Monday, August 20, 2007

ಪಚ್ಚೆಕಲ್ಲು ಪಾಣಿ ಪೀಠ...

ನಾವಿಬ್ಬರೂ ಶಾಲೆ ಮುಗಿಸಿ ಬಂದು ಪಾಟಿ ಚೀಲ ಬಿಸಾಕಿ, ಕೈ ಕಾಲು ತೊಳ್ಕೊಂಡು, ಅಮ್ಮ ಕೊಟ್ಟ 'ಬಾಯಿಬಡಿಗೆ' ಗುಳುಂ ಮಾಡಿ, ಹಾಲುಟೀ ಕುಡಿದು ಓಟ ಹೊರಗೆ.. ಅಲ್ಲಿ ರಸ್ತೆಬದಿಯ ಅಂಗಳದಲ್ಲಿ, ರೇಣುಕ,ಶಿವು,ತಾರ,ಶಾಯಿನಾ,ಲಕ್ಷ್ಮಣ,ದುರ್ಗಪ್ಪ ಎಲ್ಲ ಸೇರಿ ಕತ್ತಲು ಕವಿಯುವವರೆಗೆ ಬಾಯಿಗೆ ಬಂದ ಆಟ ಆಡಿ ಮಣ್ಣಧೂಳಿನ ತೆರೆಹೊದ್ದು ಗೋಧೂಳಿಯಲ್ಲಿ ಮನೆಗೆ ಬರುವ ಪುಟ್ಟ ಕರುಗಳಂತೆ ಬಂದ ಮೇಲೆ.. ಮತ್ತೆ ಕೈಕಾಲು ತೊಳೆದು.. ಈ ಸಲ ಹಿಮ್ಮಡಿ ನೆನೆಯುವ ಹಾಗೆ ಎಚ್ಚರಿಕೆಯಿಂದ ಕಾಲು ತೊಳೆಯಬೇಕು ಇಲ್ಲದಿದ್ದರೆ ಬಚ್ಚಲ ಒಲೆಯ ಬುಡದಲ್ಲೆಲ್ಲೋ ಬೆಚ್ಚಗೆ ಕುಳಿತ ಶನಿಮಹಾತ್ಮ ನಳನ ಹಿಮ್ಮಡಿ ಕಚ್ಚಿಹಿಡಿದಹಾಗೆ ಹಿಡಕೊಂಡು ಬಿಡುತ್ತಾನೆ.. ಆಮೇಲೆ ಅಷ್ಟೆ..!

ಇಬ್ಬರೂ ಗೋಣಿಚೀಲಕ್ಕೆ ಕಾಲು ಒರೆಸುತ್ತಾ ಒಳಗೆ ಬಂದರೆ ಅಮ್ಮ ಆಗಷ್ಟೇ ದೀಪಕ್ಕೆ ಎಣ್ಣೆತುಂಬುತ್ತಾ ಹತ್ತಿಸುತ್ತಿದ್ದಾಳೆ. ಒಂದು ಊದುಬತ್ತಿ ಬೇರೆ. ಈಗ ಅಮ್ಮನದ್ದು ಮಾತಿಲ್ಲ ಸಂಜ್ಞೆ. ನಾವಿಬ್ಬರೂ ಸಿಕ್ಕಾಪಟ್ಟೆ ಒಳ್ಳೆಯವರ ಹಾಗೆ ಕೈ ಮುಗಿದು ಅಮ್ಮನ ಮುಖದ ಮೇಲೆ ಬೆಳಕಿನಾಟ ಹಚ್ಚಿರುವ ದೀಪದ ಪುಟ್ಟ ಉರಿಯನ್ನೇ ನೋಡುತ್ತಾ ನೋಡುತ್ತಾ ನಿಜವಾಗಲೂ ತುಂಬ ಒಳ್ಳೆಯವರಾಗಿಬಿಡುತ್ತಿದ್ದೆವು. ಅಮ್ಮನ ಅಹವಾಲು ಮುಗಿದು ನಮ್ಮ ಕಡೆ ತಿರುಗಿದ ಕೂಡಲೆ, ನಮ್ಮ ಬಾಯಿ ತಾನೆತಾನಾಗಿ ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ.. .ಎಂದು ಒಪ್ಪುವಾ ವಿಘ್ನೇಶ್ವರನಿಗೆ ನಮಸ್ಕರಿಸಿ, ಪಾರ್ವತಿ, ಶಾರದೆ, ಅನ್ನಪೂರ್ಣೆ, ಗುರುರಾಯರನ್ನೆಲ್ಲ ಓಲೈಸಿ ಮುಗಿಸುವಾಗ ನಾವು ಶಿರಬಾಗಿ ನಮಿಸಿ ಎದ್ದವರು ಮತ್ತೆ ವಾಪಸ್ ಕಿರಾತರಾಗಿ ಬಿಡುತ್ತಿದ್ದೆವು. ಗೂಡಿನಲ್ಲಿದ್ದ ಇಡಗುಂಜಿ ಗಣಪತಿಯಂತೂ ನಮ್ಮನ್ನು ನೋಡಿದಾಗಲೆಲ್ಲ ಕಿರುನಗು..

ಬೇಸಿಗೆ ರಜೆಯ ಆಟೋಟ್ಟಹಾಸದ ಸಂಜೆಗಳಲ್ಲಿ, ಊರಲ್ಲಿ, ಸಂಜೆಯ ಆಟ ಮುಗಿದು ಮನೆಗೆ ಬಂದು ಕಾಲ್ತೊಳೆದು ದೇವರ ಮನೆಯ ಮುಂದೆ ಅಕ್ಕನ ಜೊತೆ ತಾಳ ಹಿಡಿಯಲು ನಾವಿಬ್ಬರೂ ಕುಸ್ತಿ ಮಾಡಿ ಕೂರುವಷ್ಟರಲ್ಲಿ ಅವಳು ಒಪ್ಪಾಗಿ ಬಂದು ಕೂತು -ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ ಅಂತ ಶುರುಮಾಡುತ್ತಿದ್ದಂತೆ ನಾವು ನಮ್ಮ ಕಿತಾಪತಿ ಮರೆತು ಆ ಹಾಡಿನ ಎಳೆಯನ್ನೇ ಹಿಡಿದು ರಾಮ ಪಟ್ಟಾಭಿಷೇಕದಲ್ಲಿ ನಲಿಯುತ್ತಾ, ನಮ್ಮ ಮನೆಗಳಲ್ಲಿ ಪರಿಚಿತವಿರುವ ಎಲ್ಲ ದೇವರನ್ನೂ ಓಲೈಸಲು ವಿಧವಿಧದ ಭಜನೆಗಳನ್ನು ಗುನುಗುತ್ತಾ ಇದ್ದರೆ ಅಲ್ಲಿ ಪೀಠದ ಮೇಲೆ ದೀಪದ ಸಣ್ಣ ಬೆಳಕಿನಲ್ಲಿ ಹೊಳೆಯುವ ಎಲ್ಲ ದೇವಾನುದೇವತೆಗಳೂ, ಮನೆಯಲ್ಲಿ ಅಲ್ಲಲ್ಲಿ ಅವರವರ ಕೆಲಸದಲ್ಲಿರುವ ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಅಮ್ಮಮ್ಮ ಎಲ್ಲರೂ ಸುಪ್ರಸನ್ನರಾಗಿ ಎಂತಹ ಬಂಗಾರದ ಮಕ್ಕಳಾಗುತ್ತಿದ್ದೆವು.

ಎಲ್ಲ ಕಿರಾತಬುದ್ಢಿ, ತುಂಟತನ, ಹೊಟ್ಟೆಯುರಿ, ಎಲ್ಲ ಸಂಜೆಯ ಕತ್ತಲಲ್ಲಿ ಕರಗಿ, ಬೆಳಕಿನ ಪುಟ್ಟ ಹಾಡಿನೆಳೆ ಹಿಡಿದು ಕಿನ್ನರಲೋಕದ ದಾರಿಯಲ್ಲಿ ದೇವರ ದೇವ ವಾಸುದೇವನ ಕೊಳಲ ನೆನಪಿನಲ್ಲಿ ನಮ್ಮ ಪಯಣ.

ಮೊನ್ನೆ ಅಲ್ಲಿ ರಾಮಮಂದಿರದಲ್ಲಿ (ಇದು ಭಜರಂಗೀ ರಾಮನಲ್ಲ..! ಬಾಪೂಜೀಯ ರಾಮ) ಎಲ್ಲ ದೊಡ್ಡಮಕ್ಕಳು ಅವರವರ ಮಕ್ಕಳು ಮೊಮ್ಮಕ್ಕಳೊಂದಿಗೆ ಕೂತು ಕಮಲನಯನ ಮಾಧವಾ ಕಮಲಾನಯನ ಮಾಧವಾ.. ಅಂತ ಹಾಡುತ್ತಿದ್ದರು. ಸುತ್ತಲ ಶಬ್ಧಮಯ ಬದುಕಿನ ಅಗಾಧ ಕತ್ತಲೆಯು ನಾದಮಯ ಬದುಕಿನ ಪುಟ್ಟ ಬೆಳಕೊಳಗೆ ಕರಗುತ್ತಿತ್ತು. ದೊಡ್ಡವರ ಸಣ್ಣತನಗಳೆಲ್ಲಾ ಆ ಪುಟ್ಟಬೆಳಕಿನ ಆಪ್ತತೆ, ಸುನಾದದ ಇಂಪಿನ ಮುಂದೆ ನಾಚಿ ಹಿಂದೆಸರಿದು ಮಗುಮನಸ್ಸಿನ ವಿಶಾಲತೆಗೆ ಜಾಗಬಿಟ್ಟಿದ್ದವು. ಒಬ್ಬರು ಧರೆಯೊಳಗೆ ನಾರದ ಹಂಚಿದ ಹರಿನಾಮವನ್ನು ಉಲಿದರೆ, ಇನ್ನೊಬ್ಬರು ಹರಿನಾಮದ ಸುಧೆಯ ಹಂಚುತ್ತಿದ್ದರು, ಪುರಂದರವಿಠಲನ ಅವತಾರ ವರ್ಣಿಸುವ ಸವಿ ಉಲಿಯ ಕೊಳಲಿತ್ತು, ಎಲ್ಲರ ಮೃದು ಉಲಿಯ ದನಿಗೆ ಸಾಥಿಯಾಗಿ ತಾಳವಿತ್ತು. ಅವರು 'ತಂಬೂರಿ ಮೀಟಿದವ ಭವಾಬ್ಧಿ ದಾಟಿದವ..' ಅಂತ ಹಾಡುತ್ತಾ ಪುಟ್ಟ ಪುಟ್ಟ ನೋವಿನ ಹೊಳೆಗಳನ್ನ ಮೆದುದನಿಯ ಹಾಡು ಹೆಜ್ಜೆಗಳಲ್ಲಿ ದಾಟುತ್ತ ಹೋಗುತ್ತಿದ್ದರು.

ನಾನು, ಓದಿದ ಎಲ್ಲ ಶಾಸ್ತ್ರಗಳ ತರ್ಕ ಲೆಕ್ಕ ಹಾಕುತ್ತಾ ಮಗುವಾಗಲಾಗದೆ ಇಲ್ಲೆ ನಿಂತಿದೀನಿ. ಪುಟ್ಟ ಹೊಳೆದಾಟಲು ಹಾಡಿನ ಹರಿಗೋಲಿಲ್ಲ. ನಂಬಿಕೆಯ ದೋಣಿಗೆ ತಳವೇ ಇಲ್ಲ. ಭವಾಭ್ಧಿ ದಾಟುವುದು ಹೇಗೆ?! ಅಬ್ಧಿ ಇದೆಯೋ ಇಲ್ಲವೋ, ದಿನದಿನದ ಬದುಕಿನ ಪುಟ್ಟ ಪುಟ್ಟ ಹೊಡೆತಗಳನ್ನು ತಾಳಿಕೊಂಡು ಮುಂದೆಹೋಗಲು ಆ ಎರಡು ಪುಟ್ಟ ತಾಳಗಳು, ಎಂದೋ ಯಾರೋ ಭಾವೋದ್ದೀಪನೆಯಲ್ಲಿ ಬರೆದಿಟ್ಟ ಸರಳಸಾಲುಗಳು ಎಷ್ಟು ಗಟ್ಟಿ ಸೇತುವೆಯಾಗುತ್ತವೆಯಲ್ಲವೆ?

ಮನಸ್ಸಿನ ಕಿರಾತತನದ ಕತ್ತಲನ್ನು ಓಡಿಸಲು, ಅಮ್ಮನ ಹಾಗೆ ಬೆಚ್ಚಗೆ ಅರಳಿರುವ ಪುಟ್ಟ ದೀಪದ ಬೆಳಕಿಗೆ ಮಾತ್ರ ಸಾಧ್ಯವಲ್ಲವೇ?


ನನಗೆ ಗೊತ್ತಿಲ್ಲ. ಕತ್ತಲು ಬೆಳಕಿನ ಮಧ್ಯದಲ್ಲಿ ನಾನು ಬೆಳಕಿಗಾಗಿ ಕಾದಿದ್ದೇನೆ. ಕೈ ಹಿಡಿದು ನಡೆಸುವ ಬೆಳಕೋ, ನಾನೇ ಹುಡುಕಿಕೊಂಡು ಹೋಗಿ ಹಚ್ಚಬೇಕಿರುವ ಸ್ವಿಚ್ಚೋ ಕಾಲವೇ ಹೇಳಬೇಕು.

ನಮ್ಮ ಸಂಜೆಗಳ ತುಂಬ ಮಾಲ್ ಗಳ ಕಣ್ಣುಕುಕ್ಕುವ ಜಗಮಗ ಬೆಳಕು, ಹಾರ್ನ್, ಮತ್ತು ರಿವರ್ಸ್ ತೆಗೆಯುವ ವಾಹನಗಳ ಹಾಡು, ಸೀರಿಯಲ್ಗಳ ಟೈಟಲ್ ಹಾಡು, ರಿಯಾಲಿಟಿ ಶೋಗಳ ಶ್ರೀಕಿಂಗ್ ರಾಕ್ ಮತ್ತು ಪಾಪ್.. ಕೊನೆಯ ಪಕ್ಷ ಸುಮ್ಮನೆ ಕೂತು ಹಕ್ಕಿಪಕ್ಕಿಗಳ ಚಿಲಿಪಿಲಿ ಕೇಳಲೂ ಇಲ್ಲ. ಪಕ್ಕದ ಮನೆಯವರ ಮ್ಯೂಸಿಕ್, ರಸ್ತೆಯ ಮೇಲಿನ ಗಲಾಟೆ...

ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತೀರವು ಅಲ್ಲಿದೆ. ದಾರಿಸಾಗಲು ಭಜನೆಯ ಹರಿಗೋಲೆಲ್ಲಿದೆ?

13 comments:

Supreeth.K.S said...

ನಂಬಿಕೆ, ಶ್ರದ್ಧೆಯನ್ನು ಕಳೆದುಕೊಂಡವ ಅನಾಥನಂತಾಗುತ್ತಾನೆ. ಮರದ ಆಸರೆ ತಪ್ಪಿದ ಬಳ್ಳಿಂತಾಗುತ್ತಾನೆ.ತಾನು ತಾನಾಗಿ ಆತ ಬೆಳೆದು ನಿಲ್ಲುವ ಅನಿವಾರ್ಯತೆ ಉಂಟಾಗುತ್ತದೆ.ಅನಿವಾರ್ಯತೆಯನ್ನು ಅವಕಾಶವನ್ನಾಗಿಸಿಕೊಂಡವ ಬೆಳೆಯುತ್ತಾನೆ ಮುಗಿಲೆತ್ತರ ಮತ್ತಷ್ಟು ಆಸರೆಯಿಲ್ಲದ ಬಳ್ಳಿಗಳಿಗೆ ನೆರವಾಗುತ್ತಾ.
ಆದರೆ ಮರದ ಆಸರೆಯಲ್ಲಿ ಬೆಳೆಯುವ ಬಳ್ಳಿಗಳೆಲ್ಲವಕ್ಕೂ ಉಜ್ವಲವಾದ ನಾಳೆಯ ಭರವಸೆ ಇಲ್ಲವಲ್ಲ?

createam said...

ನೀವು "ಬಾಯಿಬಡಿಗೆ" ಅಂದಾಗಲೆ ನೀವು ಕರಾವಳಿಯವರಿರಬೇಕು ಅಂದ್ಕೊಂಡೆ. ಇಡಗುಂಜಿ ಗಣಪತಿ ಅಂದಾಗ ಇನ್ನು confirm ಆಯ್ತು. ಬರಿಯೋ style ನೊಡಿ 200% guarantee ಆಯ್ತು. ಇನ್ನು ನನ್ನ assumption ತಪ್ಪಾಗಿದ್ರೆ ನಾನು assumption ಮಾಡೋದೆ ಬಿಡೊದು ಒಳ್ಳೇದು.
ಹಳೇ ದಿನಗಳೆಲ್ಲ ಹೋಯ್ತು. ಇನ್ನು ಏನಿದ್ರು ಯಾಂತ್ರಿಕ ಬದುಕು (ಒಹ್ ನಾನೇನು ದಿನಾ ದೇವರ ಮುಂದೆ ಕೂರ್ತಾ ಇರ್ಲಿಲ್ಲ, ಆದ್ರು ಅದು ಬಾಲ್ಯದ ಒಂದು ಅಂಗ ಆಗಿತ್ತು ಅನ್ಸುತ್ತೆ).
"ನಮ್ಮ ಸಂಜೆಗಳ ತುಂಬ ಮಾಲ್ ಗಳ ಕಣ್ಣುಕುಕ್ಕುವ ಜಗಮಗ ಬೆಳಕು, ಹಾರ್ನ್, ಮತ್ತು ರಿವರ್ಸ್ ತೆಗೆಯುವ ವಾಹನಗಳ ಹಾಡು, ಸೀರಿಯಲ್ಗಳ ಟೈಟಲ್ ಹಾಡು, ರಿಯಾಲಿಟಿ ಶೋಗಳ ಶ್ರೀಕಿಂಗ್ ರಾಕ್ ಮತ್ತು ಪಾಪ್.. ಕೊನೆಯ ಪಕ್ಷ ಸುಮ್ಮನೆ ಕೂತು ಹಕ್ಕಿಪಕ್ಕಿಗಳ ಚಿಲಿಪಿಲಿ ಕೇಳಲೂ ಇಲ್ಲ. ಪಕ್ಕದ ಮನೆಯವರ ಮ್ಯೂಸಿಕ್, ರಸ್ತೆಯ ಮೇಲಿನ ಗಲಾಟೆ..."
ಬೆಂಗ್ಳೂರು...sigh!!! (ಬೆಂಗ್ಳೂರೇ ತಾನೆ, or is it my one more assumption)
Feed ಅನ್ನ readerಗೆ add ಮಾಡ್ದೆ. ಸಮಯ ಸಿಕ್ಕಾಗ ಹಳೇ postಗಳನ್ನ ಒದ್ತೀನಿ.

Unknown said...

ಚಿಕ್ಕವರಿದ್ದಾಗಿನ ಕಿರಾತನದ ಹಿಂದೆ ಇದ್ದ ಮುಗ್ಧತೆ, ತುಂಟತನದ ಹಿಂದೆ ಇದ್ದ ನಿಷ್ಕಲ್ಮಶ ಮನಸ್ಸು ಎಲ್ಲಾ ಹೋಗಿ ದೊಡ್ಡವರ ಪ್ರೌಢಿಮೆ ಹಿಂದಿರುವ ಕಿತಾಪತಿ ಬುದ್ಧಿ, ಗಂಭೀರತೆಯ ಹಿಂದಿರುವ ಅಹಂಕಾರ ಆಗೋಷ್ಟು ಹೊತ್ತಿಗೆ ದಡಕ್ಕೆ ಕಟ್ಟಿದ್ದ ಹರಿಗೋಲು ಯಾವಾಗಲೋ ಹಳೆ ಹಗ್ಗ ಕತ್ತರಿಸಿಕೊಂಡು ಎಲ್ಲೋ ಕಳೆದು ಹೋಗಿರುತ್ತದೆ. ದಡ ದಾಟಿದ ಮೇಲೆ ಹರಿಗೋಲಿನ ಹಂಗ್ಯಾಕೆ, ಈಗ ಎಲ್ಲಾ ಚೆನ್ನಾಗಿದೆ ಎಂಬ ಭಂಡ ಧೈರ್ಯದಲ್ಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೆ ಕಷ್ಟ ಬಂದಾಗ ಹರಿಗೋಲಿನ ನೆನಪಾಗಿ ಅದನ್ನು ಹುಡುಕಿಕೊಂಡು ಅಲೆಯ ಬೇಕಾಗುತ್ತದೆ.

ಪ್ರತಿಯೊಬ್ಬರ ಜೀವನದಲ್ಲೂ ಬರುವ ಈ ಸಮಸ್ಯೆಯನ್ನು ಸೊಗಸಾಗಿ ವರ್ಣಿಸಿದ್ದೀರಿ. ತುಂಬಾ ಧನ್ಯವಾದಗಳು.

ಹರಿಗೋಲನ್ನು ಸದಾ ನಮ್ಮೊಂದಿಗೆ ಕಟ್ಟಿಹಾಕುವ ಹಗ್ಗ ಯಾವುದಾದರು ಇದೆಯೆ? ಅದು ಭಕ್ತಿಯೆ? ಪ್ರೀತಿಯೆ?

Tina said...

ಸಿಂಧು,
ಸಾಧಾರಣವಾಗಿ ಕನ್ನಡವನ್ನು ನಾಗಾಲೋಟದಲ್ಲಿ ಓದುವ ನನ್ನನ್ನು ಸ್ವಲ್ಪ ಹೊತ್ತಿನವೆರೆಗೆ ಜೀನುಹಾಕಿ ನಿಲ್ಲಿಸಿದ್ದು ನಿನ್ನ ಬರಹ. ಜರ್ಮನ್ ಸಾಹಿತ್ಯದಲ್ಲಿ ನೀನೀಗ ಬರೆದಿರುವುದನ್ನ ’buildangsroman' ಅಂದ್ರೆ ಬಾಲ್ಯವನ್ನ ದಾಟಿ ಪ್ರೌಢಿಮೆ ಬೆಳೆವ ವರ್ಣನೆ ನೀಡುವ ಸಾಹಿತ್ಯ ಅಂತಾರೆ. ಕಾದಂಬರಿಗಳಿಗೆ ಅನ್ವಯಿಸುವ ಈ ಪದ ನಿನ್ನ ಈ ಸೊಗಸಾದ ಬರಹಕ್ಕು ಅನ್ವಯಿಸುತ್ತೆ. ಒಟ್ಟಿನಲ್ಲಿ ಓದಿದ್ ಮೇಲೆ ಏನೊ ಸಂತಸ, ವಿಸ್ಮರಣೆ, ಹಳಹಳಿ.. ಎಲ್ಲ ಆವರಿಸಿದಂತಿದೆ..

Anonymous said...

"bayabadu' nenapaagi aayi nenapadalu. aayi nenapaagi ooru nenapayitu. ooru nenpaagi... A nice write up.
-Parameshwar Gundkal

VENU VINOD said...

ಸಿಂಧು,
ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತೀರವು ಅಲ್ಲಿದೆ. ದಾರಿಸಾಗಲು ಭಜನೆಯ ಹರಿಗೋಲೆಲ್ಲಿದೆ?
ತಲೆಬಿಸಿ ಎಬ್ಬಿಸುವ ಪ್ರಶ್ನೆ. ಒಳ್ಳೆಯ ಬರಹ. ಆದ್ರೆ ಭಜರಂಗಿಗಳ ರಾಮ, ಬಾಪೂಜಿ ಕ್ಲಾಸಿಫಿಕೇಶನ್ ಯಾಕೆ? ರಾಮ ಎಷ್ಟಾದರೂ ರಾಮನೇ.

Suma Udupa said...

Naavu sannavariruvaaga helida "benaka benaka ..." vannu nenapu maadikottiri... Nija bhajane maaduvudu, ellaru seeri oota maaduvudu ella tumba sogasu. eega maadalu time illa ... :(

Shree said...

ಪಚ್ಚೆಕಲ್ಲು ಪಾಣಿಪೀಠದ ಸುತ್ತಲ ಹಿತವಾದ ಬೆಳಕಿನ ತೀರ ನಿಮ್ಮೊಳಗೇ ಇದೆ ಅಂದುಕೊಂಡರೆ ಸರಿ, ಆ ಬೆಳಕು ಬದುಕಿನ ದಾರಿ ಸಾಗಿಸಬಹುದೇನೋ, ಅಲ್ವಾ...

(ಆದ್ರೂ ನಾವು ಅನ್ಕೊಳ್ಳೋದಕ್ಕೂ ಇರೋದಕ್ಕೂ ವ್ಯತ್ಯಾಸ ಇರ್ತದೆ, fact is a fact is a fact always...)

ಸಿಂಧು sindhu said...

ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.ಕೂಡಲೇ ಪ್ರತಿಸ್ಪಂದಿಸಲಾಗಲಿಲ್ಲ ಕ್ಷಮಿಸಿ.

ಸುಪ್ರೀತ್,
ತಾನೇ ತಾನಾಗಿ ಬೆಳೆದು ನಿಲ್ಲುವ ಅನಿವಾರ್ಯತೆಯಲ್ಲಿ ಬೇರೂರಿ ಬೆಳಗುವ ಜೀವಗಳು ಕೆಲವೇ ಕೆಲವು. ನನ್ನ ಬರಹದ ಉದ್ದೇಶ ಧಾರ್ಮಿಕತೆ ಅಥವಾ ಸಂಜೆಯ ಭಜನೆಯ ಅವಲಂಬನೆಯಲ್ಲ. ಈ ಬಗೆಯ ಆಚರಣೆಗಳು ಹೇಗೆ ಬದುಕಿಗೊಂದು ಶಿಸ್ತು ಮತ್ತು ಶ್ರದ್ಢೆಯನ್ನು ಸಾಮಾನ್ಯವಾಗಿ ತುಂಬುತ್ತವೆ ಎಂಬ ಅಚ್ಚರಿ. ಹಳಹಳಿಕೆ ಅಲ್ಲ. ಮತ್ತೆ there are exceptional casess always.. ಬಳ್ಳಿ ಮರ ಕಾನ್ಸೆಪ್ಟ್ ಚೆನ್ನಾಗೇನೋ ಇದೆ. ಬದುಕು ಇವೆಲ್ಲಕ್ಕಿಂತ ತೀರ ಭಿನ್ನ ಪಯಣ. ಪ್ರತಿಯೊಬ್ಬರಿಗೂ.

ಕ್ರಿಯೇಟ್-ಟೀಮ್
:)
ನೀವು ನಿಮ್ಮ ಊಹೆ ಬಿಡೋದೇನೋ ಬೇಡ.ಇನ್ನೂ ಸ್ವಲ್ಪ ನಿಖರವಾಗಿ ಮಾಡಿ ಅಷ್ಟೆ. ನಾನು ಕರಾವಳಿ ಮತ್ತು ಉತ್ತರಕನ್ನಡ ಜಿಲ್ಲೆಗಳ ತಂಗಿ ಶಿವಮೊಗ್ಗೆಯ ಮಗಳು... :) ನನ್ನ ಊರು ಸಾಗರ.
ಹಳೇದಿನಗಳೆಲ್ಲ ಹೋಗಲೇಬೇಕು ಅದಕ್ಕೆ ಹಳಹಳಿಕೆ ಬೇಡ. ಹಳೆಯ ದಿನಗಳ ಅರ್ಥಗಳನ್ನ ಹೊಸದಿನಗಳ ಫ್ರೇಮಿಗೆ ತುಂಬಿದರೆ ಹೊಸಚಿತ್ರ, ಹೊಸಬೆಳಗು..

ಪರೇಶ್,
ನಿಮ್ಮ ಮಾತು ನಿಜ. ನನ್ನ ಬರಹದ ಭಾವವನ್ನು ಸ್ಪಷ್ಟವಾಗಿ ಹಿಡಿದಿದ್ದೀರಿ.
ಹರಿಗೋಲನ್ನು ಸದಾ ನಮ್ಮೊಂದಿಗೆ ಇಡುವ ಸಾಧನ - ನನಗೂ ಗೊತ್ತಿಲ್ಲ. ಪರಿಪೂರ್ಣತೆಯೆ ಇದ್ದಿದ್ದರೆ ಮನುಷ್ಯ ಮುಂದೆ ಬದುಕು ಸಾಗಿಸುವ ಅವಶ್ಯಕತೆಯೇ ಇಲ್ಲ ಅಲ್ವಾ?
ನಂಬಿಕೆ ಮತ್ತು ಜೀವನಪ್ರೀತಿ ಎಷ್ಟು ಗಟ್ಟಿಯಾಗಿದೆಯೋ ಅಷ್ಟು ಗಟ್ಟಿ ಹರಿಗೋಲಾಗಬಹುದು ಅನ್ನಿಸುತ್ತೆ.

ಶಶಿ,
ನಿಮ್ಮ ಮೆಚ್ಚುಗೆಗೆ ಖುಷಿಯಾಯಿತು.

ಪರಮೇಶ್ವರ್,
ನನಗೆ ಅವತ್ತು ಶನಿವಾರ ನೋಡಿದ ಭಜನೆಯಿಂದ ಈ ಎಲ್ಲ ನೆನಪಾಗಿ ಪದಗಳು ಒಡಮೂಡಿದವು. ನಿಮಗೂ ನಿಮ್ಮ ಬಾಲ್ಯ ಮನೆ, ಅಮ್ಮ ಊರು ನೆನಪಾಗಿದ್ದು ಖುಷಿ ನನಗೆ.

ವೇಣು,
ನನ್ನ ತಲೆಯೂ ಬಿಸಿಯಾಗಿದೆ.. :)
ನಮ್ಮ ದೇಶದ ಎಲ್ಲ ಧಾರ್ಮಿಕತೆ ಮತ್ತು ನಂಬುಗೆಗಳ ಕಡೆ ನನಗೆಷ್ಟು ಗೌರವ ಇದೆಯೋ ಅದಕ್ಕಿಂತ ತೀವ್ರವಾದ ಅಸಹನೆ ನನಗೆ ಮೂಲಭೂತವಾದದ ಬಗೆಗೆ ಇದೆ. ನನ್ನ ಕಲ್ಪನೆಯ ದೇವರು,ನಂಬಿಕೆ ಆಚರಣೆ ಮತ್ತು ಗೌರವವನ್ನ ಮೂಲಭೂತವಾದಿಗಳ ಜತೆ classify ಮಾಡಲು ನಾನು ತಯಾರಿಲ್ಲ.. i have a closed/possessive mindset in this regard.. :)

ಸುಮ,
ಧನ್ಯವಾದಗಳು.

ಶ್ರೀ,
ಪಚ್ಚೆಕಲ್ಲಿನ ಪಾಣಿಪೀಠದ ಬೆಚ್ಚನೆ ಬೆಳಕಿನ ತೀರ ಎಲ್ಲರಲ್ಲೂ ಇರುತ್ತದೆ.ಒಳನೋಟ ಪಯಣಗಳೂ ದೂರತೀರದ ಹಾದಿ..ಅದನ್ನ ನೋಡಿ ಅನುಭವಿಸುವ ಪಯಣದ ಬಗ್ಗೆ ನನ್ನ ಬರಹ. n ofcourse fact is a fact always.. :)

Anonymous said...

ಪಚ್ಚೆ ಕಲ್ಲು ಪಾಣಿ ಪೀಠ... ನಿಜವಾಗಿಯೂ ಖುಷಿ ಕೊಟ್ಟಿತು. ನೀವು ಬದುಕನ್ನು ನೋಡುವ ರೀತಿ ಭಿನ್ನ. ಮತ್ತು ಆ ವಿವೇಕ (ಭಜರಂಗಿ ರಾಮನಲ್ಲ ಎಂಬುದನ್ನು ಹೇಳಬೇಕು ಎಂಬ)ಕೂಡ ಸೂಕ್ಷ್ಮ ಗ್ರಹಿಕೆಗೆ ನಿದರ್ಶನ. ಥ್ಯಾಂಕ್ಯೂ...
ಹೊಸದೇನು ಬರೆದಿಲ್ಲವಾ...?

Unknown said...

ur work moves 4m simple to sublime..odidamEle namma sthitiya bagge yenO kasivisi

malnadhudgi

Sree said...

lovely piece! thumbaa saalugaLu ishTavaadvu... n nimma possessiveness and the resulting irritation wt the fundamental school - adu yaako ondondsala gender specific-a annisibiDutte, given that many men dont see the necessity to differentiate between the two!

ಸಿಂಧು sindhu said...

gShashi, Shree mattu malnad hudugi,
kshamisi reply madade iddiddakke.
vandanegaLu.


matte sigoNa

preetiyinda
sindhu