Monday, December 4, 2017

ಸಂಜೆ - ಒಂದ್ಕಥೆ, ಮತ್ತೊಂದ್ಕಥೆ, ಮತ್ತು ಕವಿತೆ...

ಡಿಸೆಂಬರ್ ತಿಂಗಳ ಮಯೂರದಲ್ಲಿ ಎರಡು ಕಥೆ ಓದಿದೆ.
ಒಂದು ಶ್ರೀ ರಾಜು ಹೆಗಡೆಯವರ ಕಥೆ - ತಳಿಯ ನೆರಳು
ಇನ್ನೊಂದು ಶ್ರೀಮತಿ ಶುಭಾ ಎ.ಆರ್‍. ಅವರ ಕಥೆ - ಚೂರು ಭೂಮಿ, ತುಣುಕು ಆಕಾಶ.
ಎರಡೂ ನನ್ನನ್ನು ತುಂಬ ಕಲಕಿದ ಕಥೆಗಳು. ತಳಿಯ ನೆರಳು ಕಥೆಯಲ್ಲಿ ಒಂದು ಜೊತೆ ಅಪ್ಪ-ಮಗ ಇದ್ದಾರೆ. ಚೂರು ಭೂಮಿ ತುಣುಕು ಆಕಾಶ ಕಥೆಯಲ್ಲಿ ಒಂದು ಜೊತೆ ಅಪ್ಪ-ಮಗ ಇದ್ದಾರೆ.
ಎರಡೂ ಕಥೆಗಳಲ್ಲಿ ಆವರಿಸುವ ಹಿರಿತನ, ಕೈಕೊಡವುವ ಮಗುತನ, ಹೊಸ ತುಡಿತ, ಅದೇ ಹಳೆ ದುಡಿತ, ಜಾರುದಾರಿ...ಏರುದಾರಿ ಎಲ್ಲ ಬೇರೆ ಬೇರೆ ಸ್ತರಗಳಲ್ಲಿ ಚಿತ್ರಿತವಾಗಿವೆ. 
ರಾಜು ಹೆಗಡೆಯವರ ಕಥೆಯ ಅಪ್ಪಮಗ - ಚಿಕ್ಕ ಊರಿನ ಅಥವಾ ದೊಡ್ಡ ಹಳ್ಳಿಯ ಸ್ವಲ್ಪ ಹಳೆ ಕಾಲದ ಅಪ್ಪ ಮತ್ತು ಈ ಕಾಲದ ಮಗ ಗೆಟಪ್ಪಿನವರು. ಅಲ್ಲಿನ ಹಳಹಳಿಕೆ, ಸಾಧ್ಯತೆ, ಅರಾಜಕತೆ, ಕುಸುಬಿಷ್ಟಿ ಎಲ್ಲವನ್ನೂ ಕಥೆ ತುಂಬ ಚೆನ್ನಾಗಿ ಮನಸ್ಸಿಗೆ ಹೊಗಿಸುತ್ತದೆ.
ಹಿಡಿದಿಟ್ಟುಕೊಳ್ಳುವಿಕೆ. ಜಬರ್ದಸ್ತು.ಅಸಹಾಯಕತೆ, ನೋಡಿದ್ಯಾ ನನ್ ಕಾಲ ಬಂತು ಎಂಬ ಭಾವ, ಮತ್ತು ಬಿಟ್ಟುಕೊಡುವಿಕೆ ಇದನ್ನ ಹೆಗಡೆಯವರು ತುಂಬ ಸಂಯಮದಿಂದಲೂ ಆದರೆ ಅಷ್ಟೆ ಪ್ರೀತಿಯಿಂದಲೂ ನೇಯ್ದಿದ್ದಾರೆ. ಜಬರಿಸಿಕೊಳ್ಳುವುದಕ್ಕೆ ಅಭ್ಯಾಸವಾಗಿದ್ದ ಮನಸ್ಥಿತಿಯ ಹೊಸ ತಲೆಮಾರು ತಾನೆ ಸವಾರಿ ಮಾಡುವ ಸಮಯದಲ್ಲಿ ಹೇಗೆ ತಡಬಡಾಯಿಸುತ್ತದೆ... ಸಹಜವಾಗಿ ತನ್ನದಾದ ಯಜಮಾನಿಕೆಯಲ್ಲಿಯೂ ಯಾಕೆ ಗಿಲ್ಟಿನಲ್ಲಿ ನರಳುತ್ತದೆ ಎನ್ನುವುದು ಬಹುಶಃ ತಲೆಮಾರುಗಳ ತಳಮಳ. ಇದು ಚೆನ್ನಾಗಿ ವ್ಯಕ್ತವಾಗಿದೆ.
ಶುಭಾ ಅವರ ಕಥೆಯ ಅಪ್ಪ-ಮಗ ಮಹಾನಗರದ ಚಟ್-ಪಟ್ ನೆಟ್ ಜನಜೀವನದವರು. ಹೊಸ ತುಡಿತಕ್ಕೆ ಇಷ್ಟಿಷ್ಟೇ ಬಿಟ್ಟುಕೊಡುತ್ತ ಅಭ್ಯಾಸ ಮಾಡಿಕೊಳ್ಳುವ ಹಿರಿತಲೆಗಳು, ಒಳಗೊಳಗೆ ಬಿಟ್ಟುಕೊಟ್ಟ ನವೆತ, ಬಿಟ್ಟುಕೊಡುವುದನ್ನೇ ಬಯಸಿದ್ದರೂ... ಹಗ್ಗವಿಲ್ಲದೆಯೂ ಕಂಬಕ್ಕೆ ಕಟ್ಟಿದ ಹಾಗೆಯೇ ಓಡಿಯಾಡುವ ಕಿರಿತಲೆಗಳು, ಚಿಮ್ಮುನೆಗೆತದ ಬದುಕಿನಲ್ಲಿ ಚಿಮ್ಮುಹಲಗೆಯನ್ನ ಒದೆಯಲೇಬೇಕಾದ ಅನಿವಾರ್ಯತೆಯ ಗಿಲ್ಟಿನಲ್ಲಿ ನರಳುವ ಅದೇ ತಲೆಮಾರುಗಳ ತಳಮಳ....ಇಲ್ಲಿದೆ. ಪುಟ್ಟ ವಿವರಗಳು ದಟ್ಟ ಚಿತ್ರಣ.
ಈ ಎರಡೂ ಕಥೆಗಳಲ್ಲಿ ವಿವರಗಳ ಕಟ್ಟೋಣಕ್ಕೆ ಮಗನ ಮತ್ತು ಅಮ್ಮನ ನೆರವಿದೆ. ಅಮ್ಮನ ಮಾತು, ಬದುಕು, ನಡವಳಿಕೆಗಳಲ್ಲಿ ಅಪ್ಪನ ಹಲಮುಖಗಳ ಅನಾವರಣ ಶುಭ ಕಥೆಯಲ್ಲಿ ಚೂರು ಜಾಸ್ತಿ ಇದೆ.
ಹಾಗಾದರೆ ಒಂದು ಹದಾ ಟ್ರಾನ್ಸಿಷನ್ ಮಕ್ಕಳ ಮತ್ತು ಅವರ ತಂದೆ ತಾಯಿಯರ ನಡುವೆ ಸಾಧ್ಯವೆ ಇಲ್ಲವೆ. ಇವರು ಅಥವಾ ಅವರು ಹಳಹಳಿಸುತ್ತಲೆ ಇರಬೇಕೆ ಅಂತ ತುಂಬ ಯೋಚನೆಯಾಗಿದೆ. ಯಾಕೆಂದರೆ ಇವರ ಕಥೆಗಳಲ್ಲಿ ಬರಿಯ ನಾಲ್ಕು ಪುಟಗಳಿಲ್ಲ. ನಮ್ಮ ಸುತ್ತ ಸಂಭವಿಸುತ್ತಿರುವ ಬದುಕಿದೆ. ಅದೇ ರೂಪಾಂತರದ ಪರಿವರ್ತನೆಯ ನೋವು ಎಳೆ ಬಿಚ್ಚಿಕೊಳ್ಳುತ್ತಿದೆ.
ನಾನು ಕಥೆ ಹೇಳುವುದಿಲ್ಲ. ನೀವು ಓದಿ. ಡಿಸೆಂಬರ್ ತಿಂಗಳ ಮಯೂರದಲ್ಲಿ. Raju Hegde ರಾಜು ಹೆಗಡೆ ಮತ್ತು Shubha A R Nadig ಶುಭಾ, ಅವರೇನಾದರೂ ಕಥೆಯ ಟೆಕ್ಸ್ಟ್ ಇದ್ದು ಶೇರ್ ಮಾಡಿದರೆ ಜಾಸ್ತಿ ಜನ ಓದಬಹುದೇನೋ.
ಹಾಗೆಯೇ ಸುಬ್ರಾಯ ಚೊಕ್ಕಾಡಿಯವರ ಕವಿತೆಗಳ ಬನದಲ್ಲಿ ಸುತ್ತುತ್ತಿದ್ದೇನೆ. ಅಲ್ಲೊಂದು ಕವಿತೆ ಬದುಕಿನಲ್ಲಿ ಆಗದೆ ಇರುವುದನ್ನು ಹೀಗಿದ್ದರೆ ಎಷ್ಟು ಚೆನ್ನ ಎಂದು ಹೇಳುವಂತೆ ಸಂಜೆಬೆಳಕಿನಲ್ಲಿ ಹೊಳೆಯುತ್ತಿದೆ. ಇದನ್ನು ಓದುತ್ತಾ... ಸಂಜೆಬೆಳಕಿನಲ್ಲಿ ಇನ್ನೇನು ನೆಲಕ್ಕೊರಗಲಿರುವ ಮರದಂತೆ ಕಾಯುತ್ತಿರುವೆ ಎಂದು ಹೇಳುತ್ತಿದ್ದ ಪೆಜತ್ತಾಯ ಅಂಕಲ್ ನೆನಪಾಗುತ್ತಿದೆ.
ಸಂಜೆ
by ಸುಬ್ರಾಯ ಚೊಕ್ಕಾಡಿ
------------------------------------
ಬಿಸಿಲ ಝಳಕ್ಕೆ ದಣಿದ ಮರ
ಗಾಳಿ ಬೀಸಿಕೊಳ್ಳುತ್ತಿದೆ
ಎಲೆಗಳನ್ನಲುಗಿಸಿ
ಹಣ್ಣಾದ ಎಲೆ
ಸಣ್ಣಗೆ ಸದ್ದು ಮಾಡುತ್ತಾ
ಅವಕಾಶದಲಿ ತೇಲುತ್ತಾ
ಸರಿಯುತ್ತಿದೆ ನೆಲದ ಕಡೆಗೆ
ಬೇಗುದಿಯ ಮರೆಸಿ
ಹೂಮುತ್ತನೊತ್ತಲು.
ಹಕ್ಕಿಗಳ ಗಂಭೀರ ಚರ್ಚೆ
ನಡೆದೇ ಇದೆ
ನಾಳೆಗಳ ಹೆಕ್ಕಲು
ಇಳಿಯುತ್ತಿದ್ದಾನೆ ಸೂರ್ಯ
ಬೆಟ್ಟದ ಮರೆಗೆ
ಮಲಗಿರುವ ಕೊಳದ ಕಡೆಗೆ
ಪರಿತಾಪ ಕಳೆಯಲು
ತೆರೆದೇ ಉಳಿದ
ನಿಷ್ಪಂದ ನೆಲದಲ್ಲೀಗ
ಲಘು ಕಂಪನ-
ತಳದ ನೀರಲ್ಲಿ
ಕಿರುತೆರೆಗಳುಂಗುರ ಸೃಷ್ಟಿ
ಇದೀಗ ಬೆಳದಿಂಗಳಿಗೆ ಆಹ್ವಾನ
ಮೌನದ ಕುಂಭ ಹೊತ್ತು
ಕಾಯುತ್ತಿದೆ ಗೋಧೂಳಿ ಲೋಕ.
1 comment:

sunaath said...

ತಲೆಮಾರುಗಳ ಈ ತೊಳಲಾಟಕ್ಕೆ ಮತ್ತೊಂದು ಉತ್ತಮ ಕಥೆಯನ್ನು ಹೆಸರಿಸಲೇ ಬೇಕು : ಸಿಂಧು ರಾವ್ ಟಿ. ಅವರು ಬರೆದ ಕಥೆ, ‘ಸ್ನಾನ’!