Friday, August 29, 2008

ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು..?

ಪ್ರಕೃತಿಯನ್ನ ಹುರಿದು ಮುಕ್ಕುತ್ತಿರುವ ಯೋಜನೆಗಳ ಬಗ್ಗೆ ಗೆಳೆಯ ರಾಜೇಶ್ ನಾಯಕ್ ಬರೆದಿದ್ದು ಓದುವಾಗ ಸಂಕಟವಾಗುತ್ತದೆ. ಅದೇ ರೀತಿಯ ದಿನದಿನವೂ ಪ್ರಗತಿಯ ಬಣ್ಣ ಮೆತ್ತಿಕೊಂಡಿರುವ ಹಲವಾರು ವಿಷಯಗಳು ಮನಸ್ಸಿಗೆ ಬರೆ ಇಡುತ್ತವೆ. ಪರಿಸರ ಪ್ರೀತಿಯ ಲೇಖಕರು, ಪರಿಸರ ವಿಜ್ಞಾನಿಗಳು ಬರೆದಿರುವ ಪುಸ್ತಕಗಳನ್ನ ಓದಿ, ಅವರು ನಡೆಸುತ್ತಿರುವ ಸಂರಕ್ಷಣಾ ಕೆಲಸಗಳ ಬಗ್ಗೆ ತಿಳಿದು ಸ್ವಲ್ಪ ಸಮಾಧಾನವೆನ್ನಿಸುತ್ತದೆ. ಆದರೆ ನಿಜವಾಗಲೂ ನನ್ನ ನಡವಳಿಕೆ ಎಷ್ಟು ಸರಿ? ಇಷ್ಟೆಲ್ಲ ಯೋಚಿಸುವ, ಕುಟ್ಟುವ ನಾನು ಏನು ಮಾಡಿದ್ದೇನೆ? ನಲ್ಲಿಯಿಂದ ನೀರು ಸೋರದಂತೆ ನಿಲ್ಲಿಸುವಷ್ಟಕ್ಕೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೆ ಇರುವಷ್ಟಕ್ಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಷ್ಟಕ್ಕೆ , ವಿದ್ಯುತೆ ಉಪಕರಣಗಳ ಅತಿಬಳಕೆ ಮಾಡದೆ ಇರುವಷ್ಟಕ್ಕೆ ನನ್ನ ಕಾಳಜಿ, ಬದ್ಧತೆ ಮುಗಿಯಿತೇ? ನನಗೆ ದಿನ ನಡೆಸಲು ಬೇಕಾಗುವ ಕಂಪ್ಯೂಟರ್/ಲ್ಯಾಪ್ ಟಾಪ್ ಅತಿಬಳಕೆ ಮಾಡದೆ ಇರುವಷ್ಟು, ತಿಳುವಳಿಕೆ ಇದೆಯೇ ಎಂದರೆ ಇಲ್ಲ ಎಂತಲೇ ಕಾಣುತ್ತದೆ.

ಈ ಬಗ್ಗೆ ಇತ್ತೀಚೆಗೆ ಗೆಳೆಯನು ಕಳುಹಿಸಿದ ಬ್ಲಾಗ್ ಬರಹವೊಂದನ್ನ ಓದಿದ ಮೇಲೆ ತಲೆ ಸ್ವಲ್ಪ ಕೆಟ್ಟ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ ನನಗೆ. ಸರಿ ತಪ್ಪುಗಳ, ಸಾಮಾಜಿಕ ಬದ್ಧತೆಗಳ, ಪರಿಸರ ಪ್ರೀತಿಯ, ಬಗ್ಗೆ ಗೊಂದಲ ಶುರುವಾಗಿದೆ. ಎಲ್ಲ ಸಮಸ್ಯೆಗಳನ್ನೂ ಮಾತಾಡೀ ಮಾತಾಡೀ, ಅನಲೈಸ್ ಮಾಡೀ ಮಾಡೀ ನಮ್ಮ ಮನದ ಭಾರವನ್ನ ಕಳೆದುಕೊಳ್ತಿದೀವೀಂತ ಅನುಮಾನ ಶುರುವಾಗಿದೆ. ಈ ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು ಅಂತ ಯೋಚಿಸುತ್ತ ಕೂತಾಗ ಬರೆದಿದ್ದನ್ನ, ಕೆಂಡಸಂಪಿಗೆಯಲ್ಲಿ ಲಾವಂಚ ಅಂಕಣದಲ್ಲಿ ಪ್ರಕಟಿಸಿದ್ದಾರೆ. http://www.kendasampige.com/article.php?id=1292

ನಿಮಗೆ ಸಮಯವಿದ್ದಾಗ ಓದಿ ನೋಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಲೇಖನದ ಒಪ್ಪಕ್ಕಿಂತ ವಿಷಯದ ತೀವ್ರತೆಯ ಬಗ್ಗೆ ತಿಳಿಸಿದರೆ ನನ್ನ ಗೊಂದಲವಿಷ್ಟು ಕಡಿಮೆಯಾಗಬಹುದು. ನಿಮಗೂ ತಲೆ ಕೆಡಿಸಿದೆ ಎಂದು ಬಯ್ದುಕೊಳ್ಳಬೇಡಿ.

10 comments:

sunaath said...

ಆಧುನಿಕತೆಯ ಗೊಂದಲಪುರದಿಂದ ಹೊರಬರಲೆಂದೇ, ಗಾಂಧೀಜಿಯವರು ಸ್ವಾವಲಂಬಿ ಗ್ರಾಮಗಳ ಕನಸನ್ನು ಕಂಡರು. ಆದರೆ, ಇಂದಿನ international ರಾಜಕೀಯದಲ್ಲಿ ಇದು ಸರಳವಲ್ಲ.
ನಾವು "ಆಧುನಿಕ" ನಾಗರಿಕತೆಯಲ್ಲಿ ಜೀವಿಸುವದು ಅಮೆರಿಕ ಮೊದಲಾದ ದೇಶಗಳಿಗೆ ಬೇಕಾಗಿದೆ to sell their wares!

Anonymous said...

ಇದನ್ನು ಓದಿ ತಲೆ ಕೆಟ್ರೆ ತೊಂದರೆ ಇಲ್ಲ. ತಲೆ ಕೆಡಿಸಬೇಕಾದ ವಿಷಯವೆ ಇದು. ಅಧುನೀಕರಿಸುವ ಸೋಗಿನಲ್ಲಿ ಮನುಷ್ಯ ಎಲ್ಲವನ್ನು ನಿರ್ನಾಮ ಮಾಡುತ್ತಾನೆ. ಇತ್ತೀಚೆಗೆ ಹಳ್ಳಿಗಳಲ್ಲಿ ಕೂಡ ರೈತ ಭತ್ತ ಬೆಳೆಯುವ ಗದ್ದೆಗಳನೆಲ್ಲ ಅಡಿಕೆ ಬೆಳೆಯುವ ತೋಟಗಳನ್ನಾಗಿ ಪರಿವರ್ತಿಸ ತೊಡಗಿದ್ದಾನೆ. ಹೀಗೆ ಆರ್ಥಿಕ ಬೆಳೆಗಳಿಗೆ ಹೆಚ್ಚು ಒತ್ತು ಕೊಡುವ ರೈತ ಪರಿಸರ ಸಂರಕ್ಷಣೆ ತಾನೆ ಹೇಗೆ ಮಾಡಿಯಾನು?

ಕೆಲವು ವರ್ಷಗಳ ಹಿಂದೆ ನನ್ನ ಗೆಳೆಯನ ಗೆಳೆಯನೊಬ್ಬ ಕೈ ತುಂಬ ಸಂಬಳದ ಕುಟ್ಟುವ ಕೆಲಸ ಬಿಟ್ಟು, ಅವನು ಹುಟ್ಟಿ ಬೆಳೆದ, ಅವನ ಪ್ರೀತಿಯ ಹಳ್ಳಿಯ ಮಕ್ಕಳಿಗೆ ಪಾಠ ಹೇಳಿ ಕೊಡಲು ಹೊರಟದ್ದು ನೆನಪಾಯಿತು. ಅವನು ಯಾರೆಂದು ಗೊತ್ತಿಲ್ಲದಿದ್ರು ಕೂಡ ಅವನ ನಿರ್ಧಾರಕ್ಕೆ ಅನೇಕ ಸಲ ಭಾವುಕನಾಗಿದ್ದೆ. ಬಹುಶಃ ಹೀಗೆ Root level ನಲ್ಲಿ ಕೆಲಸ ಮಾಡಲು ಮುಂದಾದರೆ ಕೆಲವು ವರ್ಷಗಳಲ್ಲಿ ನಾವೆಲ್ಲ ಗೊಂದಲಪುರದಿಂದ ಹೊರಗೆ ಬರಬಹುದೋ ಏನೋ.

-ನಾನು ನಾನೆ.

Parisarapremi said...

ನನ್ನ ಪ್ರಕಾರ ಕಾಡಿಗೆ ಹೋಗದಿದ್ದರೇನೇ ಒಳ್ಳೆಯದು ಅನ್ನಿಸುತ್ತೆ. ಅಲ್ಪಸ್ವಲ್ಪವಾದರೂ ಕಾಡು ಉಳಿದುಕೊಂಡಿರುವುದು ಅದೂ ಇಲ್ಲದಂತಾಗಿಬಿಡುತ್ತೆ.

ನಿಜ, ನಾವು ಪರಿಸರದ ಬಗ್ಗೆ ಅಷ್ಟೊಂದು ಮಾತನಾಡುವವರಾದರೂ at least, ಕಂಪ್ಯೂಟರು, ಮೊಬೈಲು ಇವೆಲ್ಲಾ ಬಳಸದೇ ಇರುವ ದಿನ ಆದಷ್ಟು ಬೇಗ ಬರಲಿ.

ಕೆಂಡಸಂಪಿಗೆಯ ಲೇಖನ ತುಂಬಾ ಚೆನ್ನಾಗಿದೆ..

ರಾಜೇಶ್ ನಾಯ್ಕ said...

ಸಿಂಧು,
ತಲೆ ಕೆಡಿಸಿದ್ದೀರಾ ಎಂದು ಬಯ್ಯುತ್ತಿಲ್ಲ...ಆದರೆ ತಲೆ ಕೆಡಿಸಿದ್ದಂತೂ ಹೌದು. ನಮ್ಮ ಪಾಡಿಗೆ ಪರಿಸರಕ್ಕೆ ಧಕ್ಕೆಯುಂಟಾಗದಂತೆ ಜೀವಿಸಿ ನಾವೇ ಸಮಾಧಾನಪಟ್ಟುಕೊಳ್ಳುವುದು ಸರಿಯೇ ಎಂದು ನನ್ನನ್ನೇ ಕೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿದೆ ಕೆಂಡಸಂಪಿಗೆಯ ಲೇಖನ.

ಬೇರೆಯವರಿಗೆ ಆದರ್ಶವಾಗಿ ಬಾಳಲು ಎಲ್ಲರಿಂದ ಸಾಧ್ಯವಿಲ್ಲ. ಅಂದರೆ ರಿಸ್ಕ್ ತಗೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಈಗ ಪರಿಸರದ ಬಗ್ಗೆ, ಕಾಡಿನ ಬಗ್ಗೆ ತಿಳುವಳಿಕೆ ಹೇಳಲು ಹೊರಟರೆ ಬಲು ಬೇಗನೆ ’ಕೆಲಸವಿಲ್ಲದವ’ ಅಥವಾ ’ಹುಚ್ಚ’ ಎಂಬ ಹಣೆಪಟ್ಟಿ ಬಂದುಬಿಡುತ್ತೆ (ಇದು ನನ್ನ ವೈಯುಕ್ತಿಕ ಅನುಭವ). ಬ್ಲಾಗ್ ಲೋಕದಲ್ಲೇ ನೋಡಿ. ಪರಿಸರಕ್ಕೆ ಸಂಬಂಧಿಸಿದ ಲೇಖನಗಳನ್ನು ಎಷ್ಟು ಬ್ಲಾಗಿಗರು ಓದುತ್ತಾರೆ? ಸಾಮಾನ್ಯ ಜನರಿಗೆ ಈ ವಿಷಯಗಳಲ್ಲಿ ಆಸಕ್ತಿಯಿಲ್ಲ. ಆಸಕ್ತಿ ಹುಟ್ಟುವಂತೆ ಮಾಡಲು ಹೊರಟವ ’ಹುಚ್ಚ’ನಾಗುತ್ತಾನೆ.

ಬೃಹತ್ ಗಾತ್ರದ ಟವರ್-ಗಳನ್ನು ಹಾಕಿ ವಿದ್ಯುತ್ ತಂತಿಗಳನ್ನು ಎಳೆಯಲು ದಟ್ಟ ಕಾಡೇ ಆಗಬೇಕು. ಸ್ವಲ್ಪ ಹೆಚ್ಚು ಹಣ ವ್ಯಯಿಸಿ ಕಾಡನ್ನು ಬಳಸಿ ವಿದ್ಯುತ್ ತಂತಿ ಎಳೆದರೆ, ಕಾಡಾದರೂ ಉಳಿಯುತ್ತೆ ಎಂಬ ವಿಚಾರ ಯಾರಿಗೆ ಬರುತ್ತೆ. ಆ ಟವರುಗಳ ೩೦ ಮೀಟರ್ ಏನೂ ಇರಬಾರದು ಎಂದು ಇನ್ನಷ್ಟು ಕಾಡನ್ನು ಕಡಿದುಹಾಕುವ ನಿಯಮ, ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕ ನಿರ್ದಿಷ್ಟ ಅಂತರದಲ್ಲಿ ನಿವೇಶನಗಳಿರಬಾರದು ಎಂಬಲ್ಲಿ ಯಾಕೆ ಅನ್ವರ್ಥವಾಗುವುದಿಲ್ಲ?

ಜನರಿಗೆ ಎಲ್ಲವೂ ಸುಲಭವಾಗಬೇಕು. ಸುಲಭವಾಗಬೇಕಾದರೆ ಏನಾದರೊಂದನ್ನು ಬಲಿ ಕೊಡಲೇಬೇಕಲ್ವೇ? ಆ ಹಿಟ್ ಲಿಸ್ಟಿನಲ್ಲಿ ನದಿ, ಕಾಡು, ಜಲಪಾತ, ಬೆಟ್ಟ, ಕಣಿವೆ ಇವೆಲ್ಲಾ ಮೊದಲ ಸ್ಥಾನದಲ್ಲಿವೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ - ರಾಜು ಗೌಡ ಎಂಬವರು. ಇವರೊಂದಿಗೆ ರಾಜ್ಯದ ರೈತರ ಫೋನ್-ಇನ್ ಕಾರ್ಯಕ್ರಮವಿತ್ತು. ಬಳ್ಳಾರಿ ಜಿಲ್ಲೆಯ ರೈತನೊಬ್ಬ ’ನಮ್ಮಲ್ಲಿ ಮೋಡ ಬಿತ್ತನೆ ಮಾಡಿದರೂ, ಕರಾವಳಿ ಮತ್ತು ಮಲೆನಾಡುಗಳಲ್ಲಿ ಆಗುವಷ್ಟು ಮಳೆ ಯಾಕೆ ಆಗುತ್ತಿಲ್ಲ’ ಎಂಬ ಮುಗ್ಧ ಪ್ರಶ್ನೆ ಕೇಳಿದಾಗ ರಾಜು ಗೌಡರು ಹೇಳಿದ್ದು - ’ಮೋಡಗಳು ಈ ಕಡೆ ಬರದಂತೆ ತಡೆ ಹಿಡಿಯುವ ಪಶ್ಚಿಮ ಘಟ್ಟಗಳನ್ನು ಕಡಿದುಬಿಟ್ಟರೆ(?) ಆಗ ಬಳ್ಳಾರಿ ಜಿಲ್ಲೆಯಲ್ಲೂ ಅಷ್ಟೇ ಮಳೆಯಾಗುತ್ತದೆ .. ಈ ಭಾರೀ ಯೋಜನೆಗಳಿಗೆ ತುಂಬಾ ಹಣ ಬೇಕಾಗುತ್ತದೆ...ಸರಕಾರ ಈ ಬಗ್ಗೆ ನಿರ್ಧಾರ ಮಾಡಿದರೆ ಆಗ ಬಳ್ಳಾರಿ ಜಿಲ್ಲೆಯಲ್ಲೂ ಭರ್ಜರಿ ಮಳೆಯಾಗುತ್ತದೆ’(!!!!?). ಪ್ರೊಫೆಸರ್ ಆದವರೇ ಟಿವಿಯಲ್ಲಿ ಅದೆಷ್ಟೋ ಕೇಳುಗರಿರುವಾಗ ಇಂತಹ ಬೇಜವಾಬ್ದಾರಿ ಉತ್ತರ ನೀಡಿದರೆ?

ಸರಕಾರ ಪಠ್ಯಪುಸ್ತಕಗಳಲ್ಲಿ ಪರಿಸರದ ಬಗ್ಗೆ ವಿಷ್ಯಗಳನ್ನು ಅಳವಡಿಸಿದರೆ ಮಾತ್ರ ಉಳಿಗಾಲ.

Anonymous said...

ಚೆನ್ನಾದ ಬರೆಹ. ಸಾಕಷ್ಟು ಯೋಚನೆಗೆ ಹಚ್ಚುತ್ತದೆ.
ಯೋಚಿಸಿ ಮತ್ತೊಮ್ಮೆ ಬಿಡುವಿನಲ್ಲಿ ಬಂದು ಕದ ತಟ್ಟುತ್ತೇನೆ. ಚರ್ಚೆಗೆ.

-ವಸ್ತಾರೆ

ಸಿಂಧು sindhu said...

ಸುನಾಥ,
ನಿಮ್ಮ ಮಾತು ಅಕ್ಷರಶಃ ನಿಜ. ಗೊಂದಲಪುರದಿಂದ ಹೊರಗಿನ ದಾರಿ ಬಹುಶಃ ಒಂದು ಕನಸು. ಮತ್ತು ಅದು ನಮ್ಮನ್ನ ಈ ಗೊಂದಲಪುರದಿಂದ ಹೊರಗೆ ಹೋಗಬಹುದು ಎಂಬ ಹುಸಿನಿರೀಕ್ಷೆಯಲ್ಲೆ ಬದುಕಹಚ್ಚುತ್ತದೆ.

ನಾನು ನಾನೆ,
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದ. ಇದು ಬರಿಯ ರೈತರು ಪರಿಸರ ಸಂರಕ್ಷಣೆ ಮಾಡುವ/ಮಾಡದಿರುವ ವಿಷಯವಲ್ಲ. ರೈತರು ಯಾವುದೇ ಬೆಳೆಯನ್ನೇ ಬೆಳೆದರೂ ಕನಿಷ್ಟ ಬೆಳೆಯುವ, ಪರಿಸರದ ಜೊತೆಯಲ್ಲೇ ಬದುಕುವ ಕಾಯಕದಲ್ಲಿರುತ್ತಾರೆ. ನಾವು ನಗರವಾಸಿಗಳು ಏನು ಮಾಡುತ್ತೇವೆ ಅನ್ನುವುದು ನನ್ನ ತಲೆಬಿಸಿ. ಎಲ್ಲರೂ ಏನು ಮಾಡುತ್ತಾರೋ ಅನ್ನುವುದಕ್ಕಿಂತ ನನ್ನ ವರ್ತುಲದಿಂದ ನಾನೇನು ಮಾಡಬಲ್ಲೆ ಅಂತ ಯೋಚಿಸುತ್ತಿದ್ದೇನೆ. ನಿಮ್ಮ ಸ್ನೇಹಿತನ ವಿಷಯ ಹಂಚಿಕೊಂಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದ.

ಪರಿಸರಪ್ರೇಮಿ,
ಅಭಿಪ್ರಾಯಕ್ಕೆ ಧನ್ಯವಾದ. ಕಾಡಿಗೆ ಹೋಗುವವರು ಅಲ್ಲಿ ಎಲ್ಲ ನಾಗರಿಕ ಸೌಲಭ್ಯ ಇರುವ ರೆಸಾರ್ಟಿಗೆ ಹೋಗಲು ತಯಾರಿರುತ್ತಾರೆಯೇ ವಿನಃ ಬೇಸಿಕ್ಕಾಗಿ ಬದುಕಲು ಅಲ್ಲ. ಹಾಗಾಗಿ ಕಾಡಿಗೆ ಹೋಗುತ್ತಾರ್‍ಎ ಎಲ್ಲ ಎಂದು ಯೋಚಿಸಬೇಕಾಗಿಯೆ ಇಲ್ಲ. :)

ನಿಮ್ಮ ಲೇಖನಗಳನ್ನು ಓದುತ್ತಿರುತ್ತೇನೆ. ನಾವೇ ಸಮಾನಮನಸ್ಕರು ಸ್ವಲ್ಪ ಕೂತು ಯೋಚನೆ ಮಾಡಿ ಸಣ್ಣ ಪುಟ್ಟ ಬದಲಾವಣೆಯ ಗಾಳಿಯನ್ನ ನಮ್ಮ ನಡುವೆಯೇ ಬೀಸಹಚ್ಚಿದರೆ, ಪರಿಸರಕ್ಕೆ ಒಂದಿಷ್ಟು (ಸಾಸಿವೆಯಷ್ಟಾದರೂ) ಹಿತವಾದೀತು. ನೋಡೋಣ.

ರಾಜೇಶ್,
ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ನಿಜ.
ಪರಿಸರ ಪ್ರೇಮಕ್ಕೆ ಇದ್ದಕ್ಕಿದ್ದಂಗೆ ಒಂದು ಕ್ರಾಂತಿಕಾರಿ ಹುಚ್ಚನ ಪೋಸು ಅದ್ ಹೇಗೆ ಬರುತ್ತೋ ಆದ್ರೆ ಬರೋದಂತೂ ನಿಜ.
ಪರಿಸರಕ್ಕೆ ಸಂಬಂಧಿಸಿದ ಲೇಖನ ಓದುವ ಮಾತು ದೂರವಿರಲಿ, ಮಾತಾಡಲೂ ರೆಡಿ ಇರುವುದಿಲ್ಲ ನಿಜ.

ಇದರ ಮಧ್ಯೆ ರಾಜಕೀಯದ ಮಂದಿ ಪರಿಸರವನ್ನ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಉಪಯೋಗಿಸುವ ಕೌಟಲೀಯ ಪ್ರತಿಭೆ ಗಿಟ್ಟಿಸಿಕೊಂಡುಬಿಟ್ಟಿದಾರೆ.

ನಿಜವಾದ ಕಳಕಳಿ ಇರುವವರು, ಹೋರಾಟ ನಡೆಸಿದವರು ಮೂಲೆಗುಂಪಾಗುವ, ನಗೆಪಾಟಲಿಗೀಡಾಗುವ ಪರಿಸ್ಥಿತಿಯೇ ಜಾಸ್ತಿ ಇದೆ.

ನೋಡೋಣ ನಮ್ಮ - ನಿಮ್ಮ ಕೈಯಲ್ಲಿ ಏನು ಮಾಡಕ್ಕಾಗತ್ತೋ ಅಂತ. ಕನ್ನಡಕ್ಕೆ ಕೈ ಎತ್ತಿದರೆ ಕಲ್ಪವೃಕ್ಷವಾಗುತ್ತದೆ ಎಂಬ ಮಾತಿಗೆ ರೋಮಾಂಚನಗೊಂಡವರು ನಾವು. ಕಲ್ಪವೃಕ್ಷವನ್ನೇ ಹೊತ್ತ ಭೂಮಿಗಾಗಿ ಕೈ ಎತ್ತಿ ಏನು ಮಾಡಬಹುದೋ ನೋಡಬೇಕಿದೆ. ಭರವಸೆಗಳ ದಾರಿಯಲ್ಲಿ ಕನಸಿನ ಊರುಗೋಲು ಹಿಡಿದ ಕಡಿದಾದ ಚಾರಣವಿದು.

ವಸ್ತಾರೆ,
ನಿಮ್ಮ ಒಳನೋಟದ ಲೇಖನಗಳಿಗೆ ಆಗಲೇ ಫಿದಾ ಆಗಿಬಿಟ್ಟಿದೀನಿ. ಸುಮ್ಮನೆ ತಿರುಗಿ ನೋಡಿ ಹೋಗಬಹುದಾದ ವಿಷಯದಲ್ಲಿ ವಿಚಾರಸ್ಕೇಪಿಂಗ್ ಮಾಡುವ ನಿಮ್ಮ ಕುಸುರಿಕೆಲಸದ ಪ್ರತಿಭೆಯೊಡನೆ ಮಾತುಕತೆ, ನನ್ನ ಗೊಂದಲಗಳನ್ನ ಸರಳಗೊಳಿಸಬಹುದೆಂಬ ಆಶಯವಿದೆ. ಬೇಗ ಸಿಗೋಣ.


ಓದಲು ಡ್ರೈ ಆಗಿ, ಬದುಕನ್ನೇ ಡ್ರೈ ಆಗಿಸುವ ಈ ವಿಷಯ ಕುರಿತು ನಾನೊಬ್ಬಳು ಮೂಲೆಯಲ್ಲಿ ಕುಳಿತು ಬರೆದರೆ, ಓದಿ, ಲಿಂಕ್ ಲೇಖನವನ್ನೋದಿ ಸ್ಪಂದಿಸಿದ ನಿಮ್ಮೆಲ್ಲರ ಆಸ್ಥೆಗೆ, ಪರಿಸರ ಪ್ರೀತಿಗೆ ನನ್ನ ಶರಣು.

ಪ್ರೀತಿಯಿರಲಿ,
ಸಿಂಧು

Raghu said...

ಸಿಂಧು ಅವರಿಗೆ,
ನಮಸ್ಕಾರ. ನಿಮ್ಮ ಕೆಂಡಸಂಪಿಗೆ ಲೇಖನ ಓದಿದೆ. ಚಿಂತನೆಗಷ್ಟೇ ಅಲ್ಲ ; ಕಾರ್ಯರೂಪಕ್ಕೆ ಹಚ್ಚುವಂತಿದೆ. ನಾವೆಲ್ಲಾ ಸೇರಿ ಸ್ಥಳೀಯವಾಗಿ ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಕೆಲಸ ಮಾಡಬೇಕು. ವಾರದ ದಿನದ ಕೆಲ ಸಮಯವನ್ನಾದರೂ ಇದಕ್ಕೆ ಮೀಸಲಿಡಬೇಕು ಅನಿಸುತ್ತೆ. ರಾಜೇಶ್ ಹೇಳಿದಂತೆ ನಮ್ಮ ಫ್ರೊಫೆಸರ್ ಗಳೆಲ್ಲಾ ಮರ-ಗಿಡವನ್ನು ಅಭ್ಯಾಸ ಮಾಡದೇ ಪಿಎಚ್ ಡಿ ಮಾಡಿದವರು (ಅವರ ಗುರುಗಳ ಸಂಶೋಧನೆಯನ್ನೇ ಓದಿ ಬರೆದು)ಇಂಥವ್ರಿಗೆ ಬುದ್ಧಿ ಹೇಳೋದಾದ್ರೂ ಹೇಗೆ ?
ಏನಾದರೂ ಮಾಡಬೇಕು. ಸುಸ್ಥಿರ ಅಭಿವೃದ್ಧಿಯ ಕನಸನ್ನು ಎಲ್ಲರಲ್ಲೂ ಮೂಡಿಸಬೇಕು. ಅಲ್ಲವೇ ? ಬರೀ ಸೈದ್ಧಾಂತಿಕ ಗೊಂದಲಗಳಿಂದ ಹೊರಬರಲು ಸಾಕಷ್ಟು ಸಮಯಬೇಕಲ್ಲವೇ ನಮಗೆ ? ಒಳ್ಳೆ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದ.
ಮಿತ್ರವಿಂದೆ

ಪುಷ್ಪಜ್ಯೋತಿ. said...

ನಮಸ್ಕಾರ! ... ನಿಮ್ಮ ಹೆಚ್ಚಿನ ಎಲ್ಲ ಬರಹಗಳನ್ನ ಓದಿದೆ. ನಿಮಗೊಂದು hats off ಹೇಳೋದು ಬಿಟ್ಟು ಬೇರೇನೂ ತೋಚ್ತಾ ಇಲ್ಲ :) "ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು..?" ಬರಹದ ಬಗ್ಗೆ ನನ್ನ ಕೆಲವು ಅನಿಸಿಕೆಗಳು. ತಪ್ಪಿದ್ದರೆ ತಿದ್ದಿ.

"ಅತಿಬಳಕೆ ಮಾಡದೆ ಇರುವಷ್ಟಕ್ಕೆ ನನ್ನ ಕಾಳಜಿ, ಬದ್ಧತೆ ಮುಗಿಯಿತೇ?" ಬದ್ಧತೆ ಮುಗಿದ್ದಿಲ್ಲ.... ಅದು ಮೊದಲ ಹೆಜ್ಜೆ... ಅಲ್ಲಿಂದ ಶುರು ಆಗಿದೆ :) ನಮ್ಮ ಮನೆಯಲ್ಲಿ ಇಂತಹ ಕೆಲವನ್ನಾದರೂ ನಾವು ಅಭ್ಯಾಸ ಮಾಡಿಕೊಂಡಲ್ಲಿ ಒಳ್ಳೆಯದು. ನಗರ ವಾಸಿಗಳು ಮನೆ ಅಂಗಳದಲ್ಲಿ ಕೆಲವು ಹೂವಿನ ಗಿಡಗಳನ್ನೂ ನೆಡುವುದರಿಂದ ಪರಿಸರದ ಬಗ್ಗೆ ಕಾಳಜಿ ವಹಿಸಬಹುದು(ನಮ್ಮ ವರ್ತುಲದಲ್ಲಿ ಸುಲಭವಾಗಿ ಮಾಡಬಹುದಾದುದು). ಮುಂದೆ ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವುದರ ಬಗ್ಗೆ ಯೋಚಿಸಬಹುದು. ಪ್ರಕೃತಿ ನಿತ್ಯ ನೂತನ! ಪ್ರಕೃತಿಯನ್ನ ಪ್ರೀತಿಸಿದರೆ ನಾವು ನಿರಾಶರಾಗುವ ಭೀತಿ ಕೂಡ ಕಡಿಮೆ ಅಲ್ವೇ?

- ಪುಷ್ಪಜ್ಯೋತಿ

ಸುಧನ್ವಾ ದೇರಾಜೆ. said...

ಆಗಸ್ಟಲ್ಲೇ ಇದ್ದೀರಲ್ಲ ಯಾಕ್ರೀ?!

ಸಿಂಧು sindhu said...

ಮಿತ್ರವಿಂದೆ,

ನಿಮ್ಮ ಅಭಿಪ್ರಾಯ ತಿಳಿದು ಸಂತೋಷವಾಯಿತು.

ಪುಷ್ಪಜ್ಯೋತಿ,
ಯಾವುದೋ ಒಂದು ಇಷ್ಟವಾಗಿ, ಹೇಳಲು ಏನೂ ತೋಚದೇ ಇದ್ದಾಗ ದೂರವಿದ್ದರೆ ಒಂದು ಕಿರುನಗು, ಹತ್ತಿರವಿದ್ದರೆ ಒಂದು ಹಗ್ ನನ್ನ ಅಭ್ಯಾಸ.. ನೀವೂ ಹಾಗೇ ಮಾಡಬಹ್ದು.

ನಿಮ್ಮ ಅನಿಸಿಕೆಗಳು ತುಂಬ ಸರಿಯಾಗಿವೆ.

ನನ್ನ ಯೋಚನೆಗಳನ್ನೇ ಮತ್ತಷ್ಟು ಗಟ್ಟಿಯಾಗಿಸುವ ನಿಟ್ಟಿನಲ್ಲಿ ಓದಿ ಪ್ರತಿಸ್ಪಂದಿಸಿದವರೆಲ್ಲರಿಗೂ ನನ್ನ ಧನ್ಯವಾದಗಳು.

ಸುಧನ್ವಾ,
ಏನು ಮಾಡೋದು ಮಾರಾಯ್ರೇ.. ಸೆಪ್ಟೆಂಬರೂ ಮುಗೀತಾ ಬಂತು..ಓದುವುದಕ್ಕೂ ಬರೆಯುವುದಕ್ಕೂ ಸಮಯವಿಲ್ಲ ಅಂತ ಅಶ್ವಮೇಧ ಮಾಡಿಕೊಂಡು ದಿನ ದೂಡ್ತಾ ಇದ್ದೇನೆ. ನಮ್ಮ ಕೆಲಸದ ಕುದುರೆ ನಿಮ್ಮ ಚಂಪಕಾವತಿಗೆ ಬಂದರೆ ಕಟ್ಟಿ ಹಾಕಿಬಿಡಿ..ಬಿಡಿಸಿಕೊಂಡು ಹೋಗಲು ನಾನು ಬರುವುದಿಲ್ಲ.. :)

ಪ್ರೀತಿಯಿಂದ
ಸಿಂಧು