Tuesday, October 11, 2011

ಜಿಸೇ ಹಮ್ ಗುನ್ ಗುನಾ ನಹೀ ಸಕ್ ತಾ.. ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ..

{ನನ್ನ ಕುದಿವ ಭಾವಸರಸ್ಸಲ್ಲಿ ಕಾಗದದ ದೋಣಿ ತೇಲಿಬಿಟ್ಟು ಒಳಗುದಿಯನ್ನು ಸಹ್ಯವಾಗಿಸಿದ ದನಿಸಿರಿಯ ನೆನಪಲ್ಲಿ ಒಂದು ಬ್ಲಾಗ್ದೋಣಿ.. }

ಬೇಸರಾಗಿತ್ತು ಪಯಣ. ಜೊತೆಹಾದಿ. ಪ್ರಾಪಂಚಿಕತೆಯ ಓವರ್ ಡೋಸ್ ನಿಂದಾಗಿ ರೋಗಗ್ರಸ್ತ ಮನಸ್ಸು. ಎದೆಯಿಂದ ಎದೆಗೆ, ಮೋಡದಿಂದ ಮೋಡಕ್ಕೆ, ಮನೆಯಿಂದ ಮನೆಗೆ, ದಾರಿಯಿಂದ ದಾರಿಗೆ ಯಾವುದೂ ಬೇಕಿರದೆ ಬೇಕಾರಾಗಿ ಅಲೆದ ದಿನಗಳು. ಹಿರಿಯ ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತ ಕೂತಿದ್ದೆ. ನನ್ನನ್ನು ಗಝಲ್ ಲೋಕಕ್ಕೆ ಪರಿಚಯಿಸಿದ ಆ ಜೀವಕ್ಕೆ ಎಂದಿಗೂ ಋಣಿ ನಾನು. ನಮ್ಮಿಬ್ಬರ ನಡುವೆ ಏನೆಲ್ಲ ನಡೆದು ಯಾವೆಲ್ಲ ನೀರು ಹರಿದಿದೆ. ಇಬ್ಬರಲ್ಲೂ ಒಮ್ಮತ ಮೂಡದೆ ನಮ್ಮ ದಾರಿ ನಾವು ಹಿಡಿದು ಜೊತೆ ಹಿಡಿಸದೆ ನಡೆದಾಗಿದೆ. ಆದರೆ ಎರಡು ವಿಷಯಕ್ಕೆ ನಾನವರಿಗೆ ಚಿರಋಣಿ.
ಒಂದು : ಜೋಕೊಂದರಿಂದ ನನ್ನ ಅನಿಶ್ಚಯತೆಯನ್ನ ನೀಗಿಸಿ.ಹೊಸ ದಾರಿ ಹುಡುಕಿದವಳಿಗೆ ಬಯಲ ದಿಕ್ಕು ತೋರಿದ್ದಕ್ಕೆ. ಮತ್ತು ಪ್ರಾಮಾಣಿಕ ಸಾಥ್ ನೀಡಿದ್ದಕ್ಕೆ.
ಇನ್ನೊಂದು: ನನ್ನ ತಲ್ಲಣದ ದಿನಗಳಲ್ಲಿ ಈ ಗಝಲ್ ಮೋಡಿಗೆ ನನ್ನ ಸಿಲುಕಿಸಿ ತೇಲಿಬಿಟ್ಟಿದ್ದಕ್ಕೆ. ನನ್ನ ಭಾವಜಗತ್ತಿನ ವಿಸ್ತರಣೆಯಾಗಿ ಸೇರಿದ ಈ ಗಝಲ್ಲುಗಳು ನನಗೆ ಒಬ್ಬಳೆ ಕೂತು ಅಳುವುದಕ್ಕೆ ಸಿಕ್ಕ ಮಂದಬೆಳಕಿನ ದಿವ್ಯಮೂಲೆಯಂತೆ ಭಾಸವಾಗುತ್ತದೆ.
ಇದೆಲ್ಲ ಇರಲಿ ಅವತ್ತೊಂದಿನ ನನ್ನ ಸೆಳೆದ ಆ ಮೋಡಿಮಾಡಿದ ಹಾಡಿನ ಮೊದಲ ಸಾಲುಗಳು ಅರ್ಥವಿರಲಿ, ಪುನರುಕ್ತಿ ಮಾಡಲೂ ಗೊತ್ತಾಗಲಿಲ್ಲ. ಕೊನೆಯ ಸಾಲು ವೋ ಕಾಗಝ್ ಕೀ ಕಶ್ತೀ ವೋ ಬಾರಿಶ್ ಕಾ ಪಾನೀ.. ಕಾಗಝ್ ಅಂತಿದ್ದರೆ ಮುಂದಿನ ಪದ ದೋಣಿಯಿರಬಹುದು, ಅಲ್ದೆ ಮುಂದಿನ ಸಾಲಲ್ಲಿ ಮಳೆ ಮತ್ತು ನೀರಿದೆ ಅಂದುಕೊಂಡು ಮತ್ತೆ ಅವರಲ್ಲಿ ವಿನಂತಿಸಿಕೊಂಡು ಇಡೀ ಹಾಡು ರಿವೈಂಡ್ ಮಾಡಿ ಕೇಳಿದೆ. ಕ್ಯಾಸೆಟ್ಟು ಇಸಕೊಂಡು ಹೋಗಿ ಪ್ರತೀ ಸಾಲನ್ನೂ ರಿವೈಂಡ್ ಮಾಡುತ್ತಾ ಬರಕೊಂಡೆ. ಲೈಬ್ರರಿಗೆ ಹೋಗಿ ಉರ್ದು - ಇಂಗ್ಲಿಷ್ ಡಿಕ್ಶನರಿ ತೆಗೆದು ಎಲ್ಲ ಪದಗಳ ಅರ್ಥ ಬರಕೊಂಡೆ. ಮತ್ತೆ ಮನೆಗೆ ಬಂದು ಆ ಹಾಡನ್ನ ಕೇಳುತ್ತ ಕೂತೆ. ಹರೆಯದ ಹುಚ್ಚಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ ನನ್ನ ಬಾಲ್ಯ ಮನಸ್ಸಿನೊಳಗೆ ರಿವೈಂಡಾಗುತ್ತಿತ್ತು.
ಕಣ್ಣು ತೆರೆದೂ ಕನಸು ಕಾಣುವುದ ಕಲಿತೆ. ದಾರಿ ಸಾಗುತ್ತಲೇ ಕಳೆದು ಹೋಗುವುದ ಅರಿತೆ. ಅದನ್ನು ಹಾಡಿದವ ನಾನು ಕೇಳಿ ಅಳಲಿ, ತವಕಿಸುತ್ತ ಅಮ್ಮನೂರಿಗೆ ಓಡಲಿ, ತಮ್ಮನ ಜೊತೆ ಇನ್ನೊಂದು ಹೊಸಾ ರೌಂಡು ಅಂಗಳದಲ್ಲಿ ಆಟವಾಡಲಿ, ಇದೆಲ್ಲ ಮಾಡದೆ ಹೋದರೆ ನಾನು ಸತ್ತೇ ಹೋದೇನು ಅಂತ ನನಗೆ ಅನಿಸಿಬಿಡಲಿ ಅಂತಲೇ ಹಾಡಿದ್ದು ಅಂದುಕೊಂಡೆ. ಆ ಮೆಲಾಂಕಲಿಯನ್ನ ಕೇಳಿ ಥಕ್ಕಾಗಿ ಕೂತವಳು ಒಂದಿನ ಇನ್ನೊಂದಿಷ್ಟು ಕೇಳಲು ಎದ್ದೆ. ಅವನ ಮೆಲಾಂಕಲಿ ಮುಗಿವಲ್ಲಿ ಇನ್ನೊಬ್ಬ ಗಝಲ್ ಹಾಡುಗಾರನ ಭಾವಜಗತ್ತು. ಇಲ್ಲಿ ಕಳೆದು ಹೋದದ್ದ ಕುರಿತು ದುಃಖಿಸುವ ಹಂತ ಮುಗಿದು, ಕಳೆದುಕೊಳ್ಳಲಿಕ್ಕಾಗಿ ಅಂತಲೆ ದಕ್ಕಿಸಿಕೊಳ್ಳುವ, ಮುರಿದು ಬೀಳುತ್ತದೆ ಅಂತ ಗೊತ್ತಿದ್ದೇ ಕೈಗೆತ್ತಿಕೊಳ್ಳುವ, ನನ್ನದಲ್ಲದವನು ಅಂತಲೇ ಜಾಗ ಕೇಳುವ, ಹೂವು ಗಿಡದ್ದು ಸುಗಂಧ ಗಾಳಿಯದು, ನಾನು ಸುಳಿದಲ್ಲಿ ಸಿಕ್ಕ ಸುಗಂಧ ನನ್ನದು ಎಂಬ ಹೊಸ ಖಯಾಲಿನ ಲೋಕ ತೆರೆದಿತ್ತು. ಇವರೆಲ್ಲ ಯಾಕೆ ಇಷ್ಟು ಆರ್ತವಾಗಿ ಆರ್ದ್ರರಾಗಿ ಹಾಡಿ ಸುಮ್ಮನೆ ಒಣಗಿಕೊಂಡು ಮಿಡಿಯುವ ನಮ್ಮ ಹೃದಯದಲ್ಲಿ ಒರತೆ ಉಕ್ಕಿಸುತ್ತಾರೆ ಅಂತ ಅರ್ಥವಾಗದೆ ಹೋಯಿತು. ಅಷ್ಟರಲ್ಲಿ ಇನ್ನೊಂದು ಸ್ವತಂತ್ರ ಆತ್ಮದ ಕರೆ. ಅವಳನ್ನು ಸಮೀಪಿಸುವಾಗ ನನ್ನ ಸಾಹಿತ್ಯ ತಿಳಿದು ಕೇಳುವ ಹುಚ್ಚು ಬೆಪ್ಪಾಗಿ ಹೋಯಿತು. ಊಂ.... ಅಂತಲೆ ಹರಿವ ಅವಳ ರಾಗದ ಅಲೆಗೆ ನಾನು ದಿಕ್ಕು ದೆಸೆ ತಿಳಿಯದ ಹಾಗೆ ಕೊಚ್ಚಿಕೊಂಡು ಹೋದೆ. ಈ ಮೂವರೂ ನನ್ನ ಅತ್ಯಂತ ಖಾಸಗಿಕ್ಷಣವನ್ನ ಅಪರೋಕ್ಷವಾಗಿ ಹಂಚಿಕೊಂಡ ಆಪ್ತರು. ಯಾರಿಗೂ ಹೇಳದ್ದನ್ನ ಇವರೊಡನೆ ಹೇಳಿದ್ದೇನೆ. ಅವರು ಜಗತ್ತಿಗೆ ಹರಿಸಿದ ಹೊನಲು ನನಗಾಗೆ ಕೇವಲ ನನಗಾಗೆ ಹೇಳಿದ ಖಯಾಲುಗಳೆಂದು ಬಗೆದು ಅದರಿಂದ ಸಾಂತ್ವನ ಪಡೆದಿದ್ದೇನೆ. ಹೀಗೆ ಒಂದು ಗಾಯವನ್ನ ಕೊಳೆಸದೆ ಹಾಗೇ ರಂಗಾಗಿ ಇಡುವ ಮಾಂತ್ರಿಕ ಸ್ಪರ್ಶದ ಫ್ರೀಝರ್ ನ ಈ ಮೂರು ಖಾನೆಗಳ ಹೆಸರು ಜಗಜೀತ್, ಗುಲಾಂ ಅಲಿ ಮತ್ತು ಆಬಿದಾ ಪರ್ವಿನ್.
ನಿನ್ನೆ ಈ ಬದುಕಿನ ಕೊನೆಯ ಚರಣ ಮುಗಿಸಿ ಎದ್ದು ಹೋದ ಶ್ರೀ ಜಗಜೀತ್ ಸಿಂಗರ ನೆನಪಿನಲ್ಲಿ ಈ ಬರಹ.
ಗಝಲುಗಳನ್ನ ಅವುಗಳ ಸಾಂಪ್ರದಾಯಿಕ ಖಯಾಲುಗಳಿಂದ ಮುಕ್ತಗೊಳಿಸಿ, ಯಾರು ಬೇಕಾದರೂ ಹಾಡಬಹುದು ಅನ್ನಿಸುವಂತೆ ಆಪ್ತವಾಗಿ ಘಮಘಮಿಸುವಂತೆ ಹಾಡಿ, ಉರ್ದು ತಿಳಿಯದವರೂ ಗಝಲ್ ಕೇಳುವ ಹಾಗೆ ಮಾಡಿದ ಕೀರ್ತಿ ಜಗಜೀತರದ್ದು. ಅವರ ಧ್ವನಿಗೆ ಆಳವಿಲ್ಲ, ಹೊಸತನವಿಲ್ಲ, ಸಾಂಪ್ರದಾಯಿಕ ಘನತೆಯಿಲ್ಲ ಎಂಬಿತ್ಯಾದಿ ಹುಸಿಮಾತುಗಳಿಗೆ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಹಾಡುತ್ತ, ಸಂಗೀತ ಸಂಯೋಜಿಸುತ್ತ, ಹೊಸ ಹೊಸ ಪ್ರಯತ್ನ, ಮತ್ತು ಆಲ್ಬಂಗಳನ್ನು ತರುತ್ತ ಹೋದರು ಅವರು. ಹಾಡುಹಕ್ಕಿಯ ಕೇಳುವ ಕಿವಿಗಳು ಎಲ್ಲ ಕಡೆಯೂ ಇದ್ದವು. ಗಾಲಿಬ್ ಎಂಬ ಒಂದು ಅತ್ಯಪೂರ್ವ ರತ್ನವನ್ನ ರಾಷ್ಟ್ರೀಯ ಮಾಧ್ಯಮದಲ್ಲಿ ಧಾರಾವಾಹಿಯಾಗಿ ಎಳೆತಂದು ನಮ್ಮ ಪೀಳಿಗೆಗೆ ಹೊಸ ಆಪ್ತತೆಯನ್ನು ತೆರೆದುಕೊಟ್ಟದ್ದು ಅವರದ್ದೇ ಪ್ರಯತ್ನ. ಗಾಲಿಬ್ ನನ್ನ ದೊಡ್ಡ ವಿದ್ವಾಂಸರ ಸಭೆಯಲ್ಲಿ ಹಾಡಿಕೊಂಡು ಕೂರಬೇಕು ಎಂಬ ಮಿತಿಯ ಮೀರಿದ ಪ್ರಯತ್ನ. ಹೊಸ ದಿಕ್ಕುಗಳಿಗೆ ಬಾಗಿಲಿಲ್ಲ ಎಂದು ತೋರಿಸಿದ ಪ್ರಯತ್ನ ಅದು. "ಹಝಾರೋ ಖ್ವಾಯಿಷೇ ಐಸಿ ನಿಕಲೇ, ಹರ್ ಏಕ್ ಖ್ವಾಯಿಶ್ ಪೇ ದಂ ನಿಕಲೀ" ಎಂದು ಅವರು ನಿರ್ದೇಶಿಸಿದ ಗಾಲಿಬ್ ಹಾಡಿದ್ದು ನನಗಾಗೆ ಅಲ್ಲವೇ? ನಿದ್ದೆ ಬರದೆ ಕಾಡಿದ ರಾತ್ರಿಗಳ ಯುಗಾಂತ್ಯವಾಗುವುವರೆಗೂ ಸಾಥ್ ಕೊಟ್ಟ ಗಝಲುಗಳಲ್ಲಿ ಮೊದಮೊದಲ ಹಾಡುಗಳು ಅವರವೇ.. ಯಾರೋ ಹೇಳಿದ್ದು ನಿಜ. ಹೊಸಬರಿಗೆ ಗಝಲ್ ಎಂಟ್ರಿ ಪಾಯಿಂಟ್ ಜಗಜೀತ್ ಅಂತ. ಆ ಗಝಲ್ಲುಗಳ ಟೈಟಲ್ಲೇ ಅದು ಫಿಲ್ಮೀ ಗಝಲ್ಸ್! ಮತ್ತು ಆ ಫಿಲ್ಮೀ ಮೆಲಾಂಕಲಿ ಹಾಡುಗಳು ಒಮ್ಮೆ ಕೇಳಿದವರನ್ನ ಅಲ್ಲಿಗೆ ಬಿಡದೆ ಎಲ್ಲ ಗಝಲುಗಳ ಆಪ್ತಪಿಸುದನಿಯ ಪ್ರಪಂಚದಲ್ಲಿ ಆರ್ದ್ರಪಯಣಕ್ಕೆ ಹಚ್ಚಿಬಿಡುತ್ತಿದ್ದುದೂ ಹೌದು.
ತುಮ್ ಕೋ ದೇಖಾ ತೋ ಯೇ ಖಯಾಲ್ ಆಯಾ ಎಂಬ ಮಾತಿನ ರಮ್ಯತೆಯ ಮೋಡಿಯಲ್ಲಿ ಸೆಳೆಯುವ ಸಾಲಿನ ಬೆರಳು ಹಿಡಿದು ಹೊರಟರೆ ಅದು ನಮ್ಮನ್ನ ಕರೆದೊಯ್ದು ನಿಲ್ಲಿಸುವುದು ಜಿಸೇ ಹಮ್ ಗುನ್ ಗುನಾ ನಹೀ ಸಕ್ ತಾ.. ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ.. ಎಂಬ ಗಾಯವನ್ನು ತೋರಲು! ಜುಖೀ ಜುಖೀ ಸೀ ನಝರ್... ಎಂಬ ಹಾಡು ಕಟ್ಟಿಕೊಡುವ ಬೇಕರಾರಿ ಇನ್ಯಾವ ಹಾಡಲ್ಲಿದೆ? ಅವಳು ಅವನೊಡನೆ ಕಳೆವ ಉತ್ಕಟ ಕ್ಷಣಗಳ ಉಲ್ಲಸಕ್ಕೆ ರೋಮಾಂಚಿತರಾಗುವ ಕ್ಷಣದಲ್ಲೇ, ಇವನ ಸಂಕಟಕ್ಕೆ ಹನಿಗಣ್ಣಾಗುವ ಕ್ಷಣವೂ ಈ ಹಾಡಲ್ಲೇ!
ಪ್ಯಾರ್ ಮುಜ್ ಸೇ ಜೋ ಕಿಯಾ ತುಮ್ ನೇ ತೋ ಕ್ಯಾ ಪಾವೋ ಗೀ...ಅಂತ ಸ್ವಮರುಕದಲ್ಲಿ ಬೇಯುವ ದನಿಗೆ ಹನಿಗಣ್ಣಾಗದ ಕಿವಿ ಇದ್ದೀತೇ?
ಕಲ್ ಚೌದ್ವೀಂ ಕಾ ರಾತ್ ಥೇ...ಅಂದ ಮೇಲೇ ನಿನ್ನ ಚರ್ಚೆಯಾಗದೆ ಹೇಗೆ ಸಾಧ್ಯ ಅಲ್ಲವೆ.. ಎಲ್ಲೆಲ್ಲಿ ಗಝಲ್ ಹಾಡು ಹಾಡುವರೋ ಅಲ್ಲಿ ನಿನ್ನ ನೆನಪಾಗದೆ ಹೋದೀತೇ?
ಇಶ್ಕ್ ಕೀಜಿಯೇ, ಫಿರ್ ಸಮಝಿಯೇ ಬೇಕುಧೀ ಕ್ಯಾ ಚೀಝ್ ಹೈ.. ಎಂಬ ಹಾಡಿನ ಸಾಲು ಕೇಳಿದವರು ಕೂಡಲೇ ಈ ಸಂಕಟಕ್ಕೇ ಹಂಬಲಿಸುವಂತೆ ಮಾಡುವ ಮಾಂತ್ರಿಕ ದನಿ ತನ್ನ ಕೊನೆಯ ಚರಣದಲ್ಲಿ ಜರ್ಝರಿತವಾಗಿ ಚಿಟ್ಟೀ ನ ಕೊಯೀ ಸಂದೇಸ್.. ಎಂಬ ಹಾಗೆ ಹೊರಟ ದಿನ ಮುಗಿದು, ಇನ್ನು ಬರಿ ನೆನಪುಗಳ ಪಯಣ. ಫೋಟೋ ಫ್ರೇಮುಗಳಲ್ಲಿ ಸೀಡಿ-ಡೀವಿಡಿಗಳಲ್ಲಿ ಆರ್ಕೈವುಗಳಲ್ಲಿ, ಆರ್ತ ಮನಸ್ಸುಗಳ ಕೇಳುಗಿವಿಗಳಲ್ಲಿ ಅಮರ ಗೀತವಾಗಿ ಗುನುಗುತ್ತಾ..

ನನ್ನ ಗಝಲುಗಳ ಪಯಣದ ಎಂಟ್ರಿ ಪಾಯಿಂಟ್ ಮತ್ತು ನಿತ್ಯಹರಿದ್ವರ್ಣ ಹಾಡು... ಜಗಜೀತರ ಧ್ವನಿಯಲ್ಲಿ http://www.youtube.com/watch?v=NqRCVdotF1U&feature=related

6 comments:

nenapina sanchy inda said...

Just great Sindhu!!
His ghazals transcends even nations. Ghulam Ali, Abida Parveen and Jagjeet Singh are my favorite too!
:-)
malathi S

Deepu said...

Beautifully written.. nice tribute to ghazal maestro..

Subrahmanya said...

ನಿಮ್ಮ ಲೇಖನ ಮೇರು ಗಾಯಕನಿಗೆ ಸಂದ ಗೌರವ ಎನ್ನಬಹುದು.

ಸಿಂಧು sindhu said...

@ಮಾಲ್ತಕ್ಕಾ,

ಥ್ಯಾಂಕ್ಯು. ಗಝಲ್ ಗಳ ಬಗ್ಗೆ ಮಾತಾಡಲೇ ಬೇರೆ ಸಮಯ ಬೇಕು. ನೀವು ಕೇಳಿದ್ದರ ಬಗ್ಗೆ ನಾನು ಕೇಳಬೇಕು.

@ದೀಪು,
ಥ್ಯಾಂಕ್ಯೂ

@ಸುಬ್ರಹ್ಮಣ್ಯ
ನನ್ನ ಅಕ್ಷರ ನಮನ ಇದು ಆ ಅಗಲಿದ ಮಾರ್ದವ ಚೈತನ್ಯಕ್ಕೆ.

ಪ್ರೀತಿಯಿಂದ,
ಸಿಂಧು

Unknown said...

ಲೇಖನ ತುಂಬಾ ಆಪ್ತವಾಗಿದೆ. ಜಗ್‍ಜೀತ್ ಅವರ ಈ ಗಝಲ್ ಅನ್ನು ನಾನು ಅದೆಷ್ಟು ಸಲ ಗುನುಗಿಕೊಂಡಿದ್ದೇನೋ! ಜತೆಗೆ ನನ್ನೂರಿಂದ, ನನ್ನವರಿಂದ ದೂರದಲ್ಲಿ ಒಂಟಿಯಾಗಿ ಕಳೆವ ಅದೆಷ್ಟೋ ರಾತ್ರಿಗಳಲ್ಲಿ "ಹಂ ತೋ ಹೈ ಪರ್‌ದೇಶ್ ಮೇ, ದೇಶ್ ಮೆ ನಿಕಲಾ ಹೋಗಾ ಚಾಂದ್..." ಸಹಾ ನನ್ನೆದೆಯಲ್ಲಿ ಗುನುಗತೊಡಗುತ್ತದೆ. ಇಷ್ಟಾಗಿಯೂ ನನ್ನ ಮೆಚ್ಚಿನ ಗಝಲ್ ಗಾಯಕ ತಲತ್ ಅಜೀಜ್. ಎರಡು ದಶಕಗಳಿಗೂ ಹಿಂದೆ ಆತನ ದನಿಯಲ್ಲಿ "ಕೈಸೇ ಸುಕೂನ್ ಪಾಂವೂ ತುಝೆ ದೇಖ್‍‍ನೇ ಕೆ ಬಾದ್, ಅಬ್ ಕ್ಯಾ ಗಝಲ್ ಸುನಾಂವೂ ತುಝೆ ದೇಖ್‌ನೇ ಕೆ ಬಾದ್..." ಎಂದು ಕೇಳಿದ ಗಳಿಗೆಯಿಂದ ನನ್ನ ಗಝಲ್‍‍ ಲೋಕದ ಮೇರೆಗಳೇ ಬದಲಾಗಿಹೋದವು. ನೀವೂ ಒಮ್ಮೆ ಕೇಳಿ. "ಪೂಛೇಂಗೆ ಹವಾವೋಂಸೆ ಘಟಾವೋಂಸೇ ತೇರಾ ಹಾಲ್... ಚಾಹೇಂಗೆ ತುಝೆ ಹಂ, ಕೊಯಿ ರುಸ್ವಾ ನ ಕರೇಂಗೆ..." ಹೀಗೆ ಅದೆಷ್ಟೋ... ಆದಾಗ್ಯೂ ನಾನು ಜಗಜೀತ್ ಸಿಂಗ್ ಅವರಿಗೆ ಋಣಿ. ಯಾಕೆಂದರೆ ತಲತ್ ಆಜೀಜ್‌ರನ್ನು ಗಝಲ್ ಲೋಕಕ್ಕೆ ದೊಡ್ಡದಾಗಿ ಪರಿಚಯಿಸಿದ್ದೇ ಜಗಜೀತ್.

ಸಿಂಧು sindhu said...

ಶ್ರೀ ಪ್ರೇಮಶೇಖರ್,

ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ನಮಸ್ತೇ.
ಜಗಜೀತರು ನನಗೆ ಇಷ್ಟ ನನ್ನ ಗಝಲ್ ಗೀತೆಗಳ ಕೇಳುವಿಕೆಯ ಪಲ್ಲವಿಯೇ ಅವರು.
ತಲತ ಅಝೀಜ್ ಅವರ ಹಾಡುಗಳು ನಂಗೂ ಇಷ್ಟ. ನನಗೆ ತುಂಬ ಇಷ್ಟವಾದ ಅವರ ಗಝಲ್ - ಬಾಝಾರ್ ಸಿನೆಮಾದ - ಫಿರ್ ಛಿಡೀ ರಾತ್ ಬಾತ್ ಫೂಲೋಂ ಕಿ..
ನೀವು ತಿಳಿಸಿದ ಗಝಲ್ ಗಳನ್ನು ಕೇಳಿದೆ. ಇಷ್ಟವಾದವು.
ಗಝಲ್ ಗಳೆಂದರೆ ನನಗೆ ವಿಶೇಷ ಪ್ರೀತಿ. ಗುಲಾಂ ಅಲಿ ನನ್ನ ನೆಚ್ಚಿನ ಗಝಲ್ ಗಾಯಕ ಎಂದಿಗೂ.

ಹೀಗೇ ಬರುತ್ತಿರಿ. ನಿಮ್ಮ ಹಿರಿಯ ಸಲಹೆ,ಸೂಚನೆಗಳು ನನ್ನ ಬರಹಕ್ಕೆ ಬೆಂಬಲ.

ಪ್ರೀತಿಯಿಂದ,
ಸಿಂಧು