ಹೆದ್ದಾರಿಯಿಂದ ಸ್ವಲ್ಪದೂರದಲ್ಲಿ ಬೆಟ್ಟ, ಕಾನು, ಘಟ್ಟದ ರಸ್ತೆ, ಮಳೆ ಇವೆಲ್ಲ ಕಂಡರಿಸಿ ನಿಲ್ಲಿಸಿದ ಪುಟ್ಟ ಚೆಲುವಾದ ಊರು ಕಲಗಾರು. ತಾಳಗುಪ್ಪಾ-ಜೋಗದ ಮಧ್ಯೆ ಸಿಗುವ ಈ ಊರಿನ ಪ್ರಕೃತಿಸಿರಿಯಷ್ಟೇ ಇಷ್ಟವಾಗುವ ಜೀವ ಮಾಧು ಮಾವ. ದಿನದಿನದ ಬದುಕಲ್ಲಿ ಹಣ್ಣಾಗುತ್ತಲೇ ತನ್ನ ಭಾವದೊರತೆಯನ್ನ ಚಿರಂತನವಾಗಿ ಜೀವಂತವಿರಿಸಿಕೊಂಡ ಭಾವಜೀವಿ. ನಿನ್ನೆ ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದವನ ಕೈಯಲ್ಲಿ ಸಿಕ್ಕ ಕವಿತೆಯ ಪುಸ್ತಕಗಳಲ್ಲಿ ಕಣ್ಣಾಡಿಸಿದವಳಿಗೆ ತುಂಬ ಚೆಲುವಾದ ಕವಿತೆಗಳು ಸಿಕ್ಕಿ ಮನಸ್ಸು ಉಲ್ಲಸಗೊಂಡಿತು. ತನ್ನ ಮನೆ,ತೋಟ ಕೆಲಸಗಳ ನಡುವೆ, ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುವ ಮಾವನ ಓದಿನ ಹರವೂ ಅಪಾರ. ಬೇಲಿಸಾಲಿನ ಹಸಿರ ನಡುವೆ ಕೆಂಪಗೆ ಹೊಳೆವ ಹೂವಿನ ಮಾರ್ದವತೆ ಮೈದಳೆದಿರುವ ಮಾಧು ಮಾವನ ಒಂದು ಭಾವಗೀತವನ್ನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇನೆ.. ಓದಿ ಏನನ್ನಿಸಿತು ಹೇಳಿ
ಮುಸುಕಿನಲಿ ಆಡಿದ
ಪಿಸುಮಾತು - ಕಿವಿಮಾತು
ಇನಿದನಿಗೆ ಬದಲಾಗಿ
ಕರ್ಕಶದ ಮಾರ್ದನಿಯಾಗದಿರಲೆಂದು
ಮಂಜು ತಬ್ಬಿತು ಬೆಟ್ಟವ
ಮನದ ಮಾತಿಗೆ ಮೌನ
ಮುಳ್ಳಬೇಲಿಯ ಘನವಾಗಿ
ಹೆಪ್ಪುಗಟ್ಟಿದ ಭಾವ
ಶೂನ್ಯದಾಗಸಕೆ ನಿಚ್ಚಣಿಕೆಯಾದಾಗ
ಮಂಜು ತಬ್ಬಿತು ಬೆಟ್ಟವ
ಮುಗ್ಧ ಮುಖದಾವರೆಯ
ಸ್ನಿಗ್ಧ ನಗುವಿನ ಪ್ರಕೃತಿ
ನದಿಯಂಚಿನ ಮರಳು - ಗುಡ್ಡ
ಯಂತ್ರಗಳ ರವದಲ್ಲಿ ಸಿಡಿಸಿಡಿದು ಹೋಳಾಗೆ
ಮಂಜು ತಬ್ಬಿತು ಬೆಟ್ಟವ
ಆಸೆಗಳ ತಿಳಿಗೊಳದಿ
ದುರಾಸೆಗಳ ಅಲೆಮೂಡಿ
ವಾದ ವಿವಾದಗಳ ವಿಷಯ-ವಿಷವಾಗಿ
ತತ್ವಗಳ ಬದುಕಲ್ಲಿ ಕುಹಕ ಬೆಂಕಿಬಲೆ ಹೆಣೆದಾಗ
ಮಂಜು ತಬ್ಬಿತು ಬೆಟ್ಟವ
ಕಾಡ ನಾಡಾಗಿಸುವ
ಕುರುಡು ಹುನ್ನಾರಿಗೆ ಸಿಲುಕಿ
ದುಡಿವ ಜನ - ಮಡಿವ ಜನ
ಇಟ್ಟಂಗಿ ಕಲ್ಲು ಪಾವಟಿಗೆಯಾಗಿ, ಉಳ್ಳವರು ಅಟ್ಟಹಾಸವ ಮಾಡೆ
ಮಂಜು ತಬ್ಬಿತು ಬೆಟ್ಟವ
ನಿನ್ನೆ ನಾಳೆಯ ನಡುವೆ
ಇಂದೆಂಬ ಚಿರಸತ್ಯ
ಯಾರಿರಲಿ ಇಲ್ಲದಿರಲಿ
ನಾನಿದ್ದರಷ್ಟೆ ಸುಖವೆಂಬ ಸ್ವಾರ್ಥ ಸಂತೆಗೆ ಕರಗಿಬೀಳುವ ಮುನ್ನ
ಮಂಜುತಬ್ಬಿತು ಬೆಟ್ಟವ.
-ಮಾಧವ ಶರ್ಮ ಕಲಗಾರು
ಮುಕ್ತ
-
ಬಾಂದಳದ ತುಂಬಾ ಎರಚಿದ್ದ ನಕ್ಷತ್ರಗಳನ್ನೇ ದಿಟ್ಟಿಸುತ್ತಿದ್ದಳು ಭೂಮಿ.
ಬಾಲ್ಕನಿಯಲ್ಲಿ ಕುಳಿತು ಅಮಾವಾಸ್ಯೆಯ ಕಾರಿರುಳನ್ನು ಆಸ್ವಾದಿಸುವುದೆಂದರೆ ಅವಳಿಗೆ ಬಹಳ ಇಷ್ಟ.
ಆದರ...
5 comments:
ಸಿಂಧು...
ಕವಿತೆ ಚೆನ್ನಾಗಿದೆ. ಮಾಧು ಮಾವ ಅವರಿಗೆ ನನ್ನ ನಮಸ್ಕಾರ ಹಾಗೂ ಅವರ ಕವಿತೆಯ ಬಗೆಗಿನ ನನ್ನ ಈ ಅನಿಸಿಕೆಯನ್ನು ದಯಮಾಡಿ ತಿಳಿಸಿ.
ನಮ್ಮೂರ ಪಕ್ಕದ ಕಲಗಾರು, ಅಲ್ಲಿ ನನಗೆ ತಿಳಿಯದ ಮಾಧು ಮಾಮ,ಅವರ ಸುಂದರ ಕವಿತೆಗಳು,ಈ ಬಾರಿಯ ನಿಮ್ಮ ನೋಟ ತುಂಬಾ ಚೆನ್ನಾಗಿದೆ. ಕಲಗಾರಿನ ಸತ್ತಮುತ್ತಲಿನ ಹಸಿರುವ ಪರಿಸರ, ಅಡಿಕೆ ತೋಟದ ಪಸಲು, ಎಲ್ಲವೂ ನೆನಪಾಗಿ ಅಪರೂಪದ ಕವಿತೆ ಓದಿಕೊಂಡೆ.ನಮ್ಮೂರಿಗೂ ಹೋಗಿ ಬಂದೆ.
ಧನ್ಯವಾದಗಳು.
ಜೋಮನ್.
ನಿಜ್ವಾಗ್ಲೂ ಚೊಲೋ ಬಂಜು ಶರ್ಮರ ಕವನ. ಮಾನವನ ದುರಾಸೆಯ ಅಟ್ಟಹಾಸಕ್ಕೆ ಮೂಕ-ಮುಗ್ಧ ಪ್ರಕೃತಿ ಬೆಲೆತೆರುತ್ತಿದೆ.
ಸಿಂಧು ಅವರೇ,
ನಿಜವಾಗಲೂ ಒಳ್ಳೆ ಕವಿತೆ ಕೊಟ್ಟಿದ್ದೀರಿ. ಯಾವುದೇ ಅಬ್ಬರವಿಲ್ಲದ ಪರಿಸರ ಪ್ರಿಯ ಕವಿತೆ. ನಮ್ಮ ಆಸೆಗೆ ಬಲಿಯಾಗುತ್ತಿರುವ ನಿಸರ್ಗದ ಬಗ್ಗೆ ಕಾಳಜಿ ಮೂಡಿಸುವ ಕವಿತೆ. ಮಾಧು ಮಾವಯ್ಯನಿಗೆ ನಮಸ್ಕಾರ.
ನಾವಡ
ಶಾಂತಲಾ,
ತಿಳಿಸಿದ್ದೇನೆ. ಅವನಿಗೆ ತುಂಬ ಖುಷಿ.
ಜೋಮನ್,
ಕಲಗಾರು ಚಿತ್ರದಲ್ಲಿ ಬರೆದಿಟ್ಟಂತಹ ಊರು.
ಮಾಧು ಮಾವ ಏನು ಬರೆದರೂ ಸಾಲದು ಅವರ ಬಗ್ಗೆ.
ತೇಜಸ್ವಿನಿ,
ಪ್ರತಿಕ್ರಿಯೆಗೆ ಧನ್ಯವಾದ.
ನಾವಡರೆ,
ಹೌದು. ಅಬ್ಬರವಿಲ್ಲದ ಹೊಳೆಬದಿಯ ಹಾಡಿನಂತ ಕವಿತೆ. ನಿಮಗೂ ಎಲ್ಲ ಇಷ್ಟವಾಗಬಹುದು ಅಂತಲೇ ಹಾಕಿದೆ.
ಪ್ರೀತಿಯಿಂದ
ಸಿಂಧು
Post a Comment