Monday, June 6, 2016

ಮರೀಚಿಕೆ ಕಂಡರೂ ಖುಶಿ

ತುಟಿಯಂಚು ಅಷ್ಟು ಹಿಗ್ಗಬಾರದೆ?,
ಆ ಕಿರಿಹಲ್ಲು ಹೊಳೆಯಿಸುವ ಒಂದು ಪುಟ್ಟ ನಗು..
ಯಾಕೆಂದರೆ?...
ಹೀಗೇ ಸುಮ್ಮನೆ,

ಯಾಕೋ ಈ ಹೊತ್ತು ಮನಸು ಬಿಮ್ಮನೆ,
ಹಗುರಾಗಿ ನಗೆದೋಣಿಯ ಮೇಲೇರಿ
ಒಳ ನದಿಯಲ್ಲೊಂದು ಯಾನ.. ಥಟಕ್ಕನೆ
ಇಳಿದುಬಂದು ಬಿಡಬಹುದು ತೀರ ಬೇಕೆನ್ನಿಸಿದೊಡನೆ.

ಏನಿದೆಲ್ಲ ಹುಚ್ಚಾಟ. ಕಿರಿಕಿರಿ;
ಸುಮ್ಮನಿರಬಾರದೆ.
ಇರುವ ನಾಲ್ಕು ದಿನದ ಬದುಕಿನಲ್ಲಿ ಅಚ್ಚುಕಟ್ಟಾಗಿ
ಶಿಸ್ತಾಗಿ, ಧೂಳು ಹೊಡೆದು, ಮಡಿಕೆ ಮುದುರದೆ
ಇರುವ ಹಾಗೆ..

ನಗು ಎಂದರೆ ನಿನಗೆ ಹೇರಿಕೆ
ನೀ ನಗದಿದ್ದರೆ ನನಗೆ ಚಡಪಡಿಕೆ
ಶಿವನೇ ಇದೆಂಥ ಕ್ರೌರ್ಯ.
ಯೋಗಮುದ್ರೆಯಲ್ಲಿ ನಗುವಿಗೆ ಜಾಗವಿಲ್ಲವಲ್ಲ.
ಒತ್ತಾಯದ ಪರಮಾನ್ನದ ಗತಿ ಎಲ್ಲರಿಗೂ ಗೊತ್ತು.

ಅದು ಸರಿ.
ಈ ಉಸಿರುಗಟ್ಟಿಸುವ ಬದುಕಿನಲ್ಲಿ
ಒಂದು ನಗೆಬುಗ್ಗೆಗೆ ಕಾದವರು
ಮೌನದುಸುಬಿನಲ್ಲಿ ಹುಗಿದೇ ಹೋಗಬಹುದು.
ನಗಲು ಒತ್ತಾಯಿಸಿದರೆ ಹಿಂಸೆ
ನಗದೆ ಇದ್ದರೋ.. ಪ್ರತಿಹಿಂಸೆ. 
ಎರಡು ಸತ್ಯಗಳ ಮಧ್ಯೆ ಒಂದು ಸುಳ್ ಸುಳ್ಳೇ ನಗೆ
ಇಡೀ ಬದುಕಿನ ತುಂಬ ತುಂಟನಗು ಬೀರುತ್ತದೆ.

ಅದಕ್ಕೇ ಇರಬಹುದಾ..
ಮರೀಚಿಕೆ ಕಂಡರೂ ಖುಶಿ.

2 comments:

sunaath said...

ಸಿಂಧು,
ಏನು ಹೇಳಲಿ ನಿಮ್ಮ ಈ ಕವನದ ಬಗೆಗೆ? ಖುಶಿಯ ನಗುವು ನನ್ನ ಮೊಗದ ಮೇಲಿದೆ ಎಂದು ಹೇಳಿದರೆ ಸಾಲದೆ?

ಸಿಂಧು sindhu said...

ಪ್ರೀತಿಯ ಸುನಾಥ ಕಾಕಾ,
ನಿಮ್ಮ ಅಭಿಮಾನಕ್ಕೆ, ಪ್ರಶಂಸೆಗೆ ಸ್ವಲ್ಪ ಉಬ್ಬಿದ್ದೇನೆ.
ನಿಮ್ಮ ರಸಜ್ಞತೆಯಿಂದ ನನ್ನನ್ನು ತಿದ್ದಿ ಮತ್ತು ಕೈಮರವಾಗಿರಿ ಅಂತ ವಿನಂತಿಸುತ್ತೇನೆ.
ಪ್ರೀತಿಯಿಂದ ಸಿಂಧು