Tuesday, January 1, 2008

ನವಪಲ್ಲವ

ಎಲ್ಲ ಬರೆದಿದ್ದಾರೆ ಕಳೆದ ನಿನ್ನೆಗಳು ಬರುವ ನಾಳೆಗಳು ಇಂದು ಹನ್ನೆರಡು ಗಂಟೆಗೆ ಸರಿಯಾಗಿ ಬಂದು ತುಂಬಿಕೊಳ್ಳುವ ಮೆಸೇಜುಗಳು ಎಲ್ಲದರಲ್ಲೂ -ಹೊಸವರ್ಷವಂತೆ ಹೊಸ ಬೆಳಗಂತೆ!

ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನ ಎಂದ ಹಿರಿಮನಸು, ಇದು ಬರಿ ಬೆಳಗಲ್ಲೋ ಅಣ್ಣಾ ಅಂತ ಪ್ರತಿ ಬೆಳಗಿಗೂ ಮಣಿಯಿತು.
ಹೊಸತು ಬರಲಿದೆ ಎಂದು ವರ್ಷದ ಯಾವುದೋ ನಿರ್ದಿಷ್ಟ ತೇದಿಯಂದು ಎಲ್ಲ ಸಂಭ್ರಮದಿ ಕಾದಿದ್ದಾರೆ, ಪಟಾಕಿ, ಹಾಡು, ಕುಣಿತ, ನಿಶೆ ಎಲ್ಲದರ ಸಂಗಮದಿ..

ಹಳೆಬೇರು ಹೊಸಚಿಗುರು ಕೂಡಿರಲು ಮರಸೊಬಗೆಂದು ಹಿರಿಮನಸು ದಿನಾ ಬೆಳಿಗ್ಗೆಯೂ ಗುನುಗಿತು ಅಂತಃಪುರಗೀತೆಯಾಗಿ!

ಈ ಎಲ್ಲ ಹಿರಿಚೇತನಗಳ ಬೆಳಕಲ್ಲಿ ಅದ್ದಿ ತೆಗೆದು ಕಣ್ಣರಳಿದೆ ನನ್ನದು. ಅಚ್ಚರಿ ಸಂತಸ!

ದಿನದಿನದ ಚೆಲುವಿನ ಸವಿ
ಹನಿಹನಿಯಾಗಿ ಬನಿ ಇಳಿಯುತ್ತಿದ್ದರೆ
ನಾನಿಲ್ಲಿ ಕಾದಿದ್ದೇನೆ ನಾಲಿಗೆ ಚಾಚಿ,
ಕಂಬನಿಯ ಉಪ್ಪು ಹನಿಯ ಒರೆಸಿಕೊಳ್ಳುತ್ತಾ..
ದಿನದಿನವೂ
ಹೂವಿನಲಿ, ಚಿಗುರಿನಲಿ, ಇಬ್ಬನಿಯಲಿ, ಚೆಂಬಿಸಿಲಲಿ..
ಹಣ್ಣೆಲೆಯಲಿ, ದೋರುಗಾಯಲಿ, ಕಳಿತ ಫಲದಲಿ, ಗಿಳಿಕಚ್ಚಿತಿಂದ ಅರೆಹಣ್ಣಲಿ, ಮುಳ್ಳಲಿ,ಬಿಸಿಲಲಿ,ಕೊರೆವಚಳಿಯಲಿ,
ನೋವಲಿ,ಮನಸು ಮುದುಡಿ ಮುಪ್ಪಾದ ಚಣಗಳಲಿ..
ಒಳಿತೆಂಬುದುದೇ ಕೆಡುಕೆಲ್ಲದಕೆ ವಿನಾಶವ ತರುವ ಉಶೋದಯದ ಚೆಲ್ ಬೆಳಕಿನ ಓಕುಳಿಗೆ...
ಸುತ್ತೆಲ್ಲ ಹೂಬಿರಿದು, ಬೆಳಕು ಹೊಳೆದು, ತಂಪಿನ ಘಮ.
ರಾತ್ರೆಯ ನೋವಿಗೂ ಇಲ್ಲಿದೆ ಬೆಚ್ಚನೆ ಮಡಿಲು,
ಅಳುವ ಮರೆತು ಹೋಗಲು, ಕಣ್ಣೊರೆಸಿ ನಗಲು,
ಬಂದಿದೆ ಹೊಸಹಗಲು..

ಈ ಇಬ್ಬನಿಯ ಹೊಸ ಬೆಳಗುಗಳಿಗೆ ಘಮವೂಡಲು ಕನ್ನಡದ ಕಂಪಾಗಿ,ಇಂಪಾಗಿ ಕೆಂಡಸಂಪಿಗೆಯೊಂದರ ನವಪಲ್ಲವ.
ನಮ್ಮದೇ ದನಿ ಅದರ ರೆಂಬೆರೆಂಬೆಯಲ್ಲೂ ಕುಳಿತ ಕೋಕಿಲದ ಉಲಿಯಲ್ಲಿ.

ನೀವೂ ಆಸ್ವಾದಿಸಿ ಅದರ ಘಮ, ಅದರ ಇಂಪು.
ಆಹ್ಲಾದದ ಕೆಂಡಸಂಪಿಗೆ ನಮಗಾಗಿ...

4 comments:

ಸುಪ್ತದೀಪ್ತಿ suptadeepti said...

ಹೊಸ ತೇದಿ, ಹೊಸ ತಾರೀಖು ಪಟ್ಟಿ, ಹೊಸ ಲೆಕ್ಕಾಚಾರ..
ಹೊಸತನಕ್ಕೆ ಒಂದೊಂದೆ ಕಾರಣಗಳು!!??

ನಿಮ್ಮೆಲ್ಲರಿಗಾಗಿ ನನ್ನ ಹಾರೈಕೆಗಳು:

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

Prashanth(MSP) said...

Its been quite sometime since I read Kannada script.... will read the poem again sometime.

Interesting poetry there... [:)]

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧೂ....
ಎಲ್ಲಿ ಕಳೆದು ಹೋದ್ಯೆ ಮಾರಾಯ್ತಿ? ನಾಪತ್ತೆ!
( ಎಲ್ಲಿದ್ರೂ ಬೇಗ ಕಟಕಟೆಯಲ್ಲಿ ಬಂದು ನಿಲ್ಲಬೇಕಾಗಿ ವಿನಂತಿ. :) )

Harsha said...

really gud.