Wednesday, April 2, 2014

ಕರವಸ್ತ್ರದಂತ ಕವಿತೆ!

ಹುಲ್ಲು ಮುಚ್ಚಿದ
ಹೆಜ್ಜೆ ಮೂಡದ
ಹಾದಿ.

ನೀಲಿಯಲಿ ನೆಲೆಸಿ,
ನೆತ್ತಿ ಸುಡುವವನ
ತಪ್ಪಿಸಿ,
ನೇವರಿಸಿದ
ಮರಹೊದಿಕೆಯ
ಕಡುಹಸಿರು
ನೆರಳು,

ಆರೋಹದ
ನಡುವೆ
ತಿಳಿಹಳದಿ,ಗುಲಾಬಿ
ನೀಲಿ, ಬಿಳಿ, ನೇರಳೆ
ಹೂ ಹೊದ್ದ
ಬಯಲು.

ಬೆವರಿಳಿದು
ಉರಿಯಾಗಿ
ಕಿರಿಹಿಡಿದ ಕಣ್ಣಿಗೆ
ಕಂಡ ಪಯಣದ ಸೊಗಸೇ
ಸೊಗಸು!

ಕಳೆದಿದ್ದು ಎಲ್ಲಿ
ಗಮ್ಯವೆಂದುಕೊಂಡ
ನಿಲುಗಡೆಯಲ್ಲೇ?

ಅದೇಕೋ
ಕಣ್ಣುರಿ,
ಹನಿ ಹೊರಬರದಂತೆ
ತಡೆದು.
ನೆನಪಿನ ಕರವಸ್ತ್ರಕ್ಕೆ
ಸದಾ ಕೆಲಸ,
ಒದ್ದೆಯಾದಷ್ಟೂ
ಒಣಗಿಸುತ್ತದೆ

ಬೆಂಗಳೂರಿನ ಬಿಸಿಲು.

2 comments:

Badarinath Palavalli said...

ನಾವೇನನ್ನು ಕಾಲಾಂತರದಲ್ಲಿ ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಮನೋ ವಿಶ್ಲೇಷಕ ಕವನವಿದು.
ಆಧುನೀಕರಣದ ಮಾಯಾಜಿಂಕೆ ರಾಜಕಾರಣಿಗಳ ಮಿಥ್ಯಾ ಸೃಷ್ಟಿ ಎನ್ನುವ ಅಸಲಿ ಸಂಗತಿ ಮರೆತಿದ್ದೇವೆ.
ಹಸಿರು ನೋಡಲು ಇಂದು ಲಾಲ್ ಬಾಗ್ ಉದ್ಯಾನವನಕ್ಕೂ ಪ್ರವೇಶ ಶುಲ್ಕದ ಹೊಡೆತ!

sunaath said...

ಅದ್ಭುತ ಕವನ.