Thursday, October 18, 2007

ಗಡೀಪಾರು ಗವಾಕ್ಷಿ

ಸಂಜೆಯ ಸೂರ್ಯ ಬೆಂಕಿ ಕಿರಣಗಳ ಶಾಲು ಹೊದ್ದು ಪಶ್ಚಿಮದ ಗೂಡಿಗೆ ಹತ್ತಿರವಾಗುತ್ತಿದ್ದ. ಸ್ವಲ್ಪ ಮೊದಲು ನಿಂತ ಮಳೆಯಿಂದಾಗಿ, ಸಾಯಂಕಾಲದ ದೀಪ ಹಚ್ಚಲು ಕೈಕಾಲು ಮುಖ ತೊಳೆದ ಹುಡುಗಿಯಂತೆ ಫ್ರೆಷ್ಷಾಗಿದ್ದ ಭೂಮಿ. ಆಕಾಶದ ತುಂಬ ಇನ್ನೂ ಚದುರಿರದ ಬಿಳಿ ಬಿಳಿ ಮೋಡ. ಸಂಜೆ ಇಷ್ಟು ಚಂದ ಇದ್ದರೆ ಅಂಶು ಎಷ್ಟೇ ತಡಮಾಡಿ ಬಂದರೂ ಕಾಯುತ್ತೇನೆ ಅಂದ್ಕೊಂಡು ಕಲ್ಲು ಬೆಂಚಿಗೆ ಹಾಗೇ ಒರಗಿ ಪಾರ್ಕಿನ ಬೇಲಿಯಾಚೆಗಿದ್ದ ರಸ್ತೆಗೆ ಕಣ್ಣು ಬಿಸಾಕಿ ಕೂತೆ.

ವಿಧ ವಿಧವಾದ, ರಂಗುರಂಗಿನ, ಹಲವು ವಾಹನಗಳು ಮೂತಿಯುಬ್ಬಿಸಿ ಸುಂಯ್ ಅಂತ ಹೋಗ್ತಿದ್ರೆ, ಕೈನಿ, ಬೈಕುಗಳು ನಾವೇನು ಕಡ್ಮೆ ಎಂದು ಜುಮ್ ಅಂತ ಓವರ್‌ಟೇಕ್ ಮಾಡ್ತಿವೆ. ಆಟೋರಾಜರಂತೂ ಬಡಪಾಯಿ ಪ್ರಯಾಣಿಕ ಪ್ರಜೆಗಳು ಕೈ ಅಡ್ಡ ಹಾಕಿರುವುದನ್ನು ಲಕ್ಷಿಸದೆ ರಾಜಗಾಂಭೀರ್ಯ ಮತ್ತು ವೇಗಗಳಿಂದ ತಮ್ಮ ಹಿರಿಮೆಗೆ ತಕ್ಕಂತೆ ಸಾಗುತ್ತಿವೆ. ನೀವು ಮಾತ್ರ ರಸ್ತೆಯಿಡೀ ಸವಾರಿ ಮಾಡ್ತಿದ್ರೆ, ನಾವೇನು ನಿಲ್ದಾಣದಲ್ಲೇ ಇರ್ಬೇಕಾ ಎಂದು ಗುರುಗುಟ್ಟುವ ಸಿಟಿಬಸ್ಸುಗಳು, ನಿಮ್ದು ಸ್ಪೀಡಾದ್ರೆ ನಮ್ದು ಸೌಂಡು ಅಂತ ಹಾರನ್ನಿಸುವ ಲಾರಿಗಳು, ಈ ಎಲ್ಲ ಮೋಟಾರುಗಳ ಮಧ್ಯೆ ಶಿಲಾಯುಗದ ಗಾಂಭೀರ್ಯದಿಂದ ತಲೆತಗ್ಗಿಸಿ ಅಲ್ಲೊಂದು ಇಲ್ಲೊಂದು ಎತ್ತಿನ ಗಾಡಿ... ಇಲ್ಲಿ ಪಾರ್ಕಿನ ಕಾಲುಹಾದಿಯಲ್ಲಿ ಸೈಕಲ್ ಕಲಿವ ಚಿಣ್ಣರು, ಹುಲ್ಲಿನ ಮೇಲೆ ಕುಳಿತು ಗಹಗಹಿಸಿ ನಕ್ಕು ವ್ಯಾಯಾಮ ಮಾಡುತ್ತಿರುವ ಅಜ್ಜ ಅಜ್ಜಿಯರು.. ಸುತ್ತಮುತ್ತಲು ನೂರೆಂಟು ಚಿತ್ರಗಳ ಗ್ಯಾಲರಿಯಾಗಿ ಭಾಸವಾಯಿತು.

ಸೂರ್ಯ ಮನೆಗೆ ಹೋಗ್ತಾ ಹಾಗೇ ಬಿಟ್ಟು ಹೋದ ಬಣ್ಣದ ಕ್ಯಾನ್ವಾಸಿನ ಮೇಲೆ ರಾತ್ರಿ ತನ್ನ ಕಪ್ಪುನೀಲಿ ತೆರೆ ಹೊದೆಸತೊಡಾಗಿತು. ಅಲ್ಲಲ್ಲಿ ಒಂದೊಂದು ಮಿನುಗು ಚುಕ್ಕಿ. ಅಲ್ಲಿ ದೂರದ ತಿರುವಿನಲ್ಲಿ ಮಿನುಗಿದ ದೀಪ ಅಂಶುನ ಬೈಕಿಂದಾ? ನೋಡಲು ಬಗ್ಗಿದೆ - ಅಲ್ಲ. ಈ ಮಾರಾಯ ಇನ್ನೂ ಎಷ್ಟು ಹೊತ್ತಿಗೆ ಬರ್ತಾನೋ ಅಂದುಕೊಳ್ತಾ ತಲೆಯೆತ್ತಿದೆ. ನನ್ನ ನೋಟದ ನೇರಕ್ಕೇ ಆಕಾಶದ ನೀಲಿಯಲ್ಲಿ ಒಂದು ಬಿಳೀ ವರ್ತುಲವಿತ್ತು. ಬಿಳಿಯೆಂದರೆ ಬಿಳಿಯಲ್ಲ, ಬೂದುಬಣ್ಣ, ಅಂಚು ಮಾತ್ರ ಅಚ್ಚ ಬಿಳಿ. ಆಕಾಶದ ಗವಾಕ್ಷಿಯಂತೆ ಕಾಣುವ ಇದನ್ನು ಅಂಶುಗೆ ತೋರಿಸಿ ವಿವರ ಕೇಳಬೇಕು ಅಂದುಕೊಂಡೆ.

"ಮೇಡಂ ಅದು ಗವಾಕ್ಷಿಯೇ, ಆದ್ರೆ ಆಕಾಶದ್ದಲ್ಲ, ಗಡೀಪಾರುಗವಾಕ್ಷಿ" ಅಂತ ಒಂದು ಆಳದ ದನಿ ಕೇಳಿಸಿತು. ಒಂದರೆ ಕ್ಷಣ ಭಯದಿಂದ ಕೂದಲು ನಿಮಿರಿ "ಅಂಶು" ಅಂತ ಸಿಟ್ಟಿನಿಂದ ಪಕ್ಕಕ್ಕೆ ತಿರುಗಿದರೆ ಅಲ್ಲಿ ಯಾರಿಲ್ಲ.

ಮಾತಾಡಿದ್ದು ನಾನು ಮೇಡಂ.. ಮತ್ತದೇ ವಿಲಕ್ಷಣ ದನಿ. ನನ್ನೆದೆ ಬಡಿತ ನನಗೇ ಕೇಳುತ್ತಿತ್ತು. 'ಇನ್ಯಾವತ್ತೂ ಸೂರ್ಯ ಮುಳುಗಿದ ಮೇಲೆ ಅಂಶುಗೆ ಕಾಯಲ್ಲ, ಭೂಮಿತಾಯಾಣೆಗೂ ಅಂದುಕೊಳ್ತಾ ಆ ದನಿಯ ದಿಕ್ಕಿಗೆ ತಿರುಗಿದೆ. ಅಲ್ಲಿ ಬೆಂಚಿನ ಪಕ್ಕದಲ್ಲಿ, ತೂಗಿ ನಿಂತಿದ್ದ ಆಕಾಶಮಲ್ಲಿಗೆಯ ಮರದಡಿಯಲ್ಲಿ ಎರಡು ಕಣ್ಣುಗಳು ಫಳಫಳಿಸುತ್ತಿದ್ದವು. ಹೆದರಿಕೆಯಿಂದ ಎದ್ದು ನಿಂತುಕೊಂಡೆನಾದರೂ ಹೆಜ್ಜೆ ಮುಂದಡಿಯಿಡಲಾಗಲಿಲ್ಲ. ಈ ಹಾಳು ಕಣ್ಣೋ ಬೇರೆ ಕಡೆಗೆ ನೋಡುತ್ತಲೂ ಇಲ್ಲ. ಈಗಷ್ಟೇ ಹೊತ್ತಿಕೊಂಡ ಬೀದಿದೀಪದ ಬೆಳಕು ಆತನ ಮೇಲೆ ಬೀಳುತ್ತಿತ್ತು. ಮಧ್ಯವಯಸ್ಕನ ಹಾಗಿದ್ದ. ತಿಳಿಬಣ್ಣದ ಬಟ್ಟೆ, ಆ ಮರಕ್ಕೊರಗಿ ಕೂತಿದ್ದ. ಮಬ್ಬುಗತ್ತಲ ಹಿನ್ನೆಲೆ ಭಯ ಹುಟ್ಟಿಸುತ್ತಿತ್ತಾದರೂ ಅವನನ್ನು ನೋಡಿ ಭಯವಾಗಲಿಲ್ಲ.

'ಭಯ ಯಾಕೆ ಮೇಡಂ? ನೀವು ಕಾಯುತ್ತಿರುವವರು ಇನ್ನು ಐದ್-ಹತ್ತು ನಿಮಿಷದಲ್ಲಿ ಬರ್ತಾರೆ. ಅವ್ರಿಗೆ ಈ ಗವಾಕ್ಷಿ ಬಗ್ಗೆ ಏನೂ ಗೊತ್ತಿಲ್ಲ" ಅಂದವನ ಮುಖದಲ್ಲಿ ನಗು ಕಾಣಿಸಿತಾ..? 'ಲೇ ಚಂದೂ, ಚಂದನಾ, ಮಂಕೇ, ಸುಮ್ನೇ ಇಲ್ಲಿಂದ ನಡೆದು ಅಲ್ಲಿರೋ ಬಸ್‌ಸ್ಟಾಪಲ್ಲಿ ನಿಂತರೆ ೪೩ ಬರತ್ತೆ. ಬೇಡ, ಇವತ್ತು ಆಟೋಲೆ ಹೋಗು, ಇಲ್ಲಿ ನಿಲ್ಬೇಡವೇ ಅಂತ ಮನಸ್ಸು ಛೀಮಾರಿ ಹಾಕುತ್ತಿದ್ರೆ, ನಾನು ಪಾರ್ಕಿನ ಗೇಟಿನ ಕಡೆಗೆ ಹೆಜ್ಜೆ ಕಿತ್ತಿಟ್ಟೆ. ಆ ಮರ ದಾಟುವಾಗ ಅದ್ಯಾವ ಭಂಡತನವೋ ಅಲ್ಲಿ ನಿಂತು "ಅದೇನದು ಗಡೀಪಾರು ಗವಾಕ್ಷೀಂದ್ರೆ? ಅದ್ಯಾಕೆ ಅಲ್ಲಿದೆ? ಅದ್ರ ಬಗ್ಗೆ ನಿಮಗೇನು ಗೊತ್ತು? ಕೇಳಿಯೇಬಿಟ್ಟೆ. ಆವನು ಕೊಟ್ಟಿದ್ದು ಉತ್ತರವೋ ಕವಿತೆಯೋ ಅರ್ಥವಾಗಲಿಲ್ಲ.


"ಹೂಗನಸ ಬಿತ್ತಿ ಬೆಂಕಿಬೆಳೆ ಬೆಳೆದ ಕನಸಿಗ,
ಕನಸುಗಳ ಸಾಮ್ರಾಜ್ಯದಿಂದ
ಗಡೀಪಾರಾದ.
ಮುಖವಿಲ್ಲದ ಜನಸಂದಣಿಯಲ್ಲಿ
ನೆಮ್ಮದಿಯ ನಗುವನರಸುತ್ತಕಳೆದುಹೋದ.."


ಮತ್ತೆ ಅವನೇ ಮಾತಾಡಿದ - ನಿಮಗೆ ಕಾಣಿಸುವ ಆ ವರ್ತುಲದ ಹಿಂದಿರುವುದು ಕನಸುಗಳ ಸಾಮ್ರಾಜ್ಯ, ಅದು ಆ ಸಾಮ್ರಾಜ್ಯದ ಗವಾಕ್ಷಿ. ಅಲ್ಲಿಂದ ಗಡೀಪಾರಾದವರೆಲ್ಲ ಆ ಗವಾಕ್ಷಿಯಿಂದಾನೇ ಈ ಕಡೆ ಬಂದು ಬೀಳೋದು. " ನಾನು ತಬ್ಬಿಬ್ಬಾದೆ. ಕನಸು, ಕನಸಿನ ಸಾಮ್ರಾಜ್ಯ ಅರ್ಥವಾಯ್ತು. ಈ ಗಡೀಪಾರು-ಗವಾಕ್ಷಿ ಎಲ್ಲ ಗೊಂದಲವಾಗ್ತಿದೆ. 'ನೀವೂ' ಅಷ್ಟರಲ್ಲಿ ಆತನೇ ಹೇಳಿದ.
'ನಾನೂ ಅಲ್ಲಿಂದ ಈಗ ೨೦ ವರ್ಷಗಳ ಕೆಳಗೆ ಗಡೀಪಾರಾಗಿ ಈ ಕಡೆ ಬಂದು ಬಿದ್ದೆ. ಆಗಾಗ ಇಲ್ಲಿ ಬಂದು ಕೂತು ಬರಿಯ ಗವಾಕ್ಷಿ ನೋಡಿ ಮನೆಗೆ ವಾಪಸಾಗ್ತೀನಿ. ನಿಮಗೆ ಪೂರ್ತಿ ಅರ್ಥವಾಗೋ ಹಾಗೆ ಹೇಳ್ಬೇಕಾದ್ರೆ ತುಂಬ ಸಮಯ ಬೇಕು. ನಿಮಗೆ ಆ ಗವಾಕ್ಷಿ ಕಾಣಿಸ್ತಾ ಇದೆ ಅನ್ನೋದೆ ಅರ್ಧ ವಿಷಯ ಅರ್ಥವಾದ ಹಾಗೆ. ಅಲ್ನೋಡಿ ನಿಮ್ಮವರು ಬರ್ತಿದ್ದಾರೆ. ನಾನು ಹೊರಟೆ. ನಾವು ನಾಳೆಯಲ್ಲ ನಾಡಿದ್ದು ಇಲ್ಲೇ ಸಿಗೋಣ.. ಅಂದವನೇ ಸರ್ರನೆದ್ದು ಆ ಪಾರ್ಕಿನ ಕತ್ತಲೆಯಲ್ಲಿ ಕಳೆದು ಹೋದ.

ಸಾರಿ ಚಂದೂ ತುಂಬ ಕಾಯಿಸ್ಬಿಟ್ಟೆ.. ಅಂತ ಓಡುತ್ತ ಬಂದ ಅಂಶುವಿಗೆ ಆಕಾಶ ತೋರಿಸಿ ಕೇಳಿದೆ. ಅಲ್ಲಿದೆಯಲ್ಲಾ ಗವಾಕ್ಷಿ, ಆ ಬಿಳೀ ವರ್ತುಲ ಅದೇನದು? ಯಾವ ವರ್ತುಲಾನೇ? ಅಲ್ಲಾ ನಾನು ಲೇಟಾಗಿ ಬಂದೆ ಅಂತ, ನೀನು ಹೀಗೆಲ್ಲ ತಮಾಷಿ ಮಾಡ್ಬೇಡ. ಬಾ ಕಾಫಿ ಕುಡೀತಾ ಮಾತಾಡೋಣ..
ಸುಮ್ಮನಾದೆ. ಮಾತು ಪ್ರಶ್ನೆಗಳನ್ನ ನಾಡಿದ್ದಿಗೆ ಕಾದಿಡೋಣ ಅನಿಸಿತು.

ಬೆಳಿಗ್ಗೆ ಎಂಟೂಮುಕ್ಕಾಲಿಗೆ ಜೆ.ಸಿ.ರಸ್ತೆಯ ಸಿಗ್ನಲ್ಲಿನಲ್ಲಿಳಿದು ಸರಸರನೆ ನಡೆಯುತ್ತಿದ್ದೆ. ಅಂಗಡಿಗಳೆಲ್ಲ ಆಗತಾನೆ ಕಣ್ಣು ತೆರೆಯುತ್ತಿದ್ದವು. ನಮ್ಮೆಲ್ಲರ ವಾಹನಗಳನ್ನು ಪುಷ್ಪಕವಿಮಾನದಂತೆ ಮಾರ್ಪಡಿಸುವ ಆಟೋ ಸಲಕರಣೆಗಳ ಅಂಗಡಿಗಳಿದ್ದವು ಇಕ್ಕೆಲದಲ್ಲಿ. ತಲೆಗೆ ಬಲೆಬಲೆಯ ಬಿಳೀ ಟೋಪಿ ಹಾಕಿದ ದೊಡ್ಡ ಪೋರ, ಅವನಂಗಡಿಯ ಕರಿ ಬಿಳಿ ಮ್ಯಾಟ್ರೆಸ್ ಎಳೆದು ರಸ್ತೆಗೆ ಕಾಣಿಸುವ ಹಾಗೆ ಕಟ್ಟಿಡುತ್ತಾ, ಪಕ್ಕದ ಅಂಗಡಿಯಲ್ಲಿ ವೆಂಕಟ್ರಮಣನ ಫೋಟೋಕ್ಕೆ ಮಲ್ಲಿಗೆ ಮಾಲೆ ಕೊಳ್ಳುತ್ತಿದ್ದ ಇನ್ನೊಂದ್ ಸ್ವಲ್ಪ ದೊಡ್ಡ ಪೋರನಿಗೆ ನಕ್ಕು ಕುಶಲೋಪರಿ ವಿಚಾರಿಸುತ್ತಿದ್ದ. ನಕ್ಕೋ ಬೇ, ನಿನ್ನೇದು ರಾತ್ರೆ ಶಟ್ರ್ ಎಳ್ಕೊಂಡಿ ಹೋಗೋಷ್ಟೊತ್ತಿಗೆ ಟಿಕೇಟ್ ಎಲ್ಲಾ ಸೋಲ್ಡ್ ಔಟು.. ಹಾಂ ಅದೇ ನನ್ಮಗಂದು ಡಬ್ಬಾ ಸಿನ್ಮಾ, ದುಡ್ಯೋ ಮಗಾ ಯಾವನು ಬ್ಲಾಕಲ್ಲಿ ತಕೊಂಡು ನೋಡ್ತದೆ.. ಈವತ್ತು ಜಲ್ದೀ ಹೊಲ್ಟ್ರೆ ನೋಡಬೈದು..ಮುಂದೆ ಕೇಳಿಸಲಿಲ್ಲ. ರಸ್ತೆ ದಾಟಬೇಕಿತ್ತು.

ದಾಟುವಾಗ ಗಮನಿಸಿದೆ. ನನ್ನ ಪಕ್ಕದಲ್ಲೇ ಒಬ್ಬ ಅಜ್ಜ.. ದಾಟಿಸಬೇಕೇನೋ ಅಂದ್ಕೊಂಡೆ. ನನ್ನನ್ನ ಗಮನಿಸಿದ ಅವನ ಮುಖದಲ್ಲಿ ನಸುನಗು.

ಎಲ್ಲಾರ್ಗೂ ದಾಟ್ಸೋ ನಂಗೇ ಸಹಾಯನೇನಮ್ಮಾ? ಅಷ್ಟು ವಯಸ್ಸಾದ ಹಾಗೆ ಕಾಣ್ತೀನಾ? ನಂಗೆ ಸಂಕೋಚವಾಯಿತು. ಇಲ್ಲಜ್ಜ, ವಯಸ್ಸಾದ ಹಾಗೇಂತಲ್ಲ. ನೀವು ಆಚೆ ಈಚೆ ನೋಡುತ್ತಾ ನಿಧಾನ ಮಾಡ್ತಿದ್ರಲ್ಲಾ ಅದಕ್ಕೇ... ನಾನು ನಿಂಗೇ ಕಾಯ್ತಿದ್ದೆ ಕಣಮ್ಮೋ..ನಂಗೆ ಯೋಚನೆಯಾಯಿತು. ಮತ್ತೆ ಆತನನ್ನು ದಿಟ್ಟಿಸಿದೆ. ವಯಸ್ಸು ತನ್ನ ಛಾಪನ್ನ ಚೆನ್ನಾಗೇ ಒತ್ತಿತ್ತು. ನಿರಿಬಿದ್ದ ಚರ್ಮ, ಹಣ್ಣಾದ ಕೂದಲು, ವಯಸ್ಸಿನ ಭಾರದಿಂದ ಬಾಗಿದ ಬೆನ್ನು.. ಆ ಮುಖದಲ್ಲಿನ ಹೊಳೆವ ಕಣ್ಗಳೆರಡು ಮಾತ್ರ ಅಜ್ಜನ ಜೀವಂತಿಕೆಯನ್ನು, ಚೈತನ್ಯವನ್ನು ಸಾರಿ ಹೇಳುತ್ತಿತ್ತು. ಓದಿಕೊಂಡವರ ಹಾಗೆ ಕಾಣಲಿಲ್ಲ. .. ನನ್ನ ಮನಸ್ಸನ್ನು ಓದಿದವರ ಹಾಗೆ ಹೇಳಿದ ಅವನು.

ಹೌದ್ ತಾಯೀ, ನಾನು ಶ್ಯಾನೆ ಓದ್ಕಂಡಿಲ್ಲ. ಇಂಗೇ ಕನ್ನಡ ಪ್ಯಾಪ್ರು, ಬಿಲ್ಲು, ಅಡ್ರೆಸ್ಸು, ಓದ್ಬಲ್ಲೆ. ಹೆಬ್ಬೆಟ್ಟಲ್ಲ... ಅಂಗೂ ಇಂಗೂ ಏನಾದ್ರೂ ಅರ್ಜಿ ಕೊಡೋವಾಗ ತೆಪ್ಪಾದ್ರೂ ನಾನೇ ಬರ್ದಾಕ್ತೀನಿ.. ಇಬ್ಬರೂ ರಸ್ತೆ ದಾಟಿ ನನ್ನ ಆಫೀಸಿನ ಕಡೆ ನಡೆಯುತ್ತಿದ್ದೆವು. ನಂಗೆ ಆತನ ಮೊದಲ ಮಾತು ನೆನಪಾಯ್ತು.
ಏನ್ ಕೆಲಸ ಮಾಡೋದಜ್ಜಾ ನೀವು ಕೇಳಿದೆ..
ಅವನು ನಕ್ಕ. ಈ ಪ್ರಪಂಚದ ಯಾವಾರ ಮುಗುಸ್ ಕೊಂಡು ಒಂಟೋಯ್ತಾರಲ್ಲವ್ವಾ - ಅಂತೋರನ್ನ ಕಳ್ಸೋದಕ್ಕೆ ನಮ್ ವಾಹ್ನಾನೇ ಆಗ್ಬೇಕು.. ಬದುಕಿದ್ದಾಗ ಎಂತ ಲಗ್ಷುರಿ ಗಾಡೀನೇ ಇಟ್ಗಂಡಿರ್ಲಿ.. ಸತ್ತೋದ್ ಮ್ಯಾಕೆ ಯಾವೋನ್ನೂ ಕಾರ್ ಹತ್ಸಾಕಿಲ್ಲ. ನಮ್ಮ ಬಣ್ಣ ಹಾರೋದ್ ಡಬ್ಬಾ ಗಾಡೀಲೆ ಸಾಗ್ಸಾದು... ಶವವಾಹನ.. ಹಾಂ ಅದೇಯಾ..ಯಾಕ್ತಾಯೀ ಈಗ ನನ್ನೋಡಿ ಎದ್ರುಕೆ ಆಗ್ತೈತಾ?
ಇಲ್ಲಜ್ಜಾ, ಮತ್ತೆ ನೀನ್ಯಾಕೆ ನಂಗೆ ಕಾಯ್ತಾ ನಿಂತಿದ್ದೆ ಅಲ್ಲಿ..?
ಓ ಅದಾ.. ನಿನ್ನೆ ನಿಂಗೆ ಪಾರ್ಕಾಗೆ ಸಿಕ್ಕಿದ್ನಲ್ಲ ಅದೇನೋ ಆಕಾಸ್ವ ನೋಡ್ಕೊಂಡು ಕಯಿತೆ ಮಾತಾಡ್ತಾನಲ್ಲ ಅಂವ ಹೇಳ್ದ ಅದ್ಕೆ..
ಮೈ ಜುಮ್ಮೆಂದಿತು. ಅವನು ಏನು ಹೇಳ್ದ? ನಿಮ್ಗೆಲ್ಲ ನಾನು ಇಲ್ಲಿ ಓಡಾಡೋದು ಹೇಗೆ ಗೊತ್ತು... ನಾನು ಒಳಗೊಳಗೇ ಅಧೀರಳಾದೆ.

ಹೆದ್ರಕೋಬೇಡ ತಾಯೀ, ನಿಂಗೇನೂ ಕ್ಯಟ್ಟದ್ ಮಾಡಕ್ ಬರ್ಲಿಲ್ಲ ನಾನು. ಅಂವಂಗೆ ನಾಳೆ ತಂಕಾ ತಡ್ಯಕ್ಕಾಗಿಲ್ಲ. ಇವತ್ತು ಬರಕ್ಕೆ ಡೂಟಿ ಐತಲ್ಲ. ಅಂಗಾಗೆ ನಂಗ್ ಯೋಳ್ದ.. ನಾವೆಲ್ಲ ಎಂಗಿದ್ರೂ ಕಂಡ ಕನಸು ಮುಕ್ಕಾಗಿ ಏನುಳದೈತೋ ಅದ್ರಾಗೆ ಬದುಕೋ ಗುಂಪಿಗೆ ಸೇರಿದೋರಲ್ವಾ.. ಅಷ್ಟರಲ್ಲಿ ನನ್ನ ಆಫೀಸಿನ ಮುಂದಿದ್ದೆವು. ನಾನು ಅಜ್ಜನ ಮುಖ ನೋಡಿದೆ. ಸಾವಿರಗಟ್ಟಲೆ ಸಾವು-ಕರೆಗಳನ್ನು ಗೋಳು-ಕರೆಗಳನ್ನು ನೋಡಿ, ಕೇಳಿ, ಪಕ್ಕಾಗಿದ್ದ ಅವನ ಹಣೆಯ ಗೆರೆಗಳು ನನ್ನನ್ನು ಅಲ್ಲೇ ನಿಲ್ಲಿಸಿದವು. ಹಣ್ಯಾಗ್ ಏನೈತಿ ನಮ್ಮವ್ವಾ? ನೀವು ಓದಕ್ಕಲ್ತವ್ರು, ಕಂಪೂಟ್ರಿನಾಗೆ ಕ್ಯಲ್ಸ ಮಾಡವ್ರು ತಿಳ್ಕಂಡಿರೋದನ್ನ ಈ ಬಡ ಡ್ರೇವರ್ ಏನ್ ಯೋಳ್ತಾನೆ.. ಅದೂ ಹೆಣ ಸಾಗ್ಸೋನು.. ಅದಿರ್ಲಿ ನಮ್ಮುಡುಗ ಏನಂದಾ ಅಂತ ಯೋಳ್ಬುಡ್ತೀನಿ ಅಲ್ದೆ ನಿಮ್ಗೂ ಹೊತ್ತಾಯ್ತದೆ ಕ್ಯಲ್ಸ ಮಾಡವ್ರನ್ನು ಯಾವತ್ತೂ ತಡ್ದು ನಿಲ್ಲಿಸ್ಬಾಡ್ದು.. ಪೂಜೆ ನಿಲ್ಸಿದಷ್ಟೇ ಪಾಪ ಸುತ್ಗೋತ್ತದೆ ಅಲ್ಲೇನ್ರವಾ? ಅವನ ಮುಖದಲ್ಲಿ ಹೊಳೆದಿದ್ದು ಯಾರು ಬಸವಣ್ಣನವರಾ?

ಅಷ್ಟರಲ್ಲಿ ಅಜ್ಜ ಮಾತಿನ ಮಳೆಗರೆದ.. ಅದೂ ನೀವು ಎಳೇಜನ ಯಾನ್ ಯಾನೋ ಕನ್ಸು ಕಾಣ್ತೀರಲ್ರವ್ವಾ ಹಿಂತಾದ್ನೇ ಓದಬೇಕು, ಹಿಂತಲ್ಲೆ ಓದ್ ಬೇಕು, ಹಿಂತಾ ಕ್ಯಲ್ಸನೇ ಇಡೀಬೇಕು, ಸಂಬಳ ಇಂಗಿಂಗೇ ಇರ್ಬೇಕು, ಗೆಣೆಕಾರನೋ ಗೆಣೆಕಾತಿನೋ ಇರಬ್ಯಾಕು, ಇಂಗಿಂಗೇ ಇರಬ್ಯಾಕು.. ಇಂಗೇ ಯಿನ್ನೂ ಯೇನೇನೋ.. ಅಂತ ಕನ್ಸು ಕಾಣೋವ್ರೆಲ್ಲ ಒಂದ್ಕಡೆ ಇರ್ತಾರಂತೆ. ನಿಮ್ಗೆಲ್ಲ ನಂಬ್ರು ಹಾಕೋ ಮ್ಯಾಷ್ಟ್ರು ಅವತ್ತು ತಲಕ್ಯಟ್ಟು ನಂಬ್ರು ಸರೀಗೆ ಒಗೀಲಿಲ್ಲಾಂದ್ರೆ, ಅಪ್ಲಿಕೇಸನ್ನು ಕೊಟ್ಗಂಡು ನಿಂತ್ರೆ ನಿಂತಾವ ಫೀಸ್ ಕೊಡಾಕಾಗಾಕಿಲ್ಲ ಹೋಗಯ್ಯೋ ಅಂತ ಸೀಟ್ ಕೊಡ್ದೆ ಕಳ್ಸಿದಾಂದ್ರೆ, ಅಗ್ಲೂ ರಾತ್ರೆ ಕೂತ್ಕಂಡ್ ಓದಿ, ನಂಬ್ರಾನೂ ತ್ಯಗ್ದು, ಹಿಂಟ್ರೂನಾಗೆಲ್ಲ ಚಲೋ ಮಾಡಿದ್ರೂ ಜಾತಿನೋ, ಸಿಫಾರ್ಸೋ ಯಾವ್ದೋ ಸರೀಗಾಗ್ಲಿಲ್ಲ ಅಂತ ಕ್ಯಲ್ಸ್ ತ್ಯಪ್ಪೋದ್ರೆ.. ಸಿಕ್ಕಿದ್ ಕೆಲ್ಸದಾಗೂ ತಿಂಗಳ್ ನಡ್ಸೋದೇ ಕಷ್ಟ ಆಗೋದ್ರೆ, ಎಲ್ಲಾನೀನೇ ಅಂತ ಕಣ್ಣಾಗ್ ಕಣ್ಣಿಟ್ಟು ನೋಡುದ್ ಗೆಣೆಕಾರ ಯೋನೋ ಕಾರ್‍ಣಾನೇ ಕೊಡ್ದೆ ಉಲ್ಟಾ ಒಡುದ್ರೆ.. ಹಿಂಗೇ.. ಕಂಡಿದ್ ಕನುಸೆಲ್ಲ ನೋಡ್ತಾ ನೋಡ್ತಾ ನೀರ್ ಗುಳ್ಳೆ ತರಾ ಒಡುದ್ ಹೋಗುತ್ತಲ್ಲವ್ವಾ ಆವಾಗ, ಅಲ್ಲಿ ಕನಸಿನ ರಾಜ್ಯದಾಗೆ ಇರಾಕಾಗಾಕಿಲ್ಲ. ಯಾಕ್ ಯೋಳಿ.. ಅಲ್ಲಿರೋರೆಲ್ಲಾ ಕನಸು ಕಾಣ್ತಿರ್ತಾರೆ ಅದನ್ನ ಸುಳ್ಳು ಅಂತ ಯೋಳೋಕ್ಕಾಗಲ್ಲ, ನಮ್ಮ ಕನಸು ಮುರುದ್ ಬಿದ್ದಿದ್ದನ್ನ ತಡ್ಕೊಳಾಕ್ಕಾಗಲ್ಲ.. ಸೂಕ್ಷ್ಮಸ್ತರು ಅಂಗೇ ಬದುಕೋ ದಾರಿ ಬರ್ ಬಾದಾಗೋಗಿ, ಯಂಗ್ ಬಂತೋ ಅಂಗೆ ಜೀವ ತೇಯ್ತಾರೆ.. ಕೊನೆಗೊಂದಿನ ನನ್ ಗಾಡೀ ತಾವ... ಸ್ವಲ್ಪ ಮಂಡಬುದ್ದಿಯೋರು.. ಅಲ್ ಕಂಡ್ತಲಾ ನಿಮ್ಗೆ ಗವಾಕ್ಷಿ ಅದ್ರಾಗೆ ತೂರ್ಕೊಂಡ್ ಬಂದು ಈ ಕಡೆ ಯಾವಾರದ್ ಪ್ರಪಂಚದಾಗೆ ಬೀಳ್ತಾರೆ. ಅಷ್ಟ್ ದಿನ ಅನುಭೋವ್ಸಿದ್ದ ಕನಸು ಅವ್ರಿಗೆ ಏನೋ ಮಾಡ್ಬೇಕು ಅನ್ನೋ ಹಪಾಹಪಿ ತುಂಬಿರುತ್ತೆ. ಮುರುದ್ ಬಿದ್ದು ಮಣ್ ಪಾಲಾದ ಕನ್ಸು ಯಾವಾರ ಕಲ್ಸಿರುತ್ತೆ. ಎಂಗೋ ಹಣೇ ಬರಾ ಬದಲಾಯಿಸ್ ಕ್ಯಂಡು ತಮಗೇ ಬೇಕಾದಂಗೆ ಬದುಕಾದ್ ಕಲ್ತ್ ಬುಡ್ತಾರೆ.. ಉಂಹೂಂ.. ಹಳೇ ಕನ್ಸಿನ ಸಾವಾಸಕ್ಕೇ ಓಗಂಗಿಲ್ಲ.. ಮಣ್ಣು ಪಾಲಾದ್ದು ಮತ್ತೆ ಇವ್ರ ತಾವ ಬರಂಗಿಲ್ಲ..
ಹೂವ ಇವತ್ತು ನಕ್ಕೊಂಡು ಸೆಂದಾಕ್ ಕಾಣ್ತದೆ. ವಾರದ್ ಮ್ಯಾಲೆ ಅದ್ನ ಅಂಗೇ ನೀರ್ನಾಗೆ ಇಟ್ರೆ ಕೊಳ್ತು ನಾರ್‍ತದೆ. ಎಸ್ದು ಬುಡ್ಬೇಕೂ. ಮುರುದ್ ಬಿದ್ದ ಕನ್ಸು ಅಂಗೇ ಅಲ್ಲವ್ರಾ?

ಅದ್ಸರಿ ಅಜ್ಜಾ ನಿಂಗೆ ಹ್ಯಾಗೆ ಈ ವಿಷ್ಯ ಎಲ್ಲಾ ಗೊತ್ತಾತು.. ಐ ಮೀನ್, ಆ ಗವಾಕ್ಷಿ, ಮುರುದು ಬಿದ್ದ ಕನ್ಸು.. ಅದೆಲ್ಲಾ.

ಆಗ ಅವನು ಬಣ್ಣಗೆಟ್ಟ ಹಲ್ಲುಗಳೆಲ್ಲ ಕಾಣುವಂತೆ ನಕ್ಕ ನಗು ಒಂದೆರಡೇ ಹಲ್ಲು ಹುಟ್ಟಿ ನಗುವ ಮಗುವಿನಷ್ಟೇ ಇಷ್ಟವಾಯಿತು. ಈಗ ಬೆಳ್‌ಬೆಳಿಗ್ಗೆ ಇಂಗೆ ಟಿಪ್-ಟಾಪಾಗಿ ಕಾಣ್ತಾ ಇದೀನವ್ವಾ ನಾನು. ಸಂಜಿ ಮ್ಯಾಕೆ ಆಗಿದ್ರೆ ನೀನು ನನ್ನ ರಸ್ತೆ ದಾಟ್ಸೊದಿರ್ಲಿ, ಹತ್ರದಲ್ಲೂ ಹೋಗ್ತಾ ಇರ್ಲಿಲ್ಲ. ನಂಗು ಒಬ್ಬ ಮಗ ಅದಾನೆ. ಅವ್ನೂ ಇಂಗೆ ಓದೋ ಕನ್ಸು ಮುರೀತು. ಅದು ಮುರುದ್ರೆನು ಮೆಕ್ಯಾನಿಕ್ ಆಗಿ ಹೊಸ ಕನ್ಸು ಫಿಟ್ ಮಾಡ್ತೀನಿ ಅಂತ ಹೊಂಟ. ಅವ್ನು ಜ್ವಾಪಾನ ಮಾಡಿದ್ದ ಅದ್ಯಾವ್ದೋ ಕಾಲೇಜುಡುಗಿ, ಆ ಕನ್ಸಿನ ಪೋವ್ರಿಗೆ ಗೇರ್ ಹಾಕಕ್ಕಾಗ್ದೆ ಒಂಟೋದ್ಳು. ನನ್ಮಗ ಕನ್ಸೇ ಕಂಡಿಲ್ಲ ಅನ್ನೋ ಅಂಗೆ ಬದಕಕ್ಕೆ ಪ್ರಯತ್ನ ಪಟ್ಟ ಯಾನ್ ಮಾಡದು. ಅವ್ನೂ ಅದೇ ಪರ್ಪಂಚದಾಗೆ ಉಳ್ದ್ ಬುಟ್ಟಿದ್ದ. ಎಲ್ಲರ ಕನಸೂ ಬಣ್ಣ ಕಟ್ಗಂಡು ಜುಂ ಅಂತ ಇಮಾನದ ಸ್ಪೀಡ್ನಾಗೆ ಹೋಯ್ತಾ ಇರ್ವಾಗ ಇವಂಗೆ ತನ್ನ ಗಾಡಿ ಪಂಚರ್ರಾದದ್ದು ತಡ್ ಕಳಾಕ್ಕಾಗಿಲ್ಲ.. ಅಂಗೇ ಸಂಜೆ ಮೇಲೆ ಒಂದೊಂದೇ ಜಾಮ್ ತಕ್ಕಳ್ಳಾದ್ ಕಲ್ತ. ನನ್ ಹೆಂಡ್ರು ಮಗನ್ನ ಯಂಗಾರಾ ಮಾಡಿ ಓದ್ಸಿ ಬೇರೆ ಕೆಲ್ಸಕ್ಕೆ ಹಚ್ಬೇಕು ಈ ಸಾವಿನ ವಾಹ್ನದ ಸವಾಸ ಬ್ಯಾಡ ಅಂದ್ಕಂಡು ಇದ್ ಬದ್ದಿದ್ದೆಲ್ಲಾ ಅಡಾ ಇಟ್ಟಿದ್ಲು. ಅವಳಿಗೆ ಉಸಾರಿಲ್ದಿದ್ದಾಗ ಡಾಕುಟ್ರ ತಾವ ಕರ್ಕಂಡ್ ಹೋದ್ರೆ ಅಂವಾ ನನ್ ಜೇಬ್ನಾಗೆ ಕಣ್ಣಿಟ್ಟ.. ಯಾವ್ ರಿಪೋರ್‍ಟ್ ಏನ್ ಕಾಣ್ತದೆ. ಯಾವ ವಾಹನ ಅಂದ್ರೆ ಮಾರು ದೂರ ಓಡ್ತಿದ್ಲೋ ಅದ್ರಾಗೆ ಅವಳನ್ನ ಸಾಗ್ಸಿ ಆಯ್ತು.. ಈಗ ದಿನಾ ಸಂಜೆ ಇಬ್ರೂ ಒಂದೇ ಕಡೆ ಕೂತ್ಕಂಡು ಒಟ್ಟೇ ತುಂಬ ಕುಡ್ ಕಂಡು ಮನೀಗೆ ಯಂಗೋ ಓಯ್ತೀವಿ. ಬಡ್ಡೀಮಗಂದು ಕನ್ಸು ಕೈ ಕೊಟ್ಬುಡ್ತು ನನ್ ಮಗಂಗೆ. ತಡ್ಕಂಡು ನಿಂತು ಮುಂದೋಗಕ್ಕಾಗದಂಗೆ ಜೋಲಿ ಒಡ್ದುಬುಡ್ತು. ಇದೆಲ್ಲ ಮಗುವಿನ ನಗು ನಗುತ್ತಲೇ ಹೇಳ್ತಾ ಇದ್ದ ಅಜ್ಜ.
ಈಗ ಅವನ ನಗುವಲ್ಲಿ ಸುಟ್ಟಗಾಯದ ವಾಸನೆ ಬರತೊಡಗಿತು. ಅಲ್ಲೆ ಸಂದಿಯಲ್ಲಿ ಕೀವು ಸೋರಿ.. ಅಯ್ಯೋ ನನ್ನ ತಲೆ ತಿರುಗುತ್ತಿದೆ...

ಎಚ್ಚರಾದಾಗ ನಮ್ಮ ಆಫೀಸ್‌ಬಾಯ್ ವೆಂಕಟ್ ಇದ್ದ. ಏನ್ ಮೇಡಂ, ಉಶಾರಿಲ್ವಾ, ಯಾಕ್ ಬರಕ್ಕೋದ್ರಿ.. ಆಟೋ ಮಾಡಿ ಮನೆಗೆ ಕಳಿಸ್ಲಾ ಅನ್ನುತ್ತಿದ್ದರೆ ನಾನು ಸುಮ್ಮನೆ ತಲೆಯಾಡಿಸಿದೆ. ಅಜ್ಜ, ಗವಾಕ್ಷಿ, ನೆರಳಿನಂತಹ ಮನುಷ್ಯ.. ಕನಸು.. ಎಲ್ಲ ನೆನಪಾಯಿತು. ಅಮಾನುಷವಾಗಿ ಕೊಚ್ಚಿಸಿಕೊಂಡ ಕನಸುಗಳ ಬರ್ಬರ ಗಾಯಗಳು ನೆನಪಾಗಿ ಉರಿಯಿಂದ ಚೀರತೊಡಗಿದೆ. ಯಾರೋ ತಲೆಗೆ ತಣ್ಣೀರು ತಟ್ಟುತ್ತಿದ್ದರು. ನನಗೆ ಉಕ್ಕಿ ಬರುವ ದುಃಖವನ್ನು ಬೆಚ್ಚಗೆ ಕಣ್ಣೀರಲ್ಲಿ ಕಳೆಯಬೇಕಿತ್ತು. ಎಷ್ಟೆಲ್ಲಾ ಇದ್ದೂ ಅಂಶೂನ ಹತ್ತಿರ ಅದು ಹಾಗಿಲ್ಲ, ಇದು ಬೇಕು ಅಂತ ಹಟ ಮಾಡುವ ನನ್ನ ಪೆದ್ದುತನವನ್ನ ವಾಂತಿ ಮಾಡಿಕೊಳ್ಳಬೇಕಿತ್ತು. ಏನೋ ಒಂದು ಸರಿಹೋಗದೆ ಇದ್ದರೆ ಸತ್ತು ಹೋಗಿಬಿಡಲಾ ಅಂತ ಎದ್ದು ಬರುವ ಆಲೋಚನೆಗಳನ್ನೆಲ್ಲ ಕತ್ತು ಹಿಡಿದು ಅಂಡಿನ ಮೇಲೆ ಒದ್ದು ಹೊರದಬ್ಬಬೇಕಿತ್ತು. ಇದ್ದ ಖುಷಿಯನ್ನು ನೋಡದೆ, ಇರದಿರುವ ಯಾವುದಕ್ಕೋ ಹಪಹಪಿಸುವ ಹಳಹಳಿಕೆಯನ್ನು ನೆಲದ ಮೇಲೆ ಬೀಳಿಸಿ ಹೊರಳಾಡಿಸಿ ಅಳಿಸಬೇಕಿತ್ತು. ತುಂಬಿನಿಂತಿರುತ್ತಿದ್ದ ಸುತ್ತಲಿನ ಕೆರೆ ಬಾವಿಗಳು ಖಾಲಿಯಾಗಿದ್ದನ್ನ ನೋಡದೆ, ಸಾಹಿತ್ಯ ಕ್ಷಾಮದ ಬಗ್ಗೆ ಗೊಣಗಾಡುವ ವಿವೇಕವನ್ನ, ಅಟ್ಟಿಸಿಕೊಂಡು ಹೋಗಿ ಹೊಡೆಯಬೇಕಿತ್ತು.. ಆದರೆ ಎಲ್ಲ ಸೇರಿ ನನಗೆ ತಣ್ಣೀರು ತಟ್ಟುತ್ತಿದ್ದರು. ಗಾಳಿ ಹಾಕುತ್ತಿದ್ದರು. ರುಚಿಯಾದ ನಿಂಬೆಹುಳಿ ಸೋಡಾ ಕುಡಿಸುತ್ತಿದ್ದರು.ನೆರಳಲ್ಲಿ ಮಲಗಿಸುತ್ತಿದ್ದರು.. ನಾನು ಏನೇನು ಮಾಡಬೇಕಿತ್ತೋ ಎಲ್ಲ ಮರೆತು ಹಾಯಾಗಿ ಮಲಗಿದೆ..ಅಲ್ಲಿ ಗಡ್ಡದ ಸಾಬರ ಅಂಗಡಿನೆರಳಿನಲ್ಲಿ. ಎದ್ದಾಗ ಮಧ್ಯಾಹ್ನವಾಗಿತ್ತು.. ಬಿರುಬಿಸಿಲಿನಲ್ಲಿ ಅದ್ದಿ ತೆಗೆದ ನೀಲಿ ಆಕಾಶ. ಮೋಡದ ತುಣುಕಿರಲಿಲ್ಲ. ಗವಾಕ್ಷಿಯ ಸ್ಕೆಚ್ ಕೂಡ ಇರಲಿಲ್ಲ. ಹೊಟ್ಟೆಯಲ್ಲಿ ಚೂರುಚೂರಾದ ಕನಸುಗಳ ಸಂಕಟ ಸುಳಿತಿರುಗುತ್ತಿತ್ತು.

ಮರುದಿನ ಎಂದಿನಂತೆ ಯಾವ ವಿಶೇಷಗಳೂ ಘಟಿಸದೆ ಕಳೆಯಿತು. ಸಂಜೆಗೆ ಅಂಶುಗೆ ಕಾಯುತ್ತಾ, ಲೈಬ್ರರಿಯ ಮುಂದಿನ ಪಾರ್ಕಿನಲ್ಲಿ ಕುಳಿತೆ. ಅತ್ತಿತ್ತ ನೋಡಿದೆ. ಅವತ್ತು ಕಂಡ ವಿಲಕ್ಷಣ ವ್ಯಕ್ತಿ ಕಾಣಲಿಲ್ಲ. ಅಜ್ಜನ ಜೊತೆ ಮಾತಾಡಿದಾಗಿನಿಂದ ಅವನ ಬಗ್ಗೆ ಕುತೂಹಲ ಜಾಸ್ತಿಯಾಗಿತ್ತು. ಅದಕ್ಕೇ ಅಂಶು ಬೇಡವೆಂದರೂ ಇವತ್ತು ಹಟ ಮಾಡಿ ಪಾರ್ಕಿನಲ್ಲಿ ಕುಳಿತು ಕಾಯುತ್ತಿದ್ದೆ.
ಕತ್ತಲೆ ಮೆಲ್ಲಡಿಯಿಡುತ್ತಾ ಬಂದು ಸಂಜೆಯಾಕಾಶವನ್ನು ತಬ್ಬುತ್ತಿದ್ದಳು. ಅಲ್ಲೊಂದು ಇಲ್ಲೊಂದು ಮಸುಕು ನಕ್ಷತ್ರ. ಸಾರಿ ಮೇಡಂ... ಬೆಚ್ಚಿ ಬಿದ್ದೆ. ಅವನೇ ಇವತ್ತು ಸ್ವಲ್ಪ ಬೆಳಕಿನಲ್ಲೇ ಕಾಣಿಸಿಕೊಂಡುಬಿಟ್ಟ. ಹೀಗೇ ಎಂದು ಹೇಳಲಾಗದ ವ್ಯಕ್ತಿತ್ವ. -ನಿನ್ನೆ ಅಜ್ಜನ ಮಾತುಗಳನ್ನು ನಿಮಗೆ ತಡೆದುಕೊಳ್ಳಲಾಗಲಿಲ್ಲವಂತೆ. ತೊಂದರೆಯಾಗಿದ್ದಕ್ಕೆ ಕ್ಷಮಿಸಿ. ಇವತ್ತು ಆದಷ್ಟು ಬೇಗ ನಿಮಗೆ ಕಷ್ಟವಾಗದ ಹಾಗೆ ಸರಳವಾಗಿ ವಿವರಿಸಿಬಿಡುತ್ತೇನೆ.. ನಾನು ಬೆಂಚಲ್ಲಿ ಸರಿದು ಕೂತು ಅವನನ್ನೂ ಕೂರಲು ಸೂಚಿಸಿದೆ.. ಅವನು ತಲೆಯಲ್ಲಾಡಿಸಿ, ಆಕಾಶಮಲ್ಲಿಗೆಯ ಮರಕ್ಕೆ ಆನಿಕೊಂಡು ನಿಂತು ಮಾತಾಡತೊಡಗಿದ. ನಾನು ಕಿವಿಯಾದೆ.

ನನ್ನದೊಂದು ಕನಸಿನ ಎಲ್ಲೆ ದಾಟದ ಸಾಮಾನ್ಯ ಲೋಕವಿತ್ತು. ಎಲ್ಲರಂತೆ ಗ್ರಾಜುಯೇಶನ್, ಒಳ್ಳೆ ಕಂಪನಿಯಲ್ಲಿ ಕೆಲಸ. ಅಪ್ಪ ಅಮ್ಮ ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಅದ್ಯಾರ ನೆರಳು ಬಿತ್ತೋ ಅವಳು ಕಂಡಳು. ಬೇಕೇ ಬೇಕು ಅನ್ನಿಸಿದಳು. ನಾನು ಅದುವರೆಗೂ ಮಾಡಿರದ ಸರ್ಕಸ್ಸೆಲ್ಲಾ ಮಾಡಿ ಅವಳನ್ನು ಒಲಿಸಿದೆ. ನಿಜವಾಗ್ಲೂ ಅವಳು ಆಗಷ್ಟೇ ಇಬ್ಬನಿಯಲ್ಲಿ ಮಿಂದು, ಸೂರ್ಯನ ಬೆಳಕಿಗೆ ನವಿರೇಳುತ್ತಿದ್ದ ಅರಳು ಮೊಗ್ಗಂತೆ ಇದ್ದಳು. ಹಾಲು-ಸುಣ್ಣ ಗೊತ್ತಾಗದವಳು ಅಂತ ಅವಳಮ್ಮ ಹೇಳುತ್ತಿದ್ದರು. ಅದನ್ನ ನಾನೂ ಇವತ್ತಿಗೂ ಒಪ್ಪುತ್ತೇನೆ. ಮನೆಯಲ್ಲಿ ಅಪ್ಪ ಅಮ್ಮ ಗಲಾಟೆ ಮಾಡಿದರು. ಅವರ ಮನೆಯಲ್ಲೂ ಏನು ಇಷ್ಟವಿರಲಿಲ್ಲ. ಬೆಳ್ಳುಳ್ಳಿಯೂ ತಿನ್ನದವಳು, ಮಾಂಸದಡಿಗೆಯ ಮನೆಯಲ್ಲಿ ಏನು ತಿಂದಾಳೆಂಬ ಆತಂಕ.. ಮೊಗ್ಗಿಗೆ ಅರಳುವ ಸಂಭ್ರಮ, ಬೇರಿನ ಮಣ್ಣು ಸಡಿಲಾದದ್ದು ತಿಳಿಯಲಿಲ್ಲ. ನನಗೆ ಅರಳು ಮೊಗ್ಗನು ಬೊಗಸೆಯಲ್ಲಿ ಹಿಡಿದು ನಲಿವ ಖುಷಿ, ಮೊಗ್ಗಿನ ಜೀವಸೆಲೆಯ ಸ್ಪಷ್ಟ ಕಲ್ಪನೆಯಿಲ್ಲ.. ಪ್ರೀತಿಯ ಮಂಜುತೆರೆಯ ಜೊತೆಗೆ, ಎಲ್ಲರನ್ನೂ ಎದುರಿ ಹಾಕಿಕೊಂಡು ಏನೋ ಸಾಧಿಸುತ್ತಿದ್ದೇವೆಂಬ ಹಮ್ಮಿನ ನೆರಳುಗತ್ತಲೆಯಿತ್ತು. ಅಪ್ಪ ಅಮ್ಮ ಬೆನ್ನು ತಿರುವಿದರೇನಂತೆ, ಲಗಾಟಿ ಹೊಡೆಯುವಾಗಲೂ ಜೊತೆಗೇ ನಿಲ್ಲುವ ಸ್ನೇಹಿತರು ನಮ್ಮ ದಾರಿಗೆ ದೀಪವಿಟ್ಟರು. ಪುಟ್ಟ ಮನೆ ಹಿಡಿದು, ಅವಳಿಗಿಷ್ಟವಾಗಬಹುದೆಂಬ ಅಂದಾಜಿನ ಮೇಲೆ ಸಜ್ಜು ಮಾಡಿದೆ. ಬೆತ್ತದ ಕುರ್ಚಿಗಳು, ಕಂಬಳಿ ಹಾಸಿಗೆ, ಪುಟ್ಟ ಪುಟ್ಟ ಹೂವಿರುವ ಪಿಂಗಾಣಿ ಪಾತ್ರೆ ಸೆಟ್ಟು, ಗೋಡೆಯಲ್ಲಿ ಹೂಗೊಂಚಲು ಹಿಡಿದ ಪುಟ್ಟ ಮಕ್ಕಳ ಜೋಡಿ ಫೋಟೋ, ನೀಲಿ ಬಣ್ಣದ ಕರ್ಟನ್ನು.. ಅವಳು ಕಣ್ಣ ಹನಿ ತೊಡೆದು, ಮೆಲ್ನಗುತ್ತಾ ಹೊಸಿಲು ದಾಟಿ ಬಂದಳು. ರಾತ್ರೆಗೆ ಮಿನುಗು ನಕ್ಷತ್ರ, ಬೆಳಿಗ್ಗೆ ಉದಯರವಿ, ಮಧ್ಯಾಹ್ನ ಬಿಸಿಲಿನಲ್ಲೂ ನೆರಳು, ಸಂಜೆ ರಂಗುತುಂಬಿದ ಆಕಾಶದೊಡನೆ ಬೀಸಿ ಬರುವ ತಂಗಾಳಿ... ನಾವು ತೆಗೆದುಕೊಂಡ ಯಾವ ನಿರ್ಧಾರದಲ್ಲಿ ಅಪ್ರಾಮಾಣಿಕತೆ ಇತ್ತೋ, ಹೊರಳಿದ ಯಾವ ದಾರಿಯಲ್ಲಿ ಜಾರಿಕೆ ಇತ್ತೋ, ಇಟ್ಟ ಯಾವ ಹೆಜ್ಜೆ ಟೊಳ್ಳಾಗಿತ್ತೋ, ಇವತ್ತಿಗೆ ಸರಿಯಾಗಿ ಗೊತ್ತಾಗುತ್ತಿಲ್ಲ, ಆದರೆ ಇದ್ದದ್ದು ಹೌದು ಗಟ್ಟಿಯೆಂದು ಹಿಡಿದ ಕಾಳು ಜೊಳ್ಳು.. ಅದರ ಆಘಾತ ತಡೆದುಕೊಳ್ಳದ ಪ್ರೀತಿ ಮುದುಡಿ ಹೋಗಿ, ಕತ್ತಲ ಬೆನ್ನಿಗಾತು ನಿಂತು ಕಣ್ಣೀರಿಟ್ಟಿತು. ನಾವಿಬ್ಬರೂ ಮತ್ತೆ ಸೇರಿಸಲಾಗದಂತೆ ಒಡೆದು ಹೋದೆವು.

ಚಿತ್ರಕ್ಕೆ ಫ್ರೇಮಷ್ಟೇ ಇತ್ತು. ಸ್ಕೆಚ್ಚು ಪೂರ್ತಿಯಾಗಿ ಬಣ್ಣ ತುಂಬುವುದರೊಳಗೆ ಅವಳು ಕನಸಿನ ಕ್ಯಾನ್ವಾಸಿನ ಪುಟ ತಿರುಗಿಸಿ ಅದೇ ಹೊಸ್ತಿಲಿನಿಂದ, ಕಣ್ಣು ತುಂಬಿದ ನೀರು ಕೆಳಗಿಳಿಯುತ್ತಿದ್ದರೆ, ತಿರುಗಿ ನೋಡದೆ ಹೊರಟೇ ಹೋದಳು. ಅಷ್ಟು ಪ್ರೀತಿ ಮಾಡಿದ ನಾನು ಹೊಡೆದರೆ ತಪ್ಪಾ, ಅವಳು ನಕ್ಕರೆ ಮನೆಯಲ್ಲೇ ನಗಬೇಕು ಅಂತನ್ನಿಸಿದ್ದು ಸುಳ್ಳಲ್ಲ, ನಕ್ಕರೆ ಮಲ್ಲಿಗೆಯರಳಿದಂತ ಅನುಭವ ಕೊಡುವ ಅವಳು ಹೊರಗೆ ಗುಂಪಲ್ಲಿ ನಕ್ಕರೆ, ಎಲ್ಲಿ ಕಳಕೊಂಡೇನೋ ಎಂಬ ಭಯ.. ಅವಳು ಕೆಲಸಕ್ಕೆ ಹೊರಟರೆ, ಇನ್ನು ಖರ್ಚಿಗೆ ನನ್ನ ಕೇಳಲ್ವಲ್ಲಾ, ಎಂಬ ಆತಂಕ, ನಾನು ಬೇಡದೇ ಹೋಗಿಬಿಟ್ಟರೆ ಏನು ಮಾಡಲಿ ಅಂತ ಕಳವಳ.. ಜಾಜಿ ಮಲ್ಲಿಗೆಯನ್ನ ಬಯಸಿದರಷ್ಟೇ ಸಾಲದು, ಜೋಪಾನವಾಗಿ ಹಿಡಿದಿಡುವ ನಾಜೂಕುತನ ಬೇಕು.. ನಾನು ಒಡ್ಡ. ಅವಳನ್ನ ನೋಯಿಸಿದ್ದು ಸತ್ಯ. ಆದ್ರೆ ನಾನೂ ನೊಂದೆನಲ್ಲ.. ನಂದು ಲೆಕ್ಕಾಚಾರ ಜಾಸ್ತಿ. ಬದುಕಲು ಬೇಕೇ ಬೇಕಲ್ಲ... ಏನೋ ಈಗ ಲೆಕ್ಕ ಹಾಕಿ ಏನುಪಯೋಗ.. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಬರೆದುಕೊಳ್ಳುವ ಲೀಗಲ್ ಕೌನ್ಸೆಲರ್'ಗಳ ಮುಂದೆ ನಮ್ಮ ಕನಸಿನ ಬದುಕಿನ ಪಕಳೆಗಳನ್ನು ಒಂದೊಂದಾಗಿ ಬಿಡಿಸಿಟ್ಟು, ಭಗವದ್ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುವೆನೆಂಬ ಸುಳ್ಳಾಡುತ್ತಾ, ಕಪ್ಪು ಅಕ್ಷರಗಳಿಂದ ತುಂಬಿರುವ ಬಿಳಿ ಪೇಪರಿನಲ್ಲಿ ಸಹಿ ಹಾಕುವ ಕ್ಷಣದಲ್ಲಿ ನನಗೆ ಅವಳ ಕಡೆ ತಿರುಗಬೇಕೆನಿಸಲಿಲ್ಲ. ಅವಳ ನಾಜೂಕು ಬೆರಳುಗಳು ನಡುಗುತ್ತಾ ಸಹಿ ಹಾಕುತ್ತಿದ್ದುದು ಕಣ್ಣಂಚಿನಲ್ಲಿ ಕಾಣುತ್ತಿತ್ತು. ಈಗ ಎಲ್ಲ ಮುಗಿದು ೨೦ ವರ್ಷಗಳಾಗಿವೆ. ನಮ್ಮ ದಾರಿ ಬೇರೆಯಾಗಿ, ಗುರಿ ಚದುರಿದೆ. ಆಮೇಲೆ ಮತ್ತೆ ಜೊತೆಯಾದ ಅಮ್ಮ ಅಪ್ಪನ ಆಯ್ಕೆಗೆ ತಲೆಬಾಗಿ, ಅವರ ಆಯ್ಕೆಯ ಹೆಂಡತಿ, ಮಕ್ಕಳೊಂದಿಗೆ ನನ್ನ ಸಂಸಾರ. ಇವಳು ಆಕಾಶದ ಚಿಕ್ಕೆಯಲ್ಲ, ಮನೆಯ ಗೋಡೆಯ ಭದ್ರತೆಯಲ್ಲಿ ಬೆಳಗುವ ದೀಪ.

ಎಲ್ಲಾದರೂ ಒಬ್ಬನೆ ಇದ್ದಾಗ ಸಂಜೆಗತ್ತಲಲ್ಲಿ ಹೊಳೆವ ಶುಕ್ರತಾರೆಯ ಮಿನುಗಲ್ಲಿ ಅವಳ ನೆನಪು. ಕನಸಿನ ಸಾಮ್ರಾಜ್ಯದಿಂದ ಗಡೀಪಾರಾಗಿ ಈಚೆಗೆ ಜನಜಂಗುಳಿಯಲ್ಲಿ ಬಂದು ಬಿದ್ದ ನನಗೆ, ಅವಳು ತಿರುಗಿಸಿ ಹೊರಟ ಕ್ಯಾನ್ವಾಸಿನಲ್ಲಿ ಎಂದೂ ಮೂಡದ ಚಿತ್ರದ ಬಯಕೆ. ಹೂಗನಸುಗಳ ಬೀಜವೆಂದುಕೊಂಡೇ ಬಿತ್ತಿದೆ.. ಬೆಳೆದುನಿಂತ ಬೆಂಕಿಬೆಳೆಯ ನಡುವೆ ಹೂಗೊಂಚಲನ್ನು ಹುಡುಕಿ ಸುಸ್ತಾಗಿ ಮನೆಗೆ ಹೊರಡುತ್ತೇನೆ ಹತಾಶೆಯಿಂದ ಗವಾಕ್ಷಿಯನ್ನೇ ನೋಡುತ್ತಾ.. ದಿನವೂ ಸಿಗುವ ಜನರಲ್ಲಿ ಅವಳ ಕಣ್ಣಮಿಂಚು ಹುಡುಕುತ್ತಾ, ಮನೆಯಲ್ಲಿ ಗೂಡಲ್ಲಿ ಬೆಚ್ಚಗೆ ಬೆಳಗುವ ದೀಪದ ಕಂಗಳೆದುರು ಬಯಲಾಗುತ್ತೇನೆ. ದೀಪ ಸುಡುತ್ತದೆ, ಹೊರಗೆ ರಾತ್ರಿಯ ಗಾಳಿಯಲ್ಲಿ ತಿಂಗಳನ ಮೊರೆಹೋಗುತ್ತೇನೆ, ಅವನು ನನ್ನ ನೋಡಲಾರದೆ, ಮೋಡದ ಮೊರೆಹೋಗುತ್ತಾನೆ.. ಗೊತ್ತು ನನಗೆ ಉಳಿದಿರುವುದು ದೀಪದ ಬೆಳಕಷ್ಟೇ ಅಂತ, ಆದರೂ ನಕ್ಷತ್ರದ ಆಸೆ.. ನನ್ನ ಮಿತಿಯ ನೆನಪು ಹರಡುತ್ತಾ ಗಡೀಪಾರು ಗವಾಕ್ಷಿ.. ಅದರಾಚೆಗೆಲ್ಲೋ ಅವಳ ಹೊರಳು... ಅವನ ಸ್ಪಷ್ಟ ದನಿ ಒಡೆಯಿತು, ಮುಂದೆ ಮಾತಿಲ್ಲ... ಕೆಲನಿಮಿಷಗಳ ಮೌನ ಇಬ್ಬರ ನಡುವೆ ಗಾಢವಾಗಿ ಹರಡಿತು.

ಮತ್ತೆ ಮಾತಾಡಿದ.. ಮೊನ್ನೆ ನೀವಿಲ್ಲಿ ಕುಳಿತ ಭಂಗಿ ಮೊದಲ ಬಾರಿ ಆಫೀಸಿನ ಗಾರ್ಡನ್ನಿನಲ್ಲಿ ಅವಳನ್ನು ಕಂಡ ದಿನವನ್ನ ನೆನಪಿಸಿತು. ನಿಮಗೂ ನನ್ನ ಗಡೀಪಾರು ಗವಾಕ್ಷಿ ಕಂಡದ್ದರಿಂದ ನಿಮ್ಮೊಡನೆ ಮಾತಾಡಬಹುದು ಅನ್ನಿಸಿತು. ಹಲವರುಷಗಳ ನೆನಪಿನ ಹೊರೆ ಇಂದು ಇಳಿಸಿ ಹಗುರಾಗಿದ್ದೇನೆ. ಸಹನೆಯಿಂದ ಕೂತು ಕೇಳಿದ್ದಕ್ಕೆ ಥ್ಯಾಂಕ್ಸ್ ..., ಉತ್ತರವಾಗಿ ನಾನು ಏನನ್ನೂ ಹೇಳುವ ಮೊದಲೇ ಬೆನ್ನುತಿರುಗಿಸಿ ಹೊರಟೇ ಹೋದ..

ಕೆಲನಿಮಿಷ ಕಾಲುಹಾದಿಯನ್ನೇ ನಿಟ್ಟಿಸಿದ ನಾನು ಆಕಾಶದತ್ತ ನೋಡಿದರೆ, ಗವಾಕ್ಷಿಯ ವರ್ತುಲ ಮಸುಕಾಗುತ್ತಾ ಇತ್ತು.. ಓಹ್, ಅಂಶು ಬೇಲಿಯಾಚೆಗೆ ರಸ್ತೆಯಲ್ಲಿ ಗಾಡಿ ಹಾರ್ನ್ ಮಾಡುತ್ತಾ ನನ್ನ ಕರೆಯುತ್ತಿದ್ದ.

11 comments:

Anonymous said...

ಸಿಂಧು ಅವರೆ,
ನಾನು ನಿಮ್ಮ ಬ್ಲೊಗ್ ನ ಲಿಂಕನ್ನು ೨ ತಿಂಗಳ ಹಿಂದೆ ರಾಜೇಶ್ ಅವರ ಬ್ಲೊಗ್ ನ್ ಲಿಂಕಲ್ಲಿ ನೋಡಿದೆ. ಅಂದಿನಿಂದ ನಿಮ್ಮ ಲೇಖನದ ಅಭಿಮಾನಿಯಾದೆ. ದಾರವಾಡದ ಭಾಷೆಯನ್ನು ಹಾಗೆಯೇ ಹೇಳಿದ್ದು ಭಾರೀ ಚೆನ್ನಾಗಿದೆ. ನಿಮ್ಮ ಈ ಕಥೆಯನ್ನು ಓದಿದರೆ ನನ್ನ ಪ್ರೀತಿಯ ಬಗ್ಗೆ ಹೆದರಿಕೆಯಾಗುತ್ತದೆ.

-ನಿಹಾರಿಕ

ಮಲ್ಲಿಕಾಜು೯ನ ತಿಪ್ಪಾರ said...

Nice Story Shindhu

Malli
www.nannahaadu.blogspot.com

Sharath Akirekadu said...

Hi Sindhu...
Naanobba nimma blogina niranthara oduga..aadre comment bareyuva dairya istaravarege maadirlilla.Ivattu nimma kathe barede bittisithu..Adbuthavaada niroopane ide,adeno ondu pulaka ide..odi tumbane kushi aayithu..yochane maaduva thara ide
Keep writing..will be waiting for the next one.
Thanks
Sharath.A

raju hulkod said...

Hi Sindu,
kateya bagge yeenu bareyalare. yeenu baredaru kadimeyaditeno.

idella odida mele annisuttide... noovina majalugalannu daatuwa munna, astondu husi preeti,pollu barawasegalu,nerawerada nireekshegalu,horaluwa dari darigalu,tangaliyenne maresuwa birugali, e yellavu aniwaryava.!!!??
illadiddare noovina bele, mahatwa kadimeyaditeno..

koneyadagi, maneya deepa istawayitu nanagu...

ರಾಜೇಶ್ ನಾಯ್ಕ said...

ಒಂಥರಾ ಬೇರೆ ರೀತಿಯಲ್ಲಿ ಬರೆದಂತೆ ಅನಿಸಿತು. ಉತ್ಕೃಷ್ಟ ಕನ್ನಡವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾನು ಆಗಾಗ ಎಡವುದರಿಂದ ಕೆಲವು ಪ್ಯಾರಾಗಳನ್ನು ೨ ಬಾರಿ ಓದಬೇಕಾಯಿತು. ಭಾಷಾ ಪ್ರಯೋಗ ಬಹಳ ಹಿಡಿಸಿತು. ಅಜ್ಜನ ಮಾತುಗಳನ್ನು ಕರಾರುವಕ್ಕಾಗಿ ಬಳಸಿದ್ದೀರಿ. ಆ ಪಾತ್ರ ಬಹಳ ಮೆಚ್ಚಿದೆ.

Anonymous said...

ಸಿಂಧು, ಉಸಿರು ಬಿಗಿ ಹಿಡಿದು ಪೂರ್ತಿ ಕಥೆ ಓದಿ ಮುಗಿಸಿದೆ ನೋಡಿ ... ಕಥೆಯ ಏಷ್ಟೋ ತಿರುವಿನಲ್ಲಿ ಭಯ ಆಯ್ತು ಕಣ್ರೀ... ನಾನು ಇನ್ಮೇಲೆ ಮಧು ಹತ್ರ ಸಣ್ಣ ಪುಟ್ಟ ವಿಷ್ಯಕ್ಕೆ ರಗಳೆ ಮಾಡಲ್ಲಾ... ನಂಗೆ ಗವಾಕ್ಷಿಲ್ಲಿ ಬೀಳಕ್ಕೆ ಇಷ್ಟಾ ಇಲ್ಲಾ.... :-(

-ಪೂರ್ಣಿಮಾ

jomon varghese said...

ಪೂರ್ತಿ ಲೇಖನ ಓದಿ ಮುಗಿಸಲು ಸ್ಪಲ್ಪ ಸಹನೆ ಬೇಕಾಯಿತು. ಆದರೆ ಎಲ್ಲಿಯೂ ಬೇಸರ ಎನಿಸಲಿಲ್ಲ. ಕಥೆ ಓದಿಸಿಕೊಂಡು ಹೋಯಿತು.ಚೆನ್ನಾಗಿ ನಿರೂಪಿಸಿದ್ದೀರಿ,

SuZ said...

ಸಿಂಧು,
ಈ ಬ್ಲಾಗ್ ಟೈಟಲ್ ನೋಡ್ದಾಗೆನೆ ಕುತೂಹಲ ಹುಟ್ಕಂಡಿತ್ತು. ಕೊನೇಗೂ ಓದಿ ಮುಗಿಸಿದೆ. ಇದನ್ನ ಬರೆಯುವ ಇನ್ಸಪಿರೇಷನ್ ಎಲ್ಲಿಂದ ಬಂತು? ಅಜ್ಜನ ಪಾತ್ರ ಬಹಳ ಹಿಡಿಸಿತು. ಇದೆ ಥೀಮ್ ಇರೋ ಲೇಖನಗಳನ್ನ ಓದಿದೀನಿ, ಆದರೆ ಈ ಥರ ಭಾವನೆಗಳಿರುವಂತ ಲೇಖನ ಇದೇ ಮೊದಲು. ಓದಿದ ಮೇಲೆ ೨-೩ ನಿಮಿಷ ಯೋಚಿಸಲು ಫೋರ್ಸ್ ಮಾಡತ್ತೆ.
ಸೂಪರ್, ಹೀಗೆ ಬ್ಲಾಗಗಳ ಸುರಿಮಳೆ ಮುಂದುವರೆಯಲಿ.
- ಸುಜಯ್

Manohar Bhat said...
This comment has been removed by the author.
Manohar Bhat said...

Superb, Marvelous. What can i say excect this. Ninge ellinda sikthe Ee kalpanegalu, ee shabdagalu. Just, Just Hats Off...

- Manu.

ಸಿಂಧು sindhu said...

ನಿಹಾರಿಕ,
ನಾನು ಆಡುಭಾಷೆಯನ್ನ ನನಗೆ ಗೊತ್ತಿರುವಷ್ಟು ಬಳಸಿದೆ.
ಪ್ರೀತಿಯ ಬಗ್ಗೆ ಹೆದರುವುದೇನೂ ಇಲ್ಲ ಅನ್ಸುತ್ತದೆ. ಪ್ರೀತಿ ಎಲ್ಲ ಆತಂಕ,ಹೆದರಿಕೆ,ನೋವು,ಅನ್ಯಾಯದ ಕ್ಷಣಗಳಲ್ಲಿ ನಮ್ಮ ಬೆನ್ನುಕಟ್ಟಿ ನಿಲ್ಲುತ್ತದೆ.
ಸಂಬಂಧ ಮತ್ತು ಅರ್ಥ ಮಾಡಿಕೊಳ್ಳುವಿಕೆ ಸ್ವಲ್ಪ ಸಂಕೀರ್ಣ ವಿಷಯ. ಅದು ಹೆದರಿಕೆ ಹುಟ್ಟಿಸುತ್ತದೆ ನನ್ನಲ್ಲಿ.

ಮಲ್ಲಿ,
:)

ಶರತ್,
ನೀವು ಸ್ಪಂದಿಸಿದ್ದು ಖುಷಿ ನನಗೆ.

ನಾಗರಾಜ್,
ಪ್ರಶ್ನೆ ಕಷ್ಟದ್ದು..
ಅವರವರ ಪ್ರಶ್ನೆಗೆ ಅವರೇ ಉತ್ತರ ಹುಡುಕಿಕೊಳ್ಳಬೇಕಾಗುತ್ತಲ್ಲ ಅಂತ ಪ್ರಶ್ನೆ. ಜನರಲೈಸ್ ಮಾಡೊಕ್ಕಾಗಲ್ಲ.
ಒಂದು ನಗುವಿನ ಹಿಂದೆ ಸಾವಿರ ನೋವಂತೆ. ಆಗಾಗ ನಾನು ಈ ಅನುಭೂತಿಯಲ್ಲಿ ಹಾದು ಹೋಗಿದ್ದಿದೆ.

ರಾಜೇಶ್,
ಬಯ್ತಾ ಇದ್ದೀರ.. ಕಷ್ಟದ ಓದಾಯಿತು ಅಂತ..? :)
ಅಜ್ಜ ನಂಗು ತುಂಬ ಇಷ್ಟವಾದ ಪಾತ್ರ..ಈಗ ಐದಾರು ವರ್ಷಗಳಿಂದ ಕಾಯ್ತಾ ಇದ್ದ. ಬರಿ ಬರಿ ಅಂತ.

ಪೂರ್ಣಿಮಾ
ಹೌದು ಪೂರ್ಣಿಮಾ ಗವಾಕ್ಷಿ ನಮ್ಮ ಸಣ್ಣತನಗಳನ್ನ ಹೊರಗೆ ಹಾಕಲು ಕಲಿಸಬೇಕು.

ಜೋಮನ್,
:)

ಸುಜಯ್,
ಅಂತೂ ನೀವ್ ಓದಿದ್ದೇ ದೊಡ್ ಖುಷಿ ನಂಗೆ.
ಕತೆ ಮೂಲ ಎಲ್ಲ ಕೇಳೋ ಹಾಂಗಿಲ್ಲ. ಹೇಳಕ್ಕೆ ಹೋದರೆ ಅದೇ ಇನ್ನೊಂದು ಕತೆಯಾಗ್ ಬಿಡತ್ತೆ.. :D

ಈಗ ಚಳಿಗಾಲ ಶುರುವಾಗಿದೆ. ಇನ್ನು ಕತೆಗಳ ಇಬ್ಬನಿ..

ಮನೋಹರ್,
:)

ಸ್ಪಂದಿಸಿದ ಎಲ್ಲರಿಗೂ ನನ್ನ ಸಪ್ರೀತಿ ವಂದನೆಗಳು

ಪ್ರೀತಿಯಿಂದ
ಸಿಂಧು