Wednesday, December 5, 2007

ಏಕಪಾತ್ರಾಭಿನಯ..

ಮನೆ ತುಂಬ ಜನ. ಇಷ್ಟು ದಿನ ಮಲಗೇ ಇರುತ್ತಿದ್ದ ಅಮ್ಮ ಇವತ್ತು ಚಂದ ಡ್ರೆಸ್ ಮಾಡಿಕೊಂಡು, ಹೊಸಾ ಪಾಪುನೆತ್ತಿಕೊಂಡು ಕೂತಿದಾಳೆ. ಬಂದವರೆಲ್ಲರನ್ನು ಮಾತಾಡಿಸುತ್ತ. ಎಲ್ಲರೂ ಪಾಪುವಿನ ಕೆನ್ನೆ ಅಮುಕುವವರೆ. ಚೆನಾಗಿದ್ನಲೆ ಮಗರಾಯ.. ಚಾನ್ಸ್ ಹೊಡೆದ್ ಬಿಟ್ಯಲಾ. ಅಡ್ದಿಲ್ಲೆ ಮನೆಗೊಬ್ಬ ಪುಟ್ಟ ಯಜಮಾನ.. ಹಂಗೆ ಹಿಂಗೆ. ಇವಳು ದೊಡ್ಡ ದೊಡ್ಡ ಕಂಬಗಳ ನಡುಮನೆಯ ಕತ್ತಲ ಕಂಬವೊಂದರ ಹಿಂದೆ ರೇಷ್ಮೆ ಫ್ರಾಕೊಂದು ಹಾಕಿಕೊಂಡು.. ಕೆನ್ನೆಗೆ ಕೈ ಕೊಟ್ಟು..ಯೋಚನೆಯಲ್ಲಿ ಮುಳುಗಿ..ಅಮ್ಮಮ್ಮ ನೋಡಿದವಳೆ ಹತ್ತಿರ ಬಂದು ಏನಾತೆಂದು ಕೇಳುವುದಕ್ಕಿಲ್ಲ. ಕಣ್ಣಕೊಳದ ಹನಿ ತುಳುಕಿಬಿಟ್ಟಿತು. ಈಗ ತಮ್ಮ ಬಂದನಲ್ಲ ನಾನಿನ್ಯಾರಿಗೂ ಬ್ಯಾಡ ಅಲ್ದಾ? ಯಾರೂ ನನ್ ಕೆನ್ನೆ ಹಿಂಡದೇ ಇಲ್ಲೆ.. ಅಮ್ಮಮ್ಮನಿಗೆ ತಡೆಯಲಾಗದ ನಗು. ಚಿಕ್ಕಿ ಹೇಳ ಹಾಳು ಮೂಳು ಕತೆ ಕೇಳಿ ಕೇಳಿ ಹಿಂಗಾಗಿರದು ನೀನು. ಯಾರಿಗೂ ಬ್ಯಾಡ ನೀನು ಅಂತ ಹೇಳಿದ್ ಯಾರು? ಎಲ್ರಿಗೂ ನೀನಿನ್ನು ಜಾಸ್ತಿ ಬೇಕು. ಅಮ್ಮನ್ನ ನೋಡಿಕೊಳ್ಳಕ್ಕೆ, ತಮ್ಮನ್ನ ಎತ್ತಿಕೊಳ್ಳಕ್ಕೆ, ಆಟ ಆಡಕ್ಕೆ, ಅವನ ಜೊತೆಜೊತೆಗೆ ಸ್ಕೂಲಿಗೆ ಹೋಗಕ್ಕೆ, ಎಲ್ಲಿಗೆ ಹೋದರೂ ಜೊತೆಯಾಗಿ ಬರೋ ಆ ತಮ್ಮನ ಜೊತೆ ಜೊತೆಗೇ ನಗ್ತಾ ಬರಲಿಕ್ಕೆ ಎಲ್ಲಕ್ಕೂ ನೀನೇ ಬೇಕು. ಮಳ್ ಮಳ್ ಯೋಚನೆ ಮಾಡಡ ಬಾ...ಒಂದು ಹಾಡು ಹೇಳ್ತಿ ಬಾ...
ಹೆಣ್ಣೀನ ಜನುಮಕ್ಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರೂ ಸಭೆಯೋಳಗೇ
ಬೆನ್ನು ಕಟ್ಟುವರೂ
ಸಭೆಯೊಳಗೆ
ಸಾವೀರ ಹೊನ್ನ ತುಂಬುವರು ಉಡಿಯೊಳಗೇ..
ಅವಳು ಹಾಡಿನ ಇಂಪಲ್ಲಿ ನೆಂದು ಹೊಸದಾಗಿ ಅರಳಿದಳು. ಅಮ್ಮನ ಹತ್ತಿರ ಹೋಗಿ ಆ ಗುಂಡು ಗುಂಡು ಪಾಪುವಿನ ಕೆನ್ನೆ ಹಿಂಡಿದಳು.

ಅವಳ ಸಂಜೆಗಳನ್ನ ಅವನು ತುಂಬಿದ. ಅವನ ಸಂಜೆಗಳಲ್ಲಿ ಅವಳು. ಇಬ್ಬರ ಸಂಜೆಗಳ ತುಂಬ ಮಾತು, ನಗೆ, ಇದ್ದ ಬದ್ದ ಆಟ, ಕುಸ್ತಿ, ಜಗಳ, ಸಿಟ್ಟು, ಅಳು, ಪೆಟ್ಟು, ಅವುಚಿಕೊಂಡು ನಿಂತ ಗಳಿಗೆಗಳು, ಮಾತು ಮುರಿದ ದಿನಗಳು, ಮುರಿದ ಮೂರು ದಿನಕ್ಕೆ ಸೇರಿಕೊಂಡ ಸರಪಳಿಗಳು, ಕತೆ, ಸಿನಿಮಾ, ಹಾಡು, ಯಕ್ಷಗಾನ, ನಾಟಕ, ಏಕಪಾತ್ರಾಭಿನಯ, ಪತ್ತೇದಾರಿ ಕತೆಗಳು, ಕೋರ್ಟು ಶಾಲೆಗಳ ಆಟ, ರಜೆಯಲ್ಲಿ ಊರಿಗೆ ಓಟ, ಎಲ್ಲಿ ಹೋದರೂ ಅವಳ ಬೆನ್ನಿಗೆ ಅವನು, ಅವನ ಕೈ ಹಿಡಿದು ಅವಳು.. ಅವಳು ಸುಮ್ಮನೆ ಮೂಲೆಯಲ್ಲಿ ಕೂತು ಪುಸ್ತಕದ ಮೇಲೆ ಪುಸ್ತಕ, ಅವನು ಅಂಗಳದಲ್ಲಿ ಆಟದ ಮೇಲೆ ಆಟ, ಅವಳು ಮೆತ್ತಗೆ ಯಾರಿಗೂ ಬೇಸರವಾಗದಂತೆ ಅರಳಿ..ಅವನು ಜೋರಾಗಿ ಎಲ್ಲರ ಕಣ್ಣು ಅವನ ಮೇಲಿರುವಂತೆ ಬೆಳಗಿ... ಆ ದಿನಗಳ ತುಂಬ ಹುಳಿ-ಸಿಹಿಯ,ಕಾರ ಒಗರುಗಳ ಅನನ್ಯ ರಸಭಾವ.. ರಸ ಕೆಡಲು ಹೊರಟರೆ ಅಮ್ಮನ ಗುದ್ದು, ಸಲಹೆ, ಕತೆಗಳ ಪ್ರಿಸರ್ವೆಂಟ್..

ಒಂದಿನ ಏನೋ ಹುಳುಕು ಮಾಡಿ ಅವನನ್ನ ಸಿಕ್ಕಿಸಿ ಹಾಕಿದ್ದಳು ಅವಳು. ಅಮ್ಮನಿಂದ ಎರಡು ಒದೆ ಬಿದ್ದಿತ್ತವನಿಗೆ. ಮುಖ ಚಪ್ಪೆ ಮಾಡಿ ನಿಂತ ಪುಂಡನ ನೋಡಿ, ಇವಳ ಮುಖ ಪೇಲವ. ನೋಡಿದ ಅಮ್ಮನಿಗೆ ಗೊತ್ತಾಯಿತು ಹುಳುಕು.. ಒಂದು ರುಚಿ ರುಚಿಯಾದ ಟೀ ಮಾಡಿ ಕೊಟ್ಟು ಕೈಗೆರಡೆರಡು ಬೆಣ್ಣೆ ಬಿಸ್ಕೆಟ್ ಇಟ್ಟು ಇವತ್ತೊಂದು ಕತೆ ಹೇಳ್ತೀನಿ ಅಂತ ಕೂತಳು..

ಚಪ್ಪೆ ಮುಖದವರಿಬ್ಬರೂ ಅಮ್ಮನ ಬದಿ ಬದಿಗೆ..ಕಿವಿಯಾಗಿ..

ಒಂದೂರಲ್ಲಿ ಒಂದು ದೊಓಓಓಡ್ಡ ಮಾವಿನ ಮರ. ಆ ಊರಿಗೆ ಬರುವ ಎಲ್ಲರೂ ಮಾವಿನ ಮರವನ್ನ ದಾಟಿಕೊಂಡೇ ಬರಬೇಕು. ಎಲ್ಲರೂ ನೋಡಿ ಆಹಾ ಅಂತೇಳಿ ಹೋಗ್ತಿದ್ದರು. ಆ ಸಲ ಬೇಸಿಗೆ ಶುರುವಾಗುತ್ತಿದ್ದ ಹಾಗೆ ಮಾವಿನ ಮರದ ತುಂಬ ತೂಗಿ ಬಿದ್ದ ಬಂಗಾರ ಬಣ್ಣದ ಹಣ್ಣುಗಳು. ಪರಿಮಳವಂತೂ ಅರ್ಧ ಮೈಲಿ ದೂರಕ್ಕೇ ಬರುತ್ತಿತ್ತು. ಅಲ್ಲಿ ಬರುವವರೆಲ್ಲ ಆಸೆಯಿಂದ ಹಣ್ಣು ಕಿತ್ತು ಇನ್ನೇನು ಸಿಪ್ಪೆ ಕಚ್ಚುತ್ತಾ ಬಾಯಲ್ಲಿಡಬೇಕು.. ಅಷ್ಟರಲ್ಲಿ ಕಾಣಿಸಿಕೊಳ್ಳುತ್ತದೆ ಹಣ್ಣಿನೊಳಗೆ ಹುಳ.. ಥೂ ಅಂತ ಎಸೆದು ಇನ್ನೊಂದು ಹಣ್ಣು ಕಿತ್ತು ನೋಡಿದರೆ ಅದರಲ್ಲೂ ಹುಳ.. ಓ ಈ ರೆಂಬೆಯೇ ಸರಿಯಿಲ್ಲ ಅಂತ ಆ ಬದಿಗೆ ಹೋಗಿ ಅಲ್ಲಿ ಕಿತ್ತು ನೋಡಿದರೆ ಅದರಲ್ಲೂ.. ಹೀಗೇ ಬಂದವರೆಲ್ಲ ಕಿತ್ತು ನೋಡಿದ ಎಲ್ಲ ಹಣ್ಣಲ್ಲೂ ಹುಳ..ಎಲ್ಲರೂ ಛೀ ಥೂ ಅಂತ ಬಯ್ಯುತ್ತಾ ಅಯ್ಯೋ ಹುಳುಕು ಮಾವಿನ ಮರಾ ಇದು.. ಎಂತಕ್ಕು ಪ್ರಯೋಜ್ನವಿಲ್ಲ ಅನ್ನುತ್ತಾ ಹೋಗುತ್ತಿದ್ದರೆ ಮರದ ಕಣ್ಣಲ್ಲಿ ನೀರು..
ಆಂ ಮರದ ಕಣ್ಣಾಗೆ ನೀರಾ? ಅವನಿಗೆ ಆಶ್ಚರ್ಯ.
ಮರದ ಕಣ್ಣೆಲ್ಲಿರ್ತಮಾ ಅವಳ ಪ್ರಶ್ನೆ.


ಹೌದಲ್ಲಾ ಅಮ್ಮ ಯೋಚಿಸಿದಳು.. ಅದೂ ಅದೂ ಮರದ ಕಾಂಡದಿಂದ ರೆಂಬೆಗಳು ಹೊರಡ್ತಲಾ ಅಲ್ಲಿರ್ತು. ಅದು ಎಲ್ಲರಿಗೂ ಕಾಣಾ ಕಣ್ಣಲ್ಲ. ಕತೆ ಹೇಳುವವರಿಗೆ ಮಾತ್ರ ಕಾಣಿಸ್ತು ಅವಳ ಸಮಜಾಯಿಷಿ. ಸರಿ ಮುಂದೆ ಕೇಳಿ.
ಆ ಬೇಸಿಗೆಯಿಡೀ ಯಾರೂ ಆ ಮರದ ಹಣ್ಣು ಮುಟ್ಟಲಿಲ್ಲ. ಮುಟ್ಟುವುದಿರಲಿ ಅದರ ಹತ್ತಿರವೂ ಬರದೆ ಥೂ ಹುಳುಕ್ ಮಾವಿನ ಮರ ಅಂತ ಬೈದುಕೊಂಡು ಅದನ್ನ ಬಳಸದೆ ದೂರದ ದಾರೀಲಿ ಹೋಗ್ ಬಿಡುತ್ತಿದ್ದರು. ಒಂದಿನ ಒಬ್ಬವ ಋಷಿ ಬಂದ.

ಬಂದವನೇ ಈ ಹುಳುಕು ಮಾವಿನ ಮರ ನೋಡಿ ಕೇಳಿದ - ಯಾಕೆ ಮರವೇ ಬರೀ ಹುಳುಕು ಹಣ್ಣುಗಳು ಏನಾಯಿತು ನಿಂಗೆ ಏನು ಪಾಪ ಮಾಡಿದ್ದೆ. -
ಮರ ಅಳುಮುಖ ಮಾಡಿಕೊಂಡು ಹೇಳಿತು. ಹೋದ ಜನ್ಮದಲ್ಲಿ ನಾನು ಬರೀ ಹುಳುಕುತನ ಮಾಡ್ತಾ ಇದ್ದೆ. ಚಾಡಿ ಹೇಳಿಕೊಂಡು, ಯಾರನ್ನೂ ಸಹಿಸದೆ, ಎಲ್ಲರ ಹತ್ತಿರವೂ ಜಗಳ ಮಾಡಿಕೊಂಡು, ಯಾವುದನ್ನೂ ಯಾರ ಹತ್ತಿರವೂ ಹಂಚಿ ತಿನ್ನದೇ, ನಾನೇ ದೊಡ್ ಮನುಷ್ಯ ಅಂದ್ಕಂಡು ಶ್ರೀಮಂತಿಕೇಲಿ ಬದುಕಿದ್ದೆ. ಯಾರಿಗೂ ಸಹಾಯ ಮಾಡದೆ, ಎಷ್ಟು ಸಾಧ್ಯವೋ ಅಷ್ಟು ಕಷ್ಟ ಕೊಟ್ಟು, ಸುಳ್ಳು ಹೇಳಿ ಖುಷಿ ಪಡ್ತಾ ಇದ್ದೆ. ಅಣ್ಣ, ತಮ್ಮ, ಅಕ್ಕ ತಂಗಿ ಎಲ್ರಿಗೂ ಮೋಸ ಮಾಡ್ಕೋತ, ನೋವು ಕೊಡ್ತಿದ್ದೆ... ಅದಕ್ಕೆ ಈ ಜನ್ಮದಲ್ಲಿ ಹುಳುಕು ಮಾವಿನ ಮರ ಆಗಿ ಹುಟ್ಟಿ ಬಿಟ್ಟಿದೀನಿ. ನಾನು ಮಾಡಿದ ಹುಳುಕೆಲ್ಲ ನನ್ನೇ ತಿಂತಿದೆ ಈಗ. ಯಾರೂ ಮುಟ್ಟೋಲ್ಲ ನನ್ನ. ನೋಡಿದವರೆಲ್ಲ ಛೀ ಥೂ ಅಂತ ಹೋಗ್ತಿರ್ತಾರೆ..


ಆಂ ಹಂಗಾ.. ಅಯ್ಯೋ ನಾನ್ ನಿನ್ನತ್ರ ಮಾತಾಡಲ್ಲಪ್ಪ.. ಆಮೇಲೆ ನಂಗೂ ಹುಳುಕುಬುದ್ಧಿ ಬಂದ್ ಬಿಡತ್ತೆ ಅಂತ ಋಷಿ ಕೂಡ ಬಿಟ್ಟು ಹೋಗಿಬಿಡುತ್ತಾನೆ.
ಅವರಿಬ್ಬರೂ ಪಿಳಿಪಿಳಿ ಅಮ್ಮನ್ನೇ ನೋಡ್ತಿದಾರೆ.
ಅಮ್ಮ ಕತೆ ಮುಗೀತು. ನೋಡಿದ್ರಾ ಹುಳುಕು ಬುದ್ಢಿ ಮಾಡವ್ರಿಗೆ ಏನು ಗತಿ ಬರ್ತು ಅಂತ.. ಅಂತ ಕೇಳಿದಳು. ಇಬ್ಬರೂ ಹೌದೌದು. ನಾವು ಇನ್ಯಾವತ್ತೂ ಹಂಗೆ ಮಾಡಲ್ಲಮ್ಮಾ..ಅಂತ ಒಪ್ಪಿಕೊಂಡರು.


ಸಂಜೆಯೊಂದು ಮೆತ್ತಗೆ ಮನೆಯ ಹಿಂದಿನ ಹಿತ್ತಲ ಹಿಂದೆ ಸೂರ್ಯಮಾಮಾನ ಹಿಂದೆ ಹಿಂದೆ ಓಡುತ್ತಿದೆ. ಅಂಗಳದಲ್ಲಿ ಅವರಿಬ್ಬರ ಬ್ಯಾಡ್ ಮಿಂಟನ್ ಆಟದ ಕೊನೆಯ ಚರಣ. ಮಬ್ಬುಗತ್ತಲಲ್ಲಿ ಅವಳು ಬೀಸಿ ಹೊಡೆದ ಹೊಡೆತಕ್ಕೆ ಕಾಕ್ ಹಂಚಿನ ಮೇಲೆ ಹೋಗಿ ಬಿದ್ದುಬಿಟ್ಟಿತು. ಈಗ ಅದನ್ನು ಕೆಳಗಿಳಿಸುವ ಆಟ. ಅವನು ಒಂದು ಉದ್ದದ ಕೋಲು ಹಿಡಕೊಂಡು ಎರಡು ಮೂರು ಇಟ್ಟಿಗೆ ಸೇರಿಸಿ ಹತ್ತಿ ನಿಂತು ಕಾಕ್ ನ ಎಳೆದು ಬೀಳಿಸಲು ನೋಡ್ತಿದಾನೆ. ಇವಳು ಕಣ್ಣು ಮೇಲೆ ಮಾಡಿ ಸೂರಂಚಿಗೆ ನಿಂತು, ಬಂತೂ ಬಂತೂ, ಇನ್ನೋಚೂರು ಎಳಿ, ಅಲ್ಲೇ ಸ್ವಲ್ಪ ಬಲಕ್ಕೆ..ಹಾಂ ಹಾಂ ಅಂತಾ ಇದ್ದ ಹಾಗೆ ಆ ಕಾಕ್ ಬಿದ್ದೇ ಬಿಟ್ಟಿತು ಕಿರೀ ಹಿಡಿದು ನೋಡುತ್ತಿದ್ದ ಕಣ್ಣಿನ ಮೇಲೆ ಕಾಕಿನ ಹಿಂಭಾಗ ಬಿದ್ದ ಕೂಡಲೇ ಅಮ್ಮಾ, ಕಣ್ಣೂ ಕಣ್ಣೂ.. ಅಂತ ಕೂಗಿಕೊಳ್ಳುತ್ತ ಕಣ್ಣು ಮುಚ್ಚಿಕೊಂಡು ಓಡಿಹೋಗಿ ಮನೆಮೆಟ್ಟಿಲ ಮೇಲೆ ಕುಕ್ಕರಿಸಿದಳು. ಅವನು ಇಟ್ಟಿಗೆ ಇಳಿದು ಗಡಬಡಿಸಿ ಓಡಿಬಂದ. ಹಿತ್ತಿಲ ಬಾವಿಯಿಂದ ನೀರು ಸೇದುತ್ತಿದ್ದ ಅಮ್ಮ ಓಡಿಬಂದು ಒದ್ದೆ ಕೈಯಲ್ಲೇ ಅವನ ಬೆನ್ನಿಗೊಂದು ಗುದ್ದು ಕೊಟ್ಟು ಏನ್ ಮಾಡಿದ್ಯೋ ಅಕ್ಕಂಗೆ ಅಂತ ಸಿಟ್ಟು ಮಾಡಿ, ಎಂತಾತು ಅಂತ ಕೇಳಿದಳು. ಅವನು ಬೆನ್ನ ಮೇಲಿನ ಗುದ್ದು ಗುದ್ದೇ ಅಲ್ಲ ಅನ್ನೋ ಹಾಗೆ ಅಮ್ಮನ ಹತ್ತಿರ ಅವಳ ಕೈ ಹಿಡಿದುಕೊಂಡು ಕಾಕ್ ಕಣ್ಣಿಗೆ ಬಿದ್ ಬಿಡ್ತಮ್ಮಾ ನಾನೇನೂ ಮಾಡಲ್ಲೆ ಅನ್ನುತ್ತಿದ್ದರೆ, ಕಣ್ಣು ಮುಚ್ಚಿ ಅಳುತ್ತಿದ್ದ ಅಕ್ಕನೂ ಇಲ್ಲ ಅವನೇ ಮಾಡಿದ್ದು ಅಂತ ಹೇಳಬೇಕೆಂದುಕೊಂಡವಳು ಹುಳುಕು ಮಾವಿನ ಮರದ ನೆನಪಾಗಿ, ಹೌದೆಂದು ತಲೆಯಾಡಿಸಿದಳು. ಕತ್ತಲಾದ ಮೇಲೆ ಆಟ ಆಡಡಿ ಅಂದ್ರೆ ಕೇಳಾ ಮಕ್ಳಾ ನೀವು, ಈಗ ಕಣ್ಣಿಗೇನಾದ್ರೂ ಆದ್ರೆ ಅಮ್ಮನಿಗೆ ಆತಂಕ.. ಸ್ವಲ್ಪ ಕೊತ್ತಂಬರಿ ಬೀಜ ನೆನೆಸಿ ಅವಳ ಮುಚ್ಚಿದ ಕಣ್ಣಿಗೆ ಕರ್ಚೀಫಿನಿಂದ ನೀರು ಬಿಟ್ಟು ತಮ್ಮನಿಗೆ ಅದನ್ನು ಹೇಗೆ ಮಾಡುವುದು ಅಂತ ತೋರಿಸಿ ಅಮ್ಮ ಮತ್ತೆ ನೀರು ತುಂಬಲು ಹೋದಳು.

ಅವನ ಹತ್ತಿರ ಒಂದು ಚಂದದ ಪಾಟಿ. ಕಪ್ಪು ಪಾಟಿಯ ಸುತ್ತಲೂ ಕೇಸರಿ ಬಣ್ಣದ ಪ್ಲಾಸ್ಟಿಕ್ ಚೌಕಟ್ಟು. ವಿಶೇಷ ಏನಪಾ ಅಂದ್ರೆ, ಕಲ್ಲು ಕಡ್ಡೀಲಿ ಬರದ್ರೂ ಅಕ್ಷರ ಗುಂಡಕೆ ನೀಟಾಗಿ ಆಗ್ತು ಅದರಲ್ಲಿ. ಇನ್ನು ಬೆಣ್ಣೆ ಕಡ್ಡಿ ವಿಷ್ಯ ಕೇಳದೇ ಬೇಡ. ಅವಳಿಗೆ ಅದರ ಮೇಲೇ ಕಣ್ಣು. ಆದ್ರೇನು ಮಾಡದು ಅದು ಅವ್ನ ಪಾಟಿ. ಅಲ್ದೇ ಅವನಿಗೆ ಇನ್ನೂ ನೋಟ್ ಬುಕ್ಕಲ್ಲಿ ಬರಿಯೋ ಕ್ಲಾಸೂ ಅಲ್ಲ. ಹಂಗಾಗಿ ಅವ್ನು ಅದನ್ನ ಸುಮ್ನೆ ಕೇಳಿದ್ರೆ ಕೊಡದಿಲ್ಲೆ. ಅಂಬಾರ್ ಕಟ್ಟು, ಬೋಟಿ, ಕಾರಕಿತ್ಲೆ ಏನೋ ಇಂತ ಆಸೆ ತೋರ್ಸೇ ಪಾಟಿ ಇಸ್ಕಳಕ್ಕಾಗದು. ಒಂದಿನ ಅವ್ಳು ಅಮ್ಮನ ಹತ್ರ ಹಟ ಮಾಡ್ದ. ಅಮ್ಮಾ ನಂಗೂ ಅದೇ ಪಾಟಿನೇ ಬೇಕು. ಅವನ ಅಕ್ಷರ ಹೆಂಗೂ ಏನಷ್ಟು ಚೆನಾಗಿಲ್ಲೆ. ಅವನಿಗೆ ಬೇರೆ ಪಾಟಿ ಕೊಡ್ಸು ನೀನು. ಅಮ್ಮಂಗೆ ಸಿಟ್ ಬಂತು.
ಎಂತದೆ ನಿಂದು ರಗಳೆ. ಅವನ ಹಳೇ ಪಾಟಿ ಮೇಲೆ ನಿಂದ್ಯಾಕೆ ಕಣ್ಣು. ನಿಂಗೆ ಅಷ್ಟೊಳ್ಳೆ ಲೇಖಕ್ ಬುಕ್ಕಿದ್ದು. ಅವನ ಎಲ್ಲ ಪುಸ್ತಕ, ಚೀಲ, ಪೆನ್ನು, ಕಡ್ಡಿ, ಟೋಪಿ, ಸಾಕ್ಸು ಎಲ್ಲ ನೀನು ಹಾಕಿ ಬಿಟ್ಟಿದ್ದು.. ಅದೊಂದು ಪಾಟಿ ಅವನಿಗೇ ಅಂತ ಕೊಡಿಸಿದ್ರೆ ಅದ್ರ ಮೇಲೆ ಕಣ್ಣಾ ನಿಂದು? ಇದನ್ನೇ ಹುಳುಕು ಬುದ್ದಿ ಅನ್ನದು. ಹುಳುಕು ಬುದ್ದಿ ಮಾಡಿದ್ರೆ ಏನಾಗ್ತು ಗೊತ್ತಿದ್ದಲಾ..
ಅವಳು ತೆಪ್ಪಗಾದಳು. ಹೌದೆನ್ನಿಸಿತು. ಸುಮ್ಮನೆ ಮೂಲೆಯಲ್ಲಿ ಕೂತು ಕೇಳುತ್ತಿದ್ದ ಅವನ ಪಕ್ಕ ಹೋಗಿ ಕೂತು, ಕೈಗೆ ಕೈ ಹೊಸೆದಳು. ತಪ್ಪಾಯಿತೆಂಬಂತೆ, ಸಿಟ್ಟಿಲ್ಲವೆಂಬಂತೆ, ಮತ್ತೆ ಜೊತೆಯಾಗುವಂತೆ. ಅವನು ಎಂದಿನ ನಗೆಮುಖದ ಗುಂಡ..
ಆಟಕ್ಕೆದ್ದ.


ಸಾಬರಂಗಡಿಯ ಪುಟಾಣಿ ಸೈಕಲ್ಲಿಗೆ ಗಂಟೆಗೆ ಐವತ್ತು ಪೈಸೆ ಕೊಟ್ಟು ರಸ್ತೆಯಲ್ಲಿ ತಳ್ಳಿಕೊಂಡು ಹೋಗಿ, ಕಾಂಪ್ಲೆಕ್ಸಿನ ಪಾಗಾರ ಕಳೆದ ಕೂಡಲೆ ಸಿಗುವ ದೊಡ್ಡ ಮೈದಾನದಲ್ಲಿ ಅವರಿಬ್ಬರ ಸೈಕಲ್ ಕಲಿಯಾಟ.. ದೊಡ್ಡಕೆ ಹರಡಿರುವ ಹುಲ್ಲು ಮೈದಾನದಲ್ಲಿ ಎಳೆಬಿಸಿಲಿನ ಸಂಜೆಯಲ್ಲಿ ಪುಟಾಣಿ ಸೈಕಲ್ ಮೇಲೆ ಬ್ಯಾಲೆನ್ಸ್ ಮಾಡುತ್ತ ಅವಳು, ಹಿಂದೆ ಕ್ಯಾರಿಯರ್ ಹಿಡಿದು ಓಡುತ್ತ ಬರುತ್ತಿರುವ ಅವನು.. ಮೈದಾನದಂಚಿಗೆ ಮನೆಗೆ ಹೊರಟಿರುವ ಸೂರ್ಯ, ಬೇಗ ಬೇಗ ಹೋಗಲು ಮನಸ್ಸಾಗದೇ ಅವರಾಟವನ್ನು ನೋಡುತ್ತ ಆ ಎಳೆಮೈಗಳನ್ನು ಬೆಚ್ಚಗಾಗಿಸುತ್ತ ಚೂರು ಚೂರೇ ಮುಳುಗುತ್ತಿದ್ದ.. ಓ ರಾಧಾಕೃಷ್ಣ ಬಸ್ ಬಂತು. ಇನ್ನೇನು ಐದು ನಿಮಿಷಕ್ಕೆ ಟೈಮ್ ಆಗೋಗ್ತು. ಬಾ ಸೈಕಲ್ ವಾಪಸ್ ಕೊಡನ ಅವಳು. ಅಡ್ಡಿಲ್ಲೆ ಬಿಡೇ ನಾನೊಂದು ಲಾಸ್ಟ್ ರೌಂಡ್ ಹೋಗ್ತಿ. ಆಮೇಲೆ ಕೊಡಾನ. ಅವಳಿಗಿಷ್ಟವಿಲ್ಲ. ಆದ್ರೂ ಹೂಂ ಅಂದಳು. ಕೊನೆಯ ಒಂದು ರೌಂಡ್ ಅಂದವನು ಮೂರ್ನಾಕು ರೌಂಡ್ ಮುಗಿಸಿ ಬಂದು ಸೈಕಲ್ ವಾಪಸ್ ಕೊಟ್ಟಾಗ ಗಂಟೆಯ ಮೇಲೆ ಹತ್ತು ನಿಮಿಷವಾಗಿ ಅಂಗಡಿಯವನು ಬಯ್ದ. ಅವಳಿಗೆ ಅವಮಾಆಆಆಆನ. ಅವನು ಏ ಬಿಡೇ ಅದೆಲ್ಲ ಯಾಕೆ ತಲೆಬಿಸಿ.. ದಾರಿಯಲ್ಲಿ ಕಲ್ಪನೆಯ ಬಾಲನ್ನು ಸ್ಪಿನ್ ಬೌಲ್ ಮಾಡುತ್ತ ಕುಣಿಯುತ್ತ ಹೋಗುವ.. ಅವಳು ಮುಖ ದುಮ್ಮಿಸಿಕೊಂಡು ಸುಮ್ಮನೆ ಅವನ ಹಿಂದೆ.

ಹೈಸ್ಕೂಲಿನಲ್ಲಿ ಮಧ್ಯಾಹ್ನದ ಬೆಲ್ ಹೊಡೆದು ಮೊದಲ ಪೀರಿಯಡ್ಡಿಗೆ ಕಾಯುತ್ತ ಕೂತಿದ್ದಾಳವಳು ಹತ್ತನೇ ಕ್ಲಾಸಿನ ಮೊದಲ ಬೆಂಚಲ್ಲಿ. ಇದ್ದಕ್ಕಿದ್ದಂತೆ ಓಡಿಬಂದು ಅವಳ ಕ್ಲಾಸಿಗೆ ನುಗ್ಗಿದವನು ಅವಳ ಮುಂದಿದ್ದ ಜ್ಯಾಮಿಟ್ರಿ ಬಾಕ್ಸ್ ಎತ್ತಿಕೊಂಡು ಓಟ. ಗೊತ್ತವನಿಗೆ ಬೆಲ್ ಹೊಡೆದ ಮೇಲೆ ಅಕ್ಕ ಹೊರಗೆ ತನ್ನನ್ನು ಅಟ್ಟಿಸಿಕೊಂಡು ಬರುವುದಿಲ್ಲ. ಅವಳಿಗೆ ಸಿಟ್ಟು, ಕ್ಲಾಸಿನ ಉಳಿದೆಲ್ಲ ಕಣ್ಣೂ ತನ್ನನ್ನೇ ನೋಡುತ್ತಿರುವ ಎಚ್ಚರದ ಅವಮಾನ..

ಎರಡನೇ ಪಿರಿಯಡ್ ಮುಗಿದು ಮೂರರ ಬೆಲ್ಲಾಗುವಾಗ ಮತ್ತೆ ಓಡುತ್ತ ಬಂದವನು ಬಾಕ್ಸು ಅವಳ ಮುಂದಿಟ್ಟು, ಬಿಎನ್.ಪಿ ಪಿರಿಯಡ್ ಇತ್ತೇ ಮಾರಾಯ್ತಿ. ಗೊತ್ತಿದ್ದಲ ಜಾಮಿಟ್ರಿ ಬಾಕ್ಸಿಲ್ದೇ ಇದ್ರೆ ಏನ್ ಗತಿ ಅಂತ ಅದಕ್ಕೇ... ತುಂಟ ಮುಖದಲ್ಲಿ ಸಮಾಧಾನದ ನಗು ಬೀರುತ್ತ ಮತ್ತೆ ತಿರುಗಿ ಅವನ ಕ್ಲಾಸಿನತ್ತ ಓಡಿ ಹೋದ. ಸಿಟ್ಟೆಲ್ಲ ಇಳಿದು ಹೋಗಿ, ಪಾಪವೆನ್ನಿಸುವಂತೆ. ಸಂಜೆ ಸ್ಕೂಲು ಬಿಟ್ಟ ಕೂಡಲೇ ಕೆರೆ ಏರಿ ಮುಗಿದು ರೈಲ್ವೆ ಹಳಿ ದಾಟಿದ ಕೂಡಲೆ ಡಬ್ಬಲ್ ರೈಡು. ಅವಳು ಉದ್ದ ಅಕ್ಕ ಅವನು ಪುಟ್ಟ ತಮ್ಮ.

ಇಲ್ಲಿ ನಿಂತರೆ ಟಿಪ್ಪೂ ಸುಲ್ತಾನ್, ಇಲ್ಲಿ ನಿಂತರೆ ಮದಕರಿ ನಾಯಕ.. ಅವನು ಪುಟ್ಟ ಮುಖದ ಮೇಲಿನ ದೊಡ್ಡ ಮೀಸೆಯಡಿಯಿಂದ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಗರ್ಜಿಸುತ್ತಿದ್ದ..ಮನೆಯ ಕಪಾಟು ತುಂಬ ಪುಟ್ಟ ಪುಟ್ಟ ಬಹುಮಾನದ ಕಪ್ಪುಗಳು. ಅವಳು ಕಪಾಟಿನ ಹೊರಗೆ ನೋಡುತ್ತ ನೋಡುತ್ತ..

ವರ್ಷಗಳುರುಳಿದಂತೆಲ್ಲ ಬದುಕಿನ ಏಕಪಾತ್ರಾಭಿನಯದಲ್ಲಿ ಇಬ್ಬರಿಗೂ ಅವರವರದ್ದೇ ಪಾಲು. ಅವನು ಒಬ್ಬಳೆ ನಿಂತ ಅಕ್ಕನಿಗೆ ಅಣ್ಣನಾಗಿ,ಗೆಳೆಯನಾಗಿ,ಅಪ್ಪನಾಗಿ,ಟೀಚರ್ರಾಗಿ.. ಅವಳು ಬೆಳೆಯುವ ತಮ್ಮನಿಗೆ ಅಮ್ಮನಾಗಿ, ಗೆಳತಿಯಾಗಿ, ತಂಗಿಯಾಗಿ, ಸ್ಟೂಡೆಂಟಾಗಿ.. ಅವನ ಮಾರ್ಕೆಟಿಂಗ್ ಟೆಕ್ನಿಕ್ಸುಗಳಿಗೆ ಬಕ್ರಾ ಆಗಿ..ಅವನು ಅವಳ ಕತೆಗಳಿಗೆ ಬೋಲ್ಡಾಗಿ.. ಅವಳ ಕಣ್ಣೀರ ಕ್ಷಣಗಳಿಗೆ ಅವನು ಮೌನ ಸ್ಪಂದನವಾಗಿ, ಅವನ ದುಗುಡದ ಕ್ಷಣಗಳಲ್ಲಿ ಅವಳು ಪದಗಳನ್ನು ಹೆಣೆಯದ ಖಾಲಿ ಗೆರೆಯಾಗಿ, ಜೀಟಾಕಿನಲ್ಲಿನ ಪ್ರೈಂ ಕಾಂಟ್ಯಾಕ್ಟುಗಳಾಗಿ.. ನೆಮ್ಮದಿಯ ದಿನಗಳ ನಲಿವಿನ ಪಂಚ್ ಲೈನಾಗಿ..ದಿನದಿನದ ಪಯಣದಲ್ಲಿ ಜತೆಯಾಗಿ, ವೀಕೆಂಡಿನ ಟ್ರೆಕ್ಕುಗಳಲ್ಲಿ ಒಬ್ಬರಿನ್ನೊಬ್ಬರಿಗೆ ಗೈಡಾಗಿ, ಕ್ಯಾಮೆರಾ ಕಣ್ಣಾಗಿ. ಒಂದೇ ಜೀನ್ಸು ಕೇಪ್ರಿ ಇಬ್ಬರಿಗೂ ಬರುವಷ್ಟು ಬೆಳೆದ ಜೀವಗಳಾಗಿ, ಅವಳ ಬರಹಗಳಿಗೆ ಅವನು ಮೈಕ್ರೋಸ್ಕೋಪಾಗಿ, ಅವನ ಅಭಿನಯಕ್ಕೆ ಅವಳು ಬೆರಗಿನ ನೋಡುಗಳಾಗಿ.. ಅವಳ ಸಹಾಯಕ್ಕೆ ಅವನು ಪ್ರೀಮಿಯಂ ಆಗಿ, ಅವನ ನೆರವಿಗೆ ಅವಳು ಸೆಕ್ಯೂರಿಟಿಯಾಗಿ...ನಿಂತು ನೋಡಿದಲ್ಲೆಲ್ಲ ಹಲವು ಹನ್ನೆರಡು ಪಾತ್ರಗಳು.

ಅವನು ಉದ್ದಕೆ ದೊಡ್ಡಕೆ ಅಣ್ಣನಂತಿರುವ ತಮ್ಮ. ಅವಳು ಕುಳ್ಳಕೆ (ಸ್ವಲ್ಪೇ ಸ್ವಲ್ಪ ಡುಮ್ಮಕೆ) ತಂಗಿಯಂತಿರುವ ಅಕ್ಕ..
ಅಮ್ಮ ಬಾಗಿಲವಾಡಕ್ಕೆ ಒರಗಿ ನಿಂತು, ಬೈಕು ಹತ್ತಿ ಕುಳಿತ ಅವರ ನೋಡಿ ನಸುನಗೆ ಬೀರುತ್ತಾಳೆ; ಈ ಪಯಣಕ್ಕೆ ಹುಳುಕಿನ ಸೋಂಕಿಲ್ಲ..
ಎಲ್ಲೋ ಇದ್ದಿರಬಹುದಾದ ಕಸರನ್ನೂ ಹಿಂಡಿ ತೆಗೆದ ಅಮ್ಮನ ನೆರಳ ಹಾದಿ..

Tuesday, December 4, 2007

ಮಂಜು..

ಕಣ್ಣು ಮಂಜಾಗಿದೆ..

ನಿಟ್ಟಿಸಿ ನೋಡಿದಾಗ
ದಟ್ಟವಾಗಿ ಕಂಡಿದ್ದ ಹಸಿರುಗುಡ್ಡದ
ಹೊರಮೈ ನೋಟವೂ ಗೊತ್ತಾಗದ ಹಾಗೆ


ಅವತ್ತು ಮಳೆನಿಂತ ಸಂಜೆ
ನೋಟಕ್ಕೇ ರಂಗೇರಿದ್ದ ಕೆನ್ನೆ ಕೆಂಪು ಕರಗಿ
ನಿನ್ನ ಗುರುತೂ ಹಿಡಿಯದ ಹಾಗೆ


ಬರೆದು ಬರೆದು ರಾಶಿ ಹಾಕಿದ
ಕಾಪಿ ಪುಸ್ತಕದ ಪುಟ್ಟ ಕೊಂಕು ತಿದ್ದಿದ ಕಣ್ಣು
ಪೇಪರಿನ ಹೆಡ್ ಲೈನ್ಸ್ ಓದಲು ತಡಬಡಿಸುವ ಹಾಗೆ


ಮಳೆಹನಿವ ಮಧ್ಯಾಹ್ನ
ಕಿಟಕಿಯಾಚೆಗೆ ಕಂಡ ಹಸಿರ ಮಧ್ಯದ ಹಳದಿ
ಕಂದಿದ ಹಾಗೆ..


ಗೋಡೆ ಕುಸಿದ ಹಾಗೆ
ನೆರಳು ಕವಿದ ಹಾಗೆ


ಪುಟ್ಟದೊಂದು ಹೊಸ್ತಿಲೂ ದೊಡ್ಡ ಸಂಕದ ಹಾಗೆ
ಜಗುಲಿ ಅಂಗಳ ಮನೆಯಾಚೆಗಿನ ಮೈದಾನವೆಲ್ಲ ಒಂದಾದ ಹಾಗೆ


ಸುತ್ತ ಇರುವುದೆಲ್ಲ ಇಲ್ಲದ ಹಾಗೆ
ಎಲ್ಲೂ ಇಲ್ಲದ ಯಾರೋ ಸುಳಿದಾಡಿದ ಹಾಗೆ


ಹೀಗೆ..
ಮಂಜಾಗಿದೆ
ಕಣ್ಣು,ಮನಸ್ಸು,ಬುದ್ಧಿ
ಹೊರಗೆ ಕಂಡಿದ್ದೊಂದು,
ಕಾಣಬಯಸುವುದೊಂದು
ಒಳಗೆ ಪ್ರತಿಫಲಿಸುವುದೇ ಇನ್ನೊಂದು..


ಒಂದು ಸಂತಸವೆಂದರೆ
ಮಂಜುಗಣ್ಣಿಗೆ ಕಂಡೂ ಕಾಣದೆಯೂ
ನೀನಿದ್ದೀಯ ಜತೆಗೆ
ಹೆಜ್ಜೆ ಎಡವದ ಹಾಗೆ
ಕಾಣದ್ದೆಲ್ಲವೂ ಕಾಣಿಸುವ ಹಾಗೆ!

Wednesday, November 21, 2007

ಕ್ಷಮಿಸು ಅನಘಾ...

ಕ್ಷಮಿಸು ಅನಘಾ,

ನಂಗೆ ನಿನ್ನ ಹುಟ್ಟಿಸೋದಿಕ್ಕೆ ಧೈರ್ಯವಿರಲಿಲ್ಲ.
ತುಂಬ ಇಷ್ಟವಿತ್ತು ಆದರೆ ಮನಸ್ಸಿರಲಿಲ್ಲ.
ನನಗೆ ನೀನು ಬೇಕೇಬೇಕಿತ್ತು ಆದರೆ ನನ್ಕೈಲಿ ಸಾಧ್ಯವಿರಲಿಲ್ಲ.

ನಿನ್ನ ಸ್ಪಂದನಗಳಿಗೆ ನಾನು ತುಂಬ ವರ್ಷಗಳಿಂದ ಆಸೆಯಿಂದ ಕಾದಿದ್ದಕ್ಕೋ ಏನೋ ಅಥವಾ ನನ್ನ ಕನಸುಗಳೆಲ್ಲಾ ನಿನ್ನ ಬಣ್ಣಗಳಿಂದಲೇ ಮಿರುಗುತ್ತಿದ್ದುದಕ್ಕೋ ಏನೋ, ನೀನು ನಿಜವಾಗಿ ಮೊಳಕೆಯೊಡೆದಾಗ ನಾನು ಅಧೀರಳಾಗಿಬಿಟ್ಟೆ. ಕತ್ತಲ ಕಣಿವೆಯ ಹಾದಿಯಲ್ಲಿದ್ದ ನಾನು ನಿನ್ನ ತುಂಬು ಬೆಳಕಿಗೆ ಹೆದರಿಬಿಟ್ಟೆ.

ನಾನು ಜನಕ್ಕೆ ಹೆದರಿರಲಿಲ್ಲ ಅನಘಾ, ನಿನ್ನ ಅಪ್ಪನನ್ನು ಮುತ್ತುವ ಕತ್ತಲೆಗೆ ಹೆದರಿದ್ದೆ. ಅವನಿಲ್ಲದ ಬದುಕು ನನಗೆ ಬೇಕಿರಲೇ ಇಲ್ಲ. ನೀನು ಅಪ್ಪ, ಅಮ್ಮ ಇಬ್ಬರೂ ಇಲ್ಲದ ಇನ್ನೊಂದು ಮಗುವಾಗುವುದನ್ನು ನಾನು ಕಲ್ಪಿಸಲೂ ಅಸಾಧ್ಯವಿತ್ತು.

ಬರೀ ಚಿಗುರಾಗಿದ್ದ ನಿನಗೆ ಆಗ ನನ್ನ ಸ್ಪಂದನಗಳಷ್ಟೇ ಗೊತ್ತಾಗುತ್ತಿತ್ತು ಅಲ್ಲವಾ? "ಛಿ ಕಳ್ಳಿ' ಎಂದರೆ ಇನ್ನೂ ಮೂಡಿರದಿದ್ದ ನಿನ್ನ ಕಿವಿ _ "ಇನ್ನಷ್ಟು. . ಮತ್ತಷ್ಟು .. ಮಾತಾಡು" ಅಂತ ತೆರೆದುಕೊಳ್ಳುತ್ತಿತ್ತು, ನನ್ನ ಕಣ್ಣೀರು ಧಾರೆಯಾಗಿ "ಪಾಪೂ ಸಾರಿ " ಅಂತ ನಾನು ಹಲುಬುತ್ತಿದ್ದರೆ, ಇನ್ನೂ ಅರಳಿರದಿದ್ದ ನಿನ್ನ ಕಣ್ಣು ಒದ್ದೆಯಾಗುತ್ತಿತ್ತು ಅಲ್ಲವಾ? ನಂಗೊತ್ತು ಅನಘಾ.. ಸ್ವಲ್ಪೇ ದಿನಗಳೇ ಆಗಿದ್ರೂ ನಾನು ಅಮ್ಮನಾಗಿದ್ದೆ.

ಆತಂಕ ಉಸಿರುಗಟ್ಟಿಸಿದ್ದರೂ ಆ ದಿನಗಳಲ್ಲಿ ಅದೇನೋ ಜಾದೂ ಇತ್ತು. ಅಂತಿಂಥದಲ್ಲ. ಆಗ ಬದುಕು ಉರಿದು ಬೂದಿಯಾಗಿಸುವಷ್ಟು ಬೇಸರದ ಉರುವಲಿತ್ತು, ಕುಡಿಯಲು ಕಣ್ಣೀರಿತ್ತು, ತಿನ್ನಕ್ಕೆ ನಿರಾಶೆಯಿತ್ತು, ಮಲಗಲು ತಳಮಳದ ಹಾಸಿಗೆ, ಹೊದೆಯಲು ಸಂಕಟ. ನಡೆದಾಡುತ್ತಿರುವುದು ನನ್ನದಲ್ಲ ಬೇರೆಯಾರದೋಕಾಲು ಎಂಬ ಅಸಡ್ಡಾಳತನವಿತ್ತು. ಈ ಎಲ್ಲದರ ಮಧ್ಯೆಯೂ ಪುಟ್ಟ ಮಕ್ಕಳ ಕುಲುಕುಲು, ಚಿತ್ತಾರದ ಮೋಡ, ಮಿನುಗುವ ನಕ್ಷತ್ರ , ಮಳೆಹನಿಯ ಹಾಡು, ಹಕ್ಕಿಯ ಚಿಲಿಪಿಲಿ, ಬಿಳಿಗಡ್ಡ, ಸುಕ್ಕುಮೋರೆಯ ಅಜ್ಜ ಅಜ್ಜಿಯರ ನಗು ಇದೆಲ್ಲಾ ನೋಡಲು ಸಾಧ್ಯವಾಗಿದ್ದು ನಿನ್ನ ಜಾದೂವಿನಿಂದ, ಎದೆಗೊತ್ತಿಹಿಡಿದು ತಲೆನೇವರಿಸಿದ ನಿನ್ನಪ್ಪನ ಕಣ್ಣಿನಿಂದ ಅನಘಾ. ನಾವಿಬ್ಬರೂ ಈ ಜಾದೂ ನೋಡಿ ಮುದಗೊಂಡಿದ್ದು ನಿನ್ನ ಪ್ರಭಾವಳಿಯಿಂದ.

ಅಷ್ಟೇ ಅಲ್ಲ ಅನಘಾ...
ನಮಗೆ ಬದುಕಬೇಕು ಅನ್ನಿಸಿತ್ತು! ! !

ನಿನ್ನ ಪುಟ್ಟ ಬೆರಳು ಹಿಡಿದು ಹೆಸರಿರದ ಹಸಿರು ಬಯಲಲ್ಲಿ - ಕಾಲು ಸೋಲುವವರೆಗೆ, ನಿನ್ನಪ್ಪನಿಗೆ ನಿದ್ದೆಗಣ್ಣಾಗುವವರೆಗೆ, ನಿದ್ದೆಯಲ್ಲೂ ನಗುವ ನಿನ್ನ ಕೆನ್ನೆಗಳ ಮೇಲೆ ಚುಕ್ಕಿಗಳ ಬೆಳಕು ಪ್ರತಿಫಲಿಸುವವರೆಗೆ. . . . ನಡೆಯುತ್ತಿರಬೇಕು . . . . ಯಾವಾಗಲೂ ಅನ್ನಿಸಿತ್ತು. ಕನಸು ಚೆಂದವಿತ್ತು ಅನಘಾ ಆದರೆ ವಾಸ್ತವ ಹೆದರಿಕೆ ಹುಟ್ಟಿಸುತ್ತಿತ್ತು. ಒಲೆ ಉರಿಯುವಲ್ಲಿ ಬೀಜಬಿತ್ತಿ ನೀರೆರದದ್ದು ನಂದೇ ತಪ್ಪು ಅನಘಾ, ಈ ನನ್ನ ಮೂರ್ಖತನವನ್ನು ದಯವಿಟ್ಟು ಕ್ಷಮಿಸು.

ನಿನ್ನ ಕಳೆದುಕೊಳ್ಳಲೇಬೇಕು ಅಂತ ತೀರ್ಮಾನಿಸಿದ ದಿನ ಅನಘಾ .. . ನಾನು, ನಿನ್ನಪ್ಪ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ತಮಾಷೆ ಮಾಡಿಕೊಂಡು ನಗುತ್ತಿದ್ದೆವು. ಎಂದೂ ಇಲ್ಲದಷ್ಟು ಮಾತಾಡಿದ್ದೆವು. ಸುಮ್ಮನಿದ್ದರೆ ಎಲ್ಲಿ ಇನ್ಯಾವತ್ತೂ ಮಾತಾಡುವುದಿಲ್ಲವೋ, ನಗದಿದ್ದರೆ ಉಕ್ಕಿಬರಲೆತ್ನಿಸುತ್ತಿರುವ ಅಳುವಿನಲ್ಲಿ ಎಲ್ಲಿ ಕೊಚ್ಚಿ ಹೋಗುತ್ತೀವೋ ಅನ್ನುವ ಹೆದರಿಕೆಯಿಂದ. ನನಗೆ ಬೇಜಾರಾಗಿದೆ ಅಂತ ಅವನಿಗೆ ಗೊತ್ತಿತ್ತು, ಅವನು ಮುದುಡಿಹೋಗಿದ್ದ ಅಂತ ನನಗೆ ಗೊತ್ತಿತ್ತು. ಇಬ್ಬರಿಗೂ ಇದು ಗೊತ್ತಿದ್ದೂ ಗೊತ್ತಿಲ್ಲದ ಹಾಗೇ. . . ಇದ್ದೂ ಇಲ್ಲದ ಹಾಗೆ ಇದ್ದೆವಮ್ಮಾ,

ಮಡಿಕೇರಿಯ ಮಂಜು ಹೊದ್ದ ಕಾನು ತುಂಬ ಚಂದವಿತ್ತು. ಜಿಟಿಜಿಟಿ ಹನಿಯುತ್ತಿದ್ದ ಮಳೆಯಂತೂ ಆಕಾಶಕ್ಕೂ ಭೂಮಿಗೂ ಮಧ್ಯೆ ಸಡಗರದ ಪಯಣದ ಮೋಜಲ್ಲಿ ಮುಳುಗಿತ್ತು. ಆದಿನ ಉಂಹೂಂ ರಾತ್ರೆ ಅಥ್ವಾ ಸಂಜೆ ಅಥ್ವಾ ಬೆಳಿಗ್ಗೆಮುಂಚೆ. .. ಇಲ್ಲ ಬಹುಶಃ ಮಧ್ಯಾಹ್ನ .. ... ಯಾವಾಗ ಮರೀ ನೀನು ಹುಟ್ಟಿದ್ದು?

ಸತ್ಯಕ್ಕೂ ಅನಘಾ ಅದಾಗಿ ತಿಂಗಳಮೇಲೆ ನೀನು ಹುಟ್ಟಿರಬಹುದು ಎಂಬ ಮೊದಲ ಸಂಶಯ ನನಗೆ ಬಂದಾಗ ಮೊದಲು ಉಂಟಾಗಿದ್ದು ಸಂಭ್ರಮ ಅನಘಾ. ಆವತ್ತು ಬೆಳಿಗ್ಗೆ ನಿಧಾನವಾಗಿ ಓಡಾಡಿದೆ, ಹಾಲು ನಾನೇ ಕೇಳಿ ಕುಡಿದೆ. ಹೊಟ್ಟೆ ತುಂಬ ಊಟಮಾಡಿದೆ. ಆಫೀಸಿಗೆ ಜಂಭದಿಂದ ಹೊರಟೆ. ಅಷ್ಠೇ ಅನಘಾ ಅಲ್ಲಿವರೆಗೂ ಅದೆಲ್ಲಿ ಅಡಗಿಕೊಂಡಿತ್ತೋ ನನ್ನ ಹೆದರಿಕೆಯ ಭೇತಾಳ, ಆಮೇಲೆ ಬೆನ್ನು ಬಿಡಲೇ ಇಲ್ಲ. ಇವತ್ತಿಗೂ ಬಿಟ್ಟಿಲ್ಲ ಅನಘಾ, ನಾನು ಹಗುರಾಗಿ ನಿಂತ ಯಾವ ಕ್ಷಣವಿದ್ದರೂ ಬಂದು ತೆಕ್ಕೆಹಾಕಿಕೊಳ್ಳುತ್ತದೆ.

ತುಂಬ ವರ್ಷಗಳಿಂದ ನಿನ್ನ ಚೆಂಬೆಳಕಿಗೇ ಕಾದಿದ್ದೆ ಅನಘಾ, ಆದರೆ ನಿನ್ನ ಬೆಳಕಿಗೆ ನಾನು ಮನೆಯಾಗದೇ ಹೋದೆ. ನಾನು ತುಂಬ ಹಂಬಲಿಸಿದ್ದ ನಿನ್ನನ್ನ, ಧೈರ್ಯ ಸಾಲದೇ ಹೊರದಬ್ಬಿದ್ದಕ್ಕೆ ಕ್ಷಮಿಸು ಪುಟ್ಟೀ.. ನನಗೆ ನಿನ್ನ ಮಾತು ಕಿತ್ತುಕೊಳ್ಳುವವರ ಹೆದರಿಕೆಯಿತ್ತು. ನಿನ್ನ ನಗುವನ್ನು ಕಸಿಯುವವರ ಭಯವಿತ್ತು. ನಿನ್ನ ಸಂತಸಗಳಿಗೆ ಕಿಚ್ಚಿಡುವವರ ಅಂಜಿಕೆಯಿತ್ತು. ನಿನ್ನನ್ನೆತ್ತಿ ಲಾಲಿಹಾಡಲು ಕಾಯುತ್ತಿದ್ದ ನಿನ್ನಪ್ಪನ ದನಿಯನ್ನು ಅವರು ಅಡಗಿಸುತ್ತಿದ್ದರು; ಅವನ ಕಣ್ಣ ಬೆಳಕನ್ನವರು ನಂದಿಸುತ್ತಿದ್ದರು, ನಿನ್ನ ನೋಡಲು ನಂಗೆ ಕಣ್ಣೇ ಇರುತ್ತಿರಲಿಲ್ಲವಲ್ಲಾ ಪುಟ್ಟೀ, ನಿನ್ನ ಬೆರಳನ್ನು ಹಿಡಿಯಹೊರಟ ನನ್ನ ಕೈಯನ್ನವರು ಕಟ್ಟುತ್ತಿದ್ದರು, ನನ್ನ ಅರಿವಿನಾಚೆಯ ಲೋಕದಲ್ಲಿ ನನ್ನ ಕೂಡಿಹಾಕುತ್ತಿದ್ದರು. ನಾನು ಎಂದಿಗೂ ಅಮ್ಮನೇ ಆಗುತ್ತಿರಲಿಲ್ಲ.

ನಾನು, ನಿನ್ನಪ್ಪ ತುಂಬ ಬಯಸಿದ ನಿನ್ನನ್ನ,
ನಮ್ಮ ಬದುಕಿನ ಬೆಳದಿಂಗಳನ್ನ
ನಿನ್ನ ಇರುವಿಕೆಯನ್ನ
ನಿಯಂತ್ರಿಸಿದ ಕೈ ನಮ್ಮದಾಗಿರದೇ ಇನ್ಯಾರದ್ದೋ ಆಗಿದ್ದು ತುಂಬ ಅನ್ಯಾಯ ಅನಘಾ.

ಯಾರದೋ ನಿಯಂತ್ರಣಕ್ಕೆ ಸಿಕ್ಕಿ ನಿನ್ನ ಕಳೆದುಕೊಂಡಾಗ ನಾವಿಬ್ಬರೂ ಅಸಹಾಯಕ ಭಿಕಾರಿಗಳಾಗಿಬಿಟ್ಟಿದ್ದೆವು. ಅನಘಾ, ನೀನು ಹೋದಾಗಿನಿಂದ ನಮ್ಮನ್ನು ಕವಿದು ನಿಂತ ಕತ್ತಲೆಗೆ ಕೊನೆಯೇ ಇಲ್ವೇನೋ ಅನ್ನಿಸಿದೆ.
ಕಗ್ಗತ್ತಲ ಧ್ರುವದಲ್ಲಿ ನಿರಾಶೆಯ ಹಿಮದಲ್ಲಿ ಹೆಪ್ಪುಗಟ್ಟುತ್ತಿದ್ದೀವಿ.

ನೀನಿದ್ದ ದಿನಗಳ ಜಾದೂವಿನ ಒಂದೇ ಒಂದು ಅಂಶ ಎಲ್ಲೋ ಮೂಲೆಯಲ್ಲಿ ಅಡಗಿ ಕುಳಿತಿದೆ. ಆಗಾಗ ಕತ್ತಲು ಕವಿದ ಆಕಾಶದಲ್ಲಿ ಫಳ್ಳೆಂದು ಮಿಂಚಿ ಮರೆಯಾಗುತ್ತದೆ. ಪಿಸುನುಡಿಯುತ್ತದೆ. " ಕೃಷ್ಣಪಕ್ಷ ಮುಗಿದ ಕೂಡಲೇ ಅನಘಾ ಬರ್‍ತಾಳೆ " ಅಂತ.
ಹೌದಾ ಅನಘಾ? ಈ ಕೃಷ್ಣಪಕ್ಷ ಮುಗಿಯುತ್ತಾ? ನಿನ್ನಪ್ಪನಿಗೆ ತುಂಬ ದಿಗಿಲು."ಇಲ್ಲಿ ಎಷ್ಟು ಕತ್ತಲೇಂದ್ರೆ ಅನಘಾ ಅಕಸ್ಮಾತ್ ಬಂದ್ರೂ ನಾವು ಕಾಣಿಸ್ತೀವಾ" ಅಂತ. ಮರುಗಳಿಗೇಲಿ ಅವನೇ ಸಮಾಧಾನ ಮಾಡಿಕೊಳ್ಳುತ್ತಾನೆ. "ಅವಳು ಬೆಳದಿಂಗಳಲ್ವಾ, ನಮಗಂತೂ ಕಾಣಿಸುತ್ತಾಳೆ" ಅಂತ.

ಒಂದು ಬಾರಿ ಸುರಿದ ನಿನ್ನ ಧಾರೆಯನ್ನ ಹಿಡಿದಿಡಲಾಗದ ಅಸಹಾಯಕತೆ ನನ್ನ ಮಂಜುಗಟ್ಟಿಸಿದೆ ಅನಘಾ. ಇಲ್ಲಿ ಬಿಸಿ ಇರುವುದು ಒಂದೇ - ಕಣ್ಣೀರು.

ನಿನ್ನ ಅಮ್ಮನಾಗಲಾರದವಳು.
(ಕೊನೆಯ ಮಾತು - ಕ್ಷಮೆಯಿದೆಯೇ?.. ಇಲ್ದೇ ಇದ್ರೂ ಪರವಾಗಿಲ್ಲ, ಇದೆ ಅಂತ ಹೇಳು ಸಾಕು)

Tuesday, November 6, 2007

ಮಾತು-ಮೌನ

ಹುಲುಸಾಗಿ ಬೆಳೆದ ಮಾತಿನ ಬೆಳೆ,
ಭೂಮಿ ಹುಣ್ಣಿಮೆ ಕಳೆದು,
ಭೂರೆ ಅಭ್ಯಂಜನ ಸುರಿದು,
ಮಾಗಿಯ ಇಬ್ಬನಿಯ ಮೆದ್ದು,
ಸಂಕ್ರಮಣದ ಎಳೆಬಿಸಿಲ ಹೊದ್ದು
ಕಾಯುತ್ತ ಕೂತಿತ್ತು
ನಿನ್ನ ನಲುಮೆಯ ಕೊಯ್ಲಿಗೆ


ನೀನ್ಯಾಕೆ ಕೊಯ್ಲು ಬೇಸರವುಕ್ಕಿ
ಸುಮ್ಮನೆ ಕತ್ತರಿಸಿ
ಕಾಳೊಕ್ಕದೆ
ಮೌನ ಬಿತ್ತಿಬಿಟ್ಟೆ?!


ಇನ್ನೂ ಮಳೆಯ ಹದ ಕಾಣದ
ಬಿರುನೆಲದಲ್ಲಿ
ಬಿಮ್ಮಗೆ ಮೊಳಕೆಯೊಡೆದ ಮೌನ
ಒಕ್ಕದೇ ಹೋಗಿ
ಎಲ್ಲ ಕಾಳೂ ಜೊಳ್ಳಾಗಿ
ಮಾತು ಸಸಾರವಾಗಿ
ಕೇಳುವವರಿಲ್ಲದೆ ಬಿದ್ದು
ನಿದ್ದೆ ಎಚ್ಚರದ ನಡುವಿನ ಪಯಣ


ದೀಪಾವಳಿಯಂತೆ, ಹೊಸವರ್ಷ, ಹೊಸಬದುಕಂತೆ,
ನಿನ್ನ ಜೊತೆಬೆಳಕಿಲ್ಲದೆ ಇನ್ಯಾವ ದೀಪವಿದ್ದರೇನಂತೆ..?!


ಹೋಗಲಿ ನಸುನಗುವೊಂದೆರಡ ಬಿಸಾಕು
ನಿನ್ನ ನಲ್ದನಿಯ ಜೊತೆಯಿಲ್ಲದ
ಬೆಂದ ಮನಸಿಗಿಷ್ಟು ತಂಪು ಸೇಚನ..


--------------------
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ..
(ಜಿ.ಎಸ್.ಎಸ್ ಅಥವಾ ಕಣವಿಯವರ ಸಾಲು, ಯಾರದೆಂದು ಸರಿಯಾಗಿ ಗೊತ್ತಿಲ್ಲ)

Monday, November 5, 2007

ಮಗುಗಳ ಮಾಣಿಕ್ಯ

ಈ ಕತೆಯೊಳಗಿನ ಮಾಣಿಕ್ಯ ಈಗ ತಾನೇ ನಂಗೆ ಫೋನಲ್ಲಿ ಹೆಚ್ಚೂ ಕಮ್ಮಿ 10 ವರ್ಷಗಳ ನಂತರ ಮಾತಾಡಕ್ಕೆ ಸಿಕ್ಕಿದ. ಸಿಗಲು ಕಾರಣವಾದ ಭಾರತತ್ತೆಗೆ, ಅವನು ಅಲ್ಲಿಗೆ ಬರಲು ಕಾರಣವಾದ ಅವನ ಪ್ರಾಜೆಕ್ಟಿಗೆ..ಬಿಲಿಯನ್ ಥ್ಯಾಂಕ್ಸ್.

ದೀಪಾವಳಿಯ ರಜೆ ಕಳೆದು ವಾಪಸ್ ಬೆಂಗಳೂರಿಗೆ ಬಂದ ಕೂಡಲೇ ಅವನ ಮನೆಗೆ ಓಡಿ ಹೋಗುವವಳಿದ್ದೇನೆ.. ಅವನು ಈ ವರ್ಷ ಎಸ್ಸೆಸ್ಸೆಲ್ಸಿ.. :) ಉದ್ದ್ ದ್ದ್ ದ್ದಾಆಆಆಆಅಕ್ಕೆ ಬೆಳೆದಿದಾನಂತೆ.. !

ಫಲೂಡ ಎಲ್ಲಿರಬಹುದು.. ನಮ್ಮನೇಲಂತೂ ಒಂದು ಜೋಕಾಲಿಯಿದೆ.. :)

Wednesday, October 31, 2007

ಮಕ್ಕಳೆಂಬ ಮಾಯಾದೀಪ..

ಸುಜಯ್ ಈ ಬರಹ ನಿಮಗೇ! ಈಗ ಒಂಚೂರು ನಗಿ ನೋಡೋಣ... :)

ಅವಳು ಕುಳ್ಳಗಿದ್ದಳು. ಅಲ್ಲಿದ್ದವರೆಲ್ಲಾ ಕುಳ್ರೆ.. ಕನ್ನಡ ಶಾಲೆಯ ಐದನೇ ಕ್ಲಾಸಿನ ಮಕ್ಕಳು. ಮುಂದಿನ ಎರಡು ಸಾಲು ತುಸು ಕುಳ್ಳಗಿದ್ದ ಮಕ್ಕಳಿಗೆ, ಹಿಂದಿನ ಸಾಲುಗಳು ಉದೂದ್ದವರಿಗೆ.ಅವಳು ಮುಂದಿನ ಸಾಲಿನ ಮುಂದಿನ ಹುಡುಗಿ. ತುಂಬ ಮೆದು ಮತ್ತು ವಿನಾಕಾರಣ ಗಾಬರಿಗೊಂಡುಬಿಡುವವಳು. ದೊಡ್ಡ ದೊಡ್ಡ ಕಣ್ಣು, ಉದ್ದ ಜಡೆಗಳು, ಬಣ್ಣ ಬಣ್ಣದ ಫ್ರಾಕು ಬಂಗಾರದ ಬಳ್ಳಿಯ ಹಾಗೆ ಕಂಡವಳಿಗೆ ಸ್ವರ್ಣಲತಾ ಅಂತ ಅಪ್ಪ ಅಮ್ಮ ಹೆಸರಿಟ್ಟಿದ್ದರು.

ನಮ್ಮ ಉದ್ದೂದ್ದ ಮಕ್ಕಳಿಗೆ ಪಾಪದವಳ ಹಾಗಿರುವ ಸ್ವರ್ಣಲತಾ ಆಟಕ್ಕೆ ದಾರಿ. ಒಂದಿನ ಅವಳು ತುಂಬ ಸೀರಿಯಸ್ಸಾಗಿ ಜಾಸ್ತಿ ಟೈಮ್ ತಗೊಂಡು ಟೀಚರ್ ಕೊಟ್ಟ ಅಭ್ಯಾಸ ಬರೆಯುತ್ತಿದ್ದರೆ, ಹಿಂದೆ ಕುಳಿತ ಗೆಳತಿಯರು ಬೇಗ ಬೇಗ ಬರೆದು ಮುಗಿಸಿ, ಪಾಟಿಚೀಲದಲ್ಲಿದ್ದ ಯಾವುದೋ ದಾರದೆಳೆ ತೆಗೆದು ಅದರ ತುದಿಗೆ ಕಲ್ಲಿನಕಡ್ಡಿ ಮತ್ತು ಮುರಿದು ಹೋಗಿದ್ದ ಪ್ಲಾಸ್ಟಿಕ್ ಕ್ಲಿಪ್ಪು ಕಟ್ಟಿ ಇನ್ನೊಂದು ತುದಿಯನ್ನ ಸ್ವರ್ಣಳ ತೂಗಾಡುವ ಜಡೆಗೆ ಕಟ್ಟಿದರು. ಸ್ವರ್ಣ ಅರ್ಧ ಗಾಬರಿ ಅರ್ಧ ಯೋಚನೆಯಲ್ಲಿ ಬರೆಯುತ್ತ ಕೂತಿದ್ದಾಳೆ ಗೊತ್ತೇ ಆಗಿಲ್ಲ.

ಹೊರಗೆ ಪಕ್ಕದ ಕ್ಲಾಸಿನ ಟೀಚರನ್ನು ಮಾತಾಡಿಸಲು ಹೋಗಿದ್ದ ಶುಭಾವತಿ ಟೀಚರ್, ಮುಗಿಸಿದ್ರಾ ಅಂತ ಕೇಳ್ತಾ ಬಂದವರು ಮೊದಲು ಸ್ವರ್ಣನ್ನೇ ಕರೆದರು. ಮುಂದಿನ ಬೆಂಚಿನ ಮೊದಲ ಹುಡುಗಿ. ಅವಳು ಡಯಾಸ್ ಹತ್ತಿರ ಹೋಗುತ್ತಿದ್ದ ಹಾಗೆ ಕಿಸಿಕಿಸಿ ನಗು; ಮೊದಲು ಭಾಗ್ಯ ಬಾಯಿಗೆ ಕೈ ಅಡ್ಡ ಹಿಡಿದು ನಕ್ಕರೆ, ಹಿಂದೆ ಕೂತ ವಸು, ಲಕ್ಷ್ಮಿ ತಲೆ ತಗ್ಗಿಸಿ ನಗುತ್ತಿದ್ದಾರೆ. ರೂಪ ಸಿಂಧು ನಗು ಅಂದ್ರೆ ಗೊತ್ತಿಲ್ಲವೇನೋ ಅನ್ನೋ ಹಾಗೆ ಸೀರಿಯಸ್ ಮುಖ ಮಾಡಿಕೊಂಡು ಒಳಗೊಳಗೇ ನಗುತ್ತಿದ್ದಾರೆ. ಇವರೆಲ್ಲ ಹೀಗೆ ನಗ್ತಾ ಇದ್ರೆ, ಹುಡುಗರು ಸುಮ್ಮನಿರೋದು ಹ್ಯಾಗೆ ಹೇಳಿ? ರಘುರಾಮಂಗೇನೋ ಅನುಮಾನ ಬಂತು, ಭಾಗ್ಯನ್ನೇ ನೋಡಿದ, ಭಾಗ್ಯನ ಕಣ್ಗಳು ಸ್ವರ್ಣಳ ಜಡೆ ಮೇಲೆ. ಓಹೋ ಗೊತ್ತಾಗೇ ಹೋಯ್ತು. ಪಕ್ಕದಲ್ಲೇ ಕೂತ ನವೀನನ್ನ ತಿವಿದು ತೋರಿಸಿದ. ನವೀನ ನಗೋದ್ರಲ್ಲಿ ಎಕ್ಸ್ ಪರ್ಟ್. ಅವನು ಹಿಂದಿನ ಬೆಂಚಿನ ರಾಘು, ನೂರುಲ್ಲ,ಜಗದೀಶನ್ನ ಕಣ್ ಸೆಳೆದ.

ಇವರಾಟಾ ನೋಡ್ತಾ ಇದ್ದ ಉಳಿದವರೂ ಈಗ ನಗತೊಡಗಿದರು. ಇಡೀ ಕ್ಲಾಸಿಗೆ ಕ್ಲಾಸೇ ಒಂದೇ ಮುಖವಾಗಿ ನಗುವಿನ ತೆರೆ ಹೊದ್ದು ಕೂತಿತು. ಶಬ್ಧದ ಕಾವಿಗೆ ಒಡೆದೇ ಹೋಗುತ್ತೇನೋ ಎಂಬಂತೆ ಎಲ್ಲರೂ ಸದ್ದಿಲ್ಲದೆ ನಗುತ್ತಿದಾರೆ. ಶುಭಾವತಿ ಟೀಚರ್ ಟೇಬಲ್ ಮೇಲೆ ನೋಟುಬುಕ್ಕು ನೋಡ್ತಾ ಇದಾರೆ. ಅವರ ಪಕ್ಕದಲ್ಲಿ ಸ್ವರ್ಣ ಕ್ಲಾಸಿಗೆ ಬೆನ್ನು ಹಾಕಿ, ಪುಸ್ತಕವನ್ನೇ ನೋಡುತ್ತಾ ಹೆದರಿಕೆಯಲ್ಲಿ ನಿಂತಿದಾಳೆ. ಟೀಚರ್ ಏನೋ ಒಂದೆರಡು ಕಾಗುಣಿತ ಗುರುತು ಹಾಕಿದವರು, ಪರಾಇಲ್ಲ, ಮುಂದಿನ ಸಲ ಒಂದೂ ತಪ್ಪಿಲ್ದಂಗೆ ಬರೀಬೇಕು ಅಂತ ತಲೆ ಎತ್ತಿದರು. ಸರಿ ಸರಿ ಅಂತ ಸ್ವರ್ಣ ತಲೆಯಲ್ಲಾಡಿಸುವಾಗ, ಟೀಚರ್ ಕ್ಲಾಸನ್ನೂ ಕ್ಲಾಸನ್ನು ಆವರಿಸಿದ ನಗುವಿನ ತೆರೆಯನ್ನು ಅದರ ಕೇಂದ್ರವನ್ನೂ ಗಮನಿಸಿಬಿಟ್ಟರು. ಅವರಿಗೂ ನಗು ಬಂದ್ ಬಿಡ್ತು. ಅವರನ್ನೇ ನೋಡ್ತಿದ್ದ ಸ್ವರ್ಣ ಗಾಬರಿಯಾಗ್ ಬಿಟ್ಟಳು.

ಯಾರ್ರೇ ಅದು ಹಂಗ್ ಮಾಡಿದ್ದು, ಕೋಪ ನಟಿಸುತ್ತ ಟೀಚರ್ ಕೇಳಿದರೂ ಅವರ ದನಿಯಲ್ಲಿ ನಗುವಿತ್ತು. ಈಗ ನಿಧಾನವಾಗಿ ಸ್ವರ್ಣಂಗೆ ಎಲ್ರೂ ತನ್ನೇ ನೋಡಿ ನಗ್ತಿದಾರೆ ಅಂತ ಗೊತ್ತಾಯ್ತು. ಯಾಕೆ ಏನು ಅಂತ ಗೊತ್ತಿಲ್ಲ ಅವಳಿಗೆ ಅಳುವೇ ಬಂದ್ ಬಿಡ್ತು. ಟೀಚರ್ ಗೆ ಪಾಪ ಅನ್ನಿಸಿ, ನೋಡು ದಾರ ಕಟ್ಟಿದಾರೆ ಬಿಚ್ಕೋಮ್ಮಾ ಅಂತಾ ಇದ್ದ ಹಂಗೆ ಸ್ವರ್ಣ ತಡೆಹಿಡಿದಿದ್ದ ನೀರು ಕಣ್ಣಿಂದ ಕೆಳಗುರುಳೇ ಬಿಟ್ಟಿತು. ಕಾಡಿಗೆ ಹಚ್ಚಿದ್ದ ಆ ದೊಡ್ಡ ದೊಡ್ಡ ಕಣ್ಣುಗಳು ಪುಟ್ಟ ಪುಟ್ಟ ನಲ್ಲಿಯಂತೆ ಧಾರಾಕಾರ ನೀರು. ಒಂದು ಕೈಯಲ್ಲಿ ಕಣ್ಣೊರೆಸುತ್ತಾ ಇನ್ನೊಂದು ಕೈಯಲ್ಲಿ ಆ ದಾರ ಬಿಡಿಸಲು ಕಷ್ಟಪಡುತ್ತಿದ್ದರೆ ಅಲ್ಲಿಯವರೆಗೂ ನಗುತ್ತಿದ್ದ ಇಡೀ ಕ್ಲಾಸಿಗೆ ಇದ್ದಕ್ಕಿದ್ದಂತೆ ಎತ್ತಿ ಬಿಸಾಡಿದಂತಾಯಿತು.

ರೂಪ, ವಸು ಓಡಿ ಹೋಗಿ ದಾರ ಬಿಡಿಸಿಕೊಟ್ಟು ಅವಳನ್ನ ಕರೆದುಕೊಂಡು ಬಂದು ವಾಪಸ್ ಬೆಂಚಲ್ಲಿ ಕೂರಿಸಿದರು. ಭಾಗ್ಯ ಎದ್ದುಹೋಗಿ ಟೀಚರ್ ಕೈಯಿಂದ ನೋಟ್ ಬುಕ್ಕು ತಗೊಂಡು ಬಂದಳು. ಲಕ್ಷ್ಮಿ ತನ್ನ ಕಸೂತಿ ಹಾಕಿದ ಕರ್ಚಿಫ್ ಕೊಟ್ಟಳು. ಸಿಂಧು ಬ್ಯಾಗಲ್ಲಿ ಸಂಜೆ ಆಟವಾಡಬೇಕಾದ್ರೆ ಅಂತ ಎತ್ತಿಟ್ಟುಕೊಂಡಿದ್ದ ಚಿಕ್ಕಿಯನ್ನ ಸುನೀತಾ ಮೂಲಕ ಸ್ವರ್ಣಳಿಗೆ ಕಳಿಸಿದಳು. ಹುಡುಗರೆಲ್ಲ ಇದ್ದಕ್ಕಿದ್ದಂಗೆ ಗಂಭೀರವಾಗಿ ತಮ್ಮ ತಮ್ಮ ಅಭ್ಯಾಸದಲ್ಲಿ ಮುಳುಗಿಹೋದವರ ಹಾಗೆ ಕೂತುಕೊಂಡರು. ಟೀಚರ್ ಕೂಡಾ ಹುಡುಗರ ನೋಟ್ಸ್ ಪರಿಶೀಲನೆ ಮಾಡತೊಡಗಿದರು. ಹತ್ತು ನಿಮಿಷದಲ್ಲಿ ರಿಸೆಸ್ ಬೆಲ್ಲಾದ ಕೂಡಲೆ ಟೀಚರ್ ಹೊರಟುಹೋದರು.

ಎಲ್ಲರೂ ಸ್ವರ್ಣಳ ಸುತ್ತ ಅವಳಿಗಿಷ್ಟವಾಗಲಿ ಅಂತ ಏನೇನೋ ಕಸರತ್ತು ಮಾಡಿದರು.ಯಾವಾಗಲೂ ಎಲ್ಲರ ಹತ್ತಿರವೂ ಸಿಟ್ಟು ಮಾಡಿಕೊಂಡೇ ಇರುವ ಪ್ರೇಮ, ಅವಳ ಬ್ಯಾಗಿಂದ ಒಂದು ಮಾವಿನ ಮಿಡಿ ತೆಗೆದು ಸ್ವರ್ಣಳ ಕೈಗಿತ್ತಳು. ಅವಳ ಬಾಡಿ ಹೋದ ಮುಖ ಚೂರು ಚೂರಾಗೆ ಅರಳಿ ಮತ್ತೆ ಹೂವಾಯಿತು. ಬಂಗಾರದ ಬಳ್ಳಿಯಲ್ಲಿ ಕಿರುನಗೆಯ ಹೂವರಳಿ..

ಇದೆಲ್ಲ ಯಾಕೆ ನೆನಪಾಯಿತೆಂದರೆ ಒಂದು ಪುಸ್ತಕ ಓದ್ತಾ ಇದೀನಿ. "ಕೈಟ್ ರನ್ನರ್" ಅಂತ ಖಾಲಿದ್ ಹುಸೇನಿ ಯವರು ಬರೆದ ಕಾದಂಬರಿ. ಇಬ್ಬರು ಪುಟ್ಟ ಗೆಳೆಯರು ಅವರ ಮಧ್ಯದ ವಿನಾಕಾರಣ ಪ್ರೀತಿ, ಸಿಟ್ಟು ಹತಾಶೆ, ಕುಟುಂಬ ಜೀವನ, ಸುಮ್ಮನೆ ಹೂವರಳಿದಂತೆ ಇದ್ದ ಊರೊಂದು ಅಕ್ಕಪಕ್ಕದವರ ದುರಾಸೆಯಿಂದ ಯುದ್ಧಭೂಮಿಯಾಗಿ ಇವತ್ತು ಜಗತ್ತಿನ ಪವರ್ ಫುಲ್ ದೇಶಗಳನ್ನೇ ನಡುಗಿಸುವ ಉಗ್ರಗಾಮಿ ದೇಶವಾಗಿ ಬದಲಾದ ಹೃದಯಸ್ಪರ್ಶಿ ಚಿತ್ರಣ.. ಹೌದು ಇದು ಆಫ್ಗಾನಿಸ್ತಾನದಲ್ಲಿ ನಡೆವ ಕತೆ. ಇನ್ನೂ ಪೂರ್ತಿ ಮುಗಿಸಿಲ್ಲ.. ಪುಸ್ತಕದ ಪುಟಪುಟವೂ ಒಂದು ಮಾರ್ದವ ಅನುಭೂತಿಯನ್ನು ಕಟ್ಟಿಕೊಡುತ್ತದೆ.

ಮಕ್ಕಳು ಹೇಗೆ ಏನು ಗೊತ್ತಿಲ್ಲದೆ ಯಾವುದೋ ಇನ್ನೊಂದು ಪುಟ್ಟ ಮನಸ್ಸನ್ನ ಹೇಗೆ ಮುದುಡಿಸುತ್ತಾರೆ ಮತ್ತು ಮಕ್ಕಳು ಹೇಗೆ ಒಂದು ಪುಟ್ಟ ಖುಷಿಯಲ್ಲಿ ಏನೆಲ್ಲ ದುಃಖವನ್ನು ಮರೆತುಬಿಡುತ್ತಾರೆ..! ಡಯಾಸಿನ ಮೇಲೆ ಅಳುತ್ತಿದ್ದ ಸ್ವರ್ಣ ಗೆಳತಿಯರೆಲ್ಲ ಜೊತೆಗೂಡಿದ ಕೂಡಲೆ ಒಂದು ಪುಟ್ಟ ಚಿಕ್ಕಿಯಿಂದ, ಮಾವಿನ ಮಿಡಿ ಚೂರಿಂದ ಎಷ್ಟು ಖುಷಿ ಪಡುತ್ತಾಳಲ್ಲವಾ?

ಈ ಕಾದಂಬರಿ ಮಕ್ಕಳೆಂಬ ಮಾಯಾದೀಪದ ಬೆಳಕಲ್ಲಿ ಮನುಷ್ಯನ ನೂರೆಂಟು ಒಳಮುಖಗಳನ್ನ, ಸಂಬಂಧ,ಧರ್ಮ, ರಾಜಕೀಯದ ಹಲವು ಹತ್ತು ಮಗ್ಗುಲುಗಳನ್ನ ಅನನ್ಯವಾಗಿ ಕಟ್ಟಿಕೊಡುತ್ತದೆ. ಅಷ್ಟೆ ಅಲ್ಲ ನಮಗೆ ಪರಿಚಯವೇ ಇಲ್ಲದ ಪ್ರೀತಿ ಹುಟ್ಟಿಸುವ ಕಾಬೂಲಿವಾಲರನ್ನ ಅನಾವರಣಗೊಳಿಸುತ್ತದೆ.ರಷ್ಯನ್ ದಾಳಿಗೂ ಮೊದಲು ಇದ್ದ ಸಾದಾ ಸೀದಾ ಆಫ್ಘಾನಿಸ್ತಾನ, ರಷ್ಯನ್ ದಾಳಿಯಲ್ಲಿ ಪುಡಿಗೊಂಡ ಆಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ಧರ್ಮಾಂಧತೆಯಲ್ಲಿ ಉಸಿರುಕಟ್ಟಿ ನೇತಾಡುತ್ತಿರುವ ಆಫ್ಘಾನಿಸ್ತಾನದ ಒಂದು ಅಪರೂಪದ ಚಿತ್ರಣವಿಲ್ಲಿದೆ. ಹೇಗಾದರೂ ಮಾಡಿ ಪುರುಸೊತ್ತು ಮಾಡಿ ಓದಿ.

ಕಾದಂಬರಿಯ ಬಗ್ಗೆ ಒಂದಿಷ್ಟು ರಿವ್ಯೂ ಅದೂ ಇದೂ ವಿವರಗಳು ಇಲ್ಲಿವೆ. ಮತ್ತೊಂದು ವಿಶೇಷ ಅಂದ್ರೆ ಇದು ಸಿನಿಮಾ ಕೂಡಾ ಆಗ್ತಿದೆ. ಡಿಸೆಂಬರಲ್ಲಿ ರಿಲೀಸ್ ಅಂತ ಹಾಕಿದಾರೆ.