Monday, April 7, 2014

ಖುಶಿ ಕದ್ದಿಟ್ಟಿದೇನೆ... ರುಚಿ ನೋಡದೆಯೇ...

ಗಾಢ ಕತ್ತಲೆಯ ಒಡಲಿಗೆ,
ಸಾಲುದೀಪದ ಬೆಳಕಿನ ಅಂಚು,
ಕತ್ತಲೆಯನ್ನೇ
ಆಪ್ತವಾಗಿಸುವ ಸಂಚು!

ಟೇಬಲ್ಲಿನ ಮೇಲೆ,
ಮೂಲೆಯಲ್ಲಿ,
ತರಿಸಿಟ್ಟ ಹೊಸ ಪುಸ್ತಕ.
ಪುಟ ಬಿಚ್ಚಿಲ್ಲ,
ಇನ್ನೂ.
ಶುರು ಮಾಡಿದರೆ,
ಮುಗಿದು ಹೋಗುವ ಭಯ.

ಈ ಜನ್ಮದಲ್ಲಿ
ಇದು ಮೊದಲ ಬಾರಿ.
ಅನಿಸಿದ್ದು ಮಾಡದೆ,
ಮುಗಿದು ಹೋಗಬಹುದು
ಎಂದು ತಡೆದಿರುವುದು...!


ಕೋಡಗನ ಕೋಳಿ ನುಂಗಿತ್ತಾ
ಎಂಬ ಶರೀಫಜ್ಜನ ಮಾತು
ಬರಿಯ ಫ್ಯಾಂಟಸಿಯಿಂದ
ನಿಜಕ್ಕೆ ಹೊರಳಿಕೊಳ್ಳುವ
ಹೊತ್ತು......
ಹೌದು ವಯಸ್ಸಾಯಿತು.
ಬಿಸಿಲಿಗೆ ಬಯ್ಯುವುದಕ್ಕೆ
ಮುಂಚೆ,
ಹೆಪ್ಪುಗಟ್ಟಿ ಮೋಡವಾಗುತ್ತಿರುವ
ಗಾಳಿಯ ಅರಿವಾಗಿ
ಸುಮ್ಮನಾಗುವ ಹೊತ್ತು.
ಮುಂದೆಂದೋ ಸುರಿಯಲಿರುವುದಕ್ಕೆ
ಇಂದಿನಿಂದಲೇ ಕಾಯುವ ಹೊತ್ತು.

2 comments:

Badarinath Palavalli said...

ಬಳಸಿದರೆ ಖಾಲಿಯಾಗಿ ಬಿಡುತ್ತದೇನೋ ಎನ್ನುವ ಅತಿ ಮುನ್ನೆಚ್ಚರಿಕೆಯಿಂದ, ನಗುವನ್ನೂ ಸೇರಿಸಿಕೊಂಡು ಅದೆಷ್ಟು ಸುಖಃಗಳನ್ನೋ ನಾವು ಮನದ ಕಪಾಟಿನಲ್ಲೇ ಪೇರಿಸಿಟ್ಟಿರುವುದು ನಿಜ ನಿಜ ನಿಜ...

sunaath said...

ಕಾಯುವುದು ಬರುವುದರ ಕಣ್ಸನ್ನೆ ಅಲ್ಲವೆ!