Thursday, July 16, 2009

ಸ್ನೇಹಿತನಿಗೆ...

ಕವಿಕಾಣ್ಕೆಯ ಸ್ನೇಹಿತನಿಗೆ...

ಕಾಲುಹಾದಿಯ ಪಯಣದಲ್ಲಿ
ನೆರಳು ಬಿಸಿಲ ಚಿನ್ನಾಟ;
ಎಲ್ಲೋ ನಿಂತು
ನಿಡಿದಾದ ಉಸಿರೆಳೆಯುವಾಗ
ನಿನ್ನ ನೆನಪಿನ
ಹೂವರಳಿದ ಗಂಧ
ಬಗ್ಗಿ ನೋಡಿ ಗಿಡವ ಹುಡುಕಲಾರೆ
ನಿಬಿಡ ಕಾಡು, ಪೊದೆ;
ದೂರವೆನಿಸುತ್ತಿದೆ ಆದರೂ
ಹತ್ತಿರವಾಗಿ ಸುಳಿಯುತ್ತಿದೆ ಗಂಧ
ಹೂವರಳಿದ ನೆನಕೆಗೇ
ಮೈಯೆಲ್ಲ ಮುಳ್ಳು..
ಮತ್ತೆ ಮುಂದೋಡುವ ಪಯಣ,
ಎಚ್ಚರ ಕನಸುಗಳ ನಡುವಣ
ದಿನದಿನದ ಗಾಣ
ಗೊತ್ತು ಇನ್ಯಾವುದೋ
ತಿರುನಲ್ಲಿ
ಬರಲಿದೆ
ನೆನಪಿನ ಬನದ ನಿನ್ನ ಗಂಧ ಗಾಳಿ!

ದೂರವ ಮೀರಿ,
ಮರೆವನು ಮೆಟ್ಟಿ,
ಹಾಯೆನಿಸುವಂತೆ
ತೀಡಿ ಬರುವ
ನಿನ್ನ ದೃಶ್ಯಕಾವ್ಯಕ್ಕೆ
ಮಧುರ ಸ್ನೇಹಕ್ಕೆ
ಆಭಾರಿ ಸಮುದ್ರೆಯ
ಕಣ್ಣ ಹನಿಗಳ ಕಾಣಿಕೆ
ನೆನಪಿನಲೆಗಳ ಮಾಲಿಕೆ..

5 comments:

Srik said...

ಸಿಂಧು! ಈ ನಿನ್ನ ಕವಿತೆಯನ್ನು ಓದಿದರೆ ಎಲ್ಲರಿಗೂ ನಿನ್ನ ಸ್ನೇಹಿತನಾಗಬೇಕೆನಿಸುತದೆ! ಅದ್ಭುತವಾದ ಕವಿತೆ!

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧು...
ತುಂಬ ಇಷ್ಟವಾದವು ಸಾಲುಗಳು.
ಇಂಥ ಚೆಂದದ ಸಾಲುಗಳ ಓದಲು ಸ್ನೇಹಿತ ಪುಣ್ಯ ಮಾಡಿರಬೇಕು.

ಹಾಗೆಯೇ ಕೆಲವರ್ಷಗಳ ಹಿಂದೆ ನಾ ಬರೆದಿದ್ದ, ಈಗ ಬ್ಲಾಗಲ್ಲಿರುವ ಕೆಲ ಸಾಲುಗಳು ನೆನಪಾದವು. ಸಮಯ ಸಿಕ್ಕಾಗ ಒಂಚೂರು ಕಣ್ಣು ಹಾಯಿಸು :-)
http://www.shantalabhandi.com/2007_10_01_archive.html#6152527330950960072

shivu.k said...

ಸಿಂಧು ಮೇಡಮ್,

ನಿಮ್ಮ ಈ ಕವಿತೆಯನ್ನು ಓದಿದಾಗ ಭಾವನೆಗಳ ಲಹರಿ ಹರಿದಾಡಲಾರಂಭಿಸುತ್ತದೆ....ಚಿತ್ರಗಳೆಲ್ಲಾ ಕಣ್ಣಮುಂದೆ ಸಾಂಕೇತಿಕವಾಗಿ ಬಂದು ಹೋದಂತೆ ಆಗುತ್ತದೆ...
ಧನ್ಯವಾದಗಳು

Sharath Akirekadu said...

ನಿಮ್ಮ ಹೋಲಿಕೆ ಇದೆಯಲ್ಲ, ಅವು ತುಂಬಾ ಇಷ್ಟ ಆದವು.ಕಣ್ಣ ಹನಿಗಳ ಕಾಣಿಕೆ ,ನೆನಪಿನಲೆಗಳ ಮಾಲಿಕೆ.ಸೊಗಸಾದ ಸಾಲುಗಳು. ಒಳ್ಳೆಯ ಕವನ.

ಸಿಂಧು sindhu said...

ಶ್ರೀಕ್,ಶಿವು,ಶರತ್,

ಸ್ನೇಹಕ್ಕೆ ಕಟ್ಟುಪಾಡಿಲ್ಲ..
ನಿಮಗೆಲ್ಲ ಕವಿತೆ ಇಷ್ಟವಾಗಿದ್ದು ಖುಶೀ.

ಶಾಂತಲೆ,
ಇದು ನಿನ್ನ ಎಂದಿನ ಪ್ರೀತಿ.
ಆ ಆರ್ಕೈವ್ ನಿನ್ನ ಎಲ್ಲ ಹಳೆಯ ಬರಹಗಳನ್ನೂ ತೆರೆಯುತ್ತದೆ. are you pointing at any specific poem? ಎಲ್ಲವೂ ತುಂಬ ಚೆನ್ನಾಗಿವೆ. ಒಂದಷ್ಟನ್ನು ಮತ್ತೆ ಓದಿದೆ.

ಶರತ್,
ಕಣ್ಣ ಹನಿಗಳ ಕಾಣಿಕೆ - ಇದು ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆ ಸಾಲಿನ ರೂಪಾಂತರ ಭಾವ.
"ನಿನ್ನ ರೀತಿಗೆ ನಿನ್ನ ಪ್ರೀತಿಗೆ ಕಣ್ಣ ಹನಿಗಳೆ ಕಾಣಿಕೆ.. ಅಂತ..

ಪ್ರೀತಿಯಿಂದ
ಸಿಂಧು