ಹೋದವಾರ ಒಂದುದಿನ ರಾತ್ರಿಯೂಟ ಮಾಡುತ್ತಿದ್ದೆ. ಅಮ್ಮ ಮಾಡಿಕೊಟ್ಟ ಮಾವಿನಕಾಯಿಗೊಜ್ಜಿನ ಕೊನೆಯ ತುತ್ತುಗಳನ್ನು ಸವಿಯುತ್ತ ಕೂತಿದ್ದೆ. ರಾತ್ರಿ ಹನ್ನೊಂದು ಗಂಟೆ. ನನ್ನ ಮುದ್ದು ರಾಕ್ಷಸಿಗೆ ಊಟ ಮಾಡಿಸಿ, ನೀರು ಕುಡಿಸಿ, ಅಷ್ಟೊತ್ತಿಗೆ ಮನೆಗೆ ಬಂದ ಅವಳ ಅಪ್ಪನಿಗೆ ಊಟ ಬಡಿಸಿ, ಸಂಜೆಯಿಂದ ನಡೆದ ಅವಳ ಆಟಗಳ ಸಮಗ್ರ ವರದಿಯನ್ನು ಒಪ್ಪಿಸಿ ಮುಗಿಸಿ, ನನ್ನ ತಟ್ಟೆಗೆ ಬಡಿಸಿಕೊಳ್ಳುವಾಗ ಅಷ್ಟೊತ್ತಾಗಿತ್ತು.
ಅಪ್ಪನನ್ನ ಒಲಿಸಿ ಮುದ್ದಿಸಿ ತೂಗುಯ್ಯಾಲೆ ಹತ್ತಿಸಿ, ತಾನು ತೊಡೆ ಹತ್ತಿ ಅವಳು ಕೂರುವ ಮರೆವಿನ ಕ್ಷಣಗಳಲ್ಲಿ ನಾನು ಊಟ ಶುರು ಮಾಡಿದ್ದೆ. ಅವಳಿಷ್ಟದ ಒಂದೆರಡು ಹಾಡು ಮುಗಿದವು. ಕಮಲ ನಯನ ಮಾಧವಾ..; ಚನ್ನಪ್ಪ ಚನ್ನಗೌಡ; ನಿಂಬೀಯಾ ಬನಾದ ಮ್ಯಾಗ ಎಲ್ಲ ಆಯಿತು.ಅಷ್ಟೊತ್ತಿಗೆ ಅಲ್ಲೇ ಕುರ್ಚಿಯ ಮೇಲೆ ಕೂತಿದ್ದ ಮೆತ್ತನೆ ನಾಯಿ ನೆನಪಾಗಿ ಅದನ್ನು ಎತ್ತಿಸಿಕೊಂಡು ತೊಡೆಯ ಮೇಲೆ ಇಟ್ಟುಕೊಂಡಾಯಿತು. ಒಂದೆರಡು ಜೀಕು ಮುಗಿಯಿತು. ಬೌ ಬೌ ಸಾಕಾಯಿತು. ಅದನ್ನು ಕೆಳಗೆಸೆದು ಅವಳಷ್ಟೇ ಉದ್ದದ ಐಶು ಗೊಂಬೆಯನ್ನು ಎತ್ತಿಸಿಕೊಂಡಾಯಿತು. ಮತ್ತೊಂದಿಷ್ಟು ತೂಗುವಿಕೆ. ಇನ್ನೆರಡು ಹಾಡು. ಈಗಲಂತೂ ತೊಡೆಯ ಮೇಲೆ ಎಲ್ಲ ತಾಳಗಳೂ ಒಟ್ಟಿಗೆ ಮೇಳ ನಡೆಸಿಯಾಯಿತು. ಆ ಹಾಡು ಮುಗಿದ ಕೂಡಲೆ ಮತ್ತೆ ಅದನ್ನೆ ಹಾಡಲು ಅಪ್ಪನನ್ನು ಪೀಡಿಸಿಯಾಯಿತು. ಸರಿ ಮತ್ತೆ ಹೇಳುತ್ತಾನೆ ಅಪ್ಪ ರಾಗವಾಗಿ -
- ಪಂಡರಾಪುರವೆಂಬ ದೊಡ್ದ ನಗರ
ಅಲ್ಲಿ ವಿಠೋಬನೆಂಬ ಬಲು ಸಾಹುಕಾರ
ವಿಠೋಬನಿರುವುದು ನದಿ ತೀರ
ಅಲ್ಲಿ ಪಂಡರಿ ಭಜನೆಯ ವ್ಯಾಪಾರ...
ಸುಮ್ಮನೆ ಕುಳಿತಿರಲಾಗದ ನಾನು ಇನ್ನೇನು ಕಣ್ಣು ಮುಚ್ಚುತಿದ್ದ ಅವಳನ್ನೇ ನೋಡುತ್ತಾ ಅಪ್ಪನ ಹಾಡಿಗೆ ನನ್ನದೊಂದು ಉಲಿ ಸೇರಿಸಿಬಿಟ್ಟೆ.
ಗುಬ್ಬಕ್ಕನಿರುವುದು ನದಿತೀರ -ಅಲ್ಲಿ ಟುಪ್ಪೂ ಭಜನೆಯ ವ್ಯಾಪಾರ...
ಅಷ್ಟೇ ಅಪ್ಪನ ತೊಡೆಯ ಮೇಲಿಂದ ಟುಪ್ಪೂ ಜೀಕಿಕೊಂಡು ಇಳಿದಾಯಿತು. ಇನ್ನೇನು ಮುಚ್ಚುವಂತಿದ್ದ ಕಣ್ಣುಗಳು ಮತ್ತೆ ದೊಡ್ದ ದೊಡ್ಡಕ್ಕೆ ಹೂವು ಪೂರ್ತಿ ಅರಳಿದಂತೆ ಅರಳಿಕೊಂಡವು. ಅರ್ಧ ರಾತ್ರಿಗರಳುವ ಹೂವು ಯಾವುದದು ಬ್ರಹ್ಮಕಮಲವಲ್ಲವಾ ಅದರ ಘಮವೇ ಆವರಿಸಿಕೊಂಡಂತಾಯಿತು. ಸೊಳ್ಳೆ ಕಚ್ಚದಿರಲಿ ಅಂತ ಹಚ್ಚಿದ್ದ ಜಾನ್ಸನ್ ಬೇಬಿ ಎಣ್ಣೆಯ ಮೆಲು ಆಹ್ಲಾದ ನನ್ನನ್ನ ಸುತ್ತಿಕೊಂಡಿತು. ನನ್ನ ಹತ್ತಿರ ಓಡಿಬಂದು ಕುರ್ಚಿ ಹತ್ತಲು ಒಂದು ಕಾಲು ಮೇಲೆತ್ತಿದಳು.
ಅಷ್ಟೇ ಹಂಗೇ ಸ್ಟಾಚ್ಯೂ ಭಂಗಿಯಲ್ಲಿ ನಿಂತುಕೊಂಡು ಒಂದು ಕೈ ಹಿಂದಕ್ಕೆ ಇಟ್ಟುಕೊಂಡು ಮುದ್ದಾಗಿ ಉಲಿದಳು - ಅಮ್ತಾತ..ನಾನು ಹೌದು ಟುಪ್ಪೂ ತಾತ ಹೈದರಾಬಾದಲ್ಲಿ ಇದಾರೆ ಇಲ್ಲಿಲ್ಲ ಟಾssಟ ಅಂದೆ.
ಅವಳು ತಲೆಯಲ್ಲಾಡಿಸಿ ಮತ್ತೆ ಉಲಿದಳು - ಅಮ್ ತಾತ. ಏನದು ಎಂದು ಕೇಳಿದೆ ಅದೇ ಉಲಿ - ಅಮ್ ತಾತ.
ಏನಿರಬಹುದೋ ಗೊತ್ತಾಗಲಿಲ್ಲ. ಏನು ಹಂಗಂದ್ರೆ ಮತ್ತೆ ಅವಳನ್ನೆ ಕೇಳಿದೆ. ಸಣ್ಣಗೆ ನಗುತ್ತ ಮತ್ತೆ ಉಲಿದಳು - ಅಮ್ ತಾತ. ನನ್ನ ಮುಖ ನೋಡುತ್ತಲೇ ಇದ್ದಳು. ನಂಗೆ ಗೊತ್ತಾಗಲಿಲ್ಲ ಅನ್ನುವುದು ಅವಳಿಗೆ ಗೊತ್ತಾಯಿತು.ಅಲ್ಲೆ ನನ್ನ ಬದಿಯಲ್ಲಿ ಇಟ್ಟುಕೊಂಡಿದ್ದ ಪುಸ್ತಕ ತೋರಿಸುತ್ತ ಹೇಳಿದಳು ಅಮ್ ತಾತ.
ಅಲ್ಲಿದ್ದದ್ದು ಜೋಗಿಯವರ ಕಥಾಸಮಯ ಪುಸ್ತಕ. ಅದರ ಮುಖಪುಟದಲ್ಲಿ ಲಂಕಾದಹನದಲ್ಲಿ ಕಾಲು ಮೇಲೆತ್ತಿ ಬಾಲ ಎತ್ತರಿಸಿ ನಿಂತ ಹನುಮಂತ. ನನ್ನ ಗುಬ್ಬಕ್ಕ ಉಲಿಯುತ್ತಿರುವುದು ಅದನ್ನೇ - ಅಂತಾತ.. ಗೊತ್ತಾಗಲಿ ಅಂತ ಕೈ ಹಿಂದಕ್ಕೆ ಇಟ್ಟುಕೊಂಡು ಬಾಲವನ್ನ ಬೇರೆ ಅಭಿನಯಿಸಿ ತೋರಿಸುತ್ತಿದ್ದಾಳೆ.
ಅಯ್ಯೋ ಮಗುವೆ ಆದರೂ ಗೊತ್ತಾಗಲಿಲ್ಲವಲ್ಲ ಅಂದುಕೊಂಡು ಹನುಮಂತನಾ ಟುಪ್ಪೂ ಅಂದ ಕೂಡಲೆ ಮುಖದಲ್ಲಿ ನಗೆ ಝಗ್ಗನೆ ಬೆಳಕಾಯಿತು. ಅವಳ ಕೆನ್ನೆಯ ಮೇಲೆ ನನ್ನ ತುಟಿಗಳಿದ್ದವು ಅನ್ನುವುದನ್ನೇನು ಹೇಳುವುದು ಬೇಡ ಅಲ್ಲವಾ?
ಈ ವಾರವಿಡೀ ತುಂಬ ಕೆಲಸ, ಮನೆಗೆ ಬಂದೂ ಮಾಡುವಷ್ಟು. ತಲೆ ಚಿಟ್ಟು ಹಿಡಿದ ಕ್ಷಣಗಳಲ್ಲಿ ನನಗೆ ನಾನೇ "ಅಂತಾತ" ಅಂತ ಹೇಳಿಕೊಂಡು ಹಗುರಾಗುತ್ತಾ ಬೇಸರದ ಲಂಕೆಯ ಚಡಪಡಿಕೆಗಳನ್ನ ಸುಟ್ಟು ಹಾಕಲು ಅಂತಾತನ ಸಹಾಯ ಕೋರುತ್ತೇನೆ. ಈವಾರ ಅವಳ ತೊದಲು ಬದಲಾಗಿದೆ. ಈಗ ಅಮ್ ತಾತ, ಹಮಾಂತ್ಕನಾಗಿದ್ದಾನೆ. :) ಇದು ಈ ವಾರದ ಕತೆ - ಮುಂದಿನ ವಾರ ಕಪಿಸೇನೆಯೇ ಬಂದರೂ ಬರಬಹುದು. ವಾಲಿ ಸುಗ್ರೀವ ಅಲ್ಲೇ ಮರೆಯಲ್ಲಿ ಕಾಯುತ್ತಿರಬಹುದು..! ಮತ್ತು ನಮ್ಮನೆಯ ಯಾವ ವಸ್ತು ದಹನವಾಗುತ್ತದೆಯೋ ಗೊತ್ತಿಲ್ಲ. :)
-ಪ್ರೀತಿಯಿಂದ,
ಸಿಂಧು
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
27 comments:
So sweet. n very very cute baby.
+Shyam
ಕಣ್ಣು ಮುಚ್ಚಿ ಹಮಾಂತ್ಕನ್ನ ನೆನಿತಾ ಇದ್ದಲಾ ಗುಬ್ಬಿ.
ಮುದ್ದು ಎಷ್ಟು ಚಂದ ಕಾಣ್ತಲೇ. ಮುದ್ದು ಮುದ್ದು ಬರ್ತಾ ಇದ್ದು.
ಮುದ್ದಮ್ಮಾ...ಇಲ್ಲೊಬ್ಬ ದೋಡ್ಡ ಹಮಾಂತ್ಕ ಇದ್ದ ಚಿಕ್ಕಮ್ಮ ಮನೆಲ್ಲಿ, ಅವನ ಬಾಲ ಬೇರೆ ಸಿಕ್ಕಾಪಟ್ಟೆನೇ ಊದ್ದ.
ಹಂಗೇ ಹಾರಿ ಮುದ್ದುನ್ನ ಚಿಕ್ಕಮ್ಮ ಮನೆಗೆ ಕರಕಂಡು ಬಾ ಅಂತ
ಈ ಅಮ್ತಾತನ್ನ ಕಳಿಸ್ಲಾ ಈಗ?
ಇಲ್ಲೆ ಇಲ್ಲೆ.. ಇನ್ನು ತಡಿಯಕ್ಕೆ ಸಾಧ್ಯನೇ ಇಲ್ಲೆ.. ನೋಡಕ್ಕು ಅವ್ಳುನ್ನ.. ಯಾವಾಗ ಧಾಳಿ ಇಡ್ಲಿ? (ಕಪಿ ಸೇನೆ ಜೊತೆ?)
:D ಎಷ್ಟು ಮುದ್ದಾಗಿದಾಳೆ.. :) ’ಟುಪ್ಪೂ’ ಚೆನ್ನಾಗಿದೆ ಹೆಸ್ರು.. :)
:-) :-)
sushrutha,
nind baree ide aatu bidu!
nanu 2-3 dinakk ondsala aadroo nodta irthi nodu avLna:)
ಸಿಂಧು
ಮಗು ತುಂಬಾ ಮುದ್ದಾಗಿದೆ
ನಿಮ್ಮ ಬರಹದ ಆಪ್ತತೆ ಇಷ್ಟವಾಯಿತು
ಊರಿನ ಮಾವಿನಕಾಯಿ ಗೊಜ್ಜು ನೆನಪು ಬಂತು
ಅಮ್ತಾತ!.. :)
shreenidhi,
ಯೂ ಆರ್ ಎ ಲೋಫರ್! ಕರದ್ರೆ ನಾನೂ ಬರದಿಲ್ಯಾ? ನಿಂಗಾದ್ರೆ ಮನೆ ಹತ್ರ ಇದ್ದು, ಹೋಗ್ಲಕ್ಕು.. ನಂಗೆ :(
ಮುದ್ದಾದ ಮಗುವಿನ ಮುದ್ದಾದ ಮಾತುಗಳನ್ನು ಕೇಳಿ ಉಲ್ಲಾಸವೆನಿಸಿತು. ಮುಂದಿನ episodeಅನ್ನು ಕೇಳುವ ತವಕವಿದೆ.
ಸಿಂಧು ಅಕ್ಕ, ಪುಟ್ಟಿಯಷ್ಟೇ ಚೆನ್ನಾಗಿದ್ದು ಬರಹ... ಹಾಂ ಪುಟ್ಟಿಗೆ ದೃಷ್ಟಿ ತೆಗೆಯದು ಮರಿಯಡ
ಮುದ್ದು ಗೊಂಬೆ :)
achoooo chinnu mari! naa innoo meet maaDe illa avaLanna:(
ಮುದ್ದಾಗಿದೆ ಘಟನೆಯೂ, ಮಗುವೂ
ಮುದ್ದಾದ ಕಂದಮ್ಮನ ಮುದ್ದು ಮಾತುಗಳ ಮುದ್ದಾದ ಬರಹ. ಫೋಟೋಗೆ ಪೋಸ್ ತುಂಬಾ ಚೆನ್ನಾಗಿ ಕೊಟ್ಟಿದ್ದಾಳೆ.
ಮಕ್ಕಳ ತೊದಲು ಮಾತು ತುಂಬ ಚೆಂದ . ನಿಮ್ಮ ಪುಟ್ಟಿಯೂ ತುಂಬ ಚೆಂದ ಇದ್ದು.
@ಸುಶ್ರುತ,
ಛೇ, ಎಂತಾ ಕೆಟ್ ಕೆಟ್ ಮಾತೆಲ್ಲಾ ಆಡ್ತೆ ನೋಡು. ಮಕ್ಕಳ ಮುಂದೆಲ್ಲಾ ಹಿಂಗೇ ಮಾತಾಡಿ ಅವರಿಗೂ ಅದನ್ನೇ ಕಲಿಸಿಕೊಡ್ತೆ ನೀನು. ಅದ್ಕೆ ನೀ ಅಕ್ಕನ ಮನೆಗೆ ಬರದು ಬ್ಯಾಡ :X
ಆಹಾ...ಸಿಂಧು ಮೇಡಮ್,
ಮಕ್ಕಳ ಬಾಲ್ಯದ ಆಟವನ್ನು ಓದುತ್ತಿದ್ದರೇ ಅದರ ಆನಂದವೇ ಬೇರೆ ಅಲ್ಲವೇ...ಓದಿ ತುಂಬಾ ಖುಷಿಯಾಯ್ತು...
ಮುದ್ದು ಫೊಟೋ. ದೃಷ್ಟಿ ತೆಗೆಯದು ಮರಿಲಾಗ ...ಅಂತಾತ
ಮುದ್ದು ಮರಿಯ ಮುದ್ದು ಮುದ್ದು ಉಲಿಗಳ ನಡುವೆ ನಮ್ಮ ದಿನ ನಿತ್ಯದ ಗಲಿಬಿಲಿಗಳೆಲ್ಲ ಸುಡದೇ ಇದ್ದರೆ ಹೇಗೆ ತಂಗ್ಯಮ್ಮ!
ಚಿತ್ರ-ಲೇಖ ಎರಡೂ ಮೆಚ್ಚಾದವು ಕಣೇ. ನೋಡುವ ಹಂಬಲ ಈ ಎದೆಯಲ್ಲಿ ಹತ್ತಿಕೊಂಡು ಉರೀತಿದೆ ಈಗ. ಯಾವಾಗ ಹೇಗೆ ಬರಲಿ?
ಸ್ಪಂದಿಸಿದ ಎಲ್ಲರಿಗೂ ಅಕ್ಕರೆಯ ನಮನಗಳು.
ಕೆಲಸದ ಗಡಿಬಿಡಿಯಲ್ಲಿ ಪ್ರತಿಸ್ಪಂದನೆಗೆ ಸಮಯವಾಗಿರಲಿಲ್ಲ.
@ಶ್ಯಾಮ್,
ಥ್ಯಾಂಕ್ಯೂ,
@ಶಾಂತಲೆ,
ಗುಬ್ಬಿ ಮರಿ ಜೋರಿದ್ದು. ಅವಳಿಗೆ ಇನ್ನೂ ದೊಡ್ಡ ಹಮಾಂತ್ಕನ ಐಡಿಯಾ ಇಲ್ಲೆ. ಆದಷ್ಟು ಬೇಗ ಮಾಡಿಸ್ತಿ.ನಿನ್ನ ಅಮ್ತಾತನು ಇಷ್ಟೇ ಮುದ್ದಾದ ರಾಕ್ಷಸನಾಗಿರುತ್ತಾನೆ ಅಂತ ಬಲ್ಲೆ ನಾನು.
ಕಳಿಸ್ಲಾ ಎಲ್ಲ ಕೇಳಲಾಗ. ಕರ್ಕಂಡು ಬಂದ್ ಬಿಡು. ಟಿಕೆಟ್ ಸಿಗದೆ ಇದ್ರೆ ಸಾಗರೋಲ್ಲಂಘನ ಮಾಡಲಕ್ಕು.
@ಸು,
ಎಲ್ಲ ಇದೇ ಮಾತಾಡದೇ ಆತು. ತಡ್ಕ ಅಂತ ಹೇಳಿರದು ಯಾರು. ಕೇಳಿ ಮಾಡೋದನ್ನ ಧಾಳಿ ಅನ್ನದಿಲ್ಲೆ :)
@ಅನಂತ,
:D ಮುದ್ದು ರಾಕ್ಷಸಿ ಅವಳು.
ಮಾತು ಬರುವಾಗ ಅವಳು ಪದಗಳನ್ನು ಉಲ್ಟಾ ಹೇಳಬಹುದು ಎಂಬ ಊಹೆಯೊಂದಿಗೆ ನಾನು ಮುಂಚಿನಿಂದಲೇ ಪುಟ್ಟೂವನ್ನು ಟುಪ್ಪೂ ಮಾಡಿಬಿಟ್ಟೆ. u belive it or not ಅವಳು ಬಹಳಷ್ಟು ನಾಮಪದಗಳನ್ನು ಉಲ್ಟಾ ಆಗೇ ಹೇಳುತ್ತಾಳೆ. :)
@ವಿಕಾಸ
:-)
@ನಿಧಿ,
ನಿಮ್ಮ ಹುಡುಗಿಯ ಮನೆ ದಾರಿಯಾದ್ದರಿಂದ ನೋಡ್ತಾ ಇದ್ದಿದ್ದು ತಾವು. ಎಲ್ಲಿ ಈಗೊಂಚೂರು ಬಂದು ಮಾತಾಡಿಸ್ಕ್ಯ್ಯಂಡು ಹೋಗು ನೋಡನ. ಬರೀ ಸುಶ್ರುತನ್ನ ಗೋಳ್ ಹೊಯ್ಕ್ಯಳದೇ ಕೆಲ್ಸನಾ. ಪಾಪದ ಹುಡುಗ ಅಂವ.
@ಸಾಗರದಾಚೆಯ ಇಂಚರ,
ನಿಮ್ಮ ಮೆಚ್ಚುಗೆಗೆ ಖುಶೀ.
@ಶೆಟ್ಟರು
ಅಮ್ತಾತ ಈಗ ಅಮ್ಮಂತ ಆಗಿದಾನೆ.
@ಸು, ನಿಧಿ, ವಿಕಾಸ
ಸು - ಲೋಫರ್ ಅಂದ್ರೆ ಸುತ್ತಾಡೋನು ಅಂತ. ಅದೇ ಕೆಲ್ಸ ಮಾಡಿದ್ದು ನಿಧಿ. ತಾವೂ ಅದನ್ನ ಆಗ ಈಗ ವೀಕೆಂಡಲ್ಲಿ ಮಾಡ್ಲಕ್ಕು. ಇಲ್ಲಿ ಹ.ಹು ಹಾಸ್ಟೆಲ್ ಬೇರೆ ಇದ್ದು. ಯಾರನ್ನಾದ್ರೂ ನೋಡ್ಕಂಡಿದ್ರೆ ಬಂದು ಹೋಗಲೆ ಅನುಕೂಲ ಆಗ್ತಿತ್ತು.
ವಿಕಾಸ, ಎಷ್ಟ್ ಒಳ್ಳೆ ಹುಡುಗನಲ್ಲಾ ನೀನು. ಕೆಟ್ ಕೆಟ್ ಮಾತು ಅಂದ್ರೆ ಯಾವ್ದು ಅಂತ ಗೊತ್ತಿದ್ದಲ್ಲಾ ಅದೇ ವಿಶೇಷ. ;)
ಇದೆಲ್ಲಾ ಕತೆ ಸಾಕು. ಮನೆಗೆ ಬರ್ರೋ.
@ ಸುನಾಥ,
ಖಂಡಿತಾ.
@ ಯಜ್ಞೇಶ್,
ನನ್ನ ಪುಟ್ಟಿಯ ಇನ್ನೊಂದು ಅಮ್ಮ(ಅವಳ ಬೇಬಿಸಿಟ್ಟರ್)ಯಾವಾಗ್ಲೂ ದೃಷ್ಟಿ ತೆಗೀತಾ ಇರ್ತ್ವಪ.
@ಶ್ಯಾಮಾ
:)
@ಶ್ರೀ,
ಗೋಡೆಗಳಿಲ್ಲ, ತೆರೆದ ಬಾಗಿಲು, ಕರೆಗಂಟೆ ಒತ್ತಬೇಕಿಲ್ಲ - ಯಾವಾಗಾದ್ರೂ ಬನ್ನಿ. ಹೀಗೇ ಸುಮ್ಮನೆ.
@ಭಾಶೇ,
ಥ್ಯಾಂಕ್ಯೂ.
@ರಾಜೇಶ್,
ನಿಮ್ಮ ಮುದ್ದುಗೌರಿ ನೇಹಲ್ ಜೊತೆ ಅವಳನ್ನ ಆಟವಾಡಿಸಬೇಕು ಅಂತ ಇಷ್ಟ ನಂಗೆ. ನೋಡೋಣ ಯಾವಾಗ ಆ ಕಡೆ ಬರಕ್ಕಾಗತ್ತೆ ಅಂತ.
@ಸುಮ,
ನಿಮ್ಮ ಮಾತು ನಿಜ. ಮಕ್ಕಳ ಮಾತು ತುಂಬ ಆಹ್ಲಾದಕರ.
@ಶಿವ್,
ಥ್ಯಾಂಕ್ಯೂ
@ರಾಘಣ್ಣ,
ಹೇಳಿದ್ದಿ ಮನೇಲಿ. ಥ್ಯಾಂಕ್ಯೂ
@ಜ್ಯೋತಿ ಅಕ್ಕಾ,
ನಿಮ್ಮಾತು ನಿಜ.
:( ಹೌದು ನೀವು ಬಂದಿದ್ದಾಗ ನನಗೆ ಮೀಟ್ ಮಾಡಲೇ ಆಗಲಿಲ್ಲ. ನಮ್ಮೂರಿಗೆ ಹೋಗಿಬಿಟ್ಟಿದ್ದೆ.
ಈ ಸಲ ಬರುವಾಗ ಖಂಡಿತಾ ಮಿಸ್ ಮಾಡೋದಿಲ್ಲ.
-ಪ್ರೀತಿಯಿಂದ
ಸಿಂಧು
ರೀ ಸಿಂಧು Sindhu..,
ತುಂಬಾನೇ ಮುದ್ದಾಗಿದೆ ಮಗು..
ಕಣ್ಣುಗಳು ಅರಳಿದ್ದರೆ ಇನ್ನೂ ಸೊಗಸಿರುತ್ತಿತ್ತು..
ಸುಂದರ್ ಫೋಟೋ ಮಗುವಿದು
ಒಳ್ಳೆಯ ಬರಹ ಸಹ
ನಿಮ್ಮ ಬರಹಗಳು ನನ್ನ ಬ್ಲಾಗ್ ನಲ್ಲಿ ಅಪ್ಡೇಟ್ ಆಗುತ್ತಿಲ್ಲ
ದಯವಿಟ್ಟು ಹೊಸ ಬರಹ ಬರೆದಾಗ ಒಂದು ಮೇಲ್ ಮಾಡುವಿರ?
ಟುಪ್ಪು...!!! ಎಂಥಾ ಕಟ್ಟಿಹಾಕುವ..ಚುಟುಕುನಾಮ....!! ಸಿಂಧು ಬಹಳ ಚನ್ನಾಗಿದೆ...ಮಗುವಿನಷ್ಟೇ ಮುದ್ದು ವಿವರಣೆ...
ರೀ...ತು೦ಬಾ ಚೆನ್ನಾಗಿದೆ ಬರಹಗಳು ... ಓ೦ತರಾ ಮಲೆನಾಡಿಗೆ ಹೋಗಿ ಬ೦ದ ಹಾಗೆ ಆಯ್ತು...ಮಗು ತು೦ಬಾ ಚೆನ್ನಾಗಿದೆ...ಟುಪ್ಪು...
ಆದ್ರು ಮಾವಿನಕಾಯಿ ಗೊಜ್ಜು ಅ೦ದ್ರಲ....ಬಾಯಲ್ಲಿ ನೀರು ಬ೦ದುಬಿಡ್ತು...
ನಿಮ್ಮ ಮುದ್ದು ರಾಕ್ಷಸಿಯಂತೂ ಅದೆಷ್ಟು ಮುದ್ದಗಿದ್ದಾಳೆ,,,, she is angel
ಮುದ್ದು ರಾಕ್ಷಸಿ ತುಂಬಾ cute ಇದ್ದು,ಹಾಂಗೆ ನಿಮ್ಮ ಲೇಖನ ಕೂಡ:))
Post a Comment