Thursday, November 2, 2017

ಅತಂತ್ರ ಜೂಡ್ -

ಛಾಯಾ ಭಗವತಿ ( ಮೂಲ ಇಂಗ್ಲಿಷ್ - ಜೂಡ್ ದಿ ಅಬ್ಸ್ಕ್ಯೂರ್ - ಥಾಮಸ್ ಹಾರ್ಡಿ) 

ಒಂದು ವಿಶಾಲ ಹುಲ್ಲುಗಾವಲು ಅದರಾಚೆಗೆ ಬೆಟ್ಟಸಾಲು, ಬಳಸಿ ಹರಿಯುವ ಹೊಳೆ, ಕತ್ತು ಮೇಲೆತ್ತಿದರೆ ನೀಲಿ ಆಕಾಶ... ದೂರದಲ್ಲಿ ಕುರಿಗಾಹಿಗಳ ಮಂದೆ, ರಾಟೆಯಿಂದ ನೀರು ಸುರಿಯುತ್ತಿದೆ. ಗಾಳಿಯಂತ್ರದ ಚಿತ್ತಾರವಿದೆ, ಈಗಷ್ಟೆ ಬಿಸಿಲು ಬಿದ್ದು ಓಡಾಡುವ ಜನ ಮೈಯುದ್ದ ಕೋಟು ತೊಟ್ಟು ಮೊಣಕಾಲುದ್ದದ ಶೂಸು ತೊಟ್ಟಿರುವರು. ಇಲ್ಲೊಂದು ಕುದುರೆ ಗಾಡಿಯ ಕ್ಯಾರೇಜು ಕೂಡ. ಚರ್ಚಿನ ಗಂಟೆ ರಿಂಗಣಿಸುತ್ತಿದೆ. ಇದು ವಿಕ್ಟೋರಿಯನ್ ಕಾಲದ ಇಂಗ್ಲೆಂಡಿನ ಹಳ್ಳಿಗಾಡಿನ ಚಿತ್ರಣ. ವಿಶಾಲ ವಿಶ್ವದ ಸಮೃದ್ಧ ಭೂತಾಣದಲ್ಲಿ ಬಡತನದ ಬಾಲ್ಯ, ಅಚ್ಚರಿಗಳ ಹೊಸತನ, ಇಂಡಸ್ಟ್ರಿಯಲ್ ಮತ್ತು ಮಾರುಕಟ್ಟೆ ಇಂಗ್ಲೆಂಡಿನಿಂದ ದೂರವಾದ ಹಳ್ಳಿಗಾಡಿನ ಶ್ರಮಜೀವಿ ಸಮಾಜ, ಮಕ್ಕಳು, ದೊಡ್ಡವರು, ಈಗಷ್ಟೆ ಬೇಯಿಸುತ್ತಿರುವ ಬ್ರೆಡ್ಡಿನ ಹಬೆ, ದನಗಾಹಿಗಳ ಅಡಿಗೆಮನೆಯಲ್ಲಿ ಕಾಯುತ್ತಿರುವ ಹಾಲು, ತೆಗೆದಿಡುತ್ತಿರುವ ಬೆಣ್ಣೆ, ಹಾಲು ಕರೆಯುವ, ಹಸು ಮೇಯಿಸುವ ಜನರ ತಿರುಗಾಟ, ಗುಂಪು ಗುಂಪಲ್ಲಿ ಸೆಳೆಯುವ ಒಬ್ಬಳೇ ತಾಜಾ ತರುಣಿ,  ಅಲಕ್ಷದಲ್ಲಿ ಆದರೆ ಸುಲಕ್ಷಣವಾಗಿ ಕಣ್ಸೆಳೆಯುವ ಆ ಅವನು... ಎಲ್ಲ ಚಿತ್ರಣಗಳೂ ಕಣ್ ಕಟ್ಟುವಂತೆ ಇರುತ್ತವೆ. ಪರಿಸ್ಥಿತಿಯ ಒತ್ತಡದಲ್ಲಿ ಸಹಜ ಕಾಮನೆಗಳು ಅರಳುವ, ಕೆರಳುವ, ಬೇಯುವ, ನೋಯುವ ಮತ್ತು ಸಾಯುವ ಬಗೆ ಬಗೆಯನ್ನೂ, ಅವಕ್ಕೆ ಪೂರಕ ಮತ್ತು ಮಾರಕವಾಗುವ ಸಾಮಾಜಿಕ, ಪ್ರಾಕೃತಿಕ, ಧಾರ್ಮಿಕ, ಮತ್ತು ವೈಚಾರಿಕ ಹಿನ್ನೆಲೆಗಳ ಮಹಾನಾಟಕ ಈ ಕ್ಯಾನ್ವಾಸಿನಲ್ಲಿ ಮೂಡುತ್ತ ಹೋಗುವ ಬಗೆಯನ್ನು ಓದಿಯೇ ಅನುಭವಿಸಬೇಕು. ಇದು ಆಂಗ್ಲ ಲೇಖಕ ಥಾಮಸ್ ಹಾರ್ಡಿಯ ಕಾದಂಬರೀ ಲೋಕ. ದುರಂತ ಕಥಾನಕಗಳ ಸರದಾರ ಹಾರ್ಡಿಯ ಒಂದು ಪುಸ್ತಕ ಓದಿದರೆ ಅದರ ಆವರಿಸುವಿಕೆಯಿಂದ ಹೊರಬರಲು ತುಂಬ ಕಾಲ ಬೇಕು. ದುರಂತಗಳನ್ನು ಓದುವುದು ಸಂಕಟದ ಅನುಭವ. ಆದರೂ ಹಾರ್ಡಿಯ ಕಾದಂಬರಿಗಳಲ್ಲಿ ಆ ಪಾತ್ರಗಳು ತಾವಾಗಿಯೇ ದುರಂತದ ಕಣಿವೆ ಜಾರುವಾಗ, ಸುತ್ತಲಿದ್ದವರು ನೂಕುವಾಗ, ಇನ್ನು ಹಲವರು ಮೇಲೆಳೆಯುವಾಗ, ಅಯ್ಯೋ ಹೀಗಾಯಿತಲ್ಲ ಅನ್ನಿಸುವಾಗ ಇದೆಲ್ಲವನ್ನು ಮೀರಿದ ಒಂದು ಪ್ರಾಕೃತಿಕ ಸಮಗ್ರತೆಯಲ್ಲಿ ಇವೆಲ್ಲ ಒಂದು ಹುಲ್ಲಿನ ಬಾಗು ಬಳುಕು ಇರಬಹುದೆ..ಎಂಬ ನೋಟವನ್ನು ನಮಗೆ ಕಾಣಿಸುವ ಹಾಗಿನ ಚಿತ್ರಣಗಳು ಇವನ್ನು ಕಾದಂಬರಿಯ ನೆಲೆಯಿಂದ ಇನ್ನೆಲ್ಲಿಗೋ ಎತ್ತುತ್ತವೆ. ಗದ್ಯಕಾವ್ಯದ ಚೆಲುವು ಉಣ್ಣಿಸುತ್ತವೆ.
ಒಂದು ದಿನ ಗೆಳತಿ ಛಾಯಾ ತಾನು ಜೂಡ್ - ದಿ. ಅಬ್ಸ್ ಕ್ಯೂರ್ ಎಂಬ ಹಾರ್ಡಿಯ ಮಹಾಕಾದಂಬರಿಯ ಸಂಗ್ರಹಾನುವಾದ ಮಾಡಿರುವುದಾಗಿ ತಿಳಿಸಿದಾಗ ನಾನು ಮಾತುಮರೆತೆ. ಸ್ವಾಭಾವಿಕವಾಗಿ ಕನಸುಗಾರನಾದ ಹುಡುಗನೊಬ್ಬ ಉನ್ನತ ಬದುಕಿನ ಕನಸು ಕಾಣುತ್ತ, ತನ್ನ ಸುತ್ತಲಿನ ಪರಿಸ್ಥಿತಿ ಮತ್ತು ಒತ್ತಡಕ್ಕೆ ಮಣಿಯುತ್ತ, ನಂಬಿಕೆ ಅಪನಂಬಿಕೆಗಳ ಮಧ್ಯದ ತೂಗುಸೇತುವೆಯಲ್ಲಿ ತುಯ್ಯುತ್ತ, ಬದುಕಿನ ಚೆಲುವಿಗೆ, ಮೋಸಕ್ಕೆ ಮತ್ತು ದಾರುಣತೆಗೆ ತನ್ನನ್ನೇ ತಾನು ಕೊಟ್ಟುಕೊಳ್ಳುವ ಕಥೆಯಲ್ಲಿ ಹಾರ್ಡಿ ಆ ಕಾಲದ ಹಳ್ಳಿ ಇಂಗ್ಲೆಂಡಿನಲ್ಲಿದ್ದ ಸಾಮಾಜಿಕ ಪರಿಸರಕ್ಕೆ ಕನ್ನಡಿ ಹಿಡಿದಿದ್ದಾನೆ. ಶಿಕ್ಷಣ, ವೃತ್ತಿ, ಗಳಿಕೆ, ಸ್ಥಾನಮಾನ, ಧಾರ್ಮಿಕತೆ, ಮತ್ತು ಕುಟುಂಬ ಜೀವನ, ಮತ್ತು ಪ್ರೇಮ ಇವುಗಳ ವಿವಿಧ ರೂಪುಗಳನ್ನು ಈ ಹಿನ್ನೆಲೆಯಲ್ಲಿ ಕುಶಲ ಶಿಲ್ಪಿಯ ಹಾಗೆ ಕಂಡರಿಸಿದ್ದಾನೆ. ಸ್ವತಃ ಶಿಲ್ಪಿಯಾದ ನಾಯಕ ತನ್ನ ಜೀವನಶಿಲ್ಪವನ್ನೇ ಕಂಡರಿಸಲಾಗದ ವಿಪರೀತ ಪ್ರತಿಮೆ ಮನಸ್ಸನ್ನು ನಲುಗಿಸುತ್ತದೆ. ಎಂದೋ ಯಾವ ಕಾಲದಲ್ಲೋ ನಡೆದ ಕಥೆ ಈಗ್ಯಾಕೆ ಎನ್ನಲು ಬರದ ಕ್ಲಾಸಿಕ್ ಕಾದಂಬರಿಗಳ ಸಾಲಿನಲ್ಲಿರುವ ಇದು, ಇದರಲ್ಲಿ ಬರುವ ದ್ವಂದ್ವಗಳು ಇವತ್ತಿಗೂ ಅವತ್ತಿಗಿಂತ ಹೆಚ್ಚು ಪ್ರಸ್ತುತವಾಗಿವೆ ಎಂದು ನನ್ನ ಅನಿಸಿಕೆ. ಈ ಕಾದಂಬರಿಯ ಸಂಗ್ರಹಾನುವಾದವನ್ನು ಛಾಯಾ ಮಾಡಿದ್ದಾರೆ. ದೊಡ್ಡ ಕಾದಂಬರಿಯನ್ನು ಸಂಗ್ರಹಗೊಳಿಸುವ ಅನುವಾದದಲ್ಲಿರುವ ಮಿತಿಯ ನಡುವೆಯೂ ಈ ಅನುವಾದ ಉತ್ತಮವಾಗಿ ಬಂದಿದೆ. ಹಾರ್ಡಿಯ ಮೂಲ ಕಾದಂಬರಿಯನ್ನು ಓದುವಂತೆ ಪ್ರೇರೇಪಿಸುವುದರಲ್ಲಿ ಈ ಅನುವಾದ ಮೊದಲ ಸಮರ್ಥ ಹೆಜ್ಜೆ. ಅಷ್ಟು ದೊಡ್ಡ (೪೦೦ ಪುಟಗಳ) ಕಾದಂಬರಿಯನ್ನು ಸಂಗ್ರಹಾನುವಾದ ಮಾಡಿದರೂ ಎಲ್ಲಿಯೂ ಓದಲು ಅಡಚಣೆಯಾಗುವುದಿಲ್ಲ. ಒಂದು ಅಧ್ಯಾಯದಿಂದ ಇನ್ನೊಂದಕ್ಕೆ ಇರುವ ಹರಿವು ಸರಾಗವಾಗಿದೆ. ಹಿರಿಯರಾದ ಕೆ.ವಿ.ನಾರಾಯಣರು ದಾಖಲಿಸಿದ ಹಾಗೆ ಮಹಾಕೃತಿಯ ಮೈಗೆಡಲೀಯದೆ ಮರುರೂಪಿಸಿರುವ, ಕಿರಿದರೊಳ್ ಪಿರಿದರ್ಥವನ್ನು ಅಡಕಗೊಳಿಸುವ ಈ ಬಗೆಯನ್ನು ಛಾಯಾ ಸುಲಲಿತವಾಗಿ ಮಾಡಿದ್ದಾರೆ. ಪ್ರಪಂಚದ ಸಾಹಿತ್ಯಕೃತಿಗಳಿಗೆ ಪ್ರವೇಶಿಸಲು ಇದು ಕೈಪಿಡಿಯಾಗಿ ಕೆಲಸ ಮಾಡುತ್ತದೆ.

ಬೇಲೂರಿನ ದೇಗುಲದೊಳಗೆ ಇರುವ ಕಂಬವೊಂದರಲ್ಲಿ ಇಡೀ ದೇವಾಲಯದ ಮಿನಿಯೇಚರ್ ಇರುವ ಕಂಬವೊಂದಿದೆ. ಅದು ಛಾಯಾ ಮಾಡಿರುವ ಅತಂತ್ರ-ಜೂಡ್  ಕೃತಿಗೆ ಸಾರ್ಥಕ ಉಪಮೆ. ಎಲ್ಲರೂ ಓದಿ. ಹೊಸ ಓದುಗರು ದಯವಿಟ್ಟು ಓದಿ ಎಂಬುದು ನನ್ನ ನಮ್ರ ಸಲಹೆ.


ಶಿಕ್ಷಣಕ್ಕೆ ಹಂಬಲಿಸುವ ಶ್ರಮಿಕ ವರ್ಗ, ಅದನ್ನು ಸಾಧಿಸಲು ಅವರು ಪಡುವ ಕಷ್ಟ, ಧಾರ್ಮಿಕ ಮತ್ತು ಸಾಮಾಜಿಕ ಕಟ್ಟಳೆಗಳ ಮಧ್ಯೆ ನಲುಗುವ ಮಹಿಳೆಯ ಮನೋಲೋಕ, ತಮ್ಮ ಮಿತಿಗಳನ್ನ ಮೀರುವ ಪ್ರಯತ್ನದಲ್ಲಿಯೇ ಸುತ್ತಲಿನ ಸಮಾಜದಿಂದ ಜರ್ಝರಿತರಾಗುವ ಜ್ಯೂಡ್ ಮತ್ತು ಸ್ಯೂ.. ಸಂಪೂರ್ಣ ಭಿನ್ನ ವಿಚಾರಧಾರೆಯ ಇಬ್ಬರೂ ಕೊನೆಯಲ್ಲಿ ಹೇಗೆ ತಮ್ ತಮ್ಮ ಮೂಲ ವಿಚಾರಗಳ ವಿರುದ್ಧ ಹಾದಿಯಲ್ಲಿ ಮನಸಿಲ್ಲದ ಮನಸಿನಲ್ಲಿ ಹೊರಟುಬಿಡುವರು ಎಂಬುದು ಆಗಿನ್ನೂ ಕೈಗಾರಿಕೆಗಳ, ನಗರೀಕರಣದ, ಸಂಬಂಧ ಬೆಸೆಯುವ ರೈಲುದಾರಿಯ ಪ್ರತಿಮೆಯಲ್ಲಿ ಅಲ್ಲಲ್ಲಿ ಬದಲಾಗುವ ನಿಲ್ದಾಣಗಳ ಸೂಚನೆಯಲ್ಲಿ ಓದುಗರ ಮನಸ್ಸಿನ ನೀಲಿಯಲ್ಲಿ ಹೊಗೆ ಚೆಲ್ಲುತ್ತ ಸಾಗುವ ದೀರ್ಘ ರೈಲಾಗಿ ಈ ಕಾದಂಬರಿ ಅನಿಸಿತು ನನಗೆ. ಅನುವಾದ ಕಷ್ಟ. ಹಳೆಯ ಕಾಲದ ಚಿತ್ರಣಗಳ ಅನುವಾದ ಇನ್ನೂ ಕಷ್ಟ. ಅದನ್ನು ಆ ಕ್ಲಾಸಿಕಲ್ ಸಾಹಿತ್ಯವನ್ನು ಚೆನ್ನಾಗಿ ಮನನ ಮಾಡಿಕೊಂಡ ಮನಸ್ಸು ಸೊಗಸಾಗಿ ಮಾಡಬಲ್ಲದು. ಓದುವವರ ಮನಮುಟ್ಟುವ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಲೂ ಬಲ್ಲದು ಅಂತ ಈ ಅನುವಾದ ಓದಿ ಅನಿಸಿತು ನನಗೆ.

1 comment:

sunaath said...

ಅತ್ಯುತ್ತಮ ಪರಿಚಯ. ಪರಿಚಯಶೈಲಿಯೂ ಕೂಡ ಸುಂದರವಾಗಿರಬಲ್ಲದು, ಸಮರ್ಪಕವಾಗಿರಬಲ್ಲದು, ಸಮಗ್ರವಾಗಿರಬಲ್ಲದು ಎನ್ನುವುದರ ಮಾದರಿಯಾಗಿದೆ ಈ ಪರಿಚಯಲೇಖನ.