Wednesday, June 22, 2011

ಹೂಕಣಿವೆಯ ಹಂಬಲು

ಇಲ್ಲೆ ಗಣಕದ ಕಿಂಡಿಯಲ್ಲಿ
ಇಣುಕಿದರೆ
ಮಳೆಬಿಲ್ಲಿನ ಬಣ್ಣಗಳ ಹಾಯಿಸಿ
ನಗುವ
ಹೂಕಣಿವೆಯೇ,
ಇದೆಯೆ ನನಗೆ
ನಿನ್ನ ಒಡಲಲಿ ಹರಿದಾಡುವ ಭಾಗ್ಯ?

ಬಿಳಿಬೆಟ್ಟಗಳ ತಪ್ಪಲಲಿ
ದೀರ್ಘವಾಗಿ ಸುಯ್ಯುತಿರುವ
ಮರಗಳೆ ನೀವು ಕಾದಿರುವುದಾರನ್ನ?
ಗಿರಿಯ ಸಂದುಗಳಲಿ ತೂರಿ
ಹರಿವ ದೇವನದಿಗಳೆ
ನೀವು ಕರೆಯುವುದು ಯಾರನ್ನ?
ಸಂಗಮಿಸಿ ಹರಿವ ನದಿಗಳು
ಸೂಚಿಸುವುದೇನನ್ನ?
ದೂರಹಾದಿಯ ಪಯಣದ
ರೋಚಕತೆಯೇ ನೀನು
ಬಳಸಿರುವೆಯೇಕೆ ಹೀಗೆ ನನ್ನ?
ಲಕ್ಷಗಳಲ್ಲಿಹುದು ಸಂಖ್ಯೆ
ನಿನ್ನ ಮಡಿಲಲಿ ಸಾಗಿದ ಪಯಣಿಗರದು
ಮುಟ್ಟಿ ಮೀರಿದವರಾರು ಗುರಿಯ?


ಫ್ರಾಂಕ್ ಸ್ಮಿಥ್ ಮಹಾಶಯ
ಹೆಸರಿಡುವ ಮೊದಲೇ
ನೀನಲ್ಲಿದ್ದೆ.
ಇಂದಿಗೂ ಇರುವೆ,
ಋತುಮಾನದ ಜತೆಗೂಡಿದ
ಭುವಿಯ ಅರಳುವಿಕೆಯ
ಸಂಭ್ರಮಕ್ಕೆ ಸಾಕ್ಷಿಯಾಗಿ!
ಕಾಲದೇಶಗಳ ಮೀರಿದಂತೆ,
ರಾಜಕೀಯ ನುಸುಳದಂತೆ,
ಸಣ್ಣತನವ ಅರೆಯುವಂತೆ.
ಅಂದಿಗೂ ಇಂದಿಗೂ ಎಂದಿಗೂ!
ನೋಡಲು ರಮ್ಯ,
ಹೊಂದಲು ಅಗಮ್ಯ!


ಇದೆಯೆ ನನಗೆ ನಿನ್ನ
ಒಡಲಲಿ ಹರಿದಾಡುವ ಭಾಗ್ಯ?!
ಕಾದಿರುವೆ-
ಅದು-ಇದು ಎಲ್ಲದೂ
ಒಂದೇ ಎನಿಸುವ ಬಿಳಿಬಿಳಿ ಅದ್ವೈತಕ್ಕಾಗಿ..!

5 comments:

ಕನಸು ಕಂಗಳ ಹುಡುಗ said...

ಹೂಂ..... ಎಲ್ಲಾ ನೋಟಗಳಾಚೆ ಒಂದು ಚಿತ್ರವಿದೆ....
ಕಾಣದ ಚಿತ್ತಾರವಿದೆ.... ಬೆಟ್ಟ ಗುಡ್ಡಗಳಿವೆ.....

ಸಿಂಧು ರವರೇ...ಆ ಸ್ವರ್ಗದಲ್ಲಿ ತೇಲಾಡುವ ಮನಸಿನ ನಿಮ್ಮ ಕವನ ಚನ್ನಾಗಿದೆ

ಸೀತಾರಾಮ. ಕೆ. / SITARAM.K said...

nice one!

sunaath said...

ಸಿಂಧು,
‘ಬಯಕೆ ಬರುವದರ ಕಣ್ಸನ್ನೆ ಕಾಣೊ!’
ನಿಮ್ಮ ಕನಸು ನನಸಾಗಲಿ.

Subrahmanya said...

ಕೆಲವು ಸಾಲುಗಳು ಗೋ.ಅಡಿಗರನ್ನು ನೆನಪಿಸಿತು. ತುಂಬಾ ಚೆನ್ನಾಗಿದೆ.

ಸಿಂಧು sindhu said...

@ಕನಸು ಕಂಗಳ ಹುಡುಗ: ಹಮ್.. ಇದು ಎಲ್ಲ ನೋಟಗಳಾಚೆಗಿನ ಚಿತ್ರವೇ.. ಅದರಾಚೆಗೂ ಕಾಣುವ ಹಂಬಲ

@ಸೀತಾರಾಂ,
ನಿಮ್ಮಾತು ಕೇಳಿ ಖುಶಿಯಾಯ್ತು.

@ಸುನಾಥ್,
ನಿಮ್ಮ ಹಿರಿ ಹರಕೆಯು ನನಸಾಗುವ ಹಾದಿಯಲ್ಲಿದೆ. ನಿಮ್ಮ ಈ ಹಾರೈಕೆಯನ್ನು ದಿನಕ್ಕೆ ಹತ್ತು ಬಾರಿಯಾದ್ರೂ ನೆನೆದುಕೊಂಡು ಸಮಾಧಾನ ಮಾಡಿಕೊಳ್ತಾ ಇದೀನಿ.

@ಸುಬ್ರಹ್ಮಣ್ಯ,
ಅದು ತುಂಬ ದೊಡ್ಡ ಮಾತು. ನಮ್ಮ ಜನರೇಶನ್ನಿನ ಎಲ್ಲ ಕವಿಹೃದಯಗಳನ್ನ ಪ್ರಭಾವಿಸಿದ ಚೇತನ ಅವರು.