Friday, January 25, 2008

ಗಣರಾಜ್ಯೋತ್ಸವದ ಹಿಂದಿನ ಸಂಜೆ..

ಓ ಇವತ್ತು ಈ ರಿಪೋರ್ಟು ರೆಡಿ ಮಾಡಬೇಕು. ಹಾಳಾದ್ದು ಗಣರಾಜ್ಯೋತ್ಸವ ಶನಿವಾರ ಬಂದ್ ಬಿಡ್ತು. ಒಂದು ರಜಾ ಮಿಸ್ಸಾಗೋಯ್ತು ಅಂದುಕೊಳ್ಳುತ್ತ ದಿನಚರಿ ಶುರುವಾಯಿತು. ಅಷ್ಟರಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ಕ್ವಿಝ್ ಒಂದನ್ನ ಮುಂದಿಟ್ಟರು. ಎಲ್ಲರೂ ಗೊಣಗುತ್ತಲೇ ಕೈಗೆತ್ತಿಕೊಂಡೆವು.
ಸ್ವತಂತ್ರ ಭಾರತದ ಬಗೆಗಿನ ಕೆಲವು ಪ್ರಶ್ನೆಗಳು. ಹೆಚ್ಚೂ ಕಡಿಮೆ ಎಲ್ಲವನ್ನೂ ನಾವು ಮಾಧ್ಯಮಿಕ ಶಾಲೆಯಲ್ಲಿ ಓದಿರಬಹುದಾದದ್ದು.
ಯಾರಿಗೂ ೪ ಪ್ರಶ್ನೆಗಳಿಗಿಂತ ಹೆಚ್ಚಾಗಿ ಮುಂದೆ ಹೋಗಲಾಗಲಿಲ್ಲ. ಆ ನಾಲ್ಕರಲ್ಲೂ ಎರಡು ಅಳೆದೂ ಸುರಿದೂ ಐದು ನಿಮಿಷ ಯೋಚನೆ ಮಾಡಿ ಉತ್ತರಿಸಿದ್ದು. ತಲೆತಗ್ಗಿಸಿ ಕೂತೆ.

ಒಂದು ಇಡೀ ತಲೆಮಾರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿ ತಂದುಕೊಟ್ಟ ಸ್ವಾತಂತ್ರ್ಯ, ಆ ವಿಶೇಷ ಚೇತನಗಳು ಕಂಡ ಆದರ್ಶ ಗಣರಾಜ್ಯ ಎರಡೂ ಮುಖಕ್ಕೆ ಮುಸುಕೆಸೆದುಕೊಂಡು ಅಳುತ್ತ ಕೂತಿವೆ. ನಮಗೆ ಮಿಡ್ಲ್ ಸ್ಕೂಲಿನ ಪರೀಕ್ಷೆಯ ಮಟ್ಟಕ್ಕೆ ಮಾತ್ರ ಸಿವಿಕ್ಸ್ ಬೇಕು. ಆಮೇಲೆ ಮರೆತುಹೋಗಿಬಿಡುತ್ತೆ. ಬಾಲ್ಯದಲ್ಲಿ ಓದಿದ ಗುಂಪಾಗಿ ಹೋರಾಡಿದ್ದ ಸ್ವತಂತ್ರ ಸೇನಾನಿಗಳು ನಾವು ಬೆಳೆದು ದೊಡ್ಡವರಾದ ಮೇಲೆ, ನಮ್ಮ ನಮ್ಮ ಮನಸ್ಸಿಗೊಪ್ಪುವ ಸಿದ್ಧಾಂತ ಧಾರೆಯ ಪ್ರಭಾವಳಿಯಲ್ಲಿ ಮೆರವಣಿಗೆ ಹೊರಟು ಅವರ ಹೋರಾಟದ ಸತ್ವ ಮಕಾಡೆ ಮಲಗಿರುತ್ತದೆ. ಒಬ್ಬೊಬ್ಬರನ್ನೂ ಒಂದೊಂದು ಪಕ್ಷ ಗುತ್ತಿಗೆಗೆ ಹಿಡಿಯುತ್ತದೆ. ನಾವು ಗೆದ್ದೆತ್ತಿನ ಬಾಲ ಹಿಡಿಯುತ್ತಾ, ಹಿರಿಯರ ಕಷ್ಟಾರ್ಜಿತ ಸ್ವಾತಂತ್ರವನ್ನ ಸ್ವೇಚ್ಛೆಯಾಗಿ ಉಪಯೋಗಿಸುತ್ತಾ, ಕ್ರಿಕೆಟ್ ಮ್ಯಾಚುಗಳಲ್ಲಿ ಬಾವುಟದ ಬಣ್ಣ ಬಳಿದುಕೊಳ್ಳುತ್ತಾ, ವೀಸಾ ಕ್ಯೂನಲ್ಲಿ ಕಾಯುತ್ತಿರುತ್ತೇವೆ. ನಮ್ಮದು ಸಿರಿಮಲ್ಲಿಗೆ.

ಭಾರತ ಗಣರಾಜ್ಯವಾದ ವರ್ಷ ಯಾವುದು ಅಂತ ತಿಳಿದುಕೊಂಡು ನಮಗೇನಾಗಬೇಕಾಗಿದೆ? ಸೆನ್ಸೆಕ್ಸ್ ಹೇಗೆ ಏರಿಳಿಯುತ್ತಿದೆ ಅಂತ ನೋಡಲು ಸರಿಯಾಗಿ ಟೈಮಿಲ್ಲ. ನಮ್ಮ ರಾಷ್ಟ್ರಗೀತೆಯ ಇತಿಹಾಸ ಗೊತ್ತಿಲ್ಲ. ತಪ್ಪಾಗಿ ಹಾಡಿದವರನ್ನ ಹಂಗಿಸುತ್ತೇವೆ. ರಾಜಕಾರಣಿಗಳನ್ನ ಎಗ್ಗಿಲ್ಲದೆ ಆಡಿಕೊಳ್ಳುತ್ತೇವೆ. ನಮ್ಮ ಹಕ್ಕು ಬಳಸಿ ಕರ್ತವ್ಯ ನಿಭಾಯಿಸುವ ಮಾತೆತ್ತಿದರೆ ಜಾರಿಕೊಳ್ಳುತ್ತೇವೆ. ಹೋದವರ್ಷ ಟೀವಿ ಚಾನೆಲ್ಲೊಂದು ನಮ್ಮ ಸಂಸದ ಮಹಾಶಯರನ್ನು ಮಾತಾಡಿಸಿತ್ತು. ರಾಷ್ಟ್ರಗೀತೆ ಬರೆದವರು ಯಾರು ಎಂಬ ಪ್ರಶ್ನೆ ಮುಂದಿಟ್ಟರೆ ಕ್ಯಾಮೆರಾ ಮುಂದೆ ಪೆಕರು ಪೆಕರಾಗಿ ಗಾಂಧಿ, ಮೋಸ್ಟ್ಲೀ ಯಾವುದೋ ಚಟರ್ಜೀ,ವಿವೇಕಾನಂದ ಅಂತ ಬಾಯಿಗೆ ಬಂದಂಗೆ ಕೆಲವರು ಹಲುಬಿದರೆ, ಕೆಲ ಹಿರಿಯ ಸಂಸದರು ಇಂತದೆಲ್ಲ ಯಾರು ನೆನಪಿಟ್ಕೋತಾರೆ ರಾಷ್ಟ್ರಗೀತೆ ಹಾಡೊಕ್ಕೆ ಬಂದರೆ ಸಾಕಲ್ವಾ ಅಂದರು. ಸಧ್ಯ ಆ ಚಾನೆಲ್ಲು ಅವರಿಂದ ಅದನ್ನು ಹಾಡಿಸಿ ರಾಷ್ಟ್ರಗೀತೆಗೆ ಅವಮಾನ ಮಾಡಲಿಲ್ಲ.

ಅಮೆರಿಕದ ಶಿಕ್ಷಣಪದ್ಧತಿಯಲ್ಲಿ ಓದುವ ಗ್ರಾಜುಯೇಟ್ಸ್ ಮತ್ತು ಪ್ರೊಫೆಶನಲ್ಸ್ (ಡಾಕ್ಟರು, ಇಂಜಿನಿಯರು, ಲಾಯರು, ಆಡಿಟರು..ಇತ್ಯಾದಿ ಎಲ್ಲರೂ) ರಾಷ್ಟ್ರದ ಚರಿತ್ರೆ,ಭೂಗೋಳ ಮತ್ತು ನಾಗರಿಕ ಸಂಹಿತೆಯನ್ನ ಒಂದು ಮೇಜರ್ ವಿಷಯವಾಗಿ ಓದಲೇಬೇಕು. ಇದು ಜನಮನದಲ್ಲಿ ನಮ್ಮ ದೇಶದೆಡೆಗಿನ ಅಭಿಮಾನ, ನಮ್ಮ ಸ್ವಾತಂತ್ರ ಹೋರಾಟದ ಹಿರಿಮೆ, ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ಎಲ್ಲವನ್ನೂ ಕಟ್ಟಿಕೊಡುತ್ತದೆ. ಇಂತಹ ಒಳ್ಳೆಯ ವಿಷಯದ ಕಡೆ ನಮ್ಮ ಗಮನ ಹೋಗುವುದೇ ಇಲ್ಲ. ನಮಗೆ ಅವರ ತಂತ್ರಜ್ಞಾನ ಮತ್ತು ಸ್ಟಾಕ್ಸ್ ಮಾತ್ರ ಬೇಕು.

ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ ರಂಗದಲ್ಲಿ ಮುನ್ನುಗ್ಗುವ ನಮಗೆ ನಮ್ಮ ಸಂಸ್ಕೃತಿಯ, ಬೇರಿನ ಅರಿವೇ ಇಲ್ಲದೆ ಹೋದರೆ ಹೇಗೆ ಅಂತ ಮನಸ್ಸು ಖಿನ್ನವಾಗಿದೆ. ಇನ್ನೆಲ್ಲ ಹೋಗಲಿ ತಮ್ಮ ಸುಖ ಮತ್ತು ಸಂಪತ್ತನ್ನು ಬದಿಗಿಟ್ಟು ಹೋರಾಟ ಮಾಡಿದ ನಮ್ಮ ಸ್ವತಂತ್ರಯೋಧರ ನೆನಪು ನಮಗೆ ಚಿರಸ್ಮರಣೀಯವಲ್ಲವೆ!

ನೋಡಿ, ಗೂಗ್ಲಿಂಗ್ ಮಾಡದೇ ಈ ಕ್ವಿಝ್ ಗೆ ಉತ್ತರ ಹುಡುಕಿ. ನಿಮಗೇನೆನ್ನಿಸಿತು ಅಂತ ಹಂಚಿಕೊಳ್ಳಿ.
  1. Who was the president of the Constituent Assembly that held the 'Independence Meeting'?
  2. Who was the viceroy of independent India?
  3. Name the first woman minister of Independent India.
  4. What does the navy blue wheel that appears in the Indian national flag stand for?
  5. The order of the colors of Indian national flag from top down is.................................
  6. In 1997, the year of 50th anniversary of Indian independence, the US Senate passeda resolution, designating it as a National(US) Day of celebration of............................
  7. Name the national animal, bird, flower and fruit
  8. Since when India had been recognized as a republic?
  9. Who was the last Governor General of Independent India?
  10. The first stanza of Tagore's 'Janagana Maana' has been selected as India's national anthem.How many stanzas are there in the original song?

ಇಂತಹ ಒಂದು ಭಿನ್ನ ಆಲೋಚನೆಯ ಕ್ವಿಝ್ ಕೊಟ್ಟು ನಮ್ಮ ೫೯ನೇ ಗಣರಾಜ್ಯೋತ್ಸವಕ್ಕೆ ಹೊಸ ಅರ್ಥ ತುಂಬಿದ ಸಹೋದ್ಯೋಗಿಗೆ ಕೃತಜ್ಞತೆ ಸಲ್ಲಿಸುತ್ತಾ..

6 comments:

ಸುಪ್ತದೀಪ್ತಿ suptadeepti said...

ಸಿಂಧು, ನನಗೆ ಬರೀ 60% ಬಂತು. ಸರಿಯಾದ ಉತ್ತರಗಳನ್ನು ಯಾವಾಗ ಕೊಡ್ತೀರ?

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧು...
ಮನಸ್ಸಿಗೆ-ಬುದ್ಧಿಗೆ ಎರಡಕ್ಕೂ ಕೆಲಸ ಕೊಡುವಂಥ ಒಳ್ಳೆಯ ಲೇಖನ ಕೊಟ್ಟು ಗಣರಾಜ್ಯೋತ್ಸವದ ಗಂಟೆ ಬಾರಿಸಿದ್ದಕ್ಕೆ ಧನ್ಯವಾದಗಳು.

ಉತ್ತರಗಳಿಗಾಗಿ ನಿರೀಕ್ಷಿಸುತ್ತಿದ್ದೇನೆ.

ವಿಕ್ರಮ ಹತ್ವಾರ said...

http://www.theholidayspot.com/indian_independence_day/quiz.htm

8 correct on first try, for me :)

options ittu, so swalpa easy aagittu :)

ರಾಜೇಶ್ ನಾಯ್ಕ said...

ನಾನು ನಪಾಸು!

ಸಿಂಧು sindhu said...

ಸರಿ ಉತ್ತರಗಳು ಹೀಗಿವೆ.

1. ರಾಜೇಂದ್ರ ಪ್ರಸಾದ್
2. ಮೌಂಟ್ ಬ್ಯಾಟನ್
3. ರಾಜಕುಮಾರಿ ಅಮೃತಾ ಕೌರ್
4. ನ್ಯಾಯದ ಚಕ್ರ (the wheel of laws)
5. ಕೇಸರಿ, ಬಿಳಿ, ಹಸಿರು
6. Day of celebration of Indian and American Democracy
7. ಹುಲಿ,ನವಿಲು,ಕಮಲ, ಮತ್ತು ಮಾವು
8. ಜನವರಿ ೨೬, ೧೯೫೦
9. ಚಕ್ರವರ್ತಿ ರಾಜಗೋಪಾಲಾಚಾರಿ
10. ೫

ಪಾಸಾಗುವು ನಪಾಸಾಗುವುದು ಪ್ರಶ್ನೆಯೇ ಅಲ್ಲ. ನಮ್ಮ ದೇಶದ ಬಗೆಗಿನ ಅಭಿಮಾನ ಎಚ್ಚರದ ಮತ್ತು ತಿಳುವಳಿಕೆಯ ನೆಲೆಗಟ್ಟಿನಲ್ಲಿ ಮೆರೆಯಬೇಕು ಅನ್ನಿಸಿತು. ಅದಕ್ಕೆ ಬರೆದೆ. ನಿಮಗೆಲ್ಲರಿಗೂ ಹಾಗೆ ಅನ್ನಿಸಿದ್ದರೆ ಈ ಬರಹದ ಸಾರ್ಥಕತೆ.

ನಮ್ಮ ದೇಶದ ಸ್ವತಂತ್ರ ಹೋರಾಟದ ಯೋಧರ ಮತ್ತು ಗಡಿ ಕಾಯುವ ಯೋಧರ ಹಿರಿಮೆಗೆ ತಲೆಬಾಗುತ್ತಾ ಗಣರಾಜ್ಯೋತ್ಸವದ ಉಜ್ವಲ ನೆನಪುಗಳೊಂದಿಗೆ
ಸಿಂಧು

jomon varghese said...

ಉತ್ತರ ನೋಡಿದ ನಂತರ,ಇವೇನು ಸಾಮಾನ್ಯ ಪ್ರಶ್ನೆಗಳು ಎನಿಸಿದವು.ಅದಕ್ಕೆ ಉತ್ತರ ಪ್ರಕಟಿಸುವ ವರಗೆ ಕಾದು ಪ್ರತಿಕ್ರಿಯಿಸುತ್ತಿದ್ದೇನೆ. ಪ್ರಶ್ನೆಗಳಿಂತ ಲೇಖನದ ಹಿಂದಿನ ಆಶಯ ತುಂಬಾ ಇಷ್ಟವಾಯಿತು.

ಧನ್ಯವಾದಗಳು.
ಜೋಮನ್.