Friday, December 10, 2010

ಹನಿ

ಹಸಿರೆಲೆ ತುದಿ ಮುದ್ದಿಸುವ
ಹನಿ
ಇನ್ನೇನು ಜೀಕಿ ಇಳಿದು
ನೆಲದನ್ನೆಯ ಕೆನ್ನೆ ಸೋಕಿ
ಇಂಗಲಿದೆ
ಕೆಂಪು ಕೆಂಪು
ಧರಣಿಯ ಬಿಸಿಯೊಡಲಲಿ
ಸೋಸಿ ಆವಿಯಾಗಿ
ಮುಗಿಲ ತೆಕ್ಕೆಯ ಸೇರಲಿದೆ
ತಿಳಿಗಂದು ಮೋಡವದು
ಉದಾಸೀನದಲಾ
ಜೀವಸೆಲೆಯ ಹೀರಿ
ನೀಲ ಗಗನದಿ
ಮತ್ತೆ ಬೆಳ್ಳಿಯಂಚು ಹೊದ್ದು
ಕಪ್ಪಗೆ ಮೆರೆದು
ಒಣಗಿ ಉದುರಿದ ಹಳದಿಎಲೆಗೆ
ಅವರ್ಣ
ಕಂಬನಿ ಮಿಡಿದು
ಹಸಿರೆಲೆ ತುದಿಯಲ್ಲಿ
ಮುದ್ದು ಮುದ್ದಾಗಿ ಮತ್ತೆ ಕೂರಲಿದೆ
ಅದ ನೋಡ ನೋಡುತ
ದಿನಗಳು ತುಂಬುತಿವೆ
ಕಾಲನ ಬಿಂದಿಗೆ
ತುಂಬಿ ತುಳುಕಿ ಬರಿದಾಗುತ ಸಾಗಿದೆ
ತುಂಬಿದ್ದೆಲ್ಲ ತುಳುಕಲೆಬೇಕು
ತುಳುಕಿ ಕಳೆಯದೆ
ಹೊಸದು ತುಂಬಲು ಜಾಗವೆಲ್ಲಿದೆ
ತುಂಬಿ ತುಳುಕಿ
ಬಸಿದು ಆವಿಯಾಗಿ
ತುಂಬಿಕೊಳ್ಳುವ ವಿಧಾನವ
ಕಲಿಸುವ ಹನಿಯೇ
ನಿನ್ನ ನೋಡುತ ನೋಡುತ
ನನ್ನ ದಿನಗಳು ತುಂಬುತಿವೆ.

(ಹಸಿರಿನ ಬಣ್ಣದ ಚಿಗುರೆಲೆ ನೋಡಿ ನಲಿದಾಡುವೆ ನೀನು;ಹಳದಿಯ ಬಣ್ಣದ ಹಣ್ಣೆಲೆ ನೋಡಿ ಹನಿಗೂಡುವೆ ನಾನು.. - ಕಣವಿಯರ ಕವಿಸಾಲು ಅಂತ ನೆನಪು. ಸರಿಯಾದ ಮೂಲ ತಿಳಿದಿದ್ದರೆ ತಿಳಿಸಿ.)

4 comments:

ಜಲನಯನ said...

ಮೊದಲಿಗೆ ಪುಟ್ಟಿ :ತುಪ್ಪು" ಗೆ ಹುಟ್ಟುಹಬ್ಬದ ಶುಭಾಷಯಗಳು...
ದಿನಗಳೆವ, ತನ್ನವರು ಬೆಳೆವ, ಎಲ್ಲಾ ನೋಡುವ ನಿಮ್ಮ ಮನ ಮತ್ತು ಅದನ್ನು ಪ್ರಸ್ತಾಪಿಸಿದ ನಿಮ್ಮ ಕವನ ಇಷ್ಟವಾದವು.

Parisarapremi said...

cycle!

Chandrashekar said...

ಹನಿಯ ಕವನ ಸುಂದರವಾಗಿದೆ. ನಿಮ್ಮ ಇತರ ಕವನಗಳು ಕೂಡ.
ಹನಿಯ ಕಥೆಯನ್ನೂ ನಾನೊಂದು ಬರೆದಿದ್ದೇನೆ, ಸಮಯ ಸಿಕ್ಕಾಗ ಓದಿ.

http://mind-book.blogspot.com/2009/08/ondu-haniya-kathe.html

Chandrashekar said...

ಹನಿಯ ಕವನ ಸುಂದರವಾಗಿದೆ. ನಿಮ್ಮ ಇತರ ಕವನಗಳು ಕೂಡ.
ಹನಿಯ ಕಥೆಯನ್ನೂ ನಾನೊಂದು ಬರೆದಿದ್ದೇನೆ, ಸಮಯ ಸಿಕ್ಕಾಗ ಓದಿ.

http://mind-book.blogspot.com/2009/08/ondu-haniya-kathe.html