Monday, April 21, 2014

ಸಾಂತ್ವನ

ನೀನು,
ನಿನ್ನೆ,
ಪೇಟೆಬೀದಿಯ ಮಧ್ಯೆ,
ನನ್ನ ಹರುಕುಬಟ್ಟೆಯನ್ನೂ ಕಿತ್ತೊಗೆದು
ಚಪ್ಪಲಿಯಲ್ಲಿ ಹೊಡೆದುಬಿಟ್ಟೆ.
ಒಂದು ಕಣ್ಣಿನಲ್ಲಿ ನೀರು ಸುರಿದವು-
ಅವಮಾನಕ್ಕೆ,
ಮುಚ್ಚಿಟ್ಟುಕೊಂಡಿದ್ದು
ಬಯಲಾದ ಅಸಹಾಯಕತೆಗೆ,
ಹೊದಿಸಿದ ನೀನೇ
ಕಿತ್ತೊಗೆದ ವಿಪರ್ಯಾಸಕ್ಕೆ.
ಇನ್ನೊಂದು ಕಣ್ಣಲ್ಲಿ ಹನಿಗಳೊಡೆದವು-
ಜನ ಬಂದು,
ಮೈಮುಚ್ಚಿ,
ಕಣ್ಣಲ್ಲೇ ಛೇ ಪಾಪ
ಎಂದಿದ್ದಕ್ಕೆ.

ಪಯಣವೆಂದು
ಭ್ರಮಿಸಿ
ನಿಂತಲ್ಲೇ ನಿಂತಿದ್ದಕ್ಕೆ
ಇದೇ ತಕ್ಕ ಮರ್ಯಾದೆ.

ಕೃತಜ್ಞತೆ ಕೈಕಟ್ಟುತ್ತದೆ.
ದನಿ ಮೂಡದ
ಮಾತುಗಳ
ಬಳ್ಳಿಸಾಲು
ಕಾಗದವಲ್ಲದ ಕಾಗದದಲ್ಲಿ
ಬೆಂಕಿ ಹಚ್ಚುತ್ತದೆ.
ಹೊಗೆಯಿಲ್ಲ,
ಬರಿಯ ಉರಿ ಮಾತ್ರ,
ಕಿಡಿಯೂ ಮರಳದ
ಹಾಗೆ.. ಬೂದಿ ಕೂಡ ಇಲ್ಲ,
ಒಮ್ಮೊಮ್ಮೆ

ಉರಿಯೇ ಸಾಂತ್ವನ.

2 comments:

sunaath said...

ದುಃಖವನ್ನು ತನ್ನ ಒಡಲಲ್ಲಿ ತುಂಬಿಟ್ಟುಕೊಂಡ ಕವನ!
ಸಿಂಧು, ನಿಮ್ಮ ಕಾವ್ಯರಚನೆಗೆ ಶರಣು.

Badarinath Palavalli said...

ಉರಿಯೇ ಸೀತಾಮಾತೆಗೂ ನಿಜ ಸಾಂತ್ವನ.
ಉರಿಯೇ ಜನ್ಮವೆತ್ತಿದೆಲ್ಲರಿಗೂ ಕಡೆಯ ಸಾಂತ್ವನ.
ನೋವನೇ ಉರಿಯಲಿರಿಸಿ ಚಿನ್ನವನೆತ್ತಿಕೊಟ್ಟಿದ್ದೀರ ನನ್ನಂತ ನಡು ಬೀದಿ ನಾರಾಯಣರಿಗೆ!