ಸುಜಯ್ ಈ ಬರಹ ನಿಮಗೇ! ಈಗ ಒಂಚೂರು ನಗಿ ನೋಡೋಣ... :)
ಅವಳು ಕುಳ್ಳಗಿದ್ದಳು. ಅಲ್ಲಿದ್ದವರೆಲ್ಲಾ ಕುಳ್ರೆ.. ಕನ್ನಡ ಶಾಲೆಯ ಐದನೇ ಕ್ಲಾಸಿನ ಮಕ್ಕಳು. ಮುಂದಿನ ಎರಡು ಸಾಲು ತುಸು ಕುಳ್ಳಗಿದ್ದ ಮಕ್ಕಳಿಗೆ, ಹಿಂದಿನ ಸಾಲುಗಳು ಉದೂದ್ದವರಿಗೆ.ಅವಳು ಮುಂದಿನ ಸಾಲಿನ ಮುಂದಿನ ಹುಡುಗಿ. ತುಂಬ ಮೆದು ಮತ್ತು ವಿನಾಕಾರಣ ಗಾಬರಿಗೊಂಡುಬಿಡುವವಳು. ದೊಡ್ಡ ದೊಡ್ಡ ಕಣ್ಣು, ಉದ್ದ ಜಡೆಗಳು, ಬಣ್ಣ ಬಣ್ಣದ ಫ್ರಾಕು ಬಂಗಾರದ ಬಳ್ಳಿಯ ಹಾಗೆ ಕಂಡವಳಿಗೆ ಸ್ವರ್ಣಲತಾ ಅಂತ ಅಪ್ಪ ಅಮ್ಮ ಹೆಸರಿಟ್ಟಿದ್ದರು.
ನಮ್ಮ ಉದ್ದೂದ್ದ ಮಕ್ಕಳಿಗೆ ಪಾಪದವಳ ಹಾಗಿರುವ ಸ್ವರ್ಣಲತಾ ಆಟಕ್ಕೆ ದಾರಿ. ಒಂದಿನ ಅವಳು ತುಂಬ ಸೀರಿಯಸ್ಸಾಗಿ ಜಾಸ್ತಿ ಟೈಮ್ ತಗೊಂಡು ಟೀಚರ್ ಕೊಟ್ಟ ಅಭ್ಯಾಸ ಬರೆಯುತ್ತಿದ್ದರೆ, ಹಿಂದೆ ಕುಳಿತ ಗೆಳತಿಯರು ಬೇಗ ಬೇಗ ಬರೆದು ಮುಗಿಸಿ, ಪಾಟಿಚೀಲದಲ್ಲಿದ್ದ ಯಾವುದೋ ದಾರದೆಳೆ ತೆಗೆದು ಅದರ ತುದಿಗೆ ಕಲ್ಲಿನಕಡ್ಡಿ ಮತ್ತು ಮುರಿದು ಹೋಗಿದ್ದ ಪ್ಲಾಸ್ಟಿಕ್ ಕ್ಲಿಪ್ಪು ಕಟ್ಟಿ ಇನ್ನೊಂದು ತುದಿಯನ್ನ ಸ್ವರ್ಣಳ ತೂಗಾಡುವ ಜಡೆಗೆ ಕಟ್ಟಿದರು. ಸ್ವರ್ಣ ಅರ್ಧ ಗಾಬರಿ ಅರ್ಧ ಯೋಚನೆಯಲ್ಲಿ ಬರೆಯುತ್ತ ಕೂತಿದ್ದಾಳೆ ಗೊತ್ತೇ ಆಗಿಲ್ಲ.
ಹೊರಗೆ ಪಕ್ಕದ ಕ್ಲಾಸಿನ ಟೀಚರನ್ನು ಮಾತಾಡಿಸಲು ಹೋಗಿದ್ದ ಶುಭಾವತಿ ಟೀಚರ್, ಮುಗಿಸಿದ್ರಾ ಅಂತ ಕೇಳ್ತಾ ಬಂದವರು ಮೊದಲು ಸ್ವರ್ಣನ್ನೇ ಕರೆದರು. ಮುಂದಿನ ಬೆಂಚಿನ ಮೊದಲ ಹುಡುಗಿ. ಅವಳು ಡಯಾಸ್ ಹತ್ತಿರ ಹೋಗುತ್ತಿದ್ದ ಹಾಗೆ ಕಿಸಿಕಿಸಿ ನಗು; ಮೊದಲು ಭಾಗ್ಯ ಬಾಯಿಗೆ ಕೈ ಅಡ್ಡ ಹಿಡಿದು ನಕ್ಕರೆ, ಹಿಂದೆ ಕೂತ ವಸು, ಲಕ್ಷ್ಮಿ ತಲೆ ತಗ್ಗಿಸಿ ನಗುತ್ತಿದ್ದಾರೆ. ರೂಪ ಸಿಂಧು ನಗು ಅಂದ್ರೆ ಗೊತ್ತಿಲ್ಲವೇನೋ ಅನ್ನೋ ಹಾಗೆ ಸೀರಿಯಸ್ ಮುಖ ಮಾಡಿಕೊಂಡು ಒಳಗೊಳಗೇ ನಗುತ್ತಿದ್ದಾರೆ. ಇವರೆಲ್ಲ ಹೀಗೆ ನಗ್ತಾ ಇದ್ರೆ, ಹುಡುಗರು ಸುಮ್ಮನಿರೋದು ಹ್ಯಾಗೆ ಹೇಳಿ? ರಘುರಾಮಂಗೇನೋ ಅನುಮಾನ ಬಂತು, ಭಾಗ್ಯನ್ನೇ ನೋಡಿದ, ಭಾಗ್ಯನ ಕಣ್ಗಳು ಸ್ವರ್ಣಳ ಜಡೆ ಮೇಲೆ. ಓಹೋ ಗೊತ್ತಾಗೇ ಹೋಯ್ತು. ಪಕ್ಕದಲ್ಲೇ ಕೂತ ನವೀನನ್ನ ತಿವಿದು ತೋರಿಸಿದ. ನವೀನ ನಗೋದ್ರಲ್ಲಿ ಎಕ್ಸ್ ಪರ್ಟ್. ಅವನು ಹಿಂದಿನ ಬೆಂಚಿನ ರಾಘು, ನೂರುಲ್ಲ,ಜಗದೀಶನ್ನ ಕಣ್ ಸೆಳೆದ.
ಇವರಾಟಾ ನೋಡ್ತಾ ಇದ್ದ ಉಳಿದವರೂ ಈಗ ನಗತೊಡಗಿದರು. ಇಡೀ ಕ್ಲಾಸಿಗೆ ಕ್ಲಾಸೇ ಒಂದೇ ಮುಖವಾಗಿ ನಗುವಿನ ತೆರೆ ಹೊದ್ದು ಕೂತಿತು. ಶಬ್ಧದ ಕಾವಿಗೆ ಒಡೆದೇ ಹೋಗುತ್ತೇನೋ ಎಂಬಂತೆ ಎಲ್ಲರೂ ಸದ್ದಿಲ್ಲದೆ ನಗುತ್ತಿದಾರೆ. ಶುಭಾವತಿ ಟೀಚರ್ ಟೇಬಲ್ ಮೇಲೆ ನೋಟುಬುಕ್ಕು ನೋಡ್ತಾ ಇದಾರೆ. ಅವರ ಪಕ್ಕದಲ್ಲಿ ಸ್ವರ್ಣ ಕ್ಲಾಸಿಗೆ ಬೆನ್ನು ಹಾಕಿ, ಪುಸ್ತಕವನ್ನೇ ನೋಡುತ್ತಾ ಹೆದರಿಕೆಯಲ್ಲಿ ನಿಂತಿದಾಳೆ. ಟೀಚರ್ ಏನೋ ಒಂದೆರಡು ಕಾಗುಣಿತ ಗುರುತು ಹಾಕಿದವರು, ಪರಾಇಲ್ಲ, ಮುಂದಿನ ಸಲ ಒಂದೂ ತಪ್ಪಿಲ್ದಂಗೆ ಬರೀಬೇಕು ಅಂತ ತಲೆ ಎತ್ತಿದರು. ಸರಿ ಸರಿ ಅಂತ ಸ್ವರ್ಣ ತಲೆಯಲ್ಲಾಡಿಸುವಾಗ, ಟೀಚರ್ ಕ್ಲಾಸನ್ನೂ ಕ್ಲಾಸನ್ನು ಆವರಿಸಿದ ನಗುವಿನ ತೆರೆಯನ್ನು ಅದರ ಕೇಂದ್ರವನ್ನೂ ಗಮನಿಸಿಬಿಟ್ಟರು. ಅವರಿಗೂ ನಗು ಬಂದ್ ಬಿಡ್ತು. ಅವರನ್ನೇ ನೋಡ್ತಿದ್ದ ಸ್ವರ್ಣ ಗಾಬರಿಯಾಗ್ ಬಿಟ್ಟಳು.
ಯಾರ್ರೇ ಅದು ಹಂಗ್ ಮಾಡಿದ್ದು, ಕೋಪ ನಟಿಸುತ್ತ ಟೀಚರ್ ಕೇಳಿದರೂ ಅವರ ದನಿಯಲ್ಲಿ ನಗುವಿತ್ತು. ಈಗ ನಿಧಾನವಾಗಿ ಸ್ವರ್ಣಂಗೆ ಎಲ್ರೂ ತನ್ನೇ ನೋಡಿ ನಗ್ತಿದಾರೆ ಅಂತ ಗೊತ್ತಾಯ್ತು. ಯಾಕೆ ಏನು ಅಂತ ಗೊತ್ತಿಲ್ಲ ಅವಳಿಗೆ ಅಳುವೇ ಬಂದ್ ಬಿಡ್ತು. ಟೀಚರ್ ಗೆ ಪಾಪ ಅನ್ನಿಸಿ, ನೋಡು ದಾರ ಕಟ್ಟಿದಾರೆ ಬಿಚ್ಕೋಮ್ಮಾ ಅಂತಾ ಇದ್ದ ಹಂಗೆ ಸ್ವರ್ಣ ತಡೆಹಿಡಿದಿದ್ದ ನೀರು ಕಣ್ಣಿಂದ ಕೆಳಗುರುಳೇ ಬಿಟ್ಟಿತು. ಕಾಡಿಗೆ ಹಚ್ಚಿದ್ದ ಆ ದೊಡ್ಡ ದೊಡ್ಡ ಕಣ್ಣುಗಳು ಪುಟ್ಟ ಪುಟ್ಟ ನಲ್ಲಿಯಂತೆ ಧಾರಾಕಾರ ನೀರು. ಒಂದು ಕೈಯಲ್ಲಿ ಕಣ್ಣೊರೆಸುತ್ತಾ ಇನ್ನೊಂದು ಕೈಯಲ್ಲಿ ಆ ದಾರ ಬಿಡಿಸಲು ಕಷ್ಟಪಡುತ್ತಿದ್ದರೆ ಅಲ್ಲಿಯವರೆಗೂ ನಗುತ್ತಿದ್ದ ಇಡೀ ಕ್ಲಾಸಿಗೆ ಇದ್ದಕ್ಕಿದ್ದಂತೆ ಎತ್ತಿ ಬಿಸಾಡಿದಂತಾಯಿತು.
ರೂಪ, ವಸು ಓಡಿ ಹೋಗಿ ದಾರ ಬಿಡಿಸಿಕೊಟ್ಟು ಅವಳನ್ನ ಕರೆದುಕೊಂಡು ಬಂದು ವಾಪಸ್ ಬೆಂಚಲ್ಲಿ ಕೂರಿಸಿದರು. ಭಾಗ್ಯ ಎದ್ದುಹೋಗಿ ಟೀಚರ್ ಕೈಯಿಂದ ನೋಟ್ ಬುಕ್ಕು ತಗೊಂಡು ಬಂದಳು. ಲಕ್ಷ್ಮಿ ತನ್ನ ಕಸೂತಿ ಹಾಕಿದ ಕರ್ಚಿಫ್ ಕೊಟ್ಟಳು. ಸಿಂಧು ಬ್ಯಾಗಲ್ಲಿ ಸಂಜೆ ಆಟವಾಡಬೇಕಾದ್ರೆ ಅಂತ ಎತ್ತಿಟ್ಟುಕೊಂಡಿದ್ದ ಚಿಕ್ಕಿಯನ್ನ ಸುನೀತಾ ಮೂಲಕ ಸ್ವರ್ಣಳಿಗೆ ಕಳಿಸಿದಳು. ಹುಡುಗರೆಲ್ಲ ಇದ್ದಕ್ಕಿದ್ದಂಗೆ ಗಂಭೀರವಾಗಿ ತಮ್ಮ ತಮ್ಮ ಅಭ್ಯಾಸದಲ್ಲಿ ಮುಳುಗಿಹೋದವರ ಹಾಗೆ ಕೂತುಕೊಂಡರು. ಟೀಚರ್ ಕೂಡಾ ಹುಡುಗರ ನೋಟ್ಸ್ ಪರಿಶೀಲನೆ ಮಾಡತೊಡಗಿದರು. ಹತ್ತು ನಿಮಿಷದಲ್ಲಿ ರಿಸೆಸ್ ಬೆಲ್ಲಾದ ಕೂಡಲೆ ಟೀಚರ್ ಹೊರಟುಹೋದರು.
ಎಲ್ಲರೂ ಸ್ವರ್ಣಳ ಸುತ್ತ ಅವಳಿಗಿಷ್ಟವಾಗಲಿ ಅಂತ ಏನೇನೋ ಕಸರತ್ತು ಮಾಡಿದರು.ಯಾವಾಗಲೂ ಎಲ್ಲರ ಹತ್ತಿರವೂ ಸಿಟ್ಟು ಮಾಡಿಕೊಂಡೇ ಇರುವ ಪ್ರೇಮ, ಅವಳ ಬ್ಯಾಗಿಂದ ಒಂದು ಮಾವಿನ ಮಿಡಿ ತೆಗೆದು ಸ್ವರ್ಣಳ ಕೈಗಿತ್ತಳು. ಅವಳ ಬಾಡಿ ಹೋದ ಮುಖ ಚೂರು ಚೂರಾಗೆ ಅರಳಿ ಮತ್ತೆ ಹೂವಾಯಿತು. ಬಂಗಾರದ ಬಳ್ಳಿಯಲ್ಲಿ ಕಿರುನಗೆಯ ಹೂವರಳಿ..
ಇದೆಲ್ಲ ಯಾಕೆ ನೆನಪಾಯಿತೆಂದರೆ ಒಂದು ಪುಸ್ತಕ ಓದ್ತಾ ಇದೀನಿ. "ಕೈಟ್ ರನ್ನರ್" ಅಂತ ಖಾಲಿದ್ ಹುಸೇನಿ ಯವರು ಬರೆದ ಕಾದಂಬರಿ. ಇಬ್ಬರು ಪುಟ್ಟ ಗೆಳೆಯರು ಅವರ ಮಧ್ಯದ ವಿನಾಕಾರಣ ಪ್ರೀತಿ, ಸಿಟ್ಟು ಹತಾಶೆ, ಕುಟುಂಬ ಜೀವನ, ಸುಮ್ಮನೆ ಹೂವರಳಿದಂತೆ ಇದ್ದ ಊರೊಂದು ಅಕ್ಕಪಕ್ಕದವರ ದುರಾಸೆಯಿಂದ ಯುದ್ಧಭೂಮಿಯಾಗಿ ಇವತ್ತು ಜಗತ್ತಿನ ಪವರ್ ಫುಲ್ ದೇಶಗಳನ್ನೇ ನಡುಗಿಸುವ ಉಗ್ರಗಾಮಿ ದೇಶವಾಗಿ ಬದಲಾದ ಹೃದಯಸ್ಪರ್ಶಿ ಚಿತ್ರಣ.. ಹೌದು ಇದು ಆಫ್ಗಾನಿಸ್ತಾನದಲ್ಲಿ ನಡೆವ ಕತೆ. ಇನ್ನೂ ಪೂರ್ತಿ ಮುಗಿಸಿಲ್ಲ.. ಪುಸ್ತಕದ ಪುಟಪುಟವೂ ಒಂದು ಮಾರ್ದವ ಅನುಭೂತಿಯನ್ನು ಕಟ್ಟಿಕೊಡುತ್ತದೆ.
ಮಕ್ಕಳು ಹೇಗೆ ಏನು ಗೊತ್ತಿಲ್ಲದೆ ಯಾವುದೋ ಇನ್ನೊಂದು ಪುಟ್ಟ ಮನಸ್ಸನ್ನ ಹೇಗೆ ಮುದುಡಿಸುತ್ತಾರೆ ಮತ್ತು ಮಕ್ಕಳು ಹೇಗೆ ಒಂದು ಪುಟ್ಟ ಖುಷಿಯಲ್ಲಿ ಏನೆಲ್ಲ ದುಃಖವನ್ನು ಮರೆತುಬಿಡುತ್ತಾರೆ..! ಡಯಾಸಿನ ಮೇಲೆ ಅಳುತ್ತಿದ್ದ ಸ್ವರ್ಣ ಗೆಳತಿಯರೆಲ್ಲ ಜೊತೆಗೂಡಿದ ಕೂಡಲೆ ಒಂದು ಪುಟ್ಟ ಚಿಕ್ಕಿಯಿಂದ, ಮಾವಿನ ಮಿಡಿ ಚೂರಿಂದ ಎಷ್ಟು ಖುಷಿ ಪಡುತ್ತಾಳಲ್ಲವಾ?
ಈ ಕಾದಂಬರಿ ಮಕ್ಕಳೆಂಬ ಮಾಯಾದೀಪದ ಬೆಳಕಲ್ಲಿ ಮನುಷ್ಯನ ನೂರೆಂಟು ಒಳಮುಖಗಳನ್ನ, ಸಂಬಂಧ,ಧರ್ಮ, ರಾಜಕೀಯದ ಹಲವು ಹತ್ತು ಮಗ್ಗುಲುಗಳನ್ನ ಅನನ್ಯವಾಗಿ ಕಟ್ಟಿಕೊಡುತ್ತದೆ. ಅಷ್ಟೆ ಅಲ್ಲ ನಮಗೆ ಪರಿಚಯವೇ ಇಲ್ಲದ ಪ್ರೀತಿ ಹುಟ್ಟಿಸುವ ಕಾಬೂಲಿವಾಲರನ್ನ ಅನಾವರಣಗೊಳಿಸುತ್ತದೆ.ರಷ್ಯನ್ ದಾಳಿಗೂ ಮೊದಲು ಇದ್ದ ಸಾದಾ ಸೀದಾ ಆಫ್ಘಾನಿಸ್ತಾನ, ರಷ್ಯನ್ ದಾಳಿಯಲ್ಲಿ ಪುಡಿಗೊಂಡ ಆಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ಧರ್ಮಾಂಧತೆಯಲ್ಲಿ ಉಸಿರುಕಟ್ಟಿ ನೇತಾಡುತ್ತಿರುವ ಆಫ್ಘಾನಿಸ್ತಾನದ ಒಂದು ಅಪರೂಪದ ಚಿತ್ರಣವಿಲ್ಲಿದೆ. ಹೇಗಾದರೂ ಮಾಡಿ ಪುರುಸೊತ್ತು ಮಾಡಿ ಓದಿ.
ಕಾದಂಬರಿಯ ಬಗ್ಗೆ ಒಂದಿಷ್ಟು ರಿವ್ಯೂ ಅದೂ ಇದೂ ವಿವರಗಳು ಇಲ್ಲಿವೆ. ಮತ್ತೊಂದು ವಿಶೇಷ ಅಂದ್ರೆ ಇದು ಸಿನಿಮಾ ಕೂಡಾ ಆಗ್ತಿದೆ. ಡಿಸೆಂಬರಲ್ಲಿ ರಿಲೀಸ್ ಅಂತ ಹಾಕಿದಾರೆ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
5 comments:
Hi sinddu,
Yes, Kite runner is realising shortely. But the sad part is, already (before release of movie) the boys (who acted as hero in this movie) life is in danger. Due to some objectional sence on the movie for some people.
-Reader.
ಸ್ವರ್ಣಲತನ್ನ ಜಡೆ ಕಥೆ ಓದಿ, ಮದ್ವೆ ಮನೆಲ್ಲಿ ಸಣ್ಣಿದ್ದಾಗ ಮದುಮಕ್ಕಳಿಗೆ ಬಾಲ ಕಟ್ತಿದ್ದೆಲ್ಲಾ ನೆನಪನ್ನು ತಂದು ಕೊಡ್ತು.
ನಾ ನಗ್ತಾ ಇದ್ದಿ, ನನ್ ಹಲ್ಲು ನಿಂಗೆ ಕಾಣ್ತಾ ಇದ್ದಾ?
Hi Sindhu,
Very nice post. I have been reading your blogs regularly from few months now. I like all your posts very much.
"Kite Runner" is a great novel. Khaled Hosseini makes us invlove in his story.
His second novel "A Thousand splendid Suns" is also very good. Its about two women in Afghanistan. Do read it if you have a chance.I am sure you will like this one also.
Take Care,
Pallavi
ಅನಾಮಿಕ ಓದುಗರೆ,
ಹೌದು, ನಾನೂ ಆ ವಿಷಯ ಓದಿದೆ. ಕೆಲವು ನಿಜ, ಕೆಲವು ಮೀಡಿಯಾ ಕಲ್ಪಿತ ಅತಿರೇಕ. ಕತೆ ಮಾತ್ರ ಓದುವವರನ್ನು ಅಲುಗಾಡಿಸಿಬಿಡುತ್ತದೆ.
ಶಾಂತಲಾ,
ಹಲ್ಲು ಕಂಡೂ ಕಂಡೂ ನಂಗೂ ನಗುಬಂತು. ಆದ್ರೆ ಸ್ವರ್ಣನ ನೀರು ತುಂಬಿದ, ಕಾಡಿಗೆ ಒರೆಸಿದ ಮುಖ ಈಗಲೂ ನನ್ನನ್ನ ಖಿನ್ನಳನ್ನಾಗಿಸುತ್ತದೆ. ಹಾಗೇ ಮಾವಿನ ಮಿಡಿ ನೋಡಿದ ಕೂಡಲೆ ದೀಪದಂತೆ ಅರಳಿದ ಆ ಅಳುಕಣ್ಗಳು ನನ್ನನ್ನ ನಮ್ಮ ಪುಟ್ಟ ಪುಟ್ಟ ಖುಷಿಯ ನೆನಪು ತರಿಸಿ ಸಮಾಧಾನ ಮಾಡುತ್ತವೆ.
ಪಲ್ಲವಿ,
ಖುಷಿಯಾಯ್ತು.
ಎರಡನೇದು ಓದಿಲ್ಲ ಇನ್ನೂ. ಓದಬೇಕು. ರಿವ್ಯೂ ಓದಿದೇನೆ.
ಪ್ರೀತಿಯಿಂದ
ಸಿಂಧು
ಸ್ವರ್ಣಾಳ ಜಡೆಗೆ ಕಟ್ಟಿದ ದಾರದೆಳೆ ನೆನೆಸಿಕೊಂಡು ನಗುತ್ತಾ ನಾನು ಆ ಕ್ಲಾಸಿನ ಹುಡುಗನಾಗಿ ಬಿಟ್ಟೆ. ನನಗೋಸ್ಕರ ಡೆಡಿಕೇಟ್ ಮಾಡಿದಕ್ಕೆ ತುಂಬ ಧನ್ಯವಾದಗಳು. ಕೈಟ್ ರನ್ನರ್ ಪುಸ್ತಕ ಕೊಂಡ್ಕೊಡು ವರ್ಷವೇ ಆಯಿತು, ನನ್ನ್ ರೂಮಿನಲ್ಲೇ ಒಂದು ಮೂಲೆ ಸೇರಿದೆ, ಪರ್ವ ಮುಗಿದ ತಕ್ಷಣ ಶುರು ಮಾಡ್ತೀನಿ :)
Post a Comment