Tuesday, July 5, 2011

ಮಾಯಾಲೋಕ

ಬಾಲ್ಯವೆಂಬ ಮಾಯಾಲೋಕ ಮತ್ತು ನೀನು ಬಿಡಿಸಿಕೊಡುವ ಮಾಯಾಚಾಪೆ ಆಹಾ... ಥ್ಯಾಂಕ್ಸ್ ಅಂದ್ರೆ ಬಯ್ತೀಯ ನೀನು, ಅದಕ್ಕೆ ಇಡೀ ಕವಿತೆಯನ್ನ ಹೂವಪ್ಪುಗೆಯಲ್ಲಿ ನಿನಗರ್ಪಿಸುತ್ತಾ...
{ ನೀನು ಚಾಟಿಸಿದಾಗೆಲ್ಲ
ಇವತ್ತಿನ ನಾನು ಅಳಿದು
ಪಂಚೇಂದ್ರಿಯಗಳಲ್ಲಿ
ಹಳದಿಬೂದುಬಣ್ಣದ ಗೋಡೆ ನಡುವಿನ
ಕೋಣೆ, ನೆಲಬೆಂಚುಗಳು,
ಗುಸುಗುಸು ಮಾತು
ಕಪ್ಪು ಬೋರ್ಡಿನ ಮೇಲೆ ಬಿಳಿ ಬಿಳಿ
ಅಕ್ಷರ ದುಂಡಗೆ ಬರೆಯುತ್ತಿರುವ ಅನಸೂಯಮ್ಮ ಟೀಚರು
ಅಲ್ಲಲ್ಲಿ ಯಾರು ಮೊದಲು ಬರೆದು ಮುಗಿಸುವರೆಂಬ
ಛಲದ ಕಣ್ಣಾಟ,
ಹೊರಗೆ ಅಂಗಳದಲ್ಲಿ
ನೇತುಬಿಟ್ಟ ರೈಲ್ವೆ ಕಂಬಿಯ ಬೆಲ್ಲಿನ ರಿಂಗಣಕ್ಕೆ
ಕಾದ ಕಿವಿಗಳು
ಇನ್ನೇನು ಆಟದ ಬೆಲ್ಲು ಹೊಡಿಯಬೇಕು
ಅಷ್ಟರಲ್ಲಿ ಸುರಿದ ಮಳೆಗೆ
ಮತ್ತೆ ಕೋಣೆಯಲ್ಲೆ ಕೂಡಿಸಿ
ಹಾಡು ಕತೆ ಹೇಳಿಸುತ್ತಿರುವ ರಮಾಮಣಿ ಟೀಚರು
ಕೈಕಟ್ಟಿ ಎಲ್ಲರ ಮುಂದೆ
ನಿಂತು ಬಿಡಿಸುವೆ ನಾನು
ನೀವೆಲ್ಲ ಹತ್ತಿ ಕೂರುವುದಕ್ಕೇ ಕಾದ
ಮಾಯಾಚಾಪೆಯನ್ನು
ಇಂದು ಹೋಗೋಣ ರಷ್ಯಕ್ಕೆ
ನಾಳೆ ಚಿತ್ರಕೂಟಕ್ಕೆ
ನಾಡಿದ್ದು ಮಣ್ಣಿನಮನೆಗೆ
ಯಾನ ಮುಗಿದಿದೆ
ಬೆಲ್ಲು ಹೊಡೆದಿದೆ
ಮಳೆ ನಿಂತಿದೆ
ಶಾಲೆ ಮುಗಿದಿದೆ
ಈಗ ಮನೆಗೋಡುವ ಸಮಯ
ಹಾರಬಹುದು ಮಳೆನೀರಿನ ಹೊಂಡ
ಕೆಸರು ಎರಚಿದರು ಪರವಾಗಿಲ್ಲ
ಶಾಲೆ ಮುಗಿಯಿತಲ್ಲ
ನಾಳೆಗೆ ಬಣ್ಣದ ಬಟ್ಟೆ
ಆಹ್ ಎಷ್ಟು ಜೋರಾದ ಹಾರ್ನ್
ಅಯ್ಯೋ ನನ್ನ ಬಾಲ್ಯವಳಿಯಿತು
ಇಲ್ಲಿದೀನಿ ಗಣಕಯಂತ್ರದ ಮುಂದೆ
ನಿನ್ನ ನೆಟ್ಟು ಕಟ್ಟಾಗಿ
ಚಾಟು ಆಫಾಗಿ
ಮತ್ತಿಲ್ಲೆ ನಾನು
ಹುಶಾರಾಗಿ
ಇರಬೇಕಾದವಳು,
ಯಾರೆಂದರೆ ಅವರೊಡನೆ
ಏನೆಂದರೆ ಅದು ಮಾತಾಡದೆ
ನಗುವನ್ನು ಅಳೆದು ತೂಗಿ ಸೂಸಬೇಕಿರುವವಳು.
ಮತ್ತೆ ನಾಳೆ ಬಾ ನೀನು
ಬೇಗ.
ಆಫ್ ಆಗುವ ಮುನ್ನವೆ ಹೇಳಿಬಿಡು
ನಾನು ಚಾಪೆಯಿಂದಿಳಿಯಕ್ಕೆ ತಯಾರಿರುತ್ತೇನೆ
ಯಾಕೆ ಸುಮ್ಮನೆ ಕ್ರಾಶ್ ಲ್ಯಾಂಡಿಂಗು??
}

6 comments:

Sushrutha Dodderi said...

ಎಷ್ಟ್ ಚನಾಆಆಆಗಿದ್ದು ಅಂದ್ರೆ, ಅಷ್ಟ್ ಚನಾಗಿದ್ದು. :-)

ತೇಜಸ್ವಿನಿ ಹೆಗಡೆ said...

ಸಿಂಧು,

ಇಂತಹ ಸುಂದರ ಬಾಲ್ಯ, ಶಾಲೆ, ನೀರು, ಮಣ್ಣು, ನಿನ್ನ ರಮಾಟೀಚರ್, ಅನಸೂಯಾ ಟೀಚರ್, ಹಾಗೇ ನನ್ನ ಲಿಂಗು ಟೀಚರ್, ಯಶೋದಾ ಟೀಛರ್ - ಇವೆಲ್ಲಾ ಎಷ್ಟು ಸುಂದರ ನೆನಪುಗಳು.. ಮಾಯಾ ಲೋಕವೇ ಸರಿ. ಮಾಯವಾಗೋ ಲೋಕ... ಕರಗಿ ಹೋದ ಲೋಕ. ನಮ್ಮ ಪುಟಾಣಿಗಳ ರಮ್ಯ ಕತೆಗಳ ಜೊತೆ ಸೇರಿಕೊಳ್ಳುವ ಲೋಕ.

ಇಂತಹ ಮಾಯಾಚಾಪೆ, ಮಾಯಾ ಲೋಕ ನಮ್ಮ ಮಕ್ಕಳಿಗೂ ಸಿಗುವಂತಾಗಿದ್ದ‘ರೆ’...!!!

sunaath said...

ಸಿಂಧು,
ಮಾಯಾಚಾಪೆಯ ಮೇಲೆ ಒಂದೇ ನಿಮಿಷ ಕೂರಿಸಿದರೂ ಸಹ,
ಬಾಲ್ಯದವರೆಗೆ ಕರೆದೊಯ್ದಿರಿ! Fascinating!

ಕನಸು ಕಂಗಳ ಹುಡುಗ said...

ಹೂಂ. ಕನ್ನಡದ ಟೀಚರುಗಳೆಂದರೇ ಹಾಗೆ.....
ಅಮ್ಮನ ಥರಾ....

ಹೊಸ ಥರನಾಗಿದೆ..... ಚನ್ನಾಗಿದೆ..

Anonymous said...

ಚಂದ ಇದೆ :)

ಸಿಂಧು sindhu said...

@ಸು-ಶ್ರುತ,
:) ಗೊತ್ತಾತು. ನಿಂಗಿಷ್ಟವಾಗೊ ನೆನಪುಗಳೆಲ್ಲ ಈ ಕಪ್ಪೆಕಲ್ಲು ಕವಿತೆಯಿಂದ ಅಲೆಯೇಳ್ತಾ ಇದ್ದು ಅಲ್ದಾ?

@ತೇಜಸ್ವಿನಿ,
ಥ್ಯಾಂಕ್ಯೂ.
ನೀನು ಕೇಳ್ತಾ ಇರದು "ರೆ" ಲೋಕ.

@ಸುನಾಥ,
ನಿಮ್ಗಿಷ್ಟವಾಗಿದ್ದು ನಂಗೆ ಖುಶೀ. ನೀವು ನನ್ನ ಚಾಪೆಯ ಮೇಲೆ ಹತ್ತಿ ಇಷ್ಟಪಟ್ರಿ ಅನ್ನೋದೆ ನಂಗೆ ಸಕ್ಕತ್ ಖುಶೀ.

@ ನಮ್ಮ ಹಳೇ ಕೆರೆಶಾಲೆಯ ಎಲ್ಲ ಟೀಚರುಗಳೂ ವಿಶಿಷ್ಟವಾಗಿದ್ದರು. ಮತ್ತು ಆ ಶಾಲೆಯ ಮಕ್ಳೂ. :)

@ಸುಕೇಶ್,
ಖುಶೀ.

ಈ ಕವಿತೆ ಮೂಡಲು ಕಾರಣವಾದ ಗೆಳೆಯನಿಗೆ ಮತ್ತು ಅವನು ಕರೆದ "ಮಧುರ ನೆನಪುಗಳ ಅಧಿವೇಶನಕ್ಕೆ" ನಾನು ಆಭಾರಿ.

ಪ್ರೀತಿಯಿಂದ,
ಸಿಂಧು