Tuesday, August 16, 2016

ನಿರಂತರ

ಪುಟ್ಟ ಕಾಲ್ಗಳು
ಮೊಗ್ಗು ಬೆರಳುಗಳು
ಚೂರ್ ಚೂರೇ ಅರಳುತ್ತಿರುವ ಹೂದುಟಿಗಳು
ಮೆತ್ ಮೆತ್ತಗಿನ ಗಲ್ಲ, ಕೆನ್ನೆ
ನಕ್ಷತ್ರಹುದುಗಿದ ಆಕಾಶ ಕಣ್ಗಳು
ಎತ್ಕೋ ಎಂದು ಗೋಗರೆಯುವ
ನಿದ್ದೆ ಮರುಳ ಹಾಲ್ ಹಸುಳೆ
ಹುಟ್ಟಿದಾಗ ಅಮ್ಮ ಹುಟ್ಟುತ್ತಾಳೆ
ಮಡಿಲಿನಿಂದ ನೆಲಕ್ಕೆ ಕಾಲ್ ಚಿಮ್ಮುವಾಗ
ಹೊಸಿಲೆಡವಿ ಅಂಗಳದಿ ಆಟದ ರಂಗೋಲಿ ಬಿಡಿಸುವಾಗ
ಶಾಲೆಯಲಿ ಗೆಳೆಯರೊಡನೆ ಹೊಸ ಬಂಧ ಕಟ್ಟುವಾಗ
ಬಿದ್ದಾಗ ಎದ್ದಾಗ ಅಳುವಾಗ ನಗುವಾಗ
ತಮ್ಮನೊಡನೆ ಜಗಳ ಆಡುವಾಗ, ತಮ್ಮನ ಬೆನ್ ಕಟ್ಟುವಾಗ
ಊಟದ ರುಚಿ ಹುಡುಕುವಾಗ
ಸ್ಟೋವ್ ಹಚ್ಚಲು ಕಲಿತಾಗ
ನನಗೆಲ್ಲ ಗೊತ್ತು ಬಿಡು ಎಂದು ಮೊಗದಿರುವುವಾಗ
ಮಗು ಮೊಗ್ಗು ಅರಳಿ ವ್ಯಕ್ತಿಯ ಕಾಯಿ ಕಟ್ಟುವಾಗ
ಹಿನ್ನೆಲೆಯಲಿ ಅಮ್ಮ ಪೊರೆಯುತ್ತ, ಸಂಭಾಳಿಸುತ್ತ
ನೋಯುವ ಸೊಂಟ ತಿಕ್ಕುತ್ತ, ಉಸ್ಸೆನ್ನುತ್ತ
ನಗುನಗುತ್ತ ಕಣ್ಬನಿ ಒರೆಸಿಕೊಂಡು
ತನ್ನೆದುರಿನ ಮಿಂಚಿನ ಪ್ರತಿಫಲನವಾಗುತ್ತ
ದಿನದಿನವೂ ಹುಟ್ಟುತ್ತಾಳೆ
ಹೊಸ ಪಾಠ ಹೊಸನೋಟ
ಬಿಡುವಿರದ ಓಟ
ಪಯಣಿಸುತ್ತಲೇ ವಿರಾಮ
ನೆರವಿಗಿರುವನು ಸುಧಾಮ
ಬಿಸಿಹಾಲಿನ ಬಟ್ಟಲಂತ ಪ್ರೀತಿ
ತಣಿದು ತಾಯ್ತನದ ಹೆಪ್ಪಿಳಿದ
ಘನ ಮೊಸರು ಕಡೆಯುತ್ತಲೇ ಇರುವ
ಅಮ್ಮನ ಮಡಿಕೆ ತುಂಬ ನವನೀತ
ತಂಪಿಗೆ ಮಜ್ಜಿಗೆ,
ಬಿಸಿಯೂಟಕ್ಕೆ ಮರಳು ಮರಳಾದ ತುಪ್ಪ
ಖಾಲಿ ಮಡಕೆ ಬೋರಲು ಬೀಳುವಾಗ
ಪುಟ್ಟ ಪುಟ್ಟ ಕಾಲ್ಗಳಿಗೆ ದೈತ್ಯ ಜಿಗಿತ
ರೆಕ್ಕೆ ಮೂಡಿ ಹಾರಾಟ
ಅವಳ ಆಕಾಶದಲ್ಲಿ ಮಿನು ಮಿನುಗುವ ನೆನಪಿನ ನಕ್ಷತ್ರಗಳಸಂ‍ಖ್ಯಾತ

ಗಿಬ್ರಾನು, ಡೀವಿಜಿ, ವ್ಯಾಸ, ವಾಲ್ಮೀಕಿ, ಮಾರ್ಕ್ ಟ್ವೈನು, ಶೇಕ್ಸ್ ಪಿಯರ್ರು
ಎಲ್ಲರ ನೆರಳಲ್ಲಿ ಹಾದು ಬಂದ ಹೂಚೆಲ್ಲಿದ ಹಾದಿ
ಹೂವಿನ ಕಾಲಕ್ಕೂ ಮುಂಚಿನ ಶಿಶಿರದಲ್ಲಿ ಎಲೆಯುದುರಿ
ಚೈತ್ರದಲ್ಲಿ ಚಿಗುರೊಡೆಯುವ ನೋವಿನಪುಳಕ
ನಿರ್ಗಮನಕ್ಕೆ ಸಿದ್ಧವಾಗಿಯೇ ಕಣ್ಣನ ಪೊರೆಯುವ ಗೋಕುಲ.

ಅಮ್ಮ ಹುಟ್ಟುತ್ತಾಳೆ. ಮಗುವಿನಲ್ಲೂ, ಅಮ್ಮನಲ್ಲೂ
ಅವಳನ್ನ ಅನುಭವಿಸುವ ಸುತ್ತೆಂಟು ಸಮಷ್ಟಿಯಲ್ಲೂ
ಹುಟ್ಟುತ್ತಲೇ ಇರಬೇಕು. ನದಿ ಹರಿವ ಹಾಗೆ.
ಸಣ್ಣ ವ್ಯತ್ಯಾಸವೆಂದರೆ ಇವಳು ವೃತ್ತಾಕಾರ
ಕಿವಿಗೆ ಬರಿಯ ಸಮುದ್ರ ಘೋಷ
ಹೊಂದದೆಯೂ ಹೊಂದುವ ಗುಣವಿಶೇಷ
ಮಡಿಕೆ ಮಣ್ಣು ಸೇರಲು ನಿಶ್ಯೇಷ ನಿರಂತರ.

2 comments:

sunaath said...

ಕುವೆಂಪು ಸಹ ಈ ‘ತಾಯ್ತನ’ವನ್ನು ಅನುಭವಿಸಿದ್ದಾರೆ: ‘ತೇಜಸ್ವಿ, ನೀನು ಎರಡು ವರ್ಷದ ಮಗು ; ನಾನು ಎರಡು ವರ್ಷದ ತಂದೆ.’ ಆದರೆ ನಿಮ್ಮ ಕವನವು ಇನ್ನೂ ಮುಂದುವರೆದಿದೆ...ಮಡಕೆ ಮಣ್ಣಾಗುವವರೆಗೆ! ಬದುಕನ್ನು ಕೆಲವೇ ಸಾಲುಗಳಲ್ಲಿ ಮಿಂಚಿಸಿದ್ದೀರಿ!

Sushrutha Dodderi said...

Lovely! :-)