ಇದು ಈ ಬಾರಿ ಪ್ರಜಾವಾಣಿ ಭೂಮಿಕಾ ಸಂಕ್ರಾಂತಿ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ನನ್ನ ಪ್ರಬಂಧ.
ಲಲಿತ ಪ್ರಬಂಧದ ಹತ್ತಿರದ ಕಸಿನ್ನು ಅಷ್ಟೇ ಅಂತ ನಾನು ಮೆಚ್ಚುವ ಹಲವರು ಹೇಳಿದ್ದಾರೆ.
ಇಷ್ಟ ಆಯ್ತು. ಆದ್ರೂ ಸ್ವಲ್ಪ ಭಾಷಣ ಇದೆ ಕೊನೆಕೊನೆಗೆ ಅಂತ ತೀರ್ಪುಗಾರರು ಹೇಳಿದ್ದಾರೆ.
ಅದೇನೇ ಆದ್ರೂ ನಂಗೆ ತುಂಬ ಇಷ್ಟ ಆದ "ಆ ಕ್ಷಣದ ಸತ್ಯ" ದ ಆಲೂರು ಚಂದ್ರಶೇಖರ್ ಅವರ ತೀರ್ಪುಗಾರಿಕೆಯಲ್ಲಿ ತೂರಿಬಂತು ಇದು ಅನ್ನೋದು ನಂಗೆ ಎಲ್ಲಕ್ಕಿಂತ ಜಾಸ್ತಿ ಖುಶೀ.
ಓದಿ ನಿಮಗೆ ಏನನ್ನಿಸ್ತು ಹೇಳಿ.
------------------------------------------------------------------
ರಾತ್ರಿ ಇದ್ದಕ್ಕಿದ್ದಂಗೆ ಎಚ್ಚರಾಯಿತು. ಕಿಟಕಿಬದಿಯ ಮಂಚ. ಹೊರಗೆ ಮಹಾನಗರದ ಅರೆಗತ್ತಲಲ್ಲಿ ಹಾಲು ಸುರಿವ ಬೆಳದಿಂಗಳು. ಆಕಾಶಕ್ಕೆದ್ದು ನಿಂತ ಅರೆ-ಮನೆಗಳೆಲ್ಲ ಭೂಮಿಗೆ ಮುಖ ಕವುಚಿ ಮಲಗಿದಂತಿರುವ ಮುದ್ದು ಇರುಳು. ತಿಂಗಳ ಬೆಳಕು ಎಷ್ಟು ಹೊಳಪಾಗಿತ್ತೆಂದರೆ ಮಲಗುವ ಮುನ್ನ ಕೆನ್ನೆ ತೋಯಿಸಿದ್ದ ಎಲ್ಲ ಭಾವಗಳೂ ಗಪ್ಪು ಚಿಪ್ಪಾಗಿ ಕೂತು ಮನಸು ಹಾರಗುದರಿ ಬೆನ್ನನೇರಿ ಮಲ್ಲಿಗಿ ಮಂಟಪದ ಹಾದಿ ಹಿಡಿಯಲೇ ಬೇಕಾಯಿತು. ಹುಕ್ಕೇರಿ ಬಾಳಪ್ಪಜ್ಜನ ದನಿ ಆ ಬೆಳಕಿನೊಡನೆ ತೆಕ್ಕೆ ಹಾಕಿ ಉಲಿಯಿತು.. “ಎಂಥಾ ಚಂದ ಬೆಳದಿಂಗಳ...ಜಗದ ಜನಕೆ ಮಂಗಳ.” ಕಣ್ ತಣಿಸಿದ ತಂಪು ಬೇಗುದಿಯ ಮನವನ್ನಿಷ್ಟು ತಹಬಂದಿಗೆ ತಂದಿತು.
ಪಕ್ಕದಲಿ ನಿದ್ದೆಯಲಿದ್ದ ಎರಡು ಕಿನ್ನರ ಜೀವಗಳು ಮತ್ತಷ್ಟು ಮುದ್ದಾಗಿ ಮಗ್ಗುಲು ಮುರಿದು ಪುಟ್ ಪುಟಾಣೀ ಕೈಗಳಲಿ ಬಳಸುತ್ತ, ಚಿಕ್ ಚಿಕಾಣಿ ಕಾಲ್ಗಳ ಎತ್ತಿ ಹಾಕುತ್ತ ನಿದ್ದೆ ಸವಿಯ ಕಥೆ ಸಾರಿದವು. ಆಗ ಇನ್ನೂ ತೀವ್ರವಾಗಿ ಅನಿಸಿತು. ಇಲ್ಲ ಅವಳೇ ಆಗಿದ್ದಿದ್ದರೆ ಎದ್ದು ಹೋಗುತ್ತಿರಲಿಲ್ಲ.
ಬದುಕಿನ ಭಾವೋತ್ಕರ್ಷಗಳಿಗೆ ಪಕ್ಕಾಗಿ,ಮೀರುವಿಕೆಯ ಹಂಬಲದ ಅವನು ಜ್ಞಾನದ ಹೊಸಿಲಲ್ಲಿ ನಿಂತು ರಾತ್ರೋ ರಾತ್ರಿ ಹೊರಟ ಕತೆ ಕೇಳಿದಂದಿನಿಂದ ಒಂದು ಕಸಿವಿಸಿ. ಅವನು ಹೊರಡುವ ಮೊದಲು ಹಿಂದಿರುಗಿ ನೋಡಿದಾಗ, ಅವಳು ಬೇಕೆಂತಲೇ ಕಣ್ಣು ಮುಚ್ಚಿಕೊಂಡಿದ್ದಳು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ! ತನ್ನ ಪ್ರೀತಿಯ ಜೀವದ ಹಂಬಲಿಕೆಯನ್ನ ಕಟ್ಟುಪಾಡಿಗೆ ಒಳಪಡಿಸದೆ ಬಿಟ್ಟು ಕೊಟ್ಟ ಅವಳು.. ಅವನ ಜಾಗದಲ್ಲಿ ತಾನೇ ಇದ್ದಿದ್ದರೆ ಬಿಟ್ಟು ಹೋಗಿ ಸಾಧಿಸುತ್ತಿರಲಿಲ್ಲ. ಇದ್ದು ತೋರಿಸುತ್ತಿದ್ದಳೇನೋ ಎಂದು ಅನಿಸುತ್ತಿರುತ್ತದೆ. ಇದು ಒಬ್ಬ ಟಿಪಿಕಲ್ ಹೆಣ್ಣು, ಅಮ್ಮ, ಹೆಂಡತಿ, ಮಗಳು ಮೀರದ ಕಟ್ಟು ಎಂದೂ... ‘ಬಿಚ್ಚಿಟ್ಟ ಹಗ್ಗದ ಅರಿವಿರದೆ ಗೂಟದ ಪಕ್ಕದಲೇ ಕೂತ ಒಂಟೆ’ ಯ ಮನಸ್ಥಿತಿ ಎನ್ನುವಿರೇನೋ... ಆದರೆ ನೀವೇ ಹೇಳಿ….
ಬೆಳಕು ಹೊರಗೆ ಬಾನಿನಲ್ಲಿ, ಭುವಿಯಲ್ಲಿ, ಗಾಳಿಯಲ್ಲಿ, ನೋಡಿದಲ್ಲಿ. "ನೋಡಿ"ದಲ್ಲಿ ಮಾತ್ರ. "ಕಂಡವರಿಗಷ್ಟೆ.. ಕಂಡವರಿಗಲ್ಲ"..ಎಂದ ಬೇಂದ್ರೆ ಅಜ್ಜನ "ಬೆಳಕನ್ನ ಒಳಗೆ ಕರೆಯುವ" ಹಾಡು ಹಸೆಯ ಕಲಿಯಬೇಕು. ಹೀಗಲ್ಲದೆ ಬಾನ ಬೆಳದಿಂಗಳು ಒಳಗಿಳಿಯುವುದೆಂತು?! ಮುಂದೊಮ್ಮೆ , “ನಿಮ್ಮಿಂದಲೇ ಬಂದವರು ನಾವು, ನಿಮ್ಮವರೆ ನಾವು. ಆದರೆ ನೀವೇ ಅಲ್ಲ, ನಮ್ಮ ನಾಳೆಗಳು ನಿಮ್ಮವಲ್ಲ” ಎಂಬಂತೆ ಸುತ್ತ ನೆರೆದವರು ಅವರವರ ಹಾದಿಯ ಹಿಡಿವಾಗ, ಜಗುಲಿಯಲಿ ನಿಂತು ಕೈಬೀಸಿ ಕಳಿಸುವಾಗ ಈ ಸೊಲ್ಲು ಜೊತೆಗುಳಿಯಬಹುದು. ಪುಟಿಪುಟಿವ ನಾಳೆಗಳ ಹಂಬಲು ಇಳಿದು, ಇಂದಿಗಿಂದಿನ ಬದುಕು ಎಂದು ನಾವೆಯದು ಹೊಯ್ದಾಡುವಾಗ ಸರ್ವಋತು ಬಂದರಿನ ಸಿಗ್ನಲ್ಲು ಮಿಂಚಬಹುದು.
ಭರಿಸುವುದಕೆ ತಕ್ಕ ಮನಸ್ಥಿತಿಗೇರದ ಹೊರತು ಬಿಟ್ಟು ಹೋಗುವುದಾದರೂ ಹ್ಯಾಗೆ, ಯಾವ ಬೆಳಕೇ ಕರೆದು ತೋರಿದರೂ ಹೊರಟು ಬಿಡುವುದು ಹೇಗೆ? ಇದು ಅವಳ ಹಾಡು. ಇವಳ ಪಾಡು. ಅವನ ಜಾಡು ಬೇರೆಯೇ. ಬೆಳಕು ಮಿಂಚಿದರೆ ಹೊರಡಬಹುದು. ಎಲ್ಲವನ್ನೂ ಇದ್ದಲ್ಲಿಯೇ ಬಿಟ್ಟು. ಹಳಹಳಿಕೆಯೆನ್ನದಿರಿ. ನನ್ನ ನಿಮ್ಮ ಕಡುವಾಸ್ತವ ಇದು. ಇವಳು ಅವನಲ್ಲ. ಇವಳು ಬಯಸಿದರೆ ಅವನಾಗಬಹುದಾದರೂ, ಅವನೆಂದಿಗೂ ಇವಳಾಗಲಾರ. ಅದು ಅವನ ಮಿತಿ.
ಮಳೆಯೇ ಸುರಿಯುವುದು ನಿಜವೆಂದಾದರೆ, ಕೊಡೆಯಿಲ್ಲ, ಆಸರೆಯಿಲ್ಲವೆಂದಾದರೆ ಸುರಿವ ನೀರಲಿ ಕಾಲಾಡುತ್ತ ಹಾಡುಗುನುಗುತ್ತ ಹೋಗುವುದು - ಬಯ್ಯುತ್ತ ಬೇಸರಿಸುತ್ತ ಮಳೆ ನಿಲ್ಲುವವರೆಗೂ ಪರಿತಪಿಸುತ್ತ ಇರುವುದಕ್ಕಿಂತ ಒಳ್ಳೆಯದು ಎಂಬುದು ನನ್ನ ಭಾವನೆ. ಮನೆ ಸೇರಿದ ಮೇಲೆ ಬೆಚ್ಚನೆಯ ಬಟ್ಟೆಯ ಧರಿಸಿ ಕಾಫಿ ಕುಡಿವಾಗ ಪ್ಯಾರಸಿಟಮೋಲೊಂದನ್ನು ಮರೆಯದೆ ನುಂಗಬೇಕಷ್ಟೆ.
ಬೆಳಕು ಏಕೆ ಕತ್ತಲನ್ನ ಸೊಗಯಿಸುತ್ತದೆ ಎಂದು ಈಗ ಈ ತಿಂಗಳ ಹೊನಲಲ್ಲಿ ಮೀಯುವಾಗ ಅರ್ಥವಾಯಿತು. ಎಲ್ಲ ಕಹಿಗಳ ಸೋಸಿ ಬರುವ ಕಡು ನಿಜದಲ್ಲಿ ಅನಿಸುತ್ತದೆ. ಇದಿಷ್ಟೇ ಅಂದುಕೊಂಡಿರುತ್ತೇವೆ. ಅಲ್ಲ ಅದಲ್ಲ. " ಸಾವ್ ಗಾಳಿ ತೂರಲ್ ಅರಿವಪ್ಪುದಯ್...! ಆ ಜೊಳ್ಳೆ ಗಟ್ಟಿ. ನಾವು ಗಟ್ಟಿಯೆಂದರಿತುದೆಲ್ಲಂ ಜೊಳ್ಳು..!!" ಎಂದು ಕುವೆಂಪುರವರ ವಾಲಿಯೆಂದ ಹಾಗೆ. “ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ” ಎಂದ ನರಸಿಂಹಸ್ವಾಮಿಯವರೂ, “ಹೊರಗಿನ ಸಡಗರ ಮುಗಿದಂದು ಬುದ್ಧಿ ಕಳೆಯೇರುವುದು” ಎಂದ ತಿಮ್ಮ ಗುರುವೂ ಒಟ್ಟೊಟ್ಟಿಗೆ ನೆನಪಾಗುತ್ತಾರೆ. ಬದುಕು ಗರಿಗರಿಯಾಗಿ ಇಡಿಯಾಗಿ ನನಸಾಗಿಯೆ ಇರಲಿ. ಒಳಗಿನ ಹಾದಿಗೆ ಮಾತ್ರ ಕನಸು ಕೈಮರವಾಗಲಿ.
ಹಿರಿದೊಂದಿದೆ ನಾನು ಕಿರಿಯಳು, ಎಂಬಲ್ಲಿ ದ್ವೈತವೂ, ಆ ಹಿರಿಯದರ ಬಿಂದು ನಾನೆಂಬ ಅದ್ವೈತವೂ ಅರಿವಾಗಲು ಬಿಟ್ಟು ಹೊರಡಲೇಬೇಕೆಂದಿಲ್ಲ. ಹೊರಡುವವರ ಕಟ್ಟಿ ಹಿಡಿಯಲು ಸಲ್ಲ. ಮೀರುವುದಕೆ ಹೊರಟವರು ಒಳಗೊಳ್ಳುವುದು ಕಲಿಯಬೇಕು. ಎಲ್ಲವೂ ಗೊತ್ತಿರುವುದಿಲ್ಲ ಎಂಬುದು ಮೊದಲು ಗೊತ್ತಿರಬೇಕು.
ಇಷ್ಟೆಲ್ಲ ಗಳುಹಿದ ಮೇಲು ಹೊರಗೆ ಮಾತ್ರ ಹಾಲ್ ಬೆಳುದಿಂಗಳು. ತನ್ನ ಪಾಡಿಗೆ ತಾನು. ಎಲ್ಲವನ್ನು ಭರಿಸಿ ನಡೆವ, ಬಿಟ್ಟು ಕೊಟ್ಟು ಒಳಗೊಳ್ಳುವ ಅವಳ ಹಾಗೆ. ಇವಳ ಹಾಗೆ. ಅದಕ್ಕೇ ಹೇಳಿದ್ದು ಅವಳೇ ಆಗಿದ್ದಿದ್ದರೆ ರಾತ್ರಿಯಲಿ, ಮಲಗಿದವರ ಬಿಟ್ಟು ಎದ್ದು ಹೋಗುತ್ತಿರಲಿಲ್ಲ. ಆಸೆಯೇ ದುಃಖಕ್ಕೆ ಮೂಲವೆಂದು ಗೊತ್ತಿದ್ದೂ ಆಸೆ ಪಡದಿರುತ್ತಿರಲಿಲ್ಲ. ಅವನಿಗಾದರೋ ಕಡುಕಷ್ಟ ತಿಳಿಸಿ ಹೇಳಲು. ಸಂಘಕ್ಕೆ ಬಂದವರೆಲ್ಲ ಜಾಸ್ತಿ ಗಂಡಸರು. ಭಿಕ್ಕುಣಿ ಸಂಘ ಸೇರದೆಯೇ ಬೆಳಕ ಹೊದ್ದವಳು. ಮಿಕ್ಕಿ ಮೀರಿ ಹೋಗುವವನ ಬಿಟ್ಟು ಕೊಟ್ಟವಳು. ಮೀರದೆಯೆ ಒಳಗೊಂಡವಳು.
ಈ ಇಂಥ ಇವಳನ್ನೂ ಹಣಿಯುವ ಮೃಗತೃಷೆಯೊಂದಿದೆ ಸುತ್ತಲೂ. ಶತಮಾನಗಳಿಂದ ಮುಸುಕಿನ ಮರೆಯಲ್ಲೆ ಹಿಂಜರಿಕೆಯಲ್ಲಿ ಆಕ್ರಮಿಸುತ್ತಿದ್ದಿದ್ದು ಈಗದೇಕೋ ಏಕಾಏಕಿ, ನೇರಾನೇರ, ಸರ್ವವ್ಯಾಪಿ...ಹಾವಳಿಗೆ ತೊಡಗಿದೆ.ಉಕ್ಕುವ ಇವಳ ಚೈತನ್ಯವ ದಕ್ಕಿಸಿಕೊಳ್ಳುವುದಿರಲಿ ನೋಡಲೂ ಕಣ್ಣು ಕೋರೈಸುತ್ತದೆ. ಅದಕೆಂದೇ ಕನ್ನಡಕ ಹಾಕಿದ ಕಾಮೋತ್ಕರ್ಷದ ಅಟ್ಟಹಾಸ. ಇವಳನ್ನ ಇವಳ ಮೂಲದಲ್ಲಿಯೇ ಕತ್ತರಿಸಬೇಕೆನ್ನುವ, ದೇಹದಲ್ಲೇ ಉಂಡು ತೀರಿಸುವ ಆಶೆಯ ಪಾಶಗಳ ಬಿಗಿದವರ ಕಾಲಮಾನದಲ್ಲಿದ್ದೇವೆ. ದೊಡ್ಡವಳ ಮುಂದೆ ಮಂಡಿಯೂರಬೇಕಾದೀತು.ಮಗುವಾದರೆ ಒಳಿತು. ಒಪ್ಪದಿದ್ದರೂ ಬಗ್ಗಿಸಬಹುದು. ತಗ್ಗದಿದ್ದರೂ ಜಗ್ಗಬಹುದು.
ಹೊಸಕುವ ಕಾಲಿಗೆ ಹೂವೇನು ಚಿಗುರೇನು?! ಒಣ ತರಗೆಲೆಯನ್ನೂ ಪುಡಿಗಟ್ಟಿಸಿ ನಡೆಯುವ ಮದೋನ್ಮತ್ತ ಗುಂಪಿಗೆ ಜೀವನ್ಮುಖತೆಯ ಹಾಡು ಕೇಳಬಹುದೆ?!
ಹೂಮನದ ಮಿಡಿತ ಅರಿಯಬಹುದೆ?!
ಬೆಳಕಿದ್ದರೆ ಮಾತ್ರ ಕತ್ತಲ ಸೊಗಸು ಅರಿವಾಗುವುದು. ಕಡುನೀಲಿ ಬಾನಂಗಳಕೆ ಚುಕ್ಕಿಗಳ ನೆರವು.
ಕತ್ತಲೆಯನೆ ಹೊದ್ದು ಕತ್ತಲನೆ ಉಂಡು ಕತ್ತಲನೆ ಹಂಚುವವರು ಬೆಳಕ ಸಹಿಸುವುದಿಲ್ಲ. ಈ ಎಚ್ಚರದಲ್ಲಿ ಕನಸು ಕಾಣುತಿರು. ಮಿತಿಗಳ ಆಚೆಗಿನ ಸಾಧ್ಯತೆಗಳಲ್ಲಿ ಈಜುತಿರು. ನೀನು ಎರಡನೆಯವಳೆಂದವರ ಮಾತ ನಗುತ ಒಪ್ಪುತ್ತಲೆ, ನೀನೆ ಮೊದಲೆನ್ನುವುದ ಮರೆಯದಿರು. ಅದನೆ ಮಾತೊಡೆದು ಹೇಳದಿರು. ದೇವಿಯಾಗುವುದು ಬೇಡ. ದಾಸಿ ಬೇಡವೆ ಬೇಡ. ಮೊದಲಿಗನು ತಾನೆಂದವನ ಬೆನ್ನಾಸರೆಗೆ ಬೀಳದೆ ನಿನ್ನ ದಾರಿಯಲಿ ನೀನು ನಡೆಯುತಿರು. ನಿನ್ನ ಮಡಿಲ ಮಕ್ಕಳಿಗೂ ಈ ಮಾತ ಕಲಿಸುತಿರು. ಸಾಧ್ಯವಾದರೆ ಸ್ಥಾನಗಳ ಗೆರೆ ಅಳಿಸಿಬಿಡು. ನಾವು ಮೀರಬಲ್ಲ ನಮ್ಮ ಮಿತಿಯ ನಮಗೆ ಅರಿವಾಗುವ ಹಾಗೆ ಮಾಡಿದ ಅವನಿಗೆ ನಮಿಸಬೇಕು. ಹೌದು. ಹಿಂಸೆ ಕೊಟ್ಟವನಿಗೆ ಹಿಡಿದು ತಪರಾಕಿ ತಟ್ಟುವ ಮೊದಲು ನಮಿಸಬೇಕು.
ಅದು ಮೀರುವ ಹಾದಿಯ ಮೊದಲ ಹೆಜ್ಜೆ.
P.S: Credits:
ಎಂಥ ಚೆಂದ ಬೆಳದಿಂಗಳು, ಜಗದ ಜನಕೆ ಮಂಗಳ - ಕವಿತೆಯ ಸೊಲ್ಲು ಎಸ್.ವಿ ಪರಮೇಶ್ವರ ಭಟ್ಟರದು.
ನಮ್ಮಿಂದಲೇ ಬಂದವರು ಆದರೆ ನಾವೇ ಅಲ್ಲ - ಗಿಬ್ರಾನನ "ಚಿಲ್ಡ್ರನ್" ಪದ್ಯದ ಭಾವ-ಸಾರ.
ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ - ಕೆ.ಎಸ್.ನ ಅವರ ಕವಿತೆ ಸಾಲು.
ಲಲಿತ ಪ್ರಬಂಧದ ಹತ್ತಿರದ ಕಸಿನ್ನು ಅಷ್ಟೇ ಅಂತ ನಾನು ಮೆಚ್ಚುವ ಹಲವರು ಹೇಳಿದ್ದಾರೆ.
ಇಷ್ಟ ಆಯ್ತು. ಆದ್ರೂ ಸ್ವಲ್ಪ ಭಾಷಣ ಇದೆ ಕೊನೆಕೊನೆಗೆ ಅಂತ ತೀರ್ಪುಗಾರರು ಹೇಳಿದ್ದಾರೆ.
ಅದೇನೇ ಆದ್ರೂ ನಂಗೆ ತುಂಬ ಇಷ್ಟ ಆದ "ಆ ಕ್ಷಣದ ಸತ್ಯ" ದ ಆಲೂರು ಚಂದ್ರಶೇಖರ್ ಅವರ ತೀರ್ಪುಗಾರಿಕೆಯಲ್ಲಿ ತೂರಿಬಂತು ಇದು ಅನ್ನೋದು ನಂಗೆ ಎಲ್ಲಕ್ಕಿಂತ ಜಾಸ್ತಿ ಖುಶೀ.
ಓದಿ ನಿಮಗೆ ಏನನ್ನಿಸ್ತು ಹೇಳಿ.
------------------------------------------------------------------
ಪಕ್ಕದಲಿ ನಿದ್ದೆಯಲಿದ್ದ ಎರಡು ಕಿನ್ನರ ಜೀವಗಳು ಮತ್ತಷ್ಟು ಮುದ್ದಾಗಿ ಮಗ್ಗುಲು ಮುರಿದು ಪುಟ್ ಪುಟಾಣೀ ಕೈಗಳಲಿ ಬಳಸುತ್ತ, ಚಿಕ್ ಚಿಕಾಣಿ ಕಾಲ್ಗಳ ಎತ್ತಿ ಹಾಕುತ್ತ ನಿದ್ದೆ ಸವಿಯ ಕಥೆ ಸಾರಿದವು. ಆಗ ಇನ್ನೂ ತೀವ್ರವಾಗಿ ಅನಿಸಿತು. ಇಲ್ಲ ಅವಳೇ ಆಗಿದ್ದಿದ್ದರೆ ಎದ್ದು ಹೋಗುತ್ತಿರಲಿಲ್ಲ.
ಬದುಕಿನ ಭಾವೋತ್ಕರ್ಷಗಳಿಗೆ ಪಕ್ಕಾಗಿ,ಮೀರುವಿಕೆಯ ಹಂಬಲದ ಅವನು ಜ್ಞಾನದ ಹೊಸಿಲಲ್ಲಿ ನಿಂತು ರಾತ್ರೋ ರಾತ್ರಿ ಹೊರಟ ಕತೆ ಕೇಳಿದಂದಿನಿಂದ ಒಂದು ಕಸಿವಿಸಿ. ಅವನು ಹೊರಡುವ ಮೊದಲು ಹಿಂದಿರುಗಿ ನೋಡಿದಾಗ, ಅವಳು ಬೇಕೆಂತಲೇ ಕಣ್ಣು ಮುಚ್ಚಿಕೊಂಡಿದ್ದಳು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ! ತನ್ನ ಪ್ರೀತಿಯ ಜೀವದ ಹಂಬಲಿಕೆಯನ್ನ ಕಟ್ಟುಪಾಡಿಗೆ ಒಳಪಡಿಸದೆ ಬಿಟ್ಟು ಕೊಟ್ಟ ಅವಳು.. ಅವನ ಜಾಗದಲ್ಲಿ ತಾನೇ ಇದ್ದಿದ್ದರೆ ಬಿಟ್ಟು ಹೋಗಿ ಸಾಧಿಸುತ್ತಿರಲಿಲ್ಲ. ಇದ್ದು ತೋರಿಸುತ್ತಿದ್ದಳೇನೋ ಎಂದು ಅನಿಸುತ್ತಿರುತ್ತದೆ. ಇದು ಒಬ್ಬ ಟಿಪಿಕಲ್ ಹೆಣ್ಣು, ಅಮ್ಮ, ಹೆಂಡತಿ, ಮಗಳು ಮೀರದ ಕಟ್ಟು ಎಂದೂ... ‘ಬಿಚ್ಚಿಟ್ಟ ಹಗ್ಗದ ಅರಿವಿರದೆ ಗೂಟದ ಪಕ್ಕದಲೇ ಕೂತ ಒಂಟೆ’ ಯ ಮನಸ್ಥಿತಿ ಎನ್ನುವಿರೇನೋ... ಆದರೆ ನೀವೇ ಹೇಳಿ….
ಬೆರಳ ತುದಿಯನ್ನೋ ಹೆರಳನ್ನೋ ಸೆರಗಿನಂಚನ್ನೋ ಬದುಕಿನ ಭರವಸೆಯೆ ಇದೆಂದು ಪುಟ್ಟ ಮುಷ್ಟಿಯಲಿ ಹಿಡಿದು ನಿದ್ರಿಸಿಹ ಮುದ್ದು ಮಕ್ಕಳನು ಹೇಗೆ ಬಿಟ್ಟು ಹೋಗಬಲ್ಲೆ?ಹೀಗೆಲ್ಲ ಇರಲು ಬೆಳಕಿನ ಸಮುದ್ರದ ದಂಡೆಯಲ್ಲೇ ನಿಂತ ನಾನು, ನೀರೊಳಗೆ ಬೀಳದೆ, ಮುಳುಗದೆ, ಕರಗುವ ಆಸೆಯ ಹೊತ್ತು ಕಾಯುತಲೆ ಇರಬೇಕು. ಕರಗಬಾರದು ಅಲ್ಲವೇ? ನೀವೇ ಹೇಳಿ….
ಬದುಕಿನ ಪಾತ್ರೆಯ ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ ಎಂಬ ಹಾಗೆ ದಿನದಿನವೂ ಅನುಕ್ಷಣವೂ ಹಂಚಿಕೊಂಡು ಈಗ ಹಾಸಿಗೆಯಂಚಲಿ ನಿದ್ದೆಹೋದ ಈ ಇವನ ಹೇಗೆ ತೊರೆಯಬಲ್ಲೆ?
ಬೆಳಗ್ಗೆ ಬರಲಿರುವ ಹಾಲಿನವನ ಅಂದಾಜಿಗೆ ಬಾಗಿಲಿಗೆ ಕೂಪನ್ ಸಿಕ್ಕಿಸಿದ್ದೇನೆ. ಡಿಕಾಕ್ಷನ್ನಿಗೆ ನೀರು ಕುದಿಯುವ ಮೊದಲು ಬಾಗಿಲು ತೆರೆದು ಹಾಲು ಪ್ಯಾಕೆಟ್ಟುಗಳ ತೆಗೆದುಕೊಳ್ಳಬೇಕು.
ಹಾಲು ಕಾಯುವ ಮುನ್ನ ಸೂರ್ಯನಮಸ್ಕಾರ ಮುಗಿಸಿ ಒಂದೆರಡು ಆಸನವ ಹಾಕಬೇಕು.
ಮುಚ್ಚಿದಕಣ್ಣಲಿ ಸ್ನಾನಕ್ಕೆ ಬರುವ ಪುಟ್ಟ ಮಗಳಿಗೆ ಇಸ್ತ್ರೀ ಮಾಡಿದ ಯುನಿಫಾರ್ಮ್ ಇರಬೇಕು.
ಎದ್ದು ರಚ್ಚೆ ಹಿಡಿಯುವ ಮುದ್ದು ಮಗುವಿನ ಪಕ್ಕದಲಿ ಹಾಲು ಬಾಟಲಿ ಇಡಬೇಕು.
ಕುಕ್ಕರ್ ಕೂಗುವಷ್ಟರಲಿ ಮಸಾಲೆ ಅರೆದು ನೆನೆಸಿದ ಹುಣಿಸೆಹಣ್ಣು ಕಿವಿಚಬೇಕು.
ಕಾವಲಿಗೆ ಎಣ್ಣೆ ಸವರಿ ಕಾಯುವಷ್ಟರಲಿ ಲಂಚ್ ಬಾಕ್ಸುಗಳ ಜೋಡಿಸಿಟ್ಟುಕೊಳ್ಳಬೇಕು.
ಇದೆಲ್ಲದರ ಮಧ್ಯೆ ಬರುವ ಗೆಳತಿಯ ಗುಡ್ ಮಾರ್ನಿಂಗ್ ಎಸ್ಸೆಮ್ಮೆಸ್ಸಿಗೊಂದು ಮಾರುತ್ತರ ಕಳಿಸಬೇಕು.
ಸಾರು ಹುಳಿಗಳು ಕುದಿಯುವುದಕೆ ಕಾಯುತ್ತ ಬಿಸಿ ಕಾಫಿ ಹೀರುವಾಗ ನ್ಯೂಸ್ ಪೇಪರಿನ ಮೊದಲೆರಡು ಪುಟವ ಓದಬೇಕು.
ಪುಟ್ಟದೆರಡು ಜಡೆಗಳಿಗೆ ಬ್ಯಾಂಡು ಹಾಕುತ್ತ, ಮಡಿಚಿದ ಕಾಲರ್ ಸರಿಮಾಡುತ್ತ ಆ ಕಿರುಗುರುಳ ತಿದ್ದಿ ಹಣೆ ಮಧ್ಯದಲಿ ಒಂದು ತಿಲಕವನಿಡಬೇಕು. ತಿರುತಿರುಗಿ ನೋಡುತ್ತ ಹೋಗುವ ಮಿನಿಯೇಚರಿಗೆ ನಗುನಗುತ್ತ ಬಾಯ್ ಹೇಳಬೇಕು.
ಸ್ನಾನ ಮುಗಿಸಿ, ಬಟ್ಟೆ ಬದಲಾಯಿಸಿ, ಜಡೆಗೆ ಕ್ಲಿಪ್ಪು ಸಿಕ್ಕಿಸುತ್ತಲೇ ಬತ್ತಿ ಸರಿಮಾಡುತ್ತ ಎಣ್ಣೆ ಸುರುವಿ ದೀಪ ಹಚ್ಚಬೇಕು. ದೀಪದುರಿಯಲ್ಲಿ ಚಣಕಾಲ ದಿಟ್ಟಿ ನಿಲ್ಲಿಸಿ ೩೮ ವರುಷಗಳ ಒಳಿತುಗಳ ನೆನೆಯುತ್ತ, ತಲೆಬಾಗಬೇಕು.
ಅಲ್ಲಲ್ಲೆ ಸುಳಿದೂ ಬೆನ್ನಲ್ಲೆ ಇರುವ ಪುಟ್ಟ ಜೀವದ ಕೆನ್ನೆ ಸವರಬೇಕು. ಡಬ್ಬಿಯ ಚೀಲಕೆ ತುಂಬುತ್ತ, ಬೆನ್ನಬ್ಯಾಗಲಿ ಫೋನು ಸಿಕ್ಕಿಸುತ್ತ, ನೋಟದಲೆ ಜೀವಸೆಳೆಯುವ, ಗೊತ್ತಾದರೆ ಅರಚುತಲೆ ಜೀವಹಿಂಡುವ ಪುಟ್ಟ ಗೊಂಬೆಯ ಕಣ್ತಪ್ಪಿಸಿ ಚಪ್ಪಲಿ ಮೆಟ್ಟಿ ಕಾಯಕದ ಗಾಡಿಯನೇರಬೇಕು.
ಹೊರಡುವ ಮೊದಲು ಅವನ ಲಂಚ್ ಬ್ಯಾಗಿಗೆ ಚಮಚ ತುಂಬಿರುವುದ ಖಾತ್ರಿ ಮಾಡಿಕೊಳ್ಳಬೇಕು. ಮಾತು ಪೋಣಿಸದೆ ಕಣ್ ಸನ್ನೆಯಲಿ ಹೊರಟಿದ್ದು ತಿಳಿಸಬೇಕು.
ಬೆಳಕು ಹೊರಗೆ ಬಾನಿನಲ್ಲಿ, ಭುವಿಯಲ್ಲಿ, ಗಾಳಿಯಲ್ಲಿ, ನೋಡಿದಲ್ಲಿ. "ನೋಡಿ"ದಲ್ಲಿ ಮಾತ್ರ. "ಕಂಡವರಿಗಷ್ಟೆ.. ಕಂಡವರಿಗಲ್ಲ"..ಎಂದ ಬೇಂದ್ರೆ ಅಜ್ಜನ "ಬೆಳಕನ್ನ ಒಳಗೆ ಕರೆಯುವ" ಹಾಡು ಹಸೆಯ ಕಲಿಯಬೇಕು. ಹೀಗಲ್ಲದೆ ಬಾನ ಬೆಳದಿಂಗಳು ಒಳಗಿಳಿಯುವುದೆಂತು?! ಮುಂದೊಮ್ಮೆ , “ನಿಮ್ಮಿಂದಲೇ ಬಂದವರು ನಾವು, ನಿಮ್ಮವರೆ ನಾವು. ಆದರೆ ನೀವೇ ಅಲ್ಲ, ನಮ್ಮ ನಾಳೆಗಳು ನಿಮ್ಮವಲ್ಲ” ಎಂಬಂತೆ ಸುತ್ತ ನೆರೆದವರು ಅವರವರ ಹಾದಿಯ ಹಿಡಿವಾಗ, ಜಗುಲಿಯಲಿ ನಿಂತು ಕೈಬೀಸಿ ಕಳಿಸುವಾಗ ಈ ಸೊಲ್ಲು ಜೊತೆಗುಳಿಯಬಹುದು. ಪುಟಿಪುಟಿವ ನಾಳೆಗಳ ಹಂಬಲು ಇಳಿದು, ಇಂದಿಗಿಂದಿನ ಬದುಕು ಎಂದು ನಾವೆಯದು ಹೊಯ್ದಾಡುವಾಗ ಸರ್ವಋತು ಬಂದರಿನ ಸಿಗ್ನಲ್ಲು ಮಿಂಚಬಹುದು.
ಭರಿಸುವುದಕೆ ತಕ್ಕ ಮನಸ್ಥಿತಿಗೇರದ ಹೊರತು ಬಿಟ್ಟು ಹೋಗುವುದಾದರೂ ಹ್ಯಾಗೆ, ಯಾವ ಬೆಳಕೇ ಕರೆದು ತೋರಿದರೂ ಹೊರಟು ಬಿಡುವುದು ಹೇಗೆ? ಇದು ಅವಳ ಹಾಡು. ಇವಳ ಪಾಡು. ಅವನ ಜಾಡು ಬೇರೆಯೇ. ಬೆಳಕು ಮಿಂಚಿದರೆ ಹೊರಡಬಹುದು. ಎಲ್ಲವನ್ನೂ ಇದ್ದಲ್ಲಿಯೇ ಬಿಟ್ಟು. ಹಳಹಳಿಕೆಯೆನ್ನದಿರಿ. ನನ್ನ ನಿಮ್ಮ ಕಡುವಾಸ್ತವ ಇದು. ಇವಳು ಅವನಲ್ಲ. ಇವಳು ಬಯಸಿದರೆ ಅವನಾಗಬಹುದಾದರೂ, ಅವನೆಂದಿಗೂ ಇವಳಾಗಲಾರ. ಅದು ಅವನ ಮಿತಿ.
ಮಳೆಯೇ ಸುರಿಯುವುದು ನಿಜವೆಂದಾದರೆ, ಕೊಡೆಯಿಲ್ಲ, ಆಸರೆಯಿಲ್ಲವೆಂದಾದರೆ ಸುರಿವ ನೀರಲಿ ಕಾಲಾಡುತ್ತ ಹಾಡುಗುನುಗುತ್ತ ಹೋಗುವುದು - ಬಯ್ಯುತ್ತ ಬೇಸರಿಸುತ್ತ ಮಳೆ ನಿಲ್ಲುವವರೆಗೂ ಪರಿತಪಿಸುತ್ತ ಇರುವುದಕ್ಕಿಂತ ಒಳ್ಳೆಯದು ಎಂಬುದು ನನ್ನ ಭಾವನೆ. ಮನೆ ಸೇರಿದ ಮೇಲೆ ಬೆಚ್ಚನೆಯ ಬಟ್ಟೆಯ ಧರಿಸಿ ಕಾಫಿ ಕುಡಿವಾಗ ಪ್ಯಾರಸಿಟಮೋಲೊಂದನ್ನು ಮರೆಯದೆ ನುಂಗಬೇಕಷ್ಟೆ.
ಬೆಳಕು ಏಕೆ ಕತ್ತಲನ್ನ ಸೊಗಯಿಸುತ್ತದೆ ಎಂದು ಈಗ ಈ ತಿಂಗಳ ಹೊನಲಲ್ಲಿ ಮೀಯುವಾಗ ಅರ್ಥವಾಯಿತು. ಎಲ್ಲ ಕಹಿಗಳ ಸೋಸಿ ಬರುವ ಕಡು ನಿಜದಲ್ಲಿ ಅನಿಸುತ್ತದೆ. ಇದಿಷ್ಟೇ ಅಂದುಕೊಂಡಿರುತ್ತೇವೆ. ಅಲ್ಲ ಅದಲ್ಲ. " ಸಾವ್ ಗಾಳಿ ತೂರಲ್ ಅರಿವಪ್ಪುದಯ್...! ಆ ಜೊಳ್ಳೆ ಗಟ್ಟಿ. ನಾವು ಗಟ್ಟಿಯೆಂದರಿತುದೆಲ್ಲಂ ಜೊಳ್ಳು..!!" ಎಂದು ಕುವೆಂಪುರವರ ವಾಲಿಯೆಂದ ಹಾಗೆ. “ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ” ಎಂದ ನರಸಿಂಹಸ್ವಾಮಿಯವರೂ, “ಹೊರಗಿನ ಸಡಗರ ಮುಗಿದಂದು ಬುದ್ಧಿ ಕಳೆಯೇರುವುದು” ಎಂದ ತಿಮ್ಮ ಗುರುವೂ ಒಟ್ಟೊಟ್ಟಿಗೆ ನೆನಪಾಗುತ್ತಾರೆ. ಬದುಕು ಗರಿಗರಿಯಾಗಿ ಇಡಿಯಾಗಿ ನನಸಾಗಿಯೆ ಇರಲಿ. ಒಳಗಿನ ಹಾದಿಗೆ ಮಾತ್ರ ಕನಸು ಕೈಮರವಾಗಲಿ.
ಹಿರಿದೊಂದಿದೆ ನಾನು ಕಿರಿಯಳು, ಎಂಬಲ್ಲಿ ದ್ವೈತವೂ, ಆ ಹಿರಿಯದರ ಬಿಂದು ನಾನೆಂಬ ಅದ್ವೈತವೂ ಅರಿವಾಗಲು ಬಿಟ್ಟು ಹೊರಡಲೇಬೇಕೆಂದಿಲ್ಲ. ಹೊರಡುವವರ ಕಟ್ಟಿ ಹಿಡಿಯಲು ಸಲ್ಲ. ಮೀರುವುದಕೆ ಹೊರಟವರು ಒಳಗೊಳ್ಳುವುದು ಕಲಿಯಬೇಕು. ಎಲ್ಲವೂ ಗೊತ್ತಿರುವುದಿಲ್ಲ ಎಂಬುದು ಮೊದಲು ಗೊತ್ತಿರಬೇಕು.
ಇಷ್ಟೆಲ್ಲ ಗಳುಹಿದ ಮೇಲು ಹೊರಗೆ ಮಾತ್ರ ಹಾಲ್ ಬೆಳುದಿಂಗಳು. ತನ್ನ ಪಾಡಿಗೆ ತಾನು. ಎಲ್ಲವನ್ನು ಭರಿಸಿ ನಡೆವ, ಬಿಟ್ಟು ಕೊಟ್ಟು ಒಳಗೊಳ್ಳುವ ಅವಳ ಹಾಗೆ. ಇವಳ ಹಾಗೆ. ಅದಕ್ಕೇ ಹೇಳಿದ್ದು ಅವಳೇ ಆಗಿದ್ದಿದ್ದರೆ ರಾತ್ರಿಯಲಿ, ಮಲಗಿದವರ ಬಿಟ್ಟು ಎದ್ದು ಹೋಗುತ್ತಿರಲಿಲ್ಲ. ಆಸೆಯೇ ದುಃಖಕ್ಕೆ ಮೂಲವೆಂದು ಗೊತ್ತಿದ್ದೂ ಆಸೆ ಪಡದಿರುತ್ತಿರಲಿಲ್ಲ. ಅವನಿಗಾದರೋ ಕಡುಕಷ್ಟ ತಿಳಿಸಿ ಹೇಳಲು. ಸಂಘಕ್ಕೆ ಬಂದವರೆಲ್ಲ ಜಾಸ್ತಿ ಗಂಡಸರು. ಭಿಕ್ಕುಣಿ ಸಂಘ ಸೇರದೆಯೇ ಬೆಳಕ ಹೊದ್ದವಳು. ಮಿಕ್ಕಿ ಮೀರಿ ಹೋಗುವವನ ಬಿಟ್ಟು ಕೊಟ್ಟವಳು. ಮೀರದೆಯೆ ಒಳಗೊಂಡವಳು.
ಈ ಇಂಥ ಇವಳನ್ನೂ ಹಣಿಯುವ ಮೃಗತೃಷೆಯೊಂದಿದೆ ಸುತ್ತಲೂ. ಶತಮಾನಗಳಿಂದ ಮುಸುಕಿನ ಮರೆಯಲ್ಲೆ ಹಿಂಜರಿಕೆಯಲ್ಲಿ ಆಕ್ರಮಿಸುತ್ತಿದ್ದಿದ್ದು ಈಗದೇಕೋ ಏಕಾಏಕಿ, ನೇರಾನೇರ, ಸರ್ವವ್ಯಾಪಿ...ಹಾವಳಿಗೆ ತೊಡಗಿದೆ.ಉಕ್ಕುವ ಇವಳ ಚೈತನ್ಯವ ದಕ್ಕಿಸಿಕೊಳ್ಳುವುದಿರಲಿ ನೋಡಲೂ ಕಣ್ಣು ಕೋರೈಸುತ್ತದೆ. ಅದಕೆಂದೇ ಕನ್ನಡಕ ಹಾಕಿದ ಕಾಮೋತ್ಕರ್ಷದ ಅಟ್ಟಹಾಸ. ಇವಳನ್ನ ಇವಳ ಮೂಲದಲ್ಲಿಯೇ ಕತ್ತರಿಸಬೇಕೆನ್ನುವ, ದೇಹದಲ್ಲೇ ಉಂಡು ತೀರಿಸುವ ಆಶೆಯ ಪಾಶಗಳ ಬಿಗಿದವರ ಕಾಲಮಾನದಲ್ಲಿದ್ದೇವೆ. ದೊಡ್ಡವಳ ಮುಂದೆ ಮಂಡಿಯೂರಬೇಕಾದೀತು.ಮಗುವಾದರೆ ಒಳಿತು. ಒಪ್ಪದಿದ್ದರೂ ಬಗ್ಗಿಸಬಹುದು. ತಗ್ಗದಿದ್ದರೂ ಜಗ್ಗಬಹುದು.
ಹೊಸಕುವ ಕಾಲಿಗೆ ಹೂವೇನು ಚಿಗುರೇನು?! ಒಣ ತರಗೆಲೆಯನ್ನೂ ಪುಡಿಗಟ್ಟಿಸಿ ನಡೆಯುವ ಮದೋನ್ಮತ್ತ ಗುಂಪಿಗೆ ಜೀವನ್ಮುಖತೆಯ ಹಾಡು ಕೇಳಬಹುದೆ?!
ಹೂಮನದ ಮಿಡಿತ ಅರಿಯಬಹುದೆ?!
ಕಾಲಕಾಲಕ್ಕೆ ಅವಳಿಂದ ಇವಳಿಗೆ ಬನಿಯಿಳಿದ ತಿಳುವಳಿಕೆಗೆ ಹೊಸ ಸೊಲ್ಲು ಸೇರಿಸಬೇಕಾದ ಸಂಧಿಕಾಲ ಇದು,ಬಗ್ಗಿನಡೆದದ್ದು ಮುಗಿಯಿತು. ಎಚ್ಚರದಲಿ ನಡೆ. ಕನಸು ಇರಲಿ ಒಳಗೆ. ಸಮತೆಯ ಬಾವುಟ ಹಾರಿಸುವಾಗ ಇರಲಿ ಹದ್ದಿನ ಕಣ್ಣು ಸುತ್ತೆಡೆ. ಹಾಡಿನ ಸೊಲ್ಲು ಕಲಿತೆ ಸರಿ, ಕರಾಟೆ ನಿಲುವು ಕಲಿ. ಒಳಗಿನ ಬೆಳಕಿಗೆ ತೆರೆದುಕೋ. ಹೊರಗಿನ ಕತ್ತಲಲಿ ನಿನ್ನದೇ ಆತ್ಮರಕ್ಷಣೆಯ ಟಾರ್ಚು ಹೊತ್ತಿಸು. ತಮ್ಮನಿಗೆ,ಅಣ್ಣನಿಗೆ ಗೆಳೆಯನಿಗೆ ಅವನ ಜಾಗವನ್ನಿಷ್ಟು ತೋರಿಸು. ಪಶುಗಳಿಗೆ ಪಾಠ ಬೇಡ. ದಂಡನೆಯೂ ಕ್ರಮವೆ ಎಂಬುದನು ಮನಗೊಳ್ಳುವ ಕಾಲದಲಿ ಮೃದುವಾಗದೆ ಗಟ್ಟಿ ಇರು. ಬಗೆಯುವ ಕಣ್ಗಳಿಗೆ ಬಿರುನೋಟ ಬೀರದೆಯೆ ಮರೆತುಬಿಡು. ನಿನ್ನ ರೇಖೆಯ ದಾಟಿ ಬರುವವನ ಸುಟ್ಟು ಬಿಡು. ಹಾಡು ಉಲಿಯುವ ಬಾಯಿಗೆ ಕಿರುಚಿ ಕೂಗಲು ಬರುವುದ ಮರೆಯದಿರು. ಬಂಡೆಗೆ ತಲೆ ಚಚ್ಚದಿರುವ ಎಚ್ಚರದ ಜೊತೆಗೆ, ತಿರುಗಿಬೀಳುವ ಭಂಡತನವನ್ನು ಜೇಬಲ್ಲಿಯೇ ಇಟ್ಟಿರು. ಮನೆ ಮತ್ತು ಹೊರಗೆ ಎಂಬ ಗೆರೆಯಿರದ ಈ ಸುಳಿಯ ಬಗ್ಗೆ ಹುಷಾರಿನಿಂದಿರು, ಕ್ರೌರ್ಯ ಬಯಲಾಗಿಸುವ ಧೈರ್ಯದಿಂದಿರು. ಮೆಲುವಾದರು ಇರಲಿ ದನಿಯೆತ್ತುವ ಸ್ಥೈರ್ಯ ಹೊಂದಿರು. ಈ ಎಲ್ಲ ಜ್ಞಾನ ಗುಳಿಗೆಗಳ ಜೊತೆಗೆ ಹೆಲ್ಪ್ ಲೈನ್ ನಂಬರ್ ನೆನಪಿಟ್ಟುಕೊಂಡಿರು.
ಬೆಳಕಿದ್ದರೆ ಮಾತ್ರ ಕತ್ತಲ ಸೊಗಸು ಅರಿವಾಗುವುದು. ಕಡುನೀಲಿ ಬಾನಂಗಳಕೆ ಚುಕ್ಕಿಗಳ ನೆರವು.
ಕತ್ತಲೆಯನೆ ಹೊದ್ದು ಕತ್ತಲನೆ ಉಂಡು ಕತ್ತಲನೆ ಹಂಚುವವರು ಬೆಳಕ ಸಹಿಸುವುದಿಲ್ಲ. ಈ ಎಚ್ಚರದಲ್ಲಿ ಕನಸು ಕಾಣುತಿರು. ಮಿತಿಗಳ ಆಚೆಗಿನ ಸಾಧ್ಯತೆಗಳಲ್ಲಿ ಈಜುತಿರು. ನೀನು ಎರಡನೆಯವಳೆಂದವರ ಮಾತ ನಗುತ ಒಪ್ಪುತ್ತಲೆ, ನೀನೆ ಮೊದಲೆನ್ನುವುದ ಮರೆಯದಿರು. ಅದನೆ ಮಾತೊಡೆದು ಹೇಳದಿರು. ದೇವಿಯಾಗುವುದು ಬೇಡ. ದಾಸಿ ಬೇಡವೆ ಬೇಡ. ಮೊದಲಿಗನು ತಾನೆಂದವನ ಬೆನ್ನಾಸರೆಗೆ ಬೀಳದೆ ನಿನ್ನ ದಾರಿಯಲಿ ನೀನು ನಡೆಯುತಿರು. ನಿನ್ನ ಮಡಿಲ ಮಕ್ಕಳಿಗೂ ಈ ಮಾತ ಕಲಿಸುತಿರು. ಸಾಧ್ಯವಾದರೆ ಸ್ಥಾನಗಳ ಗೆರೆ ಅಳಿಸಿಬಿಡು. ನಾವು ಮೀರಬಲ್ಲ ನಮ್ಮ ಮಿತಿಯ ನಮಗೆ ಅರಿವಾಗುವ ಹಾಗೆ ಮಾಡಿದ ಅವನಿಗೆ ನಮಿಸಬೇಕು. ಹೌದು. ಹಿಂಸೆ ಕೊಟ್ಟವನಿಗೆ ಹಿಡಿದು ತಪರಾಕಿ ತಟ್ಟುವ ಮೊದಲು ನಮಿಸಬೇಕು.
ಅದು ಮೀರುವ ಹಾದಿಯ ಮೊದಲ ಹೆಜ್ಜೆ.
P.S: Credits:
ಎಂಥ ಚೆಂದ ಬೆಳದಿಂಗಳು, ಜಗದ ಜನಕೆ ಮಂಗಳ - ಕವಿತೆಯ ಸೊಲ್ಲು ಎಸ್.ವಿ ಪರಮೇಶ್ವರ ಭಟ್ಟರದು.
ನಮ್ಮಿಂದಲೇ ಬಂದವರು ಆದರೆ ನಾವೇ ಅಲ್ಲ - ಗಿಬ್ರಾನನ "ಚಿಲ್ಡ್ರನ್" ಪದ್ಯದ ಭಾವ-ಸಾರ.
ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ - ಕೆ.ಎಸ್.ನ ಅವರ ಕವಿತೆ ಸಾಲು.
3 comments:
Nice one ...!!!
Congrats...Keep it up.
Could you please visit ammanahaadugalu.blogspot.com and share your opinion/suggestions
ಸಿಂಧು,
ಇದು ಬದುಕಿನ ತಿಳಿವಳಿಕೆ. ಇದು ತಿಳಿದಿದ್ದರೆ, ಸಿದ್ಧಾರ್ಥ ಓಡಿ ಹೋಗುತ್ತಿರಲಿಲ್ಲ. ಅವನಿಗೆ ತಿಳಿವಳಿಕೆ ಬಂದಾಗ, ಬಹುಶಃ ಅವನ ಬದುಕು ಮುಗಿದಿತ್ತು!
ಏನು ಕಲಿಯಬೇಕು ಎನ್ನುವ ವಾಸ್ತವತೆಯನ್ನು ಆಪ್ತವಾಗಿ ತಿಳಿ ಹೇಳುವ ಲೇಖನಕ್ಕಾಗಿ ಹಾಗು ಬಹುಮಾನಿತರಾಗಿದ್ದಕ್ಕಾಗಿ ಅಭಿನಂದನೆಗಳು.
ಪ್ರಜಾವಾಣಿಗೆ ವಂದನೆಗಳು.
ಇಡೀ ಬರಹದ ನಿಜ ಸತ್ವವಾಗಿ ನನಗೆ ಮನ ಸೆಳೆದದ್ದು ಅದರ ಕಾವ್ಯ ಗುಣ.
'ಹಿಂಸೆ ಕೊಟ್ಟವನಿಗೆ ಹಿಡಿದು ತಪರಾಕಿ ತಟ್ಟುವ ಮೊದಲು ನಮಿಸಬೇಕು'
ಏಮಾಬ ಸಾಲು ಬದುಕನ್ನು ನಡೆಸಲು ಸುಲಭವಿದಾನದಂತೆ ಗೋಚರಿಸಿತು.
Post a Comment