಜಾದಿನವಾಗಿ, ಪಂಚಾಂಗದ ಮೊದಲಾಗಿ, ಹಬ್ಬದೂಟವಾಗಿ, ನಿದ್ದೆಯ ಮಬ್ಬು ಕವಿವ ಮಧ್ಯಾಹ್ನವಾಗಿ, ಸೆಲ್ಫಿಯ ಪೋಸಾಗಿ, ಫಾರ್ವರ್ಡು ಶುಭಾಶಯವಾಗಿ ಮಾತ್ರವೇ ಆಗುಳಿಯದೆ ಈ ನಮ್ಮ ಅತ್ಯುತ್ತಮ ಕವಿಗಳ ಕುಸುರಿಯಲ್ಲಿ ಹಾದುಬಂದ ಕಾವ್ಯಗುಚ್ಛಗಳ ಓದಿನಲ್ಲಿ, ಮನನದಲ್ಲಿ ಹಾದು ನಮ್ಮ ಬದುಕಿನ ದಾರಿಯನ್ನ ಇನ್ನಷ್ಟು ಸ್ಪಷ್ಟಗೊಳಿಸುವ, ನಮ್ಮ ಮಿತಿಯನ್ನ ನಮಗೆ ಅರ್ಥ ಮಾಡಿಸುವ, ಮಿತಿ ಗೊತ್ತಾದ ಮೇಲೆ ಅದನ್ನು ದಾಟಿ ಮೇಲಕ್ಕೆ ಹಾರುವ ಸಂಕಲ್ಪವನ್ನು ಮನದಲ್ಲಿ ಮೂಡಿಸುವ, ಮಿಡಿಯೋಕ್ರಿಟಿಯನ್ನ ಒದರಿಬೀಳಿಸಿ ನಮ್ಮನ್ನ ಇನ್ನಷ್ಟು ಮಾನವೀಯವಾಗಿ ಸಹಬಾಳುವೆ ಮಾಡುವಂತೆ ಮಾಡುವ ಬದಲಾವಣೆಯ ಆದಿಯಾಗಲಿ ಎಂಬುದು ನನ್ನ ಆಶಯ. ನಮ್ಮ ಪರಿಸರ, ಸಮುದಾಯ ಇವೆಲ್ಲವನ್ನು ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ನೋಡಿಕೊಳ್ಳುವ, ಸ್ಪಂದಿಸುವ ಮನೋಭಾವ ನಮ್ಮದಾಗಲಿ. ಇದಕ್ಕೆ ಹದವಾಗಿ ಒದಗಿದ ನನ್ನ ನೆಚ್ಚಿನ ಕವಿಗಳಾದ ಕೆ.ಎಸ್.ನರಸಿಂಹಸ್ವಾಮಿಯವರಿಗೆ ಮತ್ತು ಗೋಪಾಲಕೃಷ್ಣ ಅಡಿಗರಿಗೆ ನಮಿಸುತ್ತ ಈ ಬರಹ ಮುಗಿಸುತ್ತೇನೆ.
ಹಳತೆಲ್ಲರ ನೋವು, ನಗೆಗಳ ಜೊತೆಗೆ, ಹೊಸತಿಗೆ, ಹೊಸನಾಳೆಗೆ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತ ಈ ಯುಗಾದಿಯನ್ನು ಬರಮಾಡಿಕೊಳ್ಳೋಣ.

Tuesday, January 21, 2020

ಸಾಧಾರಣ.

ನಾನು ಸಾಧಾರಣ.
ಬಾಲ್ಯದಲಿ ಶಾಲೆಯಲಿ..
ಮೊದಲ ಸಾಲಲಿ ಎದೆಯುಬ್ಬಿಸಿ ನಿಲುವವರ ಹಿಂದೆ,

ಕೊನೆಯ ಸಾಲಲಿ ತಲೆತಗ್ಗಿಸಿ ನಿಲುವವರ ಮುಂದೆ,
ಆಟದ ಮೈದಾನಿನಲಿ ಆಟದಲಿ ಗೆದ್ದವರ ಹಿಂದೆ,
ಆಡುವವರ ಮಂದೆಯೊಳಗೊಂದೆ,
ನಾನು ಸಾಧಾರಣ.


ಹಾಡುವವರ ಮೆಚ್ಚುತ ಚಪ್ಪಾಳೆ ಚಚ್ಚುತ,
ನಾಟಕದ ಕಿರುಪಾತ್ರಕೆ ಬಣ್ಣ ಹಚ್ಚುತ,
ಕಥೆಕವನ ಹೇಳುವವರ ಕೇಳುತ,
ಹೊಸಹೊಸದ ಮಾಡುವವರ ನೋಡಿ ಬೆರಗಾಗುತ,
ನಾನು ಸಾಧಾರಣ.


ಮೊದಲ ಸ್ಥಾನಬಂದವರಿಗೆ
ನಮ್ಮಂತವರೇ ಕಾರಣ.
ಸೋತು ನಿಂತವರಿಗೆ
ನಮ್ಮಂತವರೇ ಮರುಪೂರಣ.
ನಾನು ಸಾಧಾರಣ.


ಬೆಳೆಯುತ್ತ ಬೆಳೆಯುತ್ತ..
ಉಪ್ಯೋಗಿಲ್ಲವೆಂಬ ಹಾಗೇನಿಲ್ಲ,
ಎಲ್ಲೆಲ್ಲಿ ನೋಡಿದರಲ್ಲಲ್ಲಿ ಇಲ್ಲ,
ಎಲ್ಲದರಲೂ ತೊಡಗುವ,
ಎಲ್ಲಿಯೂ ಗೆದ್ದು ಮುಂದೋಡದ,
ಎಂದಿಗೂ ಸೋತು ಕುಸಿದುಳಿಯದ,
ನಾನು ಸಾಧಾರಣ.


ಈಗೀಗ ನಡುವಯದಲಿ..
ಓಟದಲಿ ಮೊದಲು ಬರದ ಮಗು
ಮುಖ ತಗ್ಗಿಸಿ ಮನೆಗೆ ಬರುವಾಗ

ನನ್ನ ಸೋಲಿನ ಕತೆ, ಹೇಳಲು ಇದೆ,
ಎಂಬುದೆ ಸಮಾಧಾನ,
ಸಾಧಾರಣ ಸಮಾಧಾನ.

ಮೊದಲ ಮೂರು ಸ್ಥಾನ ಯಾವಾಗಲೂ
ಆ ಮೂವರಿಗೆ ಎಂದು ಹೊಟ್ಟೆಕಿಚ್ಯಾಕೆ!
ನಿನ್ನ ನಾಕನೆ ಸ್ಥಾನದ ಮೇಲ್ಯಾರಿಗೂ
ಕಣ್ಣಿಲ್ಲ, ಸೇಫು ಜಾಗ, ಎಂಬ ಕಚಗುಳಿಗೆ
ಮಕ್ಕಳು ನಗುವಾಗ ಸಾಂತ್ವನ.
ನಾನು ಸಾಧಾರಣ.


ಹೂಂ ಅದೇ, ಪೇಟೆ ಭಾಷೆಲಿ ಆವರೇಜ್.
ಫೋಟೋ ಶೂಟಿಗೆ ಒದಗದ 
ಇನ್ಸ್ಟಾಲಿ ಹೊರಳದ ಕವರೇಜ್.

Tuesday, November 19, 2019

ಹೊಳ್ಳಿ ಹೋಗಲು ಬರದ ಹಾದಿ

ಸಿಟ್ಬಂತು, ಖುಶಿಯಾಯ್ತು
ಅಳು ಒತ್ತಿಹಿಡಿದಿರುವೆ
ಆತಂಕದಲ್ಲಿ ನರಳಿರುವೆ
ಮನದ ಮಾತು ತುಟಿಗೆ ಬರದ ಹಾಗೆ ತಡೆದಿರುವೆ
ಓಹ್ ಕೂಡಲೆ ಹೊರಟೆ
ನನ್ನ ರಹಸ್ಯತಾಣಕ್ಕೆ
ಅಕ್ಷರಗಳ ಪಾಕವಿಳಿಸಿ
ಲಹರಿಗಳ ಸಾಲಲ್ಲಿ ಇರಿಸಿ
ಹಗುರಾಗಿ, ಮೆದುವಾಗಿ
ಬಿರಿದ ಗಾಯಕ್ಕೆ ಮುಲಾಮು ಸವರಿ
ಮತ್ತೆ ನನ್ನ ಜಗಲಿಗೆ, ಮನೆಗೆ ವಾಪಸ್.

ನೀನು ಒಮ್ಮೆ ಇದೆಲ್ಲ ಓದಿ
ಎಷ್ಟು ಚಂದಿದೆ ಹೇಳಿ
ಸ್ಪರ್ಧೆಗೆ ಕಳಿಸಿ...

ಈಗ ಬಹುಮಾನದ ಮೇಲೆ ಬಹುಮಾನ
ಯಾವುದೇ ಸಾಲು ಮೂಡಿದ ಕೂಡಲೆ
ಅದನ್ನ ವಿಮರ್ಶಿಸಿ
ಬರೆದ ಸಾಲುಗಳ ನಡುವಿನ ಮೌನವನ್ನು
ಆಡದೆ ಉಳಿದ ಮಾತುಗಳನ್ನು
ತುಂಡರಿಸಿ ಚೆಂದಗೆ ಅಲಂಕರಿಸಿ
ನಿಲ್ಲಿಸುತ್ತಾರೆ ಎಲ್ಲರೂ.

ನಾನು ಈಗ ಎಲ್ಲ ಕಡೆಯೂ
ಕುದಿಯುತ್ತಿರುತ್ತೇನೆ
ಬಿಗಿದಿಟ್ಟ ತಂತಿಯ ವಾದ್ಯದ ಹಾಗೆ
ಚೀರುತ್ತೇನೆ
ಅರಳುಮೊಗ್ಗು ಸುಮ್ಮನೆ ಗಾಳಿಗೆ ಹಾಗೆ ಕದಲಿದರೆ
ಸಿಟ್ಟುಕ್ಕಿ ಸಿಡಾರನೆ ದೂಡಿ ನಡೆದುಬಿಡುತ್ತೇನೆ.
ನನ್ನ ಮನಸು ನನಗೂ ಅರ್ಥವಾಗದಷ್ಟು ಗೋಜಲಾಗಿದ್ದೇನೆ :(

ಇದು ಹೊಳ್ಳಿ ಹೋಗಲು ಬರದ ಹಾದಿ.

Monday, May 6, 2019

ಮಾತು, ಮೌನದ ಗೆರೆಯ ನಡುವೆ..

ಮಾತನಾಡುತ್ತ ಆಡುತ್ತ ,
ನೀನು ಹೂಂಗುಡುವ ಹೊತ್ತು
ಕೇಳುವ ನನಗೆ ಗೊತ್ತು:
ನುಗ್ಗಿ ನುರಿಯಾದ ಚಿತ್ತ
ಈಗಿಲ್ಲ ಇತ್ತ;
ಬೇಸರದಿ ಮುದುಡುತ್ತ,
ಒಳಗೊಳಗೆ ಸರಿಯುತ್ತ,
ಹರಿವು ಬಂದತ್ತ ಹರಿಯುತ್ತ,
ಮಾತು ಮರೆತಿರುವ ಹೊತ್ತು.
ಉಳಿದ ಮಾತು ನೆನಪಾದರೆ ನಾಳೆಯಿದೆಯೆನ್ನುತ್ತ
ಫೋನಿಡುವ ಮನದ ಹುತ್ತ-
-ವೊಡೆದರೆ ಶೋಕಭರಿತ ಕಾವ್ಯ ಉನ್ಮತ್ತ.

ಯಾರು ಜೀವವೇ ಯಾರು ಬರೆದವರು..?

ಮೊದಮೊದಲು ಬರೆದಾಗ ಅಂದುಕೊಂಡೆ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ
ಆಮೇಲಾಮೇಲೆ
  ಓದಿದವರ ಆಹಾ...ಚೆನಾಗಿದೆ ಕೇಳಲು ಬರೆಯುತಿರುವೆ
  ನಾನು ಮೆಚ್ಚುವವವರು ಮೆಚ್ಚಲು ಬರೆಯುತಿರುವೆ
  ಇಂದು ನನ್ನ ಲೇಖನಿ ಕಸಿಯುವವಳು ಎಂದಾದರೂ ಓದಲೆಂದು ಬರೆಯುತಿರುವೆ
  ಎಳೆಬೆನ್ನ ಮೇಲೆ ಸೆಳೆದ ನನ್ನದೇ ಕೈಯ ಹಕೀಕತ್ತು ನನಗೇ ಗೊತ್ತಾಗಲು ಬರೆಯುತಿರುವೆ
   ....
ಮತ್ತೆ ಈಗೀಗ:
ನನ್ನ ಮನದ ದುಗುಡವಾರಿಸಲು ಬರೆಯುತಿರುವೆ;
ಆರುವುದೋ, ತೀರುವುದೋ..ಮತ್ತೆ ಹೊತ್ತಿ ಉರಿಯುವುದೋ
ತಿಳಿದವಳಲ್ಲ.
ದುಗುಡವಾರಲೆಂಬ ಹಂಬಲ ಮತ್ತು ಅಸಹಾಯಕತೆ
ಯಲಿ ಮುಳುಗಿ ಬರೆವ ಕ್ಷಣಗಳಲಿ ನಾನು ನಾನಲ್ಲ.
ಬರೆವಾಗ ಇರುವವಳು
ಕರೆದಾಗ ಬರದವಳು
ಬರೆದ ಮೇಲೆ ಇರುವವಳಲ್ಲ.