Friday, June 27, 2014

ಸಂಸರ್ಗ

ಸೊಟ್ಟಕೆ
ಅಂಕು ಡೊಂಕಾಗಿ
ಕೆಲಕಡೆ ದಪ್ಪಗಾಗಿ
ಮತ್ತೊಂದೆಡೆ ಹರವಾಗಿ
ಬೆಳೆದ ಬಳ್ಳಿಯಲೊಂದು
ಮೊಗ್ಗು
ಬಳ್ಳಿಗೆ ಹಸಿರು ಕಡಿಮೆ
ಸೊಂಪಿಲ್ಲ
ನೆರಳೂ ಇಲ್ಲ
ಘಮ ಕೇಳಲೇಬೇಡಿ.
ಬೇಕೋ ಬೇಡವೋ
ಎಂಬ ಹಾಗೆ.

ಇನ್ನೂಬಿರಿಯದ
ಮೊಗ್ಗು
ಇಷ್ಟು ದೂರಕ್ಕೇ
ಘಮ್ಮೆಂದು
ಎಸಳಿನ ನಾಜೂಕು
ಮ್ಯಾಕ್ರೋ ಲೆನ್ಸಿಗೆ ಗೊತ್ತು.
ಅರಳುವ ಮುನ್ನ
ಒಳಗೆ ಬಣ್ಣ
ತಿಳಿಯಾಗಿ ಹರಡಿಕೊಳ್ಳುವ ಹೊತ್ತು
ಪಕಳೆಗಳ
ಮಧ್ಯದಿ ಬಣ್ ಬಣ್ಣದ
ರೇಣು ಹೊತ್ತ ಶಲಾಕೆ
ಇದು ಈ ಬಳ್ಳಿಯದೇ ಹೂವೇ?!
ಒಣ ಬಳ್ಳಿಗೇ
ಸಂಭ್ರಮವೊಂದು ಆವರಿಸಿದ
ಹಾಗೆ.

ನಾರೂ ಸ್ವರ್ಗಕ್ಕೆ ಹೋದ ಬಗೆ
ಓದಿ ತಿಳಿದಿದ್ದು
ಈಗ ಗೊತ್ತಾಗುವ ಸಮಯ.

2 comments:

Badarinath Palavalli said...

ಮ್ಯಾಕ್ರೋ ಲೆನ್ಸಿನ ಉಲ್ಲೇಖದಿಂದ ಕವಿತೆಗೆ ಹೊಸ ಆಯಾಮ ಸಿಕ್ಕಂತಾಯಿತು. ಘಮ ಘಮದ ಮಲ್ಲಿಗೆಗೂ ಅಂಕುಡೊಂಕಿನ ಬಳ್ಳಿಗೂ ಸಾರ್ಥಕ್ಯ ಸಿಕ್ಕಂತಾಯಿತು.

sunaath said...

ನಿಮ್ಮ ಕವನದ ಬಳ್ಳಿಗೆ ಘಮ್ಮೆನ್ನುವ ಅನೇಕ ಹೂವುಗಳು ಬಿಡುತ್ತಲಿವೆ.