Friday, July 4, 2014

ನಿನ್ನೆಯ ಸಂದೂಕದಿಂದ ತೂರಿಬಂದ ಒಂದು 'ಓಹ್' ಕ್ಷಣ!

ಟ್ರಾಫಿಕ್ಕು ತಪ್ಪಿಸಲು
ಹಳೆಯ ಓಣಿಯಲ್ಲಿ
ಓಡಿದ ಆಟೋ,
ಅಲ್ಲಿ ಮರಗಳ ಮರೆಯಲ್ಲಿ
ಎತ್ತರದ ಕಟ್ಟಡ,
ಹೊಗೆ,ರಶ್ಶು,ಹಾರ್ನು,
ಮೋಡಗಟ್ಟಿದ ಸಂಜೆ,
ತಡವಾದ ಅರ್ಜೆಂಟು,
ಕಾಯಲೇಬೇಕಾದ ದೊಡ್ಡ ಸಿಗ್ನಲ್ಲು,
ಎಲ್ಲ ಮಸುಕಾಗಿ......


ಒಂದು ಚಳಿಗಾಲದ ಇಳಿಮಧ್ಯಾಹ್ಯ-
ಕಾರಿಡಾರಿನುದ್ದಕೂ
ಟೇಬಲ್ಲು ಕುರ್ಚಿ,
ಗೋಡೆಗಳ ಮರೆಮಾಚಿದ
ಪುಸ್ತಕದ ಬೀರು,
ಕಿಟಕಿಪಕ್ಕದಲಿ
ಕುಳಿತಿಹಳು ನಿನ್ನೆ
ಹಸಿರುಚೂಡಿಯ ಮೇಲೆ ಬಿಳಿಬಿಳಿ ಚುಕ್ಕಿ,
ಪುಸ್ತಕದ ಪುಟಗಳಲಿ ಹಾರುತಿಹ ಹಕ್ಕಿ,
ಇನ್ನೆಲ್ಲೋ ಮೂಲೆಯಲಿ ಕೂತು ಓದುತ
ನೋಡಿದವನಿಗೆ ಅಚ್ಚರಿ,ಖುಶಿ ಉಕ್ಕಿ,
ಪುಟಗಳಲ್ಲೆ ಮುಳುಗಿದವಳಿಗೂ ತಟ್ಟಿ
ಭಾವದೊರತೆಯೊಂದು ಬನಿಯಿಳಿದ
ಘಳಿಗೆ!


ಆ ಹಳೆಓಣಿಯ
ನೆನಪಿನ ಕೋಣೆಯ
ಬಾಗಿಲು ದಬ್ಬಿದಾಗ....
ಇಲ್ಲಿ ಅರ್ಜೆಂಟಲ್ಲಿ,ರಶ್ಶಲ್ಲಿ.
ಟ್ರಾಫಿಕ್ಕಲ್ಲಿ.....


ಅವಳ ಹಳೆ ಹಸಿರುಬಿಳಿಚುಕ್ಕೆ ಬಟ್ಟೆ,
ಅವನ ನೀಲಿಗೀಟಿನ ಅರ್ಧತೋಳಿನಂಗಿ,
ಎಲ್ಲಕ್ಕೂ ಮಿಗಿಲಾಗಿ
ತುಟಿಯಂಚಲಿ ಅರಳಿ,
ಕಣ್ಣಲ್ಲಿ ಬೆಳಗಿ,
ಆತ್ಮಕ್ಕೇ ಆಹ್ಲಾದ ಬೆರೆಸಿದ
ನಗೆಹೂಗೊಂಚಲು.


ಓಹ್
ಎಲ್ಲ ಗೊತ್ತೆಂದುಕೊಳ್ಳುವುದೆಷ್ಟು ತಪ್ಪು!!


ಅವತ್ತು
ನೀನು ನಗದಿದ್ದರೆ,
ನನ್ನ ಒಪ್ಪದಿದ್ದರೆ,
ಇವತ್ತು ಈ ನೆನಪಿರುತ್ತಿರಲಿಲ್ಲ. ಜೊತೆಗೆ ನಾನೂ.

2 comments:

sunaath said...

ಚಿತ್ರಗಳಲ್ಲಿ ರಚಿತವಾದ ಕವನ. ಇದನ್ನೇ ‘ಭಾವಚಿತ್ರ’ ಎಂದು ಕರೆಯಬಹುದೇನೊ?

Badarinath Palavalli said...

ಮನದ ಸಂದೂಕದಲ್ಲಿ ನಾನೇ ಮರೆತ ಪುಸ್ತಕದ ಪುಟವೊಂದು ನಿಮ್ಮ ಕವನದ ತಂಗಾಳಿಯಲ್ಲಿ ಫಟಫಟಿಸಿದಂತಾಗಿ ನೆರಿಗೆ ಲಂಗದ ಹುಡುಗಿ ನೆನಪಾದಳು.