ಕವಡೆ ಬೀಸಿದಾಗಲೆಲ್ಲ
ಬಿದ್ದಿದ್ದು ವಚ್ಚಿ,
ಒಂದೊಂದೇ ಹೆಜ್ಜೆ ಇಟ್ಟು
ಮುನ್ನಡೆದ ಬದುಕ
ಹಾದಿಯ ತುಂಬ
ಬಿಸಿಲು ನೆರಳಾಟ;
ಯಾರದೋ ಕಣ್ ಸೆಳೆದು,
ಕವಡೆ ಜೋತಿಷ ನುಡಿಯೆ,
ಬರುವ ದಕ್ಷಿಣೆಗೆ
ಸರಿಹೋದೀತು
ಸೆಟ್ಟರಂಗಡಿಯ ಲೆಕ್ಕ.
ದಿನಕೊಂದು ಹೊತ್ತು ಉಂಡರೆ
ಅದೇ ಸುಖ;
ಕವಡೆಯ ಬೀಸಿ
ತಮ್ಮ ನಾಳೆಯ ತಾವೆ ತಿಳಿವವರು
ಕೂರುವರು ಇಲ್ಯಾಕ?!
ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ -
ಇಂದೇ!
ತಿಳಿಯುವ ತಿಣುಕಾಟವಿಲ್ಲ
ಬರಿದೆ
ಬದುಕಬೇಕಿದೆ!
ಜೋತಿಷ ಕೇಳಿದ ಮಂದಿ
ಪಾರ್ಕು ದಾಟುವ ಮುನ್ನವೆ
ಮರೆತವರು;
ನಾನು ಮರೆಯುವ ಹಾಗಿಲ್ಲ
ನನ್ನ ಮೂಗಿಗೇ ಕವಡೆ...
ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ;
ಉಂಹೂಂ -
ಬರೀ ವಚ್ಚಿ,
ಪ್ರತೀ ಸಲಿಯೂ
ಬೆರಳಸಂದಿಯಲೆ ನುಸಿದು ಹೋಗುವ
ಗಿಚ್ಚಿ..
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
13 comments:
ಬಹಳ ಚೆನ್ನಾಗಿದೆ ನಿಮ್ಮ ಜ್ಯೋತಿಷ್ಯ! ನೀವ್ ಹೇಳಿದ್ದು ನಿಜ. ಬರೀ ವಚ್ಚಿ! ಪ್ರತಿಸಲವೂ! :)
ಸಿಂಧು,
ಬಾಳಿನ ಪಗಡೆ ಪಟ್ಟದಲ್ಲಿ ವಚ್ಚಿ ಬೀಳುವದೇ ಹೆಚ್ಚು. ಹೀಗಾಗಿ ಮೂಗಿಗೆ ಕವಡೆ ಕಟ್ಟಿಕೊಂಡು ತೆವಳಲೇಬೇಕು.
ತುಂಬಾ ಸುಂದರವಾದ ಕವನ ರಚಿಸಿದ್ದೀರಿ.
ಒಂದು ಮಾತು ಹೇಳಲೇ?
ಇದು ಚಿತ್ರಕ್ಕಾಗಿ ರಚಿಸಿದ ಕವನವೆಂದಿದ್ದೀರಿ. ಹಾಗಿದ್ದರೆ, ಆ ಚಿತ್ರದ ಹೊರಗಿನ ಬಾಳಿನಲ್ಲಿ ಒಮ್ಮಿಲ್ಲ ಒಮ್ಮೆ ದಸ್ಯಾ ಬೀಳಲೇ ಬೇಕು. ಎಲ್ಲ ಕಾಯಿಗಳೂ ಫಾಜಿ ಮುಟ್ಟಿ ಹಣ್ಣಾಗಲೇ ಬೇಕು!
-ಸುನಾಥ
ಒಂದು ವಚ್ಚಿಗೆ ಒಂದೇ ಹೆಜ್ಜೆಯಾದರೂ, ಒಂದೊಂದಾಗಿ ಎಷ್ಟೊಂದು ಹೆಜ್ಜೆಗಳು. ಸಾಕಲ್ಲಾ ಬದುಕಿಗೆ.
ಒಂದು ವಚ್ಚಿಗೆ ಒಂದೇ ಹೆಜ್ಜೆಯಾದರೂ, ಒಂದೊಂದಾಗಿ ಎಷ್ಟೊಂದು ಹೆಜ್ಜೆಗಳು.
ಎಂಥಹ ಸಾಲುಗಳು
ಸೊಗಸಾಗಿದೆ
ಕಾವ್ಯಕ್ಕೆ ಎಷ್ಟೊಂದು ಶಕ್ತಿಯಿದೆ ಅಲ್ಲವೇ
ಎಂಥಹ ಸಾಲುಗಳು
ಸೊಗಸಾಗಿದೆ
ಕಾವ್ಯಕ್ಕೆ ಎಷ್ಟೊಂದು ಶಕ್ತಿಯಿದೆ ಅಲ್ಲವೇ
ishtavaytu:)
ಬಹಳ ಅದ್ಬುತವಾದ ಕವನ
ಬಹಳ ಅದ್ಭುತವಾದ ಕವನ,,
ಬಹಳ ಅದ್ಭುತವಾದ ಕವನ,,
ನನ್ನ ಮೂಗಿಗೇ ಕವಡೆ...
ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ;
ಇದನ್ನು ಮತ್ತೆ ಮತ್ತೆ ಓದುತ್ತಿದ್ದೇನೆ.. ಅರ್ಥವಾಗುತ್ತಿಲ್ಲ..
ಸುನಾಥ್,
ನಿಮ್ಮ ಅನುಭವದ ಮಾತಿಗೆ ನನ್ನ ಶರಣು.
ಎಲ್ಲ ಕಾಯಿಗಳೂ ಹಣ್ಣಾಗುವುದು ಕಷ್ಟ ಸಾಧ್ಯ.
ಉಮಾ ಭಟ್,
ನಿಮ್ಮ ಈ ಪರಿಕಲ್ಪನೆ ನಂಗೆ ಇಷ್ಟವಾಯಿತು.
ಎಲ್ಲರಿಗೂ ಚಿತ್ತ, ಭಾರ ಬೀಳಿಸಿ ಬೇಗ ಮುಂದೋಡುವ ತವಕ.
ಇಂಚರ,
ಹೌದು. ಬರೆಯುವವರ ಮತ್ತು ಓದುವವರ ಕಲ್ಪನಾವಿಸ್ತಾರ ವಿಶಾಲಗೊಳ್ಳುತ್ತದೆ.
ಜೋಸೆಫ್,
ಥ್ಯಾಂಕ್ಸ್,
ಕೃಷ್ಣ,
ನಿಮಗೆ ಹಿಡಿಸಿದ್ದು ನನಗೆ ಖುಶಿ.ವಂದನೆಗಳು
ರಾಘವೇಂದ್ರ,
ಜೋತಿಷ್ಯ ಕೇಳಿದವರಿಗೆ ಅದು ಕ್ಷಣದ ಅರಿವು. ಹೇಳುವ ಬಾಲೆಗೆ (ಇದು ಚಿತ್ರಕ್ಕೆ ರಚಿಸಿದ ಕವಿತೆ)ಅದೇ ಬದುಕು.
ಅವಳ ಜೋತಿಷ್ಯದ ವಿಧಿ ಒಳ್ಳೆಯದಾಗಿರಲಿ ಇಲ್ಲದಿರಲಿ, ಅದರ ಜೊತೆಗೇ ಬದುಕಬೇಕು.
ನನ್ನ ಮೂಗಿಗೇ ಕವಡೆ ಎಂಬುದು - ದಿನದಿನದ ಬದುಕಿನ ಗಾಣವನ್ನ ಈ ಕುರಿತಾಗಿರುವ ಕನ್ನಡದ ನುಡಿಗಟ್ಟನ್ನ (ಮೂಗಿಗೆ ಕವಡೆ ಕಟ್ಟಿ ದುಡಿಯುವ ಎತ್ತನ್ನ) ಆಶ್ರಯಿಸಿದ ಸಾಲು.
ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ; ಇದು ಮುಂದಿನ ಸಾಲು. ಮೂಗಿಗೇ ಕವಡೆ ಎಂಬುದರ ಮುಂದುವರಿಕೆಯಲ್ಲ.
ಚಿತ್ತ ಭಾರ ಎಂಬುದು ನಮ್ಮ ಕಡೆಯ ಪಗಡೆ ಆಟದ ನಡೆಗಳು. ಒಂದೇ ಬಾರಿಗೆ ಎಂಟು, ಹನ್ನೆರಡು ಮನೆ ಮುಂದುವರಿಯಬಹುದು.
ಗಾಣದ ಬದುಕಿನಿಂದ ಪಾರಾಗಲು, ಹಣ್ಣಾಗಲು ಬೇಗ ಬೇಗ ಮುಂದೋಡುವ ಆಸೆ, ಆದರೆ ಅದೋ ಒಂದೊಂದೇ ಹೆಜ್ಜೆ ಇಟ್ಟು ನಿಧಾನಗತಿಯಲ್ಲಿ ಸಾಗುತ್ತಿದೆ. ಎಂಬುದು ಕವಿತೆಯ ಆಶಯ.
ಓದಿ ಸ್ಪಂದಿಸಿದ ಎಲ್ಲರಿಗೂ ನನ್ನ ವಂದನೆಗಳು.
ಪ್ರೀತಿಯಿಂದ
ಸಿಂಧು
ತುಂಬ ಸುಂದರವಾಗಿ ವಿವರಿಸಿದ್ದೀರಿ.. ವಂದನೆಗಳು..
["ಚಿತ್ತ ಭಾರ ಎಂಬುದು ನಮ್ಮ ಕಡೆಯ ಪಗಡೆ ಆಟದ ನಡೆಗಳು"] ಎಲ್ಲಿಯವರು ನೀವು?
Post a Comment