Wednesday, May 4, 2011

ಅಗಲ-ಆಳ

ಬಾಲ್ಯದ ಓದಿಗೆ ಹರವಿತ್ತು
ಆಳವಿರಲಿಲ್ಲ
ಅದಾಗ್ಯೂ
ನೆನಪು ಕಂಡರಿಸಿದ ಚಿತ್ರಗಳು ಹಲವು
ಆತು ಕೂತ ಸಾಲುಗಳೊ ಇನ್ನೂ ಹಲವು
ಮಿಲನ ಮುಗಿಯಲಿ,
ಆದರೇನು
ಎದೆಗೂತ್ತಿ ಹಿಡಿ ನನ್ನ
ರಾತ್ರಿಯ ನಶೆ ಕತ್ತಲಲ್ಲೆ ಕರಗಲಿ
ಬೆಳಗಾದರೂ ನಿನ್ನ ಕೈ ನನ್ನ
ಬರಿಮೈಯ ಬಳಸಿಯೇ ಇರಲಿ;
ಅವತ್ತು ಓದಿದ ಇಂಗ್ಲಿಷಿನ ಸಾಲುಗಳು
ಕನ್ನಡ ಮಣ್ಣಲ್ಲಿ ಮೊಳಕೆಯೊಡೆದ
ಆಶೆಯ ಬಳ್ಳಿಗೆ
ಇಂಬು ಕೊಟ್ಟ ಪರಿಗೆ ಏನ ಹೇಳಲಿ?!
ಯೂರಿಪಿಡೀಸನ ಮೀಡಿಯಾ ಅಂದುಕೊಂಡದ್ದು ತುಂಬ ನಿಜ
ಹೆಣ್ಣಿಗೆ - ಒಲವೇ ನನ್ನ ಬದುಕು
ಗಂಡಿಗೆ - ಒಲವು ಬದುಕನ್ನ ತುಂಬಬೇಕು
ಅದೇನೆ ಇರಲಿ
ಕಲಿತ ಪಾಠಗಳ ಜಾಗ ಪುಸ್ತಕಗಳಲ್ಲಿ
ಅಂತಾದರೆ
ಸಮಯ ಕಳೆಯಲು ಓದಿದ ಸಾಲುಗಳಲ್ಲಿ
ಅನಾವರಣಗೊಳ್ಳುತ್ತಿರುವುದೇನು!!
ಯಾರೋ ಹೇಳಿದರು
ಒಳ್ಳೆಯ ಪುಸ್ತಕ ನಿನಗೆ ಈ ಮುಂಚೆಯೆ ಗೊತ್ತಿದ್ದನ್ನೆ
ಅರ್ಥ ಮಾಡಿಸುವ ಬಗೆ
ನಕ್ಕಿದ್ದೆ ನಾನು ಎಂಥ ತಲೆಪ್ರತಿಷ್ಠೆ!
ಅನಿಸುತ್ತಿದೆ ಈಗ -
ಬರಿಮೈಯ ಬಳಸಲು
ಅವನ ಕೈ ಸಾಲದಷ್ಟು ಅಗಲಕ್ಕೆ
ನಾನು ಹರಡಿಕೊಂಡಿರುವಾಗ-
ಬದುಕು ಒಂದು ಒಳ್ಳೆಯ ಪುಸ್ತಕದ ಹಾಗೆ
ಎಂದೊ ಮನದೊಳು ಹೊಕ್ಕ ಹರವಿನ
ಆಳವನ್ನು ಇಂದು ಅರಿತ ಹಾಗೆ!
ಆಹ್ ಎನ್ನಿಸಿದ
ಆಶೆ
ನಿರಾಶೆಯ ದಿಬ್ಬ ಹತ್ತಿಳಿದರೂ
ನಿರೀಕ್ಷೆಯ ಹೊಸ್ತಿಲಲ್ಲಿ ದೀಪ ಹಚ್ಚಿಟ್ಟು
ಕಾಯುವ ಸೊಗಸೆ ಬೇರೆ!
ಮುಂದಿನ ಇರುಳಿನ ಕತ್ತಲ
ಸೊಗಯಿಸುವ ದೀಪ, ಜೊತೆಗೆ
ದೀಪದುರಿಯ ಕಣ್ಣು!

7 comments:

sunaath said...

`ಮುಂದಿನ ಇರುಳಿನ ಕತ್ತಲ
ಸೊಗಯಿಸುವ ದೀಪ, ಜೊತೆಗೆ
ದೀಪದುರಿಯ ಕಣ್ಣು!'
....ಇದೇ ನೈಜ ಕಾವ್ಯ, ಇರುಳಲ್ಲಿ ಮಿನುಗುವ ದೀಪದಂತೆ.

ಸಿಂಧು,
ವ್ಯಕ್ತಿಗತ ಸಂಕೀರ್ಣ ಭಾವನೆಗಳು ಕಾವ್ಯವಾಗುವದನ್ನು ನಿಮ್ಮ
ಕವನಗಳಲ್ಲಿಯೇ ನೋಡಬೇಕು. ಶುಭಾಶಯಗಳು.
-ಸುನಾಥ

ಸಿಂಧು sindhu said...

ಪ್ರಿಯ ಸುನಾಥ,

ನೀವು ಈ ಬದುಕನ್ನ ನನಗಿಂತ ಆಳದಲ್ಲಿ ನೋಡಿರುವ ಹಿರಿಯರು. ನಿಮ್ಮ ಮಾತು ಎಷ್ಟೋ ಸಲ ನನ್ನ ಬಿರಿ-ಭಾವಗಳನ್ನ ನೇವರಿಸಿ ಹಸನು ಮಾಡುತ್ತದೆ.

ಧನ್ಯವಾದಗಳು.
-ಪ್ರೀತಿಯಿಂದ, ಸಿಂಧು

ರಾಘವೇಂದ್ರ ಜೋಶಿ said...

ಚೆಂದ ಇದೆ!

ಶುಭಕಾಮನೆ.
-RJ

ಕನಸು ಕಂಗಳ ಹುಡುಗ said...

ಆಶೆ
ನಿರಾಶೆಯ ದಿಬ್ಬ ಹತ್ತಿಳಿದರೂ
ನಿರೀಕ್ಷೆಯ ಹೊಸ್ತಿಲಲ್ಲಿ ದೀಪ ಹಚ್ಚಿಟ್ಟು
ಕಾಯುವ ಸೊಗಸೆ ಬೇರ...

ಭಾವಗಳನ್ನು ಚನ್ನಾಗಿ ಹಿಡಿದಿದ್ದೀರಿ...
ಸಾಲುಗಳೂ ಕೂಡಾ...

ಬದುಕು ಇಂಚಿಂಚಿಗೂ ನಮಗೆ ಕುತೂಹಲ ಹುಟ್ಟಿಸೋದು ಅದಕ್ಕೇ ಅಲ್ಲವೇ? ಪ್ರತೀ ನಾಳೆಯೂ ಒಂದು suspence ಆಗಿರೋದ್ರಿಂದ......

ಚನ್ನಾಗಿದೆ.

ಸೀತಾರಾಮ. ಕೆ. / SITARAM.K said...

wah... chndada kavana

Raghu said...

ಚೆನ್ನಾಗಿದೆ ಈ ಕವನ..
ನಿಮ್ಮವ,
ರಾಘು.

ಸಿಂಧು sindhu said...

ರಾಘವೇಂದ್ರ ಜೋಶಿ,ರಘು,ಸೀತಾರಾಮ,ರಾಘು
ಓದಿ ಮೆಚ್ಚಿ ಸ್ಪಂದಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಅನಿಸಿಕೆ ಓದಿ ನನಗೆ ಖುಶಿಯಾಯ್ತು.

@ಕನಸುಕಂಗಳ ಹುಡುಗ,
ಹೌದನ್ನಿಸುತ್ತೆ. ಆ ಸಸ್ಪೆನ್ಸ್, ನಿರೀಕ್ಷೆ, ಅಂದುಕೊಳ್ಲದೆ ಇರುವುದು ಘಟಿಸುತ್ತದೆ ಏನೂ ಆಗಬಹುದು ಎಂಬ ಭರವಸೆಯೆ ಬದುಕನ್ನು ಮುಂದುವರಿಸುತ್ತದೆ ಅಲ್ವಾ.

ಪ್ರೀತಿಯಿಂದ,
ಸಿಂಧು